Infrastructure
ಬದಲಾವಣೆಯ ರೆಕ್ಕೆಗಳು
प्रविष्टि तिथि:
20 OCT 2026 10:07 AM
'ಉಡಾನ್' ಮೂಲಕ ಪ್ರಾದೇಶಿಕ ವಿಮಾನ ಸಂಪರ್ಕವನ್ನು ಮರು ವ್ಯಾಖ್ಯಾನಿಸಿದ 10 ವರ್ಷಗಳು
|
2026ರಲ್ಲಿ 'ಉಡಾನ್' ಯೋಜನೆ 10 ವರ್ಷಗಳನ್ನು ಪೂರೈಸುತ್ತದೆ. ಕಳೆದ ದಶಕದಲ್ಲಿ, ಇದು ಸಂಪರ್ಕ ರಹಿತ ಹಾಗೂ ಕಡಿಮೆ ಸಂಪರ್ಕ ಹೊಂದಿದ್ದ ಪ್ರದೇಶಗಳನ್ನು ಜೋಡಿಸುವ ಮೂಲಕ ಮತ್ತು ವಿಮಾನ ಪ್ರಯಾಣದ ಲಭ್ಯತೆಯನ್ನು ಸುಧಾರಿಸುವ ಮೂಲಕ ಭಾರತದ ಪ್ರಾದೇಶಿಕ ವಿಮಾನಯಾನ ಜಾಲವನ್ನು ವಿಸ್ತರಿಸಿದೆ. ಪ್ರಾದೇಶಿಕ ಸಂಪರ್ಕವು ಪ್ರವಾಸೋದ್ಯಮ, ವೈದ್ಯಕೀಯ ಲಭ್ಯತೆ, ಕೃಷಿ ವ್ಯಾಪಾರ ಮತ್ತು ಸ್ಥಳೀಯ ಉದ್ಯೋಗಾವಕಾಶಗಳಿಗೆ ಬೆಂಬಲ ನೀಡಿದ್ದು, ತೇಜು, ದೇವ್ಘರ್ ಮತ್ತು ಕಿಶನ್ಗಢ್ ನಂತಹ ವಿಮಾನ ನಿಲ್ದಾಣಗಳು ಇದರ ಪ್ರಭಾವವನ್ನು ಪ್ರತಿಬಿಂಬಿಸುತ್ತವೆ. 'ಮೊಡಿಫೈಡ್ ಉಡಾನ್' (ಮಾರ್ಪಡಿಸಿದ ಉಡಾನ್) ನ ಚಾಲನೆಯು ಈ ಯೋಜನೆಯ ಮುಂದಿನ ಹಂತವನ್ನು ಸೂಚಿಸುತ್ತದೆ. ಇದು ವಿಮಾನಯಾನ ಮೂಲಸೌಕರ್ಯವನ್ನು ಬಲಪಡಿಸುವುದು, ಕಾರ್ಯಾಚರಣೆಯ ಸುಸ್ಥಿರತೆಯನ್ನು ಖಚಿತಪಡಿಸುವುದು ಮತ್ತು ಪ್ರಾದೇಶಿಕ ವಿಮಾನ ಸಂಪರ್ಕವನ್ನು ವಿಸ್ತರಿಸುವುದರ ಮೇಲೆ ಗಮನ ಹರಿಸುತ್ತದೆ.
|
ಪ್ರಾದೇಶಿಕ ಭಾರತವನ್ನು ಜೋಡಿಸುವುದು
ಪ್ರಾದೇಶಿಕ ಅಭಿವೃದ್ಧಿಯಲ್ಲಿ ವಿಮಾನ ಸಂಪರ್ಕವು ಪ್ರಮುಖ ಪಾತ್ರ ವಹಿಸುತ್ತದೆ. ಇದು ಮಾರುಕಟ್ಟೆಗಳ ಲಭ್ಯತೆಯನ್ನು ಸುಲಭಗೊಳಿಸುತ್ತದೆ, ಪ್ರವಾಸೋದ್ಯಮಕ್ಕೆ ಬೆಂಬಲ ನೀಡುತ್ತದೆ ಮತ್ತು ಆರ್ಥಿಕ ಅವಕಾಶಗಳನ್ನು ವಿಸ್ತರಿಸುತ್ತದೆ. ಆದಾಗ್ಯೂ, ವಿಮಾನ ಪ್ರಯಾಣದ ವಿಸ್ತೃತ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ದೂರದ ಮತ್ತು ಕಡಿಮೆ ಸಂಪರ್ಕ ಹೊಂದಿದ್ದ ಪ್ರದೇಶಗಳನ್ನು ಜೋಡಿಸುವುದು ಅತ್ಯಂತ ಮುಖ್ಯವಾಗಿದೆ. ಈ ಅಗತ್ಯವನ್ನು ಗುರುತಿಸಿ, 'ರಾಷ್ಟ್ರೀಯ ನಾಗರಿಕ ವಿಮಾನಯಾನ ನೀತಿ 2016' ಹಣಕಾಸಿನ ನೆರವು ಮತ್ತು ಮೂಲಸೌಕರ್ಯ ಅಭಿವೃದ್ಧಿಯ ಮೂಲಕ ಕೈಗೆಟುಕುವ ದರದ ಪ್ರಾದೇಶಿಕ ಸಂಪರ್ಕಕ್ಕೆ ಆದ್ಯತೆ ನೀಡಿತು.
ಈ ಉದ್ದೇಶಕ್ಕೆ ಅನುಗುಣವಾಗಿ, 'ಉಡೇ ದೇಶ್ ಕಾ ಆಮ್ ನಾಗರಿಕ್' (ಉಡಾನ್) ಎಂದೂ ಕರೆಯಲ್ಪಡುವ ಪ್ರಾದೇಶಿಕ ಸಂಪರ್ಕ ಯೋಜನೆಯನ್ನು 2016ರ ಅಕ್ಟೋಬರ್ 21 ರಂದು ಚಾಲನೆಗೊಳಿಸಲಾಯಿತು. ಈ ಯೋಜನೆಯು ಒಂದು ಸರಳವಾದರೂ ಪರಿವರ್ತನಕಾರಿ ಆಶಯವನ್ನು ಆಧರಿಸಿದೆ: ಪ್ರಾದೇಶಿಕ ಮಾರ್ಗಗಳಲ್ಲಿ ಕೈಗೆಟುಕುವ ದರದ, ಅದೇ ಸಮಯದಲ್ಲಿ ಆರ್ಥಿಕವಾಗಿ ಸುಸ್ಥಿರ ಹಾಗೂ ಲಾಭದಾಯಕ ವಿಮಾನ ಪ್ರಯಾಣವನ್ನು ಸಾಧ್ಯವಾಗಿಸುವುದು.

'ಉಡಾನ್' ಹತ್ತು ವರ್ಷಗಳನ್ನು ಪೂರೈಸುತ್ತಿರುವಂತೆ, ಇದು ಸಂಪರ್ಕವಿಲ್ಲದ ಮತ್ತು ಕಡಿಮೆ ಸಂಪರ್ಕ ಹೊಂದಿದ್ದ ವಿಮಾನ ನಿಲ್ದಾಣಗಳನ್ನು ಜೋಡಿಸುವ ಮೂಲಕ ಪ್ರಾದೇಶಿಕ ವಿಮಾನ ಸಂಪರ್ಕವನ್ನು ವಿಸ್ತರಿಸಿದೆ ಹಾಗೂ ನಾಗರಿಕರಿಗೆ ವಿಮಾನ ಪ್ರಯಾಣದ ಲಭ್ಯತೆಯನ್ನು ಸುಧಾರಿಸಿದೆ. ಕಳೆದ ದಶಕದ ಸಿಂಹಾವಲೋಕನವು ಭಾರತದ ನಾಗರಿಕ ವಿಮಾನಯಾನ ರಂಗದ ಕ್ಷಿಪ್ರ ವಿಸ್ತರಣೆಯನ್ನು ಪ್ರತಿಬಿಂಬಿಸುತ್ತದೆ. ಭಾರತವು ಈಗ ವಿಶ್ವದ ಮೂರನೇ ಅತಿದೊಡ್ಡ ದೇಶೀಯ ವಿಮಾನಯಾನ ಮಾರುಕಟ್ಟೆಯಾಗಿದ್ದು, ಕಾರ್ಯಾಚರಣೆಯಲ್ಲಿರುವ ವಿಮಾನ ನಿಲ್ದಾಣಗಳ ಸಂಖ್ಯೆ 2014ರಲ್ಲಿದ್ದ 74 ರಿಂದ ಇಂದಿನವರೆಗೆ 166ಕ್ಕೆ ಏರಿಕೆಯಾಗಿದೆ. ಈ ಮಹತ್ತರ ಪರಿವರ್ತನೆಯ ಕೇಂದ್ರಬಿಂದುವಾಗಿ 'ಉಡಾನ್' ಯೋಜನೆ ಕೆಲಸ ಮಾಡಿದೆ.
ಈ ಪ್ರಗತಿಯನ್ನು ಆಧರಿಸಿ, 'ಉಡಾನ್' ನ ಮುಂದಿನ ಹಂತವನ್ನು 2026ರ ಜುಲೈ 4 ರಂದು ಪ್ರಾರಂಭಿಸಲಾಯಿತು. ಈ ಯೋಜನೆಯು ಈಗ ಕೇಂದ್ರ-ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸಹಭಾಗಿತ್ವಕ್ಕೆ ಹೆಚ್ಚಿನ ಒತ್ತು ನೀಡುತ್ತದೆ. ವಿಮಾನ ಪಟ್ಟಿಗಳು ಮತ್ತು ಹೆಲಿಪ್ಯಾಡ್ಗಳನ್ನು ಗುರುತಿಸಲು ಮೀಸಲಾದ 'ಏರೋಡ್ರೋಮ್ ಅಭಿವೃದ್ಧಿಗಾಗಿ ಚಾಲೆಂಜ್ ಮೋಡ್ ಪೋರ್ಟಲ್' ಸಹ ಇದಕ್ಕೆ ಪೂರಕವಾಗಿ ಕೆಲಸ ಮಾಡಲಿದೆ. ಒಟ್ಟಾರೆಯಾಗಿ, ಈ ಕ್ರಮಗಳು ಪ್ರಾದೇಶಿಕ ವಿಮಾನಯಾನ ಮೂಲಸೌಕರ್ಯವನ್ನು ಮತ್ತಷ್ಟು ವಿಸ್ತರಿಸಲಿವೆ.
'ಉಡಾನ್' ನ ಮೊದಲ ದಶಕ
2017ರ ಏಪ್ರಿಲ್ನಲ್ಲಿ ಶಿಮ್ಲಾದಿಂದ ದೆಹಲಿಗೆ ಮೊದಲ ಆರ್ಸಿಎಸ್-ಉಡಾನ್ ವಿಮಾನ ಹಾರಾಟಕ್ಕೆ ಚಾಲನೆ ನೀಡುವ ಮೂಲಕ 'ಉಡಾನ್' ತನ್ನ ಕಾರ್ಯಾಚರಣೆಯ ಹಂತವನ್ನು ಪ್ರವೇಶಿಸಿತು. ಅಂದಿನಿಂದ, ಈ ಯೋಜನೆಯು ಪ್ರಾದೇಶಿಕ ವಿಮಾನ ಸಂಪರ್ಕವನ್ನು ವಿಸ್ತರಿಸಿದೆ.

- ಕಾರ್ಯಾಚರಣೆಗೊಂಡ ಮಾರ್ಗಗಳು: ಈ ಯೋಜನೆಯಡಿ ಭಾರತದಾದ್ಯಂತ 687 ಪ್ರಾದೇಶಿಕ ಮಾರ್ಗಗಳನ್ನು ಕಾರ್ಯಾಚರಣೆಗೊಳಿಸಲಾಗಿದೆ.
- ಕಾರ್ಯಾಚರಣೆಗೊಂಡ ಏರೋಡ್ರೋಮ್ಗಳು: 17 ಹೆಲಿಪೋರ್ಟ್ಗಳು ಮತ್ತು 02 ವಾಟರ್ ಏರೋಡ್ರೋಮ್ಗಳು ಸೇರಿದಂತೆ ಒಟ್ಟು 95 ಏರೋಡ್ರೋಮ್ಗಳನ್ನು ಕಾರ್ಯಾಚರಣೆಗೊಳಿಸಲಾಗಿದೆ.
- ನಿರ್ವಹಿಸಲಾದ ವಿಮಾನ ಹಾರಾಟಗಳು: ಈ ಯೋಜನೆಯಡಿ 3.68 ಲಕ್ಷಕ್ಕೂ ಹೆಚ್ಚು ವಿಮಾನ ಹಾರಾಟಗಳನ್ನು ನಿರ್ವಹಿಸಲಾಗಿದೆ.
- ಪ್ರಯಾಣಿಸಿದ ಪ್ರಯಾಣಿಕರು: ಈ ಯೋಜನೆಯು 1.72 ಕೋಟಿ ಪ್ರಯಾಣಿಕರ ವಿಮಾನ ಪ್ರಯಾಣಕ್ಕೆ ಅನುಕೂಲ ಮಾಡಿಕೊಟ್ಟಿದೆ.
ವಿಮಾನಯಾನ ಸಂಸ್ಥೆಗಳ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಈ ಯೋಜನೆಯು ಮಾರುಕಟ್ಟೆ ಆಧಾರಿತ ಆಯ್ಕೆ, ವಿಮಾನ ದರಗಳ ಗರಿಷ್ಠ ಮಿತಿ, ರಿಯಾಯಿತಿಗಳು ಮತ್ತು 'ವಯಾಬಿಲಿಟಿ ಗ್ಯಾಪ್ ಫಂಡಿಂಗ್' ಅನ್ನು ಬಳಸಿಕೊಳ್ಳುತ್ತದೆ. 2026ರ ಅಕ್ಟೋಬರ್ 15ರ ವೇಳೆಗೆ, ವಿಜಿಎಫ್ ಅಡಿಯಲ್ಲಿ ₹5091.23 ಕೋಟಿ ಹಣವನ್ನು ವಿತರಿಸಲಾಗಿದೆ.
ನಾಗರಿಕ ವಿಮಾನಯಾನ ವಲಯದ ವಿಸ್ತರಣೆಯೊಂದಿಗೆ, ಈ ರಂಗದಲ್ಲಿನ ಉದ್ಯೋಗಗಳ ಸಂಖ್ಯೆಯು 2014ರಲ್ಲಿ ಸುಮಾರು 30 ಲಕ್ಷದಿಂದ (3 ಮಿಲಿಯನ್) 2026ರ ವೇಳೆಗೆ ಸುಮಾರು 77 ಲಕ್ಷಕ್ಕೆ (7.7 ಮಿಲಿಯನ್) ಏರಿಕೆಯಾಗಿದೆ. ಹೆಚ್ಚುವರಿಯಾಗಿ, 2040ರ ವೇಳೆಗೆ ಇದು 2.5 ಕೋಟಿಯನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ.
'ಉಡಾನ್' ಅಡಿಯಲ್ಲಿ ಈಶಾನ್ಯ ಪ್ರದೇಶ
ದುರ್ಗಮ ಗುಡ್ಡಗಾಡು ಭೂಪ್ರದೇಶದ ಕಾರಣದಿಂದಾಗಿ, ಈಶಾನ್ಯ ರಾಜ್ಯಗಳು ಇಂದಿಗೂ ಕಡಿಮೆ ಸಂಪರ್ಕವನ್ನು ಹೊಂದಿವೆ. ಆದ್ದರಿಂದ ಅಲ್ಲಿ ವಿಮಾನ ಸಂಪರ್ಕವನ್ನು ಬಲಪಡಿಸುವುದು ಒಂದು ಪ್ರಮುಖ ಅಭಿವೃದ್ಧಿ ಆದ್ಯತೆಯಾಗಿದೆ.
- ಉಡಾನ್ ಅಡಿಯಲ್ಲಿ, ಈಶಾನ್ಯ ರಾಜ್ಯಗಳಾದ್ಯಂತ 90 ಆದ್ಯತೆಯ ಆರ್ಸಿಎಸ್ ಮಾರ್ಗಗಳನ್ನು ಕಾರ್ಯಾಚರಣೆಗೊಳಿಸಲಾಗಿದೆ.
- ಹೆಲಿಪೋರ್ಟ್ಗಳು ಮತ್ತು ವಾಟರ್ ಏರೋಡ್ರೋಮ್ಗಳು ಸೇರಿದಂತೆ ಈ ಪ್ರದೇಶದಲ್ಲಿ ಒಟ್ಟು 52 ಏರೋಡ್ರೋಮ್ಗಳನ್ನು ಗುರುತಿಸಲಾಗಿದ್ದು, ಅವುಗಳಲ್ಲಿ 12 ಕಾರ್ಯಾಚರಣೆಗೊಂಡಿವೆ.
'ಉಡಾನ್' ಯೋಜನೆಯ ಮುಂದಿನ ಹಂತಕ್ಕೆ ಪರಿವರ್ತನೆ
ತನ್ನ ಆರಂಭದಿಂದಲೂ, ಆರ್ಸಿಎಸ್-ಉಡಾನ್ ಯೋಜನೆಯ ಹಲವು ಆವೃತ್ತಿಗಳನ್ನು ಬಿಡುಗಡೆ ಮಾಡಿದೆ. ಇದರ ಅಡಿಯಲ್ಲಿ ಸಾಧಿಸಿದ ಯಶಸ್ಸನ್ನು ಆಧರಿಸಿ, 'ಉಡಾನ್' ಯೋಜನೆಯ ಮುಂದಿನ ಹಂತವನ್ನು 2026 ರ ಜುಲೈ 4 ರಂದು ಅಧಿಕೃತವಾಗಿ ಚಾಲನೆಗೊಳಿಸಲಾಯಿತು. ಈ ಯೋಜನೆಯನ್ನು 2026-27 ರ ಹಣಕಾಸು ವರ್ಷದಿಂದ 2035-36 ರ ಹಣಕಾಸು ವರ್ಷದವರೆಗೆ ಒಟ್ಟು ₹28,840 ಕೋಟಿ ವೆಚ್ಚದಲ್ಲಿ ಹತ್ತು ವರ್ಷಗಳಲ್ಲಿ ಅನುಷ್ಠಾನಗೊಳಿಸಲಾಗುವುದು. 'ಮೇಡ್ ಇನ್ ಇಂಡಿಯಾ' (ಭಾರತದಲ್ಲೇ ನಿರ್ಮಿತ) ನಾಗರಿಕ ವಿಮಾನಗಳನ್ನು ಸುಲಭಗೊಳಿಸುವ ಸೂಕ್ತ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದರ ಮೇಲೆ ಈಗ ಗಮನ ಹರಿಸಲಾಗಿದೆ.
ಈ ಯೋಜನೆಯು ಕೈಗೆಟುಕುವ ದರದ ವಿಮಾನ ಪ್ರಯಾಣ, ಸುಸ್ಥಿರ ಪ್ರಾದೇಶಿಕ ವಿಮಾನಯಾನ ಕಾರ್ಯಾಚರಣೆಗಳು, 'ಚಾಲೆಂಜ್ ಮೋಡ್' ಚೌಕಟ್ಟಿನ ಮೂಲಕ ಏರೋಡ್ರೋಮ್ ಅಭಿವೃದ್ಧಿ ಮತ್ತು ದೇಶೀಯ ವಿಮಾನ ತಯಾರಿಕೆಗೆ ಒತ್ತು ನೀಡುತ್ತದೆ.
ಮಾರ್ಪಡಿಸಿದ 'ಉಡಾನ್' ಯೋಜನೆಯು ಪ್ರಾದೇಶಿಕ ವಿಮಾನಯಾನದ ಸುಸ್ಥಿರ ಬೆಳವಣಿಗೆ ಮತ್ತು ದೀರ್ಘಕಾಲೀನ ಸುಸ್ಥಿರತೆಯನ್ನು ಬೆಂಬಲಿಸಲು ನಿರ್ದಿಷ್ಟ ಕ್ರಮಗಳನ್ನು ಪರಿಚಯಿಸುತ್ತದೆ.
- ಏರೋಡ್ರೋಮ್ಗಳ ಅಭಿವೃದ್ಧಿ ಪ್ರಸ್ತುತ ಸಂಪರ್ಕವಿಲ್ಲದ ವಿಮಾನ ಪಟ್ಟಿಗಳಿಂದ 100 ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುವುದು, ಇದಕ್ಕಾಗಿ ಎಂಟು ವರ್ಷಗಳಲ್ಲಿ ₹12,159 ಕೋಟಿ ವೆಚ್ಚದ ಅಂದಾಜು ಮಾಡಲಾಗಿದೆ. ಇದು ಪ್ರತಿ ವಿಮಾನ ನಿಲ್ದಾಣಕ್ಕೆ ₹100 ಕೋಟಿಯ ಪ್ರಸ್ತಾವಿತ ಹಂಚಿಕೆಯಾಗಿದೆ.
- ಏರೋಡ್ರೋಮ್ಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ಸುಮಾರು 441 ಏರೋಡ್ರೋಮ್ಗಳಿಗೆ ಮೂರು ವರ್ಷಗಳ ಕಾರ್ಯಾಚರಣೆ ಮತ್ತು ನಿರ್ವಹಣೆ ಬೆಂಬಲವನ್ನು ನೀಡಲಾಗುವುದು, ಇದಕ್ಕೆ ಅಂದಾಜು ₹2,577 ಕೋಟಿ ವೆಚ್ಚವಾಗಲಿದೆ. ಈ ಹಣಕಾಸಿನ ನೆರವು ಪ್ರತಿ ವಿಮಾನ ನಿಲ್ದಾಣಕ್ಕೆ ವರ್ಷಕ್ಕೆ ಗರಿಷ್ಠ ₹3.06 ಕೋಟಿ ಹಾಗೂ ಪ್ರತಿ ಹೆಲಿಪೋರ್ಟ್ ಅಥವಾ ವಾಟರ್ ಏರೋಡ್ರೋಮ್ಗೆ ವರ್ಷಕ್ಕೆ ಗರಿಷ್ಠ ₹0.90 ಕೋಟಿಗೆ ಸೀಮಿತವಾಗಿರುತ್ತದೆ.
- ಆಧುನಿಕ ಹೆಲಿಪ್ಯಾಡ್ಗಳ ಅಭಿವೃದ್ಧಿ: ತಲಾ ₹15 ಕೋಟಿ ಅಂದಾಜು ವೆಚ್ಚದಲ್ಲಿ 200 ಆಧುನಿಕ ಹೆಲಿಪ್ಯಾಡ್ಗಳನ್ನು ಅಭಿವೃದ್ಧಿಪಡಿಸಲಾಗುವುದು. ಎಂಟು ವರ್ಷಗಳಲ್ಲಿ ಒಟ್ಟು ಅಂದಾಜು ವೆಚ್ಚ ₹3,661 ಕೋಟಿಯಾಗಿದೆ.
- ವಿಮಾನಯಾನ ಸಂಸ್ಥೆಗಳಿಗೆ ವಯಾಬಿಲಿಟಿ ಗ್ಯಾಪ್ ಫಂಡಿಂಗ್: ಪ್ರಾದೇಶಿಕ ಮಾರ್ಗಗಳನ್ನು ನಿರ್ವಹಿಸುವ ವಿಮಾನಯಾನ ಸಂಸ್ಥೆಗಳನ್ನು ಬೆಂಬಲಿಸಲು ಹತ್ತು ವರ್ಷಗಳಲ್ಲಿ ₹10,043 ಕೋಟಿ ಹಂಚಿಕೆ ಮಾಡಲಾಗಿದೆ. ಈ ಧನಸಹಾಯವು ಐದು ವರ್ಷಗಳವರೆಗೆ ಲಭ್ಯವಿದ್ದು, ಮೂರನೇ ವರ್ಷದಿಂದ ಬೆಂಬಲವನ್ನು ಹಂತ ಹಂತವಾಗಿ ಕಡಿಮೆ ಮಾಡಲಾಗುತ್ತದೆ ಹಾಗೂ ಮಾರ್ಗದ ಪ್ರತ್ಯೇಕತೆಯು ಮೂರು ವರ್ಷಗಳಿಗೆ ಸೀಮಿತವಾಗಿರುತ್ತದೆ.
- ಆತ್ಮನಿರ್ಭರ ಭಾರತ ಮತ್ತು ದೇಶೀಯ ವಿಮಾನಯಾನ ಸಾಮರ್ಥ್ಯ: ಪವನ್ ಹನ್ಸ್ ಸಂಸ್ಥೆಗೆ ಎರಡು 'ಎಚ್ಎಎಲ್ ಧ್ರುವ' ಹೆಲಿಕಾಪ್ಟರ್ಗಳು ಮತ್ತು ಅಲೈಯನ್ಸ್ ಏರ್ ಸಂಸ್ಥೆಗೆ ಎರಡು 'ಎಚ್ಎಎಲ್ ಡೋರ್ನಿಯರ್' ವಿಮಾನಗಳಿಗಾಗಿ ₹400 ಕೋಟಿ ಹಂಚಿಕೆಯನ್ನು ಪ್ರಸ್ತಾಪಿಸಲಾಗಿದೆ. ಈ ಉಪಕ್ರಮವು 'ಆತ್ಮನಿರ್ಭರ ಭಾರತ' ಅಡಿಯಲ್ಲಿ ದೇಶೀಯ ವಿಮಾನಯಾನವನ್ನು ಬೆಂಬಲಿಸುತ್ತದೆ ಹಾಗೂ ದೂರದ ಪ್ರದೇಶಗಳು ಮತ್ತು ಸವಾಲಿನ ಭೂಪ್ರದೇಶಗಳಲ್ಲಿ ಸಂಪರ್ಕವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.
ರೂಪುಗೊಳ್ಳುತ್ತಿರುವ ಮುಂದಿನ ಹಂತ
'ಉಡಾನ್' ಯೋಜನೆಯ ಮುಂದಿನ ಹಂತದಲ್ಲಿ, ಕೇಂದ್ರ-ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸಹಭಾಗಿತ್ವವನ್ನು ಬಲಪಡಿಸುವುದು, ವಿಮಾನಯಾನ ಮೂಲಸೌಕರ್ಯವನ್ನು ಸೃಷ್ಟಿಸುವುದು ಮತ್ತು ಪ್ರಾದೇಶಿಕ ವಿಮಾನ ಸಂಪರ್ಕವನ್ನು ವಿಸ್ತರಿಸುವುದರ ಮೇಲೆ ಗಮನ ಹರಿಸುವ ತ್ರಿಮುಖ ವಿಧಾನವನ್ನು ಹೊಂದಿರಲಿದೆ.
- ಕೇಂದ್ರ-ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸಮನ್ವಯ: ಸರ್ಕಾರ, ಭಾಗವಹಿಸುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಾಗೂ ಭಾರತೀಯ ವಿಮಾನನಿಲ್ದಾಣಗಳ ಪ್ರಾಧಿಕಾರದ ನಡುವೆ ಒಟ್ಟು 21 ತಿಳುವಳಿಕಾಪತ್ರಗಳಿಗೆ ಸಹಿ ಹಾಕಲಾಯಿತು. ಇವು ವಿಮಾನಯಾನ ಆಸ್ತಿಗಳ ಸಂಘಟಿತ ಗುರುತಿಸುವಿಕೆ, ಅಭಿವೃದ್ಧಿ ಮತ್ತು ಕಾರ್ಯಾಚರಣೆಗೆ ಅಗತ್ಯವಿರುವ ಚೌಕಟ್ಟನ್ನು ಸ್ಥಾಪಿಸುತ್ತವೆ. ಈ ಚೌಕಟ್ಟು ಪ್ರಾದೇಶಿಕ ಸಂಪರ್ಕ ಅಗತ್ಯತೆಗಳು ಮತ್ತು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಆದ್ಯತೆಗಳಿಗೆ ಅನುಗುಣವಾಗಿರುತ್ತದೆ.
- ಏರೋಡ್ರೋಮ್ ಅಭಿವೃದ್ಧಿಗಾಗಿ ಚಾಲೆಂಜ್ ಮೋಡ್ ಪೋರ್ಟಲ್: ಈ ಮೀಸಲಾದ ಪೋರ್ಟಲ್ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳಿಗೆ 'ಉಡಾನ್' ನ ಮುಂದಿನ ಹಂತದ ಅಡಿಯಲ್ಲಿ ಅಭಿವೃದ್ಧಿಗಾಗಿ ವಿಮಾನ ಪಟ್ಟಿಗಳು ಮತ್ತು ಹೆಲಿಪ್ಯಾಡ್ಗಳನ್ನು ನಾಮನಿರ್ದೇಶನ ಮಾಡಲು ಅನುವು ಮಾಡಿಕೊಡುತ್ತದೆ. ಇದು ವಿಮಾನ ಸಂಪರ್ಕದ ಸಾಮರ್ಥ್ಯವಿರುವ ಸ್ಥಳಗಳನ್ನು ಗುರುತಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅವಕಾಶ ನೀಡುತ್ತದೆ. ಇದು ಸ್ಥಳೀಯ ಅಗತ್ಯಗಳ ಆಧಾರದ ಮೇಲೆ ವಿಮಾನಯಾನ ಮೂಲಸೌಕರ್ಯಗಳ ಸೃಷ್ಟಿ ಮತ್ತು ಮೇಲ್ದರ್ಜೆಗೇರಿಸುವಿಕೆಗೆ ಅನುಕೂಲ ಮಾಡಿಕೊಡುತ್ತದೆ.
'ಉಡಾನ್' ಅಡಿಯಲ್ಲಿ ಪ್ರಾದೇಶಿಕ ಬದಲಾವಣೆಗಳು'ಉಡಾನ್' ಅಡಿಯಲ್ಲಿ ಪ್ರಾದೇಶಿಕ ವಿಮಾನ ನಿಲ್ದಾಣಗಳ ಕಾರ್ಯಾಚರಣೆಯು ಪ್ರಾದೇಶಿಕ ಕೇಂದ್ರಗಳಾದ್ಯಂತ ಸಾಮಾಜಿಕ-ಆರ್ಥಿಕ ಪರಿವರ್ತನೆಗೆ ಚಾಲನೆ ನೀಡಿದ್ದು, ಸ್ಥಳೀಯ ವ್ಯಾಪಾರ, ವೈದ್ಯಕೀಯ ಲಭ್ಯತೆ, ಪ್ರವಾಸೋದ್ಯಮ ಮತ್ತು ಉದ್ಯೋಗಾವಕಾಶಗಳನ್ನು ಉತ್ತೇಜಿಸಿದೆ.
ಬಿಹಾರದ ಪೂರ್ಣಿಯಾ ವಿಮಾನ ನಿಲ್ದಾಣ

2025ಕ್ಕಿಂತ ಮೊದಲು, ಪೂರ್ಣಿಯಾ, ಅರಾರಿಯಾ, ಕಿಶನ್ಗಂಜ್, ಕಟಿಹಾರ್ ಮತ್ತು ಭಾಗಲ್ಪುರ ಸೇರಿದಂತೆ ಸೀಮಾಂಚಲ ಮತ್ತು ಕೋಸಿ ಪ್ರದೇಶಗಳ ನಿವಾಸಿಗಳು ವಿಮಾನ ಸಂಪರ್ಕಕ್ಕಾಗಿ ಬಾಗ್ಡೋಗ್ರಾ ವಿಮಾನ ನಿಲ್ದಾಣಕ್ಕೆ 200 ಕಿ.ಮೀ.ಗೂ ಹೆಚ್ಚು ಪ್ರಯಾಣಿಸಬೇಕಾಗಿತ್ತು. ಕೋಲ್ಕತ್ತಾ ಮತ್ತು ಪಟ್ನಾದಂತಹ ಪ್ರಮುಖ ನಗರಗಳಿಗೆ ಪ್ರಯಾಣಿಸಲು ಕ್ರಮವಾಗಿ 10 ಗಂಟೆ ಮತ್ತು 8 ಗಂಟೆಗಳ ಕಠಿಣ ರಸ್ತೆ ಪ್ರಯಾಣವನ್ನು ಮಾಡಬೇಕಾಗುತ್ತಿತ್ತು. ಮಖಾನಾ, ಲಿಚಿ ಮತ್ತು ತರಕಾರಿಗಳಂತಹ ಉತ್ಪನ್ನಗಳಿಗೆ ಹೆಸರುವಾಸಿಯಾದ ಪ್ರಮುಖ ಕೃಷಿ ಕೇಂದ್ರವಾಗಿದ್ದರೂ, ಈ ಪ್ರದೇಶವು ನೇರ ವಿಮಾನ ಸಂಪರ್ಕ ಮತ್ತು ವಿಮಾನ ಸರಕು (ಏರ್ ಕಾರ್ಗೋ) ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿತ್ತು. ಇದು ಇದರ ಆರ್ಥಿಕ ಸಾಮರ್ಥ್ಯವನ್ನು ಸೀಮಿತಗೊಳಿಸಿತ್ತು.
2025ರಲ್ಲಿ ಪೂರ್ಣಿಯಾ ವಿಮಾನ ನಿಲ್ದಾಣದ ಕಾರ್ಯಾಚರಣೆಯು ಬಿಹಾರದ 10ಕ್ಕೂ ಹೆಚ್ಚು ಜಿಲ್ಲೆಗಳಿಗೆ ವಿಮಾನ ಸೌಲಭ್ಯವನ್ನು ಒದಗಿಸುವ ಮೂಲಕ ಪ್ರಾದೇಶಿಕ ಸಂಪರ್ಕವನ್ನು ಪರಿವರ್ತಿಸಿತು. ಕೋಲ್ಕತ್ತಾಗೆ ಪ್ರಯಾಣದ ಸಮಯವು ಸುಮಾರು 2 ಗಂಟೆಗಳಿಗೆ ಮತ್ತು ಪಟ್ನಾಗೆ ಸುಮಾರು 1 ಗಂಟೆಗೆ ಕಡಿಮೆಯಾಗಿದ್ದು, ನಿವಾಸಿಗಳು, ಉದ್ಯಮಗಳು ಮತ್ತು ಸಂಸ್ಥೆಗಳಿಗೆ ಸಂಪರ್ಕ ಲಭ್ಯತೆಯನ್ನು ಗಣನೀಯವಾಗಿ ಸುಧಾರಿಸಿದೆ. ಎ320 ಮತ್ತು ಬಿ737 ವಿಮಾನಗಳನ್ನು ನಿರ್ವಹಿಸುವ ಸಾಮರ್ಥ್ಯವಿರುವ ಸುಮಾರು 2.8 ಕಿ.ಮೀ. ಉದ್ದದ ಬಿಹಾರದ ಅತ್ಯಂತ ಉದ್ದವಾದ ರನ್ವೇಯನ್ನು ಹೊಂದಿರುವ ಈ ವಿಮಾನ ನಿಲ್ದಾಣವು, ಪ್ರಮುಖ ಆರ್ಥಿಕ ಕೇಂದ್ರಗಳೊಂದಿಗೆ ಈ ಪ್ರದೇಶದ ಸಂಯೋಜನೆಯನ್ನು ಬಲಪಡಿಸಿದೆ. ಇದಲ್ಲದೆ, ಸುಧಾರಿತ ಸಂಪರ್ಕವು ಸ್ಥಳೀಯ ಆರ್ಥಿಕ ಚಟುವಟಿಕೆಗಳನ್ನು ಪ್ರೇರೇಪಿಸಿದೆ.
ಅರುಣಾಚಲ ಪ್ರದೇಶದ ತೇಜು ವಿಮಾನ ನಿಲ್ದಾಣ

ಚೀನಾ ಗಡಿಯ ಬಳಿಯಿರುವ ಭಾರತದ ಅತ್ಯಂತ ಪೂರ್ವದ ಗಡಿಭಾಗದಲ್ಲಿ ನೆಲೆಸಿರುವ ಅರುಣಾಚಲ ಪ್ರದೇಶದ ಲೋಹಿತ್ ಜಿಲ್ಲೆಯು ಈ ಹಿಂದೆ ವಿಮಾನ ಸಂಪರ್ಕವನ್ನು ಹೊಂದಿರಲಿಲ್ಲ. ಇದು ವಿಮಾನ ಪ್ರಯಾಣ ಮತ್ತು ವೈದ್ಯಕೀಯ ತುರ್ತು ಪರಿಸ್ಥಿತಿಗಳಿಗಾಗಿ ಇಲ್ಲಿನ ನಿವಾಸಿಗಳು ಡೈಬ್ರೂಗಢ್ಗೆ (164 ಕಿ.ಮೀ.) ಅಥವಾ ಗುವಾಹಾಟಿಗೆ (610 ಕಿ.ಮೀ.) 10+ ಗಂಟೆಗಳಿಗೂ ಹೆಚ್ಚು ಕಾಲ ಸುಧಿರ್ಘ ಪ್ರಯಾಣ ಕೈಗೊಳ್ಳುವುದನ್ನು ಅನಿವಾರ್ಯಗೊಳಿಸಿತ್ತು. 2021ರಲ್ಲಿ ಕಾರ್ಯಾಚರಣೆಗೊಂಡ ತೇಜು ವಿಮಾನ ನಿಲ್ದಾಣವು ಈಗ ಈ ಸುದೂರ ಪ್ರದೇಶದ 2 ಲಕ್ಷಕ್ಕೂ ಹೆಚ್ಚು ಜನರನ್ನು ಸಂಪರ್ಕಿಸುತ್ತದೆ. ಈ ವಿಮಾನ ನಿಲ್ದಾಣವು ಗುವಾಹಾಟಿಗೆ ಪ್ರಯಾಣಿಸುವ ಸಮಯವನ್ನು 1 ಗಂಟೆಗೆ ತಗ್ಗಿಸಿದೆ. ಜೊತೆಗೆ, ಈ ಸೌಲಭ್ಯವು ಶುಂಟಿ, ಏಲಕ್ಕಿ ಮತ್ತು ಅಕ್ಕಿಯಂತಹ ಕೃಷಿ ಉತ್ಪನ್ನಗಳ ವಿಮಾನ ಸರಕು (ಏರ್ ಕಾರ್ಗೋ) ರಫ್ತಿಗೆ ಅನುಕೂಲ ಮಾಡಿಕೊಟ್ಟಿದೆ.
ಜಾರ್ಖಂಡ್ನ ದೇವ್ಘರ್ ವಿಮಾನ ನಿಲ್ದಾಣ

2022ರ ಜುಲೈಗಿಂತ ಮೊದಲು, ದೇವ್ಘರ್ ತಲುಪಲು ದೆಹಲಿಯಿಂದ 15 ಗಂಟೆಗಳಿಗೂ ಹೆಚ್ಚು ಅಥವಾ ಕೋಲ್ಕತ್ತಾದಿಂದ 7.5 ಗಂಟೆಗಳಿಗೂ ಹೆಚ್ಚು ಕಾಲ ರಸ್ತೆ ಅಥವಾ ರೈಲು ಮಾರ್ಗದ ಮೂಲಕ ಕಠಿಣ ಪ್ರಯಾಣ ಮಾಡಬೇಕಾಗಿತ್ತು. ಬಾಬಾ ವೈದ್ಯನಾಥ ಧಾಮಕ್ಕೆ ಭೇಟಿ ನೀಡುವ ಯಾತ್ರಿಕರು ಹತ್ತಿರದ ಕಾರ್ಯಾಚರಣೆಯಲ್ಲಿದ್ದ ರಾಂಚಿ ಅಥವಾ ಪಟ್ನಾ ವಿಮಾನ ನಿಲ್ದಾಣಗಳನ್ನು ತಲುಪಲು 150 ಕಿ.ಮೀ ನಿಂದ 200 ಕಿ.ಮೀ ಗಿಂತಲೂ ಹೆಚ್ಚು ದೂರ ಪ್ರಯಾಣಿಸಲು ಅನಿವಾರ್ಯವಾಗಿತ್ತು.
ದೇವ್ಘರ್ ವಿಮಾನ ನಿಲ್ದಾಣದ ಪ್ರಾರಂಭವು ದೆಹಲಿಯಿಂದ ಪ್ರಯಾಣದ ಸಮಯವನ್ನು ಕೇವಲ 2 ಗಂಟೆಗಳಿಗೆ ಗಣನೀಯವಾಗಿ ತಗ್ಗಿಸಿತು. ಜುಲೈ 2022ರ ನಂತರ, ಪ್ರತಿವರ್ಷ 10 ಲಕ್ಷಕ್ಕೂ ಹೆಚ್ಚು ಯಾತ್ರಿಕರು ನೇರವಾಗಿ ದೇವ್ಘರ್ಗೆ ವಿಮಾನದ ಮೂಲಕ ಪ್ರಯಾಣಿಸುತ್ತಿದ್ದಾರೆ. ಪ್ರಮುಖ ಕಾನ್ವಡ್ ಯಾತ್ರೆಯ ತಿಂಗಳಿನಲ್ಲಿ ಭೇಟಿ ನೀಡುವ 50 ಲಕ್ಷಕ್ಕೂ ಹೆಚ್ಚು ಭಕ್ತರಿಗೆ ಈ ವಿಮಾನ ನಿಲ್ದಾಣವು ನೇರ ಸಂಪರ್ಕ ಒದಗಿಸುತ್ತದೆ. ಇದಲ್ಲದೆ, ಪೂರ್ವ ಭಾರತದಿಂದ 'ಏಮ್ಸ್ ದೇವ್ಘರ್'ಗೆ ರೋಗಿಗಳ ಪ್ರಯಾಣವನ್ನು ಸುಲಭಗೊಳಿಸುವ ಮೂಲಕ ಈ ವಿಮಾನ ನಿಲ್ದಾಣವು ವೈದ್ಯಕೀಯ ಪ್ರವಾಸೋದ್ಯಮವನ್ನು ಉತ್ತೇಜಿಸಿದೆ. ಹೆಚ್ಚುವರಿಯಾಗಿ, ಇದು ಸ್ಥಳೀಯ ಆತಿಥ್ಯ ಕ್ಷೇತ್ರವನ್ನು ಬೆಳೆಸಿದ್ದು, 30ಕ್ಕೂ ಹೆಚ್ಚು ಹೊಸ ಹೋಟೆಲ್ಗಳ ಸ್ಥಾಪನೆಗೆ ದಾರಿಯಾಗಿದೆ.
ರಾಜಸ್ಥಾನದ ಕಿಶನ್ಗಢ್ ವಿಮಾನ ನಿಲ್ದಾಣ

2017ರಲ್ಲಿ ನೇರ ವಿಮಾನ ಸೌಲಭ್ಯ ಸಿಗುವ ಮೊದಲು, ಕಿಶನ್ಗಢ್, ಅಜ್ಮೇರ್ ಮತ್ತು ಪುಷ್ಕರ್ನ ಪ್ರಯಾಣಿಕರು ವಿಮಾನ ಪ್ರಯಾಣಕ್ಕಾಗಿ ಜೈಪುರಕ್ಕೆ 100+ ಕಿ.ಮೀ. ಪ್ರಯಾಣಿಸಬೇಕಾಗಿತ್ತು. ಈ ಅಡಚಣೆಯು ಈ ಪ್ರದೇಶದ ಮಾರ್ಬಲ್ (ಅಮೃತಶಿಲೆ) ಉದ್ಯಮದ ಮೇಲೆ ಪ್ರಭಾವ ಬೀರಿತ್ತು. ಅಲ್ಲದೆ, ಪ್ರತಿವರ್ಷ ಅಜ್ಮೇರ್ ಶರೀಫ್ ದರ್ಗಾ ಮತ್ತು ಪುಷ್ಕರ್ ದೇವಾಲಯಕ್ಕೆ ಭೇಟಿ ನೀಡುವ 2 ಕೋಟಿಗೂ ಹೆಚ್ಚು ಯಾತ್ರಿಕರ ಮೇಲೆಯೂ ಇದು ಪರಿಣಾಮ ಬೀರಿತ್ತು.
2017ರ ನಂತರ, ನೇರ ವಿಮಾನ ಸರಕು (ಏರ್ ಕಾರ್ಗೋ) ಸಂಪರ್ಕವು ಇಟಲಿ, ಯುಎಇ ಮತ್ತು ಅಮೆರಿಕಕ್ಕೆ (USA) ಮಾರ್ಬಲ್ ರಫ್ತು ಮಾಡಲು ಅನುವು ಮಾಡಿಕೊಟ್ಟಿದೆ. 2022ರಲ್ಲಿ, ಈ ವಿಮಾನ ನಿಲ್ದಾಣವು ಈ ಪ್ರದೇಶದ ಏಕೈಕ 'ಎ' ಕೆಟಗರಿಯ ಹಾರಾಟ ತರಬೇತಿ ಸಂಸ್ಥೆಯಾದ 'ಅವ್ಯಾನ್ನಾ ಏವಿಯೇಷನ್ ಅಕಾಡೆಮಿ'ಯನ್ನು ಪ್ರಾರಂಭಿಸಿತು. ಈ ವಿಮಾನ ನಿಲ್ದಾಣವು 200ಕ್ಕೂ ಹೆಚ್ಚು ನೇರ ಉದ್ಯೋಗಗಳನ್ನು ಸೃಷ್ಟಿಸಿದೆ. ಜೊತೆಗೆ, ಇದು ಸ್ಥಳೀಯ ರಿಯಲ್ ಎಸ್ಟೇಟ್ ಮೌಲ್ಯದಲ್ಲಿ ಶೇಕಡಾ 40–50 ರಷ್ಟು ಏರಿಕೆಗೆ ಕಾರಣವಾಗಿದೆ.
ಮುಂದಿರುವ ದಿಗಂತ
'ಉಡಾನ್' ಯೋಜನೆ ಕಳೆದ ದಶಕದಲ್ಲಿ ಅನೇಕ ಮಾರ್ಗಗಳು ಮತ್ತು ಏರೋಡ್ರೋಮ್ಗಳನ್ನು ಕಾರ್ಯಾಚರಣೆಗೊಳಿಸುವ ಮೂಲಕ ಹಾಗೂ ಕೋಟ್ಯಂತರ ಪ್ರಯಾಣಿಕರನ್ನು ಕರೆದೊಯ್ಯುವ ಮೂಲಕ ಭಾರತದ ಪ್ರಾದೇಶಿಕ ಸಂಪರ್ಕವನ್ನು ಮರು ವ್ಯಾಖ್ಯಾನಿಸಿದೆ. ಪ್ರಾದೇಶಿಕ ವಿಮಾನಯಾನದ ಮುಂದಿನ ಹಂತವು ವಿವಿಧ ಭೌಗೋಳಿಕ ಪ್ರದೇಶಗಳಾದ್ಯಂತ ವಿಶ್ವಾಸಾರ್ಹ ಮತ್ತು ಸುಸ್ಥಿರ ಕಾರ್ಯಾಚರಣೆಗಳನ್ನು ಬೆಂಬಲಿಸುವ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದರ ಮೇಲೆ ಅವಲಂಬಿತವಾಗಿದೆ.
ಮಾರ್ಪಡಿಸಿದ 'ಉಡಾನ್' ಯೋಜನೆಯ ಮೂಲಕ, ಏರೋಡ್ರೋಮ್ ಅಭಿವೃದ್ಧಿ, ಕಾರ್ಯಾಚರಣೆಯ ಬೆಂಬಲ ಮತ್ತು ದೇಶೀಯ ವಿಮಾನಯಾನ ಸಾಮರ್ಥ್ಯದ ಮೇಲೆ ಗಮನ ಹರಿಸಲಾಗುತ್ತಿದೆ. ಈ ಕ್ರಮಗಳು ಪ್ರಾದೇಶಿಕ ವಿಮಾನ ಪ್ರಯಾಣದ ಮೂಲಸೌಕರ್ಯ ಮತ್ತು ಸುಸ್ಥಿರತೆಯ ಸವಾಲುಗಳನ್ನು ಪರಿಹರಿಸಲು ಶ್ರಮಿಸುತ್ತವೆ. ಭಾರತದಾದ್ಯಂತ ಸಂಪರ್ಕಕ್ಕೆ ಮತ್ತಷ್ಟು ಬಲವಾದ ಬುನಾದಿಯನ್ನು ಸೃಷ್ಟಿಸುವುದು ಇವುಗಳ ಮುಖ್ಯ ಉದ್ದೇಶವಾಗಿದೆ.
References
Cabinet
Ministry of Civil Aviation
PIB Backgrounders
Click here to see pdf
*****
(तथ्य सामग्री आईडी: 151129)
आगंतुक पटल : 12
Provide suggestions / comments