Economy

ರಾಷ್ಟ್ರೀಯ ಪ.ಜಾ-ಪ.ಪಂ ಹಬ್: ಎಲ್ಲರನ್ನೂ ಒಳಗೊಳ್ಳುವ ಉದ್ಯಮಶೀಲತೆಯ ಸಬಲೀಕರಣ

प्रविष्टि तिथि: 08 OCT 2026 10:25 AM

ರಾಷ್ಟ್ರೀಯ ಪ.ಜಾ/ಪ.ಪಂ ಹಬ್ ಪ.ಜಾ /ಪ.ಪಂ ಉದ್ಯಮಗಳು ತಮ್ಮ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಲು ಮತ್ತು ವಿಶಾಲವಾದ ಮಾರುಕಟ್ಟೆ ಅವಕಾಶಗಳನ್ನು ಪಡೆಯಲು ನೆರವಾಗುವ ಮೂಲಕ, ಎಲ್ಲರನ್ನೂ ಒಳಗೊಳ್ಳುವ ಉದ್ಯಮಶೀಲತೆಯನ್ನು ಮುನ್ನಡೆಸುತ್ತಿದೆ. ಹಣಕಾಸು, ತಂತ್ರಜ್ಞಾನ, ತರಬೇತಿ, ಮಾರ್ಗದರ್ಶನ ಮತ್ತು ಮಾರುಕಟ್ಟೆ ಸಂಪರ್ಕಗಳನ್ನು ಒಳಗೊಂಡ ಮಧ್ಯಸ್ಥಿಕೆಗಳ ಮೂಲಕ, ಈ ಯೋಜನೆಯು ಉದ್ಯಮಶೀಲತೆಯ ಹಾದಿಯಲ್ಲಿ ಎದುರಾಗುವ ಪ್ರಮುಖ ಅಡೆತಡೆಗಳನ್ನು ನಿವಾರಿಸುತ್ತದೆ. ಸಾರ್ವಜನಿಕ ಸಂಗ್ರಹಣೆಯ ಮೇಲಿನ ಇದರ ವಿಶೇಷ ಗಮನವು ಪ.ಜಾ /ಪ.ಪಂಮಾಲೀಕತ್ವದ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳನ್ನು ಸಾಂಸ್ಥಿಕ ಖರೀದಿದಾರರೊಂದಿಗೆ ಮತ್ತಷ್ಟು ಜೋಡಿಸುತ್ತದೆ. ಹೆಚ್ಚುತ್ತಿರುವ ಫಲಾನುಭವಿಗಳ ತಲುಪುವಿಕೆ, ತರಬೇತಿ ಬೆಂಬಲ ಮತ್ತು ಸಂಗ್ರಹಣೆಯಲ್ಲಿನ ಭಾಗವಹಿಸುವಿಕೆಯೊಂದಿಗೆ, ಎನ್‌ಎಸ್‌ಎಸ್‌ಎಚ್ ಹೆಚ್ಚು ಸ್ಪರ್ಧಾತ್ಮಕ ಎಂಎಸ್‌ಎಂಇ  ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ನೆರವಾಗುತ್ತಿದೆ.

ಎಲ್ಲರನ್ನೂ ಒಳಗೊಳ್ಳುವ ಉದ್ಯಮಶೀಲತೆಯ ಪರಿಸರ ವ್ಯವಸ್ಥೆಯ ನಿರ್ಮಾಣ

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಭಾರತದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಉದ್ಯಮಶೀಲತೆ, ಉದ್ಯೋಗ ಹಾಗೂ ಆರ್ಥಿಕ ಅವಕಾಶಗಳನ್ನು ಸೃಷ್ಟಿಸಲು ಪ್ರಮುಖ ಮಾರ್ಗವನ್ನು ಒದಗಿಸುತ್ತವೆ. ಈ ಅವಕಾಶಗಳನ್ನು ಹೆಚ್ಚು ಸಮ್ಮಿಳಿತಗೊಳಿಸಲು (ಒಳಗೊಳ್ಳುವಂತೆ ಮಾಡಲು) ಐತಿಹಾಸಿಕವಾಗಿ ಹಿಂದುಳಿದ ಸಮುದಾಯಗಳ ಉದ್ಯಮಿಗಳು ವ್ಯಾಪಾರದಲ್ಲಿ ಪಾಲ್ಗೊಳ್ಳಲು, ಸ್ಪರ್ಧಿಸಲು ಮತ್ತು ಬೆಳೆಯಲು ಅನುವು ಮಾಡಿಕೊಡುವುದು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳಲ್ಲಿ ಉದ್ಯಮದ ಮಾಲೀಕತ್ವವನ್ನು ಉತ್ತೇಜಿಸುವುದು ಒಂದು ಪ್ರಮುಖ ಆದ್ಯತೆಯಾಗಿದೆ. ಹಣಕಾಸು, ಕೌಶಲ್ಯ, ತಂತ್ರಜ್ಞಾನ ಮತ್ತು ಮಾರುಕಟ್ಟೆಗಳಿಗೆ ಹೆಚ್ಚಿನ ಪ್ರವೇಶವನ್ನು ಒದಗಿಸುವುದು ಭಾರತದ ಎಂಎಸ್‌ಎಂಇ ಪರಿಸರ ವ್ಯವಸ್ಥೆಯಲ್ಲಿ ಅವರ ಭಾಗವಹಿಸುವಿಕೆಯನ್ನು ವಿಸ್ತರಿಸಲು ಸಹಾಯ ಮಾಡುತ್ತದೆ.

ರಾಷ್ಟ್ರೀಯ ಪ.ಜಾ-ಪ.ಪಂ  ಹಬ್: ಉದ್ಯಮದ ಬೆಳವಣಿಗೆಗೆ ಉತ್ತೇಜನ

18 ಅಕ್ಟೋಬರ್ 2016 ರಂದು ಪ್ರಾರಂಭಿಸಲಾದ ರಾಷ್ಟ್ರೀಯ ಪ.ಜಾ-ಪ.ಪಂ ಹಬ್ ಯೋಜನೆಯು, ಉದ್ಯಮಗಳ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಅವುಗಳಿಗೆ ಉದ್ದೇಶಿತ ಬೆಂಬಲವನ್ನು ನೀಡುತ್ತದೆ. ರಾಷ್ಟ್ರೀಯ ಸಣ್ಣ ಕೈಗಾರಿಕೆಗಳ ನಿಗಮದ ಮೂಲಕ ಜಾರಿಗೊಳಿಸಲಾದ ಈ ಯೋಜನೆಯು ಪ.ಜಾ /ಪ.ಪಂಮಾಲೀಕತ್ವದ ಉದ್ಯಮಗಳು ಎದುರಿಸುತ್ತಿರುವ ಅಡೆತಡೆಗಳನ್ನು ಪರಿಹರಿಸಲು ಮತ್ತು ಸಾರ್ವಜನಿಕ ಸಂಗ್ರಹಣೆಯಲ್ಲಿ ಅವರ ಭಾಗವಹಿಸುವಿಕೆಗೆ ಬೆಂಬಲ ನೀಡುತ್ತದೆ.

ಎನ್‌ಎಸ್‌ಎಸ್‌ಎಚ್ ಅಡಿಯಲ್ಲಿನ ಉದ್ಯಮ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ತರಬೇತಿ, ಮಾರ್ಗದರ್ಶನ, ಉದ್ಯಮ ಅಭಿವೃದ್ಧಿ, ನೆಟ್‌ವರ್ಕಿಂಗ್ ಮತ್ತು ಜ್ಞಾನದ ಬೆಂಬಲ ಸೇರಿವೆ. ಒಟ್ಟಾಗಿ, ಈ ಮಧ್ಯಸ್ಥಿಕೆಗಳು ಉದ್ಯಮಿಗಳಿಗೆ ಉದ್ಯಮ ಸಾಮರ್ಥ್ಯಗಳನ್ನು ಸುಧಾರಿಸಲು, ಹೊಸ ಅವಕಾಶಗಳನ್ನು ಪಡೆಯಲು ಮತ್ತು ಹೆಚ್ಚು ಸ್ಪರ್ಧಾತ್ಮಕ ಉದ್ಯಮಗಳನ್ನು ನಿರ್ಮಿಸಲು ನೆರವಾಗುತ್ತವೆ.

ವಿಸ್ತರಿಸುತ್ತಿರುವ ತಲುಪುವಿಕೆ, ಆಳಗೊಳ್ಳುತ್ತಿರುವ ಒಳಗೊಳ್ಳುವಿಕೆ

 ಎನ್‌ಎಸ್‌ಎಸ್‌ಎಚ್ ಯೋಜನೆಯ ಪ್ರಭಾವವು ಬೆಂಬಲ ಪಡೆದ ಉದ್ಯಮಿಗಳ ಸಂಖ್ಯೆಯಲ್ಲಿ ಮಾತ್ರವಲ್ಲದೆ, ಮಾರುಕಟ್ಟೆಯಲ್ಲಿ ಅವರ ಹೆಚ್ಚುತ್ತಿರುವ ಭಾಗವಹಿಸುವಿಕೆಯಲ್ಲೂ ಪ್ರತಿಫಲಿಸುತ್ತದೆ. ಉದ್ಯಮಶೀಲತೆಯ ಬೆಂಬಲವನ್ನು ಸಂಗ್ರಹಣೆ ಅವಕಾಶಗಳೊಂದಿಗೆ ಜೋಡಿಸುವ ಮೂಲಕ, ಈ ಯೋಜನೆಯು ಪ.ಜಾ /ಪ.ಪಂಮಾಲೀಕತ್ವದ ಉದ್ಯಮಗಳು ತಮ್ಮ ಸಾಮರ್ಥ್ಯಗಳನ್ನು ಸುಧಾರಿಸಲು, ಮಾರುಕಟ್ಟೆ ಉಪಸ್ಥಿತಿಯನ್ನು ವಿಸ್ತರಿಸಲು ಮತ್ತು ಸುಸ್ಥಿರ ಬೆಳವಣಿಗೆಯನ್ನು ಸಾಧಿಸಲು ನೆರವಾಗುತ್ತಿದೆ.

ಈ ಯೋಜನೆಯು ಪ್ರಾರಂಭವಾದಾಗಿನಿಂದ ಜುಲೈ 31, 2026 ರವರೆಗೆ, ಎನ್‌ಎಸ್‌ಎಸ್‌ಎಚ್ 1,90,414 ಫಲಾನುಭವಿಗಳಿಗೆ ನೆರವಾಗಿದೆ ಮತ್ತು 54,499 ಅಭ್ಯರ್ಥಿಗಳಿಗೆ ತರಬೇತಿ ನೀಡಿದೆ. ಇದು ಪ.ಜಾ /ಪ.ಪಂಮಾಲೀಕತ್ವದ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಂದ  ಮಾಡುವ ಸಂಗ್ರಹಣೆಯಲ್ಲಿ ಗಮನಾರ್ಹ ವಿಸ್ತರಣೆಗೆ ಕಾರಣವಾಗಿದೆ. ಸಂಗ್ರಹಣೆ ಮೊತ್ತವು 2015-16 ರಲ್ಲಿ ಇದ್ದ ₹99.37 ಕೋಟಿಯಿಂದ 2025-26 ರಲ್ಲಿ ಸುಮಾರು 39 ಪಟ್ಟು ಹೆಚ್ಚಾಗಿ ₹4,013.42 ಕೋಟಿಗೆ ತಲುಪಿದೆ. ಉತ್ತರ ಪ್ರದೇಶ, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು ಮತ್ತು ಅಸ್ಸಾಂ ಎನ್‌ಎಸ್‌ಎಸ್‌ಎಚ್ ಅಡಿಯಲ್ಲಿ ಪ್ರಮುಖ ಐದು ರಾಜ್ಯಗಳಾಗಿ ಹೊರಹೊಮ್ಮಿವೆ.

2025-26 ರ ಅವಧಿಯಲ್ಲಿ:

  • 12,524 ಎಂಎಸ್‌ಇಗಳಿಂದ ₹4013.42 ಕೋಟಿ ಮೌಲ್ಯದ ಸಂಗ್ರಹಣೆ ದಾಖಲಾಗಿದೆ
  • 24 ಆಕಾಂಕ್ಷಿ ಜಿಲ್ಲೆಗಳು ಸೇರಿದಂತೆ 27 ರಾಜ್ಯಗಳ 47 ಸಂಸ್ಥೆಗಳ ಮೂಲಕ 10,717 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದೆ
  • ತರಬೇತಿ ಪಡೆದ ಅಭ್ಯರ್ಥಿಗಳಲ್ಲಿ 55% ರಷ್ಟು ಮಹಿಳೆಯರಿದ್ದಾರೆ

ತರಬೇತಿ ಕಾರ್ಯಕ್ರಮಗಳನ್ನು ಸಾರ್ವಜನಿಕ ಸಂಗ್ರಹಣೆ ಮತ್ತು ಜಿಎಮ್ ಅವಕಾಶಗಳಿಗೆ ಅನುಗುಣವಾಗಿ ರೂಪಿಸಲಾಗಿದ್ದು, ಅವುಗಳ ಮಾರುಕಟ್ಟೆ ಪ್ರಸ್ತುತತೆಯನ್ನು ಸುಧಾರಿಸಲಾಗಿದೆ. ಕೆಫೆಟೇರಿಯಾ ನಿರ್ವಹಣೆ ಮತ್ತು ಆಹಾರ ಉತ್ಪಾದನೆ, ವೆಲ್ಡಿಂಗ್ ಮತ್ತು ಕಂಪ್ಯೂಟರ್-ಎಡೆಡ್ ಡಿಸೈನ್/ಕಂಪ್ಯೂಟರ್-ಎಡೆಡ್ ಮ್ಯಾನುಫ್ಯಾಕ್ಚರಿಂಗ್ , ಲಾಂಡ್ರಿ ಸೇವೆಗಳು, ಫ್ಯಾಷನ್ ಡಿಸೈನಿಂಗ್ ಮತ್ತು ಟೈಲರಿಂಗ್ ಹಾಗೂ ಬಿದಿರು ಆಧಾರಿತ ಕೆಲಸಗಳು ಇದರಲ್ಲಿ ಸೇರಿರುವ ಪ್ರಮುಖ ಕ್ಷೇತ್ರಗಳಾಗಿವೆ.

ಬೆಳವಣಿಗೆಯ ಹಾದಿಯಲ್ಲಿ ಉದ್ಯಮಗಳಿಗೆ ಬೆಂಬಲ ಉದ್ಯಮದ ಬೆಳವಣಿಗೆಯ ವಿವಿಧ ಅಗತ್ಯಗಳನ್ನು ಪೂರೈಸಲು ಎನ್‌ಎಸ್‌ಎಸ್‌ಎಚ್ ಹಲವಾರು ಉಪಕ್ರಮಗಳನ್ನು ಒಟ್ಟಗೂಡಿಸುತ್ತದೆ.

ವಿಶೇಷ ಕ್ರೆಡಿಟ್ ಲಿಂಕ್ಡ್ ಕ್ಯಾಪಿಟಲ್ ಸಬ್ಸಿಡಿ ಯೋಜನೆ

ಎಸ್‌ಸಿಎಲ್‌ಸಿಎಸ್ಎಸ್ ಯೋಜನೆಯು ಸ್ಥಾವರ, ಯಂತ್ರೋಪಕರಣಗಳು ಮತ್ತು ಉಪಕರಣಗಳಲ್ಲಿ ಹೂಡಿಕೆ ಮಾಡುವ ಮೂಲಕ ಹೊಸ ಮತ್ತು ಅಸ್ತಿತ್ವದಲ್ಲಿರುವ ಪ.ಜಾ /ಪ.ಪಂಮಾಲೀಕತ್ವದ ಎಂಎಸ್‌ಇಗಳ ಸಾಮರ್ಥ್ಯವನ್ನು ಬಲಪಡಿಸಲು ಬೆಂಬಲ ನೀಡುತ್ತದೆ. ಇದು ಸಾಂಸ್ಥಿಕ ಸಾಲದ ಮೂಲಕ ಪಡೆದ ಖರೀದಿಗೆ ಗರಿಷ್ಠ ₹25 ಲಕ್ಷ ಮಿತಿಗೊಳಿಸಿ 25% ಬಂಡವಾಳ ಸಬ್ಸಿಡಿಯನ್ನು ಒದಗಿಸುತ್ತದೆ. ಈ ಯೋಜನೆಯು ಯಾವುದೇ ನಿರ್ದಿಷ್ಟ ಉತ್ಪನ್ನ/ವಲಯದ ನಿರ್ಬಂಧಗಳಿಲ್ಲದೆ ಉತ್ಪಾದನಾ ಮತ್ತು ಸೇವಾ ಉದ್ಯಮಗಳೆರಡನ್ನೂ ಒಳಗೊಳ್ಳುತ್ತದೆ.

ಪ್ರಾರ೦ಭದಿಂದ (2016) ಮಾರ್ಚ್ 2026 ರವರೆಗಿನ ಪ್ರಗತಿ:

  • 3,160 ಎಂಎಸ್‌ಇಗಳು ₹356.10 ಕೋಟಿ ಮೌಲ್ಯದ ಬೆಂಬಲವನ್ನು ಪಡೆದಿವೆ
  • 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 233 ಜಿಲ್ಲೆಗಳಿಗೆ ಈ ಬೆಂಬಲ ವಿಸ್ತರಿಸಿದೆ

ಸಿಂಗಲ್ ಪಾಯಿಂಟ್ ನೋಂದಣಿ ಯೋಜನೆ

ಎಸ್‌ಪಿಆರ್‌ಎಸ್ ಯೋಜನೆಯು ಎನ್‌ಎಸ್‌ಐಸಿ ಯಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ಸರ್ಕಾರಿ ಸಂಗ್ರಹಣಾ ಅವಕಾಶಗಳನ್ನು ಪಡೆಯಲು ಎಂಎಸ್‌ಇಗಳಿಗೆ ನೆರವಾಗುತ್ತದೆ. ನೋಂದಾಯಿತ ಎಂಎಸ್‌ಇಗಳು ಉಚಿತ ಟೆಂಡರ್ ಸೆಟ್‌ಗಳನ್ನು ಮತ್ತು ಈಎಂಡಿ ಪಾವತಿಯಿಂದ ವಿನಾಯಿತಿಯನ್ನು ಪಡೆಯುವುದರ ಜೊತೆಗೆ ಇತರ ಸಂಗ್ರಹಣಾ ಸೌಲಭ್ಯಗಳನ್ನು ಪಡೆಯುತ್ತವೆ.

ಸಾರ್ವಜನಿಕ ಸಂಗ್ರಹಣಾ ನೀತಿಯಡಿಯಲ್ಲಿ, ಕೇಂದ್ರ ಸಚಿವಾಲಯಗಳು, ಇಲಾಖೆಗಳು ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳು ತಮ್ಮ ವಾರ್ಷಿಕ ಖರೀದಿಯಲ್ಲಿ 25% ರಷ್ಟನ್ನು ಎಂಎಸ್‌ಇಗಳಿಂದ ಖರೀದಿಸುವುದು ಕಡ್ಡಾಯವಾಗಿದೆ, ಇದರಲ್ಲಿ ಒಟ್ಟು ಸಂಗ್ರಹಣೆಯ 4% ರಷ್ಟನ್ನು ಪ.ಜಾ /ಪ.ಪಂಮಾಲೀಕತ್ವದ ಎಂಎಸ್‌ಇಗಳಿಗೆ ಕಾಯ್ದಿರಿಸಲಾಗಿದೆ.

ವಿಶೇಷ ಮಾರುಕಟ್ಟೆ ನೆರವು ಯೋಜನೆ

ಎಸ್‌ಎಂಎಎಸ್ ಯೋಜನೆಯು ಪ್ರದರ್ಶನಗಳು, ವ್ಯಾಪಾರ ಮೇಳಗಳು, ಮಾರಾಟಗಾರರ ಕಾರ್ಯಕ್ರಮಗಳು, ಕಾರ್ಯಾಗಾರಗಳು ಮತ್ತು ಜಾಗೃತಿ ಅಭಿಯಾನಗಳ ಮೂಲಕ ಪ.ಜಾ /ಪ.ಪಂಉದ್ಯಮಗಳ ಉತ್ಪನ್ನ ಪ್ರದರ್ಶನ ಮತ್ತು ಸ್ಪರ್ಧಾತ್ಮಕತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ನೋಂದಾಯಿತ ಉದ್ಯಮಗಳು ಪ್ರತಿ ಹಣಕಾಸು ವರ್ಷದಲ್ಲಿ ಗರಿಷ್ಠ ನಾಲ್ಕು ರಾಷ್ಟ್ರೀಯ ಮತ್ತು ಎರಡು ಅಂತರರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು.

ಅಂತರರಾಷ್ಟ್ರೀಯ ಪ್ರದರ್ಶನದ ಬೆಂಬಲವು ಸೂಕ್ಷ್ಮ ಉದ್ಯಮಗಳಿಗೆ ₹3 ಲಕ್ಷದವರೆಗೆ, ಸಣ್ಣ ಉದ್ಯಮಗಳಿಗೆ ₹2.5 ಲಕ್ಷದವರೆಗೆ ಮತ್ತು ಮಧ್ಯಮ ಉದ್ಯಮಗಳಿಗೆ ₹1.5 ಲಕ್ಷದವರೆಗೆ ವಿಸ್ತರಿಸುತ್ತದೆ. ಉದ್ಯಮಗಳು 'ಉದ್ಯಮ್ ನೋಂದಣಿ ಪೋರ್ಟಲ್' ಮತ್ತು 'ಎಂಎಸ್‌ಎಂಇ ಡೇಟಾ ಬ್ಯಾಂಕ್' ನಲ್ಲಿ ನೋಂದಾಯಿಸಿಕೊಂಡಿರಬೇಕು.

2025-26 ರ ಅವಧಿಯಲ್ಲಿ ಸಾಧಿಸಿದ ಪ್ರಗತಿ:

  • 141 ಪ.ಜಾ /ಪ.ಪಂಎಂಎಸ್‌ಇಗಳಿಗೆ 4 ರಾಷ್ಟ್ರೀಯ/ದೇಶೀಯ ಪ್ರದರ್ಶನಗಳಲ್ಲಿ ಭಾಗವಹಿಸಲು ಅನುಕೂಲ ಮಾಡಿಕೊಡಲಾಗಿದೆ
  • ಕೇಂದ್ರ ಸಾರ್ವಜನಿಕ ವಲಯದ ಉದ್ದಿಮೆಗಳ ಜೊತೆಗೂಡಿ 247 ವಿಶೇಷ ಮಾರಾಟಗಾರರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ
  • 197 ಇ-ಟೆಂಡರಿಂಗ್ ಕಾರ್ಯಾಗಾರಗಳನ್ನು ನಡೆಸಲಾಗಿದೆ
  • ಕೇಂದ್ರ ಸಾರ್ವಜನಿಕ ವಲಯದ ಉದ್ದಿಮೆಗಳು  ಮತ್ತು ಸರ್ಕಾರಿ ಇಲಾಖೆಗಳೊಂದಿಗೆ 230 ಜಾಗೃತಿ ಕಾರ್ಯಾಗಾರಗಳನ್ನು ಆಯೋಜಿಸಲಾಗಿದೆ

ಬ್ಯಾಂಕ್ ಸಾಲ ಸಂಸ್ಕರಣಾ ಶುಲ್ಕ ಮರುಪಾವತಿ ಯೋಜನೆ

 ಪ.ಜಾ /ಪ.ಪಂಎಂಎಸ್‌ಇಗಳ ಸಾಲ ಪಡೆಯುವ ವೆಚ್ಚವನ್ನು ಕಡಿಮೆ ಮಾಡಲು ಈ ಸೌಲಭ್ಯವನ್ನು ರೂಪಿಸಲಾಗಿದೆ. ಇದು ಅನ್ವಯವಾಗುವ ತೆರಿಗೆಗಳನ್ನು ಹೊರತುಪಡಿಸಿ, ಸಾಲ ಸಂಸ್ಕರಣಾ ಶುಲ್ಕದ 80% ಅಥವಾ ₹1 ಲಕ್ಷ (ಯಾವುದು ಕಡಿಮೆಯೋ ಅದನ್ನು) ಮರುಪಾವತಿಸುತ್ತದೆ. ಸಾಲ ವಿತರಣೆಯ ನಂತರ ಮತ್ತು ಒಂದು ಹಣಕಾಸು ವರ್ಷದಲ್ಲಿ ಬಹು ಬಾರಿಗೆ ಈ ಸೌಲಭ್ಯವನ್ನು ಪಡೆಯಬಹುದು. ಪರಿಶಿಷ್ಟ ವಾಣಿಜ್ಯ ಬ್ಯಾಂಕ್‌ಗಳು, ಎನ್‌ಬಿಎಫ್‌ಸಿಗಳು ಮತ್ತು ರಾಜ್ಯ ಹಣಕಾಸು ನಿಗಮಗಳಿಂದ ಪಡೆದ ಸಾಲಗಳು ಇದಕ್ಕೆ ಒಳಪಡುತ್ತವೆ.

ಬ್ಯಾಂಕ್ ಗ್ಯಾರಂಟಿ ಶುಲ್ಕ ಮರುಪಾವತಿ ಯೋಜನೆ

 ಕೇಂದ್ರ ಅಥವಾ ರಾಜ್ಯ ಸರ್ಕಾರ ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳ ಟೆಂಡರ್‌ಗಳಲ್ಲಿ ಭಾಗವಹಿಸುವ ವೆಚ್ಚವನ್ನು ಸುಲಭಗೊಳಿಸಲು, ಪ.ಜಾ /ಪ.ಪಂಎಂಎಸ್‌ಇಗಳು 'ಕಾರ್ಯಕ್ಷಮತೆ ಬ್ಯಾಂಕ್ ಗ್ಯಾರಂಟಿ' ಶುಲ್ಕದ ಮರುಪಾವತಿಯನ್ನು ಪಡೆಯಬಹುದು. ಈ ಬೆಂಬಲವು ಅನ್ವಯವಾಗುವ ತೆರಿಗೆಗಳನ್ನು ಹೊರತುಪಡಿಸಿ ಅರ್ಹ ಶುಲ್ಕದ 80% ಅಥವಾ ₹1 ಲಕ್ಷ, ಯಾವುದು ಕಡಿಮೆಯೋ ಅದನ್ನು ಒದಗಿಸುತ್ತದೆ.

ಪರೀಕ್ಷಾ ಶುಲ್ಕ ಮರುಪಾವತಿ ಯೋಜನೆ

 ಈ ಯೋಜನೆಯು ಪ.ಜಾ /ಪ.ಪಂ ಎಂಎಸ್‌ಇಗಳಿಗೆ ಭಾರತೀಯ ಮಾನಕ ಬ್ಯೂರೋ ನೀಡುವ ಉತ್ಪನ್ನ ಪರೀಕ್ಷೆ, ಪರವಾನಗಿ ಮತ್ತು ಪ್ರಮಾಣೀಕರಣಕ್ಕೆ ಸಂಬಂಧಿಸಿದ ವೆಚ್ಚಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಒಂದು ಹಣಕಾಸು ವರ್ಷದಲ್ಲಿ ಅನ್ವಯವಾಗುವ ತೆರಿಗೆಗಳನ್ನು ಹೊರತುಪಡಿಸಿ, ಇದು ಅರ್ಹ ಪರೀಕ್ಷಾ ಶುಲ್ಕದ 80% ಅಥವಾ ₹1 ಲಕ್ಷ (ಯಾವುದು ಕಡಿಮೆಯೋ ಅದನ್ನು) ಮರುಪಾವತಿಸುತ್ತದೆ. ಪರೀಕ್ಷೆಯನ್ನು ಎನ್‌ಎಬಿಎಲ್/ಬಿಐಎಸ್ ಮಾನ್ಯತೆ ಪಡೆದ, ಸರ್ಕಾರಿ ಅಥವಾ ಪಿಎಸ್‌ಯು ಪ್ರಯೋಗಾಲಯಗಳ ಮೂಲಕ ನಡೆಸಬೇಕು.

ರಫ್ತು ಉತ್ತೇಜನಾ ಮಂಡಳಿ ಸದಸ್ಯತ್ವ ಮರುಪಾವತಿ ಯೋಜನೆ

ರಫ್ತು ಜಾಲಗಳ ಪ್ರವೇಶವನ್ನು ಸುಲಭಗೊಳಿಸಲು, ಪ.ಜಾ /ಪ.ಪಂ ಎಂಎಸ್‌ಇಗಳು ರಫ್ತು ಉತ್ತೇಜನಾ ಮಂಡಳಿಗಳ ಸದಸ್ಯತ್ವಕ್ಕೆ ಬೆಂಬಲವನ್ನು ಪಡೆಯುತ್ತವೆ. ಈ ಮರುಪಾವತಿಯು ಪ್ರತಿ ಹಣಕಾಸು ವರ್ಷಕ್ಕೆ ಅನ್ವಯವಾಗುವ ತೆರಿಗೆಗಳನ್ನು ಹೊರತುಪಡಿಸಿ, ಅರ್ಹ ಸದಸ್ಯತ್ವ ಶುಲ್ಕದ 80% ಅಥವಾ ₹20,000, ಯಾವುದು ಕಡಿಮೆಯೋ ಅದನ್ನು ಒದಗಿಸುತ್ತದೆ. ಇದು ವಾರ್ಷಿಕ ಸದಸ್ಯತ್ವ ಶುಲ್ಕ, ಒಂದು ಬಾರಿಯ ಚಂದಾದಾರಿಕೆ ಶುಲ್ಕ ಮತ್ತು ಪ್ರವೇಶ ಶುಲ್ಕವನ್ನು ಒಳಗೊಂಡಿರುತ್ತದೆ. ಅರ್ಜಿದಾರರು ಸಿಂಧುವಾದ ಆಮದು ರಫ್ತು ಕೋಡ್ ಮತ್ತು ನೋಂದಣಿ-ಜೊತೆಗೆ-ಸದಸ್ಯತ್ವ ಪ್ರಮಾಣಪತ್ರವನ್ನು (RCMC) ಹೊಂದಿರಬೇಕು.

ಸಾಮರ್ಥ್ಯ ವರ್ಧನೆ ನಿರ್ವಹಣಾ ಶುಲ್ಕ ಮರುಪಾವತಿ ಯೋಜನೆ

 ಎನ್‌ಐಆರ್‌ಎಫ್ ಅಡಿಯಲ್ಲಿ ಗುರುತಿಸಲಾದ ಉನ್ನತ 50 ನಿರ್ವಹಣಾ ಸಂಸ್ಥೆಗಳಲ್ಲಿ ಅಲ್ಪಾವಧಿಯ ತರಬೇತಿಯ ಮೂಲಕ ನಿರ್ವಹಣಾ ಮತ್ತು ವ್ಯವಹಾರ ಕೌಶಲ್ಯಗಳಿಗೆ ಬೆಂಬಲ ನೀಡಲಾಗುತ್ತದೆ. ಪ.ಜಾ /ಪ.ಪಂಉದ್ಯಮಿಗಳು ಮತ್ತು ಅವರ ಮಕ್ಕಳು 1 ರಿಂದ 30 ದಿನಗಳವರೆಗಿನ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು, ವರ್ಷಕ್ಕೆ ಗರಿಷ್ಠ ಎರಡು ಕೋರ್ಸ್‌ಗಳಿಗೆ ಬೆಂಬಲ ಸಿಗುತ್ತದೆ. ಭಾಗವಹಿಸುವವರು ಪ್ರತಿ ಹಣಕಾಸು ವರ್ಷಕ್ಕೆ ಕೋರ್ಸ್ ಶುಲ್ಕದ 90% ಅಥವಾ ₹1 ಲಕ್ಷ, ಯಾವುದು ಕಡಿಮೆಯೋ ಅದನ್ನು ಪಡೆಯಬಹುದು.

ಸರ್ಕಾರ ಪ್ರಾಯೋಜಿತ ಇ-ಕಾಮರ್ಸ್ ಪೋರ್ಟಲ್‌ಗಳ ಸದಸ್ಯತ್ವ ಶುಲ್ಕ

ಈ ಘಟಕವು ಸರ್ಕಾರ ಪ್ರಾಯೋಜಿತ ಇ-ಕಾಮರ್ಸ್ ಪೋರ್ಟಲ್‌ಗಳ ಮೂಲಕ ಡಿಜಿಟಲ್ ಮಾರುಕಟ್ಟೆ ಪ್ರವೇಶವನ್ನು ವಿಸ್ತರಿಸಲು ಪ.ಜಾ /ಪ.ಪಂಎಂಎಸ್‌ಇಗಳಿಗೆ ಸಹಾಯ ಮಾಡುತ್ತದೆ. ಇವುಗಳಲ್ಲಿ ಜಿಎಮ್, ಇ-ಖಾದಿ, ಟ್ರೈಫೆಡ್, ಟ್ರೈಬ್ಸ್ ಇಂಡಿಯಾ ಮತ್ತು ಎಂಎಸ್‌ಎಂಇ ಮಾರ್ಟ್ ಸೇರಿವೆ. ಇದು ಪ್ರತಿ ಹಣಕಾಸು ವರ್ಷಕ್ಕೆ ಅನ್ವಯವಾಗುವ ತೆರಿಗೆಗಳನ್ನು ಹೊರತುಪಡಿಸಿ ಸದಸ್ಯತ್ವ ಶುಲ್ಕದ 80% ಅಥವಾ ₹25,000 (ಯಾವುದು ಕಡಿಮೆಯೋ ಅದನ್ನು) ಮರುಪಾವತಿಸುತ್ತದೆ.

ಈ ಸಮಗ್ರ ವಿಧಾನವು ಉದ್ಯಮಗಳು ಕೇವಲ ಸಂಭಾವ್ಯ ಪೂರೈಕೆದಾರರಾಗಿ ಉಳಿಯದೆ, ಸಾಂಸ್ಥಿಕ ಮತ್ತು ಸರ್ಕಾರಿ ಮಾರುಕಟ್ಟೆಗಳಲ್ಲಿ ಸ್ಪರ್ಧಾತ್ಮಕ ಸ್ಪರ್ಧಿಗಳಾಗಿ ಹೊರಹೊಮ್ಮಲು ಸಹಾಯ ಮಾಡುತ್ತದೆ.

ಬೆಂಬಲದಿಂದ ಮಾರುಕಟ್ಟೆಯ ಯಶಸ್ಸಿನತ್ತ

ಹಣಕಾಸು ಮತ್ತು ಮಾರುಕಟ್ಟೆ ಸಂಬಂಧಿತ ನೆರವಿನ ಹೊರತಾಗಿ, ಎನ್‌ಎಸ್‌ಎಸ್‌ಎಚ್ ಉದ್ಯಮಗಳಿಗೆ ವ್ಯವಹಾರ ಬೆಂಬಲವನ್ನು ಬಲವಾದ ವಾಣಿಜ್ಯ ಫಲಿತಾಂಶಗಳಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ. ಬಿಸಿನೆಸ್ ಆಕ್ಸಿಲರೇಟರ್ ಪ್ರೋಗ್ರಾಂ  ವ್ಯವಹಾರ ತಂತ್ರ, ಬೆಲೆ ನಿಗದಿ, ಕಾರ್ಯಾಚರಣೆಯ ಕಾರ್ಯಕ್ಷಮತೆ ಮತ್ತು ಮಾರುಕಟ್ಟೆ ಸ್ಥಳವನ್ನು ಪಡೆದುಕೊಳ್ಳುವ ಕುರಿತು ರಚನಾತ್ಮಕ ಮಾರ್ಗದರ್ಶನ ಮತ್ತು ಉದ್ಯಮದ ಒಳನೋಟಗಳನ್ನು ಒದಗಿಸುತ್ತದೆ.

ಈ ಕಾರ್ಯಕ್ರಮವು ಉದ್ಯಮಿಗಳಿಗೆ ರಚನಾತ್ಮಕ, ಡೇಟಾ-ಚಾಲಿತ ವಿಧಾನಗಳನ್ನು ಅಳವಡಿಸಿಕೊಳ್ಳಲು ಮತ್ತು ಅವರ ವ್ಯವಹಾರಗಳನ್ನು ಮಾರುಕಟ್ಟೆ ಅಗತ್ಯಗಳಿಗೆ ತಕ್ಕಂತೆ ಹೊಂದಿಸಲು ಸಹಾಯ ಮಾಡುತ್ತದೆ. ಇದು ಅವರ ಸ್ಪರ್ಧಾತ್ಮಕತೆಯನ್ನು ಬಲಪಡಿಸುತ್ತದೆ ಮತ್ತು ವಿಶೇಷವಾಗಿ ಸರ್ಕಾರಿ ಸಂಗ್ರಹಣೆಯಲ್ಲಿ ಹೆಚ್ಚಿನ ಅವಕಾಶಗಳನ್ನು ತೆರೆಯುತ್ತದೆ.

ಯಶೋಗಾಥೆಗಳು

ನಿಯಮಾವಳಿ ಆಧಾರಿತ ಮಾರುಕಟ್ಟೆಗಳಲ್ಲಿ ಪ್ರಸ್ತುತತೆಯನ್ನು ಕಾಯ್ದುಕೊಳ್ಳುವುದು - ಮೆಸರ್ಸ್ ಸೇಫ್ಟಿ & ಸೆಕ್ಯುರಿಟಿ ಇಂಜಿನಿಯರಿಂಗ್, ಪಶ್ಚಿಮ ಬಂಗಾಳ

ಶ್ರೀ ದೇಬಾಶಿಶ್ ಮೊಂಡಲ್ ಅವರು ಬೆಲೆ ನಿಗದಿ, ವೆಚ್ಚ ನಿರ್ವಹಣೆ ಮತ್ತು ಮಾರುಕಟ್ಟೆಯಲ್ಲಿ ತಮ್ಮ ಸ್ಥಾನವನ್ನು ಬಲಪಡಿಸಿಕೊಂಡರು. ದೊರೆತ ಬೆಂಬಲವು ಸರ್ಕಾರಿ ಸಂಗ್ರಹಣೆಯಲ್ಲಿ ಅವರ ಉದ್ಯಮದ ಸ್ಪರ್ಧಾತ್ಮಕತೆಯನ್ನು ಸುಧಾರಿಸಿತು. ತರುವಾಯ, ಅವರ ಸಂಸ್ಥೆಯು 'ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್'ನಿಂದ ₹8.48 ಲಕ್ಷ ಮೌಲ್ಯದ ಟೆಂಡರ್‌ಗಳನ್ನು ಪಡೆದುಕೊಂಡಿತು.

ಕ್ಲೀನ್ ಎನರ್ಜಿ (ಸೌರ/ನವೀಕರಿಸಬಹುದಾದ ಇಂಧನ) ವಿಸ್ತರಣೆ - ಮೆಸರ್ಸ್ ರೆನೆರ್ಜಿ ಸೊಲ್ಯೂಷನ್ ಪ್ರೈವೇಟ್ ಲಿಮಿಟೆಡ್, ಅಸ್ಸಾಂ

ಶ್ರೀ ಭಾರ್ಗವ್ ದೇವೋರಿ ಅವರು ತಮ್ಮ ನವೀಕರಿಸಬಹುದಾದ ಇಂಧನ ಉದ್ಯಮಕ್ಕಾಗಿ ಉದ್ಯಮ ಪ್ರಕ್ರಿಯೆಗಳು, ಆಯಕಟ್ಟಿನ ದಿಕ್ಸೂಚಿ ಮತ್ತು ಮಾರುಕಟ್ಟೆ ಸ್ಥಾನವನ್ನು ಬಲಪಡಿಸಿಕೊಂಡರು. ಈ ಕಾರ್ಯಕ್ರಮವು ಸಂಗ್ರಹಣಾ ಪೋರ್ಟಲ್‌ಗಳೊಂದಿಗಿನ ಅವರ ಉದ್ಯಮದ ತೊಡಗಿಸಿಕೊಳ್ಳುವಿಕೆಯನ್ನು ಮತ್ತು ಸರ್ಕಾರಿ ಟೆಂಡರ್‌ಗಳ ಸಿದ್ಧತೆಯನ್ನು ಸುಧಾರಿಸಿತು. ಇದು ಸಾರ್ವಜನಿಕ ಸಂಗ್ರಹಣಾ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಳ್ಳಲು ಮತ್ತು ನವೀಕರಿಸಬಹುದಾದ ಇಂಧನ ವಲಯದಲ್ಲಿ ತಮ್ಮ ಉಪಸ್ಥಿತಿಯನ್ನು ವಿಸ್ತರಿಸಲು ಅವರ ಉದ್ಯಮಕ್ಕೆ ಅನುವು ಮಾಡಿಕೊಟ್ಟಿತು.

ನಿಖರತೆಯೊಂದಿಗೆ ಚಲನೆಗೆ ಶಕ್ತಿ ತುಂಬುವುದು - ಸಾವಳಾರಾಮ್ ಎಂಟರ್‌ಪ್ರೈಸಸ್, ಮಹಾರಾಷ್ಟ್ರ

ಶ್ರೀ ಸುನಿಲ್ ಪೋಪಟ್‌ರಾವ್ ಜಗತಾಪ್ ಅವರು ತಮ್ಮ ಉದ್ಯಮ ತಂತ್ರ ಮತ್ತು ಸರ್ಕಾರಿ ಸಂಗ್ರಹಣೆಯ ಕುರಿತಾದ ತಿಳುವಳಿಕೆಯನ್ನು ಬಲಪಡಿಸಿಕೊಂಡರು. ಈ ಜ್ಞಾನವನ್ನು ಬಳಸಿಕೊಂಡು, ಸಾವಳಾರಾಮ್ ಎಂಟರ್‌ಪ್ರೈಸಸ್ ಹೈಡ್ರಾಲಿಕ್ ಸಿಲಿಂಡರ್‌ಗಳಿಗಾಗಿ 'ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್' ನಿಂದ ₹5.10 ಲಕ್ಷ ಮೌಲ್ಯದ ಟೆಂಡರ್ ಅನ್ನು ಪಡೆದುಕೊಂಡಿತು. ಈ ಅವಕಾಶವು ಉದ್ಯಮದ ಕಾರ್ಯಕ್ಷಮತೆಯನ್ನು ಬಲಪಡಿಸಿತು ಮತ್ತು ಮಾರುಕಟ್ಟೆಯಲ್ಲಿ ಅದರ ಉಪಸ್ಥಿತಿಯನ್ನು ವಿಸ್ತರಿಸಿತು.

ಉದ್ಯಮಶೀಲತೆಯ ಸಬಲೀಕರಣ, ಸಮಗ್ರ ಮುನ್ನಡೆ

ರಾಷ್ಟ್ರೀಯ ಪ.ಜಾ-ಪ.ಪಂ ಹಬ್ ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಪ.ಜಾ /ಪ.ಪಂ ಉದ್ಯಮಿಗಳು ಇನ್ನಷ್ಟು ಅರ್ಥಪೂರ್ಣವಾಗಿ ಪಾಲ್ಗೊಳ್ಳಲು ಅವಕಾಶಗಳನ್ನು ವಿಸ್ತರಿಸುತ್ತಿದೆ. ಇದರ ವಿವಿಧ ಉಪಕ್ರಮಗಳು ಉದ್ಯಮಗಳಿಗೆ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಮತ್ತು ಬೃಹತ್ ಮಾರುಕಟ್ಟೆಗಳೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತಿವೆ. ಈ ಪ್ರಗತಿಯು ಸಾರ್ವಜನಿಕ ಸಂಗ್ರಹಣೆಯಲ್ಲಿ ಹೆಚ್ಚಿನ ಭಾಗವಹಿಸುವಿಕೆಗೆ ಅನುವು ಮಾಡಿಕೊಡುತ್ತಿದೆಯಲ್ಲದೆ, ಉದ್ಯೋಗ ಸೃಷ್ಟಿ ಹಾಗೂ ಉದ್ಯಮಗಳ ಬೆಳವಣಿಗೆಗೆ ಹಾದಿ ಸುಗಮಗೊಳಿಸುತ್ತಿದೆ. ತನ್ನ ತಲುಪುವಿಕೆ ವಿಸ್ತರಿಸುತ್ತಿದ್ದಂತೆ, ಎನ್‌ಎಸ್‌ಎಸ್‌ಎಚ್ ಯೋಜನೆಯು ಹೆಚ್ಚು ಸಮ್ಮಿಳಿತ, ವೈವಿಧ್ಯಮಯ ಮತ್ತು ಸ್ಪರ್ಧಾತ್ಮಕ ಎಂಎಸ್‌ಎಂಇ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಕೊಡುಗೆ ನೀಡುತ್ತಿದೆ.

 

References

Ministry of Micro, Small & Medium Enterprises

https://www.scsthub.in/sites/default/files/NSSH-Annual-Report-2025-26-1.pdf

https://www.scsthub.in/membership-nsic-b2b-portal

https://www.scsthub.in/content/nssh-dashboard

https://msme1connect.up.gov.in/GovernmentScheme/GovernmentScheme638740909894501747.pdf

https://www.pib.gov.in/PressReleasePage.aspx?PRID=2280604&reg=48&lang=1

https://www.pib.gov.in/PressReleasePage.aspx?PRID=2290460&reg=48&lang=2

National Small Industries Corporation

https://www.nsic.co.in/Schemes/NSSH

Click here to see pdf

 

******

 

 

 

 

(तथ्य सामग्री आईडी: 151105) आगंतुक पटल : 2


Provide suggestions / comments
इस विश्लेषक को इन भाषाओं में पढ़ें : English , हिन्दी , Bengali