• Sitemap
  • Advance Search
Economy

ಸೇವಾ ವಲಯದ ಉತ್ಪಾದನಾ ಸೂಚ್ಯಂಕ

प्रविष्टि तिथि: 14 JUL 2026 21:01 PM

ಭಾರತದ ಸೇವಾ ಆರ್ಥಿಕತೆಯ ಪ್ರಗತಿಯನ್ನು ಅಳೆಯುವುದು

ಸೇವಾ ವಲಯದ ಉತ್ಪಾದನಾ ಸೂಚ್ಯಂಕ : ಸೇವಾ ವಲಯದ ಕಾರ್ಯಕ್ಷಮತೆಯನ್ನು ಅರಿಯುವ ಮಾರ್ಗ

ಭಾರತವು ಕಳೆದ ದಶಕದಲ್ಲಿ ತನ್ನ ಸಾಂಖ್ಯಿಕ ಮತ್ತು ಆಡಳಿತಾತ್ಮಕ ದತ್ತಾಂಶ ವ್ಯವಸ್ಥೆಯನ್ನು ಗಮನಾರ್ಹವಾಗಿ ಬಲಪಡಿಸಿದೆ. ಉನ್ನತ-ಆವರ್ತನದ ಜಿಎಸ್‌ಟಿ ದತ್ತಾಂಶಗಳ ಲಭ್ಯತೆ, ಸಂಘಟಿತ ಸೇವಾ ವಲಯದ ಉದ್ಯಮಗಳ ವಾರ್ಷಿಕ ಸಮೀಕ್ಷೆ ಪ್ರಾರಂಭ, ಮತ್ತು ಡಿಜಿಟಲ್ ಆಡಳಿತಾತ್ಮಕ ಡೇಟಾಬೇಸ್‌ಗಳ ವಿಸ್ತರಣೆಯು ಇದರ ಪ್ರಮುಖ ಬೆಳವಣಿಗೆಗಳಾಗಿವೆ. ಇವು ಸಾಕ್ಷ್ಯಾಧಾರಿತ ನೀತಿ ನಿರೂಪಣೆಯನ್ನು ಹೆಚ್ಚು ಸಮರ್ಥಗೊಳಿಸಿವೆ.

ಈ ಸುಧಾರಣೆಗಳ ಆಧಾರದ ಮೇಲೆ, ಸೇವಾ ವಲಯದ ಕಾರ್ಯಕ್ಷಮತೆಯನ್ನು ಸೆರೆಹಿಡಿಯಲು ಸರ್ಕಾರವು 'ಸೇವಾ ವಲಯದ ಉತ್ಪಾದನಾ ಸೂಚ್ಯಂಕ'ವನ್ನು ಎಂಬ ಹೊಸ ಸ್ಥೂಲ ಆರ್ಥಿಕ ಸೂಚಕವನ್ನು ಪರಿಚಯಿಸಿದೆ. ಸೇವಾ ವಲಯದ ಉತ್ಪಾದನೆಯನ್ನು ಅಳೆಯಲು ಮೀಸಲಾಗಿರುವ ಭಾರತದ ಮೊದಲ ಉನ್ನತ-ಆವರ್ತನದ ಸೂಚಕ ಇದಾಗಿದೆ. ಇದು ನಿರ್ದಿಷ್ಟ ಆಧಾರ ವರ್ಷಕ್ಕೆ ಹೋಲಿಸಿದರೆ, ಸಂಘಟಿತ ಸೇವಾ ವಲಯವು ಉತ್ಪಾದಿಸುವ ಔಟ್‌ಪುಟ್‌ನ ಪ್ರಮಾಣದಲ್ಲಿನ ಅಲ್ಪಾವಧಿಯ ಬದಲಾವಣೆಗಳನ್ನು ಟ್ರ್ಯಾಕ್ ಮಾಡುತ್ತದೆ.

ಭಾರತದ ಆರ್ಥಿಕತೆಯಲ್ಲಿ ಸೇವಾ ವಲಯವು ಅತಿದೊಡ್ಡ ಪಾಲನ್ನು ಹೊಂದಿರುವುದರಿಂದ, ಐಎಸ್‌ಪಿ ಆರ್ಥಿಕ ಮೇಲ್ವಿಚಾರಣೆಯನ್ನು ಬಲಪಡಿಸುತ್ತದೆ, ರಾಷ್ಟ್ರೀಯ ಲೆಕ್ಕಪತ್ರಗಳ ಅಂದಾಜನ್ನು ಸುಧಾರಿಸುತ್ತದೆ ಮತ್ತು ಹೆಚ್ಚು ತಿಳುವಳಿಕೆಯುಳ್ಳ ನೀತಿ ನಿರ್ಧಾರಗಳಿಗೆ ಬೆಂಬಲ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಮೊದಲ ಬಿಡುಗಡೆ: ಸೇವಾ ವಲಯದ ಉತ್ಪಾದನಾ ಸೂಚ್ಯಂಕದ ಪ್ರಾಯೋಗಿಕ ಆವೃತ್ತಿ

ಸರ್ಕಾರವು ಏಪ್ರಿಲ್ 2026 ಕ್ಕೆ ಸಂಬಂಧಿಸಿದಂತೆ, ಸೇವಾ ವಲಯದ ಸುಮಾರು 60% ರಷ್ಟು ಭಾಗವನ್ನು ಒಳಗೊಂಡಿರುವ 19 ಉಪ-ವಲಯಗಳ ಮೊದಲ ಪ್ರಾಯೋಗಿಕ ಐಎಸ್‌ಪಿ ಅನ್ನು ಬಿಡುಗಡೆ ಮಾಡಿದೆ.

ಏಪ್ರಿಲ್ 2025ಕ್ಕೆ ಹೋಲಿಸಿದರೆ, ಏಪ್ರಿಲ್ 2026ರಲ್ಲಿ 19 ಉಪ-ವಲಯಗಳ ಪೈಕಿ 14 ಉಪ-ವಲಯಗಳು ಎರಡಂಕಿಯ ಬೆಳವಣಿಗೆಯನ್ನು ದಾಖಲಿಸಿವೆ.

ಬಲವಾದ ಮಾಸಿಕ ಬೆಳವಣಿಗೆಯನ್ನು ದಾಖಲಿಸಿದ ಅಗ್ರ 5 ಉಪ-ವಲಯಗಳೆಂದರೆ: ವಸತಿ ಮತ್ತು ಆಹಾರ (37.2%), ಚಿಲ್ಲರೆ ವ್ಯಾಪಾರ (30.8%), ಆಡಳಿತಾತ್ಮಕ ಮತ್ತು ಬೆಂಬಲ ಸೇವೆಗಳು (28.7%), ರಿಯಲ್ ಎಸ್ಟೇಟ್ (27.7%) ಮತ್ತು ದೂರಸಂಪರ್ಕ (22.8%).

2025-26ನೇ ಸಾಲಿನ ವಾರ್ಷಿಕವಾಗಿ ಅಗ್ರ 5 ಉಪ-ವಲಯಗಳೆಂದರೆ: ವಸತಿ ಮತ್ತು ಆಹಾರ (35.6%), ಚಿಲ್ಲರೆ ವ್ಯಾಪಾರ (30.5%), ದುರಸ್ತಿ ಸೇವೆಗಳು (25.1%), ಸಗಟು ವ್ಯಾಪಾರ (23.6%) ಮತ್ತು ರಸ್ತೆ ಸಾರಿಗೆ (22.6%).

ಸೂಚ್ಯಂಕದ ಪ್ರಮುಖ ಲಕ್ಷಣಗಳು

ಐಎಸ್‌ಪಿ ಪರಿಚಯದೊಂದಿಗೆ, ಭಾರತವು ಜಾಗತಿಕ ಗುಣಮಟ್ಟಕ್ಕೆ ಅನುಗುಣವಾಗಿ ತನ್ನ ಸಾಂಖ್ಯಿಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದೆ. ಈ ಸೂಚ್ಯಂಕದ ಕೆಲವು ಪ್ರಮುಖ ಲಕ್ಷಣಗಳು ಇಲ್ಲಿವೆ:

  • ಐಎಸ್‌ಪಿಯ ಆಧಾರ ವರ್ಷವನ್ನು 2024-25 ಎಂದು ಆಯ್ಕೆ ಮಾಡಲಾಗಿದೆ. ಇದು 2024-ಆಧಾರಿತ ಹೊಸ ಗ್ರಾಹಕ ಬೆಲೆ ಸೂಚ್ಯಂಕ ಸರಣಿಯನ್ನು ಬಳಸುವ ಇತರ ಉಪ-ವಲಯಗಳೊಂದಿಗೆ ಸಮರ್ಪಕವಾಗಿ ಹೊಂದಿಕೆಯಾಗುತ್ತದೆ.
  • ಐಎಸ್‌ಪಿಯ ಪ್ರಮುಖ ಬಳಕೆದಾರರಲ್ಲಿ ರಾಷ್ಟ್ರೀಯ ಲೆಕ್ಕಪತ್ರ ವಿಭಾಗಗಳು, ಆರ್ಥಿಕ ಸಚಿವಾಲಯಗಳು ಮತ್ತು ಇಲಾಖೆಗಳು, ಸಂಶೋಧಕರು ಮತ್ತು ವಿಷಯ ತಜ್ಞರು ಸೇರಿದ್ದಾರೆ.
  • ನಿಯಮಿತ ಮಾಸಿಕ ಪ್ರಾಯೋಗಿಕ ಸೂಚ್ಯಂಕಗಳನ್ನು ಸುಮಾರು 60 ದಿನಗಳ ವಿಳಂಬದೊಂದಿಗೆ ಬಿಡುಗಡೆ ಮಾಡಲಾಗುತ್ತದೆ. ದತ್ತಾಂಶವು ಪ್ರತಿ ತಿಂಗಳ 29 ರಂದು ಲಭ್ಯವಿರುತ್ತದೆ; ಒಂದು ವೇಳೆ 29 ರಂದು ರಜಾದಿನವಾಗಿದ್ದರೆ, ಅದರ ಮರುದಿನದ ಕೆಲಸದ ದಿನದಂದು ದತ್ತಾಂಶ ಲಭ್ಯವಾಗಲಿದೆ.
  • ಪ್ರಸ್ತುತ, ಐಎಸ್‌ಪಿ ಸಂಕಲನಕ್ಕಾಗಿ ವಿವಿಧ ಬೆಲೆ ಡಿಫ್ಲೇಟರ್‌ಗಳನ್ನು ಬಳಸಲಾಗುತ್ತಿದೆ: 
  • ಸಗಟು ವ್ಯಾಪಾರಕ್ಕಾಗಿ ಸಗಟು ಬೆಲೆ ಸೂಚ್ಯಂಕವನ್ನು ಬಳಸಲಾಗುತ್ತದೆ.
  • ಇತರ ಹೆಚ್ಚಿನ ವಲಯಗಳಿಗೆ, ಸಂಬಂಧಿತ ಗ್ರಾಹಕ ಬೆಲೆ ಸೂಚ್ಯಂಕ ಅಥವಾ ಅದಕ್ಕೆ ಹತ್ತಿರವಾಗಿ ಹೊಂದಿಕೆಯಾಗುವ CPI ಅನ್ನು ಬಳಸಲಾಗುತ್ತದೆ.
  • ದುರಸ್ತಿ ಮತ್ತು ನಿರ್ವಹಣೆ, ಬ್ಯಾಂಕಿಂಗ್ ಮತ್ತು ವಿಮೆಗಾಗಿ 'CPI-General' ಅನ್ನು ಅನ್ವಯಿಸಲಾಗುತ್ತದೆ.
  • ನಿರ್ದಿಷ್ಟ ಸಿಪಿಐ ಲಭ್ಯವಿಲ್ಲದ ವಲಯಗಳಿಗೆ 'ಸಿಪಿಐ ಸೇವೆಗಳನ್ನʼ ಅನ್ನು ಬಳಸಲಾಗುತ್ತದೆ.

ಡಿಫ್ಲೇಟರ್‌ನ ಅವಶ್ಯಕತೆ

ಐಎಸ್‌ಪಿ ಸೇವೆಯ ಉತ್ಪಾದನೆಯ ಪ್ರಮಾಣದಲ್ಲಿನ ಅಲ್ಪಾವಧಿಯ ಬದಲಾವಣೆಗಳನ್ನು ಟ್ರ್ಯಾಕ್ ಮಾಡುತ್ತದೆ. ಪ್ರಾಥಮಿಕ ಸೇವಾ ದತ್ತಾಂಶವನ್ನು ಸಾಮಾನ್ಯವಾಗಿ ಮೌಲ್ಯದ ಆಧಾರದಲ್ಲಿ ಸಂಗ್ರಹಿಸಲಾಗುವುದರಿಂದ, ಇದು ಬೆಲೆಗಳು ಮತ್ತು ಮೌಲ್ಯವರ್ಧನೆ ಎರಡರ ಪರಿಣಾಮಗಳನ್ನು ಒಳಗೊಂಡಿರುತ್ತದೆ. ಆದ್ದರಿಂದ, ನಾಮಮಾತ್ರದ ಸೇವಾ ಆದಾಯದಿಂದ ಬೆಲೆ ಬದಲಾವಣೆಯ ಪರಿಣಾಮಗಳನ್ನು ತೆಗೆದುಹಾಕಲು ಬೆಲೆ ಡಿಫ್ಲೇಟರ್‌ ಅವಶ್ಯಕವಾಗಿದೆ.

ಒಂದು ಬೆಲೆ ಡಿಫ್ಲೇಟರ್ "ಮೌಲ್ಯ-ಆಧಾರಿತ" (ನಾಮಮಾತ್ರದ) ದತ್ತಾಂಶವನ್ನು "ಪ್ರಮಾಣ-ಆಧಾರಿತ" (ವಾಸ್ತವಿಕ) ದತ್ತಾಂಶವಾಗಿ ಪರಿವರ್ತಿಸುತ್ತದೆ, ಇದು ಕಾಲಾನಂತರದಲ್ಲಿನ ನಿಜವಾದ ಬದಲಾವಣೆಗಳ ನಿಖರವಾದ ಅಳತೆಯನ್ನು ಒದಗಿಸುತ್ತದೆ.

ಭಾರತದ ಐಎಸ್‌ಪಿ ಚೌಕಟ್ಟಿನ ನಿರ್ಮಾಣ

ಐಎಸ್‌ಪಿಯ ಪರಿಕಲ್ಪನಾತ್ಮಕ ಮತ್ತು ಕ್ರಮಬದ್ಧವಾದ ಚೌಕಟ್ಟನ್ನು ಅಭಿವೃದ್ಧಿಪಡಿಸಲು, ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ಮೇ 2025ರಲ್ಲಿ ತಾಂತ್ರಿಕ ಸಲಹಾ ಸಮಿತಿಯನ್ನು ರಚಿಸಿತು. ಈ ಸಮಿತಿಯು ಶಿಕ್ಷಣ ತಜ್ಞರು, ಕೈಗಾರಿಕಾ ಸಂಘಗಳು ಹಾಗೂ ಸೇವಾ ವಲಯವನ್ನು ಪ್ರತಿನಿಧಿಸುವ ಸಚಿವಾಲಯಗಳು ಮತ್ತು ಇಲಾಖೆಗಳ ತಜ್ಞರನ್ನು ಒಳಗೊಂಡಿತ್ತು. ಪ್ರಸ್ತಾವಿತ ಚೌಕಟ್ಟನ್ನು ಅಂತರರಾಷ್ಟ್ರೀಯ ಉತ್ತಮ ಅಭ್ಯಾಸಗಳನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸಲಾಗಿದೆ.

ಐಎಸ್‌ಪಿ ಸಂಕಲನದ ಕುರಿತಾದ ಸಮಗ್ರ ಮಾರ್ಗಸೂಚಿಗಳಲ್ಲಿ 'ಒಇಸಿಡಿ ಕಂಪಿಲೇಷನ್ ಮ್ಯಾನುವಲ್ ಫಾರ್ ಇಂಡೆಕ್ಸ್ ಆಫ್ ಸರ್ವಿಸಸ್ ಪ್ರೊಡಕ್ಷನ್ (2007)' ಅತ್ಯಂತ ಪ್ರಮುಖವಾದುದು. ಐಎಸ್‌ಪಿಗಾಗಿ ಯುರೋಪಿಯನ್ ಒಕ್ಕೂಟದ ಸಾಂಖ್ಯಿಕ ಕಚೇರಿಯಾದ 'ಯೂರೋಸ್ಟಾಟ್' ಮತ್ತೊಂದು ಪ್ರಮುಖ ಜಾಗತಿಕ ಮಾರ್ಗದರ್ಶಿಯಾಗಿದೆ.

ಗಮನಾರ್ಹವಾಗಿ, ಫ್ರಾನ್ಸ್, ಸ್ಪೇನ್ ಮತ್ತು ಸ್ಲೊವೇನಿಯಾದಂತಹ ಹಲವು ಮುಂದುವರಿದ ಆರ್ಥಿಕತೆಗಳು ನಿಯಮಿತವಾಗಿ ಐಎಸ್‌ಪಿ ಅಥವಾ ಅದಕ್ಕೆ ಸಮಾನವಾದ ಸೂಚಕಗಳನ್ನು ಪ್ರಕಟಿಸುತ್ತವೆ. ಯುರೋಪಿಯನ್ ಒಕ್ಕೂಟದ ಹೊರತಾಗಿ, ದಕ್ಷಿಣ ಕೊರಿಯಾವು ಮಾಸಿಕ 'ಸೇವಾ ಉದ್ಯಮ ಚಟುವಟಿಕೆ ಸೂಚ್ಯಂಕ'ವನ್ನು ಪ್ರಕಟಿಸಿದರೆ, ಯುನೈಟೆಡ್ ಕಿಂಗ್‌ಡಮ್ ಸಮಗ್ರವಾದ 'ಮಾಸಿಕ ಸೇವಾ ಸೂಚ್ಯಂಕ'ವನ್ನು ಸಂಕಲಿಸುತ್ತದೆ.

ಸೇವಾ ವಲಯದ ಉತ್ಪಾದನಾ ಸೂಚ್ಯಂಕದ ವಲಯವಾರು ವ್ಯಾಪ್ತಿ

ಐಎಸ್‌ಪಿ ಆರಂಭದಲ್ಲಿ ವಿಶ್ವಾಸಾರ್ಹ ಮತ್ತು ಉನ್ನತ-ಆವರ್ತನದ ದತ್ತಾಂಶ ಲಭ್ಯವಿರುವ ಸೇವಾ ಉಪ-ವಲಯಗಳನ್ನು ಒಳಗೊಂಡಿದೆ.

ಐಎಸ್‌ಪಿಯಿಂದ ಹೊರಗಿಡಲಾದ ಸೇವಾ ಉಪ-ವಲಯಗಳು ಯಾವುವೆಂದರೆ: ಸಾರ್ವಜನಿಕ ಆಡಳಿತ ಮತ್ತು ರಕ್ಷಣೆ, ಬ್ಯಾಂಕಿಂಗ್ ಮತ್ತು ವಿಮೆ ಹೊರತುಪಡಿಸಿದ ಹಣಕಾಸು ಸೇವೆಗಳು (ಉದಾಹರಣೆಗೆ: ಕೇಂದ್ರ ಬ್ಯಾಂಕ್‌ನ ಚಟುವಟಿಕೆಗಳು, ಮನಿ ಮಾರ್ಕೆಟ್ ಫಂಡ್‌ಗಳು), ವಸತಿ ಸೌಕರ್ಯವಿಲ್ಲದ ಸಮಾಜ ಸೇವಾ ಚಟುವಟಿಕೆಗಳು, ಸದಸ್ಯತ್ವ ಸಂಸ್ಥೆಗಳ ಸೇವೆಗಳು, ವೈಯಕ್ತಿಕ ಸೇವೆಗಳು, ಉದ್ಯೋಗಿಗಳನ್ನು ಹೊಂದಿರುವ ಖಾಸಗಿ ಮನೆಗಳ ಚಟುವಟಿಕೆಗಳು, ಬಾಹ್ಯ ಪ್ರಾದೇಶಿಕ ಸಂಸ್ಥೆಗಳ ಚಟುವಟಿಕೆಗಳು, ಸರ್ಕಾರದಿಂದ ಒದಗಿಸಲ್ಪಡುವ ಆರೋಗ್ಯ ಮತ್ತು ಶಿಕ್ಷಣ ಸೇವೆಗಳು ಹಾಗೂ ಜೂಜಾಟ ಮತ್ತು ಬೆಟ್ಟಿಂಗ್ ಚಟುವಟಿಕೆಗಳು.

ಈ ವಲಯಗಳು ಒಂದೋ ಸರ್ಕಾರದ ಪ್ರಮುಖ ಚಟುವಟಿಕೆಗಳಿಗೆ ಸಂಬಂಧಿಸಿವೆ ಅಥವಾ ಮಾರುಕಟ್ಟೇತರ ಚಟುವಟಿಕೆಗಳು ಮತ್ತು ಅಸಂಘಟಿತ ವಲಯದಿಂದ ಪ್ರಾಬಲ್ಯ ಹೊಂದಿವೆ.

ಐಎಸ್‌ಪಿಗೆ  ಚಲನೆ ನೀಡುವ ದತ್ತಾಂಶ ಪರಿಸರ ವ್ಯವಸ್ಥೆ

  • ಐಎಸ್‌ಪಿಯನ್ನು ಸಂಕಲಿಸಲು ಮೂರು ಮುಖ್ಯ ದತ್ತಾಂಶ ಮೂಲಗಳನ್ನು ಬಳಸಲಾಗುತ್ತದೆ: ಆಡಳಿತಾತ್ಮಕ ದತ್ತಾಂಶ, ಜಿಎಸ್‌ಟಿ ಮತ್ತು ಎಎಸ್‌ಐಎಸ್ಎಸ್ಇ.
  • ವಾಯು ಸಾರಿಗೆ, ರೈಲ್ವೆ ಸಾರಿಗೆ, ಬ್ಯಾಂಕಿಂಗ್ ಮತ್ತು ವಿಮಾ ವಲಯದ ಐಎಸ್‌ಪಿಗಾಗಿ ಆಡಳಿತಾತ್ಮಕ/ದ್ವಿತೀಯ ದತ್ತಾಂಶವನ್ನು ಬಳಸಲಾಗುತ್ತದೆ.
  • ಆರೋಗ್ಯ ಮತ್ತು ಶಿಕ್ಷಣ ವಲಯಗಳಿಗೆ (ಸರ್ಕಾರಿ ವಲಯವನ್ನು ಹೊರತುಪಡಿಸಿ) ಎಎಸ್‌ಐಎಸ್ಎಸ್ಇ (ASISSE) ದತ್ತಾಂಶವನ್ನು ಬಳಸಲಾಗುತ್ತದೆ (ಇದು ಲಭ್ಯವಾದ ತಕ್ಷಣ). ಏಪ್ರಿಲ್ 2026ರಲ್ಲಿ ಪ್ರಾರಂಭಿಸಲಾದ ಈ ಸಮೀಕ್ಷೆಯು, ಸಂಘಟಿತ ಸೇವಾ ವಲಯದ ಸಮಗ್ರ ದತ್ತಾಂಶವನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ.

ನಿಮಗೆ ಗೊತ್ತೇ?

ಅಂಕಿಅಂಶಗಳ ಅನ್ವಯಗಳಲ್ಲಿ ಜಿಎಸ್‌ಟಿ ದತ್ತಾಂಶವನ್ನು ಇದೇ ಮೊದಲ ಬಾರಿಗೆ ಬಳಸಲಾಗುತ್ತಿದೆ.

ಜಿಎಸ್‌ಟಿ ದತ್ತಾಂಶವನ್ನು ಸಗಟು ವ್ಯಾಪಾರ, ಚಿಲ್ಲರೆ ವ್ಯಾಪಾರ, ದುರಸ್ತಿ ಮತ್ತು ನಿರ್ವಹಣೆ, ವಸತಿ ಮತ್ತು ಆಹಾರ, ರಸ್ತೆ ಸಾರಿಗೆ, ಜಲ ಸಾರಿಗೆ, ಗೋದಾಮು ಮತ್ತು ಸಾರಿಗೆ ಬೆಂಬಲ ಚಟುವಟಿಕೆಗಳು, ಅಂಚೆ ಮತ್ತು ಕೊರಿಯರ್, ದೂರಸಂಪರ್ಕ, ಮಾಹಿತಿ ಮತ್ತು ಪ್ರಸಾರ, ರಿಯಲ್ ಎಸ್ಟೇಟ್, ಮಾಹಿತಿ ಮತ್ತು ಕಂಪ್ಯೂಟರ್ ಸಂಬಂಧಿತ ಸೇವೆಗಳು, ಸಂಶೋಧನೆ ಮತ್ತು ಅಭಿವೃದ್ಧಿ ಸೇರಿದಂತೆ ವೃತ್ತಿಪರ, ವೈಜ್ಞಾನಿಕ ಮತ್ತು ತಾಂತ್ರಿಕ ಸೇವೆಗಳು, ಆಡಳಿತಾತ್ಮಕ ಮತ್ತು ಬೆಂಬಲ ಸೇವೆಗಳು ಹಾಗೂ ಕಲೆ, ಮನರಂಜನೆ ಮತ್ತು ವಿರಾಮ ಮುಂತಾದವುಗಳಿಗೆ ಬಳಸಲಾಗುತ್ತದೆ.

ಐಎಸ್‌ಪಿ ಏಕೆ ಮುಖ್ಯ?

ಕಳೆದ ಕೆಲವು ದಶಕಗಳಲ್ಲಿ ಭಾರತದ ಆರ್ಥಿಕತೆಯು ಗಮನಾರ್ಹ ರಚನಾತ್ಮಕ ಬದಲಾವಣೆಗಳಿಗೆ ಒಳಗಾಗಿದೆ. ಇದು ಆರ್ಥಿಕ ಸುಧಾರಣೆಗಳು, ತಾಂತ್ರಿಕ ಪ್ರಗತಿ ಮತ್ತು ಜಾಗತಿಕ ಮಾರುಕಟ್ಟೆಗಳೊಂದಿಗಿನ ಹೆಚ್ಚುತ್ತಿರುವ ಏಕೀಕರಣದಿಂದ ಚಾಲನೆಗೊಂಡಿದೆ. ಸೇವಾ ವಲಯವು ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಯ ಪ್ರಮುಖ ಚಾಲಕವಾಗಿದೆ.

  • ಇದು ಭಾರತದ ಜಿಡಿಪಿಗೆ ಅತಿದೊಡ್ಡ ಕೊಡುಗೆ ನೀಡುವ ವಲಯವಾಗಿದ್ದು, 2013-14ರಿಂದ ಒಟ್ಟು ಮೌಲ್ಯವರ್ಧನೆಯಲ್ಲಿ  50% ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತಿದೆ. 2024-25ರಲ್ಲಿ, ಸೇವಾ ವಲಯದ ಜಿವಿಎ ಪಾಲು ಸುಮಾರು 52.9% ರಷ್ಟಿತ್ತು.
  • ಈ ವಲಯವು ಭಾರತದಾದ್ಯಂತ ಒಟ್ಟು ಉದ್ಯೋಗದ ~30% ಪಾಲನ್ನು ಹೊಂದಿದೆ ಮತ್ತು ಕಳೆದ ಆರು ವರ್ಷಗಳಲ್ಲಿ ಸುಮಾರು 40 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸಿದೆ.
  • 2026-27ರ ಆರ್ಥಿಕ ವರ್ಷದಲ್ಲಿ ಭಾರತದ ಸೇವಾ ರಫ್ತು ಬಲವಾದ ವೇಗವನ್ನು ಕಾಯ್ದುಕೊಂಡಿದೆ. ಏಪ್ರಿಲ್-ಜೂನ್ 2026-27 ಅವಧಿಯಲ್ಲಿ, ಸೇವಾ ರಫ್ತುಗಳು 103.41 ಬಿಲಿಯನ್ ಯುಎಸ್‌ ಡಾಲರ್ ಎಂದು ಅಂದಾಜಿಸಲಾಗಿದೆ, ಇದು ವರ್ಷದಿಂದ ವರ್ಷಕ್ಕೆ (Y-o-Y) 6.16% ಬೆಳವಣಿಗೆಯನ್ನು ದಾಖಲಿಸಿದೆ.
  • 2047ರ ವೇಳೆಗೆ ಜಾಗತಿಕ ಸೇವಾ ವಲಯದಲ್ಲಿ 10% ಪಾಲನ್ನು ಹೊಂದುವ ಗುರಿಯೊಂದಿಗೆ, ಭಾರತವನ್ನು ಸೇವೆಗಳ ಜಾಗತಿಕ ನಾಯಕರನ್ನಾಗಿ ರೂಪಿಸಲು ಸರ್ಕಾರವು ಉದ್ದೇಶಿಸಿದೆ.

ಸೇವಾ ವಲಯವು ಭಾರತದ ಬೆಳವಣಿಗೆಗೆ ಕೇಂದ್ರಬಿಂದುವಾಗಿರುವುದರಿಂದ, ಅದರ ಕಾರ್ಯಕ್ಷಮತೆಯನ್ನು ಟ್ರ್ಯಾಕ್ ಮಾಡಲು ಮೀಸಲಾದ ಅಲ್ಪಾವಧಿಯ ಸೂಚಕವು ಅತ್ಯಗತ್ಯವಾಗಿದೆ. ಕೈಗಾರಿಕಾ ಉತ್ಪಾದನಾ ಸೂಚ್ಯಂಕವು ಕೇವಲ ಕೈಗಾರಿಕಾ ಚಟುವಟಿಕೆಯನ್ನು ಮಾತ್ರ ಅಳೆಯುತ್ತದೆ ಮತ್ತು ಸೇವಾ ವಲಯದ ಅಲ್ಪಾವಧಿಯ ಪ್ರವೃತ್ತಿಗಳನ್ನು ಸೆರೆಹಿಡಿಯುವುದಿಲ್ಲ. ಈ ಕೊರತೆಯನ್ನು ನೀಗಿಸಲು, ಸರ್ಕಾರವು ಐಎಸ್‌ಪಿಯನ್ನು ಪರಿಚಯಿಸಿದೆ.

ಭಾರತದ ಆರ್ಥಿಕ ಮಾಪನದಲ್ಲಿ ಒಂದು ಹೊಸ ಮೈಲಿಗಲ್ಲು

ಐಎಸ್‌ಪಿಯ ಪ್ರಾರಂಭವು ವೇಗವಾಗಿ ವಿಕಸನಗೊಳ್ಳುತ್ತಿರುವ ಆರ್ಥಿಕತೆಗೆ ಅನುಗುಣವಾಗಿ ತನ್ನ ಸಾಂಖ್ಯಿಕ ಚೌಕಟ್ಟನ್ನು ಆಧುನೀಕರಿಸುವ ಭಾರತದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಉನ್ನತ-ಆವರ್ತನದ ದತ್ತಾಂಶ ಮತ್ತು ದೃಢವಾದ ವಿಧಾನವನ್ನು ಒಟ್ಟುಗೂಡಿಸುವ ಮೂಲಕ, ಐಎಸ್‌ಪಿ ಭಾರತದ ಅತಿದೊಡ್ಡ ಆರ್ಥಿಕ ವಲಯದ ಕುರಿತು ಸಕಾಲಿಕ ಒಳನೋಟಗಳನ್ನು ನೀಡುತ್ತದೆ. ಮಾಸಿಕ ಸೂಚಕವಾಗಿ, ಇದು ಆರ್ಥಿಕ ಮೇಲ್ವಿಚಾರಣೆಯನ್ನು ಬಲಪಡಿಸುತ್ತದೆ, ನೀತಿ ನಿರ್ಧಾರಗಳನ್ನು ಸುಧಾರಿಸುತ್ತದೆ ಮತ್ತು ಭಾರತದ ಬೆಳವಣಿಗೆಯ ಹಾದಿಯ ತಿಳುವಳಿಕೆಯನ್ನು ಇನ್ನಷ್ಟು ಆಳವಾಗಿಸುತ್ತದೆ.

References

Ministry of Statistics & Programme Implementation

https://www.pib.gov.in/PressReleasePage.aspx?PRID=2284450&reg=48&lang=1

https://www.pib.gov.in/PressReleasePage.aspx?PRID=2277392&reg=3&lang=1

https://www.pib.gov.in/PressReleasePage.aspx?PRID=2255933&reg=3&lang=1

https://www.pib.gov.in/PressReleasePage.aspx?PRID=2269286&reg=48&lang=1

https://www.pib.gov.in/PressReleasePage.aspx?PRID=2249336&reg=3&lang=1

 

Ministry of Commerce & Industry

https://www.pib.gov.in/PressReleasePage.aspx?PRID=2284139&reg=3&lang=1

 

PIB Archives

https://www.pib.gov.in/PressNoteDetails.aspx?NoteId=157804&ModuleId=3&reg=48&lang=2

Click here to see pdf 

 

*****

 

 

(तथ्य सामग्री आईडी: 150778) आगंतुक पटल : 10


Provide suggestions / comments
इस विश्लेषक को इन भाषाओं में पढ़ें : English , हिन्दी , Urdu , Assamese , Bengali , Manipuri , Malayalam