57th International Film Festival of India 2026
20 – 28 Nov 2026

57ನೇ ಐಎಫ್‌ಎಫ್‌ಐಯಲ್ಲಿ ‘ಕಾಂತಾರ: ಎ ಲೆಜೆಂಡ್ - ಚಾಪ್ಟರ್ 1’ ಚಿತ್ರಕ್ಕಾಗಿ ಅತ್ಯುತ್ತಮ ನಟ (ಪುರುಷ) ವಿಭಾಗದಲ್ಲಿ ‘ಸಿಲ್ವರ್ ಪೀಕಾಕ್’ ಪ್ರಶಸ್ತಿಯನ್ನು ಗೆದ್ದುಕೊಂಡ ರಿಷಬ್ ಶೆಟ್ಟಿ


ಚಿತ್ರದಲ್ಲಿ ಅವರ ಸಂಪೂರ್ಣ ದೈಹಿಕ ಮತ್ತು ಭಾವನಾತ್ಮಕ ತಲ್ಲೀನತೆಯನ್ನು ಗುರುತಿಸಿದ ತೀರ್ಪುಗಾರರು, ಅವರ ಅಭಿನಯವನ್ನು 'ನಟನೆಯನ್ನೂ ಮೀರಿದ ಒಂದು ಅನುಭವ' ಎಂದು ಬಣ್ಣಿಸಿದ್ದಾರೆ

ಪ್ರಕಟಣಾ ದಿನಾಂಕ: 28 NOV 2026 8:29PMby PIB Bengaluruಪ್ರಕಟಣೆ ಐ.ಡಿ.: 2343331Views: 9

57ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಐಎಫ್‌ಎಫ್‌ಐ), ‘ಕಾಂತಾರ: ಎ ಲೆಜೆಂಡ್ - ಚಾಪ್ಟರ್ 1’ ಚಿತ್ರದಲ್ಲಿನ ಅಭಿನಯಕ್ಕಾಗಿ ನಟ ಹಾಗೂ ಚಲನಚಿತ್ರ ನಿರ್ಮಾಪಕ ರಿಷಬ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ (ಪುರುಷ) ವಿಭಾಗದಲ್ಲಿ ‘ಸಿಲ್ವರ್ ಪೀಕಾಕ್’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಗೋವಾ ಮುಖ್ಯಮಂತ್ರಿ ಶ್ರೀ ಪ್ರಮೋದ್ ಸಾವಂತ್ ಅವರು ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಚಂಚಲ್ ಕುಮಾರ್ ಹಾಗೂ ಐಎಫ್‌ಎಫ್‌ಐ ಉತ್ಸವ ನಿರ್ದೇಶಕ ಶ್ರೀ ಅಶುತೋಷ್ ಗೋವಾರಿಕರ್ ಉಪಸ್ಥಿತರಿದ್ದರು.

ರಿಷಬ್ ಶೆಟ್ಟಿ ಅವರ ಅಭಿನಯದ ಆಳ ಮತ್ತು ತೀವ್ರತೆಯನ್ನು ಗುರುತಿಸಿದ ಅಂತಾರಾಷ್ಟ್ರೀಯ ತೀರ್ಪುಗಾರರು, ಪ್ರೇಕ್ಷಕರನ್ನು ಭಾವನೆಗಳ ವೈವಿಧ್ಯಮಯ ಹಾಗೂ ಆಕರ್ಷಕ ಪಯಣಕ್ಕೆ ಕರೆದೊಯ್ಯುವ ಅವರ ಸಾಮರ್ಥ್ಯವನ್ನು ಶ್ಲಾಘಿಸಿದರು. ಕಥಾನಕದಲ್ಲಿ ಅವರ ಸಂಪೂರ್ಣ ದೈಹಿಕ ತಲ್ಲೀನತೆಯನ್ನು ಉಲ್ಲೇಖಿಸಿದ ತೀರ್ಪುಗಾರರು, "ಅವರು ನಗುತ್ತಾರೆ, ಅಳುತ್ತಾರೆ ಮತ್ತು ನಮ್ಮನ್ನು ಭಾವನೆಗಳ ಒಂದು ವಿಶಾಲ ಪಯಣಕ್ಕೆ ಕರೆದೊಯ್ಯುತ್ತಾರೆ. ಅವರ ಇಡೀ ದೇಹವು ಚಲನಚಿತ್ರದೊಂದಿಗೆ ಮಿಳಿತಗೊಂಡಿದೆ. ಅವರು ತಮ್ಮನ್ನು ಸಂಪೂರ್ಣವಾಗಿ ಕಥೆಯಲ್ಲಿ ತೊಡಗಿಸಿಕೊಂಡಿದ್ದಾರೆ. ರಿಷಬ್ ಶೆಟ್ಟಿ ಅವರ ಈ ಅದ್ಭುತ ಅಭಿನಯವು ಕೇವಲ ನಟನೆಯಾಗಿ ಉಳಿಯದೆ, ಒಂದು ಅನುಭವವಾಗಿ ಮಾರ್ಪಟ್ಟಿದೆ" ಎಂದು ಅಭಿಪ್ರಾಯಪಟ್ಟರು.

ಅತ್ಯುತ್ತಮ ನಟ (ಪುರುಷ) ವಿಭಾಗದ ‘ಸಿಲ್ವರ್ ಪೀಕಾಕ್’ ಪ್ರಶಸ್ತಿಯು ಚಲನಚಿತ್ರವೊಂದರಲ್ಲಿ ಪುರುಷ ನಟನ ಅತ್ಯುತ್ತಮ ಅಭಿನಯವನ್ನು ಗುರುತಿಸುತ್ತದೆ. ಈ ಪ್ರಶಸ್ತಿಯು ‘ಸಿಲ್ವರ್ ಪೀಕಾಕ್’ (ಬೆಳ್ಳಿಯ ನವಿಲು) ಸ್ಮರಣಿಕೆ, ಪ್ರಮಾಣಪತ್ರ ಮತ್ತು 15 ಲಕ್ಷ ರೂಪಾಯಿಗಳ ನಗದು ಬಹುಮಾನವನ್ನು ಒಳಗೊಂಡಿದೆ.

‘ಕಾಂತಾರ: ಎ ಲೆಜೆಂಡ್ - ಚಾಪ್ಟರ್ 1’ - ಕಥಾ ಸಾರಾಂಶ

ಕದಂಬರ ಕಾಲಘಟ್ಟದಲ್ಲಿ ನಡೆಯುವ ಈ ಚಿತ್ರವು, ‘ಕಾಂತಾರ’ ಎಂಬ ನಿಗೂಢ ಅರಣ್ಯದಲ್ಲಿ ನಡೆಯುವ ಘಟನೆಗಳನ್ನು ಆಧರಿಸಿದೆ. ಬಂಗ್ರಾದ ರಾಜ ವಿಜಯೇಂದ್ರನು ಕಾಡಿನೊಳಗೆ ಪ್ರವೇಶಿಸಿ ಮೃತಪಟ್ಟ ನಂತರ, ಅವನ ಉತ್ತರಾಧಿಕಾರಿಯಾದ ರಾಜಶೇಖರನು ರಾಜ್ಯದ ಗಡಿಗಳನ್ನು ಮುಚ್ಚುತ್ತಾನೆ. ವರ್ಷಗಳ ನಂತರ, ಅರಣ್ಯವಾಸಿ ಬೆರ್ಮೆ ನಿಷೇಧಿತ ಗಡಿಯನ್ನು ದಾಟಿ, ಆ ರಾಜ್ಯದ ದಬ್ಬಾಳಿಕೆಯನ್ನು ಕಂಡುಕೊಳ್ಳುತ್ತಾನೆ. ಕ್ರೂರಿ ರಾಜಕುಮಾರ ಕುಲಶೇಖರನು ಅರಣ್ಯ ಬುಡಕಟ್ಟು ಜನಾಂಗದವರ ಮೇಲೆ ದಾಳಿ ಮಾಡಿದಾಗ, ನ್ಯಾಯ ಮತ್ತು ಧರ್ಮಕ್ಕಾಗಿ ನಡೆಯುವ ಹೋರಾಟದಲ್ಲಿ ಬೆರ್ಮೆ ತನ್ನ ಜನರನ್ನು ಒಗ್ಗೂಡಿಸುತ್ತಾನೆ. ಈ ಸಂಘರ್ಷವು ಸಿದ್ಧಾಂತ, ನಂಬಿಕೆ ಮತ್ತು ವಿಧಿಯ ಮಹಾ ಹೋರಾಟವಾಗಿ ವಿಕಸನಗೊಂಡು, ಎರಡು ಜಗತ್ತುಗಳ ಅಂತಿಮ ಭವಿಷ್ಯವನ್ನು ನಿರ್ಧರಿಸುತ್ತದೆ.

Read IFFILOID here: https://www.pib.gov.in/iffi/57/iffiLoid.aspx?yr=2026&lang=1&reg=48

 

*****


Great films resonate through passionate voices. Share your love for cinema with #IFFI2026 and #StoriesWithoutBorders. Tag us @pibindia on Instagram and @PIB_India on X, and we will help amplify your festival moments!

For accredited journalists, critics, bloggers, and vloggers seeking 1-on-1 interviews with filmmakers and festival juries, write to us at:
iffi.mediadesk@pib.gov.in with the subject line: Take One with PIB.


Official Release ID: 2343331
•
Media Centre: Goa
•
Festival Dates: Nov 20 – 28, 2026