ಗೋವಾದಲ್ಲಿ ನಡೆಯುತ್ತಿರುವ 57ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಐಎಫ್‌ಎಫ್‌ಐ) ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ, ನಿರ್ದೇಶಕ ಮೌರೋ ಮುಲ್ಲರ್, ಬರಹಗಾರ ಜೋಸ್ ಡೇವಿಡ್ ಫಿಗ್ಯುರೋವಾ ಗಾರ್ಸಿಯಾ ಮತ್ತು ನಿರ್ಮಾಪಕಿ ಲೆಸ್ಲಿ ಹೊಲ್ಲೆರಾನ್ ಅವರು, ‘ಸಿನಿಮಾ ಆಫ್ ದಿ ವರ್ಲ್ಡ್’ ವಿಭಾಗದಲ್ಲಿ ಆಯ್ಕೆಯಾಗಿರುವ ತಮ್ಮ ದ್ವಿಭಾಷಾ ಚಿತ್ರ ‘ಎ ಫ್ಯೂ ಡೇಸ್ ಇನ್ ದಿ ಸನ್’ ಕುರಿತು ಮಾತನಾಡಿದರು. ಈ ಸಂವಾದವು ಚಿತ್ರದ ನಿರ್ಮಾಣ ಪ್ರಕ್ರಿಯೆ ಮತ್ತು ಅದರ ಸೃಜನಶೀಲ ದೃಷ್ಟಿಕೋನದ ಬಗ್ಗೆ ಆಳವಾದ ಒಳನೋಟಗಳನ್ನು ನೀಡಿತು.
ಮೆಕ್ಸಿಕೋದ ‘ರಿವೇರಿಯಾ ಮಾಯಾ’ ಪ್ರದೇಶದಲ್ಲಿ, ಶ್ರೀಮಂತ ಯುರೋಪಿಯನ್ ದಂಪತಿಯೊಂದು ಅಭಿವೃದ್ಧಿ ಯೋಜನೆಗಾಗಿ ಸ್ಥಳೀಯ ಸಮುದಾಯವೊಂದನ್ನು ಅವರ ನೆಲೆಯಿಂದ ಹೊರಹಾಕಲು ಅಕ್ರಮ ಮಾರ್ಗಗಳನ್ನು ಬಳಸುತ್ತದೆ. ಅದೇ ಸಮಯದಲ್ಲಿ, ಮೆಕ್ಸಿಕೋದ ಕಾರ್ಮಿಕ ವರ್ಗದ ಕುಟುಂಬವೊಂದು, ತಮ್ಮ ಮನೆಯ ಹದಿಹರೆಯದ ಹುಡುಗನನ್ನು ಜೈಲಿಗೆ ಹೋಗದಂತೆ ತಡೆಯಲು ಭ್ರಷ್ಟ ಪೊಲೀಸ್ ಅಧಿಕಾರಿಯೊಬ್ಬರೊಂದಿಗೆ ಅಪಾಯಕಾರಿ ಒಪ್ಪಂದವೊಂದನ್ನು ಮಾಡಿಕೊಳ್ಳುತ್ತದೆ. ಈ ಎರಡು ಕುಟುಂಬಗಳ ಹಾದಿಗಳು ಒಂದಕ್ಕೊಂದು ಸಂಧಿಸಿದಾಗ, ಅವರು ಹಿಂಸಾತ್ಮಕ ಅಪಹರಣ ಪ್ರಕರಣವೊಂದರಲ್ಲಿ ಸಿಲುಕಿಕೊಳ್ಳುತ್ತಾರೆ; ಪರಿಸ್ಥಿತಿ ಕೈಮೀರಿ ಹೋಗುತ್ತದೆ. ಕಠಿಣ ಭೌಗೋಳಿಕ ಪರಿಸರದಲ್ಲಿ ಸಿಲುಕಿಕೊಂಡ ಅವರು, ತಮ್ಮ ಕೃತ್ಯಗಳ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಈ ಪ್ರಕ್ರಿಯೆಯಲ್ಲಿ, ಸವಲತ್ತುಳ್ಳವರು ಮತ್ತು ಬದುಕುಳಿಯಲು ಹೋರಾಡುವವರು ತಾವು ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚು ಹತ್ತಿರವಾಗಬಲ್ಲರು ಎಂಬುದನ್ನು ಅವರು ಕಂಡುಕೊಳ್ಳುತ್ತಾರೆ.

ಈ ಚಿತ್ರವು ಮೆಕ್ಸಿಕೋ, ಡೊಮಿನಿಕನ್ ರಿಪಬ್ಲಿಕ್, ಜರ್ಮನಿ, ಅಮೆರಿಕ ಮತ್ತು ಸ್ವಿಟ್ಜರ್ಲೆಂಡ್ ಎಂಬ ಐದು ದೇಶಗಳ ಸಹಯೋಗದಲ್ಲಿ ನಿರ್ಮಾಣಗೊಂಡಿದೆ ಹಾಗೂ ಇದು ಇಂಗ್ಲಿಷ್ ಮತ್ತು ಸ್ಪ್ಯಾನಿಷ್ ಭಾಷೆಗಳಲ್ಲಿದೆ. ಇದರ ಮೂಲದಲ್ಲಿ ಒಂದು ಸರಳ ಕಲ್ಪನೆಯಿದೆ: ಒಬ್ಬರಿಗೆ ರಜಾದಿನವಾಗಿರುವುದು, ಇನ್ನೊಬ್ಬರಿಗೆ ಅವರ ನೆಲೆ ಮತ್ತು ದೈನಂದಿನ ಬದುಕಾಗಿರುತ್ತದೆ. ಈ ಎರಡು ಭಿನ್ನ ಜಗತ್ತುಗಳು ಮುಖಾಮುಖಿಯಾದಾಗ ಏನಾಗುತ್ತದೆ?
ತಮ್ಮ ಸ್ವಂತ ಜೀವನದ ಅನುಭವಗಳು ಈ ಕಥೆಯನ್ನು ಮತ್ತು ಅದರ ದೃಷ್ಟಿಕೋನವನ್ನು ರೂಪಿಸುವಲ್ಲಿ ಹೇಗೆ ಪ್ರಭಾವ ಬೀರಿವೆ ಎಂಬುದರ ಕುರಿತು ಮುಲ್ಲರ್ ವಿವರಿಸಿದರು. ಸ್ವಿಟ್ಜರ್ಲೆಂಡ್‌ನಲ್ಲಿ ಬೆಳೆದ ಅವರು, ಮೆಕ್ಸಿಕೋ ಮತ್ತು ಅಮೆರಿಕದಲ್ಲೂ ವಾಸಿಸಿದ್ದಾರೆ. ಬೇರೆ ಬೇರೆ ದೇಶಗಳಿಗೆ ಪ್ರಯಾಣಿಸುವುದು ಮತ್ತು ಅಲ್ಲಿ ವಾಸಿಸುವುದು ಸಹಾನುಭೂತಿಯನ್ನು ಬೆಳೆಸಿಕೊಳ್ಳಲು ಅತ್ಯಗತ್ಯ ಎಂದು ಅವರು ನಂಬುತ್ತಾರೆ. ಜೀವನ ನಡೆಸಲು ಒಂದೇ ನಿರ್ದಿಷ್ಟ ಮಾರ್ಗವಿಲ್ಲ ಎಂಬುದನ್ನು ಮತ್ತು ಯಾವುದೇ ಜೀವನಶೈಲಿಯು ಇನ್ನೊಂದಕ್ಕಿಂತ ಉತ್ತಮ ಅಥವಾ ಕಳಪೆಯಲ್ಲ ಎಂಬುದನ್ನು ಅರಿಯಲು ಇದು ಸಹಾಯ ಮಾಡುತ್ತದೆ. ಭಾಷೆಗಳನ್ನು ಕಲಿಯುವುದು ಮತ್ತು ಪ್ರಯಾಣಿಸುವುದು, ಜನರು ಏಕೆ ವಿಭಿನ್ನ ಆಯ್ಕೆಗಳನ್ನು ಮಾಡುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಹಾಗೂ ಅವರ ಸುತ್ತಲಿರುವ ವ್ಯವಸ್ಥೆಗಳು ಮತ್ತು ಸಂಸ್ಥೆಗಳು ಆ ಆಯ್ಕೆಗಳ ಪರಿಣಾಮಗಳನ್ನು ಹೇಗೆ ರೂಪಿಸುತ್ತವೆ ಎಂಬುದನ್ನು ಗುರುತಿಸಲು ನೆರವಾಗುತ್ತದೆ ಎಂದು ಅವರು ಹೇಳಿದರು.
ಮುಲ್ಲರ್‌ಗೆ ಐಎಫ್‌ಎಫ್‌ಐ ಹೊಸದೇನಲ್ಲ. ಅವರ ಹಿಂದಿನ ಚಲನಚಿತ್ರ 'ದಿ ಜ್ಯಾನಿಟರ್', 2025ರ ನವೆಂಬರ್‌ನಲ್ಲಿ ಗೋವಾದಲ್ಲಿ ನಡೆದ 56ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಐಎಫ್‌ಎಫ್‌ಐ) ಜಾಗತಿಕ ಪ್ರಥಮ ಪ್ರದರ್ಶನವನ್ನು ಕಂಡಿತು.
ಗಾರ್ಸಿಯಾ ಅವರು ಸಂಸ್ಕೃತಿಗಳು ಮತ್ತು ಸಾಮಾಜಿಕ ವರ್ಗಗಳ ನಡುವಿನ ಸಂಘರ್ಷದ ಬಗ್ಗೆ ಹೇಳಿದರು; ಈ ವೈರುಧ್ಯವನ್ನು ಚಲನಚಿತ್ರವು ಬಹಳ ಸ್ಪಷ್ಟವಾಗಿ ಹೊರತರುತ್ತದೆ. ಒಂದೇ ರೀತಿಯ ನಿರ್ಧಾರಗಳನ್ನು ತೆಗೆದುಕೊಂಡಾಗ, ಶ್ರೀಮಂತ ಯುರೋಪಿಯನ್ ಪಾತ್ರಗಳು ಎದುರಿಸದ ಪರಿಣಾಮಗಳನ್ನು, ಕಾರ್ಮಿಕ ವರ್ಗದ ದಂಪತಿಗಳು ಎದುರಿಸಬೇಕಾಗುತ್ತದೆ ಮತ್ತು ಅವರ ಜೀವನವು ಸಂಪೂರ್ಣವಾಗಿ ಬದಲಾಗಿಬಿಡುತ್ತದೆ ಎಂದು ಅವರು ವಿವರಿಸಿದರು. ಇದನ್ನು ಅನುಮೋದಿಸಿದ ಹೊಲ್ಲರಾನ್, ಬಡ ವ್ಯಕ್ತಿಯ ಪಾಲಿಗೆ ಒಂದು ಸಣ್ಣ ತಪ್ಪು ಕೂಡ ಎಲ್ಲವನ್ನೂ ನಾಶಪಡಿಸಬಲ್ಲದು ಎಂದು ಹೇಳಿದರು. ಈ ಚಿತ್ರದಲ್ಲಿ, ಒತ್ತೆಯಾಳುಗಳನ್ನು ಇರಿಸಿಕೊಂಡವರು ಮತ್ತು ಸ್ವತಃ ಒತ್ತೆಯಾಳುಗಳು - ಹೀಗೆ ಎಲ್ಲರೂ ಒಂದು ರೀತಿಯಲ್ಲಿ ತಮ್ಮದೇ ಆದ ಪರಿಸ್ಥಿತಿಗಳ ಸೆರೆಯಲ್ಲಿ ಸಿಲುಕಿಕೊಂಡಿದ್ದಾರೆ.

ಸಮಾಜದ ಪ್ರತಿಯೊಂದು ಹಂತದಲ್ಲೂ ಭ್ರಷ್ಟಾಚಾರ ಹೇಗೆ ಹಾಸುಹೊಕ್ಕಾಗಿದೆ ಎಂಬುದನ್ನೂ ಗಾರ್ಸಿಯಾ ವಿವರಿಸಿದರು. ಕೆಳಸ್ತರದಲ್ಲಿ ಇದು ಲಂಚದಂತಹ ನೇರ ಸ್ವರೂಪವನ್ನು ಪಡೆದರೆ, ಶ್ರೀಮಂತ ದಂಪತಿಗಳು ಒಂದು ಸಮುದಾಯವನ್ನು ಕಾನೂನುಬಾಹಿರವಾಗಿ ಜಮೀನಿನಿಂದ ಹೊರಹಾಕಲು ಪ್ರಯತ್ನಿಸುವುದು, ಅಧಿಕಾರ ಮತ್ತು ರಾಜಕೀಯಕ್ಕೆ ಸಂಬಂಧಿಸಿದ ಉನ್ನತ ಮಟ್ಟದ ಭ್ರಷ್ಟಾಚಾರವಾಗಿದೆ; ಇಂತಹ ಭ್ರಷ್ಟಾಚಾರವನ್ನು ಸಮಾಜವು ಸಾಮಾನ್ಯವಾಗಿ ಒಪ್ಪಿಕೊಂಡಿರುತ್ತದೆ. ಈ ಚಲನಚಿತ್ರವು ಇವೆರಡು ಬಗೆಯ ಭ್ರಷ್ಟಾಚಾರಗಳನ್ನು ಒಂದೇ ಮಟ್ಟದಲ್ಲಿ ಇರಿಸಲು ಪ್ರಯತ್ನಿಸುತ್ತದೆ. ಜಗತ್ತಿನಲ್ಲಿ ಹೆಚ್ಚುತ್ತಿರುವ ಅಸಮಾನತೆ ಮತ್ತು ಜನರನ್ನು ಅವರ ಸಾಮಾಜಿಕ-ಆರ್ಥಿಕ ವರ್ಗದ ಆಧಾರದ ಮೇಲೆ ಹೇಗೆ ವರ್ಗೀಕರಿಸಲಾಗುತ್ತದೆ ಎಂಬುದರ ಕುರಿತು ಮುಲ್ಲರ್ ಮತ್ತು ಗಾರ್ಸಿಯಾ ಚರ್ಚಿಸಿದರು.
ಜನರು ಏಕೆ ನೈತಿಕವಾಗಿ ಅಸ್ಪಷ್ಟವಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂಬುದರ ಕುರಿತು ಸಹಾನುಭೂತಿಯನ್ನು ಮೂಡಿಸುವುದು ಈ ಚಿತ್ರದ ಉದ್ದೇಶ ಎಂದು ಮುಲ್ಲರ್ ಹೇಳಿದರು. ಕೇವಲ ನಾಟಕೀಯ ಕಥಾವಸ್ತುವಿಗಿಂತ, 'ಥ್ರಿಲ್ಲರ್' ಪ್ರಕಾರವು ಹೆಚ್ಚು ವಿಶಾಲವಾದ ಮತ್ತು ಹೊಸ ಪ್ರೇಕ್ಷಕರನ್ನು ತಲುಪಲು ಸಹಾಯ ಮಾಡುತ್ತದೆ ಎಂದು ಅವರು ಭಾವಿಸಿ ಈ ಶೈಲಿಯನ್ನು ಆರಿಸಿಕೊಂಡರು. ಇದರ ಫಲಿತಾಂಶವಾಗಿ, ಇದು 'ಕಲಾತ್ಮಕ' ಮತ್ತು 'ವ್ಯಾಪಾರಿ' ಚಲನಚಿತ್ರಗಳ ನಡುವಿನ ಅಂಚಿನಲ್ಲಿ ನಿಲ್ಲುವ, "ಪಾತ್ರ-ಕೇಂದ್ರಿತ ಥ್ರಿಲ್ಲರ್" ಆಗಿ ಮೂಡಿಬಂದಿದೆ.
ಹೊಲ್ಲರಾನ್ ಈ ಚಿತ್ರವನ್ನು ಒಂದು ರೀತಿಯಲ್ಲಿ 'ಮಹಿಳಾ-ಕೇಂದ್ರಿತ' ಎಂದು ಬಣ್ಣಿಸಿದರು. ಎರಡೂ ಕುಟುಂಬಗಳಲ್ಲಿನ ಮಹಿಳೆಯರು ತೆಗೆದುಕೊಳ್ಳುವ ನಿರ್ಧಾರಗಳು, ಅವರು ಆ ನಿರ್ಧಾರಗಳನ್ನು ತೆಗೆದುಕೊಳ್ಳುವ ರೀತಿ ಮತ್ತು ಅವರು ಪರಸ್ಪರ ಹೇಗೆ ಸಂಪರ್ಕ ಹೊಂದುತ್ತಾರೆ ಎಂಬುದು ಕಥೆಯ ಬಹುಭಾಗವನ್ನು ಮುನ್ನಡೆಸುತ್ತದೆ. ವಿಭಿನ್ನ ಸಾಮಾಜಿಕ ವರ್ಗಗಳ ನಡುವಿನ ಸಂಘರ್ಷದ ಕಥೆಗಳು ಎಲ್ಲರಿಗೂ ಹತ್ತಿರವಾಗುತ್ತವೆ, ಏಕೆಂದರೆ ನಾವೆಲ್ಲರೂ ಸಮಾಜದ ಯಾವುದಾದರೊಂದು ವರ್ಗಕ್ಕೆ ಸೇರಿರುತ್ತೇವೆ ಎಂದು ಗಾರ್ಸಿಯಾ ಸೇರಿಸಿದರು. ಸವಲತ್ತುಗಳಲ್ಲಿ ವ್ಯತ್ಯಾಸವಿದ್ದರೂ, ಎರಡೂ ವರ್ಗದವರು ಒಂದೇ ರೀತಿಯ ಸಂದಿಗ್ಧತೆಗಳನ್ನು ಎದುರಿಸುವುದನ್ನು ತೋರಿಸುವ ಮೂಲಕ, ಈ ಚಿತ್ರವು ಪ್ರೇಕ್ಷಕರು ಇತರ ವರ್ಗದ ಜನರನ್ನು ಬಹಿಷ್ಕರಿಸುವ ಬದಲು, ಅವರನ್ನು ಅರ್ಥಮಾಡಿಕೊಳ್ಳಲು ಪ್ರೇರೇಪಿಸುತ್ತದೆ.

ತಮಗೆ ಭಾವನಾತ್ಮಕವಾಗಿ ಪರಿಚಿತವೆನಿಸುವ, ಆದರೆ ತಾವು ಭಾಗವಾಗಿರದ ವಿಷಯವೊಂದನ್ನು ಕಂಡಾಗ ತಮಗೆ ಸ್ಫೂರ್ತಿ ಸಿಗುತ್ತದೆ ಮತ್ತು ಅದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸುತ್ತೇನೆ ಎಂದು ಹೊಲ್ಲರಾನ್ ಹೇಳಿದರು. ಒಂದು ಸಮುದಾಯದೊಳಗೆ ಹೊರಗಿನವರು ಪ್ರವೇಶಿಸುವುದರ ಕುರಿತಾದ ಚಲನಚಿತ್ರದ ಪರಿಶೋಧನೆಯು ಇದೇ ವಿಷಯದಿಂದ ಮೂಡಿಬಂದಿದೆ. ಅನೇಕ ದೇಶಗಳ ಸಹಯೋಗದೊಂದಿಗೆ ಚಲನಚಿತ್ರ ನಿರ್ಮಾಣ ಪ್ರಕ್ರಿಯೆಯನ್ನು ನಿರ್ವಹಿಸುವ ಬಗ್ಗೆಯೂ ಅವರು ಮಾತನಾಡಿದರು. ಅಪರಿಚಿತ ಸ್ಥಳಗಳನ್ನು ಅನ್ವೇಷಿಸುವುದು, ಬರಹಗಾರರು ಹಾಗೂ ನಿರ್ದೇಶಕರೊಂದಿಗೆ ಕೆಲಸ ಮಾಡುವುದು ಮತ್ತು ಪ್ರಪಂಚದಾದ್ಯಂತದ ಜನರನ್ನು ಭೇಟಿಯಾಗುವುದು, ಇವು ಚಲನಚಿತ್ರ ನಿರ್ಮಾಣದ ಅತ್ಯುತ್ತಮ ಭಾಗಗಳೆಂದು ಅವರು ಹೇಳಿದರು. ಮುಂಬೈ ನಗರದ ವೈವಿಧ್ಯತೆ ಮತ್ತು ಚೈತನ್ಯವನ್ನು ತಮ್ಮ ತವರು ನಗರವಾದ ನ್ಯೂಯಾರ್ಕ್‌ಗೆ ಹೋಲಿಸುತ್ತಾ, ತಮಗೆ ಮುಂಬೈ ನಗರದ ಮೇಲೆ ವಿಶೇಷ ಒಲವು ಮೂಡಿದೆ ಎಂದು ಅವರು ತಿಳಿಸಿದರು.
ಪ್ರಪಂಚದಾದ್ಯಂತ ಜನರು ಸಮಾನತೆ, ಮನ್ನಣೆ ಮತ್ತು ಪ್ರಾತಿನಿಧ್ಯಕ್ಕಾಗಿ ಹಂಬಲಿಸುತ್ತಿದ್ದಾರೆ ಎಂದು ಹೋಲೆರಾನ್ ಗಮನಸೆಳೆದರು. ನ್ಯಾಯ ಮತ್ತು ನಿಷ್ಪಕ್ಷಪಾತದ ಹಾದಿಯತ್ತ ಮರಳುತ್ತಿರುವ ಈ ಸಂದರ್ಭದಲ್ಲಿ, ಜನರು ವೈವಿಧ್ಯತೆಯನ್ನು ಸಹಜವಾಗಿ ಸ್ವೀಕರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಹೇಳಿದರು. ಪರಿಚಿತ ವಲಯವನ್ನು ಮೀರಿ ಪ್ರಯಾಣಿಸುವುದು, ಹೊಸ ಭಾಷೆಯನ್ನು ಕೇಳಿಸಿಕೊಳ್ಳುವುದು ಹಾಗೂ ಹೊಸ ಸಂಸ್ಕೃತಿಯ ರುಚಿ ಮತ್ತು ಪರಿಮಳವನ್ನು ಅನುಭವಿಸುವುದು ಎಷ್ಟು ಮುಖ್ಯ ಎಂಬುದನ್ನು ಅವರು ಹೇಳಿದರು. ಜನರು ಹೆಚ್ಚು ಹೆಚ್ಚು ಪ್ರಯಾಣಿಸಿದರೆ, ಈ ಜಗತ್ತು ಇನ್ನಷ್ಟು ಉತ್ತಮ ತಾಣವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಅಧಿವೇಶನವನ್ನು ಶ್ರೀ ಲಾಭ್ ಜೈನ್ ಅವರು ನಿರ್ವಹಿಸಿದರು.
Read IFFILOID here: https://www.pib.gov.in/iffi/57/iffiLoid.aspx?yr=2026&lang=1®=48
*****