ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಶ್ರೀ ಗುರುನಾನಕ್ ದೇವ್ ಅವರ ಪ್ರಕಾಶ್ ಪುರಬ್‌ನಲ್ಲಿ ಶಬ್ದ ಕೀರ್ತನೆಯಲ್ಲಿ ಪಾಲ್ಗೊಂಡ ಪ್ರಧಾನಮಂತ್ರಿ ನರೇಂದ್ರ ಮೋದಿ


ರಾಷ್ಟ್ರ ಮತ್ತು ಅದರ ಸಂಸ್ಕೃತಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡುವ ಮನೋಭಾವಕ್ಕೆ ಇಡೀ ಸಿಖ್ ಪರಂಪರೆಯು ಸಮಾನಾರ್ಥಕವಾಗಿದೆ: ಪ್ರಧಾನಮಂತ್ರಿ

ಇಂದು ವಿಶ್ವಾದ್ಯಂತ ಅನೇಕ ಕಡೆ ಸಂಘರ್ಷಗಳು ನಡೆಯುತ್ತಿದ್ದು, ಅಸಂಖ್ಯಾತ ಮುಗ್ಧ ಜನರು ಮತ್ತು ಕುಟುಂಬಗಳು ಹಿಂಸಾಚಾರ ಹಾಗೂ ಅಶಾಂತಿ ಎದುರಿಸುತ್ತಿವೆ. ಇಂತಹ ಸಂದರ್ಭದಲ್ಲಿ, ಜಗತ್ತಿನ ಪ್ರತಿಯೊಂದು ಮೂಲೆಯಲ್ಲೂ ಶಾಂತಿ, ಪ್ರತಿಯೊಂದು ಕುಟುಂಬಕ್ಕೂ ಸುರಕ್ಷತೆ ಹಾಗೂ ಪ್ರತಿಯೊಬ್ಬ ವ್ಯಕ್ತಿಯೂ ಘನತೆಯಿಂದ ಬದುಕುವ ಅವಕಾಶ ಖಚಿತಪಡಿಸಲು 'ಸರ್ಬತ್ ದಾ ಭಲಾ' (ಎಲ್ಲರ ಕಲ್ಯಾಣ) ಎಂಬ ಭಾವನೆಯು ಅತ್ಯಂತ ಮಹತ್ವದ್ದಾಗುತ್ತದೆ: ಪ್ರಧಾನಮಂತ್ರಿ

ದೇಶದ ಪ್ರತಿಯೊಬ್ಬ ಯುವಕ ವ್ಯಸನಮುಕ್ತನಾಗಬೇಕು, ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಬೇಕು, ಚೆನ್ನಾಗಿ ಓದಬೇಕು, ತಮ್ಮ ಕುಟುಂಬ ಮತ್ತು ರಾಷ್ಟ್ರಕ್ಕೆ ಹೆಮ್ಮೆ ತರಬೇಕು. ಈ ಪ್ರಯತ್ನದಲ್ಲಿ ಕುಟುಂಬಗಳು ಪ್ರಮುಖ ಪಾತ್ರ ವಹಿಸುತ್ತವೆ. ನಮ್ಮ ಸಂಗತ್ (ಸಮುದಾಯ), ಗುರುದ್ವಾರಗಳು ಮತ್ತು ಸಾಮಾಜಿಕ ಸಂಘಟನೆಗಳು ಒಗ್ಗೂಡಿ ಯುವಜನರಿಗೆ ಮಾರ್ಗದರ್ಶನ ನೀಡಬಲ್ಲವು, ಸರಿಯಾದ ಹಾದಿ ಆಯ್ಕೆ ಮಾಡಿಕೊಳ್ಳುವಂತೆ ಅವರಿಗೆ ಧೈರ್ಯ ತುಂಬಬಲ್ಲವು: ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 23 NOV 2026 9:13PM by PIB Bengaluru

ಶ್ರೀ ಗುರು ನಾನಕ್ ದೇವ್ ಜಿ ಅವರ 'ಪ್ರಕಾಶ್ ಪುರಬ್' (ಜಯಂತಿ) ಪವಿತ್ರ ಸಂದರ್ಭದಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 'ಶಬ್ದ ಕೀರ್ತನೆ'ಯಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, " ವಹೇಗುರು ಜಿ ಕಾ ಖಾಲ್ಸಾ, ವಹೇಗುರು ಜಿ ಕಿ ಫತೇಹ್!" ಎಂಬ ಶುಭಾಶಯದೊಂದಿಗೆ ತಮ್ಮ ಮಾತು ಆರಂಭಿಸಿದರು. ಈ ಪವಿತ್ರ ಸಂದರ್ಭದಲ್ಲಿ ಗುರು ನಾನಕ್ ದೇವ್ ಅವರಿಗೆ ಭಕ್ತಿಯಿಂದ ನಮಸ್ಕರಿಸಿದ ಪ್ರಧಾನಿ, ಶಬ್ದ ಕೀರ್ತನೆಯಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು, ದೇಶದ ಜನತೆಗೆ ಹಬ್ಬದ ಶುಭಾಶಯಗಳನ್ನು ಕೋರಿದರು. "ಪ್ರಕಾಶ್ ಪುರಬ್ ಸಂದರ್ಭದಲ್ಲಿ ದೇಶವಾಸಿಗಳೆಲ್ಲರಿಗೂ ನನ್ನ ಅನಂತ ಶುಭಾಶಯಗಳು" ಎಂದು ಶ್ರೀ ಮೋದಿ ನುಡಿದರು.

ಗುರ್ಬಾನಿಯ ಪ್ರತಿಯೊಂದು ಶಬ್ದ ಮತ್ತು ಕೀರ್ತನೆಯ ಪ್ರತಿಯೊಂದು ರಾಗ ಕೇವಲ ಸಂಗೀತಕ್ಕಿಂತ ಮಿಗಿಲಾದದ್ದು ಎಂದು ಬಣ್ಣಿಸಿದ ಪ್ರಧಾನ ಮಂತ್ರಿ, ಇದೊಂದು ಆಧ್ಯಾತ್ಮಿಕ ಸಾಧನೆ ಹಾಗೂ ಜ್ಞಾನದ ಸಾಗರದಲ್ಲಿ ಮುಳುಗೇಳುವ ಅನುಭವ. "ಆದ್ದರಿಂದ, ಇಂತಹ ಕಾರ್ಯಕ್ರಮಗಳಿಗೆ ನನಗೆ ಆಹ್ವಾನ ಬಂದಾಗಲೆಲ್ಲಾ ಅಥವಾ ಅವಕಾಶ ಸಿಕ್ಕಾಗಲೆಲ್ಲಾ, ನಾನು ಖಂಡಿತವಾಗಿಯೂ ಸಂಗತ್ ಮತ್ತು ಕೀರ್ತನೆಯಲ್ಲಿ ಪಾಲ್ಗೊಳ್ಳುತ್ತೇನೆ," ಎಂದು ಹೇಳಿದರು.

ಗುರು ನಾನಕ್ ದೇವ್ ಅವರ 'ಕಿರತ್ ಕರೋ, ವಂದ್ ಛಕೋ, ನಾಮ್ ಜಪೋ' (ಪ್ರಾಮಾಣಿಕವಾಗಿ ದುಡಿಯಿರಿ, ಗಳಿಸಿದ್ದನ್ನು ಹಂಚಿ ತಿನ್ನಿರಿ ಮತ್ತು ದೇವರ ನಾಮಸ್ಮರಣೆ ಮಾಡಿ) ಎಂಬ ಬೋಧನೆಗಳು ತಮ್ಮ ಬಾಲ್ಯದಿಂದಲೇ ತಮ್ಮ ಜೀವನದ ಸಹಜ ಭಾಗವಾಗಿದ್ದವು ಎಂಬುದನ್ನು ಸ್ಮರಿಸಿದ ಪ್ರಧಾನ ಮಂತ್ರಿ, ಗುರುದ್ವಾರಗಳಲ್ಲಿ ತಲೆಬಾಗಿ ನಮಸ್ಕರಿಸುವುದು, ಗುರ್ಬಾನಿಯಲ್ಲಿ ಮಗ್ನರಾಗುವುದು, ಸೇವೆಯ ಆನಂದ ಅನುಭವಿಸುವುದು, ಲಂಗರ್‌ನಲ್ಲಿ ಪಾಲ್ಗೊಳ್ಳುವುದು ಮತ್ತು ಶ್ರೀ ಹರ್ಮಂದಿರ್ ಸಾಹಿಬ್‌ನಲ್ಲಿ ಅನೇಕ ಬಾರಿ ನಮನ ಸಲ್ಲಿಸಿದ ಕ್ಷಣಗಳನ್ನು ಪ್ರೀತಿಯಿಂದ ನೆನಪಿಸಿಕೊಂಡರು. "ನನ್ನ ಹಳೆಯ ಸಹೋದ್ಯೋಗಿಗಳಿಗೆ ತಿಳಿದಿರುವಂತೆ, ನಾನು ಪಂಜಾಬ್‌ನಲ್ಲಿ ಸಾಕಷ್ಟು ಸಮಯ ಕಳೆದಿದ್ದೇನೆ. ಆ ಅವಧಿಯು ನನ್ನ ಜೀವನದ ಅತ್ಯಂತ ವಿಶೇಷ ನೆನಪುಗಳಲ್ಲಿ ಒಂದಾಗಿದೆ," ಎಂದು ಮೋದಿ ಹೇಳಿದರು.

ಗುರುವಿನ ಕೃಪೆಯಿಂದ ಸಿಖ್ ಸಂತರು ಮತ್ತು ವಿದ್ವಾಂಸರ ಸಾನ್ನಿಧ್ಯವನ್ನು ನಿರಂತರವಾಗಿ ಪಡೆಯುತ್ತಿರುವುದಕ್ಕೆ, ಹಾಗೂ ಪ್ರಧಾನ ಮಂತ್ರಿ ಅವರ ನಿವಾಸದಲ್ಲಿ ಅನೇಕ ಸಂತರು ಮತ್ತು ವಿದ್ವಾಂಸರನ್ನು ಆತಿಥ್ಯದೊಂದಿಗೆ ಬರಮಾಡಿಕೊಳ್ಳುವ ಸೌಭಾಗ್ಯ ಲಭಿಸಿದ್ದಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ ಮೋದಿ ಅವರು, ಈ ಕಾರ್ಯಕ್ರಮದಲ್ಲಿ ಅವರ ಉಪಸ್ಥಿತಿಯಿಂದ ಒಂದು ವಿಶಿಷ್ಟ ಆಧ್ಯಾತ್ಮಿಕ ಶಕ್ತಿಯ ಅನುಭವವಾಯಿತು ಎಂದು ಉಲ್ಲೇಖಿಸಿದರು. "ಈ ಸಂದರ್ಭದಲ್ಲಿ, ನಾನು ಎಲ್ಲಾ ಸಂತರು ಮತ್ತು ವಿದ್ವಾಂಸರಿಗೆ ನಮಸ್ಕರಿಸುತ್ತೇನೆ," ಎಂದು ಹೇಳಿದರು.

ಈ ವರ್ಷದ 'ಪ್ರಕಾಶ್ ಪುರಬ್' (ಗುರುಪುರಬ್), ಶ್ರೀ ಗುರು ತೇಗ್ ಬಹದ್ದೂರ್ ಅವರ 350ನೇ ಹುತಾತ್ಮ ದಿನದೊಂದಿಗೆ ಹೊಂದಿಕೆಯಾಗುತ್ತಿದೆ. ರಾಷ್ಟ್ರದ ಅಸ್ಮಿತೆ, ನಂಬಿಕೆ, ಶ್ರದ್ಧೆ ಮತ್ತು ಮೌಲ್ಯಗಳನ್ನು ರಕ್ಷಿಸಲು ದೆಹಲಿಯ ನೆಲದ ಮೇಲೆ ತಮ್ಮ ಪ್ರಾಣವನ್ನೇ ಅರ್ಪಿಸಿದ ಗುರು ತೇಗ್ ಬಹದ್ದೂರ್ ಅವರ ತ್ಯಾಗದ ಸ್ಫೂರ್ತಿಯು, 350 ವರ್ಷಗಳ ನಂತರವೂ ಈ ನೆಲದಲ್ಲಿ ಮತ್ತು ರಾಷ್ಟ್ರದ ಪ್ರತಿಯೊಂದು ಮೂಲೆಯಲ್ಲೂ ಆಳವಾಗಿ ಬೇರೂರಿ. "ಇದಕ್ಕಾಗಿ ದೇಶದ ಪ್ರತಿಯೊಬ್ಬ ನಾಗರಿಕರೂ ಅವರಿಗೆ ಸದಾ ಕೃತಜ್ಞರಾಗಿರುತ್ತಾರೆ," ಎಂದು ಶ್ರೀ ಮೋದಿ ನುಡಿದರು.

ಇಡೀ ಸಿಖ್ ಪರಂಪರೆಯು ರಾಷ್ಟ್ರ ಮತ್ತು ಇಲ್ಲಿನ ಸಂಸ್ಕೃತಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡುವುದಕ್ಕೆ ಸಮಾನಾರ್ಥಕವಾಗಿದೆ ಎಂದು ಪ್ರತಿಪಾದಿಸಿದ ಪ್ರಧಾನ ಮಂತ್ರಿ, ಭಾಯಿ ಮತಿ ದಾಸ್ ಜಿ, ಭಾಯಿ ಸತಿ ದಾಸ್ ಜಿ ಮತ್ತು ಭಾಯಿ ದಯಾಲಾ ಜಿ ಅವರ ಹುತಾತ್ಮತೆ ಹಾಗೂ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ತೋರಿದ ಅಚಲ ಉತ್ಸಾಹವನ್ನು ಉದಾಹರಿಸಿದರು. ಇದೇ ವೇಳೆ, 'ಗುರುದ್ವಾರ ಸುಧಾರಣಾ ಚಳುವಳಿ'ಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ,  ತಮ್ಮ ಜೀವನವನ್ನೇ ಸೇವೆಗೆ ಮುಡಿಪಾಗಿಟ್ಟ ಸರ್ದಾರ್ ತೇಜಾ ಸಿಂಗ್ ಸಮುಂದ್ರಿ ಅವರಿಗೆ ಪ್ರಧಾನ ಮಂತ್ರಿಯ ಗೌರವ ನಮನ ಸಲ್ಲಿಸಿದರು. "ಈ ವರ್ಷ ಅವರು ಹುತಾತ್ಮರಾದ 100ನೇ ವರ್ಷವೂ ಪೂರ್ಣಗೊಳ್ಳುತ್ತಿದೆ. ಈ ಸಂದರ್ಭದಲ್ಲಿ ನಾನು ಅವರಿಗೂ ನಮಸ್ಕರಿಸುತ್ತೇನೆ," ಎಂದು ಪ್ರಧಾನಿ ಮೋದಿ ಹೇಳಿದರು.

ಭಾರತವು ಶತಮಾನಗಳ ಕಾಲ ಗುಲಾಮಗಿರಿ ಅನುಭವಿಸಿತು, ಇತಿಹಾಸದ ಅತ್ಯಂತ ಕಠಿಣ ಕಾಲಘಟ್ಟಗಳಲ್ಲೂ ಗುರುಗಳು ರಾಷ್ಟ್ರವನ್ನು ರಕ್ಷಿಸುವ ಜ್ಯೋತಿಯನ್ನು ಜೀವಂತವಾಗಿರಿಸಿದ್ದರು ಎಂಬುದನ್ನು ಸ್ಮರಿಸಿದ ಪ್ರಧಾನ ಮಂತ್ರಿ, ಇಂದಿನ ಮಹತ್ತರ ರಾಷ್ಟ್ರೀಯ ಸಂಕಲ್ಪಗಳು ಮತ್ತು 'ವಿಕಸಿತ ಭಾರತ'ದ ಗುರಿಯನ್ನು ಅವರ ಸ್ಫೂರ್ತಿ ಮತ್ತು ಆದರ್ಶಗಳ ಮೂಲಕವೇ ಸಾಧಿಸಲು ಸಾಧ್ಯ. "ಆದ್ದರಿಂದ, ಸಿಖ್ ಪರಂಪರೆಗಳನ್ನು ಮತ್ತು ಸಿಖ್ ಧರ್ಮದ ಪರಂಪರೆಯನ್ನು ಒಂದು ದಾರಿದೀಪದಂತೆ ಮುಂದಕ್ಕೆ ಕೊಂಡೊಯ್ಯುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ," ಎಂದು ಮೋದಿ ಪ್ರತಿಪಾದಿಸಿದರು.

ಕಳೆದ 12 ವರ್ಷಗಳಲ್ಲಿ ಸರ್ಕಾರವು ಸಂಪೂರ್ಣ ಶ್ರದ್ಧೆಯಿಂದ ಈ ಜವಾಬ್ದಾರಿಯನ್ನು ಹೇಗೆ ನಿರ್ವಹಿಸಿದೆ ಎಂಬುದನ್ನು ವಿವರಿಸಿದ ಪ್ರಧಾನ ಮಂತ್ರಿ, ಭಾರತ ಮತ್ತು ವಿದೇಶಗಳಲ್ಲಿ ಗುರು ಗೋವಿಂದ ಸಿಂಗ್ ಅವರ 350ನೇ 'ಪ್ರಕಾಶ್ ಪುರಬ್'(ಜಯಂತಿ) ಮತ್ತು ಗುರು ನಾನಕ್ ದೇವ್ ಅವರ 550ನೇ 'ಪ್ರಕಾಶ್ ಪುರಬ್' ಆಚರಣೆಗಳನ್ನು ಉಲ್ಲೇಖಿಸಿದರು. ಈ ಸಂದರ್ಭ ಸ್ಮರಣಾರ್ಥ ನಾಣ್ಯಗಳು ಮತ್ತು ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಲಾಯಿತು, ವಿಶೇಷ ರೈಲುಗಳಿಗೆ ಹಸಿರುನಿಶಾನೆ ತೋರಲಾಯಿತು. ದೇಶಾದ್ಯಂತ 'ಗುರ್ಬಾನಿ' ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು, ಗುರು ತೇಗ್ ಬಹದ್ದೂರ್  ಅವರ 400ನೇ 'ಪ್ರಕಾಶ್ ಪುರಬ್' ಅಂಗವಾಗಿ ಕೆಂಪುಕೋಟೆಯಲ್ಲಿ ರಾಷ್ಟ್ರೀಯ ಕಾರ್ಯಕ್ರಮ ನಡೆಸಲಾಯಿತು. "ಇದೇ ಸ್ಫೂರ್ತಿಯೊಂದಿಗೆ, ನಾವು ಪ್ರಸ್ತುತ ಗುರು ತೇಗ್ ಬಹದ್ದೂರ್ ಅವರ 350ನೇ ಹುತಾತ್ಮ ದಿನವನ್ನೂ ಆಚರಿಸುತ್ತಿದ್ದೇವೆ," ಎಂದು ಪ್ರಧಾನಿ ಮೋದಿ ಹೇಳಿದರು.

ಡಿಸೆಂಬರ್ 26ರಂದು ದೇಶವು 'ವೀರ ಬಾಲ ದಿವಸ' ಆಚರಿಸುತ್ತದೆ ಎಂದು ಉಲ್ಲೇಖಿಸಿದ ಪ್ರಧಾನ ಮಂತ್ರಿ, ಧೀರ ಸಾಹಿಬ್‌ಜಾದೆ(ಗುರು ಗೋವಿಂದ ಸಿಂಗ್  ಅವರ ಪುತ್ರರು) ಹುತಾತ್ಮತೆಯ ಅಮರ ಕಥೆ ಮತ್ತು ಮಾತಾ ಗುಜ್ರಿ ಅವರ ದೃಢ ಸಂಕಲ್ಪವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಈ ರಾಷ್ಟ್ರೀಯ ಆಚರಣೆ ಆರಂಭಿಸಲಾಗಿದೆ. “ನಮ್ಮ ಮಕ್ಕಳು ಆ ಕಾಲಘಟ್ಟದ ​​ಸನ್ನಿವೇಶಗಳ ಬಗ್ಗೆ, ಸಾಹಿಬ್‌ ಜಾದಾಗಳು ಮತ್ತು ಗುರುಗಳು ಹೇಗೆ ಹುತಾತ್ಮರಾದರು ಎಂಬುದರ ಬಗ್ಗೆ ಹಾಗೂ ನಮ್ಮ ಧರ್ಮವು ಹೇಗೆ ಸಂರಕ್ಷಿತವಾಗಿ ಉಳಿಯಿತು ಎಂಬುದರ ಬಗ್ಗೆ ತಿಳಿದುಕೊಂಡಾಗ, ಈ ಜ್ಞಾನ ಮತ್ತು ಸ್ಫೂರ್ತಿಯು ರಾಷ್ಟ್ರಕ್ಕೆ ಸಮರ್ಪಿತರಾದ ಯುವ ಜನರನ್ನು ರೂಪಿಸುತ್ತದೆ,” ಎಂದು ಮೋದಿ ಪ್ರತಿಪಾದಿಸಿದರು.

ಗುರುಗಳ ವೈಭವ ಸಾರುವ ಪ್ರಯತ್ನಗಳು ಭಾರತದ ಗಡಿಗಳನ್ನು ಮೀರಿ ವಿಸ್ತರಿಸಿವೆ. ಫಿಲಿಪೈನ್ಸ್‌ನಲ್ಲಿರುವ ಅತ್ಯಂತ ಹಳೆಯ ಗುರುದ್ವಾರವಾದ 'ಖಾಲ್ಸಾ ದಿವಾನ್'ಗೆ ತಾವು ಇತ್ತೀಚೆಗೆ ಭೇಟಿ ನೀಡಿದ್ದೆ. ಈ ಗುರುದ್ವಾರದ ಪುನರಾಭಿವೃದ್ಧಿಗೆ ಭಾರತ ಸರ್ಕಾರವು ಬೆಂಬಲ ನೀಡುತ್ತಿದೆ. "ನಮ್ಮ ಗುರುಗಳ ಜ್ಞಾನದ ಬೆಳಕು ಪ್ರತಿಯೊಬ್ಬ ವ್ಯಕ್ತಿಯನ್ನೂ ತಲುಪಬೇಕು, ಅವರ ಆಶೀರ್ವಾದದೊಂದಿಗೆ ಭಾರತವು ಹೊಸ ಎತ್ತರಕ್ಕೆ ಏರಬೇಕು ಎಂಬುದು ನಮ್ಮ ಪ್ರಯತ್ನವಾಗಿದೆ" ಎಂದು ಪ್ರಧಾನಿ ಮೋದಿ ಹೇಳಿದರು.

'ನಾನಕ್ ನಾಮ್ ಚರ್ದಿ ಕಲಾ, ತೇರೇ ಭಾನೇ ಸರ್ಬತ್ ದಾ ಭಲಾ' ಎಂಬ 'ಅರ್ದಾಸ್' (ಪ್ರಾರ್ಥನೆ) ಅನ್ನು ಉಲ್ಲೇಖಿಸಿದ ಪ್ರಧಾನ ಮಂತ್ರಿ, 'ಗುರ್ಬಾನಿ'ಯು ಎಲ್ಲರ ಕಲ್ಯಾಣಕ್ಕಾಗಿ ಶ್ರಮಿಸಬೇಕೆಂಬ ಸಾರ್ವತ್ರಿಕ ಸಂದೇಶ ನೀಡುತ್ತದೆ. "ನಾವು ಎಲ್ಲರನ್ನೂ ನಮ್ಮವರೆಂದು ಪರಿಗಣಿಸಲು ಆರಂಭಿಸಿದಾಗ ಮಾತ್ರ, ಎಲ್ಲರಿಗೂ ಒಳಿತಾಗಲಿ ಎಂದು ಬಯಸುವ ಭಾವನೆ ನಮ್ಮ ಮನಸ್ಸಿನಲ್ಲಿ ಮೂಡುತ್ತದೆ" ಎಂದು ಮೋದಿ ತಿಳಿಸಿದರು.

ವಿಶ್ವಾದ್ಯಂತ ನಡೆಯುತ್ತಿರುವ ಸಂಘರ್ಷಗಳಲ್ಲಿ ಅಮಾಯಕ ಜನರು ಮತ್ತು ಕುಟುಂಬಗಳು ಹಿಂಸಾಚಾರ ಹಾಗೂ ಅಶಾಂತಿ ಎದುರಿಸುತ್ತಿದ್ದಾರೆ. ಪ್ರತಿಯೊಬ್ಬರಿಗೂ ಶಾಂತಿ, ಪ್ರತಿಯೊಂದು ಕುಟುಂಬಕ್ಕೂ ಸುರಕ್ಷತೆ ಮತ್ತು ಪ್ರತಿಯೊಬ್ಬ ವ್ಯಕ್ತಿಗೂ ಘನತೆಯುಳ್ಳ ಜೀವನ ನೀಡುವ ಅಗತ್ಯವಿದೆ. "ಇಂತಹ ಸಂದರ್ಭಗಳಲ್ಲಿ, 'ಸರ್ಬತ್ ದಾ ಭಲಾ' (ಎಲ್ಲರ ಕಲ್ಯಾಣ) ಎಂಬ ಭಾವನೆಯು ಇನ್ನಷ್ಟು ಮಹತ್ವದ್ದಾಗುತ್ತದೆ" ಎಂದು ಪ್ರಧಾನಿ ಮೋದಿ ಹೇಳಿದರು.

ಗುರು ಸಾಹಿಬ್ ಅವರು ಬೋಧಿಸಿದ ಜೀವನ ಮೌಲ್ಯಗಳ ಅಸಲಿ ಪರೀಕ್ಷೆಯು ದೈನಂದಿನ ಜೀವನದಲ್ಲೇ ನಡೆಯುತ್ತದೆ. ಮಾದಕ ವಸ್ತುಗಳ ಸೇವನೆಯ ಸಮಸ್ಯೆಯಿಂದ ಯು ಜನರನ್ನು ಹೊರತರಬೇಕು. "ಒಬ್ಬ ಯುವಕ ವ್ಯಸನದ ಸುಳಿಗೆ ಸಿಲುಕಿದಾಗ, ಅವನೊಂದಿಗೆ ಇಡೀ ಕುಟುಂಬದ ಕನಸುಗಳು ಕೂಡ ನುಚ್ಚುನೂರಾಗುತ್ತವೆ" ಎಂದು ಮೋದಿ ಹೇಳಿದರು.

ಭಾರತದ ಪ್ರತಿಯೊಬ್ಬ ಯುವಕನೂ ವ್ಯಸನಮುಕ್ತನಾಗಬೇಕು, ಆಗ ಮಾತ್ರ ಅವರು ಚೆನ್ನಾಗಿ ಓದಿ, ತಮ್ಮ ಕನಸುಗಳನ್ನು ನನಸಾಗಿಸಿಕೊಂಡು, ತಮ್ಮ ಕುಟುಂಬಕ್ಕೆ ಹಾಗೂ ರಾಷ್ಟ್ರಕ್ಕೆ ಹೆಮ್ಮೆ ತರಲು ಸಾಧ್ಯ. ಯುವ ಜನರನ್ನು ಸರಿಯಾದ ಹಾದಿಯಲ್ಲಿ ಮುನ್ನಡೆಸುವಲ್ಲಿ ಕುಟುಂಬಗಳು, 'ಸಂಗತ್', ಗುರುದ್ವಾರಗಳು ಮತ್ತು ಸಾಮಾಜಿಕ ಸಂಸ್ಥೆಗಳ ಪಾತ್ರ ಅತ್ಯಂತ ನಿರ್ಣಾಯಕವಾಗಿದೆ. ಪ್ರಧಾನಿ ಅವರು ಅಂತಿಮವಾಗಿ, 'ಪ್ರಕಾಶ್ ಪುರಬ್' (ಗುರುಗಳ ಜಯಂತಿ) ಶುಭಾಶಯ ಕೋರಿ, ಸಿಖ್ ಸಂಪ್ರದಾಯದ ವಂದನೆಗಳೊಂದಿಗೆ ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು. "ಗುರು ಸಾಹಿಬ್ ಅವರ ಕೃಪೆ ಮತ್ತು ಸಮಾಜದ ಸಾಮೂಹಿಕ ಪ್ರಯತ್ನಗಳಿಂದ, ನಮ್ಮ ಮುಂದಿನ ಪೀಳಿಗೆಗೆ ಸುರಕ್ಷಿತ ಮತ್ತು ಉಜ್ವಲ ಭವಿಷ್ಯ ಒದಗಿಸಲು ನಮಗೆ ಸಾಧ್ಯವಾಗುತ್ತದೆ ಎಂಬ ವಿಶ್ವಾಸ ನನಗಿದೆ" ಎಂದು ಹೇಳಿದರು.

 

*****


(ಪ್ರಕಟಣೆ ಐ.ಡಿ.: 2341769) ವಿಸಿಟರ್ ಕೌಂಟರ್ : 16
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Manipuri , Bengali , Assamese , Punjabi , Gujarati , Tamil , Telugu , Malayalam