57ನೇ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (ಐಎಫ್‌ಎಫ್‌ಐ) ಅಂಗವಾಗಿ ಪಣಜಿಯ ಕಲಾ ಅಕಾಡೆಮಿಯಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ಪ್ರಸಾರ ಭಾರತಿಯು ತನ್ನ ಪ್ರಪ್ರಥಮ ಸ್ಕ್ರಿಪ್ಟ್ ಪಿಚಿಂಗ್ ಲ್ಯಾಬ್ ‘ಪೇಜ್ ಸೇ ಪಿಚ್ ತಕ್’ ವಿಜೇತರನ್ನು ಪ್ರಕಟಿಸಿತು. ಪ್ರಸಾರ ಭಾರತಿಯ ಅಧ್ಯಕ್ಷರಾದ ಶ್ರೀ ಪ್ರಸೂನ್ ಜೋಶಿ ಅವರ ಪರಿಕಲ್ಪನೆಯ ಈ ಉಪಕ್ರಮವು ಚಲನಚಿತ್ರ, ಸಾಕ್ಷ್ಯಚಿತ್ರ ಮತ್ತು ಕಿರುಚಿತ್ರ ವಿಭಾಗಗಳಲ್ಲಿ ಹತ್ತು ಭಾರತೀಯ ಭಾಷೆಗಳಲ್ಲಿ ತಮ್ಮ ಮೂಲ ಕಥೆಗಳನ್ನು ಪ್ರಸ್ತುತಪಡಿಸಲು ಉದಯೋನ್ಮುಖ ಬರಹಗಾರರಿಗೆ ವಾರ್ಷಿಕ ರಾಷ್ಟ್ರೀಯ ವೇದಿಕೆಯನ್ನು ಸ್ಥಾಪಿಸುವ ಗುರಿ ಹೊಂದಿದೆ.
_20261124160240_59c463.jpeg)
ಈ ಉಪಕ್ರಮಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಘೋಷಣೆಯಾದ ಕೇವಲ ಹತ್ತು ದಿನಗಳಲ್ಲೇ ಸುಮಾರು 1,000 ಕಥೆಗಳನ್ನು ಸಲ್ಲಿಸಲಾಯಿತು. ಇದು ದೇಶದ ಯುವ ಬರಹಗಾರರಲ್ಲಿರುವ ಅಪಾರ ಕಥೆ ಹೇಳುವ ಪ್ರತಿಭೆ ಮತ್ತು ಸೃಜನಶೀಲ ಆಶಯಗಳಿಗೆ ಸಾಕ್ಷಿಯಾಗಿದೆ.
‘ಮಿರ್ಚಿ ಕೇಕ್’ ಕಥೆಗಾಗಿ ಅವಿಶೇಷ್ ಝಾ ಅವರು ಪ್ರಥಮ ಬಹುಮಾನ ಗಳಿಸಿದ್ದು, ಅವರಿಗೆ ₹5 ಲಕ್ಷ ನಗದು ಬಹುಮಾನ ಲಭಿಸಿದೆ. ‘ಸಂಹಾರ್’ ಕಥೆಗಾಗಿ ಸತ್ಯ ವ್ಯಾಸ್ ಅವರು ದ್ವಿತೀಯ ಬಹುಮಾನವಾಗಿ ₹3 ಲಕ್ಷ ಪಡೆದರೆ, ‘ಶರದ್ ಪೂರ್ಣಿಮಾ’ ಕಥೆಗಾಗಿ ಜಿತೇಶ್ ಠಾಕೂರ್ ಅವರು ತೃತೀಯ ಬಹುಮಾನವಾಗಿ ₹2 ಲಕ್ಷ ಪಡೆದರು.
ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀ ಪೃಥುಲ್ ಕುಮಾರ್ ಮತ್ತು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ (ಎನ್‌ಎಫ್‌ಡಿಸಿ) ವ್ಯವಸ್ಥಾಪಕ ನಿರ್ದೇಶಕ ಶ್ರೀ ಧೀರಜ್ ಸಿಂಗ್ ಅವರ ಉಪಸ್ಥಿತಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀ ಪೃಥುಲ್ ಕುಮಾರ್ ಅವರು, ಉದಯೋನ್ಮುಖ ಕಥೆ ಹೇಳುವ ಪ್ರತಿಭೆಯನ್ನು ಗುರುತಿಸಿ ಪೋಷಿಸುವ ಮಹತ್ವವನ್ನು ಒತ್ತಿಹೇಳಿದರು. ಭಾರತದ ಯುವಜನರಲ್ಲಿರುವ ಸೃಜನಶೀಲ ಸಾಮರ್ಥ್ಯವನ್ನು ಬಳಸಿಕೊಳ್ಳುವುದು ಮತ್ತು ದೇಶದ ಯುವಜನರು ಹೇಳಲು ಬಯಸುವ ಕಥೆಗಳನ್ನು ಗುರುತಿಸುವುದು ಅತ್ಯಗತ್ಯ ಎಂದು ಅವರು ಹೇಳಿದರು. ಚಲನಚಿತ್ರ ನಿರ್ಮಾಣದಲ್ಲಿ ಸ್ಕ್ರಿಪ್ಟ್ ಬರವಣಿಗೆಯ ಮಹತ್ವವನ್ನು ವಿವರಿಸಿದ ಅವರು, ಸ್ಕ್ರಿಪ್ಟ್ ಸಿದ್ಧಪಡಿಸುವುದೇ ಚಲನಚಿತ್ರ ನಿರ್ಮಾಣ ಪ್ರಕ್ರಿಯೆಯ ಮೊದಲ ಹೆಜ್ಜೆಯಾಗಿದ್ದು, ಚಿತ್ರ ನಿರ್ಮಾಣಕ್ಕೆ ಯೋಜನೆ ರೂಪಿಸುವುದು ಮೂಲಭೂತ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು. ಸ್ಕ್ರಿಪ್ಟ್ ಅನ್ನು ಯೋಜನೆಗೆ ಸಮಾನವಾದುದು ಎಂದು ಬಣ್ಣಿಸಿದ ಅವರು, ಮನಮುಟ್ಟುವ ಸ್ಕ್ರಿಪ್ಟ್ ಮತ್ತು ಬಲವಾದ ಕಥೆಯೇ ಯಶಸ್ವಿ ಚಲನಚಿತ್ರ ನಿರ್ಮಾಣಕ್ಕೆ ಅಡಿಪಾಯವಾಗಿವೆ ಎಂದು ಒತ್ತಿಹೇಳಿದರು.

ದೂರದರ್ಶನದ ಮಹಾನಿರ್ದೇಶಕಿ ಶ್ರೀಮತಿ ರೀನಾ ಸೋನೋವಾಲ್ ಕೌಲಿ ಅವರು ಸ್ವಾಗತ ಭಾಷಣ ಮಾಡಿದರು. ಭಾರತದ ಭಾಷಾ ಮತ್ತು ಸೃಜನಶೀಲ ವೈವಿಧ್ಯತೆಯನ್ನು ಮುನ್ನೆಲೆಗೆ ತರುವಲ್ಲಿ ಈ ಉಪಕ್ರಮದ ಮಹತ್ವವನ್ನು ಅವರು ವಿವರಿಸಿದರು. ಉದಯೋನ್ಮುಖ ಬರಹಗಾರರು ತಮ್ಮ ಮೂಲ ಆಲೋಚನೆಗಳನ್ನು ರಾಷ್ಟ್ರೀಯ ವೇದಿಕೆಯಲ್ಲಿ ಪ್ರಸ್ತುತಪಡಿಸಲು ಅವಕಾಶಗಳನ್ನು ಕಲ್ಪಿಸುವ ಅಗತ್ಯವನ್ನು ಅವರು ಒತ್ತಿಹೇಳಿದರು.
ಸ್ಕ್ರಿಪ್ಟ್ ಪ್ರಸ್ತುತಿಯ ಅವಧಿಯಲ್ಲಿ ಅಂತಿಮ ಸುತ್ತಿಗೆ ಆಯ್ಕೆಯಾದ ಹತ್ತು ಸ್ಪರ್ಧಿಗಳು ತಮ್ಮ ಮೂಲ ಕಥೆಗಳನ್ನು ಗಣ್ಯ ತೀರ್ಪುಗಾರರ ಮುಂದೆ ಮಂಡಿಸಿದರು. ಈ ತೀರ್ಪುಗಾರರ ಸಮಿತಿಯಲ್ಲಿ ಅತ್ಯುತ್ತಮ ಪೋಷಕ ನಟ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ನಟ ಶ್ರೀ ಮನೋಜ್ ಜೋಶಿ; ಭಾರತೀಯ ಇತಿಹಾಸ, ಸಂಸ್ಕೃತಿ ಮತ್ತು ಸಾಹಿತ್ಯ ಕ್ಷೇತ್ರಗಳ ಲೇಖಕ, ಸಂಪಾದಕ ಹಾಗೂ ಸ್ವತಂತ್ರ ಸಂಶೋಧಕ ಶ್ರೀ ಸಂದೀಪ್ ಬಾಲಕೃಷ್ಣ; ‘ಟಾಯ್ಲೆಟ್: ಏಕ್ ಪ್ರೇಮ್ ಕಥಾ’ ಮತ್ತು ‘ಬತ್ತಿ ಗುಲ್ ಮೀಟರ್ ಚಾಲೂ’ ಚಿತ್ರಗಳಿಗೆ ಹೆಸರಾದ ಚಲನಚಿತ್ರ ನಿರ್ದೇಶಕ ಹಾಗೂ ಸಂಕಲನಕಾರ ಶ್ರೀ ಶ್ರೀ ನಾರಾಯಣ್ ಸಿಂಗ್; ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ಪತ್ರಕರ್ತ, ಲೇಖಕ ಮತ್ತು ಚಲನಚಿತ್ರ ವಿಮರ್ಶಕ ಹಾಗೂ ಪುಣೆಯ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯ (ಎಫ್‌ಟಿಐಐ) ಆಡಳಿತ ಮಂಡಳಿಯ ಉಪಾಧ್ಯಕ್ಷ ಶ್ರೀ ಅನಂತ್ ವಿಜಯ್ ಅವರು ಸೇರಿದ್ದರು.
ಅಂತಿಮ ಸುತ್ತಿಗೆ ಆಯ್ಕೆಯಾದ ಸ್ಪರ್ಧಿಗಳ ಪೈಕಿ ಉತ್ತಮ ಸಾಧನೆ ಮಾಡಿದವರನ್ನು ಗುರುತಿಸಿ, ನಾಲ್ಕು, ಐದು ಮತ್ತು ಆರನೇ ಸ್ಥಾನ ಪಡೆದವರಿಗೆ ತಲಾ ₹50,000 ವಿಶೇಷ ಪ್ರಶಸ್ತಿಗಳನ್ನು ಸಹ ನೀಡಲಾಯಿತು. ಏಳು, ಎಂಟು, ಒಂಬತ್ತು ಮತ್ತು ಹತ್ತನೇ ಸ್ಥಾನ ಪಡೆದವರಿಗೆ ಪ್ರಶಂಸನಾ ಪ್ರಮಾಣಪತ್ರಗಳನ್ನು ನೀಡಲಾಯಿತು. ಅಂತಿಮ ಸುತ್ತಿಗೆ ಆಯ್ಕೆಯಾದ ಅತ್ಯುತ್ತಮ 30 ಬರಹಗಾರರಿಗೆ ಭಾಗವಹಿಸುವಿಕೆಯ ಪ್ರಮಾಣಪತ್ರಗಳನ್ನು ಪ್ರದಾನ ಮಾಡಲಾಯಿತು.

2026ರ ನವೆಂಬರ್ 21ರಿಂದ 23ರವರೆಗೆ ನಡೆದ ‘ಪೇಜ್ ಸೇ ಪಿಚ್ ತಕ್’ ಉಪಕ್ರಮವು ಉದಯೋನ್ಮುಖ ಬರಹಗಾರರು ಮತ್ತು ಚಲನಚಿತ್ರೋದ್ಯಮದ ನಡುವಿನ ಅಂತರವನ್ನು ಕಡಿಮೆ ಮಾಡುವ ಉದ್ದೇಶ ಹೊಂದಿತ್ತು. ಮೂಲ ಕಥೆಗಳು ಬೆಳ್ಳಿತೆರೆಯನ್ನು ತಲುಪಲು ವೇದಿಕೆ ಕಲ್ಪಿಸುವುದು ಇದರ ಆಶಯವಾಗಿದೆ. ವಾರ್ಷಿಕ ಉಪಕ್ರಮವಾಗಿ ರೂಪಿಸಲಾಗಿರುವ ಇದು, ಭರವಸೆಯ ಕಥೆಗಾರರನ್ನು ಚಲನಚಿತ್ರೋದ್ಯಮದ ವೃತ್ತಿಪರರೊಂದಿಗೆ ಸಂಪರ್ಕಿಸುವುದರ ಜೊತೆಗೆ ಅವರ ಕಥೆಗಳು ಪೂರ್ಣಪ್ರಮಾಣದ ಚಲನಚಿತ್ರಗಳು, ಸಾಕ್ಷ್ಯಚಿತ್ರಗಳು ಮತ್ತು ಕಿರುಚಿತ್ರಗಳಾಗಿ ರೂಪುಗೊಳ್ಳಲು ಅವಕಾಶಗಳನ್ನು ಸೃಷ್ಟಿಸುವ ಗುರಿ ಹೊಂದಿದೆ.
Read IFFILOID here: https://www.pib.gov.in/iffi/57/iffiLoid.aspx?yr=2026&lang=1®=48
*****