57th International Film Festival of India 2026
20 – 28 Nov 2026

ಇಫಿ 2026ರಲ್ಲಿ ವಿಶಿಷ್ಟ ಸಿನಿಮೀಯ ನಿರೂಪಣೆಯ ಮೂಲಕ ಸಾರ್ವತ್ರಿಕ ಮಾನವ ಭಾವನೆಗಳನ್ನು ಅನಾವರಣಗೊಳಿಸಿದ ‘ದಿ ಬ್ಲ್ಯಾಕ್ ಸೀ’


ಚಿತ್ರದಲ್ಲಿ ಮಾನವ ಬಯಕೆಗಳ ಅತಿರೇಕ ಮತ್ತು ಅವುಗಳ ಪರಿಣಾಮಗಳನ್ನು ವಿಶ್ಲೇಷಣೆ: ನಿರ್ದೇಶಕ ಅಲಾದಿನ್ ಮೊಸ್ತಫಾ

ಪ್ರಕಟಣಾ ದಿನಾಂಕ: 24 NOV 2026 1:12PMby PIB Bengaluruಪ್ರಕಟಣೆ ಐ.ಡಿ.: 2340854Views: 7

ಗೋವಾ, 24 ನವೆಂಬರ್ 2026

ಗೋವಾದಲ್ಲಿ ನಡೆಯುತ್ತಿರುವ 57ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (ಐಎಫ್ ಎಫ್ ಐ ) ಅಂಗವಾಗಿ, ಅರೇಬಿಕ್ ಭಾಷೆಯ ‘ದಿ ಬ್ಲ್ಯಾಕ್ ಸೀ’ ಚಿತ್ರ ನಿರ್ಮಾಣ ತಂಡವು ಭಾರತೀಯ ವಾರ್ತಾ ಶಾಖೆ (ಪ್ರೆಸ್ ಇನ್ಫರ್ಮೇಶನ್ ಬ್ಯೂರೊ -ಪಿಐಬಿ) ಮಾಧ್ಯಮ ಕೇಂದ್ರದಲ್ಲಿ ಪತ್ರಕರ್ತರೊಂದಿಗೆ ಇಂದು ಸಂವಾದ ನಡೆಸಿತು. ಚೊಚ್ಚಲ ನಿರ್ದೇಶಕ ಅಲಾದಿನ್ ಮೊಸ್ತಫಾ, ನಿರ್ಮಾಪಕ ಹಮ್ದಿ ಸಮೆಹ್ ಹಾಗೂ ಚಿತ್ರದ ಸಂಕಲನಕಾರ ಮತ್ತು ಕಾರ್ಯನಿರ್ವಾಹಕ ನಿರ್ಮಾಪಕ ಮೊತಾಜ್ ನಾಶಿ ಅವರು ಚಿತ್ರದ ಪರಿಕಲ್ಪನೆಯ ಹುಟ್ಟು, ಅದರ ಸಾರ್ವತ್ರಿಕ ಪ್ರಸ್ತುತತೆ ಮತ್ತು ಉದ್ದೇಶಪೂರ್ವಕವಾಗಿ ರೂಪಿಸಲಾದ ಸಂಕಲನ ಶೈಲಿಯ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

‘ದಿ ಬ್ಲ್ಯಾಕ್ ಸೀ’ ಚಿತ್ರಕ್ಕೆ ದೊರೆತ ಪ್ರೇರಣೆ ಮತ್ತು ತಮ್ಮ ಚೊಚ್ಚಲ ಚಿತ್ರಕ್ಕೆ ಈ ವಿಷಯವನ್ನು ಆಯ್ಕೆ ಮಾಡಿಕೊಂಡ ಕುರಿತು ಮಾತನಾಡಿದ ನಿರ್ದೇಶಕ ಅಲಾದಿನ್ ಮೊಸ್ತಫಾ, ಇಫಿಯಲ್ಲಿ ಚಿತ್ರವನ್ನು ಪ್ರದರ್ಶಿಸುತ್ತಿರುವುದಕ್ಕೂ ಅರಬ್ ಸಂಸ್ಕೃತಿಯ ಕಥೆಯೊಂದನ್ನು ಅಂತಾರಾಷ್ಟ್ರೀಯ ವೇದಿಕೆಗೆ ತರುತ್ತಿರುವುದಕ್ಕೂ ಸಂತಸ ವ್ಯಕ್ತಪಡಿಸಿದರು. ಚಿತ್ರದ ಕೇಂದ್ರ ಆಶಯವನ್ನು ವಿವರಿಸಿದ ಅವರು, ವ್ಯಕ್ತಿಗಳು ಯಾವುದೇ ಬೆಲೆ ತೆತ್ತಾದರೂ ತಮ್ಮ ಗುರಿಗಳನ್ನು ಸಾಧಿಸಲು ಮುಂದಾದಾಗ ಅನಿಯಂತ್ರಿತ ಮಾನವ ಬಯಕೆಗಳು ಹೇಗೆ ಅತಿರೇಕಕ್ಕೆ ತಲುಪುತ್ತವೆ ಎಂಬುದನ್ನು ಚಿತ್ರ ವಿಶ್ಲೇಷಿಸುತ್ತದೆ ಎಂದರು. ತಮ್ಮ ಮಹತ್ವಾಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ತೀವ್ರ ಸ್ವರೂಪದ ಕೃತ್ಯಗಳಿಗೆ ಮುಂದಾಗುವ ಜನರು ಎಷ್ಟರ ಮಟ್ಟಿಗೆ ಹೋಗಬಲ್ಲರು ಎಂಬ ಪ್ರಶ್ನೆಯನ್ನು ಚಿತ್ರ ಎತ್ತುತ್ತದೆ ಎಂದು ತಿಳಿಸಿದರು.

ಚಲನಚಿತ್ರೋತ್ಸವದ ಮೂಲಕ ಈಜಿಪ್ಟ್‌ನ ಚಿತ್ರವೊಂದನ್ನು ಭಾರತೀಯ ಹಾಗೂ ಜಾಗತಿಕ ಪ್ರೇಕ್ಷಕರಿಗೆ ಪರಿಚಯಿಸುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ನಿರ್ಮಾಪಕ ಹಮ್ದಿ ಸಮೆಹ್, ವಿಭಿನ್ನ ಸಂಸ್ಕೃತಿಗಳ ಜನರನ್ನೂ ತಲುಪಬಲ್ಲ ಕಥೆಯ ಸಾಮರ್ಥ್ಯವನ್ನು ಒತ್ತಿಹೇಳಿದರು. ‘ದಿ ಬ್ಲ್ಯಾಕ್ ಸೀ’ ಅರೇಬಿಕ್ ಭಾಷೆಯಲ್ಲಿ ನಿರ್ಮಾಣಗೊಂಡ ಈಜಿಪ್ಟ್‌ನ ಚಿತ್ರವಾಗಿದ್ದರೂ, ಅದು ಯಾವುದೇ ನಿರ್ದಿಷ್ಟ ಸಂಸ್ಕೃತಿ ಅಥವಾ ಭೌಗೋಳಿಕ ಪ್ರದೇಶಕ್ಕೆ ಸೀಮಿತವಾಗಿಲ್ಲ ಎಂದು ಅವರು ಹೇಳಿದರು. “ವಿವಿಧ ರಾಷ್ಟ್ರಗಳ ಜನರಲ್ಲಿ ಸಾಮಾನ್ಯವಾಗಿರುವ ಸಂಗತಿಯೊಂದನ್ನು ಈ ಚಿತ್ರ ಹೇಳುತ್ತದೆ. ಎಲ್ಲೆಡೆಯ ಮಾನವರು ಒಂದೇ ರೀತಿಯ ಮೂಲಭೂತ ಬಯಕೆಗಳನ್ನು ಅನುಭವಿಸುತ್ತಾರೆ. ಹೀಗಾಗಿಯೇ ಈ ಚಿತ್ರವು ಭಾರತದ ಹಾಗೂ ವಿಶ್ವದಾದ್ಯಂತದ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ,” ಎಂದು ಅಭಿಪ್ರಾಯಪಟ್ಟರು.

ಒಳಾಂಗಣದಲ್ಲೇ ಸೀಮಿತರಾಗಿ, ನಿಗೂಢ ಮನೋವೈಜ್ಞಾನಿಕ ಆ್ಯಪ್‌ನ ಸೆಳೆತಕ್ಕೆ ಒಳಗಾಗುವ ಪಾತ್ರಗಳ ಸುತ್ತ ಹೆಣೆದಿರುವ ಈ ಚಿತ್ರದ ತಾಂತ್ರಿಕ ಹಾಗೂ ನಿರೂಪಣಾ ವಿಧಾನಗಳ ಕುರಿತು ಸಂಕಲನಕಾರ ಮತ್ತು ಕಾರ್ಯನಿರ್ವಾಹಕ ನಿರ್ಮಾಪಕ ಮೊತಾಜ್ ನಾಶಿ ಮಾತನಾಡಿದರು. ಉದ್ವಿಗ್ನತೆ ಮತ್ತು ಬಂಧಿತ ಸ್ಥಿತಿಯ ಅನುಭವವನ್ನು ಮೂಡಿಸಲು ಲಯ ಹಾಗೂ ನಿರೂಪಣೆಯ ಗತಿಯನ್ನು ಬಳಸಿಕೊಂಡಿರುವುದಾಗಿ ಅವರು ವಿವರಿಸಿದರು. ಚಿತ್ರದ ಆಳವಾದ ಪರಿಕಲ್ಪನೆಗಳು ಎಲ್ಲ ಪ್ರೇಕ್ಷಕರಿಗೂ ಪರಿಣಾಮಕಾರಿಯಾಗಿ ತಲುಪುವಂತೆ ಮಾಡುವುದೇ ಪ್ರಮುಖ ಸವಾಲಾಗಿತ್ತು ಎಂದು ತಿಳಿಸಿದರು. ಕ್ಷಿಪ್ರ ಸಂಕಲನದ ಬದಲಿಗೆ, ಪ್ರೇಕ್ಷಕರು ಪಾತ್ರಗಳ ಅನುಭವಗಳಲ್ಲಿ ತಲ್ಲೀನರಾಗಿ, ಚಿತ್ರತಂಡವು ಹೇಳಲು ಬಯಸಿದ ಮೂಲ ಸಂದೇಶವನ್ನು ಅನುಭವಿಸುವಂತಾಗಲು ನಿಧಾನವಾದ, ಉದ್ದೇಶಪೂರ್ವಕ ನಿರೂಪಣಾ ಗತಿಯನ್ನು ತಂಡ ಆಯ್ಕೆ ಮಾಡಿಕೊಂಡಿತು ಎಂದರು.

ಚಲನಚಿತ್ರೋತ್ಸವದ ಆಯೋಜಕರು ಮತ್ತು ಭಾರತೀಯ ಪ್ರೇಕ್ಷಕರು ನೀಡಿದ ಆತ್ಮೀಯ ಸ್ವಾಗತಕ್ಕೆ ಚಿತ್ರತಂಡ ಕೃತಜ್ಞತೆ ಸಲ್ಲಿಸುವುದರೊಂದಿಗೆ ಪತ್ರಿಕಾಗೋಷ್ಠಿ ಮುಕ್ತಾಯಗೊಂಡಿತು. ನಿರ್ದಿಷ್ಟ ಭಾವಪರಿಸರವನ್ನು ಕಟ್ಟಿಕೊಡುವ ನಿರೂಪಣಾ ಗತಿ ಮತ್ತು ಚಿಂತನೆಗೆ ಹಚ್ಚುವ ಕಥಾವಸ್ತುವಿನ ಮೂಲಕ ‘ದಿ ಬ್ಲ್ಯಾಕ್ ಸೀ’, ಪ್ರಾದೇಶಿಕ ಕಥನವನ್ನು ಜಾಗತಿಕ ಮಾನವ ವಾಸ್ತವಗಳೊಂದಿಗೆ ಬೆಸೆಯುವ ಸಮ್ಮೋಹನಗೊಳಿಸುವ ಸಿನಿಮೀಯ ಅನುಭವವನ್ನು 57ನೇ ಇಫಿ ಪ್ರೇಕ್ಷಕರಿಗೆ ನೀಡುತ್ತದೆ. ಶ್ರೀಮತಿ ಸೃಷ್ಟಿ ಸುರೇಶ್ ಕುಲ್ಯೆ ಅವರು ಪತ್ರಿಕಾಗೋಷ್ಠಿಯನ್ನು ನಿರ್ವಹಿಸಿದರು.

ಈಜಿಪ್ಟ್‌ನ ಸಂಸ್ಕೃತಿಯಲ್ಲಿ ಬೇರೂರಿದ್ದರೂ, ವಿವಿಧ ಸಮಾಜಗಳ ಜನರ ಮನಮುಟ್ಟುವ ವಿಷಯಗಳನ್ನು ಅನ್ವೇಷಿಸುವ ‘ದಿ ಬ್ಲ್ಯಾಕ್ ಸೀ’, ಇಫಿ 2026ರ ‘ಗಡಿಗಳಿಲ್ಲದ ಕಥೆಗಳು’ ‘Stories Without Borders’ ಎಂಬ ಆಶಯದ ಸ್ಫೂರ್ತಿಯನ್ನು ಪ್ರತಿಬಿಂಬಿಸುತ್ತದೆ. ಈ ಚಿತ್ರ ಮಾನವ ಬಯಕೆಗಳ ಸಾರ್ವತ್ರಿಕ ಅನ್ವೇಷಣೆ ಮತ್ತು ವಿಶಿಷ್ಟ ಕಥನ ಶೈಲಿಯ ಮೂಲಕ, ಸಿನಿಮಾ ಭಾಷಿಕ ಹಾಗೂ ಸಾಂಸ್ಕೃತಿಕ ಗಡಿಗಳನ್ನು ಮೀರಿ, ಎಲ್ಲರಿಗೂ ಸಾಮಾನ್ಯವಾದ ಮಾನವ ಅನುಭವಗಳ ಮೂಲಕ ಪ್ರೇಕ್ಷಕರನ್ನು ಹೇಗೆ ಒಗ್ಗೂಡಿಸುತ್ತದೆ ಎಂಬುದನ್ನು ನಿರೂಪಿಸುತ್ತದೆ.

Read IFFILOID here: https://www.pib.gov.in/iffi/57/iffiLoid.aspx?yr=2026&lang=1&reg=48

*************


Great films resonate through passionate voices. Share your love for cinema with #IFFI2026 and #StoriesWithoutBorders. Tag us @pibindia on Instagram and @PIB_India on X, and we will help amplify your festival moments!

For accredited journalists, critics, bloggers, and vloggers seeking 1-on-1 interviews with filmmakers and festival juries, write to us at:
iffi.mediadesk@pib.gov.in with the subject line: Take One with PIB.


Official Release ID: 2340854
•
Media Centre: Goa
•
Festival Dates: Nov 20 – 28, 2026