57th International Film Festival of India 2026
20 – 28 Nov 2026

“ಗಂಗೆಯಿಂದ ಪೋಷಿಸಲ್ಪಟ್ಟ ಸಾವಿರಾರು ವರ್ಷಗಳ ಜೀವನಾನುಭವಗಳು”: ಐಎಫ್‌ಎಫ್‌ಐ 2026ರಲ್ಲಿ 'ಬನಾರಸ್' ಚಿತ್ರಕ್ಕಾಗಿ ಮತ್ತೆ ಒಂದಾದ ಭರತ್ ಬಾಲಾ ಮತ್ತು ಎ.ಆರ್. ರೆಹಮಾನ್


ಗಂಗಾ ತೀರದ ಹಿನ್ನೆಲೆಯಲ್ಲಿ ನಡೆಯುವ ಸಂಗೀತ, ನೆನಪು ಮತ್ತು ಪರಂಪರೆಯ ಆತ್ಮೀಯ ತಂದೆ-ಮಗಳ ಕಥಾನಕದ ಚಿತ್ರಕ್ಕೆ ಇಂಡಿಯನ್ ಪನೋರಮಾ ವಿಭಾಗದಲ್ಲಿ ಭಾರತೀಯ ಪ್ರೀಮಿಯರ್ ಪ್ರದರ್ಶನ

ಪರಿಚಿತ ಚೌಕಟ್ಟಿನಾಚೆಗೆ: 'ಬನಾರಸ್' ಚಿತ್ರಕ್ಕಾಗಿ ದೇವ ಗಾಂಧಾರದಂತಹ ಅಪರೂಪದ ರಾಗಗಳತ್ತ ಮುಖ ಮಾಡಿದ ರೆಹಮಾನ್

ಪ್ರಕಟಣಾ ದಿನಾಂಕ: 22 NOV 2026 7:29PMby PIB Bengaluruಪ್ರಕಟಣೆ ಐ.ಡಿ.: 2340104Views: 7

ಗೋವಾದಲ್ಲಿ ನಡೆಯುತ್ತಿರುವ 57 ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಇಂಡಿಯನ್ ಪನೋರಮಾ ವಿಭಾಗಕ್ಕೆ ಆಯ್ಕೆಯಾಗಿರುವ ತಂದೆ-ಮಗಳ ಕಥಾನಕದ ಚಿತ್ರ 'ಬನಾರಸ್' ಗಾಗಿ ಚಲನಚಿತ್ರ ನಿರ್ಮಾಪಕ ಭರತ್ ಬಾಲಾ ಅವರು, ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಅವರೊಂದಿಗೆ ಮತ್ತೆ ಒಂದಾಗಿದ್ದಾರೆ; ಈ ಚಿತ್ರವು ಇಲ್ಲಿ ತನ್ನ ಭಾರತೀಯ ಪ್ರೀಮಿಯರ್ ಪ್ರದರ್ಶನವನ್ನು ಕಾಣಲಿದೆ. ಅಭಿಷೇಕ್ ಬ್ಯಾನರ್ಜಿ, ಶಹಾನಾ ಗೋಸ್ವಾಮಿ, ನೀರಜ್ ಕಬಿ, ಛಾಯಾ ಕದಮ್, ಇಂದಿರಾ ತಿವಾರಿ ಮತ್ತು ಆಂಟನಿಥಾಸನ್ ಜೇಸುದಾಸನ್ ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಭಾರತೀಯ ಶಾಸ್ತ್ರೀಯ ಸಂಗೀತದ ಸಾಂಸ್ಕೃತಿಕ ಮತ್ತು ಸಂಗೀತಮಯ ಭೂದೃಶ್ಯದ ಹಿನ್ನೆಲೆಯಲ್ಲಿ ಹೆಣೆಯಲಾದ 'ಬನಾರಸ್', ತಂದೆ ಮತ್ತು ಮಗಳ ನಡುವಿನ ಸಂಬಂಧ, ಸಂಗೀತ ಪರಂಪರೆಯ ಉತ್ತರಾಧಿಕಾರ ಮತ್ತು ತಲೆಮಾರುಗಳ ನಡುವಿನ ಶಾಶ್ವತ ಬಾಂಧವ್ಯವನ್ನು ಅನ್ವೇಷಿಸುತ್ತದೆ. ನಿರ್ದೇಶಕ ಭರತ್ ಬಾಲಾ ಅವರು "ಗಂಗೆಯ ಶಾಶ್ವತ ಚೈತನ್ಯ" ಎಂದು ಬಣ್ಣಿಸುವ ಹಿನ್ನೆಲೆಯಲ್ಲಿ ಈ ಕಥೆ ಮೂಡಿಬರುತ್ತದೆ.

ಚಿತ್ರದ ಸಂಗೀತದ ಕುರಿತು ಮಾತನಾಡಿದ ಎ.ಆರ್. ರೆಹಮಾನ್ ಅವರು, ಹಿಂದೂಸ್ತಾನಿ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತಗಳೆರಡೂ ತಮ್ಮ ಸೃಜನಶೀಲ ಪಯಣದುದ್ದಕ್ಕೂ ನಿರಂತರ ಸ್ಫೂರ್ತಿಯ ಮೂಲವಾಗಿವೆ ಎಂದು ಹೇಳಿದರು. ರಾಗಗಳು ಮತ್ತು ಅವುಗಳೊಂದಿಗೆ ಬೆಸೆದುಕೊಂಡಿರುವ ಭಾವನೆಗಳು ತಮ್ಮ ಸಂಗೀತ ಅಭಿವ್ಯಕ್ತಿಯನ್ನು ರೂಪಿಸುವುದನ್ನು ಮುಂದುವರೆಸಿವೆ ಎಂದು ಅವರು ತಿಳಿಸಿದರು.

ಚಿತ್ರದ ಹಿನ್ನೆಲೆ ಸಂಗೀತಕ್ಕೆ ತಮ್ಮ ವಿಧಾನವನ್ನು ವಿವರಿಸುತ್ತಾ, ರೆಹಮಾನ್ ಅವರು, ತಮ್ಮ ಸಂಯೋಜನೆಗಳಲ್ಲಿ ರಾಗಗಳನ್ನು ಅಳವಡಿಸಿಕೊಳ್ಳುವ ಕುರಿತು ಮಾತನಾಡಿದರು. ಭಾರತದ ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತಾ, ಅದು ತಮ್ಮ ಸಂಗೀತ ಅನ್ವೇಷಣೆಗೆ ನಿರಂತರವಾಗಿ ಸ್ಫೂರ್ತಿ ನೀಡುತ್ತಿದೆ ಎಂದು ರೆಹಮಾನ್ ಹೇಳಿದರು. "ನಾನು ಪ್ರತಿಯೊಂದು ಸಂಸ್ಕೃತಿಯನ್ನೂ ಆನಂದಿಸುತ್ತೇನೆ" ಎಂದು ಹೇಳಿದ ಅವರು, ಪಂಜಾಬಿಯ ಶಕ್ತಿಯಿಂದ ಹಿಡಿದು ಬಂಗಾಳಿಯ ಮಾಧುರ್ಯದವರೆಗೆ ಪ್ರತಿಯೊಂದು ಭಾಷೆಯೂ ತನ್ನದೇ ಆದ ವಿಶಿಷ್ಟ ಸೊಗಡನ್ನು ಹೊಂದಿದೆ ಎಂದು ಉಲ್ಲೇಖಿಸಿದರು. ತಮ್ಮ ಸಂಗೀತದಲ್ಲಿ ಭಾಷೆಗಳು ಮತ್ತು ಅವುಗಳ ಸಾಂಸ್ಕೃತಿಕ ಸಾರವು ಪರಸ್ಪರ ಬೆರೆಯಲು ತಾವು ಅನೇಕವೇಳೆ ಅವಕಾಶ ನೀಡುವುದಾಗಿ ಅವರು ಹೇಳಿದರು.

'ಮರಿಯಾನ್' ಚಿತ್ರದ ನಂತರದ ದೀರ್ಘ ವಿರಾಮದ ಬಳಿಕ ಚಲನಚಿತ್ರ ನಿರ್ದೇಶನಕ್ಕೆ ಮರಳಿರುವ ಕುರಿತು ಮಾತನಾಡಿದ ಭರತ್ ಬಾಲಾ ಅವರು, ಈ ನಡುವಿನ ವರ್ಷಗಳಲ್ಲಿ ಹಲವಾರು ಕಿರುಚಿತ್ರಗಳಲ್ಲಿ ಕೆಲಸ ಮಾಡಿರುವುದಾಗಿ ತಿಳಿಸಿದರು. ತಮಗೆ ಹೇಳಲೇಬೇಕು ಎನಿಸುವ ಕಥೆಯೊಂದು ಎದುರಾದಾಗ ಕೈಗೊಳ್ಳುವ ಸೃಜನಶೀಲ ಪ್ರಕ್ರಿಯೆಯ ಮುಂದುವರಿಕೆಯೇ ಚಲನಚಿತ್ರ ನಿರ್ಮಾಣವಾಗಿದೆ ಎಂದು ಅವರು ಹೇಳಿದರು.

ಬನಾರಸ್ ನಗರವನ್ನು ಪರದೆಯ ಮೇಲೆ ಹಲವು ರೀತಿಯಲ್ಲಿ ಚಿತ್ರಿಸಲಾಗಿದ್ದರೂ, ಅನ್ವೇಷಿಸಲು ಇನ್ನೂ ಸಾಕಷ್ಟು ವಿಷಯಗಳನ್ನು ಈ ನಗರ ನೀಡುತ್ತಲೇ ಇದೆ ಎಂದು ಬಾಲಾ ಹೇಳಿದರು. ಇದನ್ನು "ಗಂಗೆಯಿಂದ ಪೋಷಿಸಲ್ಪಟ್ಟ ಸಾವಿರಾರು ವರ್ಷಗಳ ಜೀವನಾನುಭವಗಳಿಂದ" ರೂಪುಗೊಂಡ ಸ್ಥಳ ಎಂದು ಅವರು ಬಣ್ಣಿಸಿದರು.

ಬೆಳಕು, ಕ್ಯಾಮೆರಾ ಕೋನಗಳು, ಫ್ರೇಮಿಂಗ್ ಮತ್ತು ಸಂಯೋಜನೆಯ ಬಳಕೆಯ ಮೂಲಕ ನಟರ ಮುಖದಲ್ಲಿನ "ಭಾವನೆಗಳನ್ನು ಸೆರೆಹಿಡಿಯುವುದು" ತಮ್ಮ ಪ್ರಾಥಮಿಕ ಗಮನವಾಗಿತ್ತು ಎಂದು ಛಾಯಾಗ್ರಹಣ ನಿರ್ದೇಶಕ ಮಾರ್ಕ್ ಕೊನಿಂಕ್ಸ್ (Marc Koninckx) ಹೇಳಿದರು. ಪ್ರೇಕ್ಷಕರು ಹೊರಗಿನ ವೀಕ್ಷಕರಾಗಿ ಉಳಿಯುವ ಬದಲು ಚಲನಚಿತ್ರದ ಭಾಗವಾಗಿದ್ದಾರೆ ಎಂಬ ಭಾವನೆಯನ್ನು ಮೂಡಿಸುವುದೇ ತಮ್ಮ ಗುರಿಯಾಗಿತ್ತು ಎಂದು ಅವರು ತಿಳಿಸಿದರು.

"ಕ್ಯಾಮೆರಾ ಸಂಗೀತವಿದ್ದಂತೆ" ಎಂದು ಹೇಳಿದ ಅವರು, ಬಣ್ಣಗಳು ಮತ್ತು ದೃಶ್ಯ ಅಂಶಗಳನ್ನು ಜೊತೆಜೊತೆಯಾಗಿ ಇರಿಸುವ ಮೂಲಕ ದೃಶ್ಯ ಲಯವನ್ನು ಹೇಗೆ ಸೃಷ್ಟಿಸುತ್ತಾರೆ ಎಂಬುದನ್ನು ವಿವರಿಸಿದರು. "ಅತಿಯಾದ ಬಣ್ಣವು, ಬಣ್ಣವನ್ನೇ ಕೊಲ್ಲುತ್ತದೆ" ಎಂದೂ ಅವರು ಅಭಿಪ್ರಾಯಪಟ್ಟರು, ಪ್ರೇಕ್ಷಕರ ಗಮನವನ್ನು ಸೆಳೆಯಲು ಮತ್ತು ಭಾವನೆಗಳನ್ನು ಪ್ರಚೋದಿಸಲು ಬಣ್ಣಗಳನ್ನು ಆಯ್ದು ಬಳಸುವ ಮಹತ್ವವಡೇ ಬಗ್ಗೆ ಅವರು ಒತ್ತಿಹೇಳಿದರು. ಕುಂಭಮೇಳದಲ್ಲಿ ನೇರವಾಗಿ ಚಿತ್ರೀಕರಣ ನಡೆಸುವಾಗ ಈ ವಿಧಾನವು ವಿಶೇಷವಾಗಿ ಬಹಳ ಮುಖ್ಯವಾಗಿತ್ತು ಎಂದು ಅವರು ತಿಳಿಸಿದರು.

ತಾವು ನಿರ್ವಹಿಸುವ ಪಾತ್ರಗಳ ಶಾಶ್ವತ ಪ್ರಭಾವದ ಕುರಿತು ಚಿಂತನೆ ಹಂಚಿಕೊಂಡ ನಟ ನೀರಜ್ ಕಬಿ ಅವರು, ಆ ಪಾತ್ರಗಳು ಅನೇಕವೇಳೆ ತಮ್ಮ ನಿಜ ಜೀವನದೊಳಗೂ ಇಳಿದು ತಮ್ಮದೇ ಒಂದು ಭಾಗವಾಗುತ್ತವೆ ಎಂದು ಹೇಳಿದರು. 'ಬನಾರಸ್' ಚಿತ್ರದಲ್ಲಿನ ಅವರ ಪಾತ್ರವು ಬುದ್ಧಿಮಾಂದ್ಯತೆಯೊಂದಿಗೆ ಬದುಕುತ್ತಿರುತ್ತದೆ. ಈ ಪಾತ್ರವನ್ನು ನಿರ್ವಹಿಸುವುದು ಭವಿಷ್ಯವೇ ಅಸ್ತಿತ್ವದಲ್ಲಿಲ್ಲದ ಮತ್ತು ವರ್ತಮಾನವೂ ಇಲ್ಲದ ತಮ್ಮದೇ ಬಾಲ್ಯದ ಸ್ಥಿತಿಯನ್ನು ನೆನಪಿಗೆ ತಂದಿತು ಎಂದು ಅವರು ಹೇಳಿದರು.

ನಿಯಂತ್ರಿತ ಸ್ಟುಡಿಯೋ ಸೆಟ್‌ಗಳಲ್ಲಿ ಕೆಲಸ ಮಾಡುವುದಕ್ಕೆ ವ್ಯತಿರಿಕ್ತವಾಗಿ, ಮಹಾ ಕುಂಭಮೇಳದಲ್ಲಿ ನೇರವಾಗಿ ಚಿತ್ರೀಕರಣ ನಡೆಸುವ ಸವಾಲುಗಳು ಮತ್ತು ಸ್ವಾಭಾವಿಕತೆಯ ಕುರಿತು ನಟ ಅಭಿಷೇಕ್ ಬ್ಯಾನರ್ಜಿ ಮಾತನಾಡಿದರು. ಬೃಹತ್ ಜನಸಮೂಹದ ನಡುವೆ ಅಭಿನಯಿಸುವುದು ಗಮನಾರ್ಹ ಅನಿಶ್ಚಿತತೆಯನ್ನು ಒಳಗೊಂಡಿತ್ತು, ಇದರಿಂದಾಗಿ ನಟ ಮತ್ತು ನಿರ್ದೇಶಕರ ನಡುವಿನ ನಂಬಿಕೆಯು ವಿಶೇಷವಾಗಿ ಮುಖ್ಯವಾಗಿತ್ತು ಎಂದು ಅವರು ಹೇಳಿದರು. ಈ ಅನುಭವವು ಅವರನ್ನು ಕಾಲೇಜು ದಿನಗಳಲ್ಲಿ ಬೀದಿ ನಾಟಕಗಳನ್ನು ಪ್ರದರ್ಶಿಸುತ್ತಿದ್ದ ದಿನಗಳಿಗೆ ಕರೆದೊಯ್ಯಿತು. ಈ ಚಿತ್ರೀಕರಣವನ್ನು "ಬೀದಿ ಸಿನಿಮಾ" ಎಂದು ಬಣ್ಣಿಸಿದ ಅವರು, ಇದು ನಟನಾಗಿ ಮತ್ತು ವ್ಯಕ್ತಿಯಾಗಿ ತಮ್ಮನ್ನು ರೂಪಾಂತರಗೊಳಿಸಿತು ಎಂದು ಹೇಳಿದರು.

ತಮ್ಮ ಸಂಗೀತವಿರುವ ಎರಡು ಚಲನಚಿತ್ರಗಳಾದ "ಬನಾರಸ್" ಮತ್ತು "ರಾಮಾಯಣ", 57ನೇ ಐಎಫ್‌ಎಫ್‌ಐನಲ್ಲಿ ಪ್ರದರ್ಶನಗೊಳ್ಳುತ್ತಿರುವುದಕ್ಕೆ ರೆಹಮಾನ್ ಸಂತಸ ವ್ಯಕ್ತಪಡಿಸಿದರು; ಇದು ವೈವಿಧ್ಯಮಯ ಸಿನಿಮಾ ಕಥನಗಳ ಉತ್ಸವದ ಸಂಭ್ರಮಾಚರಣೆಯನ್ನು ಮತ್ತು ಭಾರತದ ಕಥೆ ಹೇಳುವ ಪರಂಪರೆಗೆ ಸಂಗೀತ ನೀಡುತ್ತಿರುವ ಶಾಶ್ವತ ಕೊಡುಗೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

ಶ್ರೀ ಮಹೇಶ್ ಕುಮಾರ್ ಅವರು ಈ ಗೋಷ್ಠಿಯನ್ನು ನಿರ್ವಹಿಸಿದರು.

ಪತ್ರಿಕಾಗೋಷ್ಠಿಯನ್ನು ಇಲ್ಲಿ ವೀಕ್ಷಿಸಿ:

ಐಎಫ್‌ಎಫ್‌ಐಲಾಯ್ಡ್ (IFFILOID) ಅನ್ನು ಇಲ್ಲಿ ಓದಿ: https://www.pib.gov.in/iffi/57/iffiLoid.aspx?yr=2026&lang=1&reg=48

 

*****


Great films resonate through passionate voices. Share your love for cinema with #IFFI2026 and #StoriesWithoutBorders. Tag us @pibindia on Instagram and @PIB_India on X, and we will help amplify your festival moments!

For accredited journalists, critics, bloggers, and vloggers seeking 1-on-1 interviews with filmmakers and festival juries, write to us at:
iffi.mediadesk@pib.gov.in with the subject line: Take One with PIB.


Official Release ID: 2340104
•
Media Centre: Goa
•
Festival Dates: Nov 20 – 28, 2026