1926ನೇ ವರ್ಷ ಭಾರತೀಯ ಚಿತ್ರರಂಗದ ಪಾಲಿಗೆ ಅಸಾಧಾರಣ ವರ್ಷವಾಗಿತ್ತು. ದೇಶದ ವಿವಿಧ ಭಾಗಗಳ ವಿಭಿನ್ನ ಕುಟುಂಬಗಳು ಮತ್ತು ಸಾಂಸ್ಕೃತಿಕ ಪರಂಪರೆಗಳಲ್ಲಿ ಜನಿಸಿದ ಏಳು ಅದ್ಭುತ ಪ್ರತಿಭೆಗಳು, ಬೆಳ್ಳಿತೆರೆಯ ಮೇಲೆ ಅಳಿಸಲಾಗದ ಛಾಪು ಮೂಡಿಸುವ ಮೂಲಕ ಚಿತ್ರರಂಗದ ಇತಿಹಾಸದಲ್ಲಿ ಶಾಶ್ವತ ಸ್ಥಾನ ಪಡೆದರು. ಅವರುಗಳೆಂದರೆ ಬಂಗಾಳಿ ಚಿತ್ರರಂಗದ ದಂತಕಥೆ, 'ಮಹಾನಾಯಕ' ಉತ್ತಮ್ ಕುಮಾರ್; ಹಿಂದಿ ಚಿತ್ರರಂಗದ ಅತ್ಯಂತ ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸಿದ ಖ್ಯಾತ ಚಿತ್ರ ನಿರ್ದೇಶಕ ಶಕ್ತಿ ಸಾಮಂತ್; ತಮ್ಮ ಕಾಲಾತೀತ ಸಂಗೀತ ಸಂಯೋಜನೆಗಳ ಮೂಲಕ ತಲೆಮಾರುಗಳನ್ನು ರಂಜಿಸುತ್ತಿರುವ ಸಂಗೀತ ಮಾಂತ್ರಿಕ ಒ.ಪಿ. ನಯ್ಯರ್; ಗ್ರಾಮೀಣ, ಐತಿಹಾಸಿಕ ಮತ್ತು ಪೌರಾಣಿಕ ಕಥಾನಕಗಳಲ್ಲಿನ ಸ್ಮರಣೀಯ ಪಾತ್ರಗಳ ಮೂಲಕ ಮರಾಠಿ ಚಿತ್ರರಂಗವನ್ನು ಶ್ರೀಮಂತಗೊಳಿಸಿದ ಪದ್ಮಶ್ರೀ ಪುರಸ್ಕೃತ ಸೂರ್ಯಕಾಂತ್ ಮಾಂಧರೆ; ಮಲಯಾಳಂ ಚಿತ್ರರಂಗದ ಎಂದೆಂದಿಗೂ ಜನಪ್ರಿಯ ಪ್ರಣಯ ನಾಯಕ ಪ್ರೇಮ್ ನಜೀರ್; ವಿಶಿಷ್ಟ ಧ್ವನಿ ಮತ್ತು ಅನುಪಮ ಅಭಿನಯ ಶೈಲಿಯಿಂದ ಬಾಲಿವುಡ್ನಲ್ಲಿ ವಿಶಿಷ್ಟ ಅಭಿಮಾನಿ ಬಳಗವನ್ನು ಹೊಂದಿದ್ದ ನಟ ರಾಜ್ ಕುಮಾರ್; ಹಾಗೂ ಚೌದ್ವೀನ್ ಕಾ ಚಾಂದ್, ಗುಮ್ರಾಹ್, ವಕ್ತ್ ಮತ್ತು ಹಮ್ರಾಜ್ ನಂತಹ ಸದಾ ಸ್ಮರಣೀಯ ಸಂಗೀತ ಸಂಪತ್ತನ್ನು ನೀಡಿದ ಪ್ರತಿಭಾವಂತ ಸಂಗೀತ ಸಂಯೋಜಕ ರವಿ (ಬಾಂಬೆ ರವಿ).
ನೂರು ವರ್ಷಗಳ ಬಳಿಕ, 57ನೇ ಭಾರತ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್ಎಫ್ಐ) ಈ ಏಳು ದಿಗ್ಗಜರ ಜನ್ಮಶತಮಾನೋತ್ಸವವನ್ನು ಹಿಂದಿ, ಬಂಗಾಳಿ, ಮಲಯಾಳಂ ಮತ್ತು ಮರಾಠಿ ಸೇರಿದಂತೆ ನಾಲ್ಕು ಭಾಷೆಗಳ ಐದು ಮರುಸ್ಥಾಪಿತ ಚಿತ್ರಗಳ ಪ್ರದರ್ಶನದ ಮೂಲಕ ಆಚರಿಸುತ್ತಿದೆ. ಈ ಚಿತ್ರಗಳು ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಈ ಕಲಾವಿದರ ಅತ್ಯಂತ ಜನಪ್ರಿಯ ಕೃತಿಗಳಲ್ಲಿ ಸೇರಿವೆ. ಭಾರತದ ಶ್ರೀಮಂತ ಚಲನಚಿತ್ರ ಪರಂಪರೆಯನ್ನು ಸಂರಕ್ಷಿಸುವುದು, ರಕ್ಷಿಸುವುದು, ಡಿಜಿಟಲೀಕರಣಗೊಳಿಸುವುದು ಮತ್ತು ಪುನರುಜ್ಜೀವನಗೊಳಿಸುವ ಉದ್ದೇಶದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಪ್ರಮುಖ ಉಪಕ್ರಮವಾದ ರಾಷ್ಟ್ರೀಯ ಚಲನಚಿತ್ರ ಪರಂಪರೆ ಮಿಷನ್ ಅಡಿಯಲ್ಲಿ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮವು (ಎನ್ಎಫ್ಡಿಸಿ) ಈ ಎಲ್ಲ ಚಿತ್ರಗಳನ್ನು ಪುನರುಜ್ಜೀವನಗೊಳಿಸಿದೆ.
ಚೌರಂಗಿ ಚಿತ್ರದಲ್ಲಿ ಉತ್ತಮ್ ಕುಮಾರ್
1965ರಲ್ಲಿ ಬಿಡುಗಡೆಯಾದ ಬಂಗಾಳಿ ಚಿತ್ರರಂಗದ ಶ್ರೇಷ್ಠ ಚಿತ್ರಗಳಲ್ಲೊಂದಾದ ‘ಚೌರಂಗಿ’, ಹಲವು ಪ್ರಮುಖ ಕಲಾವಿದರು ಒಟ್ಟಾಗಿ ನೀಡಿದ ಅತ್ಯುತ್ತಮ ಅಭಿನಯಕ್ಕೆ ಸಾಕ್ಷಿಯಾಯಿತು. ಬಂಗಾಳಿ ಚಿತ್ರರಂಗದ ಅತ್ಯಂತ ಜನಪ್ರಿಯ ತಾರೆಯಾಗಿದ್ದ ಉತ್ತಮ್ ಕುಮಾರ್ ಅವರು ತಮ್ಮ ಜನಪ್ರಿಯತೆ ಉತ್ತುಂಗದಲ್ಲಿದ್ದ ಸಮಯದಲ್ಲೇ ಈ ಚಿತ್ರದಲ್ಲಿ ಸತ್ಯಸುಂದರ್ 'ಸತಾ' ಬೋಸ್ ಪಾತ್ರವನ್ನು ಒಪ್ಪಿಕೊಂಡರು. ಉತ್ತಮ್ ಕುಮಾರ್ ಅವರು 1948ರಲ್ಲಿ ನಟನಾಗಿ ತಮ್ಮ ವೃತ್ತಿಜೀವನ ಆರಂಭಿಸಿದರು. ನಂತರ ಮೂರು ದಶಕಗಳ ಅವಧಿಯಲ್ಲಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, 'ಸಪ್ತಪದಿ', 'ಹಾರಾನೋ ಸುರ್', 'ನಾಯಕ್', 'ಚಿರಿಯಾಖಾನ', 'ಅಮಾನುಷ್' ಸೇರಿದಂತೆ ಹಲವು ಶ್ರೇಷ್ಠ ಚಿತ್ರಗಳನ್ನು ನೀಡಿದರು. ರಂಗಭೂಮಿಯ ಅಭಿನಯ ಶೈಲಿಯಲ್ಲಿದ್ದ ಬಂಗಾಳಿ ಚಿತ್ರರಂಗವನ್ನು ನಗರ ಜೀವನದ ಪ್ರಣಯಭರಿತ ಅಭಿವ್ಯಕ್ತಿಯತ್ತ ಕೊಂಡೊಯ್ದವರು ಅವರು.

ಉತ್ತಮ್ ಕುಮಾರ್

ನಿರ್ದೇಶಕ ಶಕ್ತಿ ಸಾಮಂತ್ ಮತ್ತು ಸಂಗೀತ ನಿರ್ದೇಶಕ ಒ.ಪಿ. ನಯ್ಯರ್ ಅವರ ಕಾಶ್ಮೀರ್ ಕಿ ಕಲಿ
ಕಾಶ್ಮೀರ್ ಕಿ ಕಲಿ ಚಿತ್ರವು ನಿರ್ದೇಶಕ ಮತ್ತು ಸಂಗೀತ ನಿರ್ದೇಶಕರಾಗಿ ಈ ಇಬ್ಬರೂ ದಿಗ್ಗಜರ ವೃತ್ತಿಜೀವನಕ್ಕೆ ಉತ್ತುಂಗದ ಮೆರುಗು ನೀಡಿತು. ಶಕ್ತಿ ಸಾಮಂತ್ ಅವರು ಕಾಶ್ಮೀರದ ಸ್ವರ್ಗಸದೃಶ ಸೌಂದರ್ಯವನ್ನು ಬಣ್ಣಗಳಲ್ಲಿ ಚಿತ್ರೀಕರಿಸಿ ಪ್ರೇಕ್ಷಕರ ಮುಂದಿಟ್ಟರೆ, ಒ.ಪಿ. ನಯ್ಯರ್ ಅವರು ಇಂದಿಗೂ ಜನರನ್ನು ಮಂತ್ರಮುಗ್ಧಗೊಳಿಸುವ ಸಂಗೀತವನ್ನು ಸಂಯೋಜಿಸಿದರು.
ಶಕ್ತಿ ಸಾಮಂತ್ ಅವರು 1948ರಲ್ಲಿ ಸಹಾಯಕ ನಿರ್ದೇಶಕರಾಗಿ ತಮ್ಮ ವೃತ್ತಿಜೀವನ ಆರಂಭಿಸಿದರು. 1955ರ ʼಬಹುʼ ಚಿತ್ರದ ಮೂಲಕ ನಿರ್ದೇಶಕರಾಗಿ ಪದಾರ್ಪಣೆ ಮಾಡಿದರು. ತಮ್ಮದೇ ಆದ 'ಶಕ್ತಿ ಫಿಲ್ಮ್ಸ್' ನಿರ್ಮಾಣ ಸಂಸ್ಥೆಯಡಿ ಅವರು ಒಟ್ಟು 43 ಚಿತ್ರಗಳನ್ನು ನಿರ್ದೇಶಿಸಿದ್ದು, ಅವುಗಳಲ್ಲಿ 37 ಹಿಂದಿ ಮತ್ತು 6 ಬಂಗಾಳಿ ಚಿತ್ರಗಳಾಗಿವೆ. 'ಹೌರಾ ಬ್ರಿಡ್ಜ್', 'ಚೈನಾ ಟೌನ್', 'ಆನ್ ಈವ್ನಿಂಗ್ ಇನ್ ಪ್ಯಾರಿಸ್', 'ಆರಾಧನಾ', 'ಕಟಿ ಪತಂಗ್', 'ಅಮರ್ ಪ್ರೇಮ್' ಮತ್ತು 'ಅನುರಾಗ್' ಸೇರಿದಂತೆ ಹಿಂದಿ ಚಿತ್ರರಂಗಕ್ಕೆ ಹಲವು ಶ್ರೇಷ್ಠ ಚಿತ್ರಗಳನ್ನು ನೀಡಿದ್ದಾರೆ.
ಓಂಕಾರ್ ಪ್ರಸಾದ್ ನಯ್ಯರ್ ಅವರು 1952ರ ʼಆಸ್ಮಾನ್ʼ ಚಿತ್ರದ ಮೂಲಕ ಚಲನಚಿತ್ರರಂಗದಲ್ಲಿ ತಮ್ಮ ವೃತ್ತಿಜೀವನ ಆರಂಭಿಸಿದರು. ನಂತರ 'ಆರ್ ಪಾರ್', 'ಮಿಸ್ಟರ್ ಅಂಡ್ ಮಿಸೆಸ್ 55', 'ಸಿಐಡಿ', 'ನಯಾ ದೌರ್' ಮತ್ತು 'ಹೌರಾ ಬ್ರಿಡ್ಜ್' ಚಿತ್ರಗಳಿಗೆ ಸಂಗೀತ ಸಂಯೋಜಿಸಿದರು. ಖ್ಯಾತ ಗಾಯಕರಾದ ಮೊಹಮ್ಮದ್ ರಫಿ, ಆಶಾ ಭೋಸ್ಲೆ ಮತ್ತು ಗೀತಾ ದತ್ ಅವರೊಂದಿಗಿನ ಸಹಯೋಗದಲ್ಲಿ ಹಿಂದಿ ಚಿತ್ರರಂಗದ ಸಾರ್ವಕಾಲಿಕ ಜನಪ್ರಿಯ ಹಾಡುಗಳನ್ನು ನೀಡಿದ್ದಾರೆ. ಕುದುರೆ ಓಟದ ಲಯವನ್ನು ಹೋಲುವ ಸಂಗೀತದ ಗತಿ ಮತ್ತು ಢೋಲಕ್ನ ತಾಳಗಳನ್ನು ಬಳಸುವ ಮೂಲಕ ಅವರು ವಿಶಿಷ್ಟ ಸಂಗೀತ ಶೈಲಿಯನ್ನು ರೂಪಿಸಿದರು. ಈ ಸಂಗೀತ ಶೈಲಿಯನ್ನು ಪ್ರೇಕ್ಷಕರು ಬಹುವಾಗಿ ಮೆಚ್ಚಿಕೊಂಡಿದ್ದರು.

ಶಕ್ತಿ ಸಾಮಂತ್ ಒ.ಪಿ. ನಯ್ಯರ್

ಸಾಧಿ ಮಾನಸೇ ಚಿತ್ರದಲ್ಲಿ ಸೂರ್ಯಕಾಂತ್ ಮಾಂಧರೆ
ಸೂರ್ಯಕಾಂತ್ ಮಾಂಧರೆ ಅವರನ್ನು ಬಾಲಕನಾಗಿದ್ದಾಗಲೇ ಅವರ ಮಾರ್ಗದರ್ಶಕರಾದ ಭಾಲ್ಜಿ ಪೆಂಡಾರ್ಕರ್ ಗುರುತಿಸಿ, ಬಾಲನಟನಾಗಿ ಚಿತ್ರರಂಗಕ್ಕೆ ಪರಿಚಯಿಸಿದರು. ಐದು ದಶಕಗಳ ಕಾಲ ತಮ್ಮ ವೃತ್ತಿಜೀವನದಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅವರು, ಸಾಂಗ್ತ್ಯೇ ಐಕಾ, ಕನ್ಯಾದಾನ್, ಮೊಹಿತ್ಯಾಂಚಿ ಮಂಜುಳಾ ಮತ್ತು ಮಲ್ಹಾರಿ ಮಾರ್ತಾಂಡ್ ಸೇರಿದಂತೆ ಹಲವು ಚಿತ್ರಗಳ ಮೂಲಕ ಮರಾಠಿ ಚಿತ್ರರಂಗಕ್ಕೆ ಸ್ಮರಣೀಯ ಪಾತ್ರಗಳನ್ನು ನೀಡಿದ್ದಾರೆ. ಗ್ರಾಮೀಣ ಬದುಕು, ಐತಿಹಾಸಿಕ ಮತ್ತು ಪೌರಾಣಿಕ ಕಥಾನಕಗಳಲ್ಲಿನ ವೀರ ಪಾತ್ರಗಳವರೆಗೆ ಅವರ ಅಭಿನಯದ ವ್ಯಾಪ್ತಿ ವಿಸ್ತರಿಸಿತ್ತು.
1965ರ ಶ್ರೇಷ್ಠ ಚಿತ್ರ ʼಸಾಧಿ ಮಾನಸೇʼಯಲ್ಲಿ ಅವರು ಶಂಕರ ಎಂಬ ಕಮ್ಮಾರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯಾವುದೇ ಆಡಂಬರವಿಲ್ಲದ ಗಟ್ಟಿಮುಟ್ಟಾದ ವ್ಯಕ್ತಿತ್ವ, ಶ್ರಮದ ಘನತೆ ಮತ್ತು ತಪ್ಪಾಗಿ ಅರ್ಥೈಸಲ್ಪಡುವ ನೋವನ್ನು ಈ ಪಾತ್ರ ಪ್ರತಿನಿಧಿಸುತ್ತದೆ. ಹಲವು ಚಿತ್ರಗಳಲ್ಲಿ ಅವರೊಂದಿಗೆ ನಟಿಸಿದ್ದ ಜಯಶ್ರೀ ಗಡ್ಕರ್ ಈ ಚಿತ್ರದಲ್ಲಿಯೂ ನಾಯಕಿಯಾಗಿ ಅಭಿನಯಿಸಿದ್ದಾರೆ. ಈ ಚಿತ್ರದ ಮತ್ತೊಂದು ವಿಶೇಷವೆಂದರೆ, ದಂತಕಥೆ ಗಾಯಕಿ ಲತಾ ಮಂಗೇಶ್ಕರ್ ಅವರು 'ಆನಂದಘನ' ಎಂಬ ಗುಪ್ತನಾಮದಲ್ಲಿ ಇದಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಮರಾಠಿ ಚಿತ್ರರಂಗದಲ್ಲಿ ತಮ್ಮ ಸಂಗೀತ ಸಂಯೋಜನೆಗಾಗಿ ಅವರು ಆಗಾಗ್ಗೆ ಇದೇ ಗುಪ್ತನಾಮವನ್ನು ಬಳಸುತ್ತಿದ್ದರು.

ಸೂರ್ಯಕಾಂತ್ ಮಾಂಧರೆ

ತುಲಾಭಾರಂ ಚಿತ್ರದಲ್ಲಿ ಪ್ರೇಮ್ ನಜೀರ್
ಮಲಯಾಳಂ ಚಿತ್ರರಂಗದ ಎಂದೆಂದಿಗೂ ಜನಪ್ರಿಯ ಪ್ರಣಯ ನಾಯಕ ಪ್ರೇಮ್ ನಜೀರ್ ಅವರ ಚಿತ್ರಗಳು ಸುಮಧುರ ಹಾಡುಗಳು ಮತ್ತು ನೈಜ ಬದುಕಿನ ಕಥನಗಳಿಗೆ ಹೆಸರುವಾಸಿಯಾಗಿವೆ. ʼತುಲಾಭಾರಂʼ ಚಿತ್ರದಲ್ಲಿ ಅವರು ಕಾರ್ಖಾನೆಯ ಕಾರ್ಮಿಕ ಹಾಗೂ ಕಾರ್ಮಿಕ ಸಂಘಟನೆಯ ಕಾರ್ಯಕರ್ತ ರಾಮ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಣಯ ನಾಯಕನ ಪಾತ್ರಗಳ ಮೂಲಕವೇ ಹೆಚ್ಚು ಪ್ರಸಿದ್ಧರಾಗಿದ್ದ ಈ ಖ್ಯಾತ ನಟ, ಈ ಚಿತ್ರದಲ್ಲಿ ತಮ್ಮ ಆಕರ್ಷಕ ನಾಯಕನ ಪರದೆಯ ವ್ಯಕ್ತಿತ್ವವನ್ನು ಬದಿಗಿಟ್ಟು, ಅತ್ಯಂತ ಸಹಜ ಮತ್ತು ಸರಳ ಅಭಿನಯ ನೀಡಿದ್ದಾರೆ. ಇದು ಅವರ ವೃತ್ತಿಜೀವನದ ಅತ್ಯುತ್ತಮ ಅಭಿನಯಗಳಲ್ಲಿ ಒಂದೆಂದು ಹೇಳಬಹುದು.
'ಇರುಟ್ಟಿಂಟೆ ಆತ್ಮಾವು', 'ಮುರಾಪ್ಪೆಣ್ಣು' ಮತ್ತು 'ನದಿ'ಯಿಂದ ಹಿಡಿದು 'ಕಲ್ಲಿಚೆಲ್ಲಮ್ಮ', 'ವಿಡಾ ಪರಯುಂ ಮುನ್ಪೆ' ಮತ್ತು 'ಪಡಯೋಟ್ಟಂ' ಚಿತ್ರಗಳವರೆಗೆ ಪ್ರೇಮ್ ನಜೀರ್ ಅವರ ಅಭಿನಯವು ಪ್ರಣಯ ಪಾತ್ರಗಳಿಂದ ಪೌರಾಣಿಕ ಕಥಾನಕಗಳು ಮತ್ತು ಸಾಮಾಜಿಕ ಸುಧಾರಣೆಯ ವಿಷಯಗಳವರೆಗೆ ವಿಸ್ತರಿಸಿತ್ತು. 700ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕನಾಗಿ ನಟಿಸಿರುವುದು ಹಾಗೂ ಶೀಲಾ ಅವರೊಂದಿಗೆ 130 ಚಿತ್ರಗಳಲ್ಲಿ ಜೋಡಿಯಾಗಿ ಅಭಿನಯಿಸಿರುವುದಕ್ಕಾಗಿ ಅವರು ಎರಡು ಗಿನ್ನೆಸ್ ವಿಶ್ವ ದಾಖಲೆಗಳನ್ನು ಹೊಂದಿದ್ದಾರೆ. 1983ರಲ್ಲಿ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರೇಮ್ ನಜೀರ್

ವಕ್ತ್ ಚಿತ್ರದಲ್ಲಿ ನಟ ರಾಜ್ ಕುಮಾರ್ ಮತ್ತು ಸಂಗೀತ ನಿರ್ದೇಶಕ ಬಾಂಬೆ ರವಿ
ವಿಶಿಷ್ಟ ವ್ಯಕ್ತಿತ್ವ, ಗಂಭೀರ ಗಡುಸಾದ ಧ್ವನಿ, ಪ್ರಭಾವಶಾಲಿ ಸಂಭಾಷಣೆ ನಿರೂಪಣೆ ಮತ್ತು ಮರೆಯಲಾಗದ ವಿಶಿಷ್ಟ ಅಭಿನಯ ಶೈಲಿಯಿಂದ ಗುರುತಿಸಿಕೊಂಡಿದ್ದ ದಂತಕಥೆ ನಟ ರಾಜ್ ಕುಮಾರ್ ಅವರು, ಯಶ್ ಚೋಪ್ರಾ ಅವರ ಬಹುತಾರಾಗಣದ ʼವಕ್ತ್ ʼಚಿತ್ರದಲ್ಲಿ ಖ್ಯಾತ ಸಂಗೀತ ನಿರ್ದೇಶಕ ರವಿ ಅವರೊಂದಿಗೆ ಕೈಜೋಡಿಸಿದ್ದರು. ಈ ಚಿತ್ರದಲ್ಲಿ ರಾಜ್ ಕುಮಾರ್ ಅವರು ರಾಜಾ ಎಂಬ ಕಳ್ಳನ ಪಾತ್ರದಲ್ಲಿ ನೀಡಿದ ಆಕರ್ಷಕ ಅಭಿನಯ ಮತ್ತು ರವಿ ಅವರು ಸಂಯೋಜಿಸಿದ ಜನಪ್ರಿಯ ಹಾಡು 'ಏ ಮೇರಿ ಜೋಹ್ರಾ ಜಬೀನ್' ಇಂದಿಗೂ ಸ್ಮರಣೀಯವಾಗಿವೆ.
ರಾಜ್ ಕುಮಾರ್ ಅವರು 1952ರ ʼರಂಗೀಲಿʼ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. 'ನೌಶೆರ್ವಾನ್-ಎ-ಆದಿಲ್' ಹಾಗೂ 'ಮದರ್ ಇಂಡಿಯಾ' ಚಿತ್ರಗಳಲ್ಲಿನ ಅಭಿನಯದ ಮೂಲಕ ಗಮನ ಸೆಳೆದ ಅವರು, 1963ರ ʼದಿಲ್ ಏಕ್ ಮಂದಿರ್ʼ ಚಿತ್ರದ ಮೂಲಕ ತಮ್ಮ ನಟನಾ ಸಾಮರ್ಥ್ಯವನ್ನು ಮತ್ತಷ್ಟು ಸಾಬೀತುಪಡಿಸಿದರು. ನಂತರ 'ವಕ್ತ್', 'ಹೀರ್ ರಾಂಝಾ', 'ಪಕೀಜಾ', 'ತಿರಂಗಾ' ಸೇರಿದಂತೆ ಹಲವು ಚಿತ್ರಗಳಲ್ಲಿ ಸ್ಮರಣೀಯ ಪಾತ್ರಗಳನ್ನು ನಿರ್ವಹಿಸಿದರು.
ಮಲಯಾಳಂ ಚಿತ್ರರಂಗದಲ್ಲಿ ಬಾಂಬೆ ರವಿ ಎಂದೇ ಜನಪ್ರಿಯರಾಗಿರುವ ರವಿ ಶಂಕರ್ ಶರ್ಮಾ ಅವರು 1955ರ ʼವಚನ್ʼ ಚಿತ್ರದ ಮೂಲಕ ಹಿಂದಿ ಚಿತ್ರರಂಗದಲ್ಲಿ ತಮ್ಮ ವೃತ್ತಿಜೀವನ ಆರಂಭಿಸಿದರು. 'ಚೌಧ್ವಿ ಕಾ ಚಾಂದ್', 'ಗುಮ್ರಾಹ್', 'ವಕ್ತ್' ಮತ್ತು 'ಹಮ್ರಾಜ್' ಚಿತ್ರಗಳಿಗೆ ನೀಡಿದ ಸಂಗೀತಕ್ಕಾಗಿ ಅವರು ಪ್ರಸಿದ್ಧರಾಗಿದ್ದಾರೆ. 'ಪರಿಣಯಂ' ಮತ್ತು 'ಸುಕೃತಂ' ಚಿತ್ರಗಳ ಸಂಗೀತ ನಿರ್ದೇಶನಕ್ಕಾಗಿ ಅವರು ಅತ್ಯುತ್ತಮ ಸಂಗೀತ ನಿರ್ದೇಶನ ವಿಭಾಗದಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ.

ರಾಜ್ ಕುಮಾರ್ ರವಿ

ವಿಶೇಷವಾಗಿ ಆಯ್ಕೆ ಮಾಡಲಾದ ಈ 'ಶತಮಾನೋತ್ಸವ ಗೌರವಾರ್ಪಣೆ'ಗಳ ಮೂಲಕ 57ನೇ ಐಎಫ್ಎಫ್ಐ ಕೇವಲ ಏಳು ಅಸಾಧಾರಣ ವ್ಯಕ್ತಿತ್ವಗಳನ್ನು ಮಾತ್ರವಲ್ಲದೆ, ಅವರು ಚಿತ್ರರಂಗಕ್ಕೆ ನೀಡಿರುವ ಶಾಶ್ವತ ಸೃಜನಶೀಲ ಪರಂಪರೆಯನ್ನೂ ಸಂಭ್ರಮಿಸಲಿದೆ. ಅವರ ಸಾಧನೆಗಳು ಮುಂದಿನ ತಲೆಮಾರುಗಳಿಗೂ ಸ್ಫೂರ್ತಿ ನೀಡುತ್ತಿದ್ದು, ಭಾರತೀಯ ಚಿತ್ರರಂಗದ ಕಾಲಾತೀತ ಶ್ರೀಮಂತಿಕೆಯನ್ನು ಬೆಳಗುತ್ತಿವೆ.
ಅವರು ಜನಿಸಿ ಒಂದು ಶತಮಾನ ಕಳೆದಿದ್ದರೂ, ಈ ಏಳು ದಿಗ್ಗಜರ ಕೃತಿಗಳು ಭಾರತೀಯ ಚಿತ್ರರಂಗದ ಅಸಾಧಾರಣ ವೈವಿಧ್ಯತೆ, ಸೃಜನಶೀಲ ಮಹತ್ವಾಕಾಂಕ್ಷೆ ಮತ್ತು ಕಲಾತ್ಮಕ ಶ್ರೇಷ್ಠತೆಗೆ ಸಾಕ್ಷಿಯಾಗಿ ಉಳಿದಿವೆ. ಈ ಮರುಸ್ಥಾಪಿತ ಶ್ರೇಷ್ಠ ಚಿತ್ರಗಳ ಮೂಲಕ 57ನೇ ಐಎಫ್ಎಫ್ಐ, ಸ್ಮರಣೀಯ ಅಭಿನಯಗಳು, ಸುಮಧುರ ಸಂಗೀತ ಮತ್ತು ಕಥನಗಳನ್ನು ಮತ್ತೊಮ್ಮೆ ಆಸ್ವಾದಿಸುವ ಅವಕಾಶವನ್ನಷ್ಟೇ ಅಲ್ಲದೆ, ಈ ಕಲಾವಿದರು ರೂಪಿಸಲು ನೆರವಾದ ಚಲನಚಿತ್ರ ಪರಂಪರೆ ಮತ್ತು ಸಾಂಸ್ಕೃತಿಕ ಇತಿಹಾಸವನ್ನು ಮರುಪರಿಚಯಿಸಿಕೊಳ್ಳುವ ಅವಕಾಶವನ್ನೂ ಪ್ರೇಕ್ಷಕರಿಗೆ ಒದಗಿಸುತ್ತದೆ.
ಏಳು ಕಲಾವಿದರ ವೈಯಕ್ತಿಕ ಸಾಧನೆಗಳಿಗೆ ಸಲ್ಲಿಸುವ ಗೌರವಕ್ಕಿಂತಲೂ ಮಿಗಿಲಾಗಿ, ಈ ಜನ್ಮಶತಮಾನೋತ್ಸವ ಆಚರಣೆಯು ಭಾರತದ ಚಲನಚಿತ್ರ ಪರಂಪರೆಯನ್ನು ಸಂರಕ್ಷಿಸುವ ಮತ್ತು ಮುಂದಿನ ಪೀಳಿಗೆಗಳಿಗೂ ಅದನ್ನು ಲಭ್ಯವಾಗಿಸುವ ಮಹತ್ವವನ್ನು ಮತ್ತೊಮ್ಮೆ ದೃಢಪಡಿಸುತ್ತದೆ.
IFFILOID ಅನ್ನು ಇಲ್ಲಿ ಓದಿ: https://www.pib.gov.in/iffi/57/iffiLoid.aspx?yr=2026&lang=1®=48
*****