57th International Film Festival of India 2026
20 – 28 Nov 2026

57ನೇ ಐಎಫ್‌ಎಫ್‌ಐನಲ್ಲಿ 'ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೋ' (CMOT) ಆರನೇ ಆವೃತ್ತಿಯ ಉದ್ಘಾಟನೆ


'ಬೇರುಗಳು ಮತ್ತು ರೆಕ್ಕೆಗಳು: ನಮ್ಮ ಮೂಲಗಳನ್ನು ಗೌರವಿಸುತ್ತಾ, ನಮ್ಮ ಭವಿಷ್ಯವನ್ನು ಸ್ವಾಗತಿಸುವುದು' ಎಂಬ ಧ್ಯೇಯವಾಕ್ಯದಡಿ 48-ಗಂಟೆಗಳ ಚಲನಚಿತ್ರ ನಿರ್ಮಾಣ ಸವಾಲಿನಲ್ಲಿ ಭಾಗವಹಿಸಲಿರುವ ಭಾರತದಾದ್ಯಂತದ 100 ಯುವ ಸೃಜನಶೀಲ ಪ್ರತಿಭೆಗಳು

ತಮ್ಮ ಮೂಲ ಮತ್ತು ಸಂಸ್ಕೃತಿಯಿಂದ ಸ್ಫೂರ್ತಿ ಪಡೆಯುವಂತೆ ಯುವ ಚಲನಚಿತ್ರ ನಿರ್ಮಾಪಕರಿಗೆ ಕರೆ ನೀಡಿದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಚಂಚಲ್ ಕುಮಾರ್

ಪ್ರಕಟಣಾ ದಿನಾಂಕ: 21 NOV 2026 2:39PMby PIB Bengaluruಪ್ರಕಟಣೆ ಐ.ಡಿ.: 2339603Views: 15

ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮವು ಅನುಷ್ಠಾನಗೊಳಿಸುತ್ತಿರುವ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಉಪಕ್ರಮವಾದ 'ಕ್ರಿಯೇಟಿವ್ ಮೈಂಡ್ಸ್ ಆಫ್ ಟುಮಾರೋ' (CMOT) ನ ಆರನೇ ಆವೃತ್ತಿಯನ್ನು 57ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (IFFI) ಭಾಗವಾಗಿ ಇಂದು ಗೋವಾದ ಕಲಾ ಅಕಾಡೆಮಿಯಲ್ಲಿ ಉದ್ಘಾಟಿಸಲಾಯಿತು.

ಈ ಉಪಕ್ರಮವು ಭಾರತದಾದ್ಯಂತದ 100 ಯುವ ಸೃಜನಶೀಲ ಪ್ರತಿಭೆಗಳನ್ನು ಒಂದೆಡೆ ಸೇರಿಸುತ್ತಿದ್ದು, ಅವರಿಗೆ ಸಹಯೋಗ ಹೊಂದಲು, ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಮತ್ತು ಉದ್ಯಮದ ಅನುಭವವನ್ನು ಪಡೆಯಲು ವೇದಿಕೆಯನ್ನು ಒದಗಿಸುತ್ತದೆ.

ಉದ್ಘಾಟನಾ ಸಮಾರಂಭದಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಚಂಚಲ್ ಕುಮಾರ್, ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಪ್ರಭಾತ್, ಎಫ್‌ಟಿಐಐ (FTII) ಕುಲಸಚಿವ ಶ್ರೀ ಲೌಕಿಕ್ ಪಾರಖ್, ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀ ಕೆ. ಕೆ. ನಿರಾಲಾ, ಎನ್‌ಎಫ್‌ಡಿಸಿ (NFDC) ಅಧ್ಯಕ್ಷ ಶ್ರೀ ಜಿ. ಕೃಷ್ಣಕುಮಾರ್ ಮತ್ತು ಎನ್‌ಎಫ್‌ಡಿಸಿ ಪ್ರಧಾನ ವ್ಯವಸ್ಥಾಪಕ ಶ್ರೀ ಗೌತಮ್ ಭಾನೋಟ್ ಉಪಸ್ಥಿತರಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಚಂಚಲ್ ಕುಮಾರ್ ಅವರು, ಪ್ರತಿಯೊಬ್ಬ ಭಾಗವಹಿಸುವವರೂ ಈಗಾಗಲೇ ತಮ್ಮದೇ ಆದ ಛಾಪು ಮೂಡಿಸಿರುವುದರಿಂದ ಇಲ್ಲಿ ಉಪಸ್ಥಿತರಿದ್ದಾರೆ ಮತ್ತು ಮುಂದಿನ 48 ಗಂಟೆಗಳು ಆ ಪ್ರತಿಭೆಯನ್ನು ಚಲನಚಿತ್ರವಾಗಿ ಪರಿವರ್ತಿಸಲು ಅವರಿಗೆ ಅವಕಾಶವನ್ನು ನೀಡುತ್ತವೆ ಎಂದು ತಿಳಿಸಿದರು.

ಸಂಸ್ಕೃತಿ, ಭಾಷೆ ಮತ್ತು ಅನುಭವಗಳಿಂದ ನಮ್ಮ ಬೇರುಗಳು ರೂಪುಗೊಳ್ಳುತ್ತವೆ, ಆದರೆ ಕನಸುಗಳು, ಕಲ್ಪನೆ, ಕುತೂಹಲ ಮತ್ತು ಹೊಸದನ್ನು ಪ್ರಯತ್ನಿಸುವ ಧೈರ್ಯದಿಂದ ಹೊರಹೊಮ್ಮುತ್ತವೆ ಎಂದು ಅವರು ಅಭಿಪ್ರಾಯಪಟ್ಟರು. ಫ್ರೆಂಚ್ ತತ್ವಜ್ಞಾನಿ ಜೋಸೆಫ್ ಜೌಬರ್ಟ್ ಅವರನ್ನು ಉಲ್ಲೇಖಿಸಿದ ಅವರು, ಕಲ್ಪನೆಯು ಕನಸು ಕಾಣಲು ಸಹಾಯ ಮಾಡುತ್ತದೆ, ಕೌಶಲ್ಯವನ್ನು ಕಲಿಯುವುದು ಆ ಕನಸುಗಳಿಗೆ ದಿಕ್ಕು ನೀಡುತ್ತದೆ, ಮತ್ತು ಬೇರುಗಳು ಕಥೆಗಳಿಗೆ ಅವುಗಳ ಧ್ವನಿಯನ್ನು ನೀಡುತ್ತವೆ ಎಂದು ತಿಳಿಸಿದರು.

ತಮ್ಮ ಕಥೆಗಳ ವ್ಯಾಪ್ತಿಯನ್ನು ಸೀಮಿತಗೊಳಿಸದೆ, ತಮ್ಮ ಮೂಲದಿಂದ ಸ್ಫೂರ್ತಿ ಪಡೆಯುವಂತೆ ಅವರು ಭಾಗವಹಿಸುವವರಿಗೆ ಕರೆ ನೀಡಿದರು. ಭಾರತದ ಒಂದು ಸಣ್ಣ ಹಳ್ಳಿಯಿಂದ ಹುಟ್ಟಿದ ಕಥೆಯನ್ನು ಪ್ರಾಮಾಣಿಕತೆಯಿಂದ ನಿರೂಪಿಸಿದರೆ, ಅದು ಪ್ರಪಂಚದಾದ್ಯಂತದ ಪ್ರೇಕ್ಷಕರೊಂದಿಗೆ ಪ್ರತಿಧ್ವನಿಸಬಲ್ಲದು ಎಂದು ಕೂಡಾ ಅವರು ಅಭೋಪ್ರಾಯಪಟ್ಟರು.

ಸಿನಿಮಾ ಎಂಬುದು ಸಹಯೋಗದ ಕಲಾ ಪ್ರಕಾರವಾಗಿದೆ ಎಂದು ಅವರು ಒತ್ತಿ ಹೇಳಿದರು ಮತ್ತು ಪರಸ್ಪರರ ಮಾತುಗಳನ್ನು ಕೇಳುವಂತೆ, ತಮ್ಮ ತಂಡದ ಸದಸ್ಯರನ್ನು ನಂಬುವಂತೆ, ಪ್ರಯೋಗಗಳನ್ನು ಮಾಡುವಂತೆ, ಸೃಜನಶೀಲ ಸವಾಲುಗಳನ್ನು ಎದುರಿಸುವಂತೆ ಮತ್ತು ಪ್ರಕ್ರಿಯೆಯನ್ನು ಆನಂದಿಸುವಂತೆ ಭಾಗವಹಿಸುವವರಿಗೆ ಕರೆ ನೀಡಿದರು. ತಮ್ಮ ಬೇರುಗಳನ್ನು ಜೊತೆಯಲ್ಲಿ ಕೊಂಡೊಯ್ಯುವಂತೆ, ತಮ್ಮ ಕಲ್ಪನೆಗೆ ಹಾರಲು ಅವಕಾಶ ನೀಡುವಂತೆ ಮತ್ತು ತಮ್ಮ ಕಥೆಗಳನ್ನು ಜಗತ್ತಿಗೆ ಪ್ರಸ್ತುತಪಡಿಸುವಂತೆ ಅವರಿಗೆ ಕರೆ ನೀಡುವ ಮೂಲಕ ಅವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

ಉದ್ಘಾಟನಾ ಸಮಾರಂಭದ ಪ್ರಮುಖ ಆಕರ್ಷಣೆಯೆಂದರೆ 48-ಗಂಟೆಗಳ ಚಲನಚಿತ್ರ ನಿರ್ಮಾಣ ಸವಾಲಿಗೆ ಔಪಚಾರಿಕ ಚಾಲನೆ ನೀಡಿದ್ದು. ಕಾರ್ಯದರ್ಶಿಯವರು ವಿಶೇಷವಾಗಿ ವಿನ್ಯಾಸಗೊಳಿಸಲಾದ ಫಿಲ್ಮ್ ಸ್ಲೇಟ್ ಅನ್ನು ಸಾಂಪ್ರದಾಯಿಕವಾಗಿ ಬಾರಿಸುವ ಮೂಲಕ ಸವಾಲಿನ ಆರನೇ ಆವೃತ್ತಿಯ ಆರಂಭವನ್ನು ಗುರುತಿಸಿದರು.

2026ರ ತಂಡವು ನಿರ್ದೇಶನ, ನಟನೆ, ಸಿನಿಮಾಟೋಗ್ರಫಿ, ಸಂಕಲನ ಮತ್ತು ಉಪಶೀರ್ಷಿಕೆ, ಚಿತ್ರಕಥೆ ಬರವಣಿಗೆ, ಹಿನ್ನೆಲೆ ಗಾಯನ, ಸಂಗೀತ ಸಂಯೋಜನೆ, ಧ್ವನಿ ಮುದ್ರಣ, ವಸ್ತ್ರ ವಿನ್ಯಾಸ, ಕೇಶವಿನ್ಯಾಸ ಮತ್ತು ಮೇಕಪ್, ಕಲಾ ನಿರ್ದೇಶನ, ಅನಿಮೇಷನ್, ವಿಶುವಲ್ ಎಫೆಕ್ಟ್ಸ್, ಆಗ್ಮೆಂಟೆಡ್ ರಿಯಾಲಿಟಿ, ವರ್ಚುವಲ್ ರಿಯಾಲಿಟಿ ಮತ್ತು ಹಿನ್ನೆಲೆ ಧ್ವನಿ ಹಾಗೂ ಡಬ್ಬಿಂಗ್ ಸೇರಿದಂತೆ 13 ಚಲನಚಿತ್ರ ನಿರ್ಮಾಣ ವಿಭಾಗಗಳನ್ನು ಪ್ರತಿನಿಧಿಸುವ 100 ಭಾಗವಹಿಸುವವರನ್ನು ಒಳಗೊಂಡಿದೆ.

ಎನ್‌ಎಫ್‌ಡಿಸಿ ಸಹಯೋಗದೊಂದಿಗೆ, ಪುಣೆಯ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ ನಡೆಸುತ್ತಿರುವ 48-ಗಂಟೆಗಳ ಚಲನಚಿತ್ರ ನಿರ್ಮಾಣ ಸವಾಲಿನಲ್ಲಿ, 5 ತಂಡಗಳಲ್ಲಿರುವ ಭಾಗವಹಿಸುವವರು ಒಟ್ಟಾಗಿ ಕೆಲಸ ಮಾಡಿ 48 ಗಂಟೆಗಳ ನಿರ್ಮಾಣ ಅವಧಿಯೊಳಗೆ ಕಿರುಚಿತ್ರಗಳನ್ನು ಪರಿಕಲ್ಪಿಸಿ ನಿರ್ಮಿಸಲಿದ್ದಾರೆ. ಪೂರ್ಣಗೊಂಡ ಚಲನಚಿತ್ರಗಳನ್ನು ಐಎಫ್‌ಎಫ್‌ಐನಲ್ಲಿ ವಿಶೇಷವಾಗಿ ಪ್ರದರ್ಶಿಸಲಾಗುವುದು ಮತ್ತು ಚಲನಚಿತ್ರೋದ್ಯಮದ ಪ್ರಖ್ಯಾತ ವೃತ್ತಿಪರರ ತೀರ್ಪುಗಾರರ ಮಂಡಳಿಯಿಂದ ಮೌಲ್ಯಮಾಪನ ಮಾಡಲಾಗುವುದು.

  

ಸಿಎಂಒಟಿ ಟ್ಯಾಲೆಂಟ್ ಕ್ಯಾಂಪ್, ಭಾಗವಹಿಸುವವರನ್ನು ಮಾಧ್ಯಮ ಮತ್ತು ಮನರಂಜನಾ ಉದ್ಯಮದೊಂದಿಗೆ ಮತ್ತಷ್ಟು ಬೆಸೆಯಲಿದ್ದು, ನಿರ್ಮಾಣ ಸಂಸ್ಥೆಗಳು, ಸ್ಟುಡಿಯೋಗಳು, ಮ್ಯೂಸಿಕ್ ಲೇಬಲ್‌ಗಳು, ಒಟಿಟಿ ವೇದಿಕೆಗಳು, ಪ್ರಸಾರಕರು ಮತ್ತು ಉದ್ಯಮದ ಇತರ ಪಾಲುದಾರರೊಂದಿಗೆ ಸಂವಾದ ನಡೆಸಲು ಅವಕಾಶಗಳನ್ನು ನೀಡುತ್ತದೆ.

2021ರಲ್ಲಿ ಪ್ರಾರಂಭವಾದಾಗಿನಿಂದ, ಸಿಎಂಒಟಿ ಉದಯೋನ್ಮುಖ ಸೃಜನಶೀಲ ವೃತ್ತಿಪರರನ್ನು ಮಾಧ್ಯಮ ಮತ್ತು ಮನರಂಜನಾ ಉದ್ಯಮದೊಂದಿಗೆ ಬೆಸೆಯುವ ವೇದಿಕೆಯಾಗಿ ಬೆಳೆದಿದೆ. ಇದರ ಹಳೆಯ ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ನಿರ್ಮಾಣಗಳಲ್ಲಿ ಕೆಲಸ ಮಾಡಿದ್ದಾರೆ ಮತ್ತು ಕೇನ್ಸ್, ಬರ್ಲಿನೇಲ್, ಟೊರೊಂಟೊ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಹಾಗೂ ಅಂತಾರಾಷ್ಟ್ರೀಯ ಎಮ್ಮಿ ಪ್ರಶಸ್ತಿಗಳು ಸೇರಿದಂತೆ ವಿವಿಧ ವೇದಿಕೆಗಳು ಮತ್ತು ಉತ್ಸವಗಳಲ್ಲಿ ಮನ್ನಣೆ ಪಡೆದಿದ್ದಾರೆ. ಗಮನಾರ್ಹ ಫಲಿತಾಂಶವೊಂದರಲ್ಲಿ, ಹಿಂದಿನ ಆವೃತ್ತಿಯ 18 ಭಾಗವಹಿಸುವವರು ಮುಖೇಶ್ ಛಾಬ್ರಾ ಕಾಸ್ಟಿಂಗ್ ಕಂಪನಿಯಿಂದ (MCCC) ಆಯ್ಕೆಯಾಗಿದ್ದು, ಇದು ಸಿಎಂಒಟಿ ಮೂಲಕ ಪೋಷಿಸಲಾದ ಪ್ರತಿಭೆಯನ್ನು ವೃತ್ತಿಪರ ಅವಕಾಶಗಳಾಗಿ ಪರಿವರ್ತಿಸುವತ್ತ ಒಂದು ಪ್ರೋತ್ಸಾಹದಾಯಕ ಹೆಜ್ಜೆಯನ್ನು ಗುರುತಿಸುತ್ತದೆ.

Read IFFILOID here: https://www.pib.gov.in/iffi/57/iffiLoid.aspx?yr=2026&lang=1&reg=48

 

*****


Great films resonate through passionate voices. Share your love for cinema with #IFFI2026 and #StoriesWithoutBorders. Tag us @pibindia on Instagram and @PIB_India on X, and we will help amplify your festival moments!

For accredited journalists, critics, bloggers, and vloggers seeking 1-on-1 interviews with filmmakers and festival juries, write to us at:
iffi.mediadesk@pib.gov.in with the subject line: Take One with PIB.


Official Release ID: 2339603
•
Media Centre: Goa
•
Festival Dates: Nov 20 – 28, 2026