ಕೃಷಿ ಸಚಿವಾಲಯ
azadi ka amrit mahotsav

ಐಸಿಎಆರ್-ಸಿ ಐ ಎಫ್ ಎನಿಂದ 14 ನೇ ಭಾರತೀಯ ಮೀನುಗಾರಿಕೆ ಮತ್ತು ಜಲಕೃಷಿ ಸಮಾವೇಶ ಆಯೋಜನೆ


ಮೀನುಗಾರಿಕೆ ಮತ್ತು ಜಲಕೃಷಿ ನಾವೀನ್ಯತೆಗಳು ಮತ್ತು ಸುಸ್ಥಿರ ಮಾರ್ಗಗಳನ್ನು ಅನ್ವೇಷಿಸಲು ಭಾರತ ಮತ್ತು ಆರು ದೇಶಗಳಿಂದ 1,000 ಕ್ಕೂ ಅಧಿಕ ಪ್ರತಿನಿಧಿಗಳನ್ನು ಒಗ್ಗೂಡಿಸಿರುವ ಸಮಾವೇಶ

ಪ್ರಕಟಣಾ ದಿನಾಂಕ: 19 NOV 2026 1:47PM by PIB Bengaluru

ಮೀನುಗಾರಿಕೆ ಮತ್ತು ಜಲಕೃಷಿಯಲ್ಲಿ ಪ್ರಮುಖ ಅಂತಾರಾಷ್ಟ್ರೀಯ ವೈಜ್ಞಾನಿಕ ಸಮ್ಮೇಳನವಾದ 14ನೇ ಭಾರತೀಯ ಮೀನುಗಾರಿಕೆ ಮತ್ತು ಜಲಕೃಷಿ ಸಮಾವೇಶ (14ಐಎಫ್ಎಎಫ್) ಒಡಿಶಾದ ಭುವನೇಶ್ವರದಲ್ಲಿರುವ ಐಸಿಎಆರ್–ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಫ್ರೆಶ್‌ವಾಟರ್ ಅಕ್ವಾಕಲ್ಚರ್ (ICAR-CIFA) ನಲ್ಲಿಂದು ಆರಂಭವಾಯಿತು. 2026ರ ನವೆಂಬರ್ 18 ರಿಂದ 20ರವರೆಗೆ ನಡೆಯಲಿರುವ ಮೂರು ದಿನಗಳ ಸಮ್ಮೇಳನವನ್ನು ಏಷ್ಯನ್ ಫಿಶರೀಸ್ ಸೊಸೈಟಿ, ಇಂಡಿಯನ್ ಬ್ರಾಂಚ್ (AFSIB), ICAR-CIFA, ಭಾರತ ಸರ್ಕಾರದ ಮೀನುಗಾರಿಕೆ ಇಲಾಖೆ, ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ (NFDB), ಒಡಿಶಾ ಸರ್ಕಾರದ ಮೀನುಗಾರಿಕೆ ಮತ್ತು ಪ್ರಾಣಿ ಸಂಪನ್ಮೂಲ ಅಭಿವೃದ್ಧಿ (FARD) ಇಲಾಖೆ ಮತ್ತು ಜಲಚರ ಸಾಕಣೆದಾರರ ಸಂಘ ಜಂಟಿಯಾಗಿ ಆಯೋಜಿಸಿವೆ.

"ಜಲಕೃಷಿ ಮತ್ತು ಮೀನುಗಾರಿಕೆಯಲ್ಲಿ ಪರಿವರ್ತನೆ: ವಿಜ್ಞಾನ ಮತ್ತು ಸಮಾಜದ ನಡುವೆ ಬೆಸುಗೆ" ಎಂಬ ವಿಷಯದಡಿಯಲ್ಲಿ ಈ ಸಮ್ಮೇಳನ ನಡೆಯುತ್ತಿದ್ದು, ವೈಜ್ಞಾನಿಕ ಜ್ಞಾನ ಮುಂದುವರಿಸುವುದು, ತಾಂತ್ರಿಕ ನಾವೀನ್ಯತೆಗಳನ್ನು ಉತ್ತೇಜಿಸುವುದು ಮತ್ತು ಸಂಶೋಧಕರು, ನೀತಿ ನಿರೂಪಕರು, ಕೈಗಾರಿಕಾ ಪಾಲುದಾರರು ಮತ್ತು ಕೃಷಿ ಸಮುದಾಯಗಳ ನಡುವಿನ ಸಹಯೋಗ ಬಲವರ್ಧನೆಯತ್ತ ಹೆಚ್ಚಿನ ಗಮನಹರಿಸುತ್ತದೆ.

ಬ್ಯಾಂಕಾಕ್‌ನ ನೆಟ್‌ವರ್ಕ್ ಆಫ್ ಅಕ್ವಾಕಲ್ಚರ್ ಸೆಂಟರ್ಸ್ ಇನ್ ಏಷ್ಯಾ-ಪೆಸಿಫಿಕ್ (ಎನ್‌ಎಸಿಎ) ನ ಮಹಾನಿರ್ದೇಶಕ ಡಾ. ಎಡ್ವರ್ಡೊ ಲಿಯಾನೋ ಅವರು ಸಮ್ಮೇಳನವನ್ನು ಉದ್ಘಾಟಿಸಿದರು. ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ, ಜಲಕೃಷಿ ವಲಯವನ್ನು ಪರಿವರ್ತಿಸಲು ನಾವೀನ್ಯತೆ ಮತ್ತು ತಂತ್ರಜ್ಞಾನ ಅಳವಡಿಕೆಗೆ ವೇಗ ನೀಡುವ ಅಗತ್ಯತೆಯನ್ನು ಬಲವಾಗಿ ಪ್ರತಿಪಾದಿಸಿದರು.

ಐಸಿಎಆರ್‌ನ ಉಪ ಮಹಾನಿರ್ದೇಶಕ (ಮೀನುಗಾರಿಕೆ ವಿಜ್ಞಾನ) ಡಾ. ಜೆ. ಕೆ. ಜೆನಾ, ಗಡಿನಾಡಿನ ಸಂಶೋಧನೆಯಲ್ಲಿ ಹೆಚ್ಚಿನ ಹೂಡಿಕೆಯ ಮಹತ್ವ ಮತ್ತು ದೃಢವಾದ ಮೌಲ್ಯ ಸರಣಿಗಳ ಅಭಿವೃದ್ಧಿಯನ್ನು ಪ್ರಮುಖವಾಗಿ ಉಲ್ಲೇಖಿಸಿದರು. ಎನ್‌ಎಫ್‌ಡಿಬಿಯ ಮುಖ್ಯ ಕಾರ್ಯನಿರ್ವಾಹಕ ಡಾ. ಬಿ. ಕೆ. ಬೆಹೆರಾ, ಮೀನುಗಾರರ ಜೀವನೋಪಾಯ ಸುಧಾರಿಸಲು ಮೀನುಗಾರಿಕಾ ಸಹಕಾರಿ ಸಂಘಗಳ ಬಲವರ್ಧನೆ ಅಗತ್ಯತೆಯನ್ನು ಬಲವಾಗಿ ಪ್ರತಿಪಾದಿಸಿದರು. ಹರಿಯಾಣದ ಕುಂಡ್ಲಿಯ ಎನ್‌ಐಎಫ್‌ಟಿಇಎಂನ ಮಾಜಿ ಉಪಕುಲಪತಿ ಡಾ. ಸಿ. ವಾಸುದೇವಪ್ಪ, ಮೀನಿನ ಗುಣಮಟ್ಟವನ್ನು ಖಾತ್ರಿಪಡಿಸಿಕೊಳ್ಳುವ ಮತ್ತು ಗ್ರಾಹಕರ ಸ್ವೀಕಾರವನ್ನು ಹೆಚ್ಚಿಸುವ ಮಹತ್ವವನ್ನು ಒತ್ತಿ ಹೇಳಿದರು.

ಇತರ ಪ್ರಮುಖ ಭಾಷಣಕಾರರಲ್ಲಿ ಎನ್ ಎಸಿಎ ಮಾಜಿ ಮಹಾನಿರ್ದೇಶಕ ಡಾ. ಎ. ಇ. ಏಕನಾಥ್; AFSIB ಯ ಕಾರ್ಯದರ್ಶಿ ಡಾ. ಕೆ. ಎಂ. ರಾಜೇಶ್; ಮುಂಬೈನ ICAR-CIFE ನ ಮಾಜಿ ನಿರ್ದೇಶಕ ಡಾ. ದಿಲೀಪ್ ಕುಮಾರ್; ಮತ್ತು ಮಂಗಳೂರಿನ NITTE ವಿಶ್ವವಿದ್ಯಾಲಯದ FAO ರೆಫರೆನ್ಸ್ ಕೇಂದ್ರದ ಸಲಹೆಗಾರ ಡಾ. ಐ. ಕರುಣಾಸಾಗರ್ ಸೇರಿದ್ದಾರೆ. ಮೀನುಗಾರಿಕೆ ಮತ್ತು ಜಲಕೃಷಿಯಲ್ಲಿ ಉದಯೋನ್ಮುಖ ಆದ್ಯತೆಗಳು, ಸಂಶೋಧನಾ ಪ್ರಗತಿಗಳು ಮತ್ತು ಭವಿಷ್ಯದ ಅವಕಾಶಗಳ ಕುರಿತು ಅವರು ತಮ್ಮ ದೂರದೃಷ್ಟಿಗಳನ್ನು ಹಂಚಿಕೊಂಡರು.

ಇದಕ್ಕೂ ಮುನ್ನ ICAR-CIFA ಯ ನಿರ್ದೇಶಕ ಮತ್ತು ಸಮ್ಮೇಳನದ ಸಂಚಾಲಕ ಡಾ. ಪಿ. ಕೆ. ಸಾಹೂ ಅವರು ಗಣ್ಯರು ಮತ್ತು ಪ್ರತಿನಿಧಿಗಳನ್ನು ಸ್ವಾಗತಿಸಿದರು. ವಿಜ್ಞಾನ-ಉದ್ಯಮ-ರೈತ ಸಂಪರ್ಕಗಳನ್ನು ಬಲವರ್ಧನೆಗೊಳಿಸುವುದು, ಅಂತಾರಾಷ್ಟ್ರೀಯ ಸಹಕಾರ ಉತ್ತೇಜಿಸುವುದು ಮತ್ತು ಸಂಶೋಧನಾ ಫಲಿತಾಂಶಗಳನ್ನು ಕೃಷಿ ಸಮುದಾಯಕ್ಕೆ ಪ್ರಾಯೋಗಿಕ ಪರಿಹಾರಗಳಾಗಿ ಪರಿವರ್ತಿಸುವ ಮಹತ್ವವನ್ನು ಅವರು ಪ್ರಸ್ತಾಪಿಸಿದರು. ಈ ವೇದಿಕೆಯು ಭಾರತ ಮತ್ತು ಇತರ ಆರು ದೇಶಗಳಿಂದ 1,000 ಕ್ಕೂ ಅಧಿಕ ಪ್ರತಿನಿಧಿಗಳನ್ನು ಆಕರ್ಷಿಸಿದೆ ಎಂದು ಅವರು ಮಾಹಿತಿ ನೀಡಿದರು, ಅದರಲ್ಲಿ ವಿಜ್ಞಾನಿಗಳು, ಸಂಶೋಧಕರು, ಶಿಕ್ಷಣ ತಜ್ಞರು, ನೀತಿ ನಿರೂಪಕರು, ಉದ್ಯಮಿಗಳು, ಉದ್ಯಮ ಪ್ರತಿನಿಧಿಗಳು ಮತ್ತು ರೈತರು ಸೇರಿದ್ದಾರೆ ಎಂದರು.

ಮೂರು ದಿನಗಳ ಸಮ್ಮೇಳನದಲ್ಲಿ ಸುಸ್ಥಿರ ಮೀನುಗಾರಿಕೆ ನಿರ್ವಹಣೆ, ಜಲಚರ ಪರಿಸರ ವ್ಯವಸ್ಥೆಯ ಸಂರಕ್ಷಣೆ, ಕೃತಕ ಬುದ್ಧಿಮತ್ತೆ (AI), ಜೀನೋಮ್ ಎಡಿಟಿಂಗ್, ನಿಖರ ಜಲಚರ ಸಾಕಣೆ, ಮುಂದುವರಿದ ತಳಿ ತಂತ್ರಜ್ಞಾನಗಳು, ಆಹಾರ ಅಭಿವೃದ್ಧಿ, ಜಲಚರ ಪ್ರಾಣಿಗಳ ಆರೋಗ್ಯ ಮತ್ತು ಆನುವಂಶಿಕ ಸುಧಾರಣೆ ಮುಂತಾದ ಪ್ರಮುಖ ವಿಷಯಗಳ ಕುರಿತು ಚರ್ಚಿಸಲಾಗುವುದು.

20 ಏಜೆನ್ಸಿಗಳನ್ನು ಒಳಗೊಂಡ ಏಕಕಾಲಿಕ ಪ್ರದರ್ಶನವು ಮೀನುಗಾರಿಕೆ ಮತ್ತು ಜಲಕೃಷಿಯಲ್ಲಿ ತಂತ್ರಜ್ಞಾನಗಳು, ನಾವೀನ್ಯತೆಗಳು, ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರದರ್ಶಿಸುತ್ತಿದೆ. ಈ ಪ್ರದರ್ಶನವು ಉದ್ಯಮದ ಪಾಲುದಾರರು, ಸಂಶೋಧಕರು ಮತ್ತು ರೈತರು ಸಂವಹನ ನಡೆಸಲು, ತಾಂತ್ರಿಕ ಪರಿಹಾರಗಳನ್ನು ಅನ್ವೇಷಿಸಲು ಮತ್ತು ಸಹಯೋಗದ ಪಾಲುದಾರಿಕೆಗಳನ್ನು ಸ್ಥಾಪಿಸಲು ಅವಕಾಶವನ್ನು ಒದಗಿಸುತ್ತದೆ. ಉದ್ಘಾಟನಾ ಸಮಾರಂಭದಲ್ಲಿ ವೈಜ್ಞಾನಿಕ ಪ್ರಕಟಣೆಗಳ ಬಿಡುಗಡೆ ಮತ್ತು ವಲಯಕ್ಕೆ ಅವರ ಕೊಡುಗೆಗಳನ್ನು ಗುರುತಿಸಿ ಪ್ರಸಿದ್ಧ ಮೀನುಗಾರಿಕಾ ವಿಜ್ಞಾನಿಗಳಿಗೆ ಜಲಚರ ಸಾಕಣೆದಾರರ ಸಂಘದ ಫೆಲೋ ಪ್ರಶಸ್ತಿಗಳ ಪ್ರದಾನ ಸಮಾರಂಭವೂ ನಡೆಯಿತು.

ಮೂರು ದಿನಗಳ ಸಮಾವೇಶವು ವೈಜ್ಞಾನಿಕ ವಿನಿಮಯ ಸುಗಮಗೊಳಿಸುವುದು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಹಕಾರವನ್ನು ವೃದ್ಧಿಸುವುದು ಮತ್ತು ಭಾರತದ ಮೀನುಗಾರಿಕೆ ಮತ್ತು ಜಲಚರ ಸಾಕಣೆ ಕ್ಷೇತ್ರದ ಸುಸ್ಥಿರ, ಅಂತರ್ಗತ ಮತ್ತು ತಂತ್ರಜ್ಞಾನ-ಆಧರಿತ ಬೆಳವಣಿಗೆಗೆ ಕಾರ್ಯಸಾಧ್ಯ ತಂತ್ರಗಳನ್ನು ಗುರುತಿಸುವ ಗುರಿಯನ್ನು ಹೊಂದಿದೆ.

 

*****


(ಪ್ರಕಟಣೆ ಐ.ಡಿ.: 2338391) ವಿಸಿಟರ್ ಕೌಂಟರ್ : 22
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Nepali , Assamese