ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ಭಯೋತ್ಪಾದನೆಯ ವಿರುದ್ಧ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಶೂನ್ಯ ಸಹಿಷ್ಣುತೆ ನೀತಿಗೆ ಅನುಗುಣವಾಗಿ, ನವೆಂಬರ್ 19, 2026 ರಂದು ನವದೆಹಲಿಯಲ್ಲಿ ಎರಡು ದಿನಗಳ 'ಭಯೋತ್ಪಾದನಾ ನಿಗ್ರಹ ಸಮ್ಮೇಳನ'ವನ್ನು ಉದ್ಘಾಟಿಸಲಿರುವ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ


ರಾಷ್ಟ್ರೀಯ ತನಿಖಾ ಸಂಸ್ಥೆ ಆಯೋಜಿಸಿರುವ ಈ ವರ್ಷದ ಸಮ್ಮೇಳನದಲ್ಲಿ 'ಗಡಿಯಾಚೆಗಿನ ಭಯೋತ್ಪಾದನೆ' ವಿಷಯದ ಕುರಿತು ಚರ್ಚೆ ನಡೆಯಲಿದೆ

ಹೊಸ ಭಯೋತ್ಪಾದಕ ಬೆದರಿಕೆಗಳ ಕುರಿತು ಭದ್ರತಾ ಸಂಸ್ಥೆಗಳು, ತನಿಖಾಧಿಕಾರಿಗಳು ಮತ್ತು ತಜ್ಞರ ನಡುವೆ ಸಾಮೂಹಿಕ ಸಮಾಲೋಚನೆಗೆ ವೇದಿಕೆಯಾಗಲಿರುವ ಸಮ್ಮೇಳನ

'ಸಂಪೂರ್ಣ ಸರ್ಕಾರದ ವಿಧಾನ'ದೊಂದಿಗೆ ಎಲ್ಲಾ ಪಾಲುದಾರರ ನಡುವೆ ಸಮನ್ವಯವನ್ನು ಬೆಳೆಸುವುದಕ್ಕೆ ಸಮ್ಮೇಳನವು ವಿಶೇಷ ಒತ್ತು ನೀಡುತ್ತದೆ

ವಿದೇಶಿ ನ್ಯಾಯವ್ಯಾಪ್ತಿಗಳಿಂದ ಸಾಕ್ಷ್ಯಗಳನ್ನು ಪಡೆಯುವುದು, ಭಯೋತ್ಪಾದನಾ ನಿಗ್ರಹ ತನಿಖೆಗಳಲ್ಲಿ ಡಿಜಿಟಲ್ ಫೋರೆನ್ಸಿಕ್ಸ್ ಮತ್ತು ದತ್ತಾಂಶ ವಿಶ್ಲೇಷಣೆಯ ಅನ್ವಯ ಹಾಗೂ ವಿಚಾರಣೆಗಳ ಪರಿಣಾಮಕಾರಿ ನಿರ್ವಹಣೆಯಂತಹ ವಿಷಯಗಳ ಕುರಿತು ಚರ್ಚಿಸಲಾಗುವುದು

ಮೂಲಭೂತವಾದವನ್ನು ಎದುರಿಸುವುದು, ಬೇಹುಗಾರಿಕೆ ಮತ್ತು ರಾಷ್ಟ್ರೀಯ ಭದ್ರತೆಗೆ ಎದುರಾಗುತ್ತಿರುವ ಹೈಬ್ರಿಡ್ ಬೆದರಿಕೆಗಳ ಕುರಿತೂ ಗೋಷ್ಠಿಗಳು ಒಳಗೊಂಡಿರುತ್ತವೆ

ಈ ಸಮಾಲೋಚನೆಗಳು ಕಾನೂನು ಜಾರಿ ಸಂಸ್ಥೆಗಳಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು, ಭಯೋತ್ಪಾದನಾ ನಿಗ್ರಹ ವಿಷಯಗಳನ್ನು ನಿರ್ವಹಿಸುವಲ್ಲಿ ಉತ್ತಮ ಪದ್ಧತಿಗಳನ್ನು ಜಾರಿಗೆ ತರಲು ಮತ್ತು ಭಯೋತ್ಪಾದನಾ ತನಿಖೆಗಳಿಂದ ಕಲಿತ ಪಾಠಗಳನ್ನು ಬಳಸಿಕೊಳ್ಳಲು ಅನುವು ಮಾಡಿಕೊಡುತ್ತವೆ

ಪ್ರಕಟಣಾ ದಿನಾಂಕ: 18 NOV 2026 4:31PM by PIB Bengaluru

ಭಯೋತ್ಪಾದನೆಯ ವಿರುದ್ಧ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಶೂನ್ಯ ಸಹಿಷ್ಣುತೆ ನೀತಿಗೆ ಅನುಗುಣವಾಗಿ, ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು 2026 ರ ನವೆಂಬರ್ 19, ಗುರುವಾರದಂದು ನವದೆಹಲಿಯಲ್ಲಿ ಎರಡು ದಿನಗಳ 'ಭಯೋತ್ಪಾದನಾ ನಿಗ್ರಹ ಸಮ್ಮೇಳನ'ವನ್ನು ಉದ್ಘಾಟಿಸಲಿದ್ದಾರೆ. ಭಯೋತ್ಪಾದನೆಗೆ ರಾಷ್ಟ್ರದ ಸಾಮೂಹಿಕ ಪ್ರತಿಕ್ರಿಯೆಯನ್ನು ಬಲಪಡಿಸುವ ನಿರಂತರ ಪ್ರಯತ್ನದ ಭಾಗವಾಗಿ ಭಾರತ ಸರ್ಕಾರದ ಗೃಹ ಸಚಿವಾಲಯದ ರಾಷ್ಟ್ರೀಯ ತನಿಖಾ ಸಂಸ್ಥೆ ಈ ಸಮ್ಮೇಳನವನ್ನು ಆಯೋಜಿಸುತ್ತಿದೆ. ಈ ವರ್ಷದ ಸಮ್ಮೇಳನವು 'ಗಡಿಯಾಚೆಗಿನ ಭಯೋತ್ಪಾದನೆ' ಎಂಬ ಧ್ಯೇಯವಾಕ್ಯದ ಕುರಿತು ಸಮಾಲೋಚನೆ ನಡೆಸಲಿದೆ.

ವಾರ್ಷಿಕವಾಗಿ ನಡೆಯುವ ಈ ಸಮ್ಮೇಳನವು ಕಾರ್ಯಾಚರಣಾ ಪಡೆಗಳು, ಭಯೋತ್ಪಾದನಾ ನಿಗ್ರಹ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳು ಮತ್ತು ತಾಂತ್ರಿಕ, ಕಾನೂನು ಹಾಗೂ ಫೋರೆನ್ಸಿಕ್ ಕ್ಷೇತ್ರಗಳ ತಜ್ಞರ ಮಹತ್ವದ ಸಮಾವೇಶವಾಗಿ ಸ್ಥಿರವಾಗಿ ಬೆಳೆದಿದೆ. ಇದು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯಗಳು ಮತ್ತು ಭಯೋತ್ಪಾದನೆಯಿಂದ ಉಂಟಾಗುವ ಬೆದರಿಕೆಗಳನ್ನು ಸಾಮೂಹಿಕವಾಗಿ ಪರಿಶೀಲಿಸಲು ಏಜೆನ್ಸಿಗಳು / ಪಡೆಗಳಿಗೆ ಅವಕಾಶವನ್ನು ಒದಗಿಸುತ್ತದೆ.

'ಸಂಪೂರ್ಣ ಸರ್ಕಾರದ ವಿಧಾನ'ಕ್ಕೆ ಅನುಗುಣವಾಗಿ, ಸಮ್ಮೇಳನವು ಎಲ್ಲಾ ಪಾಲುದಾರರ ನಡುವೆ ಸಮನ್ವಯವನ್ನು ಬೆಳೆಸುವುದಕ್ಕೆ ವಿಶೇಷ ಒತ್ತು ನೀಡುತ್ತದೆ. ಭಯೋತ್ಪಾದನೆಯ ವಿರುದ್ಧ ಸಂಘಟಿತ ಮತ್ತು ಒಗ್ಗಟ್ಟಿನ ಕ್ರಮಕ್ಕೆ ಅನುವು ಮಾಡಿಕೊಡುವ ಔಪಚಾರಿಕ ಹಾಗೂ ಅನೌಪಚಾರಿಕ ಮಾರ್ಗಗಳನ್ನು ಸ್ಥಾಪಿಸಲು ಇದು ಪ್ರಯತ್ನಿಸುತ್ತದೆ. ಭವಿಷ್ಯದ ನೀತಿ ನಿರೂಪಣೆಗೆ ಮಹತ್ವದ ಸಲಹೆಗಳನ್ನು ನೀಡುವ ಗುರಿಯನ್ನೂ ಸಮ್ಮೇಳನ ಹೊಂದಿದೆ.

ಸಮ್ಮೇಳನದ ಗೋಷ್ಠಿಗಳು ವಿದೇಶಿ ನ್ಯಾಯವ್ಯಾಪ್ತಿಗಳಿಂದ ಸಾಕ್ಷ್ಯಗಳನ್ನು ಪಡೆಯುವುದು, ಭಯೋತ್ಪಾದನಾ ನಿಗ್ರಹ ತನಿಖೆಗಳಲ್ಲಿ ಡಿಜಿಟಲ್ ಫೋರೆನ್ಸಿಕ್ಸ್ ಮತ್ತು ದತ್ತಾಂಶ ವಿಶ್ಲೇಷಣೆಯ ಅನ್ವಯ, ಮತ್ತು ವಿಚಾರಣೆಗಳ ಪರಿಣಾಮಕಾರಿ ನಿರ್ವಹಣೆ ಸೇರಿದಂತೆ ಹಲವಾರು ವಿಷಯಗಳನ್ನು ಚರ್ಚಿಸಲಿವೆ. ಮೂಲಭೂತವಾದವನ್ನು ಎದುರಿಸುವುದು ಮತ್ತು ರಾಷ್ಟ್ರೀಯ ಭದ್ರತೆಗೆ ಎದುರಾಗುತ್ತಿರುವ ಹೈಬ್ರಿಡ್ ಬೆದರಿಕೆಗಳ ಕುರಿತೂ ಗೋಷ್ಠಿಗಳು ಒಳಗೊಂಡಿರುತ್ತವೆ. ಭಯೋತ್ಪಾದಕ ಹಣಕಾಸು ಜಾಲಗಳನ್ನು ಭೇದಿಸುವಲ್ಲಿ ಒಳಗೊಂಡಿರುವ ಸಾಧನಗಳು, ತಂತ್ರಗಳು ಮತ್ತು ಪ್ರಕರಣಗಳ ಅನುಭವಗಳನ್ನು, ಹಾಗೂ ಭವಿಷ್ಯಕ್ಕೆ ಸಿದ್ಧವಾಗಿರುವ ಭಯೋತ್ಪಾದನಾ ನಿಗ್ರಹ ಕಾರ್ಯತಂತ್ರಗಳ ಅಭಿವೃದ್ಧಿ ಮತ್ತು ಉದಯೋನ್ಮುಖ ರಾಷ್ಟ್ರೀಯ ಭದ್ರತಾ ಸವಾಲುಗಳನ್ನು ಎದುರಿಸಲು ಸಾಂಸ್ಥಿಕ ಸಾಮರ್ಥ್ಯಗಳನ್ನು ಬಲಪಡಿಸುವ ಕುರಿತು ಮುಂದಿನ ಗೋಷ್ಠಿಗಳು ಪರಿಶೀಲಿಸಲಿವೆ.

ಈ ವರ್ಷ, ಸಮ್ಮೇಳನವು ರಾಜ್ಯ ಪೊಲೀಸ್ ಸಿಬ್ಬಂದಿ ಮತ್ತು ವೃತ್ತಿಪರರಿಗಾಗಿ ಸಾಮರ್ಥ್ಯ ವೃದ್ಧಿ ತರಬೇತಿ ಕಾರ್ಯಕ್ರಮವನ್ನೂ ಆಯೋಜಿಸಲಿದೆ. ಹಲವಾರು ಕ್ಷೇತ್ರಗಳಲ್ಲಿ ಭಾಗವಹಿಸುವವರನ್ನು ಸಜ್ಜುಗೊಳಿಸಲು ಈ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ಇವುಗಳಲ್ಲಿ ಭಯೋತ್ಪಾದನಾ ತನಿಖೆಗಳಲ್ಲಿ ಹೊಸ ಕ್ರಿಮಿನಲ್ ಕಾನೂನುಗಳನ್ನು ಅನ್ವಯಿಸುವುದು, ಅಭಿಯೋಜನೆಯಲ್ಲಿ (prosecution) ಡಿಜಿಟಲ್ ಸಾಕ್ಷ್ಯಗಳನ್ನು ಬಳಸುವುದು, ಮತ್ತು ವಿಚಾರಣಾ ಕಾರ್ಯತಂತ್ರ ಹಾಗೂ ನಿರ್ವಹಣೆ ಸೇರಿವೆ. ಭಯೋತ್ಪಾದನಾ ಪ್ರಕರಣಗಳ ತನಿಖೆಗೆ ಸಂಬಂಧಿಸಿದ ವಿಶೇಷ ನಿಬಂಧನೆಗಳು, ಪ್ರತಿವಾದಿಗಳಿಂದ ಎದುರಾಗುವ ಸಾಮಾನ್ಯ ಸವಾಲುಗಳು, ಸಾಕ್ಷಿಗಳ ರಕ್ಷಣೆ, ಮತ್ತು ಅಭಿಯೋಜನೆಯನ್ನು ಸುಧಾರಿಸಲು ಸರ್ಕಾರ ಕೈಗೊಂಡಿರುವ ಉಪಕ್ರಮಗಳನ್ನೂ ಈ ಕಾರ್ಯಕ್ರಮವು ಒಳಗೊಂಡಿರುತ್ತದೆ.

ಎರಡು ದಿನಗಳ ಕಾಲ ನಡೆಯುವ ಈ ಸಮಾಲೋಚನೆಗಳು ಕಾನೂನು ಜಾರಿ ಸಂಸ್ಥೆಗಳಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು, ಭಯೋತ್ಪಾದನಾ ನಿಗ್ರಹ ವಿಷಯಗಳನ್ನು ನಿರ್ವಹಿಸುವಲ್ಲಿ ಉತ್ತಮ ಪದ್ಧತಿಗಳನ್ನು ಜಾರಿಗೊಳಿಸಲು ಮತ್ತು ಭಯೋತ್ಪಾದನಾ ತನಿಖೆಗಳಿಂದ ಕಲಿತ ಪಾಠಗಳನ್ನು ಬಳಸಿಕೊಳ್ಳಲು ಅನುವು ಮಾಡಿಕೊಡುತ್ತವೆ.

ಈ ಸಮ್ಮೇಳನದಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಿರಿಯ ಪೊಲೀಸ್ ಅಧಿಕಾರಿಗಳು, ಭಯೋತ್ಪಾದನಾ ನಿಗ್ರಹ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಏಜೆನ್ಸಿಗಳು ಮತ್ತು ಇಲಾಖೆಗಳ ಅಧಿಕಾರಿಗಳು, ಹಾಗೂ ಕಾನೂನು, ಫೋರೆನ್ಸಿಕ್ಸ್ ಮತ್ತು ತಂತ್ರಜ್ಞಾನ ಸೇರಿದಂತೆ ಸಂಬಂಧಿತ ಕ್ಷೇತ್ರಗಳ ತಜ್ಞರು ಭಾಗವಹಿಸಲಿದ್ದಾರೆ.

 

*****


(ಪ್ರಕಟಣೆ ಐ.ಡಿ.: 2338046) ವಿಸಿಟರ್ ಕೌಂಟರ್ : 3
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Nepali , Bengali , Gujarati , Tamil