ಪ್ರಕಟಣಾ ದಿನಾಂಕ:
17 NOV 2026 12:16PM by PIB Bengaluru
ಘನತೆವೆತ್ತ ಅಧ್ಯಕ್ಷರಾದ ಮಾರ್ಕೋಸ್ ಅವರೇ,
ಘನತೆವೆತ್ತ ಮಹನೀಯರೇ,
ಗಣ್ಯರೆ,
ನಮಸ್ಕಾರ!
ನಮ್ಮ ಆಸಿಯಾನ್ ಕುಟುಂಬದೊಂದಿಗೆ ಮತ್ತೊಮ್ಮೆ ಸಂಪರ್ಕ ಸಾಧಿಸಿರುವುದಕ್ಕೆ ತುಂಬಾ ಸಂತೋಷವಾಗಿದೆ. ಆಸಿಯಾನ್ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ಭಾಗವಹಿಸಿದ್ದಕ್ಕಾಗಿ ಮತ್ತು ಭಾರತಕ್ಕೆ ರಾಷ್ಟ್ರ ಸಂಚಾಲಕರಾಗಿ ಅಮೂಲ್ಯ ಕೊಡುಗೆ ನೀಡಲು ಅವಕಾಶ ಕಲ್ಪಿಸಿದ ಅಧ್ಯಕ್ಷ ಮಾರ್ಕೋಸ್ ಅವರನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಮತ್ತು ಧನ್ಯವಾದಗಳನ್ನು ಅರ್ಪಿಸುತ್ತೇನೆ.
ಆಸಿಯಾನ್ ನಾಯಕರೊಂದಿಗೆ ನಾನು ನಡೆಸುತ್ತಿರುವ 13ನೇ ಸಂವಾದ ಇದಾಗಿದೆ. ಕಳೆದ ಕೆಲವು ವರ್ಷಗಳಲ್ಲಿ, ನಮ್ಮ 'ಆಕ್ಟ್ ಈಸ್ಟ್ ಪಾಲಿಸಿ'(ಈಶಾನ್ಯದತ್ತ ಕ್ರಮ ವಹಿಸುವ ನೀತಿ) ಭಾರತ-ಆಸಿಯಾನ್ ಸಂಬಂಧಗಳಿಗೆ ಹೊಸ ಚೈತನ್ಯ ಹಾಗೂ ವಿಸ್ತಾರ ನೀಡಿದೆ. ನಮ್ಮ ಪಾಲುದಾರಿಕೆಯು ಈಗ ಕೇವಲ ಹಂಚಿಕೆಯ ಸಂಸ್ಕೃತಿ ಮತ್ತು ಪರಂಪರೆಗೆ ಮಾತ್ರ ಸೀಮಿತವಾಗದೆ, ಬದಲಾಗಿ ಡಿಜಿಟಲ್ ತಂತ್ರಜ್ಞಾನ, ರಕ್ಷಣೆ ಮತ್ತು ಬಾಹ್ಯಾಕಾಶದಂತಹ ಕ್ಷೇತ್ರಗಳಲ್ಲಿ ಹೊಸ ಆಯಾಮಗಳನ್ನು ಪಡೆದುಕೊಂಡಿದೆ.
2014ರಿಂದ ನಾವು ಜನರ ನಡುವಿನ ಬಾಂಧವ್ಯ ಬಲಪಡಿಸಲು 100ಕ್ಕೂ ಹೆಚ್ಚು ಉಪಕ್ರಮಗಳನ್ನು ಕೈಗೊಂಡಿದ್ದೇವೆ, ಸುಮಾರು 250 'ತ್ವರಿತ ಪರಿಣಾಮ ಬೀರುವ ಯೋಜನೆಗಳನ್ನು' ಆರಂಭಿಸಿದ್ದೇವೆ. ಕೌಶಲ್ಯ ಅಭಿವೃದ್ಧಿಗಾಗಿ 10,000ಕ್ಕೂ ಹೆಚ್ಚಿನ ವಿದ್ಯಾರ್ಥಿವೇತನಗಳನ್ನು ಒದಗಿಸಿದ್ದೇವೆ.
ಇಂದು, ಭಾರತ ಮತ್ತು 9 ಆಸಿಯಾನ್ ರಾಷ್ಟ್ರಗಳ ನಡುವೆ ಇರುವ ನೇರ ವಿಮಾನ ಸಂಪರ್ಕಗಳು ಹಾಗೂ ಬೆಳೆಯುತ್ತಿರುವ ಪ್ರವಾಸೋದ್ಯಮವು ನಮ್ಮ ನಿಕಟ ಬಾಂಧವ್ಯಕ್ಕೆ ಮತ್ತಷ್ಟು ಸಾಕ್ಷಿಯಾಗಿವೆ.
ಸ್ನೇಹಿತರೆ,
ಕಳೆದ ಕೆಲವು ವರ್ಷಗಳಲ್ಲಿ, ಜಗತ್ತು ಒಂದರ ನಂತರ ಒಂದರಂತೆ ಅನೇಕ ಬಿಕ್ಕಟ್ಟುಗಳನ್ನು ಎದುರಿಸಿದೆ. ಇಂದಿನ ಜಗತ್ತಿಗೆ ಅತ್ಯಂತ ಅಗತ್ಯವಿರುವುದು ಶಾಂತಿ, ಸ್ಥಿರತೆ ಮತ್ತು ಭವಿಷ್ಯದ ಬಗೆಗಿನ ನಿಶ್ಚಿತ ನಿಲುವು. ಈ ಹಿನ್ನೆಲೆಯಲ್ಲಿ, ಈ ವರ್ಷದ ಧ್ಯೇಯವಾಕ್ಯ "ಒಟ್ಟಾಗಿ ನಮ್ಮ ಭವಿಷ್ಯದತ್ತ ಸಾಗುವುದು" ವಿಶೇಷ ಮಹತ್ವ ಪಡೆದುಕೊಂಡಿದೆ.
ಭಾರತ ಮತ್ತು ಆಸಿಯಾನ್ ಒಟ್ಟಾಗಿ ವಿಶ್ವ ಜನಸಂಖ್ಯೆಯ ಸುಮಾರು 4ನೇ ಒಂದು ಭಾಗವನ್ನು ಪ್ರತಿನಿಧಿಸುತ್ತವೆ. ಆದ್ದರಿಂದ, ನಮ್ಮ ಭವಿಷ್ಯವು ಪೈಪೋಟಿಯಿಂದಲ್ಲ, ಬದಲಾಗಿ ಸಹಕಾರದಿಂದ ರೂಪಿತವಾಗುವುದನ್ನು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ. ಇದನ್ನು ಸಾಧಿಸಲು ನಮ್ಮಲ್ಲಿ ಸಾಮರ್ಥ್ಯವೂ ಇದೆ, ದೃಢ ಸಂಕಲ್ಪವೂ ಇದೆ. ನಾವೆಲ್ಲರೂ ಒಗ್ಗೂಡಿ, ಈ ಪ್ರದೇಶವನ್ನು ಶಾಂತಿ ಮತ್ತು ಸ್ಥಿರತೆಯ ಸಂಕೇತವನ್ನಾಗಿ ಪರಿವರ್ತಿಸಬಹುದು.
ಸ್ನೇಹಿತರೆ,
ಈ ವರ್ಷ ಆಸಿಯಾನ್ ರಾಷ್ಟ್ರವೊಂದಕ್ಕೆ ನಾನು ಭೇಟಿ ನೀಡುತ್ತಿರುವುದು ಇದು 3ನೇ ಬಾರಿ. ಭಾರತಕ್ಕೆ ಆಸಿಯಾನ್ ಹೊಂದಿರುವ ವಿಶೇಷ ಪ್ರಾಮುಖ್ಯತೆಯನ್ನು ಇದು ಪ್ರತಿಬಿಂಬಿಸುತ್ತದೆ. ಭಾರತದ ಬೆಳವಣಿಗೆ ಮತ್ತು ಆಸಿಯಾನ್ನ ಸಮೃದ್ಧಿಯು ಆಳವಾಗಿ ಒಂದಕ್ಕೊಂದು ಬೆಸೆದುಕೊಂಡಿವೆ ಎಂದು ನಾವು ಸದೃಢವಾಗಿ ನಂಬುತ್ತೇವೆ.
ಮುಂಬರುವ ವರ್ಷಗಳಲ್ಲಿ, 'ಆಸಿಯಾನ್ ಸಮುದಾಯ ದೃಷ್ಟಿಕೋನ 2045' ಮತ್ತು 'ವಿಕಸಿತ ಭಾರತ 2047' ಇವೆರಡೂ ನಮ್ಮ ಆಕಾಂಕ್ಷೆಗಳನ್ನು ನನಸಾಗಿಸಲು ನಮಗೆ ನೆರವಾಗಬಲ್ಲವು.
ಕಳೆದ 12 ವರ್ಷಗಳಲ್ಲಿ ನಾವು ನಮ್ಮ ಪಾಲುದಾರಿಕೆಗೆ ಹೊಸ ಚೈತನ್ಯ ನೀಡಿದ್ದೇವೆ. ಈಗ, ನಾವೆಲ್ಲರೂ ಒಟ್ಟಾಗಿ ನಮ್ಮ ಈ ಪ್ರಾಂತ್ಯದ ಭವಿಷ್ಯಕ್ಕೆ ಹೊಸ ದಿಕ್ಕು ನೀಡಬೇಕಿದೆ. ಆಸಿಯಾನ್ನ ಒಗ್ಗಟ್ಟು ಮತ್ತು ಈ ಪಾಲುದಾರಿಕೆಯಲ್ಲಿ ಆಸಿಯಾನ್ನ ಕೇಂದ್ರ ಸ್ಥಾನದ ಬಗ್ಗೆ ಭಾರತ ಹೊಂದಿರುವ ಬದ್ಧತೆಯು ಅಚಲವಾಗಿದೆ ಮತ್ತು ಮುಂದೆಯೂ ಹಾಗೆಯೇ ಮುಂದುವರಿಯಲಿದೆ.
ಇಂದಿನ ಸಭೆಯು ನಮ್ಮ 'ಸಮಗ್ರ ಕಾರ್ಯತಂತ್ರ ಪಾಲುದಾರಿಕೆ'ಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ. ಸುರಕ್ಷಿತ, ಎಲ್ಲರನ್ನೂ ಒಳಗೊಂಡ ಮತ್ತು ಸಮೃದ್ಧ ಇಂಡೋ-ಪೆಸಿಫಿಕ್ ಪ್ರದೇಶವನ್ನು ನಿರ್ಮಿಸಲು ಕೊಡುಗೆ ನೀಡುತ್ತದೆ ಎಂಬ ವಿಶ್ವಾಸ ನನಗಿದೆ.
ನಿಮ್ಮೆಲ್ಲರ ಅಭಿಪ್ರಾಯಗಳು ಮತ್ತು ಸಲಹೆ ಸೂಚನೆಗಳನ್ನು ಕೇಳಲು ನಾನು ಎದುರು ನೋಡುತ್ತಿದ್ದೇನೆ.
ತುಂಬು ಧನ್ಯವಾದಗಳು.
ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ಅನುವಾದ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.
*****