ಪ್ರಕಟಣಾ ದಿನಾಂಕ:
17 NOV 2026 12:59PM by PIB Bengaluru
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರಾದ ಶ್ರೀ ಭೂಪೇಂದರ್ ಯಾದವ್ ಇಂದು ಟರ್ಕಿಯ ಅಂಟಲ್ಯಾದಲ್ಲಿ ನಡೆದ ವಿಶ್ವಸಂಸ್ಥೆ ಹವಾಮಾನ ಬದಲಾವಣೆ ಸಮ್ಮೇಳನ (ಸಿಒಪಿ31) ಸಂದರ್ಭದಲ್ಲಿ ಕೈಗಾರಿಕಾ ನಾಯಕರ ದುಂಡುಮೇಜಿನ ಸಭೆಯಲ್ಲಿ ಪಾಲ್ಗೊಂಡರು. ಈ ವೇಳೆ ಅವರು ‘ಕೈಗಾರಿಕಾ ಪರಿವರ್ತನೆಗಾಗಿ ನಾಯಕತ್ವ ಗುಂಪು ಮೂರನೇ ಹಂತ’ಕ್ಕೆ('ಲೀಡರ್ಶಿಪ್ ಗ್ರೂಪ್ ಫಾರ್ ಇಂಡಸ್ಟ್ರಿ ಟ್ರಾನ್ಸಿಶನ್ – ಲೀಡ್ಇಟ್ 3.0) ಚಾಲನೆ ನೀಡಿದರು. ದುಂಡುಮೇಜಿನ ಸಭೆಯ ಸಹ-ಅಧ್ಯಕ್ಷತೆಯನ್ನು ಶ್ರೀ ಯಾದವ್ ಮತ್ತು ಸ್ವೀಡನ್ನ ಹವಾಮಾನ ಮತ್ತು ಉದ್ಯಮ ಸಚಿವಾಲಯದ ರಾಜ್ಯ ಕಾರ್ಯದರ್ಶಿ ಘನತೆವೆತ್ತ ಹೆಲೆನಾ ಡಿರ್ಸೆನ್ ವಹಿಸಿದ್ದರು. ಈ ಸಂದರ್ಭದಲ್ಲಿ ವಿಶ್ವಸಂಸ್ಥೆಯ ಹವಾಮಾನ ಕ್ರಿಯೆಯ ವಿಶೇಷ ಸಲಹೆಗಾರ ಮತ್ತು ಸಹಾಯಕ ಪ್ರಧಾನ ಕಾರ್ಯದರ್ಶಿ ಶ್ರೀ ಸೆಲ್ವಿನ್ ಹಾರ್ಟ್ ಕೂಡ ಉಪಸ್ಥಿತರಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀ ಯಾದವ್, ಭೌಗೋಳಿಕ ರಾಜಕೀಯ ಸಂಘರ್ಷಗಳು, ಏರಿಳಿತದ ಇಂಧನ ಮಾರುಕಟ್ಟೆಗಳು ಮತ್ತು ಪೈಪೋಟಿಯ ಅಭಿವೃದ್ಧಿ ಆದ್ಯತೆಗಳ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಸಹಕಾರವು ಇನ್ನಷ್ಟು ಮಹತ್ವದ್ದಾಗಿದೆ, ಅದರಲ್ಲೂ ವಿಶೇಷವಾಗಿ ಇಂಗಾಲದ ಹೊರಸೂಸುವಿಕೆಯನ್ನು ತಗ್ಗಿಸಲು ಕಷ್ಟಕರವಾದ ಕೈಗಾರಿಕಾ ವಲಯಗಳಲ್ಲಿ ಇದು ಅತಿಮುಖ್ಯವಾಗಿದೆ ಎಂದು ಒತ್ತಿ ಹೇಳಿದರು. ಬಡತನ ನಿರ್ಮೂಲನೆ, ಇಂಧನ ಲಭ್ಯತೆ, ಉದ್ಯೋಗ ಸೃಷ್ಟಿ ಮತ್ತು ಮೂಲಸೌಕರ್ಯ ಅಭಿವೃದ್ಧಿಯಂತಹ ಭಾರತದ ಆದ್ಯತೆಗಳು ಸುಸ್ಥಿರ ಮತ್ತು ಕಡಿಮೆ-ಇಂಗಾಲದ ಭವಿಷ್ಯದ ಅನ್ವೇಷಣೆಯೊಂದಿಗೆ ಜೊತೆಯಾಗಿ ಸಾಗಬೇಕು ಎಂದು ಅವರು ಪ್ರತಿಪಾದಿಸಿದರು.
ಭಾರತದ ಹವಾಮಾನ ಸಾಧನೆಗಳನ್ನು ಬಿಂಬಿಸಿದ ಸಚಿವರು, 2005 ಮತ್ತು 2022ರ ನಡುವೆ ದೇಶವು ತನ್ನ ಹೊರಸೂಸುವಿಕೆಯ ತೀವ್ರತೆಯಲ್ಲಿ ಶೇ.37.38ರಷ್ಟು ಕಡಿತವನ್ನು ಸಾಧಿಸಿದೆ ಮತ್ತು ತನ್ನ ಗುರಿಗಿಂತ ಐದು ವರ್ಷಗಳ ಮುಂಚಿತವಾಗಿಯೇ ಶೇ. 50ರಷ್ಟು ಪಳೆಯುಳಿಕೆಯೇತರ ಇಂಧನ ಆಧಾರಿತ ವಿದ್ಯುತ್ ಸಾಮರ್ಥ್ಯವನ್ನು ತಲುಪಿದೆ ಎಂದು ಗಮನಸೆಳೆದರು. ಭಾರತದ ಹೆಚ್ಚುವರಿ ಅರಣ್ಯ ಕಾರ್ಬನ್ ಸಿಂಕ್ ಕೂಡ ಅಂದಾಜು 2.44 ಶತಕೋಟಿ ಟನ್ ಇಂಗಾಲದ ಡೈಯಾಕ್ಸೈಡ್ ತತ್ಸಮಾನವನ್ನು ತಲುಪಿದೆ ಎಂದು ಹೇಳಿದರು. ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಮಾಡಿದ ಸಾಧನೆಗಳಿಗೆ ಸಭೆಯಲ್ಲಿ ಚಪ್ಪಾಳೆಯ ಮೆಚ್ಚುಗೆ ವ್ಯಕ್ತವಾಯಿತು ಮತ್ತು ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟದಲ್ಲಿ ದೇಶದ ಬದ್ಧತೆಯನ್ನು ಇತರ ರಾಷ್ಟ್ರಗಳಿಗೆ ಮಾರ್ಗದರ್ಶಕ ಬೆಳಕು ಎಂದು ಬಣ್ಣಿಸಲಾಯಿತು. ಕಷ್ಟಕರವಾದ ವಲಯಗಳಲಲ್ಲೂ ಇಂಗಾಲದ ಹೊರಸೂಸುವಿಕೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಭಾರತದ ಪ್ರಯತ್ನಗಳನ್ನು ಶ್ರೀ ಹಾರ್ಟ್ ಮತ್ತು ಐರೋಪ್ಯ ಒಕ್ಕೂಟದಿಂದ ಮೆಚ್ಚುಗೆ ವ್ಯಕ್ತವಾಯಿತು.
2019 ರಲ್ಲಿ ಭಾರತ ಮತ್ತು ಸ್ವೀಡನ್ನಿಂದ ಪ್ರಾರಂಭವಾದಾಗಿನಿಂದ ‘ಲೀಡ್ಇಟ್’ನ ಪ್ರಗತಿಯನ್ನು ಸ್ಮರಿಸಿದ ಶ್ರೀ ಯಾದವ್, ಇದರ ಎರಡನೇ ಹಂತವು 'ಭಾರತ-ಸ್ವೀಡನ್ ಕೈಗಾರಿಕಾ ಪರಿವರ್ತನೆ ಪಾಲುದಾರಿಕೆ'ಯ ಅಡಿಯಲ್ಲಿ ಉಕ್ಕು ಮತ್ತು ಸಿಮೆಂಟ್ನಲ್ಲಿ ಹನ್ನೊಂದು ಪೂರ್ವ-ಪ್ರಾಯೋಗಿಕ ಯೋಜನೆಗಳಿಗೆ ಅನುಕೂಲ ಮಾಡಿಕೊಟ್ಟಿದೆ. ಇದರ ಜೊತೆಗೆ ಕಡಿಮೆ-ಇಂಗಾಲದ ಭಾರಿ ವಾಹನಗಳ ಸಾರಿಗೆಗೂ ಸಹಕಾರವನ್ನು ವಿಸ್ತರಿಸಿದೆ ಎಂದು ಎತ್ತಿ ತೋರಿದರು. ಈ ಯೋಜನೆಗಳು ಹೈಡ್ರೋಜನ್ ಆಧಾರಿತ ಕಬ್ಬಿಣದ ತಯಾರಿಕೆ, ಕೈಗಾರಿಕಾ ಶಾಖದ ವಿದ್ಯುದೀಕರಣ, ಇಂಗಾಲದ ಸೆರೆಹಿಡಿಯುವಿಕೆ ಮತ್ತು ಬಳಕೆ, ಕ್ಲಿಂಕರ್ ಬದಲಿ, ಕೈಗಾರಿಕಾ ಆವರ್ತನೆ (ಸರ್ಕ್ಯುಲೇಟರಿ) ಹಾಗೂ ಸಿಮೆಂಟ್ ಬೇಡಿಕೆಯನ್ನು ಕಡಿಮೆ ಮಾಡಲು ಕೃತಕ ಬುದ್ಧಿಮತ್ತೆಯ ಬಳಕೆಯನ್ನು ಒಳಗೊಂಡಿವೆ. ‘ಹವಾಮಾನ ಹೂಡಿಕೆ ನಿಧಿ’ಗಳ ಅಡಿಯಲ್ಲಿ ದಕ್ಷಿಣ ಆಫ್ರಿಕಾದ ಹೂಡಿಕೆ ಯೋಜನೆಗೆ ಮತ್ತು ಕಡಿಮೆ-ಇಂಗಾಲದ ಸಿಮೆಂಟ್ ಕುರಿತು ಇಥಿಯೋಪಿಯಾದ ತೊಡಗಿಸಿಕೊಳ್ಳುವಿಕೆಗೂ ‘ಲೀಡ್ಇಟ್’ ಬೆಂಬಲ ನೀಡಿದೆ ಎಂದು ಅವರು ಮಾಹಿತಿ ನೀಡಿದರು.

'ಲೀಡ್ಐಟ್’ನ ಸದಸ್ಯತ್ವವು 20 ದೇಶಗಳು ಮತ್ತು 33 ಕಂಪನಿಗಳಿಗೆ ವಿಸ್ತರಿಸಿದೆ ಎಂದು ಉಲ್ಲೇಖಿಸಿದ ಸಚಿವರು, ಬ್ರೆಜಿಲ್ ಅನ್ನು ಅದರ ಹೊಸ ಸದಸ್ಯ ರಾಷ್ಟ್ರವಾಗಿ ಸ್ವಾಗತಿಸಿದರು. ಇದು ಜಾಗತಿಕ ದಕ್ಷಿಣದ ಧ್ವನಿಯನ್ನು ಮತ್ತು ದಕ್ಷಿಣ-ದಕ್ಷಿಣ ಸಹಕಾರದ ಅವಕಾಶಗಳನ್ನು ಬಲಪಡಿಸುತ್ತದೆ ಎಂದರು. 2027-2030ರ ಅವಧಿಯನ್ನು ಒಳಗೊಂಡಿರುವ 'ಲೀಡ್ಇಟ್ 3.0', ಕೇವಲ ಪಾಲುದಾರಿಕೆಗಳನ್ನು ಸ್ಥಾಪಿಸುವು ಹಂತದಿಂದ ಕೈಗಾರಿಕಾ ಯೋಜನೆಗಳನ್ನು ವಿಸ್ತರಿಸುವ, ಬಂಡವಾಳವನ್ನು ಕ್ರೋಢೀಕರಿಸುವ ಮತ್ತು ಸ್ಪಷ್ಟ ಫಲಿತಾಂಶಗಳನ್ನು ತಲುಪಿಸುವತ್ತ ತನ್ನ ಗಮನವನ್ನು ಹರಿಸುತ್ತದೆ. ಇದರ ಮೂರು ಆದ್ಯತೆಗಳೆಂದರೆ -ಕೈಗಾರಿಕಾ ಯೋಜನೆಗಳ ಮೂಲಕ ತಂತ್ರಜ್ಞಾನ ಅಭಿವೃದ್ಧಿ ಮತ್ತು ಪ್ರಸಾರ; ಯೋಜನೆಗಳನ್ನು ಹಣಕಾಸಿನೊಂದಿಗೆ ಬೆಸೆಯಲು ಬಂಡವಾಳ ಕ್ರೋಢೀಕರಣ ಮತ್ತು ಅಪಾಯಗಳನ್ನು ತಗ್ಗಿಸುವುದು; ಹಾಗೂ ಇಂಗಾಲದ ಮಾರುಕಟ್ಟೆಗಳು ಮತ್ತು ಕಾರ್ಯಪಡೆಯ ಪರಿವರ್ತನೆ ಸೇರಿದಂತೆ ಸಾಮರ್ಥ್ಯ ವರ್ಧನೆ ಮತ್ತು ನೀತಿ ಬೆಂಬಲ. ಉಕ್ಕು, ಸಿಮೆಂಟ್ ಮತ್ತು ಸಾರಿಗೆಯು ಪ್ರಮುಖ ವಲಯಗಳಾಗಿ ಉಳಿಯುತ್ತವೆ, ಇದೇವೇಳೆ, ಈ ವೇದಿಕೆಯು ಹೊಸ ವಲಯಗಳು ಮತ್ತು ತಂತ್ರಜ್ಞಾನಗಳಿಗೂ ಮುಕ್ತವಾಗಿರುತ್ತದೆ ಎಂದು ಸಚಿವರು ಹೇಳಿದರು.
ಸಾಧ್ಯಾಸಾಧ್ಯತೆ ಅಧ್ಯಯನಗಳಿಂದ ಪ್ರಾಯೋಗಿಕ ಯೋಜನೆಗಳು, ಪ್ರದರ್ಶನ ಮತ್ತು ಪುನರಾವರ್ತನೆಯತ್ತ ಸಾಗುವ ಅಗತ್ಯವನ್ನು ಒತ್ತಿ ಹೇಳಿದ ಶ್ರೀ ಯಾದವ್, ಈ ಉಪಕ್ರಮಕ್ಕೆ ಸೇರಲು ಹಾಗೂ ಕೈಗಾರಿಕಾ ಪರಿವರ್ತನೆಯ ಬದ್ಧತೆಗಳನ್ನು ಕಾರ್ಯರೂಪಕ್ಕೆ ತರಲು ದೇಶಗಳು ಮತ್ತು ಕಂಪನಿಗಳಿಗೆ ಕರೆ ನೀಡಿದರು. 'ಲೀಡ್ಇಟ್ 3.0' ಅನ್ನು ‘ಸಿಒಪಿ31’ರಲ್ಲಿ ಪ್ರಾರಂಭಿಸಲಾಗುತ್ತಿದ್ದು, ಇದನ್ನು ಅಧ್ಯಕ್ಷರು 'ಅನುಷ್ಠಾನದ ಸಿಒಪಿ' ಎಂದು ಕರೆದಿದ್ದಾರೆ ಎಂದು ಅವರು ಒತ್ತಿ ಹೇಳಿದರು. ಈ ಪರಿವರ್ತನೆಯು ಕಾರ್ಮಿಕರು, ಸಮುದಾಯಗಳು ಮತ್ತು ಅಭಿವೃದ್ಧಿಶೀಲ ಆರ್ಥಿಕತೆಗಳಿಗೆ ಅವಕಾಶಗಳನ್ನು ಸೃಷ್ಟಿಸಬೇಕು ಎಂದು ಅವರು ಹೇಳಿದರು. ತಮ್ಮ ಭಾಷಣವನ್ನು ಮುಕ್ತಾಯಗೊಳಿಸುವ ಮುನ್ನ, ಜಾಗತಿಕ ಕೈಗಾರಿಕಾ ಪರಿವರ್ತನೆಯನ್ನು ಮುನ್ನಡೆಸುವಲ್ಲಿ ಸಾಮೂಹಿಕ ಕ್ರಿಯೆಯ ಮಹತ್ವವನ್ನು ಸಚಿವರು ಒತ್ತಿಹೇಳಿದರು.
*****