ಪ್ರಕಟಣಾ ದಿನಾಂಕ:
17 NOV 2026 1:04AM by PIB Bengaluru
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರಾದ ಶ್ರೀ ಭೂಪೇಂದರ್ ಯಾದವ್ ಅವರು, ಟರ್ಕಿಯ ಅಂಟಲ್ಯದಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನದಲ್ಲಿ (ಸಿಒಪಿ31), 'ದೊಡ್ಡ ಬೆಕ್ಕುಗಳು: ಹವಾಮಾನ ಬದಲಾವಣೆ ಉಪಶಮನದ ಚಾಲಕರು' ಎಂಬ ಉನ್ನತ ಮಟ್ಟದ ಸಚಿವರ ಉಪ-ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ವೇಳೆ ಅವರು ಹವಾಮಾನ ಬದಲಾವಣೆ ತಗ್ಗಿಸುವಿಕೆಯನ್ನು ಮುನ್ನಡೆಸುವಲ್ಲಿ ಮತ್ತು ಪರಿಸರ ವ್ಯವಸ್ಥೆಯ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುವಲ್ಲಿ ದೊಡ್ಡ ಬೆಕ್ಕುಗಳ ಸಂರಕ್ಷಣೆಯ ನಿರ್ಣಾಯಕ ಪಾತ್ರವನ್ನು ಒತ್ತಿ ಹೇಳಿದರು.
ಈ ಕಾರ್ಯಕ್ರಮವನ್ನು ಭಾರತ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮತ್ತು ‘ಅಂತಾರಾಷ್ಟ್ರೀಯ ದೊಡ್ಡ ಬೆಕ್ಕುಗಳ ಮೈತ್ರಿಕೂಟ’ (ಇಂಟರ್ನ್ಯಾಷನಲ್ ಬಿಗ್ ಕ್ಯಾಟ್ ಅಲಯನ್ಸ್-ಐಬಿಸಿಎ) ಜಂಟಿಯಾಗಿ ಆಯೋಜಿಸಿದ್ದವು. ಈ ಕಾರ್ಯಕ್ರಮದಲ್ಲಿ ನೇಪಾಳ, ವೆನೆಜುವೆಲಾ, ಕಾಂಬೋಡಿಯಾ,ಶ್ರೀಲಂಕಾದಂತಹ ದೊಡ್ಡ ಬೆಕ್ಕುಗಳ ಆವಾಸಸ್ಥಾನವಿರುವ ದೇಶಗಳ ಸಚಿವರು ಮತ್ತು ಪ್ರತಿನಿಧಿಗಳು ಹಾಗೂ ರಾಮ್ಸರ್ ಕನ್ವೆನ್ಷನ್ ಮತ್ತು ಯುಎನ್ಸಿಸಿಡಿ (ಯುಎನ್ಸಿಸಿಡಿ) ನಂತಹ ಅಂತಾರಾಷ್ಟ್ರೀಯ ಒಪ್ಪಂದಗಳು ಮತ್ತು ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಈ ಸಭೆಯಲ್ಲಿ ಗಣ್ಯರು ಮತ್ತು ಸಂರಕ್ಷಣಾ ತಜ್ಞರು ಹವಾಮಾನ ಬದಲಾವಣೆ ಉಪಶಮನ, ಪರಿಸರ ವ್ಯವಸ್ಥೆಯ ಸ್ಥಿತಿಸ್ಥಾಪಕತ್ವ ಮತ್ತು ಸುಸ್ಥಿರ ಅಭಿವೃದ್ಧಿಗೆ ದೊಡ್ಡ ಬೆಕ್ಕುಗಳ ಸಂರಕ್ಷಣೆ ಮತ್ತು ಅವುಗಳ ಆವಾಸಸ್ಥಾನಗಳ ಕೊಡುಗೆಯ ಕುರಿತು ಚರ್ಚಿಸಿದರು. ಪ್ರಪಂಚದ ಏಳು ಪ್ರಮುಖ ದೊಡ್ಡ ಬೆಕ್ಕಿನ ಪ್ರಭೇದಗಳು ಮತ್ತು ಅವುಗಳ ಆವಾಸಸ್ಥಾನಗಳನ್ನು ಸಂರಕ್ಷಿಸುವುದು ಇಂಗಾಲ-ಭರಿತ ಪರಿಸರ ವ್ಯವಸ್ಥೆಗಳನ್ನು ಕಾಪಾಡುವಲ್ಲಿ, ಪರಿಸರ ಸೇವೆಗಳನ್ನು ಬಲಪಡಿಸುವಲ್ಲಿ, ಹವಾಮಾನ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುವಲ್ಲಿ ಮತ್ತು ಜಾಗತಿಕ ಹವಾಮಾನ ಉದ್ದೇಶಗಳನ್ನು ಮುನ್ನಡೆಸುವಲ್ಲಿ ಹೇಗೆ ಕೊಡುಗೆ ನೀಡುತ್ತದೆ ಎಂಬುದನ್ನು ಚರ್ಚೆಗಳು ಉಲ್ಲೇಖಿಸಿಸಿದವು. ‘ಐಬಿಸಿಎ’ ಮಹಾನಿರ್ದೇಶಕ ಶ್ರೀ ಎಸ್.ಪಿ. ಯಾದವ್ ಅವರು, ‘ಐಬಿಸಿಎ’ ಮತ್ತು ದೊಡ್ಡ ಬೆಕ್ಕುಗಳು ಇರುವ ದೇಶಗಳಲ್ಲಿನ ಅವುಗಳ ಸ್ಥಿತಿಗತಿಯ ಕುರಿತು ಪ್ರಸ್ತುತಿಯನ್ನು ನೀಡಿದರು. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ದೊಡ್ಡ ಬೆಕ್ಕುಗಳ ಸಂರಕ್ಷಣೆಯಲ್ಲಿ, ವಿಶೇಷವಾಗಿ ಚಿರತೆಗಳ ಮರುಪರಿಚಯದ ಕುರಿತು ಭಾರತ ಮಾಡಿದ ಪ್ರಯತ್ನಗಳನ್ನು ಭಾಗವಹಿಸಿದವರು ಶ್ಲಾಘಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಯಾದವ್ ಅವರು, ಜಾಗತಿಕ ದೊಡ್ಡ ಬೆಕ್ಕುಗಳ ಸಂರಕ್ಷಣೆಯನ್ನು ಮುನ್ನಡೆಸುವಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ರೂಪಿಸಿದ ‘ಅಂತಾರಾಷ್ಟ್ರೀಯ ದೊಡ್ಡ ಬೆಕ್ಕುಗಳ ಮೈತ್ರಿಕೂಟ’ದ (ಐಬಿಸಿಎ) ಪಾತ್ರವನ್ನು ಉಲ್ಲೇಖಿಸಿದರು. ಜಾಗತಿಕವಾಗಿ ವನ್ಯಜೀವಿಗಳ ಚೇತರಿಕೆ ಎದುರಿಸುತ್ತಿರುವ ಸವಾಲುಗಳನ್ನು ಗುರುತಿಸಿದ ಅವರು, ‘ಐಬಿಸಿಎ’ ಭಾರತದ ಯಶಸ್ವಿ ಸಂರಕ್ಷಣಾ ಮಾದರಿಗಳನ್ನು ಹಂಚಿಕೊಳ್ಳಲು, ಜ್ಞಾನ ವಿನಿಮಯವನ್ನು ಸುಗಮಗೊಳಿಸಲು, ಅಂತಾರಾಷ್ಟ್ರೀಯ ಸಹಕಾರವನ್ನು ಬಲಪಡಿಸಲು ಮತ್ತು ಪ್ರಪಂಚದಾದ್ಯಂತ ಎಲ್ಲಾ ಏಳು ದೊಡ್ಡ ಬೆಕ್ಕಿನ ಪ್ರಭೇದಗಳ ಚೇತರಿಕೆಗೆ ಸಾಮರ್ಥ್ಯಗಳನ್ನು ಬೆಳೆಸಲು ಒಂದು ವೇದಿಕೆಯನ್ನು ಒದಗಿಸುತ್ತದೆ ಎಂದು ಹೇಳಿದರು. ರಾಜಕೀಯ ಬದ್ಧತೆ, ಬಲವಾದ ಸಂಸ್ಥೆಗಳು, ನಿರಂತರ ಹೂಡಿಕೆ ಮತ್ತು ಸಮುದಾಯದ ಭಾಗವಹಿಸುವಿಕೆಯು ವನ್ಯಜೀವಿ ಸಂರಕ್ಷಣೆಯನ್ನು ಪರಿಸರ ಭದ್ರತೆ, ಹವಾಮಾನ ಸ್ಥಿತಿಸ್ಥಾಪಕತ್ವ ಮತ್ತು ಸುಸ್ಥಿರ ಅಭಿವೃದ್ಧಿಯ ಸಾಧನವಾಗಿ ಹೇಗೆ ಪರಿವರ್ತಿಸಬಲ್ಲದು ಎಂಬುದನ್ನು ಭಾರತದ ಹುಲಿ ಸಂರಕ್ಷಣಾ ಪಯಣವು ಪ್ರದರ್ಶಿಸುತ್ತದೆ ಎಂದು ಅವರು ತಿಳಿಸಿದರು.
ದೊಡ್ಡ ಬೆಕ್ಕುಗಳ ಸಂರಕ್ಷಣೆಯು ಇಂಗಾಲ-ಭರಿತ ಭೂದೃಶ್ಯಗಳನ್ನು ರಕ್ಷಿಸಲು ಪ್ರಬಲ ಮಾರ್ಗವನ್ನು ಒದಗಿಸುತ್ತದೆ ಎಂದು ಸಚಿವರು ಒತ್ತಿ ಹೇಳಿದರು. ದೊಡ್ಡ ಬೆಕ್ಕುಗಳು ನೇರವಾಗಿ ಇಂಗಾಲವನ್ನು ಹೀರಿಕೊಳ್ಳದಿದ್ದರೂ, ಅವುಗಳ ಸಂರಕ್ಷಣೆಯು ಇಂಗಾಲವನ್ನು ಸಂಗ್ರಹಿಸುವ ಕಾಡುಗಳು, ಹುಲ್ಲುಗಾವಲುಗಳು, ಜೌಗು ಪ್ರದೇಶಗಳು ಮತ್ತು ಪರ್ವತ ಪರಿಸರ ವ್ಯವಸ್ಥೆಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಆವಾಸಸ್ಥಾನಗಳ ಅವನತಿಯಿಂದ ಉಂಟಾಗುವ ಹೊರಸೂಸುವಿಕೆಯನ್ನು ತಡೆಯುತ್ತದೆ ಜೊತೆಗೆ ಹವಾಮಾನ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುತ್ತದೆ ಎಂದು ಸಚಿವರು ತಿಳಿಸಿದರು. ಛತ್ರಿ ಪ್ರಭೇದಗಳಾಗಿ (ಅಂಬ್ರೆಲಾ ಸ್ಪೀಸಿಸ್), ದೊಡ್ಡ ಬೆಕ್ಕುಗಳು ಇಡೀ ಪರಿಸರ ವ್ಯವಸ್ಥೆಯ ರಕ್ಷಣೆಯನ್ನು ಸಜ್ಜುಗೊಳಿಸಲು ಸಹಾಯ ಮಾಡುತ್ತವೆ,ಇದರಿಂದಾಗಿ ಈ ಭೂದೃಶ್ಯಗಳ ಮೇಲೆ ಅವಲಂಬಿತವಾಗಿರುವ ಸಾವಿರಾರು ಇತರ ಪ್ರಭೇದಗಳು ಮತ್ತು ಸಮುದಾಯಗಳಿಗೆ ಪ್ರಯೋಜನವಾಗುತ್ತದೆ. ವನ್ಯಜೀವಿ ಸಂರಕ್ಷಣೆಯು ಪ್ರಕೃತಿ ಆಧಾರಿತ ಹವಾಮಾನ ಕ್ರಿಯೆಯ ಅವಿಭಾಜ್ಯ ಅಂಗವಾಗಿರಬೇಕು. ಜೀವವೈವಿಧ್ಯ, ಪರಿಸರ ವ್ಯವಸ್ಥೆ ಮತ್ತು ಜೀವನೋಪಾಯದ ಪ್ರಯೋಜನಗಳನ್ನು ನೀಡುವ ಜೊತೆಗೆ ಇಂಗಾಲ ಹೊರಸೂಸುವಿಕೆ ಕಡಿತದ ಪ್ರಯತ್ನಗಳಿಗೆ ಪೂರಕವಾಗಿರಬೇಕು ಎಂದು ಅವರು ಒತ್ತಿ ಹೇಳಿದರು.
ಪ್ರಕೃತಿ ಆಧಾರಿತ ಪರಿಹಾರಗಳಿಗೆ ಉದಾಹರಣೆಯಾಗಿ ಭಾರತದ ಹುಲಿ ಸಂರಕ್ಷಣಾ ಉಪಕ್ರಮಗಳನ್ನು ಉಲ್ಲೇಖಿಸಿಸಿದ ಶ್ರೀ ಯಾದವ್ ಅವರು, ಸುಮಾರು 85,000 ಚದರ ಕಿ.ಮೀ.ಗಳಷ್ಟು ವಿಸ್ತಾರವಾಗಿರುವ ದೇಶದ 58 ಹುಲಿ ಸಂರಕ್ಷಿತ ಪ್ರದೇಶಗಳು ವ್ಯಾಪಕವಾದ ಅರಣ್ಯ ಪರಿಸರ ವ್ಯವಸ್ಥೆಗಳು ಮತ್ತು ಅವುಗಳ ಇಂಗಾಲದ ನಿಕ್ಷೇಪಗಳನ್ನು ರಕ್ಷಿಸುತ್ತವೆ ಎಂದು ತಿಳಿಸಿದರು. ಈ ಭೂದೃಶ್ಯಗಳು ಇಂಗಾಲದ ಪ್ರತ್ಯೇಕತೆ, ನೀರು ಶುದ್ಧೀಕರಣ, ಮಣ್ಣಿನ ಸಂರಕ್ಷಣೆ ಮತ್ತು ಅಂತರ್ಜಲ ಮರುಪೂರಣ ಸೇರಿದಂತೆ ಪ್ರಮುಖ ಪರಿಸರ ಸೇವೆಗಳನ್ನು ಒದಗಿಸುತ್ತವೆ. 600ಕ್ಕೂ ಹೆಚ್ಚು ನದಿಗಳು ಈ ಭೂದೃಶ್ಯಗಳಿಂದ ಹುಟ್ಟುತ್ತವೆ ಅಥವಾ ಹರಿಯುತ್ತವೆ, ಇದು ಹುಲಿ ಆವಾಸಸ್ಥಾನಗಳ ಪ್ರಾಮುಖ್ಯತೆಯನ್ನು ನಿರ್ಣಾಯಕ ಜಲಾನಯನ ಪ್ರದೇಶಗಳಾಗಿ ಒತ್ತಿಹೇಳುತ್ತದೆ. ಸಮುದಾಯದ ಭಾಗವಹಿಸುವಿಕೆ, ಪರಿಸರ-ಅಭಿವೃದ್ಧಿ ಮತ್ತು ಸುಸ್ಥಿರ ಜೀವನೋಪಾಯದ ಉಪಕ್ರಮಗಳು ಹುಲಿ ಸಂರಕ್ಷಣೆಯನ್ನು ಅಂತರ್ಗತ ಮತ್ತು ಸುಸ್ಥಿರಗೊಳಿಸಿವೆ ಎಂದು ಸಚಿವರು ಒತ್ತಿ ಹೇಳಿದರು.
ಹುಲಿ ಸಂರಕ್ಷಣೆಯಲ್ಲಿ ಭಾರತದ ಯಶಸ್ಸನ್ನು ಒತ್ತಿಹೇಳಿದ ಶ್ರೀ ಯಾದವ್ ಅವರು, ನಿರಂತರ ರಾಜಕೀಯ ಬದ್ಧತೆ, ಬಲವಾದ ಶಾಸನ ಮತ್ತು ದೃಢವಾದ ಸಾಂಸ್ಥಿಕ ಕಾರ್ಯವಿಧಾನಗಳೇ ಇದಕ್ಕೆ ಕಾರಣ ಎಂದು ಹೇಳಿದರು. ವನ್ಯಜೀವಿ (ರಕ್ಷಣೆ) ಕಾಯ್ದೆ-1972 ಮತ್ತು ಶಾಸನಬದ್ಧ ಸಂಸ್ಥೆಯಾದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದಿಂದ (ಎನ್ಟಿಸಿಎ) ಬೆಂಬಲಿತವಾದ ‘ಪ್ರಾಜೆಕ್ಟ್ ಟೈಗರ್’ ದೃಢವಾದ ಆಡಳಿತ ಚೌಕಟ್ಟನ್ನು ಒದಗಿಸಿದೆ. ಭಾರತದ ಹುಲಿಗಳ ಸಂಖ್ಯೆಯು 2022ರಲ್ಲಿ 3,682ಕ್ಕೆ ಏರಿದೆ, ಇದು ಪ್ರಪಂಚದ ಕಾಡು ಹುಲಿಗಳ ಶೇಕಡಾ 70 ಕ್ಕಿಂತ ಹೆಚ್ಚು. ಈ ಸಾಧನೆಗೆ ಕೇಂದ್ರ ಮತ್ತು ರಾಜ್ಯಗಳ ನಿರಂತರ ಅನುದಾನ ಹಂಚಿಕೆಗಳು, ಸಮರ್ಪಿತ ಮುಂಚೂಣಿ ಅರಣ್ಯ ಸಿಬ್ಬಂದಿ, ತಂತ್ರಜ್ಞಾನ-ಸಶಕ್ತ ಮೇಲ್ವಿಚಾರಣೆ, ವೈಜ್ಞಾನಿಕ ನಿರ್ವಹಣೆ ಮತ್ತು ಸಮುದಾಯದ ಉಸ್ತುವಾರಿ ಬೆಂಬಲ ನೀಡಿವೆ. ಹುಲಿ ಯೋಜನೆಯು (ಪ್ರಾಜೆಕ್ಟ್ ಟೈಗರ್) ವಾರ್ಷಿಕವಾಗಿ ಸರಿಸುಮಾರು 60 ಲಕ್ಷ ಮಾನವ-ದಿನಗಳ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸುತ್ತದೆ, ಇದು ಹುಲಿ ಸಂರಕ್ಷಣೆಯನ್ನು ಹಸಿರು ಉದ್ಯೋಗ ಮತ್ತು ಸಮುದಾಯದ ಜೀವನೋಪಾಯ ಭದ್ರತೆಯ ಪ್ರಮುಖ ಚಾಲಕ ಶಕ್ತಿಯನ್ನಾಗಿ ಮಾಡಿದೆ ಎಂದು ಅವರು ವಿವರಿಸಿದರು.
*****