ಪ್ರಕಟಣಾ ದಿನಾಂಕ:
15 NOV 2026 1:52PM by PIB Bengaluru
ಭಗವಾನ್ ಬಿರ್ಸಾ ಮುಂಡಾ ಅವರ 151ನೇ ಜನ್ಮದಿನದ ಅಂಗವಾಗಿ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು, ಭಾರತದ ಉಪರಾಷ್ಟ್ರಪತಿ ಹಾಗೂ ರಾಜ್ಯಸಭೆಯ ಸಭಾಪತಿ ಶ್ರೀ ಸಿ. ಪಿ. ರಾಧಾಕೃಷ್ಣನ್, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಲೋಕಸಭಾಧ್ಯಕ್ಷ ಶ್ರೀ ಓಂ ಬಿರ್ಲಾ, ಕಾನೂನು ಮತ್ತು ನ್ಯಾಯ (ಸ್ವತಂತ್ರ) ಹಾಗೂ ಸಂಸದೀಯ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರಾದ ಶ್ರೀ ಅರ್ಜುನ್ ರಾಮ್ ಮೇಘವಾಲ್ ಸೇರಿದಂತೆ ಇತರ ಗಣ್ಯರು ಸಂಸತ್ ಭವನ ಸಂಕೀರ್ಣದ 'ಪ್ರೇರಣಾ ಸ್ಥಳ'ದಲ್ಲಿರುವ ಭಗವಾನ್ ಬಿರ್ಸಾ ಮುಂಡಾ ಅವರ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು. ಈ ದಿನವನ್ನು ಭಾರತದಾದ್ಯಂತ 'ಜಂಜಾತೀಯ ಗೌರವ ದಿವಸ'ವಾಗಿ ಆಚರಿಸಲಾಗುತ್ತದೆ.
'ಧರ್ತಿ ಆಭಾ' ಎಂದು ಗೌರವಿಸಲ್ಪಡುವ ಭಗವಾನ್ ಬಿರ್ಸಾ ಮುಂಡಾ ಅವರು, ಸ್ವಾತಂತ್ರ್ಯ ಹೋರಾಟಗಾರರಾಗಿ ಮತ್ತು ಬುಡಕಟ್ಟು ಜನರ ಹಕ್ಕುಗಳ ಪ್ರತಿಪಾದಕರಾಗಿ ಭಾರತೀಯ ಇತಿಹಾಸದಲ್ಲಿ ವಿಶಿಷ್ಟ ಸ್ಥಾನ ಹೊಂದಿದ್ದಾರೆ. 'ಉಲ್ಗುಲಾನ್' ಚಳುವಳಿಯ ಮೂಲಕ ಅವರು ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆ ಮತ್ತು ಶೋಷಣೆಯ ವಿರುದ್ಧ ಬುಡಕಟ್ಟು ಸಮುದಾಯಗಳನ್ನು ಸಂಘಟಿಸಿದರು ಹಾಗೂ ಜಲ, ಅರಣ್ಯ ಮತ್ತು ಭೂಮಿಯ ಮೇಲಿನ ಅವರ ಹಕ್ಕುಗಳನ್ನು ಪ್ರತಿಪಾದಿಸಿದರು. ಅವರ ನಾಯಕತ್ವವು ಬುಡಕಟ್ಟು ಅಸ್ಮಿತೆ, ಸಾಂಸ್ಕೃತಿಕ ಘನತೆ ಮತ್ತು ಸ್ವಾಭಿಮಾನದ ರಕ್ಷಣೆಯೊಂದಿಗೆ ಸ್ವಾತಂತ್ರ್ಯ ಹೋರಾಟವನ್ನು ಬೆಸೆಯಿತು. ಅವರ ಸ್ಥೈರ್ಯ, ತ್ಯಾಗ ಮತ್ತು ನ್ಯಾಯಕ್ಕಾಗಿನ ಬದ್ಧತೆಯು ಎಲ್ಲರಿಗೂ ಸದಾ ಸ್ಫೂರ್ತಿಯ ಸೆಲೆಯಾಗಿರಲಿದೆ; ರಾಷ್ಟ್ರದ ಸಾಮೂಹಿಕ ಸ್ಮೃತಿಯಲ್ಲಿ ಅವರ ಕೊಡುಗೆಗಳು ಗೌರವಯುತ ಸ್ಥಾನವನ್ನು ಪಡೆದಿವೆ.
ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ಬಲಿದಾನಕ್ಕೆ ಗೌರವ ಸಮರ್ಪಿಸಲು ಹಾಗೂ ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ರಾಷ್ಟ್ರೀಯ ಜೀವನಕ್ಕೆ ಬುಡಕಟ್ಟು ಸಮುದಾಯಗಳು ನೀಡಿರುವ ಕೊಡುಗೆಯನ್ನು ಗುರುತಿಸಲು 2021 ನೇ ಇಸವಿಯಿಂದ, ನವೆಂಬರ್ 15 ಅನ್ನು 'ಜಂಜಾತೀಯ ಗೌರವ ದಿವಸ'ವನ್ನಾಗಿ ಆಚರಿಸಲಾಗುತ್ತಿದೆ. ಈ ದಿನವು ಬುಡಕಟ್ಟು ಸಮೂಹದ ಶ್ರೀಮಂತ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯನ್ನು ಸಂಭ್ರಮಿಸುವುದರ ಜೊತೆಗೆ, ಭಾರತದ ಸ್ವಾತಂತ್ರ್ಯ ಮತ್ತು ಪ್ರಗತಿಗೆ ಸಮುದಾಯದ ಕೊಡುಗೆಗಾಗಿ ರಾಷ್ಟ್ರದ ಕೃತಜ್ಞತೆಯನ್ನು ಒತ್ತಿ ಹೇಳಿದೆ.
ಈ ಸಂಭ್ರಮಾಚರಣೆಯ ಭಾಗವಾಗಿ, ವಿವಿಧ ರಾಜ್ಯಗಳ ಬುಡಕಟ್ಟು ಜಾನಪದ ಕಲಾವಿದರು 'ಪ್ರೇರಣಾ ಸ್ಥಳ'ದಲ್ಲಿ ಪ್ರದರ್ಶನ ನೀಡಿದರು; ಅವರು ತಮ್ಮ ಕಲಾ ಪ್ರಕಾರಗಳ ಮೂಲಕ ಗಣ್ಯರನ್ನು ಸ್ವಾಗತಿಸುವುದರ ಜೊತೆಗೆ, ಭಾರತದ ಬುಡಕಟ್ಟು ಸಾಂಸ್ಕೃತಿಕ ಪರಂಪರೆಗಳ ಶ್ರೀಮಂತಿಕೆಯನ್ನು ಅನಾವರಣಗೊಳಿಸಿದರು.
ಇದಕ್ಕೂ ಮುನ್ನ ಲೋಕಸಭಾ ಸ್ಪೀಕರ್ ಎಕ್ಸ್ ನಲ್ಲಿ ನೀಡಿರುವ ಸಂದೇಶ ಹೀಗಿದೆ:
"ಬುಡಕಟ್ಟು ಅಸ್ಮಿತೆ, ಸ್ವಾಭಿಮಾನ ಮತ್ತು ದೇಶಭಕ್ತಿಯ ಜೀವಂತ ಪ್ರತೀಕವಾಗಿರುವ 'ಧರ್ತಿ ಆಭಾ' ಭಗವಾನ್ ಬಿರ್ಸಾ ಮುಂಡಾ ಅವರ 151ನೇ ಜನ್ಮದಿನದಂದು ಅವರಿಗೆ ಅತ್ಯಂತ ಗೌರವಪೂರ್ವಕವಾಗಿ ಶಿರಬಾಗಿ ನಮಿಸುತ್ತೇನೆ. 'ಜಂಜಾತೀಯ ಗೌರವ ದಿವಸ'ದ ಈ ಸಂದರ್ಭದಲ್ಲಿ ದೇಶದ ಎಲ್ಲಾ ನಾಗರಿಕರಿಗೆ ಹಾರ್ದಿಕ ಶುಭಾಶಯಗಳು.
ಅತ್ಯಂತ ಕಿರಿಯ ವಯಸ್ಸಿನಲ್ಲೇ, ಅಚಲ ಸ್ಥೈರ್ಯ, ದೂರದೃಷ್ಟಿಯ ಆಲೋಚನೆಗಳು ಮತ್ತು ಅಸಾಧಾರಣ ನಾಯಕತ್ವದ ಗುಣಗಳ ಮೂಲಕ ಅವರು ಬುಡಕಟ್ಟು ಸಮಾಜದಲ್ಲಿ ಹೊಸ ಜಾಗೃತಿಯನ್ನು ಮೂಡಿಸಿದರು. ಅವರ ನೇತೃತ್ವದ 'ಉಲ್ಗುಲಾನ್' (ದಂಗೆಯು), ಬ್ರಿಟಿಷ್ ಆಳ್ವಿಕೆಯ ಶೋಷಣಾ ವ್ಯವಸ್ಥೆ, ಅನ್ಯಾಯ ಮತ್ತು ದಬ್ಬಾಳಿಕೆಯ ವಿರುದ್ಧ ಒಂದು ಪ್ರಬಲ ಜನಾಂದೋಲನವಾಗಿ ಹೊರಹೊಮ್ಮಿತು. ಈ ಹೋರಾಟವು ಕೇವಲ ರಾಜಕೀಯ ಪ್ರತಿರೋಧವಾಗಿರಲಿಲ್ಲ; ಬದಲಾಗಿ, ಜಲ, ಅರಣ್ಯ ಮತ್ತು ಭೂಮಿಯ ಮೇಲಿನ ಬುಡಕಟ್ಟು ಸಮುದಾಯಗಳ ಹಕ್ಕುಗಳನ್ನು, ಅವರ ಸಾಂಸ್ಕೃತಿಕ ಅಸ್ತಿತ್ವವನ್ನು ಹಾಗೂ ಸಾಮಾಜಿಕ ನ್ಯಾಯವನ್ನು ರಕ್ಷಿಸುವ ಒಂದು ಸಮಗ್ರ ಸಂಕಲ್ಪವಾಗಿತ್ತು. ಸಮಾಜಕ್ಕೆ ಅದರ ಸಂಪ್ರದಾಯಗಳು, ಪರಂಪರೆ ಮತ್ತು ಆತ್ಮಗೌರವದ ಬಗ್ಗೆ ಅರಿವು ಮೂಡಿಸುವ ಮೂಲಕ, ಅವರು ಏಕತೆ, ಸಂಘಟನೆ ಮತ್ತು ಸ್ವಾವಲಂಬನೆಯ ಹಾದಿಯನ್ನು ತೋರಿಸಿಕೊಟ್ಟರು.
ಭಗವಾನ್ ಬಿರ್ಸಾ ಮುಂಡಾ ಅವರು ಸಾಮಾಜಿಕ ಪಿಡುಗುಗಳು, ಮೂಢನಂಬಿಕೆಗಳು ಮತ್ತು ಶೋಷಣೆಯ ವಿರುದ್ಧ ಸಾರ್ವಜನಿಕ ಜಾಗೃತಿ ಮೂಡಿಸಿದರು. ಅವರ ಆದರ್ಶಗಳು ಬುಡಕಟ್ಟು ಸಮುದಾಯಗಳಲ್ಲಿ ಆತ್ಮಗೌರವ, ಸಾಮೂಹಿಕ ಜವಾಬ್ದಾರಿ ಮತ್ತು ತಮ್ಮ ಹಕ್ಕುಗಳ ಬಗೆಗಿನ ಜಾಗರೂಕತೆಯ ಭಾವವನ್ನು ಬಲಪಡಿಸಿದವು. ಯಾವುದೇ ಸಮಾಜದ ನಿಜವಾದ ಶಕ್ತಿಯು ಅದರ ಸಾಂಸ್ಕೃತಿಕ ಮೂಲಗಳು, ಸಮುದಾಯದ ಒಗ್ಗಟ್ಟು ಮತ್ತು ತನ್ನ ಅಸ್ತಿತ್ವವನ್ನು ರಕ್ಷಿಸಿಕೊಳ್ಳುವ ದೃಢ ಸಂಕಲ್ಪದಲ್ಲಿ ಅಡಗಿದೆ ಎಂಬ ಸತ್ಯವನ್ನು ಅವರ ಹೋರಾಟವು ಪ್ರತಿಬಿಂಬಿಸಿದೆ.
ಅವರ ಜೀವನವು ತ್ಯಾಗ, ತಪಸ್ಸು, ಹೋರಾಟ ಮತ್ತು ಸಾರ್ವಜನಿಕ ಸೇವೆಯ ಸ್ಫೂರ್ತಿದಾಯಕ ಕಥನವಾಗಿದ್ದು, ಇದು ಮುಂದಿನ ಪೀಳಿಗೆಗೂ ದೇಶಭಕ್ತಿ, ಸಾಮಾಜಿಕ ಸಾಮರಸ್ಯ ಮತ್ತು ನ್ಯಾಯದ ಮೌಲ್ಯಗಳ ಬೆಳಕನ್ನು ನೀಡುತ್ತಲೇ ಇರಲಿದೆ. ಭಗವಾನ್ ಬಿರ್ಸಾ ಮುಂಡಾ ಅವರ ಅನನ್ಯ ಕೊಡುಗೆಯು ಭಾರತೀಯ ಇತಿಹಾಸದ ಅಮೂಲ್ಯ ಪರಂಪರೆಯಾಗಿದೆ. ಬುಡಕಟ್ಟು ಸಮಾಜದ ಗೌರವ, ಹಕ್ಕುಗಳು ಮತ್ತು ಸರ್ವತೋಮುಖ ಅಭಿವೃದ್ಧಿಗೆ ದೃಢ ಬದ್ಧತೆಯೊಂದಿಗೆ ನಿಲ್ಲಲು ಅವರ ಆದರ್ಶಗಳು ಸದಾ ಸ್ಪೂರ್ತಿ ನೀಡುತ್ತಲಿರಲಿವೆ.
*****