ಪ್ರಕಟಣಾ ದಿನಾಂಕ:
12 NOV 2026 4:42PM by PIB Bengaluru
ಭಾರತದ ಕೃಷಿ ಜೀವವೈವಿಧ್ಯದ ಪಾಲಕರು ಮತ್ತು ನಾವೀನ್ಯತೆಯ ರೂವಾರಿಗಳೆಂದು ರೈತರನ್ನು ಗುರುತಿಸುವುದರ ಜೊತೆಗೆ, ಅವರ ಸಾಂಪ್ರದಾಯಿಕ ಜ್ಞಾನವನ್ನು ವೈಜ್ಞಾನಿಕ ಸಂಶೋಧನೆ, ಬೀಜ ವ್ಯವಸ್ಥೆಗಳು ಮತ್ತು ಮಾರುಕಟ್ಟೆಯ ಅವಕಾಶಗಳೊಂದಿಗೆ ಬೆಸೆಯಬೇಕು ಎಂದು ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಡಾ. ಪಿ.ಕೆ. ಮಿಶ್ರಾ ಹೇಳಿದರು. ಸಸ್ಯ ತಳಿಗಳ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರದ (ಪಿಪಿವಿಎಫ್ಆರ್ಎ) 22ನೇ ಸಂಸ್ಥಾಪನಾ ದಿನ ಹಾಗೂ ಪ್ಲಾಂಟ್ ಜೀನೋಮ್ ಸೇವಿಯರ್ (ಸಸ್ಯ ಜೀನೋಮ್ ಸಂರಕ್ಷಕ) ಪ್ರಶಸ್ತಿ ಪ್ರದಾನ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಡಾ. ಮಿಶ್ರಾ, ಈ ಸಂದರ್ಭವು ಸಸ್ಯ ತಳಿಗಳ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯ್ದೆ, 2001 ರ 25 ವರ್ಷಗಳನ್ನು ಪೂರೈಸಿದ ಸಂಕೇತವಾಗಿದೆ ಎಂದು ತಿಳಿಸಿದರು.
ಹವಾಮಾನ ಬದಲಾವಣೆ, ನೀರಿನ ಕೊರತೆ, ಕೀಟಗಳು ಮತ್ತು ರೋಗಗಳನ್ನು ತಡೆದುಕೊಳ್ಳಬಲ್ಲ ಬೆಳೆಗಳನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಸಾಂಪ್ರದಾಯಿಕ ಜ್ಞಾನ, ಆಹಾರ ಸಂಸ್ಕೃತಿ ಮತ್ತು ಸಮುದಾಯಗಳ ಜೀವನೋಪಾಯವನ್ನು ಸಂರಕ್ಷಿಸುವಲ್ಲಿ ಭಾರತದ ಶ್ರೀಮಂತ ಕೃಷಿ ಜೀವವೈವಿಧ್ಯವು ಮಹತ್ವದ ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದರು. ಭಾರತದ 22 ಕೃಷಿ ಜೀವವೈವಿಧ್ಯ ತಾಣಗಳನ್ನು ಪ್ರಸ್ತಾಪಿಸಿದ ಅವರು, ಸಮುದಾಯಗಳ ನೇತೃತ್ವದಲ್ಲಿ ನಡೆಯುವ ಸಂರಕ್ಷಣಾ ಕಾರ್ಯಕ್ಕೆ ಉದಾಹರಣೆಯಾಗಿ ಒಡಿಶಾದ ಕೊರಾಪುಟ್ ಪ್ರದೇಶವನ್ನು ಉಲ್ಲೇಖಿಸಿದರು. ಕೊರಾಪುಟ್ ಅನ್ನು 2012ರಲ್ಲಿ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯು (ಎಫ್ಎಒ) ಜಾಗತಿಕ ಮಹತ್ವದ ಕೃಷಿ ಪರಂಪರೆಯ ವ್ಯವಸ್ಥೆ) ಎಂದು ಗುರುತಿಸಿದೆ ಎಂದು ತಿಳಿಸಿದರು.
ರೈತರ ಹಕ್ಕುಗಳಿಗೆ ಸಂಬಂಧಿಸಿದಂತೆ ಭಾರತ ರೂಪಿಸಿರುವ ವಿಶಿಷ್ಟ ಚೌಕಟ್ಟನ್ನು ಪ್ರಸ್ತಾಪಿಸಿದ ಡಾ. ಮಿಶ್ರಾ, ಸಸ್ಯ ತಳಿ ಅಭಿವೃದ್ಧಿಪಡಿಸುವವರ ಹಕ್ಕುಗಳನ್ನು ಗೌರವಿಸುವುದರ ಜೊತೆಗೆ ಸಸ್ಯ ತಳಿಗಳ ಸಂರಕ್ಷಕರು, ಕೃಷಿಕರು ಮತ್ತು ಅಭಿವೃದ್ಧಿಪಡಿಸುವವರು ಎಂಬ ನೆಲೆಯಲ್ಲಿ ರೈತರ ಪಾತ್ರವನ್ನು ಗುರುತಿಸುವ ಸಮತೋಲನವನ್ನು ಈ ಕಾಯಿದೆ ಕಾಯ್ದುಕೊಂಡಿದೆ ಎಂದು ಹೇಳಿದರು. ಪಿಪಿವಿಎಫ್ಆರ್ಎ ಅಡಿಯಲ್ಲಿ ನೋಂದಣಿಯಾಗಿರುವ ತಳಿಗಳಲ್ಲಿ ಸುಮಾರು ಅರ್ಧದಷ್ಟು ರೈತರು ಅಭಿವೃದ್ಧಿಪಡಿಸಿದ ತಳಿಗಳಾಗಿವೆ. ಆನುವಂಶಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ ಸಮುದಾಯಗಳಿಗೆ ನ್ಯಾಯಯುತ ಪ್ರತಿಫಲ ದೊರೆಯುವುದನ್ನು ಖಚಿತಪಡಿಸುವಲ್ಲಿ ಪ್ರಯೋಜನ ಹಂಚಿಕೆ ನಿಬಂಧನೆಗಳು ಮತ್ತು ರಾಷ್ಟ್ರೀಯ ಜೀನ್ ನಿಧಿಯ ಪಾತ್ರವನ್ನೂ ಅವರು ಒತ್ತಿಹೇಳಿದರು.
ಭಾರತದ ವೈಜ್ಞಾನಿಕ ಸಾಮರ್ಥ್ಯಗಳನ್ನು ಉಲ್ಲೇಖಿಸಿದ ಅವರು, ಐಸಿಎಆರ್-ಎನ್ಬಿಪಿಜಿಆರ್ನಲ್ಲಿರುವ ರಾಷ್ಟ್ರೀಯ ಜೀನ್ ಬ್ಯಾಂಕ್ ವಿಶ್ವದಲ್ಲೇ ಎರಡನೇ ಅತಿದೊಡ್ಡ ಜೀನ್ ಬ್ಯಾಂಕ್ ಆಗಿದೆ ಎಂದು ತಿಳಿಸಿದರು. ರಾಷ್ಟ್ರೀಯ ಕೃಷಿ ಸಂಶೋಧನಾ ವ್ಯವಸ್ಥೆಯಡಿ ಹವಾಮಾನ ವೈಪರೀತ್ಯಗಳನ್ನು ತಡೆದುಕೊಳ್ಳಬಲ್ಲ ಸುಮಾರು 3,000 ಬೆಳೆ ತಳಿಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದರು. ವಿಶಿಷ್ಟ ಕೃಷಿ ಉತ್ಪನ್ನಗಳಿಗೆ ಆರ್ಥಿಕ ಅವಕಾಶಗಳನ್ನು ಸೃಷ್ಟಿಸುವಲ್ಲಿ ಭೌಗೋಳಿಕ ಸೂಚಕಗಳ (ಜಿಐ) ಸಾಮರ್ಥ್ಯವನ್ನೂ ಅವರು ಉಲ್ಲೇಖಿಸಿದರು.
ಆಹಾರ ಮತ್ತು ಕೃಷಿಗಾಗಿ ಸಸ್ಯ ಆನುವಂಶಿಕ ಸಂಪನ್ಮೂಲಗಳ ಕುರಿತ ಅಂತಾರಾಷ್ಟ್ರೀಯ ಒಪ್ಪಂದದೊಂದಿಗಿನ ಭಾರತದ ಸಹಭಾಗಿತ್ವ, 2022ರಲ್ಲಿ ನವದೆಹಲಿಯಲ್ಲಿ ನಡೆದ ಆಡಳಿತ ಮಂಡಳಿಯ ಅಧಿವೇಶನ ಹಾಗೂ 2023ರಲ್ಲಿ ನಡೆದ ರೈತರ ಹಕ್ಕುಗಳ ಕುರಿತ ಜಾಗತಿಕ ವಿಚಾರ ಸಂಕಿರಣದಲ್ಲಿ ಭಾರತದ ಪಾಲ್ಗೊಳ್ಳುವಿಕೆಯ ಮೂಲಕ ರೈತರ ಹಕ್ಕುಗಳಿಗೆ ಸಂಬಂಧಿಸಿದ ಅಂತಾರಾಷ್ಟ್ರೀಯ ಪ್ರಯತ್ನಗಳಿಗೆ ಭಾರತ ನೀಡಿರುವ ಕೊಡುಗೆಯನ್ನು ಡಾ. ಮಿಶ್ರಾ ವಿವರಿಸಿದರು. ಬ್ರಿಕ್ಸ್ ಕೃಷಿ ಸಚಿವರು ಅಂಗೀಕರಿಸಿದ ಇಂದೋರ್ ಘೋಷಣೆ ಹಾಗೂ ಬೀಜ ವ್ಯವಸ್ಥೆಗಳಲ್ಲಿ ರೈತರ ಹಕ್ಕುಗಳ ಕುರಿತ ಜಾಗತಿಕ ವೇದಿಕೆಯ ಸ್ಥಾಪನೆಯನ್ನೂ ಅವರು ಉಲ್ಲೇಖಿಸಿದರು.
ಕೇವಲ ಗುರುತಿಸುವಿಕೆಗೆ ಸೀಮಿತವಾಗದೆ ರೈತರ ಸಬಲೀಕರಣಕ್ಕೆ ಆದ್ಯತೆ ನೀಡುವ ಅಗತ್ಯವನ್ನು ಪ್ರತಿಪಾದಿಸಿದ ಡಾ. ಮಿಶ್ರಾ, ಸಮುದಾಯ ಬೀಜ ಬ್ಯಾಂಕ್ಗಳು ಮತ್ತು ಕ್ಷೇತ್ರ ಜೀನ್ ಬ್ಯಾಂಕ್ಗಳನ್ನು ಬಲಪಡಿಸುವುದು, ಸಾಂಪ್ರದಾಯಿಕ ಜ್ಞಾನವನ್ನು ಆಧುನಿಕ ವೈಜ್ಞಾನಿಕ ಸಂಶೋಧನೆಯೊಂದಿಗೆ ಬೆಸೆಯುವುದು ಹಾಗೂ ರೈತರು ಅಭಿವೃದ್ಧಿಪಡಿಸಿದ ತಳಿಗಳನ್ನು ಗುಣಮಟ್ಟದ ಬೀಜ ವ್ಯವಸ್ಥೆಗಳು, ರೈತ ಉತ್ಪಾದಕ ಸಂಸ್ಥೆಗಳು ಮತ್ತು ವ್ಯಾಪಕ ಮಾರುಕಟ್ಟೆಗಳೊಂದಿಗೆ ಸಂಪರ್ಕಿಸುವುದಕ್ಕೆ ಒತ್ತು ನೀಡಿದರು. ರೈತ ಉದ್ಯಮಶೀಲತೆಯನ್ನು ಉತ್ತೇಜಿಸುವುದರ ಜೊತೆಗೆ, ಸಂರಕ್ಷಣಾ ಕಾರ್ಯವು ಸುಸ್ಥಿರ ಆರ್ಥಿಕ ಅವಕಾಶಗಳಾಗಿ ರೂಪುಗೊಳ್ಳುವಂತೆ ಪ್ರಯೋಜನಗಳ ನ್ಯಾಯಯುತ ಮತ್ತು ಪಾರದರ್ಶಕ ಹಂಚಿಕೆಯನ್ನು ಖಚಿತಪಡಿಸಬೇಕು ಎಂದು ಅವರು ಕರೆ ನೀಡಿದರು.
ಭಾರತದ ಕೃಷಿ ಪರಿವರ್ತನೆಯ ಪ್ರಕ್ರಿಯೆಯಲ್ಲಿ ರೈತರನ್ನು ಕೇವಲ ಭಾಗವಹಿಸುವವರನ್ನಾಗಿ ಮಾತ್ರವಲ್ಲದೆ, ಕೊಡುಗೆ ನೀಡುವವರು ಮತ್ತು ಅದರ ಪ್ರಯೋಜನಗಳನ್ನು ಪಡೆಯುವವರಾಗಿಯೂ ಗುರುತಿಸಬೇಕು ಎಂದು ಡಾ. ಮಿಶ್ರಾ ಹೇಳಿದರು. ಸಾಂಪ್ರದಾಯಿಕ ತಳಿಗಳನ್ನು ಸಂರಕ್ಷಿಸುವ ರೈತರಿಗೆ ನಿರಂತರ ಆರ್ಥಿಕ ಪ್ರತಿಫಲ ದೊರೆಯಬೇಕಾದ ಅಗತ್ಯವನ್ನು ಒತ್ತಿಹೇಳಿದ ಅವರು, “ಪ್ರಶಸ್ತಿಯು ರೈತನನ್ನು ಒಮ್ಮೆ ಗೌರವಿಸುತ್ತದೆ; ಆದರೆ ಬೀಜ ಸರಪಳಿ, ಮಾರುಕಟ್ಟೆ ಮತ್ತು ಪ್ರಯೋಜನಗಳಲ್ಲಿನ ನ್ಯಾಯಯುತ ಪಾಲು ಪ್ರತಿ ಋತುವಿನಲ್ಲೂ ರೈತನ ಬದುಕಿಗೆ ಆಸರೆಯಾಗುತ್ತವೆ” ಎಂದು ಅಭಿಪ್ರಾಯಪಟ್ಟರು. ಕೃಷಿ ವೈವಿಧ್ಯತೆಯನ್ನು ಸಂರಕ್ಷಿಸುವುದು ರೈತರು, ವಿಜ್ಞಾನಿಗಳು, ವಿಶ್ವವಿದ್ಯಾಲಯಗಳು, ಉದ್ಯಮ ವಲಯ, ಸರ್ಕಾರ ಮತ್ತು ಸಮಾಜದ ಸಾಮೂಹಿಕ ಹೊಣೆಗಾರಿಕೆಯಾಗಿದೆ ಎಂದು ಅವರು ಹೇಳಿದರು. ಪ್ರಾಧಿಕಾರ ಮತ್ತು ಪ್ರಶಸ್ತಿ ಪುರಸ್ಕೃತರೆಲ್ಲರನ್ನು ಅವರು ಅಭಿನಂದಿಸಿದರು.
*****