ಜಲ ಶಕ್ತಿ ಸಚಿವಾಲಯ
azadi ka amrit mahotsav

'ಜಲ ಸಂಚಯ್ ಜನ ಭಾಗಿದಾರಿ' (ಜೆ ಎಸ್ ಜೆ ಬಿ) 2.0 ಕುರಿತು ನಾಗರಿಕರ ಪ್ರತಿಕ್ರಿಯೆ ಸಲ್ಲಿಕೆಗೆ ಗಡುವು ವಿಸ್ತರಿಸಿದ ಜಲ ಶಕ್ತಿ ಸಚಿವಾಲಯ

ಪ್ರಕಟಣಾ ದಿನಾಂಕ: 12 NOV 2026 3:37PM by PIB Bengaluru

ಕೇಂದ್ರ ಜಲ ಶಕ್ತಿ ಸಚಿವಾಲಯವು 'ಜಲ ಸಂಚಯ್ ಜನ ಭಾಗಿದಾರಿ' (ಜೆಎಸ್ ಜೆಬಿ) 2.0 ಪೋರ್ಟಲ್‌ನಲ್ಲಿ ನಾಗರಿಕರ ಪ್ರತಿಕ್ರಿಯೆಯನ್ನು ಸಲ್ಲಿಸಲು ನೀಡಲಾಗಿದ್ದ ಗಡುವನ್ನು 2026ರ  ನವೆಂಬರ್ 30 ರವರೆಗೆ ವಿಸ್ತರಣೆ ಮಾಡಿದೆ. ಈ ಪೋರ್ಟಲ್ 2026ರ ಜನವರಿ 26 ರಿಂದ ಸಾರ್ವಜನಿಕರಿಗಾಗಿ ಮುಕ್ತವಾಗಿದ್ದು, ಜೆಎಸ್ ಜೆಬಿ 2.0 ಉಪಕ್ರಮದ ಅಡಿಯಲ್ಲಿ ಕೈಗೊಂಡಿರುವ ಜಲ ಸಂರಕ್ಷಣೆ, ಮಳೆನೀರು ಕೊಯ್ಲು, ಅಂತರ್ಜಲ ಮರುಪೂರಣ ಮತ್ತು ನೀರು ಸಂಗ್ರಹಣಾ ಕಾಮಗಾರಿಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ದೇಶಾದ್ಯಂತದ ನಾಗರಿಕರಿಗೆ ಅವಕಾಶ ಕಲ್ಪಿಸಿದೆ. ಈ ವಿಸ್ತರಣೆಯು, ಸದರಿ ಉಪಕ್ರಮದಡಿಯಲ್ಲಿ ನಿರ್ಮಿಸಲಾದ ಕೃತಕ ಮರುಪೂರಣ ಮತ್ತು ಸಂಗ್ರಹಣಾ ರಚನೆಗಳ ಕುರಿತು ನಾಗರಿಕರು ತಮ್ಮ ಪ್ರತಿಕ್ರಿಯೆಯನ್ನು ನೀಡುವುದನ್ನು ಮುಂದುವರಿಸಲು ಅನುವು ಮಾಡಿಕೊಡುತ್ತದೆ.

ಜೆಎಸ್ ಜೆಬಿ ಯ ಎರಡನೇ ಹಂತವು, ಪ್ರಧಾನ ಮಂತ್ರಿ ಅವರು 2024 ಸೆಪ್ಟೆಂಬರ್ 6  ರಂದು ಗುಜರಾತ್‌ನ ಸೂರತ್‌ನಲ್ಲಿ ಚಾಲನೆ ನೀಡಿದ ರಾಷ್ಟ್ರವ್ಯಾಪಿ ಜಲ ಸಂರಕ್ಷಣಾ ಆಂದೋಲನ ಮುನ್ನಡೆಸುವಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ. ಸಕ್ರಿಯ ಸಾರ್ವಜನಿಕ ಭಾಗವಹಿಸುವಿಕೆಯ ಮೂಲಕ ಜಲ ಸಂರಕ್ಷಣೆಯನ್ನು ನಿಜವಾದ 'ಜನಾಂದೋಲನ'ವನ್ನಾಗಿ ಪರಿವರ್ತಿಸುವುದು ಇದರ ಉದ್ದೇಶವಾಗಿದೆ. 2026ರ ಮೇ 31ರ ವೇಳೆಗೆ  ಈ ಉಪಕ್ರಮದಡಿಯಲ್ಲಿ ದೇಶಾದ್ಯಂತ 1.5 ಕೋಟಿಗೂ  ಅಧಿಕ ಮಳೆನೀರು ಕೊಯ್ಲು, ಅಂತರ್ಜಲ ಮರುಪೂರಣ, ಜಲ ಸಂರಕ್ಷಣೆ ಮತ್ತು ನೀರು ಸಂಗ್ರಹಣಾ ಹೊಂಡಗಳ ಕುರಿತು ವರದಿ ಮಾಡಲಾಗಿದೆ.

ಜೆಎಸ್ ಜೆಬಿ 2.0 ಪೋರ್ಟಲ್‌ನಲ್ಲಿರುವ 'ನಾಗರಿಕರ ಪ್ರತಿಕ್ರಿಯೆ' ವ್ಯವಸ್ಥೆಯು, ವರದಿ ಮಾಡಲಾದ ಕಾಮಗಾರಿಗಳ ಕುರಿತು ನಾಗರಿಕರು ತಮ್ಮ ಅಭಿಪ್ರಾಯಗಳನ್ನು ನೀಡಲು ಅವಕಾಶ ಕಲ್ಪಿಸುವ ಮೂಲಕ 'ಜನ ಭಾಗಿದಾರಿ'ಯನ್ನು ಮತ್ತಷ್ಟು ಬಲಪಡಿಸುವ ಗುರಿಯನ್ನು ಹೊಂದಿದೆ. ನಾಗರಿಕರು ತಮ್ಮ ಮೌಲ್ಯಯುತವಾದ ಮಾಹಿತಿಗಳ ಮೂಲಕ, ನಿರ್ವಹಣಾ ಅಗತ್ಯಗಳನ್ನು ಗುರುತಿಸಲು, ರಚನೆಗಳ ಕಾರ್ಯನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಅವುಗಳ ದೀರ್ಘಕಾಲೀನ ಪರಿಣಾಮಕಾರಿತ್ವವನ್ನು ಸುಧಾರಿಸಲು ಕೊಡುಗೆ ನೀಡಬಹುದು.

ನಾಗರಿಕರಿಂದ ಬರುವ ಪ್ರತಿಕ್ರಿಯೆಯು ಈ ಉಪಕ್ರಮದಡಿಯಲ್ಲಿ ವರದಿ ಮಾಡಲಾದ ಸ್ವತ್ತುಗಳ ಪರಿಶೀಲನೆ ಮತ್ತು ಮೌಲ್ಯಮಾಪನ ಬೆಂಬಲಿಸುತ್ತದೆ. ಈ ಉಪಕ್ರಮದಡಿಯಲ್ಲಿ ಪೂರ್ಣಗೊಂಡ ಕೃತಕ ಮರು ಭರ್ತಿ ಘಟಕ ಮತ್ತು ಸಂಗ್ರಹಣೆ ಕಾರ್ಯಗಳ ಸಂಖ್ಯೆಯ ಆಧಾರದ ಮೇಲೆ ಜಿಲ್ಲೆಗಳು, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಇತರ ಪಾಲುದಾರರಿಗೆ ಮಾನ್ಯತೆ ನೀಡಲಾಗುವುದರಿಂದ, ಪ್ರತಿಕ್ರಿಯೆಯಲ್ಲಿ ನಾಗರಿಕರ ಭಾಗವಹಿಸುವಿಕೆ ಅತ್ಯಂತ  ಮಹತ್ವದ್ದಾಗಿದೆ. ಈ ಕಾರ್ಯವಿಧಾನವು ವರದಿ ಮಾಡುವಿಕೆಯ ಗುಣಮಟ್ಟ ಮತ್ತು ವಿಶ್ವಾಸಾರ್ಹತೆ ಹೆಚ್ಚಿಸುತ್ತದೆ, ಅನುಷ್ಠಾನದಲ್ಲಿ ಪಾರದರ್ಶಕತೆ ಉತ್ತೇಜಿಸುತ್ತದೆ ಮತ್ತು ಸರಿಯಾದ ನಿರ್ವಹಣೆ ಮತ್ತು ನಿರಂತರ ಕಾರ್ಯವನ್ನು ಖಚಿತಪಡಿಸಿಕೊಳ್ಳಲು ಜಿಲ್ಲೆಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳು (ಯುಎಲ್ ಬಿ)ಗಳನ್ನು ಪ್ರೋತ್ಸಾಹಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ನಾಗರಿಕರು ಮತ್ತು ಪಾಲುದಾರರು ಜೆಎಸ್ ಜೆಬಿ 2.0 ಪೋರ್ಟಲ್ ಮೂಲಕ ತಮ್ಮ ಸಲಹೆಗಳು ಮತ್ತು ಪ್ರತಿಕ್ರಿಯೆಯನ್ನು ಇಲ್ಲಿ ಸಲ್ಲಿಸಬಹುದು:

https://jsjb.mowr.gov.in/DashboardJsjb.aspx

ಈ ಉಪಕ್ರಮದ ಮೂಲಕ, ಸಚಿವಾಲಯವು ನೀರಿನ ಸಂರಕ್ಷಣಾ ವ್ಯವಸ್ಥೆಗಳ ಸಮುದಾಯ ಮಾಲೀಕತ್ವವನ್ನು ಬಲಪಡಿಸುವ ಮತ್ತು ಸುಸ್ಥಿರ ನೀರಿನ ನಿರ್ವಹಣೆ ಮತ್ತು ನೀರಿನ ಸುರಕ್ಷತೆಯತ್ತ ರಾಷ್ಟ್ರವ್ಯಾಪಿ ಚಳವಳಿಯನ್ನು ಮತ್ತಷ್ಟು ಮುನ್ನಡೆಸುವ ಗುರಿ ಹೊಂದಿದೆ.

 

*****


(ಪ್ರಕಟಣೆ ಐ.ಡಿ.: 2335425) ವಿಸಿಟರ್ ಕೌಂಟರ್ : 8
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Gujarati , Tamil