ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಪ್ರಕಟಣಾ ದಿನಾಂಕ:
06 NOV 2026 6:05PM by PIB Bengaluru

ಭಾರತದ ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಪೂರಕ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಿ, ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು 'ಸೆಮಿಕಾನ್ ಇಂಡಿಯಾ ಕಾರ್ಯಕ್ರಮದಡಿ ಸೆಮಿಕಾನ್ 2.0 – ವೆಬ್ ಅಪ್ಲಿಕೇಶನ್ ಪೋರ್ಟಲ್' ಅನ್ನು 2, 3 ಮತ್ತು 4ನೇ ಸ್ತಂಭಗಳಿಗಾಗಿ ಉದ್ಘಾಟಿಸಿದರು. ನಂತರ ಎಲೆಕ್ಟ್ರಾನಿಕ್ಸ್ ಘಟಕಗಳ ತಯಾರಿಕಾ ಯೋಜನೆ (ಇಸಿಎಂಎಸ್) ಅಡಿಯಲ್ಲಿ ಅನುಮೋದನೆ ಪಡೆದ 12 ಅರ್ಜಿಗಳ ವಿವರಗಳನ್ನು ಪ್ರಕಟಿಸಿದರು.

ದೇಶದಲ್ಲಿ ಸದೃಢ ಮತ್ತು ಸ್ಥಿತಿಸ್ಥಾಪಕ ಸೆಮಿಕಂಡಕ್ಟರ್ ಪೂರಕ ವ್ಯವಸ್ಥೆಯನ್ನು ನಿರ್ಮಿಸುವ ನಿಟ್ಟಿನಲ್ಲಿ ಭಾರತ ಸರ್ಕಾರವು ವಿವಿಧ ಕಾರ್ಯತಂತ್ರದ ಉಪಕ್ರಮಗಳು ಮತ್ತು ನೀತಿ ಕ್ರಮಗಳ ಮೂಲಕ ಸಂಘಟಿತ ಪ್ರಯತ್ನಗಳನ್ನು ಕೈಗೊಳ್ಳುತ್ತಿದೆ.

ಸ್ಥಾಪನೆಯಾದ ಕೆಲವೇ ವರ್ಷಗಳಲ್ಲಿ ಭಾರತ ಸೆಮಿಕಂಡಕ್ಟರ್ ಮಿಷನ್ (ಐಎಸ್ಎಂ) ದೇಶದ ಸೆಮಿಕಂಡಕ್ಟರ್ ಪೂರಕ ವ್ಯವಸ್ಥೆಯ ಬೆಳವಣಿಗೆಗೆ ವೇಗ ನೀಡಿದೆ. ಸೆಮಿಕಾನ್ ಇಂಡಿಯಾ ಕಾರ್ಯಕ್ರಮದ ಮೊದಲ ಹಂತವಾದ ಸೆಮಿಕಾನ್ 1.0ರ ಯಶಸ್ವಿ ಅನುಷ್ಠಾನದೊಂದಿಗೆ, 6 ರಾಜ್ಯಗಳಲ್ಲಿ ಒಟ್ಟು ₹1.64 ಲಕ್ಷ ಕೋಟಿಗೂ ಅಧಿಕ ಹೂಡಿಕೆಯ 12 ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಈ 12 ಯೋಜನೆಗಳ ಪೈಕಿ 05 ಯೋಜನೆಗಳು 2026ರ ಅಕ್ಟೋಬರ್ ವೇಳೆಗೆ ಈಗಾಗಲೇ ವಾಣಿಜ್ಯ ಉತ್ಪಾದನೆಯನ್ನು ಆರಂಭಿಸಿವೆ.

ಇದಲ್ಲದೆ, 105 ನವೋದ್ಯಮಗಳಿಗೆ ಎಲೆಕ್ಟ್ರಾನಿಕ್ ವಿನ್ಯಾಸ ಸ್ವಯಂಚಾಲನಾ (ಇಡಿಎ) ಉಪಕರಣಗಳನ್ನು ಬಳಸುವ ಅವಕಾಶ ಕಲ್ಪಿಸಲಾಗಿದೆ. 24 ನವೋದ್ಯಮಗಳಿಗೆ ಹಣಕಾಸಿನ ನೆರವು ಒದಗಿಸಲಾಗಿದ್ದು, 15 ನವೋದ್ಯಮಗಳು ವೆಂಚರ್ ಕ್ಯಾಪಿಟಲ್ ನಿಧಿಯನ್ನು ಪಡೆದಿವೆ. ಚಿಪ್ಸ್ ಟು ಸ್ಟಾರ್ಟ್ಅಪ್ (ಸಿ2ಎಸ್) ಕಾರ್ಯಕ್ರಮದಡಿ 332 ಶಿಕ್ಷಣ ಸಂಸ್ಥೆಗಳಿಗೆ ಇಡಿಎ ಉಪಕರಣಗಳನ್ನು ಒದಗಿಸಲಾಗಿದೆ. ಈವರೆಗೆ ಸುಮಾರು 70,000 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದೆ.
ಕೇಂದ್ರ ಸಚಿವ ಸಂಪುಟವು ಭಾರತ ಸೆಮಿಕಂಡಕ್ಟರ್ ಮಿಷನ್ (ಐಎಸ್ಎಂ) ಅಡಿಯಲ್ಲಿ ₹1,27,500 ಕೋಟಿ ಹಣಕಾಸು ವೆಚ್ಚದ ಸೆಮಿಕಾನ್ 2.0 ಕಾರ್ಯಕ್ರಮಕ್ಕೆ ಅನುಮೋದನೆ ನೀಡಿದೆ. ಭಾರತದ ಸೆಮಿಕಂಡಕ್ಟರ್ ಕ್ಷೇತ್ರದ ಪ್ರಯಾಣದ ಮುಂದಿನ ಹಂತವನ್ನು ಗುರುತಿಸುವ ಈ ಕಾರ್ಯಕ್ರಮವು ಆರು ಕಾರ್ಯತಂತ್ರದ ಸ್ತಂಭಗಳನ್ನು ಒಳಗೊಂಡಿದೆ:
· ಸ್ತಂಭ 1: ಚಿಪ್ಗಳ ವಿನ್ಯಾಸ
· ಸ್ತಂಭ 2: ಯಂತ್ರೋಪಕರಣಗಳು ಮತ್ತು ಸಾಮಗ್ರಿಗಳು
· ಸ್ತಂಭ 3: ಹೆಚ್ಚಿನ ಸಂಖ್ಯೆಯಲ್ಲಿ ಸೆಮಿಕಂಡಕ್ಟರ್ ಉತ್ಪಾದನಾ ಘಟಕಗಳ (ಫ್ಯಾಬ್ಗಳ) ಸ್ಥಾಪನೆ
· ಸ್ತಂಭ 4: ಎಟಿಎಂಪಿ/ಒಎಸ್ಎಟಿ ಉದ್ಯಮವನ್ನು ಮತ್ತಷ್ಟು ಬಲಪಡಿಸುವುದು
· ಸ್ತಂಭ 5: ಸಂಶೋಧನೆ ಮತ್ತು ಅಭಿವೃದ್ಧಿ
· ಸ್ತಂಭ 6: ಪ್ರತಿಭಾ ಅಭಿವೃದ್ಧಿ
ಸೆಮಿಕಾನ್ 2.0 ವೆಬ್ ಅಪ್ಲಿಕೇಶನ್ ಪೋರ್ಟಲ್ಗೆ ಚಾಲನೆ ನೀಡಿರುವುದರಿಂದ, 2, 3 ಮತ್ತು 4ನೇ ಸ್ತಂಭಗಳ ಅಡಿಯಲ್ಲಿ ಅರ್ಜಿ ಸಲ್ಲಿಕೆ ಆರಂಭವಾಗಿದೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ, ರೈಲ್ವೆ ಹಾಗೂ ವಾರ್ತಾ ಮತ್ತು ಪ್ರಸಾರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು, ಭಾರತದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಷೇತ್ರವು ಕೇವಲ ಜೋಡಣೆ ಕಾರ್ಯವನ್ನು ಮೀರಿದ್ದು, ಮಾಡ್ಯೂಲ್ಗಳು, ಘಟಕಗಳು, ಸಾಮಗ್ರಿಗಳು ಮತ್ತು ಸುಧಾರಿತ ತಂತ್ರಜ್ಞಾನಗಳನ್ನು ಒಳಗೊಂಡ ಸಮಗ್ರ ದೇಶೀಯ ಮೌಲ್ಯ ಸರಪಳಿಯನ್ನು ಅಭಿವೃದ್ಧಿಪಡಿಸುವ ಹಂತಕ್ಕೆ ತಲುಪಿದೆ ಎಂದು ಹೇಳಿದರು. ಬ್ಯಾಟರಿ ಸೆಲ್ಗಳು, ತಾಮ್ರದ ಹಾಳೆಗಳು, ತಾಮ್ರ ಲೇಪಿತ ಲ್ಯಾಮಿನೇಟ್ಗಳು ಮತ್ತು ಉನ್ನತ ದರ್ಜೆಯ ಮುದ್ರಿತ ಸರ್ಕ್ಯೂಟ್ ಬೋರ್ಡ್ಗಳ ಉತ್ಪಾದನೆಯಲ್ಲಿ ಹೆಚ್ಚುತ್ತಿರುವ ಸಾಮರ್ಥ್ಯವನ್ನು ಅವರು ಪ್ರಸ್ತಾಪಿಸಿದರು. ಸರ್ಕಾರದ ಉಪಕ್ರಮಗಳು ದೇಶೀಯ ಪೂರೈಕೆ ಸರಪಳಿಗಳನ್ನು ಬಲಪಡಿಸುವುದರ ಜೊತೆಗೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಂಎಸ್ಎಂಇ) ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿವೆ. ಈ ಯೋಜನೆಯಡಿ ಅನುಮೋದನೆ ಪಡೆದ ಘಟಕಗಳ ಪೈಕಿ ಸುಮಾರು ಶೇ. 50ರಷ್ಟು ಎಂಎಸ್ಎಂಇ ವಲಯಕ್ಕೆ ಸೇರಿವೆ ಎಂದು ಅವರು ತಿಳಿಸಿದರು. ಸೆಮಿಕಾನ್ ಇಂಡಿಯಾ 2.0 ಕಾರ್ಯಕ್ರಮವು ಸದೃಢ ಸೆಮಿಕಂಡಕ್ಟರ್ ಪೂರಕ ವ್ಯವಸ್ಥೆಯನ್ನು ನಿರ್ಮಿಸುವತ್ತ, ಅದರಲ್ಲೂ ವಿಶೇಷವಾಗಿ ಉತ್ಪಾದನಾ ಉಪಕರಣಗಳು, ಸಾಮಗ್ರಿಗಳು, ರಾಸಾಯನಿಕಗಳು ಮತ್ತು ಅನಿಲ ಕ್ಷೇತ್ರಗಳತ್ತ ಗಮನಹರಿಸಲಿದೆ ಎಂದು ಅವರು ಒತ್ತಿಹೇಳಿದರು. ಕನಿಷ್ಠ ಮೂರು ಪ್ರಮುಖ ಉಪಕರಣ ತಯಾರಿಕಾ ಕಂಪನಿಗಳು ಹಾಗೂ ರಾಸಾಯನಿಕ ಮತ್ತು ಅನಿಲ ಕ್ಷೇತ್ರದ ಐದು ಕಂಪನಿಗಳನ್ನು ಭಾರತಕ್ಕೆ ಆಕರ್ಷಿಸುವ ಗುರಿಯನ್ನು ಅವರು ಪ್ರಸ್ತಾಪಿಸಿದರು. ಯೋಜನೆಗಳ ಆಯ್ಕೆ ಪ್ರಕ್ರಿಯೆಯಲ್ಲಿ ಕಟ್ಟುನಿಟ್ಟಿನ ಮೌಲ್ಯಮಾಪನದ ಅಗತ್ಯವನ್ನು ಒತ್ತಿಹೇಳಿದ ಅವರು, ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಭಾರತದ ಮಹತ್ವಾಕಾಂಕ್ಷೆಯ ಗುರಿಗಳನ್ನು ಸಾಕಾರಗೊಳಿಸುವಲ್ಲಿ ಗುಣಮಟ್ಟ, ತಾಂತ್ರಿಕ ಪರಿಣತಿಯ ಆಳ, ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಜಾಗತಿಕ ಸ್ಪರ್ಧಾತ್ಮಕತೆ ಪ್ರಮುಖ ಮಾರ್ಗದರ್ಶಕ ಅಂಶಗಳಾಗಿರಬೇಕು, ಇದು ಆತ್ಮನಿರ್ಭರ ಭಾರತದ ದೃಷ್ಟಿಕೋನಕ್ಕೆ ಅನುಗುಣವಾಗಿರಬೇಕು ಎಂದು ಹೇಳಿದರು. ಭಾರತವನ್ನು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕ ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಉತ್ಪಾದನಾ ಕೇಂದ್ರವನ್ನಾಗಿ ರೂಪಿಸಲು ಉದ್ಯಮದ ಪಾಲುದಾರರು ಪರಸ್ಪರ ಸಹಕರಿಸಬೇಕು, ತಮ್ಮ ಪರಿಣತಿಯನ್ನು ಹಂಚಿಕೊಳ್ಳಬೇಕು ಮತ್ತು ನಿರಂತರ ಸುಧಾರಣೆಗೆ ಪ್ರಯತ್ನಿಸಬೇಕು ಎಂದು ಅವರು ಕರೆ ನೀಡಿದರು.
ಈ ಹಿಂದೆ ₹₹69,548 ಕೋಟಿ ಹೂಡಿಕೆಯನ್ನು ಒಳಗೊಂಡ 106 ಅರ್ಜಿಗಳಿಗೆ ಅನುಮೋದನೆ ನೀಡಿರುವುದಾಗಿ ಘೋಷಿಸಲಾಗಿತ್ತು. ಇದರ ಮುಂದುವರಿಕೆಯಾಗಿ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಎಲೆಕ್ಟ್ರಾನಿಕ್ಸ್ ಘಟಕಗಳ ತಯಾರಿಕಾ ಯೋಜನೆ (ಇಸಿಎಂಎಸ್) ಅಡಿಯಲ್ಲಿ ಮತ್ತೆ 12 ಅರ್ಜಿಗಳಿಗೆ ಅನುಮೋದನೆ ನೀಡಿದೆ. ಈ ಯೋಜನೆಗಳ ಮೂಲಕ ₹7,503 ಕೋಟಿ ಹೂಡಿಕೆಯಾಗುವ ನಿರೀಕ್ಷೆಯಿದೆ.
ಪ್ರಸ್ತುತ ಅನುಮೋದನೆ ಪಡೆದ ಯೋಜನೆಗಳಿಂದ ₹₹39,045 ಕೋಟಿ ಮೌಲ್ಯದ ಉತ್ಪಾದನೆಯ ನಿರೀಕ್ಷೆಯಿದ್ದು, 7,127 ನೇರ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.
ಪ್ರಸ್ತುತ ಅನುಮೋದನೆಗಳು ಮೂಲ ಘಟಕಗಳು, ಪೂರೈಕೆ ಸರಪಳಿ ಉತ್ಪನ್ನಗಳು ಮತ್ತು ಬಂಡವಾಳ ಸರಕುಗಳನ್ನು ಒಳಗೊಂಡಂತೆ 10 ಗುರಿ ಉತ್ಪನ್ನ ವಿಭಾಗಗಳ ತಯಾರಿಕೆಗೆ ಸಂಬಂಧಿಸಿವೆ. ಅವುಗಳ ವಿವರ ಹೀಗಿದೆ:
· 4 ಘಟಕಗಳು: ಬಹುಪದರದ ಮುದ್ರಿತ ಸರ್ಕ್ಯೂಟ್ ಬೋರ್ಡ್ಗಳು (ಪಿಸಿಬಿ), ರಿಲೇಗಳು, ಹೀಟ್ ಸಿಂಕ್ಗಳು ಮತ್ತು ವಿಶೇಷ ಸೆರಾಮಿಕ್ ವಸ್ತುಗಳು;
· 5 ಪೂರೈಕೆ ಸರಪಳಿ ಉತ್ಪನ್ನಗಳು: ತಾಮ್ರದ ಹಾಳೆ, ಆನೋಡ್ ಮೆಟೀರಿಯಲ್, ಕ್ಯಾಥೋಡ್ ಆಕ್ಟೀವ್ ಮೆಟೀರಿಯಲ್, ಪಾಲಿಪ್ರೊಪಿಲೀನ್ ಫಿಲ್ಮ್ ಮತ್ತು ಕ್ಯಾಮೆರಾ ರಿಮ್; ಹಾಗೂ
· ಬಂಡವಾಳ ಸರಕುಗಳು ಮತ್ತು ಅವುಗಳ ಬಿಡಿಭಾಗಗಳು.
ಅನುಮೋದನೆ ಪಡೆದ ಯೋಜನೆಗಳು ಕರ್ನಾಟಕ, ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ಪಂಜಾಬ್, ತಮಿಳುನಾಡು ಮತ್ತು ಉತ್ತರ ಪ್ರದೇಶ ಸೇರಿದಂತೆ 7 ರಾಜ್ಯಗಳಲ್ಲಿ ಹರಡಿಕೊಂಡಿವೆ. ಇದರಿಂದ ದೇಶದಲ್ಲಿ ಎಲೆಕ್ಟ್ರಾನಿಕ್ಸ್ ಘಟಕಗಳ ತಯಾರಿಕೆಯ ಭೌಗೋಳಿಕ ವ್ಯಾಪ್ತಿ ಮತ್ತಷ್ಟು ವಿಸ್ತರಿಸಲಿದೆ.
ಪ್ರಸ್ತುತ ಅನುಮೋದನೆಗಳ ಭಾಗವಾಗಿ, ತಾಮ್ರದ ಹಾಳೆ, ಕ್ಯಾಥೋಡ್ ಆಕ್ಟೀವ್ ಮೆಟೀರಿಯಲ್ ಮತ್ತು ವಿಶೇಷ ಸೆರಾಮಿಕ್ ವಸ್ತುಗಳ ತಯಾರಿಕೆಗೆ ಇಸಿಎಂಎಸ್ ಅಡಿಯಲ್ಲಿ ಇದೇ ಮೊದಲ ಬಾರಿಗೆ ಅನುಮೋದನೆ ನೀಡಲಾಗಿದೆ. ಇದರಿಂದ ದೇಶದಲ್ಲಿಯೇ ತಯಾರಾಗಲಿರುವ ಎಲೆಕ್ಟ್ರಾನಿಕ್ಸ್ ಘಟಕಗಳು ಮತ್ತು ಅವುಗಳ ಉತ್ಪಾದನೆಗೆ ಅಗತ್ಯವಾದ ಮೂಲ ಸಾಮಗ್ರಿಗಳ ವ್ಯಾಪ್ತಿ ಮತ್ತಷ್ಟು ವಿಸ್ತರಿಸಿದೆ.
ಘಟಕಗಳ ವಿಭಾಗದಲ್ಲಿ, ಈ ಕೆಳಗಿನ ಉತ್ಪನ್ನಗಳ ತಯಾರಿಕೆಗೆ ಅನುಮೋದನೆ ನೀಡಲಾಗಿದೆ:
· ಬಹುಪದರದ ಮುದ್ರಿತ ಸರ್ಕ್ಯೂಟ್ ಬೋರ್ಡ್ಗಳ ತಯಾರಿಕೆಗೆ NeST ಐಸಿಇಎಲ್ಆರ್ ಪ್ರೈವೇಟ್ ಲಿಮಿಟೆಡ್;
· ರಿಲೇಗಳ ತಯಾರಿಕೆಗೆ TDConnex (ಚೆನ್ನೈ) ಪ್ರೈವೇಟ್ ಲಿಮಿಟೆಡ್;
· ಶಾಖ ವಿಸರ್ಜಕಗಳ ತಯಾರಿಕೆಗೆ ಮಾಡರ್ನ್ ಆಟೋಮೋಟಿವ್ಸ್ ಲಿಮಿಟೆಡ್; ಮತ್ತು
· ವಿಶೇಷ ಸೆರಾಮಿಕ್ ವಸ್ತುಗಳ ತಯಾರಿಕೆಗೆ ವೋಲ್ಟಿಕ್ಸ್ ಸೆಮಿಕಾನ್ ಪ್ರೈವೇಟ್ ಲಿಮಿಟೆಡ್.
ಇದಲ್ಲದೆ, ಎಲೆಕ್ಟ್ರಾನಿಕ್ಸ್ ಉತ್ಪಾದನಾ ಪೂರೈಕೆ ಸರಪಳಿಯನ್ನು ಬಲಪಡಿಸುವ ಉದ್ದೇಶದಿಂದ ವಿವಿಧ ಪೂರೈಕೆ ಸರಪಳಿ ಉತ್ಪನ್ನಗಳ ತಯಾರಿಕೆಗೂ ಅನುಮೋದನೆ ನೀಡಲಾಗಿದೆ. ಅವುಗಳ ವಿವರ ಹೀಗಿದೆ:
· ಮುದ್ರಿತ ಸರ್ಕ್ಯೂಟ್ ಬೋರ್ಡ್ಗಳ (ಪಿಸಿಬಿ) ತಯಾರಿಕೆಗೆ ಬಳಸುವ ತಾಮ್ರ ಲೇಪಿತ ಲ್ಯಾಮಿನೇಟ್ಗಳ (ಸಿಸಿಎಲ್) ಉತ್ಪಾದನೆಗೆ ಹಾಗೂ ಲಿಥಿಯಂ-ಐಯಾನ್ ಸೆಲ್ಗಳಿಗೆ ಪ್ರಮುಖ ಕಚ್ಚಾ ವಸ್ತುವಾಗಿರುವ ತಾಮ್ರದ ಹಾಳೆಯ ತಯಾರಿಕೆಗೆ ಇಂಡೋ ಏಷ್ಯಾ ಕಾಪರ್ ಲಿಮಿಟೆಡ್;
· ಲಿಥಿಯಂ-ಐಯಾನ್ ಸೆಲ್ಗಳಿಗೆ ಅಗತ್ಯವಾದ ಆನೋಡ್ ಮೆಟೀರಿಯಲ್ ತಯಾರಿಕೆಗೆ ಟಿಎಸಿಸಿ ಲಿಮಿಟೆಡ್;
· ಕ್ಯಾಥೋಡ್ ಆಕ್ಟೀವ್ ಕ್ಯಾಥೋಡ್ ಆಕ್ಟೀವ್ ಮೆಟೀರಿಯಲ್ ತಯಾರಿಕೆಗೆ ವಿದ್ಯುತಾ ಮೆಟೀರಿಯಲ್ಸ್ ಪ್ರೈವೇಟ್ ಲಿಮಿಟೆಡ್;
· ಕೆಪಾಸಿಟರ್ಗಳ ಬಳಕೆಗೆ ಅಗತ್ಯವಾದ ವಿದ್ಯುತ್ ನಿರೋಧಕ ಫಿಲ್ಮ್ ತಯಾರಿಕೆಗೆ ಬಳಸುವ ಪಾಲಿಪ್ರೊಪಿಲೀನ್ ಫಿಲ್ಮ್ ಉತ್ಪಾದನೆಗಾಗಿ ಎನರ್ಫೋಲಿ ಎಲ್ಎಲ್ಪಿ; ಮತ್ತು
· ಕ್ಯಾಮೆರಾ ರಿಮ್ ತಯಾರಿಕೆಗೆ ಸರ್ಫೇಸ್ ಮಾಡಿಫಿಕೇಶನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್.
ಇದಲ್ಲದೆ, ಬಂಡವಾಳ ಸರಕುಗಳು ಮತ್ತು ಅವುಗಳ ಬಿಡಿಭಾಗಗಳ ದೇಶೀಯ ಉತ್ಪಾದನಾ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿಯೂ ಪ್ರಸ್ತುತ ಅನುಮೋದನೆಗಳಲ್ಲಿ ಆದ್ಯತೆ ಮುಂದುವರಿಸಲಾಗಿದೆ. ನಿಖರ ಅಚ್ಚುಗಳು ಮತ್ತು ಅಚ್ಚು ತಯಾರಿಕಾ ಉಪಕರಣಗಳ ತಯಾರಿಕೆಗೆ TDConnex (ಚೆನ್ನೈ) ಪ್ರೈವೇಟ್ ಲಿಮಿಟೆಡ್; ಬಂಡವಾಳ ಸರಕುಗಳಿಗೆ ಅಗತ್ಯವಾದ ವಿದ್ಯುತ್ ಮತ್ತು ನಿಯಂತ್ರಣ ವ್ಯವಸ್ಥೆಗಳ ತಯಾರಿಕೆಗೆ ರಾಕ್ವೆಲ್ ಆಟೋಮೇಷನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್; ಹಾಗೂ ಕಾರ್ಖಾನೆ ಸ್ವಯಂಚಾಲನೆ ಮತ್ತು ವ್ಯವಸ್ಥೆಗಳ ಏಕೀಕರಣಕ್ಕೆ ಅಗತ್ಯವಾದ ಬಂಡವಾಳ ಸರಕುಗಳ ತಯಾರಿಕೆಗೆ ವಿಪ್ರೋ ಪಾರಿ ರೋಬೋಟಿಕ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗಳಿಗೆ ಅನುಮೋದನೆ ನೀಡಲಾಗಿದೆ.
ಈ ಅನುಮೋದನೆಗಳೊಂದಿಗೆ, ಇಸಿಎಂಎಸ್ ಅಡಿಯಲ್ಲಿ 16 ರಾಜ್ಯಗಳಲ್ಲಿ 34 ಉತ್ಪನ್ನಗಳನ್ನು ಒಳಗೊಂಡ ಒಟ್ಟು 118 ಅರ್ಜಿಗಳಿಗೆ ಅನುಮೋದನೆ ನೀಡಲಾಗಿದೆ. ಇವುಗಳ ಮೂಲಕ ₹77,051 ಕೋಟಿ ಹೂಡಿಕೆಯಾಗುವ ನಿರೀಕ್ಷೆಯಿದ್ದು, ₹5,73,146 ಕೋಟಿ ಮೌಲ್ಯದ ಉತ್ಪಾದನೆ ಹಾಗೂ 81,755 ಮಂದಿಗೆ ನೇರ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಅಂದಾಜಿಸಲಾಗಿದೆ.
ಈ ಅನುಮೋದನೆಗಳು ದೇಶೀಯ ಪೂರೈಕೆ ಸರಪಳಿಗಳನ್ನು ಬಲಪಡಿಸಲಿವೆ, ದೇಶದಲ್ಲಿಯೇ ಹೆಚ್ಚಿನ ಮೌಲ್ಯವರ್ಧನೆಗೆ ಉತ್ತೇಜನ ನೀಡಲಿವೆ, ಆಮದು ಅವಲಂಬನೆಯನ್ನು ಕಡಿಮೆಗೊಳಿಸಲಿವೆ ಹಾಗೂ ಸುಧಾರಿತ ಉತ್ಪಾದನಾ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲಿವೆ. ಆ ಮೂಲಕ ಜಾಗತಿಕ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕೇಂದ್ರವಾಗಿ ಭಾರತದ ಹೊರಹೊಮ್ಮುವಿಕೆಗೆ ಮತ್ತಷ್ಟು ವೇಗ ನೀಡಲಿವೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀ ಅಶ್ವಿನಿ ವೈಷ್ಣವ್ ಅವರು, “ಕಳೆದ ಒಂದು ದಶಕದಲ್ಲಿ ಭಾರತವು ಮೂಲಭೂತ ಪರಿವರ್ತನೆಗೆ ಒಳಗಾಗಿದೆ. ಆದರೆ, ಇದು ಕೇವಲ ಆರಂಭವಷ್ಟೇ. ವಿವಿಧ ನೀತಿ ಉಪಕ್ರಮಗಳು ಹಾಗೂ ಸಾರ್ವಜನಿಕ ಮತ್ತು ಖಾಸಗಿ ವಲಯಗಳ ಸಂಘಟಿತ ಪ್ರಯತ್ನಗಳು ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಉದ್ಯಮದ ಬೆಳವಣಿಗೆಗೆ ಹಾಗೂ ಆತ್ಮನಿರ್ಭರ ಭಾರತದ ದೃಷ್ಟಿಕೋನವನ್ನು ಸಾಕಾರಗೊಳಿಸಲು ಭದ್ರ ಬುನಾದಿ ಹಾಕುತ್ತಿವೆ” ಎಂದು ಹೇಳಿದರು. ಭಾರತವು ತನ್ನ ದೇಶೀಯ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಪೂರಕ ವ್ಯವಸ್ಥೆಯನ್ನು ಬಲಪಡಿಸುತ್ತಿದ್ದು, ಕಂಪ್ಯೂಟರ್ಗಳು ಮತ್ತು ಅವುಗಳ ಘಟಕಗಳನ್ನು ದೇಶದಲ್ಲಿಯೇ ತಯಾರಿಸುವತ್ತ ಹೆಚ್ಚಿನ ಗಮನಹರಿಸುತ್ತಿದೆ. ಆಮದು ಅವಲಂಬನೆಯನ್ನು ಕಡಿಮೆಗೊಳಿಸುವುದು ಮತ್ತು ಸದೃಢ, ಸ್ವಾವಲಂಬಿ ಎಲೆಕ್ಟ್ರಾನಿಕ್ಸ್ ಮೌಲ್ಯ ಸರಪಳಿಯನ್ನು ನಿರ್ಮಿಸುವುದು ಇದರ ಉದ್ದೇಶವಾಗಿದೆ.
ಸೆಮಿಕಾನ್ 2.0 ವೆಬ್ ಅಪ್ಲಿಕೇಶನ್ ಪೋರ್ಟಲ್ಗೆ ಚಾಲನೆ ನೀಡಿರುವುದು ಹಾಗೂ ಇಸಿಎಂಎಸ್ ಅಡಿಯಲ್ಲಿ ಅನುಮೋದನೆ ಪಡೆದ ಅರ್ಜಿಗಳ ವಿವರಗಳನ್ನು ಪ್ರಕಟಿಸಿರುವುದು, ಭಾರತದ ಸೆಮಿಕಂಡಕ್ಟರ್ ವಿನ್ಯಾಸ ಮತ್ತು ಉತ್ಪಾದನಾ ಸಾಮರ್ಥ್ಯಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.
*****