ಪ್ರಕಟಣಾ ದಿನಾಂಕ:
04 NOV 2026 4:08PM by PIB Bengaluru
ಇಂದು ತಿರುವನಂತಪುರಂನಲ್ಲಿ ನಡೆದ ಭಾರತೀಯ ಸಂಸತ್ತು ಹಾಗು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಶಾಸಕಾಂಗಗಳ ಸಾರ್ವಜನಿಕ ಲೆಕ್ಕಪತ್ರ ಸಮಿತಿಗಳ (ಪಿಎಸಿ) ಅಧ್ಯಕ್ಷರ ಎರಡು ದಿನಗಳ ಸಮ್ಮೇಳನದ ಮುಕ್ತಾಯದ ವೇಳೆ ಸಮಾರೋಪ ಭಾಷಣ ಮಾಡಿದ ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರು, ಶಾಸಕಾಂಗ ಸಮಿತಿಗಳ ಕಾರ್ಯನಿರ್ವಹಣೆಯಲ್ಲಿ ಹೆಚ್ಚಿನ ತಾಂತ್ರಿಕ ಸಂಯೋಜನೆಗೆ ಕರೆ ನೀಡಿದರು. ಸಂಸತ್ತಿನ ಸಮಿತಿಗಳಿಗೆ ಲಭ್ಯವಿರುವ ವೇದಿಕೆಯ ಮಾದರಿಯಲ್ಲಿಯೇ ರಾಜ್ಯ ಶಾಸಕಾಂಗಗಳಿಗೂ ಏಕರೂಪದ ಮೇಲ್ವಿಚಾರಣಾ ಲೆಕ್ಕಪರಿಶೋಧನಾ ವೇದಿಕೆಯನ್ನು ರೂಪಿಸಬೇಕೆಂದು ಪ್ರಸ್ತಾಪಿಸಿದ ಅವರು, ಇಂತಹ ವೇದಿಕೆಯು ಲೆಕ್ಕಪರಿಶೋಧನಾ ಅವಲೋಕನಗಳ ವ್ಯವಸ್ಥಿತ ಉಸ್ತುವಾರಿ, ಅನುಸರಣಾ ಕಾರ್ಯವಿಧಾನಗಳನ್ನು ಬಲಪಡಿಸುವುದು ಮತ್ತು ಲೆಕ್ಕಪರಿಶೋಧನಾ ವರದಿಗಳ ಸಮಯೋಚಿತ ಪರಿಶೀಲನೆ ಹಾಗೂ ವಿಲೇವಾರಿಯನ್ನು ಸುಗಮಗೊಳಿಸುತ್ತದೆ ಎಂದು ಹೇಳಿದರು.
ತಂತ್ರಜ್ಞಾನವು ಸಾಂಸ್ಥಿಕ ಪರಿವರ್ತನೆಯ ಸಾಧನವಾಗಬೇಕು ಎನ್ನುವ ಅಂಶಕ್ಕೆ ಒತ್ತು ನೀಡಿದ ಅವರು, ಡಿಜಿಟಲ್ ಆವಿಷ್ಕಾರಗಳ ಅಳವಡಿಕೆಯು ಶಾಸಕಾಂಗದ ಮೇಲ್ವಿಚಾರಣೆಯ ದಕ್ಷತೆ, ಪಾರದರ್ಶಕತೆ ಮತ್ತು ಪರಿಣಾಮಕಾರಿತ್ವವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಎನ್ನುವ ಅಂಶಕ್ಕೆ ಗಮನ ಸೆಳೆದರು. ಅದೇ ಸಮಯದಲ್ಲಿ, ತಂತ್ರಜ್ಞಾನದ ಮೇಲಿನ ಅತಿಯಾದ ಅವಲಂಬನೆಯ ವಿರುದ್ಧ ಎಚ್ಚರಿಸಿದ ಅವರು, ತಾಂತ್ರಿಕ ಪ್ರಗತಿಯು ಯಾವಾಗಲೂ ಮಾನವ ಮೌಲ್ಯಗಳು, ವಿವೇಚನೆ ಮತ್ತು ಸಂವೇದನಾಶೀಲತೆಯಲ್ಲಿ ನೆಲೆಗೊಂಡಿರಬೇಕು ಎಂದು ಅಭಿಪ್ರಾಯಪಟ್ಟರು. ತಂತ್ರಜ್ಞಾನವು ಸಾಂಸ್ಥಿಕ ಹೊಣೆಗಾರಿಕೆಯನ್ನು ಬಲಪಡಿಸಬೇಕು ಮತ್ತು ನಿರ್ಧಾರ ತೆಗೆದುಕೊಳ್ಳುವ ಗುಣಮಟ್ಟವನ್ನು ಸುಧಾರಿಸಬೇಕು, ಆದರೆ ಅದು ಎಂದಿಗೂ ಮನುಷ್ಯರ ವಿವೇಚನೆ ಮತ್ತು ನಿರ್ಣಯಕ್ಕೆ ಪರ್ಯಾಯವಾಗಲು ಸಾಧ್ಯವಿಲ್ಲ. ಡಿಜಿಟಲ್ ವೇದಿಕೆಗಳ ಮೂಲಕ ರಚಿಸಲಾದ ಮತ್ತು ಲಭ್ಯವಾಗುವ ದತ್ತಾಂಶದ ನಿಖರತೆ, ಅಧಿಕೃತತೆ ಮತ್ತು ನಿಷ್ಪಕ್ಷಪಾತತೆಯನ್ನು ಕಾಯ್ದುಕೊಳ್ಳುವ ಅಗತ್ಯವನ್ನು ಅವರು ಪ್ರತಿಪಾದಿಸಿದರು. ತಂತ್ರಜ್ಞಾನ ಆಧಾರಿತ ಆಡಳಿತದ ವಿಶ್ವಾಸಾರ್ಹತೆಯು ನಿರ್ಧಾರಗಳನ್ನು ತೆಗೆದುಕೊಳ್ಳುವ ಮಾಹಿತಿಯ ನಿಖರತೆಯ ಮೇಲೆ ನಿಂತಿದೆ ಎಂದು ಅವರು ಹೇಳಿದರು.
ಸಮ್ಮೇಳನದಲ್ಲಿ ಲೋಕಸಭೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಕೆ. ಸಿ. ವೇಣುಗೋಪಾಲ್ ಅವರು ನೀಡಿದ ಸಲಹೆಗಳನ್ನು ಉಲ್ಲೇಖಿಸಿದ ಲೋಕಸಭಾ ಸಭಾಪತಿ (ಸ್ಪೀಕರ್) ಅವರು, ಲೆಕ್ಕಪರಿಶೋಧನಾ ವರದಿಗಳ ನಿರಂತರ ಪರಿಶೀಲನೆ ಮತ್ತು ಸಮಯೋಚಿತ ವಿಲೇವಾರಿಗೆ ಸಂಬಂಧಿಸಿದ ಸಾಮಾನ್ಯ ಸವಾಲುಗಳನ್ನು ಎದುರಿಸಲು ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳ ಸಮಿತಿಗಳು ಜಂಟಿಯಾಗಿ ಸಮಗ್ರ ಲೆಕ್ಕಪತ್ರ ಮತ್ತು ಮೌಲ್ಯಮಾಪನ ವ್ಯವಸ್ಥೆಯನ್ನು ವ್ಯವಸ್ಥೆಯನ್ನು ರೂಪಿಸಲು ಕರೆ ನೀಡಿದರು. ಸಂಘಟಿತ ಸಾಂಸ್ಥಿಕ ವ್ಯವಸ್ಥೆಯು ಹೆಚ್ಚಿನ ಸಹಕಾರವನ್ನು ಪೋಷಿಸುತ್ತದೆ, ಅನುಭವಗಳ ವಿನಿಮಯವನ್ನು ಸುಗಮಗೊಳಿಸುತ್ತದೆ ಮತ್ತು ದೇಶಾದ್ಯಂತದ ಸಾರ್ವಜನಿಕ ಲೆಕ್ಕಪತ್ರ ಸಮಿತಿಗಳ ಸಾಮೂಹಿಕ ಸಾಮರ್ಥ್ಯವನ್ನು ಬಲಪಡಿಸುತ್ತದೆ ಎಂದು ಅವರು ಹೇಳಿದರು.
ಸಾರ್ವಜನಿಕ ವೆಚ್ಚದಲ್ಲಿ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಪಿಎಸಿಗಳ ಅತ್ಯವಶ್ಯಕವಾದ ಪಾತ್ರವನ್ನು ಒತ್ತಿಹೇಳಿದ ಅವರು, ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ (ಸಿಎಜಿ) ಸ್ವತಂತ್ರ ಮತ್ತು ನಿಷ್ಪಕ್ಷಪಾತ ಲೆಕ್ಕಪರಿಶೋಧನೆಗಳನ್ನು ನಡೆಸಿದರೆ, ಸಾರ್ವಜನಿಕ ಲೆಕ್ಕಪತ್ರ ಸಮಿತಿಗಳು ಕಂಡುಬಂದ ಅಂಶಗಳನ್ನು ಪರಿಶೀಲಿಸುವುದು, ಸತ್ಯಾಂಶ ಆಧಾರಿತ ಕೂಲಂಕಷ ವಿಮರ್ಶೆಗಳನ್ನು ನಡೆಸುವುದು ಮತ್ತು ಸಮಿತಿಯ ಶಿಫಾರಸುಗಳ ಮೇಲೆ ಪರಿಣಾಮಕಾರಿ ಅನುಸರಣಾ ಕ್ರಮಗಳನ್ನು ಕೈಗೊಳ್ಳುವ ನಿರ್ಣಾಯಕ ಜವಾಬ್ದಾರಿಯನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿಗಳು ನಿರ್ವಹಿಸುತ್ತವೆ ಎಂದು ವಿವರಿಸಿದರು. ಲೆಕ್ಕಪರಿಶೋಧನೆಯ ಅವಲೋಕನಗಳು ಕೇವಲ ವರದಿಗಳು ಮತ್ತು ದಾಖಲೆಗಳಿಗೆ ಮಾತ್ರ ಸೀಮಿತವಾಗಬಾರದು; ಬದಲಾಗಿ, ಅವು ಸೂಕ್ತ ತಿದ್ದುಪಡಿ ಕ್ರಮಗಳಾಗಿ ಮತ್ತು ಆಡಳಿತಾತ್ಮಕ ಕಾರ್ಯಚಟುವಟಿಕೆಗಳಲ್ಲಿನ ಸ್ಪಷ್ಟ ಸುಧಾರಣೆಗಳಾಗಿ ಪರಿವರ್ತನೆಗೊಳ್ಳಬೇಕು. ಕಾರ್ಯಾಂಗವು ಈ ಸಮಿತಿಗಳ ಶಿಫಾರಸುಗಳಿಗೆ ಸೂಕ್ತ ಪ್ರಾಮುಖ್ಯತೆಯನ್ನು ನೀಡಬೇಕು ಮತ್ತು ಅವುಗಳನ್ನು ಸಕಾಲದಲ್ಲಿ ಜಾರಿಗೊಳಿಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಸಂಸತ್ತು ಹಾಗು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಶಾಸಕಾಂಗ ಸಾರ್ವಜನಿಕ ಲೆಕ್ಕಪತ್ರ ಸಮಿತಿಗಳ (ಪಿಎಸಿ) ಅಧ್ಯಕ್ಷರ ಸಮ್ಮೇಳನದಲ್ಲಿ ಅಂಗೀಕರಿಸಲಾದ 'ಕೇರಳಂ ನಿರ್ಣಯ'ವು ಮುಂಬರುವ ವರ್ಷಗಳಲ್ಲಿ ಈ ಪ್ರಮುಖ ಸಂಸದೀಯ ಮತ್ತು ಶಾಸಕಾಂಗ ಸಂಸ್ಥೆಗಳ ಕಾರ್ಯನಿರ್ವಹಣೆಯನ್ನು ಬಲಪಡಿಸಲು ಒಂದು ಪ್ರಮುಖ ಮಾರ್ಗದರ್ಶಿ ಚೌಕಟ್ಟು ಮತ್ತು ಭವಿಷ್ಯದ ಮಾರ್ಗಸೂಚಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿದ ಅವರು, ಸಮ್ಮೇಳನದಿಂದ ಹೊರಹೊಮ್ಮಿದ ಸಮೃದ್ಧ ವಿಚಾರಮಂಥನ, ಸಾಮೂಹಿಕ ಜ್ಞಾನ ಮತ್ತು ಶಿಫಾರಸುಗಳು ಕಾರ್ಯಸಾಧ್ಯವಾದ ಕ್ರಿಯೆಯಲ್ಲಿ ಅರ್ಥಪೂರ್ಣವಾಗಿ ವ್ಯಕ್ತವಾಗಬೇಕು ಎಂದು ಒತ್ತಿಹೇಳಿದರು. ಆರ್ಥಿಕ ಶಿಸ್ತನ್ನು ಬಲಪಡಿಸುವುದು, ಸಾಂಸ್ಥಿಕ ಸಾಮರ್ಥ್ಯಗಳನ್ನು ಹೆಚ್ಚಿಸುವುದು ಮತ್ತು ಕೇಂದ್ರ ಹಾಗೂ ರಾಜ್ಯ ಎರಡೂ ಹಂತಗಳಲ್ಲಿ ಆಡಳಿತವನ್ನು ಹೆಚ್ಚು ಪಾರದರ್ಶಕ, ಸ್ಪಂದನಶೀಲ ಮತ್ತು ಫಲಿತಾಂಶ ಆಧಾರಿತವಾಗುವಂತೆ ಮಾಡುವುದೇ ಅಂತಿಮ ಉದ್ದೇಶವಾಗಿರಬೇಕು ಎಂದು ಅವರು ಸ್ಪಷ್ಟಪಡಿಸಿದರು. ಅವುಗಳ ಶಿಫಾರಸುಗಳು ಶಾಸಕಾಂಗ ಮತ್ತು ಕಾರ್ಯಾಂಗ ಎರಡರ ಕಾರ್ಯನಿರ್ವಹಣೆಯಲ್ಲಿ ಅರ್ಥಪೂರ್ಣವಾಗಿ ಪ್ರತಿಫಲಿಸುತ್ತವೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ ಅವರು, ನಿರ್ಣಯದ ಪರಿಣಾಮಕಾರಿ ಅನುಷ್ಠಾನವು ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಮತ್ತಷ್ಟು ಬಲಪಡಿಸುತ್ತದೆ, ಸಾರ್ವಜನಿಕ ನಂಬಿಕೆಯನ್ನು ಗಟ್ಟಿಗೊಳಿಸುತ್ತದೆ ಮತ್ತು ಸಂಸದೀಯ ಹಾಗೂ ಶಾಸಕಾಂಗದ ಮೇಲ್ವಿಚಾರಣೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
ಶಿಕ್ಷಣ, ಆರೋಗ್ಯ, ಮೂಲಸೌಕರ್ಯ, ಸಾಮಾಜಿಕ ಕಲ್ಯಾಣ ಮತ್ತು ಗ್ರಾಮೀಣ ಅಭಿವೃದ್ಧಿಯಂತಹ ಪ್ರಮುಖ ವಲಯಗಳಲ್ಲಿ ಸಾರ್ವಜನಿಕ ಹೂಡಿಕೆಯ ವಿಸ್ತರಿಸುತ್ತಿರುವ ಪ್ರಮಾಣವು ಸಾರ್ವಜನಿಕ ಹಣದ ವಿವೇಚನಾಯುಕ್ತ ಮತ್ತು ಉದ್ದೇಶಪೂರ್ವಕ ಬಳಕೆಯನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿಯನ್ನು ಇನ್ನಷ್ಟು ಮಹತ್ವದ್ದಾಗಿಸಿದೆ ಎಂದು ಲೋಕಸಭಾ ಸ್ಪೀಕರ್ ಹೇಳಿದರು. ಸಾರ್ವಜನಿಕರ ಪ್ರತಿಯೊಂದು ರೂಪಾಯಿಯೂ ಸರಿಯಾಗಿ ಲೆಕ್ಕಹಾಕಲ್ಪಡಬೇಕು ಮತ್ತು ಅದನ್ನು ಯಾವ ಉದ್ದೇಶಕ್ಕಾಗಿ ಹಂಚಿಕೆ ಮಾಡಲಾಗಿದೆಯೋ ಅದಕ್ಕಾಗಿಯೇ ಬಳಸಬೇಕು ಎಂದು ಅವರು ಒತ್ತಿಹೇಳಿದರು.
ಸಾರ್ವಜನಿಕ ಹಣವು ಉದ್ದೇಶಿತ ಪ್ರಯೋಜನಗಳನ್ನು ನೀಡುತ್ತಿದೆಯೇ ಮತ್ತು ನಾಗರಿಕರ ಜೀವನದಲ್ಲಿ ಉದ್ದೇಶಿತ ಸುಧಾರಣೆಗಳನ್ನು ಸೃಷ್ಟಿಸುತ್ತಿದೆಯೇ ಎಂಬುದನ್ನು ನಿರ್ಣಯಿಸಲು ಶಾಸನಸಭಾ ಮೇಲ್ವಿಚಾರಣೆಯು ವೆಚ್ಚದ ಪರಿಶೀಲನೆಯನ್ನು ಮೀರಿ ಹೋಗಬೇಕು ಎಂದು ಅವರು ಹೇಳಿದರು. ಸರ್ಕಾರಿ ಕಾರ್ಯಕ್ರಮಗಳು ಮತ್ತು ಯೋಜನೆಗಳ ಮೌಲ್ಯಮಾಪನವು ಅವುಗಳ ನಿರಂತರತೆ, ಗುಣಮಟ್ಟ, ಸಮಯೋಚಿತ ಅನುಷ್ಠಾನ ಮತ್ತು ನಿಜವಾದ ಫಲಿತಾಂಶಗಳನ್ನು ಒಳಗೊಂಡಿರಬೇಕು ಎಂದು ಅವರು ಮತ್ತಷ್ಟು ಒತ್ತಿಹೇಳಿದರು. ಬಾಳಿಕೆ ಬರುವ ಮೂಲಸೌಕರ್ಯಗಳ ಸೃಷ್ಟಿ, ನಿಗದಿತ ಗಡುವುಗಳಲ್ಲಿ ಯೋಜನೆಗಳ ಪೂರ್ಣಗೊಳಿಸುವಿಕೆ ಅಥವಾ ಅರ್ಹ ಫಲಾನುಭವಿಗಳಿಗೆ ಕಲ್ಯಾಣ ಸೌಲಭ್ಯಗಳ ಸಮಯೋಚಿತ ತಲುಪುವಿಕೆ ಇರಲಿ, ಸಾರ್ವಜನಿಕ ಸೇವಾ ವಿತರಣೆಯ ಪ್ರತಿಯೊಂದು ಮಜಲು ಸಹ ವ್ಯವಸ್ಥಿತ ಪರಿಶೀಲನೆ ಮತ್ತು ಮೌಲ್ಯಮಾಪನಕ್ಕೆ ಒಳಪಡಬೇಕು. ಇಲಾಖೆಗೆ ಸಂಬಂಧಿಸಿದ ಸ್ಥಾಯಿ ಸಮಿತಿಗಳು ಈ ನಿಟ್ಟಿನಲ್ಲಿ ಪ್ರಮುಖ ಮೌಲ್ಯಮಾಪನಗಳನ್ನು ಕೈಗೊಂಡರೂ, ಹಣಕಾಸಿನ ಔಚಿತ್ಯ ಮತ್ತು ಸಾರ್ವಜನಿಕ ವೆಚ್ಚದ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ವಿಶೇಷ ಮಹತ್ವದ ಜವಾಬ್ದಾರಿಯನ್ನು ಹೊಂದಿದೆ ಎಂದು ಅವರು ಹೇಳಿದರು.
ಸಾಂಸ್ಥಿಕ ಸಾಮರ್ಥ್ಯಗಳನ್ನು ಬಲಪಡಿಸುವ ಮಹತ್ವವನ್ನು ಎತ್ತಿಹಿಡಿದ ಶ್ರೀ ಬಿರ್ಲಾ ಅವರು, ತ್ವರಿತ ತಾಂತ್ರಿಕ ರೂಪಾಂತರದ ಈ ಯುಗದಲ್ಲಿ ಸಿಎಜಿ ಮತ್ತು ಸಾರ್ವಜನಿಕ ಲೆಕ್ಕಪತ್ರ ಸಮಿತಿಗಳಿಗೆ ಸಂಬಂಧಿಸಿದ ಅಧಿಕಾರಿಗಳು ಮತ್ತು ನೌಕರರ ನಿರಂತರ ಸಾಮರ್ಥ್ಯ ವೃದ್ಧಿ ಮತ್ತು ವೃತ್ತಿಪರ ಅಭಿವೃದ್ಧಿ ಅತ್ಯಗತ್ಯ ಎಂದು ಹೇಳಿದರು. ಸಂಸತ್ ಸದಸ್ಯರು ಮತ್ತು ರಾಜ್ಯ ಶಾಸಕಾಂಗಗಳ ಸದಸ್ಯರು ಸಹ ತಮ್ಮ ಮೇಲ್ವಿಚಾರಣಾ ಜವಾಬ್ದಾರಿಗಳಲ್ಲಿ ಭವಿಷ್ಯದ ತಂತ್ರಜ್ಞಾನಗಳನ್ನು ಅರಿಯಲು ಮತ್ತು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಅಗತ್ಯವಾದ ಜ್ಞಾನ ಮತ್ತು ಕೌಶಲ್ಯಗಳನ್ನು ಹೊಂದಿರಬೇಕು. ನಿಯಮಿತ ತರಬೇತಿ, ಹೊಸ ಪರಿಕರಗಳ ಪರಿಚಯ ಮತ್ತು ವೃತ್ತಿಪರ ಪರಿಣತಿಯ ಹಂಚಿಕೆಯು ಪರಿಶೀಲನೆ, ಉಸ್ತುವಾರಿ ಮತ್ತು ಮೌಲ್ಯಮಾಪನದ ಗುಣಮಟ್ಟವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಎಂದು ಅವರು ಹೇಳಿದರು.
ಸಂಸತ್ತು ಮತ್ತು ರಾಜ್ಯ ಶಾಸನಸಭೆಗಳ ಸಾರ್ವಜನಿಕ ಲೆಕ್ಕಪತ್ರ ಸಮಿತಿಗಳ ನಡುವೆ ನಿಯಮಿತ ಸಭೆಗಳು, ಸಮ್ಮೇಳನಗಳು ಮತ್ತು ಅನುಭವಗಳ ವಿನಿಮಯವನ್ನು ಸಾಂಸ್ಥಿಕಗೊಳಿಸಲು ಲೋಕಸಭಾ ಸ್ಪೀಕರ್ ಕರೆ ನೀಡಿದರು. ವಿವಿಧ ರಾಜ್ಯಗಳು ಅಭಿವೃದ್ಧಿಪಡಿಸಿದ ಯಶಸ್ವಿ ಕಾರ್ಯವಿಧಾನಗಳು, ನವೀನ ವಿಧಾನಗಳು ಮತ್ತು ತಾಂತ್ರಿಕ ಪರಿಹಾರಗಳನ್ನು ಹಂಚಿಕೊಳ್ಳುವುದು ಅಮೂಲ್ಯವಾದ ಕಲಿಕಾ ಅವಕಾಶಗಳನ್ನು ಒದಗಿಸುತ್ತದೆ ಮತ್ತು ದೇಶಾದ್ಯಂತದ ಸಮಿತಿಗಳಿಗೆ ಪರಿಣಾಮಕಾರಿ ಮಾದರಿಗಳನ್ನು ಅಳವಡಿಸಿಕೊಳ್ಳಲು ಮತ್ತು ಅನುಕರಿಸಲು ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳಿದರು. ಸಮ್ಮೇಳನದಲ್ಲಿ 27 ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಿ ತಮ್ಮ ಅನುಭವಗಳು ಮತ್ತು ದೃಷ್ಟಿಕೋನಗಳೊಂದಿಗೆ ಚರ್ಚೆಯನ್ನು ಸಮೃದ್ಧಗೊಳಿಸಿದ್ದಾರೆ ಎಂದು ಉಲ್ಲೇಖಿಸಿದ ಅವರು, ಬಲವಾದ ಮತ್ತು ಹೆಚ್ಚು ಪರಿಣಾಮಕಾರಿ ಶಾಸಕಾಂಗ ಸಂಸ್ಥೆಗಳನ್ನು ನಿರ್ಮಿಸಲು ಇಂತಹ ಸಾಮೂಹಿಕ ತೊಡಗಿಸಿಕೊಳ್ಳುವಿಕೆ ಅತ್ಯಗತ್ಯ ಎಂದು ಹೇಳಿದರು.
ಸಮ್ಮೇಳನದ ನಿಜವಾದ ಮಹತ್ವವು ಅದರ ಚರ್ಚೆಗಳು ಮತ್ತು 'ಕೇರಳಂ ನಿರ್ಣಯ'ವನ್ನು ಸುಸ್ಥಿರ ಸಾಂಸ್ಥಿಕ ಕ್ರಿಯೆಯಾಗಿ ಪರಿವರ್ತಿಸುವುದರಲ್ಲಿದೆ ಎಂದು ಶ್ರೀ ಬಿರ್ಲಾ ಹೇಳಿದರು. ಆಧುನಿಕ ತಂತ್ರಜ್ಞಾನ, ಮಾಹಿತಿ ಆಧಾರಿತ ಪರಿಶೀಲನೆ ಮತ್ತು ಪರಿಣಾಮಕಾರಿ ಅನುಸರಣಾ ಕಾರ್ಯವಿಧಾನಗಳ ಬೆಂಬಲದೊಂದಿಗೆ ಬಲವಾದ ಸಾರ್ವಜನಿಕ ಲೆಕ್ಕಪತ್ರ ಸಮಿತಿಗಳು ಸಾರ್ವಜನಿಕ ಸಂಪನ್ಮೂಲಗಳನ್ನು ಜಾಗರೂಕತೆ, ಪ್ರಾಮಾಣಿಕತೆ ಮತ್ತು ಸ್ಪಷ್ಟ ಸಾರ್ವಜನಿಕ ಉದ್ದೇಶದೊಂದಿಗೆ ಬಳಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಗಮನಾರ್ಹ ಕೊಡುಗೆ ನೀಡುತ್ತವೆ ಎಂದು ಅವರು ಒತ್ತಿಹೇಳಿದರು.
ಸಾರ್ವಜನಿಕ ಹಣದ ಪರಿಣಾಮಕಾರಿ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು ಪಿಎಸಿಗಳು ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ವಿಕಸನಗೊಳ್ಳಬೇಕು: ಶ್ರೀ ಕೆ. ಸಿ. ವೇಣುಗೋಪಾಲ್
ಸಾರ್ವಜನಿಕ ಹಣವು ಹೆಚ್ಚು ಸಂಕೀರ್ಣವಾದ ಮಾರ್ಗಗಳ ಮೂಲಕ ಹರಿಯುವುದರಿಂದ ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು ಪಿಎಸಿಗಳು ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ವಿಕಸನಗೊಳ್ಳಬೇಕು ಎಂದು ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷರು ಒತ್ತಿಹೇಳಿದರು. ಶಾಸನಸಭೆಗಳಿಗೆ ಸಲ್ಲಿಕೆಯಾಗುವ ಲೆಕ್ಕಪರಿಶೋಧನಾ ಸಂಶೋಧನೆಗಳನ್ನು ಪಿಎಸಿಗಳು ಅರ್ಥಪೂರ್ಣ ಹೊಣೆಗಾರಿಕೆಯಾಗಿ ಪರಿವರ್ತಿಸುತ್ತವೆ ಎಂದು ಹೇಳಿದ ಅವರು, ಸಾರ್ವಜನಿಕ ಯೋಜನೆಗಳ ಸಮಯೋಚಿತ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ವರದಿಗಳನ್ನು ಸದನದ ಮುಂದಿಡುವ ಅಗತ್ಯವನ್ನು ಒತ್ತಿಹೇಳಿದರು. ಸಚಿವಾಲಯಗಳು ಮತ್ತು ಇಲಾಖೆಗಳಿಂದ ವಿಳಂಬವಾದ, ಅಪೂರ್ಣವಾದ ಅಥವಾ ಉತ್ತರಗಳೇ ಬಾರದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಸಂಪೂರ್ಣ ಉತ್ತರಗಳನ್ನು ತಕ್ಷಣವೇ ಒದಗಿಸುವಂತೆ ಕಾರ್ಯಾಂಗಕ್ಕೆ ಕರೆ ನೀಡಿದರು.
ಪಿಎಸಿಯ ಕೆಲಸವು ಜನರನ್ನು ತಲುಪಬೇಕು ಎಂದು ಒತ್ತಿಹೇಳಿದ ಅವರು, ಹೊಣೆಗಾರಿಕೆಯನ್ನು ಬಲಪಡಿಸಲು ಸಂಸತ್ತು ಮತ್ತು ಪ್ರತಿಯೊಂದು ರಾಜ್ಯ ಶಾಸಕಾಂಗದಲ್ಲಿ ಕನಿಷ್ಠ ಒಂದು ಪಿಎಸಿ ವರದಿಯನ್ನಾದರೂ ಚರ್ಚೆಗೆ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು. ಕೇಂದ್ರ ಪ್ರಾಯೋಜಿತ ಯೋಜನೆಗಳನ್ನು ಪರಿಶೀಲಿಸುವಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಉತ್ತಮ ಸಮನ್ವಯಕ್ಕೆ ಕರೆ ನೀಡಿದ ಅವರು, ಈ ಯೋಜನೆಗಳಿಗೆ ಮೀಸಲಾಗಿರುವ ಕೇಂದ್ರ ಮತ್ತು ರಾಜ್ಯ ಪಿಎಸಿಗಳ ನಡುವೆ ವರ್ಷಕ್ಕೆ ಕನಿಷ್ಠ ಒಂದು ಸಭೆಯನ್ನಾದರೂ ನಡೆಸುವಂತೆ ಪ್ರಸ್ತಾಪಿಸಿದರು. ವಿಶೇಷ ಸಿಬ್ಬಂದಿ, ತರಬೇತಿ ಮತ್ತು ಸಾಮರ್ಥ್ಯ ವೃದ್ಧಿಯ ಮಹತ್ವವನ್ನು ಒತ್ತಿಹೇಳಿದ ಅವರು, ಆಡಿಟ್ ಪ್ಯಾರಾಗಳು ಮತ್ತು ತೆಗೆದುಕೊಂಡ ಕ್ರಮಗಳನ್ನು ಮೇಲ್ವಿಚಾರಣೆ ಮಾಡಲು ಡ್ಯಾಶ್ಬೋರ್ಡ್ ಸೇರಿದಂತೆ ತಂತ್ರಜ್ಞಾನದ ಹೆಚ್ಚಿನ ಬಳಕೆಯ ಬಗ್ಗೆ ಒತ್ತಿ ಹೇಳಿದರು.
ಈ ಸಂದರ್ಭದಲ್ಲಿ ಕೇರಳ ವಿಧಾನಸಭೆಯ ಸ್ಪೀಕರ್, ಕೇರಳ ವಿಧಾನಸಭೆಯ ಡೆಪ್ಯುಟಿ ಸ್ಪೀಕರ್ ಮತ್ತು ಕೇರಳ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷರು ಉಪಸ್ಥಿತರಿದ್ದರು.
ಈ ಎರಡು ದಿನಗಳ ಸಮ್ಮೇಳನವು " ಲೆಕ್ಕಪರಿಶೋಧನೆ, ಹೊಣೆಗಾರಿಕೆ ಮತ್ತು ಉತ್ತಮ ಆಡಳಿತ ಸುಡಳಿತ - ಪಿಎಸಿಯ ವಿಕಸನಗೊಳ್ಳುತ್ತಿರುವ ಪಾತ್ರ" ಎನ್ನುವ ವಿಷಯದ ಮೇಲೆ ಆರ್ಥಿಕ ಮೇಲ್ವಿಚಾರಣೆಯನ್ನು ಬಲಪಡಿಸುವುದು, ಲೆಕ್ಕಪರಿಶೋಧನೆ ಅನುಸರಣಾ ಕಾರ್ಯವಿಧಾನಗಳನ್ನು ಸುಧಾರಿಸುವುದು, ತಾಂತ್ರಿಕ ಆವಿಷ್ಕಾರಗಳನ್ನು ಅಳವಡಿಸಿಕೊಳ್ಳುವುದು ಮತ್ತು ಸಾರ್ವಜನಿಕ ಲೆಕ್ಕಪತ್ರ ಸಮಿತಿಗಳ ಸಾಂಸ್ಥಿಕ ಪರಿಣಾಮಕಾರಿತ್ವವನ್ನು ಹೆಚ್ಚಿಸುವುದರ ಮೇಲೆ ವಿಶೇಷ ಗಮನ ಹರಿಸಿ ಸುದೀರ್ಘ ಮತ್ತು ರಚನಾತ್ಮಕ ಚರ್ಚೆಗಳಿಗೆ ಸಾಕ್ಷಿಯಾಯಿತು.
ಸಮ್ಮೇಳನದಲ್ಲಿ ಅಂಗೀಕರಿಸಲಾದ ನಿರ್ಣಯ -
*****