ಪ್ರಕಟಣಾ ದಿನಾಂಕ:
03 NOV 2026 3:51PM by PIB Bengaluru
ಸಾರ್ವಜನಿಕ ಖಜಾನೆಯಿಂದ ಹಿಂಪಡೆಯಲಾದ ಪ್ರತಿಯೊಂದು ರೂಪಾಯಿಗೂ ಸರಿಯಾದ ಲೆಕ್ಕವಿರಬೇಕು ಮತ್ತು ಅದನ್ನು ಯಾವ ಉದ್ದೇಶಕ್ಕಾಗಿ ಮಂಜೂರು ಮಾಡಲಾಗಿದೆಯೋ ಅದಕ್ಕಾಗಿಯೇ ಸಂಪೂರ್ಣವಾಗಿ ಬಳಸಿಕೊಳ್ಳಬೇಕು ಎಂದು ಒತ್ತಿ ಹೇಳಿದ ಲೋಕಸಭೆ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರು, ಸಾರ್ವಜನಿಕ ಹಣದ ರಕ್ಷಕರಾಗಿ ತಮ್ಮ ಪಾತ್ರವನ್ನು ಬಲಪಡಿಸಲು ಸಂಸತ್ತು ಮತ್ತು ರಾಜ್ಯ ಶಾಸನಸಭೆಗಳ ಸಾರ್ವಜನಿಕ ಲೆಕ್ಕಪತ್ರ ಸಮಿತಿಗಳಿಗೆ (PACs) ಇಂದು ಕರೆ ನೀಡಿದರು. ಪಾರದರ್ಶಕತೆ ಮತ್ತು ಹೊಣೆಗಾರಿಕೆಯು ಪ್ರಜಾಪ್ರಭುತ್ವದ ಅಡಿಪಾಯವಾಗಿದೆ ಮತ್ತು ಸಾರ್ವಜನಿಕ ವೆಚ್ಚದ ಅಂತಿಮ ಅಳತೆಗೋಲು ಸಾಮಾನ್ಯ ನಾಗರಿಕರ ಜೀವನದಲ್ಲಿ ಅದು ತರುವ ಸಕಾರಾತ್ಮಕ ವ್ಯತ್ಯಾಸವೇ ಆಗಿರಬೇಕು ಎಂದು ಅವರು ಹೇಳಿದರು.
ತಿರುವನಂತಪುರಂನಲ್ಲಿ ನಡೆದ ಸಂಸತ್ತು ಮತ್ತು ರಾಜ್ಯ ಶಾಸನಸಭೆಗಳ ಸಾರ್ವಜನಿಕ ಲೆಕ್ಕಪತ್ರ ಸಮಿತಿಗಳ ಅಧ್ಯಕ್ಷರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಬಿರ್ಲಾ ಅವರು, ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಪ್ರಜಾಸತ್ತಾತ್ಮಕ ಸಂಸದೀಯ ವ್ಯವಸ್ಥೆಯ ಪ್ರಮುಖ ಸಂಸ್ಥೆಯಾಗಿದ್ದು, ಸಾರ್ವಜನಿಕ ವೆಚ್ಚವನ್ನು ಪರಿಶೀಲಿಸುವ, ಆರ್ಥಿಕ ಶಿಸ್ತನ್ನು ಖಚಿತಪಡಿಸುವ ಮತ್ತು ಕಾರ್ಯಾಂಗವನ್ನು ಹೊಣೆಗಾರರನ್ನಾಗಿ ಮಾಡುವ ಜವಾಬ್ದಾರಿಯನ್ನು ಹೊಂದಿದೆ ಎಂದು ಹೇಳಿದರು. ಸಮಿತಿಗಳ ಜವಾಬ್ದಾರಿಯು ಲೆಕ್ಕಪತ್ರಗಳು ಮತ್ತು ಆಡಿಟ್ ಆವಿಷ್ಕಾರಗಳ ಪರಿಶೀಲನೆಯನ್ನು ಮೀರಿದ್ದಾಗಿದೆ; ಸಾರ್ವಜನಿಕ ನಿಧಿಯು ತನ್ನ ಉದ್ದೇಶಿತ ಗುರಿಗಳನ್ನು ಸಾಧಿಸಿದೆಯೇ ಮತ್ತು ಅವುಗಳನ್ನು ಯಾವುದಕ್ಕಾಗಿ ಹಂಚಿಕೆ ಮಾಡಲಾಗಿತ್ತೋ ಆ ಫಲಿತಾಂಶಗಳನ್ನು ನೀಡಿದೆಯೇ ಎಂಬುದನ್ನು ಸಹ ಅವು ಮೌಲ್ಯಮಾಪನ ಮಾಡಬೇಕು ಎಂದು ಅವರು ಗಮನಿಸಿದರು.
ಆಡಿಟ್ ಪರಿಶೀಲನೆಗಳು 10, 15 ಅಥವಾ 20 ವರ್ಷಗಳ ಕಾಲದಿಂದಲೂ ಪರಿಹಾರವಾಗದೆ ಉಳಿಯುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಶ್ರೀ ಬಿರ್ಲಾ ಅವರು, ಇಂತಹ ದೀರ್ಘಕಾಲದ ಬಾಕಿಯು ವ್ಯವಸ್ಥೆಯ ಪರಿಣಾಮಕಾರಿತ್ವದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಹೇಳಿದರು. ಆಡಿಟ್ ಪರಿಶೀಲನೆಗಳು ಮತ್ತು ಅವುಗಳಿಂದ ಉದ್ಭವಿಸುವ ಕ್ರಮಗಳನ್ನು ಅನಗತ್ಯ ವಿಳಂಬವಿಲ್ಲದೆ ಪರಿಹರಿಸುವುದನ್ನು ಖಚಿತಪಡಿಸಿಕೊಳ್ಳಲು ನಿರ್ದಿಷ್ಟ, ವ್ಯವಸ್ಥಿತ ಮತ್ತು ಸಮಯೋಚಿತ ಕ್ರಿಯಾ ಯೋಜನೆಯ ಅಗತ್ಯತೆಯ ಕುರಿತು ಅವರು ಕರೆ ನೀಡಿದರು. ಹೊಣೆಗಾರಿಕೆಯು ಕೇವಲ ಕಾಗದದ ಮೇಲೆ ಮಾತ್ರ ಸ್ಥಾಪನೆಯಾಗದೆ ಸಮಯೋಚಿತ ಸರಿಪಡಿಸುವ ಕ್ರಮವಾಗಿ ಪರಿವರ್ತನೆಯಾಗುವಂತೆ ಮೇಲ್ವಿಚಾರಣೆ, ಪರಿಶೀಲನೆ ಮತ್ತು ಅನುಸರಣೆಯ ವ್ಯವಸ್ಥೆಗಳನ್ನು ಬಲಪಡಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ಅವರು ಹೇಳಿದರು. ವಿರೋಧ ಪಕ್ಷದ ಸದಸ್ಯರೊಬ್ಬರನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸುವ ವಿಶಿಷ್ಟ ಪ್ರಜಾಸತ್ತಾತ್ಮಕ ಸಂಪ್ರದಾಯದ ಬಗ್ಗೆ ಒತ್ತಿ ಹೇಳಿದ ಶ್ರೀ ಬಿರ್ಲಾ ಅವರು, ಈ ಪದ್ಧತಿಯು ಭಾರತದ ಸಂಸದೀಯ ಪ್ರಜಾಪ್ರಭುತ್ವದ ಪ್ರಗಲ್ಭತೆ, ಒಳಗೊಳ್ಳುವಿಕೆ ಮತ್ತು ಶಕ್ತಿಯನ್ನು ಪ್ರತಿಫಲಿಸುತ್ತದೆ ಎಂದು ಹೇಳಿದರು. ಸಮಿತಿಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಪ್ರಾತಿನಿಧ್ಯವು ಸಾರ್ವಜನಿಕ ವೆಚ್ಚದ ಪರಿಶೀಲನೆಗೆ ವಿವಿಧ ದೃಷ್ಟಿಕೋನಗಳನ್ನು ತರುವುದನ್ನು ಖಚಿತಪಡಿಸುತ್ತದೆ. ಸಾಮಾನ್ಯ ರಾಷ್ಟ್ರೀಯ ಉದ್ದೇಶದ ಅನ್ವೇಷಣೆಯಲ್ಲಿ ರಾಜಕೀಯ ಪರಿಗಣನೆಗಳಿಂದ ಮೇಲೇಳುವ ಪ್ರಜಾಸತ್ತಾತ್ಮಕ ಸಂಸ್ಥೆಗಳ ಸಾಮರ್ಥ್ಯಕ್ಕೆ ಈ ವ್ಯವಸ್ಥೆಯನ್ನು ಅವರು ಉಜ್ವಲ ಉದಾಹರಣೆ ಎಂದು ಬಣ್ಣಿಸಿದರು.
ಸದಸ್ಯರು ವಿವಿಧ ರಾಜಕೀಯ ಪಕ್ಷಗಳಿಗೆ ಸೇರಿದವರಾಗಿರಬಹುದು, ವಿಭಿನ್ನ ಸಿದ್ಧಾಂತಗಳನ್ನು ಹೊಂದಿರಬಹುದು ಮತ್ತು ನೀತಿಗಳು ಹಾಗೂ ಆಡಳಿತದ ಬಗ್ಗೆ ವಿಭಿನ್ನ ಅಭಿಪ್ರಾಯಗಳನ್ನು ಹೊಂದಿರಬಹುದು; ಆದಾಗ್ಯೂ, ಸಾರ್ವಜನಿಕ ಹಣವನ್ನು ರಕ್ಷಿಸುವ ವಿಷಯ ಬಂದಾಗ, ಅವರ ಜವಾಬ್ದಾರಿಯು ಹಂಚಿಕೆಯಾಗುತ್ತದೆ ಎಂದು ಲೋಕಸಭೆ ಸ್ಪೀಕರ್ ಅಭಿಪ್ರಾಯಪಟ್ಟರು. ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಸಂವಾದ, ಸಹಕಾರ, ಸಮ್ಮತಿ ಮತ್ತು ಸಾಮೂಹಿಕ ಜವಾಬ್ದಾರಿಯ ಮೂಲಕ ಕಾರ್ಯನಿರ್ವಹಿಸಬೇಕು. ಇದರ ಉದ್ದೇಶ ಯಾವುದೇ ವ್ಯಕ್ತಿ ಅಥವಾ ಸರ್ಕಾರವನ್ನು ಟೀಕಿಸುವುದಲ್ಲ, ಬದಲಾಗಿ ಸಾರ್ವಜನಿಕ ನಿಧಿಯು ದುರುಪಯೋಗವಾಗದಂತೆ ಅಥವಾ ಪೋಲಾಗದಂತೆ ನೋಡಿಕೊಳ್ಳುವುದು, ಅಕ್ರಮಗಳು ಮತ್ತು ಸೋರಿಕೆಗಳನ್ನು ತಡೆಯುವುದು ಮತ್ತು ಕಾರ್ಯಾಂಗವು ಜನರಿಗೆ ಹೊಣೆಗಾರನಾಗಿ ಉಳಿಯುವುದನ್ನು ಖಚಿತಪಡಿಸುವುದಾಗಿದೆ. ನಾಗರಿಕರ ವಿಶ್ವಾಸವೇ ಪ್ರಜಾಸತ್ತಾತ್ಮಕ ಆಡಳಿತದ ಅಡಿಪಾಯ ಎಂದು ಅವರು ಒತ್ತಿ ಹೇಳಿದರು. ಸಾರ್ವಜನಿಕ ಹಣದ ಪ್ರತಿಯೊಂದು ರೂಪಾಯಿಯೂ ಜನರ ಆಕಾಂಕ್ಷೆಗಳು ಮತ್ತು ಕೊಡುಗೆಯನ್ನು ಪ್ರತಿನಿಧಿಸುತ್ತದೆ, ಆದ್ದರಿಂದ ಇದನ್ನು ಆರ್ಥಿಕ ಪ್ರಾಮಾಣಿಕತೆಯ ಅತ್ಯುನ್ನತ ಮಾನದಂಡಗಳೊಂದಿಗೆ ವೆಚ್ಚ ಮಾಡಬೇಕು.
ಸಾರ್ವಜನಿಕ ವೆಚ್ಚದ ಮೌಲ್ಯಮಾಪನವು ಕೇವಲ ಅಂಕಿ-ಅಂಶಗಳು, ಹಂಚಿಕೆಗಳು ಮತ್ತು ಬಳಕೆ ಪ್ರಮಾಣಪತ್ರಗಳಿಗೆ (utilisation certificates) ಸೀಮಿತವಾಗಿರಬಾರದು ಎಂದು ಲೋಕಸಭೆ ಸ್ಪೀಕರ್ ಒತ್ತಿ ಹೇಳಿದರು. ಮೂಲಸೌಕರ್ಯ ಯೋಜನೆಗಳ ವಿಷಯದಲ್ಲಿ, ಸಮಿತಿಗಳು ಸೂಕ್ತವಿರುವ ಕಡೆಗಳಲ್ಲಿ ಯೋಜನಾ ಸ್ಥಳಗಳಿಗೆ ಭೇಟಿ ನೀಡಿ ಕಾಮಗಾರಿಯ ಗುಣಮಟ್ಟ, ಅದರ ಸಮಯೋಚಿತ ಪೂರ್ಣಗೊಳಿಸುವಿಕೆ ಮತ್ತು ನಿಗದಿತ ಮಾನದಂಡಗಳ ಪಾಲನೆಯನ್ನು ಪರಿಶೀಲಿಸಬೇಕು. ಇಂತಹ ನೇರ ಮೌಲ್ಯಮಾಪನವು ವೆಚ್ಚ ಮಾಡಿದ ಹಣವು ಉದ್ದೇಶಿತ ಮೂಲಸೌಕರ್ಯಕ್ಕೆ ಕಾರಣವಾಗಿದೆಯೇ ಮತ್ತು ಸಾರ್ವಜನಿಕ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಲಾಗಿದೆಯೇ ಎಂಬುದನ್ನು ಸ್ಥಾಪಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. ಅದೇ ರೀತಿ, ಸಾಮಾಜಿಕ ಕಲ್ಯಾಣ ಯೋಜನೆಗಳ ವಿಷಯದಲ್ಲಿ, ವೆಚ್ಚ ಮಾಡಿದ ಮೊತ್ತವನ್ನು ಮೀರಿ ವೆಚ್ಚದ ನಿಜವಾದ ಪರಿಣಾಮವನ್ನು ಪರಿಶೀಲಿಸುವುದು ಅತ್ಯಗತ್ಯ. ಸಾರ್ವಜನಿಕ ವೆಚ್ಚದ ಅಂತಿಮ ಉದ್ದೇಶವು ಸಾಮಾಜಿಕ ಒಳಿತು ಮತ್ತು ಸಾರ್ವಜನಿಕ ಕಲ್ಯಾಣವೇ ಆಗಿರಬೇಕು ಎಂದು ಅವರು ಹೇಳಿದರು.
ಭಾರತದ ನಿಕಷಪಾಲಕ ಮತ್ತು ಮಹಾಲೇಖಪಾಲರ ಪ್ರಮುಖ ಪಾತ್ರವನ್ನು ಉಲ್ಲೇಖಿಸಿದ ಶ್ರೀ ಬಿರ್ಲಾ ಅವರು, ಕೆಗ್ (CAG) ಆಡಿಟ್ ಆವಿಷ್ಕಾರಗಳ ಪರಿಶೀಲನೆ, ಕೈಗೊಂಡ ಕ್ರಮಗಳ ವರದಿಗಳ ಸೂಕ್ಷ್ಮ ಪರಿಶೀಲನೆ ಮತ್ತು ಶಿಫಾರಸುಗಳ ಅನುಸರಣೆಯು ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಕಾರ್ಯನಿರ್ವಹಣೆಯ ಅವಿಭಾಜ್ಯ ಅಂಗವಾಗಿದೆ ಎಂದು ಹೇಳಿದರು. ಆದಾಗ್ಯೂ, ಈ ಪ್ರಯತ್ನಗಳ ಪ್ರಮುಖ ಉದ್ದೇಶವು ಸಾರ್ವಜನಿಕ ಹಣವನ್ನು ಪಾರದರ್ಶಕವಾಗಿ, ಪರಿಣಾಮಕಾರಿಯಾಗಿ ಮತ್ತು ಅದರ ಮಂಜೂರಾದ ಉದ್ದೇಶಕ್ಕೆ ಅನುಗುಣವಾಗಿ ಬಳಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದಾಗಿದೆ. ವ್ಯವಸ್ಥಿತ ಸುಧಾರಣೆಗಳು ಅಗತ್ಯವಿರುವಲ್ಲಿ, ಸಮಿತಿಗಳು ಸೂಕ್ತ ಮಾರ್ಗದರ್ಶನ ನೀಡಬೇಕು ಮತ್ತು ಸರಿಪಡಿಸುವ ಕ್ರಮಗಳನ್ನು ಶಿಫಾರಸು ಮಾಡಬೇಕು. ಅನುಭವಗಳು, ಆಲೋಚನೆಗಳು, ಆವಿಷ್ಕಾರಗಳು ಮತ್ತು ಅತ್ಯುತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು ಈ ಸಮ್ಮೇಳನವನ್ನು ಪರಿಣಾಮಕಾರಿ ವೇದಿಕೆಯಾಗಿ ಬಳಸಿಕೊಳ್ಳುವಂತೆ ಅವರು ಸಂಸತ್ತು ಮತ್ತು ರಾಜ್ಯ ಶಾಸನಸಭೆಗಳ ಸಾರ್ವಜನಿಕ ಲೆಕ್ಕಪತ್ರ ಸಮಿತಿಗಳಿಗೆ ಕರೆ ನೀಡಿದರು. ಹೆಚ್ಚಿನ ಪಾರದರ್ಶಕತೆ, ಬಲವಾದ ಆರ್ಥಿಕ ಮೇಲ್ವಿಚಾರಣೆ ಮತ್ತು ಹೆಚ್ಚು ಪರಿಣಾಮಕಾರಿ ಮೌಲ್ಯಮಾಪನವನ್ನು ಪ್ರದರ್ಶಿಸಿದ ರಾಜ್ಯಗಳು ಅಳವಡಿಸಿಕೊಂಡ ಪದ್ಧತಿಗಳನ್ನು ಹಂಚಿಕೊಳ್ಳಬೇಕು, ಇದರಿಂದ ಇತರರು ಅವುಗಳಿಂದ ಕಲಿಯಬಹುದು ಎಂದು ಅವರು ಹೇಳಿದರು. ಹೊಣೆಗಾರಿಕೆಯ ವ್ಯವಸ್ಥೆಗಳನ್ನು ಬಲಪಡಿಸುವಲ್ಲಿ ರಾಜ್ಯಗಳ ನಡುವಿನ ಆರೋಗ್ಯಕರ ಸ್ಪರ್ಧೆಯು ದೇಶಾದ್ಯಂತ ಉತ್ತಮ ಆಡಳಿತಕ್ಕೆ ಕೊಡುಗೆ ನೀಡುತ್ತದೆ ಎಂದು ಅವರು ಒತ್ತಿ ಹೇಳಿದರು.
ಭವಿಷ್ಯವನ್ನು ಗುರಿಯಾಗಿಟ್ಟುಕೊಂಡು ಒಂದು ವಿಧಾನವನ್ನು ರೂಪಿಸುವ ಅಗತ್ಯವನ್ನು ಒತ್ತಿ ಹೇಳಿದ ಸ್ಪೀಕರ್, ಬದಲಾಗುತ್ತಿರುವ ಸನ್ನಿವೇಶಗಳು ಸಮಿತಿಗಳು ತಮ್ಮ ಪರಿಶೀಲನೆ ಮತ್ತು ಮೇಲ್ವಿಚಾರಣೆಯ ವಿಧಾನಗಳನ್ನು ನಿರಂತರವಾಗಿ ಬಲಪಡಿಸುವುದನ್ನು ಅಗತ್ಯಗೊಳಿಸುತ್ತವೆ ಎಂದು ಸ್ಪೀಕರ್ ಹೇಳಿದರು. ಬೃಹತ್ ಪ್ರಮಾಣದ ವೆಚ್ಚದ ದತ್ತಾಂಶವನ್ನು ವಿಶ್ಲೇಷಿಸುವಲ್ಲಿ, ಉದಯೋನ್ಮುಖ ಪ್ರವೃತ್ತಿಗಳನ್ನು ಗುರುತಿಸುವಲ್ಲಿ, ಸಂಭಾವ್ಯ ಆರ್ಥಿಕ ಅಕ್ರಮಗಳನ್ನು ಪತ್ತೆಹಚ್ಚುವಲ್ಲಿ ಮತ್ತು ಆಡಿಟ್ ಪರಿಶೀಲನೆಗಳ ಮೇಲ್ವಿಚಾರಣೆಯನ್ನು ಸುಧಾರಿಸುವಲ್ಲಿ ತಂತ್ರಜ್ಞಾನ, ದತ್ತಾಂಶ ವಿಶ್ಲೇಷಣೆ ಮತ್ತು ಕೃತಕ ಬುದ್ಧಿಮತ್ತೆ ಪ್ರಮುಖ ಪಾತ್ರ ವಹಿಸುತ್ತವೆ. ಜೊತೆಗೆ, ಆಡಳಿತದಲ್ಲಿ ನಾಗರಿಕರ ಭಾಗವಹಿಸುವಿಕೆಯ ಮಹತ್ವವದ ಬಗ್ಗೆಯೂ ಅವರು ಒತ್ತಿ ಹೇಳಿದರು ಮತ್ತು ಸಾರ್ವಜನಿಕ ಸಂಪನ್ಮೂಲಗಳ ಬಳಕೆಯಲ್ಲಿ ಹೆಚ್ಚಿನ ಪಾರದರ್ಶಕತೆಯು ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಬಲಪಡಿಸುತ್ತದೆ ಎಂದು ಅವರು ತಿಳಿಸಿದರು. ಸಾರ್ವಜನಿಕ ವೆಚ್ಚವನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವ, ಲೆಕ್ಕಪತ್ರಗಳನ್ನು ಕೂಲಂಕಷವಾಗಿ ಪರಿಶೀಲಿಸುವ ಮತ್ತು ಸಮಯೋಚಿತವಾಗಿ ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳುವ ವ್ಯವಸ್ಥೆಯು ಸರ್ಕಾರದ ಸಂಪನ್ಮೂಲಗಳು ಜನರಿಗೆ ಪರಿಣಾಮಕಾರಿಯಾಗಿ ಸೇವೆ ಸಲ್ಲಿಸುವುದನ್ನು ಖಚಿತಪಡಿಸಿಕೊಳ್ಳಲು ಅತ್ಯಗತ್ಯ. ಕಾಲಾನಂತರದಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ವ್ಯಾಪ್ತಿ ಮತ್ತು ಜವಾಬ್ದಾರಿಗಳು ವಿಕಸನಗೊಂಡಿವೆ ಎಂದು ಅವರು ಅಭಿಪ್ರಾಯಪಟ್ಟರು. ಆಡಿಟ್ ವರದಿಗಳು ಮತ್ತು ಸಾರ್ವಜನಿಕ ಲೆಕ್ಕಪತ್ರಗಳನ್ನು ಪರಿಶೀಲಿಸುವುದನ್ನು ಹೊರತುಪಡಿಸಿ, ಸಾರ್ವಜನಿಕ ವೆಚ್ಚ, ಸರ್ಕಾರಿ ಇಲಾಖೆಗಳ ಕಾರ್ಯನಿರ್ವಹಣೆ, ಆಡಳಿತಾತ್ಮಕ ಸುಧಾರಣೆಗಳು ಮತ್ತು ಕಾರ್ಯಕ್ರಮ ಮೌಲ್ಯಮಾಪನದ ಕುರಿತಾದ ತನ್ನ ಶಿಫಾರಸುಗಳ ಮೂಲಕ ಸಮಿತಿಯು ಗಮನಾರ್ಹ ಕೊಡುಗೆಗಳನ್ನು ನೀಡಿದೆ.
ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಇತ್ತೀಚಿನ ಶತಮಾನೋತ್ಸವ ಆಚರಣೆಗಳನ್ನು ಸ್ಮರಿಸಿದ ಅವರು, ಸಮಿತಿಯ ಮೂಲಭೂತ ತತ್ವಗಳು, ಅದರ ಭವಿಷ್ಯದ ಆದ್ಯತೆಗಳಿಗೆ ಮಾರ್ಗದರ್ಶನ ನೀಡುವುದನ್ನು ಮುಂದುವರಿಸಬೇಕು ಮತ್ತು ಆ ಸಂದರ್ಭದಲ್ಲಿ ಮಾಡಿದ ಬದ್ಧತೆಗಳನ್ನು ಅದರ ಕಾರ್ಯನಿರ್ವಹಣೆಯಲ್ಲಿ ಸ್ಪಷ್ಟ ಸುಧಾರಣೆಗಳಾಗಿ ಪರಿವರ್ತಿಸಬೇಕು ಎಂದು ಹೇಳಿದರು. ಕೇಂದ್ರ-ರಾಜ್ಯ ಸಹಭಾಗಿತ್ವ ಮತ್ತು ಸಾರ್ವಜನಿಕ-ಖಾಸಗಿ ಸಹಭಾಗಿತ್ವದ (PPP) ಮೂಲಕ ಅನುಷ್ಠಾನಗೊಳ್ಳುವ ಯೋಜನೆಗಳಿಗೆ ಸಮಿತಿಗಳ ಆಯಾ ವ್ಯಾಪ್ತಿಯೊಳಗೆ ಪರಿಣಾಮಕಾರಿ ಆರ್ಥಿಕ ಪರಿಶೀಲನೆಯ ಅಗತ್ಯವಿದೆ ಎಂದು ಸ್ಪೀಕರ್ ಪ್ರತಿಪಾದಿಸಿದರು.
ಆರ್ಥಿಕ ಶಿಸ್ತು, ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಬಲಪಡಿಸಲು ರಚನಾತ್ಮಕ ಶಿಫಾರಸುಗಳು ಮತ್ತು ಸ್ಪಷ್ಟ ಫಲಿತಾಂಶಗಳಿಗೆ ಚರ್ಚೆಗಳು ಕಾರಣವಾಗುತ್ತವೆ ಎಂಬ ವಿಶ್ವಾಸವನ್ನು ಶ್ರೀ ಬಿರ್ಲಾ ವ್ಯಕ್ತಪಡಿಸಿದರು. ಸಾರ್ವಜನಿಕ ಹಣದ ಪ್ರತಿಯೊಂದು ರೂಪಾಯಿಯೂ ಜವಾಬ್ದಾರಿಯುತವಾಗಿ ಮತ್ತು ಅದರ ಉದ್ದೇಶಿತ ಕಾರ್ಯಕ್ಕಾಗಿ ಬಳಕೆಯಾಗುವುದನ್ನು ಖಚಿತಪಡಿಸಿಕೊಳ್ಳುವ ಹಂಚಿಕೆಯ ಉದ್ದೇಶದೊಂದಿಗೆ, ಮೇಲ್ವಿಚಾರಣೆ, ಆಡಿಟ್ ಅನುಸರಣೆ ಮತ್ತು ಸಾರ್ವಜನಿಕ ವೆಚ್ಚದ ಗುಣಮಟ್ಟದಲ್ಲಿನ ಸುಧಾರಣೆಗಳಿಗೆ ಸಮ್ಮೇಳನದಿಂದ ಹೊರಹೊಮ್ಮುವ ನಿರ್ಣಯಗಳು ಮಾರ್ಗದರ್ಶನ ನೀಡಬೇಕು ಎಂದು ಅವರು ಹೇಳಿದರು.
ಉದ್ಘಾಟನಾ ಸಮಾರಂಭದಲ್ಲಿ ಕೇರಳದ ಮುಖ್ಯಮಂತ್ರಿ ಶ್ರೀ ವಿ. ಡಿ. ಸತೀಶನ್; ರಾಜ್ಯಸಭೆಯ ಉಪಸಭಾಪತಿ ಶ್ರೀ ಹರಿವಂಶ್; ಲೋಕಸಭೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷ ಶ್ರೀ ಕೆ. ಸಿ. ವೇಣುಗೋಪಾಲ್; ಕೇರಳ ಶಾಸನಸಭೆಯ ಸ್ಪೀಕರ್ ಶ್ರೀ ತಿರುವಂಚೂರ್ ರಾಧಾಕೃಷ್ಣನ್, ಮತ್ತು ಕೇರಳ ಶಾಸನಸಭೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷ ಶ್ರೀ ಕೆ. ಎನ್. ಬಾಲಗೋಪಾಲ್ ಅವರು ಉಪಸ್ಥಿತರಿದ್ದು ಭಾಷಣ ಮಾಡಿದರು. ಈ ಗೋಷ್ಠಿಯಲ್ಲಿ ರಾಜ್ಯ ಶಾಸನಸಭೆಗಳ ಸಾರ್ವಜನಿಕ ಲೆಕ್ಕಪತ್ರ ಸಮಿತಿಗಳ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಇತರ ಗಣ್ಯರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಸಮ್ಮೇಳನದ ಸ್ಮರಣ ಸಂಚಿಕೆ 2026 (Public Accounts Committee Conference Souvenir 2026) ಅನ್ನು ಸಹ ಬಿಡುಗಡೆ ಮಾಡಲಾಯಿತು.
ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು ಆರ್ಥಿಕ ಪರಿಶೀಲನೆಯು ಫಲಿತಾಂಶ-ಚಾಲಿತವಾಗಿರಬೇಕು: ಭಾರತೀಯ ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷರು; ಸಮಯೋಚಿತ ಆಡಿಟ್ಗಳು ಮತ್ತು ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳ ಸಮತೋಲಿತ ವ್ಯಾಪ್ತಿಗೆ ಕರೆ
ಸ್ವಾಗತ ಭಾಷಣ ಮಾಡಿದ ಭಾರತೀಯ ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷರಾದ ಶ್ರೀ ಕೆ.ಸಿ. ವೇಣುಗೋಪಾಲ್ ಅವರು, ಸಾರ್ವಜನಿಕ ವೆಚ್ಚವು ನಾಗರಿಕರಿಗೆ ಸ್ಪಷ್ಟ ಫಲಿತಾಂಶಗಳು, ಸುಧಾರಿತ ಸೇವಾ ವಿತರಣೆ ಮತ್ತು ಅರ್ಥಪೂರ್ಣ ಸೌಲಭ್ಯಗಳಾಗಿ ಪರಿವರ್ತನೆಯಾಗುವುದನ್ನು ಖಚಿತಪಡಿಸಿಕೊಳ್ಳಲು ಶಾಸಕಾಂಗದ ಆರ್ಥಿಕ ಪರಿಶೀಲನೆಯನ್ನು ಬಲಪಡಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಹೊಣೆಗಾರಿಕೆಯು ಕೇವಲ ವೆಚ್ಚದ ಪರಿಶೀಲನೆಯನ್ನು ಮೀರಿದ್ದಾಗಿರಬೇಕು ಎಂದು ಹೇಳಿದ ಅವರು, ಸಾರ್ವಜನಿಕ ವೆಚ್ಚದ ಪ್ರತಿಯೊಂದು ರೂಪಾಯಿಯೂ ವಿವೇಚನಾಯುಕ್ತವಾಗಿ ವೆಚ್ಚವಾಗುವುದನ್ನು ಮತ್ತು ಅದರ ಉದ್ದೇಶಿತ ಕಾರ್ಯವನ್ನು ಪೂರೈಸುವುದನ್ನು ಖಚಿತಪಡಿಸಿಕೊಳ್ಳಲು ಸಂಸದೀಯ ಮೇಲ್ವಿಚಾರಣೆಗೆ ಹೆಚ್ಚು ಫಲಿತಾಂಶ-ಚಾಲಿತ ವಿಧಾನಕ್ಕೆ ಕರೆ ನೀಡಿದರು. ಪ್ರತಿಯೊಂದು ಸಂಸತ್ ಅಧಿವೇಶನದಲ್ಲೂ ಕನಿಷ್ಠ ಒಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ವರದಿ ಮತ್ತು ಅದರ ಕುರಿತು ಸರ್ಕಾರದ ಕ್ರಮಗಳ ವರದಿಯನ್ನು ಚರ್ಚಿಸಬೇಕು ಎಂದು ಅವರು ಪ್ರಸ್ತಾಪಿಸಿದರು. ಸಾರ್ವಜನಿಕ ಸಂಪನ್ಮೂಲಗಳು ವ್ಯಾಪಕ ಸಾರ್ವಜನಿಕ ಹಿತಾಸಕ್ತಿಗೆ ಸೇವೆ ಸಲ್ಲಿಸುವುದನ್ನು ಖಚಿತಪಡಿಸಿಕೊಳ್ಳಲು ಸಮಯೋಚಿತ ಆಡಿಟ್ಗಳು, ವಿವಿಧ ವಲಯಗಳ ಸಮತೋಲಿತ ವ್ಯಾಪ್ತಿ ಹಾಗೂ ಪ್ರಮುಖ ಕಲ್ಯಾಣ ಕಾರ್ಯಕ್ರಮಗಳು ಮತ್ತು ಬೃಹತ್ ಮೂಲಸೌಕರ್ಯ ಯೋಜನೆಗಳ ಸೂಕ್ಷ್ಮ ಪರಿಶೀಲನೆಯ ಮಹತ್ವವನ್ನು ಅವರು ಪುನರುಚ್ಚರಿಸಿದರು.
*****