ಪ್ರಕಟಣಾ ದಿನಾಂಕ:
29 OCT 2026 6:46PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆ (30 ಅಕ್ಟೋಬರ್ 2026) ಗುಜರಾತ್ನ ಬನಸ್ಕಾಂತದಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯ 24ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಿದ್ದಾರೆ. ಈ ಕಂತಿನ ಮೂಲಕ ದೇಶಾದ್ಯಂತ 9.34 ಕೋಟಿಗೂ ಅಧಿಕ ರೈತರ ಬ್ಯಾಂಕ್ ಖಾತೆಗಳಿಗೆ ₹18,690 ಕೋಟಿಗೂ ಹೆಚ್ಚಿನ ಹಣವನ್ನು ನೇರವಾಗಿ ವರ್ಗಾಯಿಸಲಾಗುವುದು. ಇದು ರೈತರ ಕಲ್ಯಾಣ ಮತ್ತು ಆರ್ಥಿಕ ಸಬಲೀಕರಣಕ್ಕೆ ಸರ್ಕಾರ ಹೊಂದಿರುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಪ್ರಧಾನಮಂತ್ರಿಯವರು ಕೃಷಿ ಸಂಗ್ರಹಣೆ, ಸಂಸ್ಕರಣೆ ಮತ್ತು ಸಂಬಂಧಿತ ಮೂಲಸೌಕರ್ಯಗಳನ್ನು ಬಲಪಡಿಸಲು ಕೃಷಿ ಮೂಲಸೌಕರ್ಯ ನಿಧಿಯಡಿ ಸ್ಥಾಪಿಸಲಾದ 521 ಘಟಕಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಅಲ್ಲದೆ, ಅಧಿಕ ಮೌಲ್ಯದ ತೋಟಗಾರಿಕಾ ಬೆಳೆಗಳನ್ನು ಉತ್ತೇಜಿಸಲು ಮತ್ತು ರೈತರ ಆದಾಯ ಹೆಚ್ಚಿಸುವ ಸಾಮರ್ಥ್ಯವನ್ನು ವೃದ್ಧಿಸಲು 12 ತೋಟಗಾರಿಕಾ ಕ್ಲಸ್ಟರ್ಗಳನ್ನು ಉದ್ಘಾಟಿಸಲಿದ್ದಾರೆ.
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಪಿಎಂ-ಕಿಸಾನ್ ಯೋಜನೆಯ 24ನೇ ಕಂತಿನ ಹಣ ಬಿಡುಗಡೆ ಅಂಗವಾಗಿ ಮಧ್ಯಪ್ರದೇಶದ ರೈಸನ್ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಈ ಪ್ರದೇಶದ ಹೆಚ್ಚಿನ ಸಂಖ್ಯೆಯ ರೈತರು ಭಾಗವಹಿಸುವ ನಿರೀಕ್ಷೆಯಿದೆ. ಪಿಎಂ-ಕಿಸಾನ್ ಯೋಜನೆ ಮತ್ತು ಇಲಾಖೆಯ ಇತರ ಪ್ರಮುಖ ಉಪಕ್ರಮಗಳ ಮಹತ್ವವನ್ನು ಎತ್ತಿ ತೋರಿಸಲು ಇದು ಮಹತ್ವದ ವೇದಿಕೆಯಾಗಲಿದೆ. ಇದೇ ಸಂದರ್ಭದಲ್ಲಿ ರೈತರ ಕಲ್ಯಾಣ, ಸಮೃದ್ಧಿ ಮತ್ತು ಸಬಲೀಕರಣಕ್ಕೆ ಸರ್ಕಾರ ಹೊಂದಿರುವ ನಿರಂತರ ಬದ್ಧತೆಯನ್ನು ಪುನರುಚ್ಚರಿಸುತ್ತದೆ.
ಪಿಎಂ-ಕಿಸಾನ್ ಯೋಜನೆಯ ಮೊದಲ 23 ಕಂತುಗಳ ಮೂಲಕ ಈಗಾಗಲೇ ಅರ್ಹ ರೈತರಿಗೆ ₹4.47 ಲಕ್ಷ ಕೋಟಿಗೂ ಅಧಿಕ ಹಣವನ್ನು ವಿತರಿಸಲಾಗಿದೆ. ಈ ಯೋಜನೆಯಡಿ ನೇರ ನಗದು ವರ್ಗಾವಣೆ ಮೂಲಕ ಅರ್ಹ ರೈತ ಕುಟುಂಬಗಳಿಗೆ ಆದಾಯದ ಬೆಂಬಲ ಒದಗಿಸಲಾಗುತ್ತದೆ. ಇದರಿಂದ ಅವರು ಕೃಷಿ ಮತ್ತು ಕುಟುಂಬದ ವೆಚ್ಚಗಳನ್ನು ಭರಿಸಲು ಸಾಧ್ಯವಾಗುವುದರ ಜೊತೆಗೆ ಅವರ ಜೀವನೋಪಾಯದ ಭದ್ರತೆಗೂ ಬೆಂಬಲ ದೊರೆಯುತ್ತದೆ.
ಭಾರತದ ಆರ್ಥಿಕತೆಯ ಬೆನ್ನೆಲುಬಾಗಿರುವ ಕೃಷಿಯು ಕೋಟ್ಯಂತರ ರೈತರ ಜೀವನೋಪಾಯಕ್ಕೆ ಆಧಾರವಾಗಿದ್ದು, ದೇಶದ ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆಯನ್ನು ಖಚಿತಪಡಿಸುತ್ತದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ, ಕಳೆದ 12 ವರ್ಷಗಳಲ್ಲಿ ರೈತರ ಆದಾಯವನ್ನು ಸುಧಾರಿಸಲು, ಆಧುನಿಕ ಕೃಷಿ ಪದ್ಧತಿಗಳನ್ನು ಉತ್ತೇಜಿಸಲು ಹಾಗೂ ಕೃಷಿ ವಲಯದಲ್ಲಿ ಸ್ವಾವಲಂಬನೆಯ ಗುರಿ ಮತ್ತು ದೃಷ್ಟಿಕೋನವನ್ನು ಸಾಕಾರಗೊಳಿಸಲು ಸರ್ಕಾರ ಹಲವಾರು ಮಹತ್ವದ ಉಪಕ್ರಮಗಳನ್ನು ಕೈಗೊಂಡಿದೆ.
ಪ್ರಮುಖ ಉಪಕ್ರಮಗಳಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್), ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ, ಕಿಸಾನ್ ಕ್ರೆಡಿಟ್ ಕಾರ್ಡ್, ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಮತ್ತು ಪ್ರತಿ ಹನಿ ನೀರಿಗೆ ಹೆಚ್ಚು ಬೆಳೆ ಯೋಜನೆಗಳು ಸೇರಿವೆ. ರೈತರಿಗೆ ಆರ್ಥಿಕ ನೆರವು ಒದಗಿಸುವುದು, ಅಪಾಯಗಳಿಂದ ರಕ್ಷಣೆ ನೀಡುವ ವ್ಯವಸ್ಥೆಯನ್ನು ಬಲಪಡಿಸುವುದು, ಕೃಷಿ ಸಾಲ ಸೌಲಭ್ಯಗಳ ಲಭ್ಯತೆಯನ್ನು ಸುಧಾರಿಸುವುದು ಮತ್ತು ತಂತ್ರಜ್ಞಾನ ಆಧಾರಿತ ಕೃಷಿ ಆಡಳಿತವನ್ನು ಉತ್ತೇಜಿಸುವ ಮೂಲಕ ರೈತರ ಸಮಗ್ರ ಸಬಲೀಕರಣಕ್ಕೆ ನೆರವಾಗುವುದು ಈ ಕ್ರಮಗಳ ಉದ್ದೇಶವಾಗಿದೆ.
ಖಾದ್ಯ ತೈಲಗಳ ರಾಷ್ಟ್ರೀಯ ಮಿಷನ್ ಮತ್ತು ಬೇಳೆಕಾಳುಗಳಲ್ಲಿ ಸ್ವಾವಲಂಬನೆ ಸಾಧಿಸುವ ಮಿಷನ್ನಂತಹ ಉಪಕ್ರಮಗಳ ಮೂಲಕ ಕೃಷಿ ವಲಯದಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖವಾಗಿದೆ. ಇದರ ಜೊತೆಗೆ, ದೇಶಾದ್ಯಂತ ಕ್ಲಸ್ಟರ್ಗಳನ್ನು ಅಭಿವೃದ್ಧಿಪಡಿಸುವ ಮೂಲಕ ರೈತರು ಸುಸ್ಥಿರ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವಂತೆ ನೈಸರ್ಗಿಕ ಕೃಷಿ ಕುರಿತ ರಾಷ್ಟ್ರೀಯ ಮಿಷನ್ ಪ್ರೋತ್ಸಾಹಿಸುತ್ತಿದೆ.
ಕೊಯ್ಲಿನ ನಂತರದ ನಿರ್ವಹಣೆ ಮತ್ತು ಕೃಷಿ ಮೂಲಸೌಕರ್ಯಗಳು ರೈತರಿಗೆ ದೊರೆಯುವ ಆದಾಯವನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂಬುದನ್ನು ಗುರುತಿಸಿರುವ ಸರ್ಕಾರ, ಗೋದಾಮುಗಳು, ಶೀತಲ ಸಂಗ್ರಹಣಾ ಸೌಲಭ್ಯಗಳು, ಪ್ರಾಥಮಿಕ ಸಂಸ್ಕರಣಾ ಕೇಂದ್ರಗಳು ಮತ್ತು ಇತರ ಅಗತ್ಯ ಕೃಷಿ ಮೂಲಸೌಕರ್ಯಗಳಲ್ಲಿ ಹೂಡಿಕೆಯನ್ನು ಉತ್ತೇಜಿಸಲು ಕೃಷಿ ಮೂಲಸೌಕರ್ಯ ನಿಧಿ (ಎಐಎಫ್) ಮೂಲಕ ಕ್ರಮ ಕೈಗೊಂಡಿದೆ. ಎಐಎಫ್ ಅಡಿಯಲ್ಲಿ 2.28 ಲಕ್ಷಕ್ಕೂ ಅಧಿಕ ಯೋಜನೆಗಳ ಮೂಲಕ ಸುಮಾರು ₹₹1.75 ಲಕ್ಷ ಕೋಟಿ ಹೂಡಿಕೆ ಮಾಡಲಾಗಿದೆ. ಇದರಿಂದ ದೇಶಾದ್ಯಂತ ಪ್ರಮುಖ ಕೃಷಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಬೆಂಬಲ ದೊರೆತಿದೆ. ಈ ಹೂಡಿಕೆಗಳು ಸಂಗ್ರಹಣೆ ಮತ್ತು ಸಂಸ್ಕರಣಾ ಸಾಮರ್ಥ್ಯಗಳನ್ನು ಬಲಪಡಿಸುವುದು, ಕೊಯ್ಲಿನ ನಂತರದ ನಷ್ಟವನ್ನು ಕಡಿಮೆ ಮಾಡುವುದು, ಮಾರುಕಟ್ಟೆ ಪ್ರವೇಶವನ್ನು ಸುಧಾರಿಸುವುದು ಮತ್ತು ರೈತರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ಪಡೆಯಲು ಅನುಕೂಲ ಕಲ್ಪಿಸುವ ನಿರೀಕ್ಷೆಯಿದೆ.
ಆದಾಯ ಗಳಿಕೆಯ ಅವಕಾಶಗಳನ್ನು ಹೆಚ್ಚಿಸಲು ಮತ್ತು ಕೃಷಿಯನ್ನು ಹೆಚ್ಚು ಲಾಭದಾಯಕವಾಗಿಸಲು, ವಿಶೇಷವಾಗಿ ತೋಟಗಾರಿಕೆ ಸೇರಿದಂತೆ ಅಧಿಕ ಮೌಲ್ಯದ ಕೃಷಿ ಚಟುವಟಿಕೆಗಳತ್ತ ವೈವಿಧ್ಯೀಕರಣ ಸಾಧಿಸುವುದಕ್ಕೂ ಸರ್ಕಾರ ಉತ್ತೇಜನ ನೀಡುತ್ತಿದೆ. ತೋಟಗಾರಿಕಾ ಕ್ಲಸ್ಟರ್ಗಳ ಅಭಿವೃದ್ಧಿಯು ತೋಟಗಾರಿಕಾ ಮೌಲ್ಯ ಸರಪಳಿಯನ್ನು ಬಲಪಡಿಸುವ ಮತ್ತು ಅಧಿಕ ಮೌಲ್ಯದ ಬೆಳೆಗಳ ಉತ್ಪಾದನೆ ಹಾಗೂ ಮಾರುಕಟ್ಟೆ ವ್ಯವಸ್ಥೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.
ರೈತರಿಗೆ ಆರ್ಥಿಕ ನೆರವು ಒದಗಿಸುವುದು, ಕೃಷಿ ಮೂಲಸೌಕರ್ಯಗಳನ್ನು ಆಧುನೀಕರಿಸುವುದು, ಬೆಳೆ ವೈವಿಧ್ಯೀಕರಣವನ್ನು ಉತ್ತೇಜಿಸುವುದು ಮತ್ತು ವಿಕಸಿತ ಭಾರತದ ದೃಷ್ಟಿಕೋನಕ್ಕೆ ಅನುಗುಣವಾಗಿ ಸಮೃದ್ಧ, ಸ್ಥಿತಿಸ್ಥಾಪಕ ಹಾಗೂ ಸ್ವಾವಲಂಬಿ ಕೃಷಿ ವಲಯವನ್ನು ನಿರ್ಮಿಸುವ ಸರ್ಕಾರದ ಪ್ರಯತ್ನಗಳಿಗೆ ಈ ಉಪಕ್ರಮಗಳು ಮತ್ತಷ್ಟು ಬಲ ನೀಡುತ್ತವೆ.
*****