ಪ್ರಕಟಣಾ ದಿನಾಂಕ:
29 OCT 2026 2:56PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಅಕ್ಟೋಬರ್ 30 ಮತ್ತು 31ರಂದು ಗುಜರಾತ್ಗೆ ಭೇಟಿ ನೀಡಲಿದ್ದಾರೆ.
ಅಕ್ಟೋಬರ್ 30ರಂದು ಬೆಳಿಗ್ಗೆ ಸುಮಾರು 9:30ಕ್ಕೆ, ಪ್ರಧಾನ ಮಂತ್ರಿ ಅವರು ಬನಸ್ಕಾಂತದಲ್ಲಿರುವ 'ಎಂಬ್ರಿಯೋ ಟ್ರಾನ್ಸ್ಫರ್ ಟೆಕ್ನಾಲಜಿ-ಇನ್ ವಿಟ್ರೊ ಫರ್ಟಿಲೈಸೇಶನ್' (ಇಟಿ-ಐವಿಎಫ್ ET-IVF) ಪ್ರಯೋಗಾಲಯ ಮತ್ತು 'ಭಾರತ ಬೋವೈನ್ ಬ್ರೀಡಿಂಗ್ ಅಂಡ್ ರಿಸರ್ಚ್ ಸೆಂಟರ್' (ಬಿ ಬಿಬಿ ಆರ್ ಸಿ) ಜಾನುವಾರು ಫಾರ್ಮ್ಗೆ ಭೇಟಿ ನೀಡಲಿದ್ದಾರೆ. ಬೆಳಿಗ್ಗೆ ಸುಮಾರು 10:30ಕ್ಕೆ, ಅವರು ಬನಸ್ಕಾಂತದಲ್ಲಿ 14,000 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಗಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದೇ ವೇಳೆ ಅವರು 'ಪಿಎಂ-ಕಿಸಾನ್' ಯೋಜನೆಯಡಿ 19,000 ಕೋಟಿ ರೂಪಾಯಿ ಮೊತ್ತದ 24ನೇ ಕಂತನ್ನು ಬಿಡುಗಡೆ ಮಾಡಲಿದ್ದಾರೆ ಮತ್ತು ಎರಡು ರೈಲು ಸೇವೆಗಳಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ ಮತ್ತು ಸಮಾರಂಭದಲ್ಲಿ ಭಾಗವಹಿಸುವ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಆನಂತರ ಪ್ರಧಾನಮಂತ್ರಿ ಅವರು ಕೆವಾಡಿಯಾದ ಏಕ್ತಾ ನಗರಕ್ಕೆ ಪ್ರಯಾಣಿಸಲಿದ್ದಾರೆ. ಸಂಜೆ ಸುಮಾರು 5 ಗಂಟೆಗೆ ಅವರು 'ಭಾರತ ಪರ್ವ 2026' ಅನ್ನು ಉದ್ಘಾಟಿಸಲಿದ್ದಾರೆ. ರಾತ್ರಿ ಸುಮಾರು 7:45ಕ್ಕೆ ಅವರು 'ಏಕ್ತಾ ಪ್ರಕಾಶ ಪರ್ವ' ಕಾರ್ಯಕ್ರಮ ವೀಕ್ಷಿಸಲಿದ್ದು, ತದನಂತರ ರಾತ್ರಿ 8:15ರ ಸುಮಾರಿಗೆ 'ನರ್ಮದಾ ಆರತಿ'ಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಅಕ್ಟೋಬರ್ 31ರಂದು ಬೆಳಿಗ್ಗೆ ಸುಮಾರು 9 ಗಂಟೆಗೆ ಪ್ರಧಾನಮಂತ್ರಿ ಅವರು ಏಕತಾ ಪ್ರತಿಮೆ (ಸ್ಟ್ಯಾಚ್ಯೂ ಆಫ್ ಯೂನಿಟಿ) ಗೆ ಪುಷ್ಪ ನಮನ ಸಲ್ಲಿಸಲಿದ್ದಾರೆ. ನಂತರ ಬೆಳಿಗ್ಗೆ ಸುಮಾರು 9:15ಕ್ಕೆ, ಅವರು ಏಕ್ತಾ ನಗರದಲ್ಲಿ 400 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ರಾಷ್ಟ್ರಕ್ಕೆ ಸಮರ್ಪಣೆ ಮಾಡಲಿದ್ದಾರೆ. ತದನಂತರ, ಅವರು ಏಕ್ತಾ ನಗರದಲ್ಲಿರುವ 'ರೈನ್ ಫಾರೆಸ್ಟ್' (ಮಳೆಕಾಡು) ಮತ್ತು 'ವಾಮನ ವೃಕ್ಷ ವಾಟಿಕಾ'ಗೆ ಭೇಟಿ ನೀಡಲಿದ್ದಾರೆ. ಸಂಜೆ ಸುಮಾರು 5:30ಕ್ಕೆ, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 151ನೇ ಜನ್ಮದಿನದ ಅಂಗವಾಗಿ ಆಯೋಜಿಸಲಾದ ರಾಷ್ಟ್ರೀಯ ಏಕತಾ ದಿನಾಚರಣೆಯಲ್ಲಿ ಪ್ರಧಾನಮಂತ್ರಿ ಭಾಗವಹಿಸಲಿದ್ದಾರೆ.
ಬನಸ್ಕಾಂತದಲ್ಲಿ ಪ್ರಧಾನಮಂತ್ರಿ
ಪ್ರಧಾನಮಂತ್ರಿ ಅವರು ಗುಜರಾತ್ನ ಬನಸ್ಕಾಂತ ಜಿಲ್ಲೆಯ ಭಿಲ್ಡಿಯಲ್ಲಿರುವ 'ಭಾರತ ಗೋವಂಶ ತಳಿ ಅಭಿವೃದ್ಧಿ ಮತ್ತು ಸಂಶೋಧನಾ ಕೇಂದ್ರ'ವನ್ನು (ಬಿ ಬಿ ಬಿ ಆರ್ ಸಿ) ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. 127 ಎಕರೆ ಪ್ರದೇಶದಲ್ಲಿ ಹರಡಿರುವ ಈ ಕೇಂದ್ರವನ್ನು ಅತ್ಯಾಧುನಿಕ 'ಉತ್ಕೃಷ್ಟತಾ ಕೇಂದ್ರ'ವನ್ನಾಗಿ ಸ್ಥಾಪಿಸಲಾಗಿದೆ. ಬಿ ಬಿ ಬಿ ಆರ್ ಸಿ ಯು ಗೋವಂಶ ತಳಿ ಅಭಿವೃದ್ಧಿ, ತಳಿ ಸುಧಾರಣೆ ಮತ್ತು ಸುಧಾರಿತ ಸಂತಾನೋತ್ಪತ್ತಿ ತಂತ್ರಜ್ಞಾನಗಳನ್ನು ಬಲವರ್ಧನೆಗೊಳಿಸಲಿದ್ದು, ತಳಿ ಸುಧಾರಣಾ ಪ್ರಕ್ರಿಯೆಯನ್ನು 10 ರಿಂದ 20 ಪಟ್ಟು ವೇಗಗೊಳಿಸಲಿದೆ. 'ಕಾಂಕ್ರೇಜ್' ತಳಿಯ ಜಾನುವಾರುಗಳಿಗೆ ಸೀಮಿತವಾದ ಇಂತಹ ಮೊದಲ ಕೇಂದ್ರ ಇದಾಗಿದೆ.
ಪ್ರಧಾನ ಮಂತ್ರಿ ಅವರು ಥರಾಡ್ ಮತ್ತು ರಾಧನ್ಪುರದಲ್ಲಿ 'ಬನಸ್ ಡೈರಿ'ಯ ಎರಡು ಬಯೋ-ಸಿಎನ್ಜಿ ಘಟಕಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅವುಗಳಲ್ಲಿ ಕ್ರಮವಾಗಿ ದಿನಕ್ಕೆ 75 ಮೆಟ್ರಿಕ್ ಟನ್ ಮತ್ತು 100 ಮೆಟ್ರಿಕ್ ಟನ್ ದನದ ಸಗಣಿಯನ್ನು ಸಂಸ್ಕರಿಸುವ ಸಾಮರ್ಥ್ಯವಿರುತ್ತದೆ.
ಅಲ್ಲದೆ, ಪ್ರಧಾನಮಂತ್ರಿ ಅವರು ಅಹಮದಾಬಾದ್ ಮೆಟ್ರೋ ಹಂತ-2A (ವಿಮಾನ ನಿಲ್ದಾಣ ವಿಸ್ತರಣೆ) ಮತ್ತು ಹಂತ-2B (ಗಿಫ್ಟ್ ಸಿಟಿ ವಿಸ್ತರಣೆ) ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. 2ಎ ಹಂತ ಸುಮಾರು 6 ಕಿ.ಮೀ.ಗಿಂತ ಅಧಿಕ ಉದ್ದವಿದ್ದು, ಕೋಟೇಶ್ವರ ರಸ್ತೆಯಿಂದ ವಿಮಾನ ನಿಲ್ದಾಣದವರೆಗೆ ಐದು ನಿಲ್ದಾಣಗಳನ್ನು ಒಳಗೊಂಡಿರುತ್ತದೆ. 2ಬಿ ಹಂತ ಸುಮಾರು 3.3 ಕಿ.ಮೀ.ಗಿಂತ ಅಧಿಕ ಉದ್ದವಿದ್ದು, ಗಿಫ್ಟ್ ಸಿಟಿಯಿಂದ ಶಾಹಪುರದವರೆಗೆ ಮೂರು ನಿಲ್ದಾಣಗಳನ್ನು ಒಳಗೊಂಡಿರುತ್ತದೆ.
ಅಹಮದಾಬಾದ್-ಮೆಹ್ಸಾನಾ ರಸ್ತೆಯನ್ನು (ರಾಜ್ಯ ಹೆದ್ದಾರಿ-41) ನಾಲ್ಕು ಪಥಗಳಿಂದ ಎಂಟು ಪಥಗಳಿಗೆ ಮೇಲ್ದರ್ಜೆಗೇರಿಸುವ ಮತ್ತು ಬಲಪಡಿಸುವ ಯೋಜನೆಗೆ ಪ್ರಧಾನಮಂತ್ರಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸುಮಾರು 2,600 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯು ಅಹಮದಾಬಾದ್ ಮತ್ತು ಉತ್ತರ ಗುಜರಾತ್ ನಡುವಿನ ಪಯಣವನ್ನು ಹೆಚ್ಚು ವೇಗ, ಸುರಕ್ಷಿತ ಮತ್ತು ಆರಾಮದಾಯಕವಾಗಿಸುತ್ತದೆ.
ಜತೆಗೆ ಪ್ರಧಾನಮಂತ್ರಿ ಅವರು ಗುಜರಾತ್ನಲ್ಲಿ 4,030 ಹೊಸ 'ಮಕ್ಕಳ ಸ್ನೇಹಿ ಅಂಗನವಾಡಿ ಕೇಂದ್ರ'ಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಮತ್ತು ಈಗಾಗಲೇ ಪೂರ್ಣಗೊಂಡಿರುವ 361 ಮಕ್ಕಳ ಸ್ನೇಹಿ ಅಂಗನವಾಡಿ ಕೇಂದ್ರಗಳನ್ನು ಉದ್ಘಾಟಿಸಲಿದ್ದಾರೆ. 800 ಕೋಟಿ ರೂಪಾಯಿ ಹೂಡಿಕೆಯ ಈ ಉಪಕ್ರಮವು 4 ಲಕ್ಷಕ್ಕೂ ಅಧಿಕ ಜನರಿಗೆ ಪ್ರಯೋಜನವನ್ನು ನೀಡಲಿದೆ.
ಪ್ರಧಾನಮಂತ್ರಿ ಅವರು 'ಕೃಷಿ ಮೂಲಸೌಕರ್ಯ ನಿಧಿ'ಯಡಿಯಲ್ಲಿ ಪೂರ್ಣಗೊಂಡ 521 ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಈ ಯೋಜನೆಗಳ ಒಟ್ಟು ವೆಚ್ಚ ಸುಮಾರು 4,950 ಕೋಟಿ ರೂಪಾಯಿಗಳಾಗಿದೆ. ಅವುಗಳಲ್ಲಿ ಶೀಥಲ ಸಂಗ್ರಹಣಾ ಸೌಲಭ್ಯಗಳು ಮತ್ತು ಕೋಲ್ಡ್ ಚೈನ್ಗಳು, ಉಗ್ರಾಣಗಳು, ಧಾನ್ಯ ಸಂಗ್ರಹಣಾ ಕೇಂದ್ರಗಳು, ಪಾಲಿಹೌಸ್ಗಳು ಮತ್ತು ಗ್ರೀನ್ಹೌಸ್ಗಳು, ಸಂಯೋಜಿತ ಪ್ರಾಥಮಿಕ ಹಾಗೂ ದ್ವಿತೀಯ ಹಂತದ ಸಂಸ್ಕರಣಾ ಘಟಕಗಳು ಮತ್ತು ಪ್ರಾಥಮಿಕ ಸಂಸ್ಕರಣಾ ಕೇಂದ್ರಗಳು ಸೇರಿವೆ.
ಸನಾದರ್ನಲ್ಲಿ ಆಲೂಗಡ್ಡೆ ಸಂಸ್ಕರಣಾ ಘಟಕದ ವಿಸ್ತರಣೆಯನ್ನು ಉದ್ಘಾಟಿಸಲಿರುವ ಪ್ರಧಾನಮಂತ್ರಿ, ಪಾಲನ್ಪುರದಲ್ಲಿ ಅಲ್ಟ್ರಾ-ಹೈ-ಟೆಂಪರೇಚರ್ ಉತ್ಪನ್ನಗಳಿಗಾಗಿ ಸ್ವಯಂಚಾಲಿತ ಸಂಗ್ರಹಣೆ ಮತ್ತು ಮರುಪಡೆಯುವಿಕೆ ವ್ಯವಸ್ಥೆ ಕಾರ್ಯಾರಂಭಗೊಳಿಸಲಿದ್ದಾರೆ.
ಅಹಮದಾಬಾದ್ (ಸಬರಮತಿ)-ವಾರಣಾಸಿ ಎಕ್ಸ್ಪ್ರೆಸ್ ಮತ್ತು ಮೆಹ್ಸಾನಾ-ಬೆಚರಾಜಿ-ಸಬರಮತಿ ಮೆಮು ರೈಲು ಸೇವೆಗಳಿಗೆ ಪ್ರಧಾನಮಂತ್ರಿ ಚಾಲನೆ ನೀಡಲಿದ್ದು, ಇದು ಆ ಭಾಗದಲ್ಲಿ ರೈಲು ಸಂಪರ್ಕ ವ್ಯವಸ್ಥೆಯನ್ನು ಬಲಪಡಿಸುತ್ತದೆ.
ಇದೇ ವೇಳೆ ಪ್ರಧಾನಮಂತ್ರಿ ಅವರು ಪಿಎಂ-ಕಿಸಾನ್ ಯೋಜನೆಯ 24ನೇ ಕಂತಿನ ಅಡಿಯಲ್ಲಿ 19 ಸಾವಿರ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಿದ್ದು, ಇದು ದೇಶಾದ್ಯಂತ ರೈತರಿಗೆ ನಿರಂತರ ಆರ್ಥಿಕ ನೆರವನ್ನು ಒದಗಿಸಲಿದೆ. ಅವರು ಅನುಮೋದಿತ 12 ತೋಟಗಾರಿಕಾ ಕ್ಲಸ್ಟರ್ಗಳ (ಗುಂಪುಗಳ) ಅಡಿಯಲ್ಲಿ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡಲಿದ್ದಾರೆ. ಸುಮಾರು 1.46 ಲಕ್ಷ ಹೆಕ್ಟೇರ್ ಪ್ರದೇಶವನ್ನು ಒಳಗೊಂಡಿರುವ ಈ ಕ್ಲಸ್ಟರ್ಗಳಿಂದ 1.3 ಲಕ್ಷಕ್ಕೂ ಅಧಿಕ ರೈತರಿಗೆ ಪ್ರಯೋಜನವಾಗುವ ನಿರೀಕ್ಷೆಯಿದೆ. ಉತ್ತರ ಗುಜರಾತ್ನಲ್ಲಿರುವ ಎರಡು ಕ್ಲಸ್ಟರ್ಗಳು ಆಲೂಗಡ್ಡೆಗೆ ಆದ್ಯತೆ ನೀಡಲಿವೆ.
ಏಕ್ತಾ ನಗರದಲ್ಲಿ ಪ್ರಧಾನಮಂತ್ರಿ
ರಾಷ್ಟ್ರೀಯ ಏಕತಾ ದಿನಾಚರಣೆಯ ಭಾಗವಾಗಿ ಅಕ್ಟೋಬರ್ 30 ರಂದು ಪ್ರಧಾನ ಮಂತ್ರಿ ಏಕತಾ ನಗರದಲ್ಲಿ ಭಾರತ ಪರ್ವ 2026 ಅನ್ನು ಉದ್ಘಾಟಿಸಲಿದ್ದಾರೆ. ಭಾರತದ ಸಾಂಸ್ಕೃತಿಕ ಪರಂಪರೆ ಮತ್ತು ರಾಷ್ಟ್ರೀಯ ಏಕತೆಯ ಆಚರಣೆಯಾಗಿ ಮತ್ತು ಏಕ ಭಾರತ ಶ್ರೇಷ್ಠ ಭಾರತದ ಸ್ಫೂರ್ತಿಯ ಸಂಕೇತದ ಈ ಉತ್ಸವವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ವಿಶಿಷ್ಟ ಸಂಪ್ರದಾಯಗಳು, ಜಾನಪದ ಪ್ರದರ್ಶನಗಳು, ಪ್ರಾದೇಶಿಕ ಪಾಕಪದ್ಧತಿಗಳು, ಕರಕುಶಲ ವಸ್ತುಗಳು ಮತ್ತು ಪ್ರವಾಸಿ ಆಕರ್ಷಣೆಗಳನ್ನು ಪ್ರದರ್ಶಿಸಲು ವೇದಿಕೆ ಒದಗಿಸುತ್ತದೆ. ಈ ಉತ್ಸವವು ಏಕತಾ ನಗರ ಮತ್ತು ಸುತ್ತಮುತ್ತಲಿನ ತಾಣಗಳಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿರೀಕ್ಷೆಯಿದೆ. ಇದು 2026 ರ ನವೆಂಬರ್ 15 ರವರೆಗೆ ಮುಂದುವರಿಯುತ್ತದೆ.
ಭಾರತದ ಏಕತೆ, ವೈವಿಧ್ಯತೆ, ಸಾಂಸ್ಕೃತಿಕ ಪರಂಪರೆ ಮತ್ತು ಪ್ರಗತಿಯನ್ನು ಆಚರಿಸುವ ಪ್ರಕಾಶಮಾನ ಉತ್ಸವವಾದ ಏಕತಾ ಪ್ರಕಾಶ್ ಪರ್ವವನ್ನು ಪ್ರಧಾನ ಮಂತ್ರಿ ವೀಕ್ಷಿಸಲಿದ್ದಾರೆ. ಈ ಉತ್ಸವವು ವಿಷಯಾಧಾರಿತ ಬೆಳಕಿನ ಪ್ರದರ್ಶನಗಳ ಮೂಲಕ ಏಕತಾ ನಗರದಲ್ಲಿ ರಾತ್ರಿ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ. ಇದು ಎರಡು ಪ್ರಮುಖ ಆಕರ್ಷಣೆಗಳನ್ನು ಹೊಂದಿದೆ. 'ಪ್ರಾಚೀನ ಭಾರತದಿಂದ ಆಧುನಿಕ ಭಾರತಕ್ಕೆ' ಎಂಬ ಥೀಮ್ ಹೊಂದಿರುವ 530 ಮೀಟರ್ ಉದ್ದದ ವ್ಯಾಲಿ ಆಫ್ ಫ್ಲವರ್ಸ್ ರಸ್ತೆಯ ಪ್ರಕಾಶಿಸುವುದು, ಭಾರತದ ರಾಷ್ಟ್ರೀಯ ಗುರುತು, ನಾಗರಿಕತೆ, ಮಹಿಳಾ ಸಬಲೀಕರಣ, ಭದ್ರತಾ ಪಡೆಗಳು, ತಂತ್ರಜ್ಞಾನ, ಯೋಗ ಮತ್ತು ಮಕ್ಕಳಿಗಾಗಿ ಕಾಲ್ಪನಿಕ ಜಗತ್ತನ್ನು ಪ್ರದರ್ಶಿಸುತ್ತದೆ. "ಭಾರತದ ವೈವಿಧ್ಯತೆಯಲ್ಲಿ ಏಕತೆ" ಎಂಬ ಥೀಮ್ ಹೊಂದಿರುವ 180 ಮೀಟರ್ ಉದ್ದದ ಗ್ಲೋ ಸುರಂಗವು ಭಾರತದ ನಾಲ್ಕು ಪ್ರದೇಶಗಳ ಸಂಸ್ಕೃತಿಗಳು, ವಾಸ್ತುಶಿಲ್ಪ, ಜಾನಪದ ನೃತ್ಯಗಳು, ಕರಕುಶಲ ವಸ್ತುಗಳು ಮತ್ತು ಜೀವನಶೈಲಿಗಳ ದರ್ಶನಾನುಭವ ನೀಡುತ್ತದೆ. ಪ್ರದರ್ಶನಗಳಲ್ಲಿ 1.5 ಕೋಟಿಗೂ ಅಧಿಕ ಎಲ್ಇಡಿ ದೀಪಗಳನ್ನು ಬಳಸಲಾಗಿದ್ದು, ದೇಶದ ವಿವಿಧ ಭಾಗಗಳ ಕಲಾವಿದರು ರಚಿಸಿದ ಕಲಾಕೃತಿಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ.
ಅಕ್ಟೋಬರ್ 31 ರಂದು, ಪ್ರಧಾನಮಂತ್ರಿ ಅವರು ಏಕ್ತಾ ನಗರದಲ್ಲಿ 400 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಮತ್ತು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಉದ್ಘಾಟನೆಗೊಳ್ಳಲಿರುವ ಯೋಜನೆಗಳಲ್ಲಿ ಒಳಚರಂಡಿ ಮತ್ತು ನೀರು ಸಂಸ್ಕರಣಾ ಘಟಕ, ಮುಂಭಾಗದ ಬೆಳಕು, ನರ್ಮದಾ ಘಾಟ್ನ ಮೇಲ್ದರ್ಜೆಗೇರಿಸುವಿಕೆ, ಐಆರ್ಸಿಟಿಸಿ ಹೋಟೆಲ್ ಮತ್ತು ಏಕ್ತಾ ನಗರದಲ್ಲಿ ಮಳೆಕಾಡು, ಏಕತೆ ಮತ್ತು ಪರಿಸರ ಹಾದಿ ಸೇರಿವೆ.
ಪ್ರಧಾನಮಂತ್ರಿ ಅವರು ಗೋರಾ-ಭಾಂದ್ರಾ ರಸ್ತೆ ಅಭಿವೃದ್ಧಿ; ಸಮಗ್ರ ಶೂನ್ಯ ತ್ಯಾಜ್ಯ ಸ್ಮಾರ್ಟ್ ಘನತ್ಯಾಜ್ಯ ನಿರ್ವಹಣಾ ಯೋಜನೆ; ಖಲ್ವಾನಿ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ; ಕ್ಯಾಕ್ಟಸ್ ಮತ್ತು ಬಟರ್ಫ್ಲೈ ಗಾರ್ಡನ್ನಲ್ಲಿ ಸಮಗ್ರ ಅಭಿವೃದ್ಧಿ ಸೇರಿದಂತೆ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 151ನೇ ಜಯಂತಿ ಅಂಗವಾಗಿ 2026ರ ಅಕ್ಟೋಬರ್ 31ರಂದು ಪ್ರಧಾನಮಂತ್ರಿ ಅವರು ರಾಷ್ಟ್ರೀಯ ಏಕತಾ ದಿನಾಚರಣೆಯಲ್ಲಿ ಭಾಗವಹಿಸಲಿದ್ದಾರೆ.
ಏಕ್ತಾ ಪಥಸಂಚಲನದಲ್ಲಿ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (ಸಿಎಪಿಎಫ್ಗಳು), ರಾಜ್ಯ ಪೊಲೀಸ್ ಪಡೆಗಳು ಮತ್ತು ಕೇಂದ್ರ ಪೊಲೀಸ್ ಸಂಘಟನೆಗಳ ಶಿಸ್ತು, ವೃತ್ತಿಪರತೆ, ಧೈರ್ಯ ಮತ್ತು ಬದ್ಧತೆಯನ್ನು ಪ್ರದರ್ಶಿಸಲಾಗುವುದು. ಎಡಪಂಥೀಯ ಉಗ್ರವಾದದ ವಿರುದ್ಧ ಭದ್ರತಾ ಪಡೆಗಳು ಸಾಧಿಸಿರುವ ಯಶಸ್ಸು ಹಾಗೂ ಹಿಂದೆ ಎಡಪಂಥೀಯ ಉಗ್ರವಾದದಿಂದ ಬಾಧಿತವಾಗಿದ್ದ ಪ್ರದೇಶಗಳು ಶಾಂತಿ, ಭದ್ರತೆ ಮತ್ತು ಅಭಿವೃದ್ಧಿಯತ್ತ ಸಾಗಿರುವ ಪರಿವರ್ತನೆಗೆ ಈ ಬಾರಿಯ ಪಥಸಂಚಲನದಲ್ಲಿ ವಿಶೇಷ ಒತ್ತು ನೀಡಲಾಗುವುದು.
ರಾಷ್ಟ್ರೀಯ ನಾಟಕ ಶಾಲೆ (ಎನ್ಎಸ್ಡಿ) ಆಯೋಜಿಸಿರುವ ‘ನಕ್ಸಲ್ ಮುಕ್ತ ಭಾರತ’ ಕುರಿತ ವಿಶೇಷ ನಾಟಕ ಪ್ರದರ್ಶನವು ಈ ಆಚರಣೆಯ ಪ್ರಮುಖ ಆಕರ್ಷಣೆಯಾಗಿರಲಿದೆ. ಎಡಪಂಥೀಯ ಉಗ್ರವಾದದಿಂದ ಬಾಧಿತವಾಗಿದ್ದ 126 ಜಿಲ್ಲೆಗಳ ಸುಮಾರು 2,000 ಕಲಾವಿದರು ನಾಟಕದಲ್ಲಿ ಭಾಗವಹಿಸಲಿದ್ದಾರೆ. ಈ ಪ್ರದೇಶಗಳ ಸಮುದಾಯಗಳು ಎದುರಿಸಿದ ಸವಾಲುಗಳು ಹಾಗೂ ಅವರು ಶಾಂತಿ, ಭದ್ರತೆ ಮತ್ತು ಅಭಿವೃದ್ಧಿಯತ್ತ ಸಾಗಿದ ಪಯಣವನ್ನು ನಾಟಕದ ಪ್ರದರ್ಶನಗಳ ಮೂಲಕ ಕಲಾವಿದರು ಬಿಂಬಿಸಲಿದ್ದಾರೆ.
ಈ ಬಾರಿ ಸ್ತಬ್ಧಚಿತ್ರಗಳು ಮತ್ತು ಸಾಂಸ್ಕೃತಿಕ ಪ್ರದರ್ಶನಗಳು ದೇಶಭಕ್ತಿ, ರಾಷ್ಟ್ರೀಯ ಹೆಮ್ಮೆ ಮತ್ತು ಸಾಮೂಹಿಕ ಒಗ್ಗಟ್ಟನ್ನು ಪ್ರತಿಬಿಂಬಿಸುವ ‘ವಂದೇ ಮಾತರಂ’ ಥೀಮ್ನ ಮೇಲೆ ಹೆಚ್ಚು ಕೇಂದ್ರೀಕರಿಸಲಾಗಿದೆ. ಸ್ತಬ್ಧಚಿತ್ರಗಳಲ್ಲಿ ಜನರ ಆಶಯಗಳು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಾಂಸ್ಕೃತಿಕ ಶ್ರೀಮಂತಿಕೆ ಹಾಗೂ ಜನರ ಅಭಿವೃದ್ಧಿಯ ಪಯಣವನ್ನು ಪ್ರದರ್ಶಿಸಲಾಗುವುದು.
ದೇಶದ ವೈವಿಧ್ಯಮಯ ಶಾಸ್ತ್ರೀಯ ಮತ್ತು ಜನಪದ ಪರಂಪರೆಗಳು, ಸಂಗೀತ, ನೃತ್ಯ ಹಾಗೂ ಕಲಾತ್ಮಕ ಪರಂಪರೆಯನ್ನು ಬಿಂಬಿಸುವ ಭವ್ಯ ಸಾಂಸ್ಕೃತಿಕ ಪ್ರದರ್ಶನದಲ್ಲಿ ಭಾರತದಾದ್ಯಂತದ ಸುಮಾರು 5,000 ಕಲಾವಿದರು ಭಾಗವಹಿಸಲಿದ್ದಾರೆ.
*****