ಶಿಕ್ಷಣ ಸಚಿವಾಲಯ
azadi ka amrit mahotsav

2026ರ ಅಕ್ಟೋಬರ್ 28 ರಂದು 'ವಿಕಸಿತ ಭಾರತ ಬಿಲ್ಡಥಾನ್ 2025' ವಿಜೇತರನ್ನು ಸನ್ಮಾನಿಸಲಿರುವ ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ


'ವಿಕಸಿತ ಭಾರತ ಬಿಲ್ಡಥಾನ್ 2025' ಅಧಿಕೃತವಾಗಿ "ಅತ್ಯಂತ ದೊಡ್ಡ ನಾವೀನ್ಯತಾ ಪರಿಹಾರ ಸ್ಪರ್ಧೆ" ಎಂದು ಗಿನ್ನೆಸ್ ವಿಶ್ವ ದಾಖಲೆಗೆ ಸೇರ್ಪಡೆ

ಈ ಸ್ಪರ್ಧೆಗೆ ದೇಶಾದ್ಯಂತ ಒಟ್ಟು 2,87,967 ಯೋಜನೆಗಳ ಸಲ್ಲಿಕೆ

ಪ್ರಕಟಣಾ ದಿನಾಂಕ: 27 OCT 2026 1:48PM by PIB Bengaluru

 

ಶಿಕ್ಷಣ ಸಚಿವಾಲಯವು ನಾಳೆ (2026ರ ಅಕ್ಟೋಬರ್ 28) ನವದೆಹಲಿಯಲ್ಲಿ 'ವಿಕಸಿತ ಭಾರತ ಬಿಲ್ಡಥಾನ್ (ವಿಬಿಬಿ) 2025'ರ ಸಮಾರೋಪ ಮತ್ತು ಸನ್ಮಾನ ಸಮಾರಂಭವನ್ನು ಆಯೋಜಿಸಿದೆ. ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ವಿಜೇತ ವಿದ್ಯಾರ್ಥಿ ನಾವೀನ್ಯಕಾರರನ್ನು ಸನ್ಮಾನಿಸಲಿದ್ದಾರೆ.

ಭಾರತದಲ್ಲಿ ಶಾಲಾ ಶಿಕ್ಷಣ ಮತ್ತು ತಳಮಟ್ಟದ ನಾವೀನ್ಯತಾ ವಲಯದಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲನ್ನು ಸ್ಥಾಪಿಸಿರುವ 'ವಿಬಿಬಿ 2025', "ಅತ್ಯಂತ ದೊಡ್ಡ ನಾವೀನ್ಯ ಪರಿಹಾರ ಸ್ಪರ್ಧೆ" ಎಂದು ಗಿನ್ನೆಸ್ ವಿಶ್ವ ದಾಖಲೆಯನ್ನು ಅಧಿಕೃತವಾಗಿ ಪಡೆದಿದ್ದು, ಇದು ಭಾರತದ ಯುವಜನತೆಯನ್ನು ಜಾಗತಿಕ ವೇದಿಕೆಯಲ್ಲಿ ಗುರುತಿಸುವಂತೆ ಮಾಡಿದೆ.

ಈ ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದಲ್ಲಿ ವಿಜೇತರಾದ 10 ತಂಡಗಳು ಮತ್ತು ನಾವೀನ್ಯಕಾರರನ್ನು ಸನ್ಮಾನಿಸಲಾಗುವುದು ಹಾಗೂ ಅವರ ಪರಿವರ್ತನಾತ್ಮಕ ಪರಿಹಾರಗಳು ಮತ್ತು ಮಾದರಿಗಳನ್ನು ಪ್ರದರ್ಶಿಸಲಾಗುವುದು. ಇದೇ ವೇಳೆ ಗಿನ್ನೆಸ್ ವಿಶ್ವ ದಾಖಲೆಯ ಅಧಿಕೃತ ಪ್ರಮಾಣಪತ್ರದ ಪ್ರಸ್ತುತಿ ಸಮಾರಂಭವೂ ನಡೆಯಲಿದೆ.

ಕೇಂದ್ರ ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು (ಡಿಒಎಸ್ ಇಎಲ್), 'ಉಲ್ಲಾಸ್ – ನವ ಭಾರತ ಸಾಕ್ಷರತಾ ಕಾರ್ಯಕ್ರಮ'ದಡಿಯಲ್ಲಿ ಶಿಕ್ಷಕ ಶಿಕ್ಷಣ ಸಂಸ್ಥೆಗಳಿಗೆ (ಟಿಇಐಗಳಿಗೆ) ಮಾರ್ಗಸೂಚಿಗಳನ್ನು ಈ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಿದೆ. ಅಲ್ಲದೆ, 'ವಿಶೇಷ ಅಭಿಯಾನ 6.0' ಅಡಿಯಲ್ಲಿ ಸಚಿವಾಲಯದ ಇಲಾಖೆಗಳು (ಡಿಒಎಸ್ ಇಎಲ್ ಮತ್ತು ಉನ್ನತ ಶಿಕ್ಷಣ ಇಲಾಖೆ) ಕೈಗೊಂಡಿರುವ ಉಪಕ್ರಮಗಳನ್ನು ಇಲ್ಲಿ ಪ್ರದರ್ಶಿಸಲಾಗುವುದು; ಅವುಗಳಲ್ಲಿ ಇ-ತ್ಯಾಜ್ಯದ  ಬಗ್ಗೆ ಜಾಗೃತಿ ಮೂಡಿಸುವ ಮತ್ತು ಇ-ತ್ಯಾಜ್ಯ ಸಂಗ್ರಹಣೆಗೆ ಸಂಬಂಧಿಸಿದ ಪ್ರಯತ್ನಗಳು ಸೇರಿವೆ.

ಶಿಕ್ಷಣ ರಾಜ್ಯ ಖಾತೆ ಸಚಿವರಾದ ಶ್ರೀ ಜಯಂತ್ ಚೌಧರಿ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಡಿಒಎಸ್ ಇಎಲ್ ಕಾರ್ಯದರ್ಶಿ ಶ್ರೀ ಟಿ. ಕೆ. ಅನಿಲ್ ಕುಮಾರ್, ಡಿಒಎಸ್ ಇಎಲ್ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಧೀರಜ್ ಸಾಹು, ಎಐಸಿಟಿಇ ಅಧ್ಯಕ್ಷ ಪ್ರೊ. ಟಿ. ಜಿ. ಸೀತಾರಾಮ್ ಸೇರಿ ಶಿಕ್ಷಣ ಸಚಿವಾಲಯದ ಹಿರಿಯ ಅಧಿಕಾರಿಗಳು, ಸ್ವಾಯತ್ತ ಸಂಸ್ಥೆಗಳ ಮುಖ್ಯಸ್ಥರು, ವಿವಿಧ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಶಿಕ್ಷಣ ಇಲಾಖೆಗಳ ಪ್ರತಿನಿಧಿಗಳು ಮತ್ತು ಪಾಲುದಾರ ಸಂಸ್ಥೆಗಳ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.

ಶಾಲಾ ವಿದ್ಯಾರ್ಥಿಗಳಲ್ಲಿ ಸೃಜನಶೀಲ ಸಮಸ್ಯೆ ಪರಿಹಾರ ಕೌಶಲ್ಯ, ಉದ್ಯಮಶೀಲತೆ ಮತ್ತು ವೈಜ್ಞಾನಿಕ ಕುತೂಹಲವನ್ನು ಬೆಳೆಸುವ ಉದ್ದೇಶದಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು (ಡಿಒಎಸ್ ಇಎಲ್), ಅಟಲ್ ಇನ್ನೋವೇಶನ್ ಮಿಷನ್ (ಎಐಎಂ), ನೀತಿ ಆಯೋಗ ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಸಹಯೋಗದೊಂದಿಗೆ 'ವಿಕಸಿತ ಭಾರತ ಬಿಲ್ಡಥಾನ್ (ವಿಬಿಬಿ) 2025' ಅನ್ನು ಆಯೋಜಿಸಿತ್ತು. 'ಆತ್ಮನಿರ್ಭರ ಭಾರತ', 'ಸ್ವದೇಶಿ', 'ವೋಕಲ್ ಫಾರ್ ಲೋಕಲ್' ಮತ್ತು 'ಸಮೃದ್ಧ ಭಾರತ' ಎಂಬ ನಾಲ್ಕು ಮೂಲಭೂತ ಸ್ತಂಭಗಳನ್ನು ಆಧರಿಸಿರುವ ಈ ಉಪಕ್ರಮವು, ತಳಮಟ್ಟದಲ್ಲಿ ಅದ್ಭುತ ಸ್ಪಂದನೆಯನ್ನು ಪಡೆಯಿತು. ಇದರಲ್ಲಿ ಕಲ್ಪನೆ (ಐಡಿಯಾ) ಮತ್ತು ಮಾದರಿ (ಪ್ರೊಟೊಟೈಪ್) ವಿಭಾಗಗಳಡಿಯಲ್ಲಿ ಒಟ್ಟು 2,87,967 ಯೋಜನೆ(ಪ್ರಾಜೆಕ್ಟ್)ಗಳು ಸಲ್ಲಿಕೆಯಾಗಿದ್ದವು. ಭಾರತದಲ್ಲಿ ಬೆಳೆಯುತ್ತಿರುವ ಶಾಲಾ ನಾವೀನ್ಯತಾ ಪೂರಕ ವ್ಯವಸ್ಥೆಯನ್ನು ಆಧರಿಸಿರುವ 'ವಿಬಿಬಿ' (ವಿಬಿಬಿ), ಯುವ ವಿದ್ಯಾರ್ಥಿಗಳನ್ನು ಕೇವಲ ತರಗತಿಯಲ್ಲಿ ಕಲಿಯುವವರಿಂದ, ಸಮಸ್ಯೆಗಳನ್ನು ಪರಿಹರಿಸುವವರನ್ನಾಗಿ, ಪೇಟೆಂಟ್ ಹೊಂದಿರುವವರನ್ನಾಗಿ ಮತ್ತು 'ವಿಕಸಿತ ಭಾರತ'ದ ಕನಸನ್ನು ನನಸಾಗಿಸುವ ಭವಿಷ್ಯದ ಉದ್ಯಮಿಗಳನ್ನಾಗಿ ರೂಪಿಸಲು ಪ್ರೋತ್ಸಾಹಿಸುತ್ತದೆ.

 

*****


(ಪ್ರಕಟಣೆ ಐ.ಡಿ.: 2328953) ವಿಸಿಟರ್ ಕೌಂಟರ್ : 15
ಪ್ರಕಟಣೆಯನ್ನು ಇದರಲ್ಲಿ ಓದಿ: Telugu , Assamese , English , Urdu , Marathi , हिन्दी , Bengali , Gujarati , Tamil