ರೈಲ್ವೇ ಸಚಿವಾಲಯ
azadi ka amrit mahotsav

ರಾಷ್ಟ್ರಕ್ಕೆ ಸಮರ್ಪಿತಗೊಂಡ ಸತ್ನಾ-ದೇವೇಂದ್ರನಗರ (53 ಕಿ.ಮೀ) ಮತ್ತು ರೇವಾ-ಚುರ್‌ಹಾಟ್ (65 ಕಿ.ಮೀ) ರೈಲು ವಿಭಾಗಗಳು; ಹತ್ತಿರವಾದ ವಿಂಧ್ಯ ಮತ್ತು ಬುಂದೇಲ್‌ಖಂಡ್ ಪ್ರದೇಶಗಳು, ಸಿಧಿ ಜಿಲ್ಲೆಗೆ ದೊರೆಯಲಿದೆ ಗಮನಾರ್ಹ ಪ್ರಯೋಜನ


ಸತ್ನಾ-ದೇವೇಂದ್ರನಗರ ಮತ್ತು ರೇವಾ-ಚುರ್‌ಹಾಟ್ ರೈಲು ವಿಭಾಗಗಳನ್ನು ಉದ್ಘಾಟಿಸಿದ ರೈಲ್ವೆ ಸಚಿವರು ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿ

ದೇವೇಂದ್ರನಗರ-ಚುರ್‌ಹಾಟ್ ಹೊಸ ಪ್ರಯಾಣಿಕ ರೈಲು ಸೇವೆಗೆ ಚಾಲನೆ; ಸ್ಥಳೀಯ ವಿದ್ಯಾರ್ಥಿಗಳು, ರೋಗಿಗಳು ಮತ್ತು ದೈನಂದಿನ ಪ್ರಯಾಣಿಕರಿಗೆ ಸಂಜೀವಿನಿಯಾಗಲಿದೆ ರೈಲು

ಖನಿಜ ಸಮೃದ್ಧ ವಿಂಧ್ಯ ಪ್ರದೇಶವು ದೇಶಾದ್ಯಂತದ ಪ್ರಮುಖ ಕೈಗಾರಿಕಾ ಮತ್ತು ಸಾರಿಗೆ ಕೇಂದ್ರಗಳೊಂದಿಗೆ ಸಂಪರ್ಕ, ಪ್ರಾದೇಶಿಕ ಗ್ರಾಮೀಣ ಆರ್ಥಿಕತೆಗೆ ಉತ್ತೇಜನ

ಪ್ರಕಟಣಾ ದಿನಾಂಕ: 24 OCT 2026 8:11PM by PIB Bengaluru

ಮಧ್ಯಪ್ರದೇಶದ ವಿಂಧ್ಯ ಪ್ರದೇಶದಲ್ಲಿ ರೈಲು ಸಂಪರ್ಕದ ವಿಸ್ತರಣೆಯಲ್ಲಿ ಇಂದು ಐತಿಹಾಸಿಕ ಮೈಲಿಗಲ್ಲು ಸಾಧಿಸಲಾಗಿದೆ. ಗೌರವಾನ್ವಿತ ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಮತ್ತು ಮಧ್ಯಪ್ರದೇಶದ ಸನ್ಮಾನ್ಯ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಅವರ ಉಪಸ್ಥಿತಿಯಲ್ಲಿ ಸತ್ನಾ-ದೇವೇಂದ್ರನಗರ ಮತ್ತು ರೇವಾ-ಚುರ್‌ಹಾಟ್ ರೈಲು ವಿಭಾಗಗಳನ್ನು ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ, ನೂತನ ದೇವೇಂದ್ರನಗರ-ಚುರ್‌ಹಾಟ್ ಪ್ರಯಾಣಿಕ ರೈಲು ಸೇವೆಗೂ ಚಾಲನೆ ನೀಡಲಾಯಿತು. ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ನವದೆಹಲಿಯಿಂದ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಚುರ್‌ಹಾಟ್ ರೈಲು ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಧ್ಯಪ್ರದೇಶದ ಉಪಮುಖ್ಯಮಂತ್ರಿ ಶ್ರೀ ರಾಜೇಂದ್ರ ಶುಕ್ಲಾ, ರೇವಾ ಸಂಸದ ಶ್ರೀ ಜನಾರ್ದನ ಮಿಶ್ರಾ, ಸಿಧಿ ಸಂಸದ ಶ್ರೀ ರಾಜೇಶ್ ಮಿಶ್ರಾ ಅವರೊಂದಿಗೆ ಇತರ ಜನಪ್ರತಿನಿಧಿಗಳು ಮತ್ತು ಗಣ್ಯರು ಭಾಗವಹಿಸಿದ್ದರು. ನಾಗೋದ್ ರೈಲು ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಧ್ಯಪ್ರದೇಶ ಸರ್ಕಾರದ ರಾಜ್ಯ ಸಚಿವರಾದ ಶ್ರೀಮತಿ ಪ್ರತಿಮಾ ಬಾಗ್ರಿ, ಸತ್ನಾ ಸಂಸದ ಶ್ರೀ ಗಣೇಶ್ ಸಿಂಗ್, ಖಜುರಾಹೊ ಸಂಸದ ಶ್ರೀ ವಿಷ್ಣು ದತ್ ಶರ್ಮಾ ಅವರೊಂದಿಗೆ ಇತರ ಜನಪ್ರತಿನಿಧಿಗಳು ಮತ್ತು ಗಣ್ಯರು ಭಾಗವಹಿಸಿದ್ದರು.

ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಈ ಸಂದರ್ಭದಲ್ಲಿ ಮಾತನಾಡಿ, ಸುಧಾರಿತ ರೈಲು ಸಂಪರ್ಕವು ವಿಂಧ್ಯ ಮತ್ತು ಬುಂದೇಲ್‌ಖಂಡ್ ಪ್ರದೇಶಗಳಿಗೆ ಹೊಸ ಜೀವನದ ಜೀವನಾಡಿಯನ್ನು ಸ್ಥಾಪಿಸುತ್ತಿದೆ ಎಂದು ಹೇಳಿದರು. ಈ ಯೋಜನೆಯು ದೀರ್ಘಕಾಲದ ಬೇಡಿಕೆಯನ್ನು ಈಡೇರಿಸಲಿದ್ದು, ಈ ಭಾಗದ ಜನರಿಗೆ ಶಿಕ್ಷಣ, ಉದ್ಯೋಗ ಮತ್ತು ಆರೋಗ್ಯ ಸೇವೆಗಳ ಪ್ರವೇಶವನ್ನು ಸುಧಾರಿಸಲಿದೆ ಎಂದು ಅವರು ಹೇಳಿದರು.

ದೇಶಾದ್ಯಂತ ರೈಲ್ವೆ ಸಂಪರ್ಕದ ವಿಸ್ತರಣೆಯನ್ನು ಉಲ್ಲೇಖಿಸಿದ ಶ್ರೀ ವೈಷ್ಣವ್ ಅವರು, ಶ್ರೀನಗರ, ಮಿಜೋರಾಂ ಮತ್ತು ಪಂಬನ್ ಸೇತುವೆಯಲ್ಲಿ ಕೈಗೊಂಡಿರುವ ಕಾರ್ಯಗಳ ಬಗ್ಗೆ ಒತ್ತಿ ಹೇಳಿದರು. ಛತ್ತೀಸ್‌ಗಢದ ರಾವ್ಘಾಟ್ ಮತ್ತು ಮಧ್ಯಪ್ರದೇಶದ ತಾಂಡಾ ರಸ್ತೆಯನ್ನು ರೈಲ್ವೆ ಜಾಲಕ್ಕೆ ಸಂಪರ್ಕಿಸಿದ ಇತ್ತೀಚಿನ ಸಾಧನೆಯನ್ನೂ ಅವರು ಉಲ್ಲೇಖಿಸಿದರು.

ಲಲಿತ್‌ಪುರ-ಸಿಂಗ್ರೌಲಿ ರೈಲ್ವೆ ಯೋಜನೆಯಡಿ ದೇವೇಂದ್ರನಗರ-ಸತ್ನಾ ಮತ್ತು ರೇವಾ-ಚುರ್‌ಹಾಟ್ ರೈಲು ವಿಭಾಗಗಳಲ್ಲಿ ರೈಲು ಸಂಚಾರ ಪ್ರಾರಂಭವಾಗಿರುವುದು ವಿಂಧ್ಯ ಮತ್ತು ಬುಂದೇಲ್‌ಖಂಡ್ ಪ್ರದೇಶಗಳಲ್ಲಿ ಸಂಪರ್ಕವನ್ನು ಇನ್ನಷ್ಟು ಬಲಪಡಿಸಲಿದೆ. ಸುಧಾರಿತ ರೈಲು ಸಂಪರ್ಕವು ಮಧ್ಯಪ್ರದೇಶದಲ್ಲಿ ಕೈಗಾರಿಕಾ ಅಭಿವೃದ್ಧಿಯನ್ನು ವೇಗಗೊಳಿಸುತ್ತದೆ ಮತ್ತು ಆರ್ಥಿಕ ಚಟುವಟಿಕೆಗಳನ್ನು ವಿಸ್ತರಿಸುತ್ತದೆ ಎಂದು ಅವರು ಹೇಳಿದರು.

ಮಧ್ಯಪ್ರದೇಶದಲ್ಲಿ ಸುಮಾರು ₹1 ಲಕ್ಷ ಕೋಟಿ ಮೌಲ್ಯದ ರೈಲ್ವೆ ಯೋಜನೆಗಳು ಪ್ರಗತಿಯಲ್ಲಿವೆ ಎಂದು ರೈಲ್ವೆ ಸಚಿವರು ತಿಳಿಸಿದರು. ಇವುಗಳಲ್ಲಿ ಹೊಸ ರೈಲು ಮಾರ್ಗಗಳು, ದ್ವಿಗುಣಗೊಳಿಸುವಿಕೆ, ಮೂರನೇ ಮತ್ತು ನಾಲ್ಕನೇ ರೈಲು ಮಾರ್ಗಗಳ ನಿರ್ಮಾಣ ಹಾಗೂ ಗೇಜ್ ಪರಿವರ್ತನೆ ಯೋಜನೆಗಳು ಸೇರಿವೆ. ಲಲಿತ್‌ಪುರ-ಸಿಂಗ್ರೌಲಿ, ಸತ್ನಾ-ರೇವಾ, ಕಟ್ನಿ-ಸಿಂಗ್ರೌಲಿ, ಜಬಲ್ಪುರ-ಗೊಂದಿಯಾ, ಬೀನಾ-ಭೋಪಾಲ್-ಇಟಾರ್ಸಿ, ಇಟಾರ್ಸಿ-ನಾಗಪುರ, ರತ್ಲಾಂ-ಖಾಂಡ್ವಾ, ಇಂದೋರ್-ಬುಡ್ನಿ, ಇಂದೋರ್-ದಾಹೋದ್ ಮತ್ತು ಇಂದೋರ್-ಮನ್ಮಾಡ್ ನಂತಹ ರೈಲ್ವೆ ವಿಭಾಗಗಳಲ್ಲಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ.

ಈ ಯೋಜನೆಗಳು ಪೂರ್ಣಗೊಳ್ಳುವುದರಿಂದ ರಾಜ್ಯದಲ್ಲಿ ಹೊಸ ರೈಲು ಸೇವೆಗಳ ಪ್ರಾರಂಭಕ್ಕೆ ಹಾದಿ ಸುಗಮವಾಗಲಿದೆ ಎಂದು ಅವರು ಹೇಳಿದರು. ಮುಂಬರುವ ವರ್ಷಗಳಲ್ಲಿ, 100 ಕ್ಕೂ ಹೆಚ್ಚು ದೂರದ ರೈಲುಗಳು ಮತ್ತು ಮೇಮು ಹಾಗೂ ಇಂಟರ್‌ಸಿಟಿ ರೈಲುಗಳಂತಹ 50 ರಿಂದ 60 ಕಮ್ಮಿ ದೂರದ ರೈಲು ಸೇವೆಗಳನ್ನು ಪ್ರಾರಂಭಿಸಬಹುದು.

ನಿಲ್ದಾಣಗಳ ಪುನರಾಭಿವೃದ್ಧಿಗೆ ಸಂಬಂಧಿಸಿದಂತೆ ಮಾತನಾಡಿದ ಶ್ರೀ ವೈಷ್ಣವ್ ಅವರು, ಖಜುರಾಹೊ ನಿಲ್ದಾಣವನ್ನು ಮಧ್ಯಪ್ರದೇಶದ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿಫಲಿಸುವ ವಾಸ್ತುಶಿಲ್ಪದೊಂದಿಗೆ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು. ಇದಲ್ಲದೆ, ಅಶೋಕನಗರ, ಬಾಲಾಘಾಟ್, ಬಿಯೋಹಾರಿ, ನೈನ್‌ಪುರ, ನರ್ಮದಾಪುರಂ, ಛತರ್‌ಪುರ, ಓರ್ಚಾ, ಶಿವಪುರಿ, ಹರ್‌ಪಾಲ್ಪುರ, ಚಿಂದ್ವಾರ ಮತ್ತು ಸಿಯೋನಿ ಸೇರಿದಂತೆ ಹಲವಾರು ನಿಲ್ದಾಣಗಳಲ್ಲಿ ಪುನರಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ರಾಜ್ಯದ ಸುಮಾರು 80 ರೈಲು ನಿಲ್ದಾಣಗಳನ್ನು ಪುನರಭಿವೃದ್ಧಿ ಕಾರ್ಯಕ್ರಮದಡಿ ಸೇರಿಸಲಾಗಿದೆ ಎಂದೂ ಅವರು ಉಲ್ಲೇಖಿಸಿದರು.

ರೈಲ್ವೆ ಯೋಜನೆಗೆ ಸಂಬಂಧಿಸಿದ ಪರಿಸರ ಬದ್ಧತೆಗಳ ಕುರಿತು ಒತ್ತಿಹೇಳಿದ ರೈಲ್ವೆ ಸಚಿವರು, ಅಣ್ಣಾ ಪ್ರಾಂತ್ಯದಲ್ಲಿ ಮರಗಳನ್ನು ಕತ್ತರಿಸಿದ್ದನ್ನು ಉಲ್ಲೇಖಿಸಿದರು. ಕತ್ತರಿಸಿದ ಮರಗಳ ಸಂಖ್ಯೆಗಿಂತ ಹೆಚ್ಚು ಸಸಿಗಳನ್ನು ನೆಡಲು ಯೋಜನೆ ರೂಪಿಸಲಾಗಿದೆ ಎಂದು ಅವರು ತಿಳಿಸಿದರು. ಈ ಸ್ಥಳಕ್ಕೆ ಭೇಟಿ ನೀಡಿ ನೆಟ್ಟಿರುವ ಕ್ರಮವನ್ನು ಪರಿಶೀಲಿಸುವಂತೆ, ನೆಟ್ಟ ಸಸಿಗಳು ಬದುಕುಳಿಯುವುದನ್ನು ಖಚಿತಪಡಿಸಿಕೊಳ್ಳುವಂತೆಯೂ ಮತ್ತು ಅಗತ್ಯವಿರುವ ಕಡೆ ಹೊಸ ಸಸಿಗಳನ್ನು ನೆಡುವಂತೆ ಅವರು ಜನರಲ್ ಮ್ಯಾನೇಜರ್, ಡಿವಿಜನಲ್ ರೈಲ್ವೆ ಮ್ಯಾನೇಜರ್ ಮತ್ತು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕಾರ್ಯಕ್ರಮದ ವೇಳೆ ಮಾತನಾಡಿದ ಮಧ್ಯಪ್ರದೇಶದ ಮುಖ್ಯಮಂತ್ರಿ ಡಾ. ಮೋಹನ್ ಯಾದವ್, ಹೊಸ ರೈಲು ಸಂಪರ್ಕವು ಬುಂದೇಲ್‌ಖಂಡ್ ಮತ್ತು ವಿಂಧ್ಯ ಪ್ರದೇಶಗಳಿಗೆ ಹೊಸ ಆರಂಭವನ್ನು ತಂದಿದ್ದು, ರೈಲು ಸಂಪರ್ಕವಿಲ್ಲದ ಪ್ರದೇಶಗಳಿಗೆ ರೈಲ್ವೆ ಸೇವೆಯನ್ನು ತಂದಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಅವರು,  ಈ ಪ್ರದೇಶದ ಜನರಿಗೆ ದೀಪಾವಳಿ ಉಡುಗೊರೆಯಾಗಿದೆ ಎಂದು ಬಣ್ಣಿಸಿದರು.

541 ಕಿ.ಮೀ. ಉದ್ದದ ಲಲಿತ್‌ಪುರ-ಸಿಂಗ್ರೌಲಿ ರೈಲ್ವೆ ಯೋಜನೆಯು ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ನಡುವಿನ ಸಂಪರ್ಕವನ್ನು ಬಲಪಡಿಸಲಿದ್ದು, ಲಲಿತ್‌ಪುರ, ಛತರ್‌ಪುರ, ಪನ್ನಾ, ಸತ್ನಾ, ರೇವಾ, ಸಿಧಿ ಮತ್ತು ಸಿಂಗ್ರೌಲಿ ಪ್ರದೇಶಗಳಿಗೆ ಅನುಕೂಲವಾಗಲಿದೆ ಎಂದು ಡಾ. ಯಾದವ್ ಹೇಳಿದರು.

ಸುಧಾರಿತ ರೈಲು ಸಂಪರ್ಕವು ರೈತರಿಗೆ ದೊಡ್ಡ ಮಾರುಕಟ್ಟೆಗಳ ಪ್ರವೇಶವನ್ನು ಒದಗಿಸುತ್ತದೆ, ಉದ್ಯಮಗಳಿಗೆ ಸರಕು ಸಾಗಣೆಯನ್ನು ಸುಗಮಗೊಳಿಸುತ್ತದೆ, ಯುವಕರು ಮತ್ತು ವಿದ್ಯಾರ್ಥಿಗಳಿಗೆ ಅವಕಾಶಗಳನ್ನು ಸೃಷ್ಟಿಸುತ್ತದೆ, ಆರೋಗ್ಯ ಸೇವೆಗಳ ಪ್ರವೇಶವನ್ನು ಸುಧಾರಿಸುತ್ತದೆ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು. ಈ ಸಂಪರ್ಕವು ಖನಿಜ ಸಮೃದ್ಧ ಬುಂದೇಲ್‌ಖಂಡ್ ಪ್ರದೇಶದಲ್ಲಿ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಲಿದೆ, ವಿಶೇಷವಾಗಿ ಪನ್ನಾದಲ್ಲಿನ ವಜ್ರದ ವ್ಯಾಪಾರಕ್ಕೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು. ಓಂಕಾರೇಶ್ವರ ಜ್ಯೋತಿರ್ಲಿಂಗ-ಖಾಂಡ್ವಾ ರೈಲು ಮಾರ್ಗ ಸೇರಿದಂತೆ ಮಧ್ಯಪ್ರದೇಶದಲ್ಲಿ ಕೈಗೊಳ್ಳಲಾಗುತ್ತಿರುವ ರೈಲ್ವೆ ಯೋಜನೆಗಳನ್ನು ಅವರು ಶ್ಲಾಘಿಸಿದರು.

ಸಿಧಿ ಜಿಲ್ಲೆಗೆ ಪ್ರಯೋಜನ ನೀಡಲಿರುವ ರೇವಾ-ಚುರ್‌ಹಾಟ್ ರೈಲು ಮಾರ್ಗ

ರೇವಾದಿಂದ ಚುರ್‌ಹಾಟ್‌ಗೆ ಇರುವ ಸುಮಾರು 65 ಕಿ.ಮೀ ಉದ್ದದ ಹೊಸ ರೈಲು ಮಾರ್ಗವನ್ನು ಸುಮಾರು ₹1,070 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ರಾಂಪುರ ನೈಕಿನ್ ಮತ್ತು ಚುರ್‌ಹಾಟ್ ನಡುವಿನ ಅಂತಿಮ ಸುಮಾರು 22.5 ಕಿ.ಮೀ ರೈಲು ಮಾರ್ಗದ ವಿಭಾಗ ಪೂರ್ಣಗೊಳ್ಳುವುದರೊಂದಿಗೆ ಯೋಜನೆ ಪೂರ್ಣಗೊಂಡಿದೆ. ಚುರ್‌ಹಾಟ್‌ಗೆ ರೈಲು ಸಂಪರ್ಕ ವಿಸ್ತರಿಸುವುದರೊಂದಿಗೆ, ಸಿಧಿ ಜಿಲ್ಲೆಯ ನಿವಾಸಿಗಳು ರಾಷ್ಟ್ರೀಯ ರೈಲ್ವೆ ಜಾಲದೊಂದಿಗೆ ಸಂಪರ್ಕ ಹೊಂದುವ ಅವಕಾಶವನ್ನು ಪಡೆದುಕೊಂಡಿದ್ದಾರೆ.

ಈ ರೈಲು ಮಾರ್ಗವು, ಪ್ರಾಂತ್ಯಕ್ಕೆ ಕೇವಲ ಹೊಸ ಸಾರಿಗೆ ವಿಧಾನ ಮಾತ್ರವಲ್ಲದೆ ಹೊಸ ಅಭಿವೃದ್ಧಿ ಅವಕಾಶಗಳನ್ನು ಸೃಷ್ಟಿಸುವ ಮಾರ್ಗವೂ ಆಗಿದೆ. ಇದು ವಿದ್ಯಾರ್ಥಿಗಳಿಗೆ ಶಿಕ್ಷಣ ಸಂಸ್ಥೆಗಳಿಗೆ, ರೋಗಿಗಳಿಗೆ ಉತ್ತಮ ವೈದ್ಯಕೀಯ ಸೌಲಭ್ಯಗಳಿಗೆ ಮತ್ತು ಯುವಕರು ಹಾಗೂ ಉದ್ಯೋಗಿಗಳಿಗೆ ಉದ್ಯೋಗ ಮತ್ತು ವ್ಯವಹಾರ ಅವಕಾಶಗಳಿಗೆ ಪ್ರವೇಶವನ್ನು ಸುಗಮಗೊಳಿಸುತ್ತದೆ. ಸಿಮೆಂಟ್ ಉದ್ಯಮದ ಸಾಮರ್ಥ್ಯದೊಂದಿಗೆ ಪ್ರದೇಶದಲ್ಲಿ ಸುಣ್ಣದಕಲ್ಲು ಮತ್ತು ಇತರ ಖನಿಜಗಳ ಲಭ್ಯತೆಯನ್ನು ಪರಿಗಣಿಸಿ, ರೈಲು ಸಂಪರ್ಕವು ಕೈಗಾರಿಕಾ ಚಟುವಟಿಕೆಗಳು ಮತ್ತು ಸರಕು ಸಾಗಣೆಯನ್ನು ಪ್ರೋತ್ಸಾಹಿಸುವ ನಿರೀಕ್ಷೆಯಿದೆ.

ಕೈಗಾರಿಕಾ ಮತ್ತು ಗ್ರಾಮೀಣ ಆರ್ಥಿಕತೆಗೆ ಉತ್ತೇಜನ ನೀಡಲಿರುವ ಸತ್ನಾ-ದೇವೇಂದ್ರನಗರ ರೈಲು ಮಾರ್ಗ

ಸತ್ನಾದಿಂದ ದೇವೇಂದ್ರನಗರಕ್ಕೆ ಇರುವ ಸುಮಾರು 53 ಕಿ.ಮೀ. ಉದ್ದದ ಹೊಸ ರೈಲು ಮಾರ್ಗವನ್ನು ಸುಮಾರು ₹873 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಫುಲ್ವಾರಿ ಮತ್ತು ದೇವೇಂದ್ರನಗರ ನಡುವಿನ ಅಂತಿಮ 8 ಕಿ.ಮೀ ರೈಲು ಮಾರ್ಗದ ವಿಭಾಗ ಪೂರ್ಣಗೊಳ್ಳುವುದರೊಂದಿಗೆ ಯೋಜನೆ ಪೂರ್ಣಗೊಂಡಿದೆ.

ಸತ್ನಾ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು ಸುಣ್ಣದಕಲ್ಲು, ಸಿಮೆಂಟ್ ಮತ್ತು ಇತರ ಖನಿಜ ಆಧಾರಿತ ಉದ್ಯಮಗಳ ಗಮನಾರ್ಹ ಉಪಸ್ಥಿತಿಯನ್ನು ಹೊಂದಿವೆ. ಸುಧಾರಿತ ರೈಲು ಸಂಪರ್ಕವು ಸಿಮೆಂಟ್, ಕ್ಲಿಂಕರ್ ಮತ್ತು ಇತರ ಸರಕುಗಳ ಸಾಗಣೆಯನ್ನು ಸುಗಮಗೊಳಿಸಲು ಸಹಾಯ ಮಾಡುತ್ತದೆ. ಇದು ಕೈಗಾರಿಕೆಗಳ ಲಾಜಿಸ್ಟಿಕ್ಸ್ ವ್ಯವಸ್ಥೆಯನ್ನು ಸುಧಾರಿಸುತ್ತದೆ, ರಸ್ತೆ ಆಧಾರಿತ ಸರಕು ಸಾಗಣೆಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಮತ್ತು ಭವಿಷ್ಯದಲ್ಲಿ ಕೈಗಾರಿಕಾ ಚಟುವಟಿಕೆಗಳ ವಿಸ್ತರಣೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.

ರೈಲು ಸಂಪರ್ಕವು ದೇವೇಂದ್ರನಗರ, ನಾಗೋದ್ ಮತ್ತು ಪನ್ನಾ ಪ್ರದೇಶಗಳ ರೈತರು ಮತ್ತು ಗ್ರಾಮೀಣ ವ್ಯಾಪಾರಿಗಳಿಗೆ ದೊಡ್ಡ ಮಾರುಕಟ್ಟೆಗಳನ್ನು ತಲುಪಲು ಉತ್ತಮ ಆಯ್ಕೆಗಳನ್ನು ಒದಗಿಸುತ್ತದೆ. ರೈಲ್ವೆ ಸಂಪರ್ಕವು ಕೃಷಿ ಉತ್ಪನ್ನಗಳು, ಸ್ಥಳೀಯ ಉತ್ಪನ್ನಗಳು ಮತ್ತು ಕರಕುಶಲ ವಸ್ತುಗಳು ವ್ಯಾಪಕ ಮಾರುಕಟ್ಟೆಗಳನ್ನು ತಲುಪಲು ಸಹಾಯ ಮಾಡುತ್ತದೆ. ಇದಲ್ಲದೆ, ಉಗ್ರಾಣ, ಸಾರಿಗೆ, ವ್ಯಾಪಾರ ಮತ್ತು ಇತರ ಸಂಬಂಧಿತ ಚಟುವಟಿಕೆಗಳಲ್ಲಿ ಹೊಸ ಉದ್ಯೋಗಾವಕಾಶಗಳು ಹೊರಹೊಮ್ಮುವ ಸಾಧ್ಯತೆಯಿದೆ.

ವಿದ್ಯಾರ್ಥಿಗಳು, ರೋಗಿಗಳು ಮತ್ತು ದೈನಂದಿನ ಪ್ರಯಾಣಿಕರಿಗೆ ಸುಲಭವಾಗಲಿರುವ ಹೊಸ ಪ್ರಯಾಣಿಕ ರೈಲು ಸೇವೆ

ಹೊಸ ದೇವೇಂದ್ರನಗರ-ಚುರ್‌ಹಾಟ್-ದೇವೇಂದ್ರನಗರ ಪ್ರಯಾಣಿಕ ರೈಲು ಸೇವೆಯ ಪ್ರಾರಂಭದೊಂದಿಗೆ, ಸಂಬಂಧಪಟ್ಟ ಪ್ರದೇಶಗಳ ಪ್ರಯಾಣಿಕರು ಸತ್ನಾ ಮತ್ತು ರೇವಾ ಮೂಲಕ ಸುಧಾರಿತ ರೈಲು ಸಂಪರ್ಕವನ್ನು ಹೊಂದುವಂತಾಗಿದೆ. ಇದು ವಿದ್ಯಾರ್ಥಿಗಳು, ಉದ್ಯೋಗಿಗಳು, ವ್ಯಾಪಾರಿಗಳು, ರೋಗಿಗಳು, ರೈತರು ಮತ್ತು ಇತರ ದೈನಂದಿನ ಪ್ರಯಾಣಿಕರಿಗೆ ಅನುಕೂಲಕರ ಪ್ರಯಾಣದ ಆಯ್ಕೆಯನ್ನು ಒದಗಿಸುತ್ತದೆ.

ಹೊಸ ರೈಲು ಸಂಪರ್ಕವು ಸ್ಥಳೀಯ ಕೃಷಿ ಉತ್ಪನ್ನಗಳು, ಕಲ್ಲು ಕೆತ್ತನೆಗಳು, ಕರಕುಶಲ ವಸ್ತುಗಳು ಮತ್ತು ಇತರ ಉತ್ಪನ್ನಗಳನ್ನು ದೊಡ್ಡ ಮಾರುಕಟ್ಟೆಗಳಿಗೆ ಸಾಗಿಸುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಇದು ಸ್ಥಳೀಯ ವ್ಯಾಪಾರ, ಸಾರಿಗೆ, ಆಹಾರ ಸೇವೆಗಳು ಮತ್ತು ಇತರ ಸಣ್ಣ ಉದ್ಯಮಗಳಿಗೆ ಉತ್ತೇಜನ ನೀಡಬಹುದು.

ಪ್ರವಾಸೋದ್ಯಮಕ್ಕೆ ಸಿಗಲಿದೆ ಉತ್ತೇಜನ, ಹೆಚ್ಚಾಗಲಿವೆ ಸ್ಥಳೀಯ ಉದ್ಯೋಗಾವಕಾಶಗಳು

ವಿಂಧ್ಯ ಮತ್ತು ಬುಂದೇಲ್‌ಖಂಡ್ ಪ್ರದೇಶಗಳು ತಮ್ಮ ನೈಸರ್ಗಿಕ ಸೌಂದರ್ಯ, ಐತಿಹಾಸಿಕ ಪರಂಪರೆ ಮತ್ತು ಸಾಂಸ್ಕೃತಿಕ ಮಹತ್ವದ ಹಲವಾರು ತಾಣಗಳಿಗೆ ಹೆಸರಾಗಿವೆ. ಸುಧಾರಿತ ರೈಲು ಸಂಪರ್ಕವು ಪನ್ನಾ, ಖಜುರಾಹೊ, ರೇವಾ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಪ್ರವಾಸಿ ತಾಣಗಳಿಗೆ ಪ್ರವೇಶವನ್ನು ಸುಗಮಗೊಳಿಸಲು ಸಹಾಯ ಮಾಡುತ್ತದೆ.

ಪ್ರದೇಶದ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ವೈಟ್ ಟೈಗರ್ ಸಫಾರಿ, ಮುಕುಂದ್‌ಪುರ, ಚಚಾಯ್ ಮತ್ತು ಬಹುಟಿ ಜಲಪಾತಗಳು, ರೇವಾ ಕೋಟೆ ಮತ್ತು ಗೋವಿಂದ್‌ಗಢ ಸೇರಿವೆ. ಸುಧಾರಿತ ರೈಲು ಸಂಪರ್ಕವು ಈ ತಾಣಗಳಿಗೆ ಪ್ರಯಾಣವನ್ನು ಹೆಚ್ಚು ಅನುಕೂಲಕರವಾಗಿಸುತ್ತದೆ ಮತ್ತು ಪ್ರಾದೇಶಿಕ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಪ್ರವಾಸಿಗರ ಸಂಚಾರದ ಹೆಚ್ಚಳವು ಹೋಟೆಲ್‌ಗಳು, ಸ್ಥಳೀಯ ಸಾರಿಗೆ ಸೇವೆಗಳು, ಮಾರ್ಗದರ್ಶಿಗಳು (guides), ಕರಕುಶಲ ವಸ್ತುಗಳು ಮತ್ತು ಸಣ್ಣ ಉದ್ಯಮಗಳಿಗೆ ಅನುಕೂಲವಾಗಬಹುದು.

 

*****


(ಪ್ರಕಟಣೆ ಐ.ಡಿ.: 2328114) ವಿಸಿಟರ್ ಕೌಂಟರ್ : 6
ಪ್ರಕಟಣೆಯನ್ನು ಇದರಲ್ಲಿ ಓದಿ: English , हिन्दी , Gujarati