ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಅಕ್ಟೋಬರ್ 25ರಂದು ಉತ್ತರ ಪ್ರದೇಶ ಮತ್ತು ಒಡಿಶಾಗೆ ಪ್ರಧಾನಮಂತ್ರಿ ಭೇಟಿ


ವಾರಾಣಸಿಯಲ್ಲಿ ಹೊಸ ಉಡುಪು ತಯಾರಿಕಾ ಘಟಕ ಉದ್ಘಾಟಿಸಲಿರುವ ಪ್ರಧಾನಮಂತ್ರಿ

ಮಹಿಳೆಯರ ನೇತೃತ್ವದ ಉತ್ಪಾದನಾ ಉಪಕ್ರಮವು ವಾರಾಣಸಿಯನ್ನು ಜಾಗತಿಕ ಮಾರುಕಟ್ಟೆಗಳೊಂದಿಗೆ ಸಂಪರ್ಕಿಸುತ್ತದೆ

ವಾರಾಣಸಿಯ ನಮೋ ಘಾಟ್‌ನಲ್ಲಿ ವಾಯುಪಡೆ ದಿನದ ವೈಮಾನಿಕ ಪ್ರದರ್ಶನ-2026 ವೀಕ್ಷಿಸಲಿರುವ ಪ್ರಧಾನಮಂತ್ರಿ

ಭಾರತೀಯ ವಾಯುಪಡೆಯ 94ನೇ ವಾರ್ಷಿಕೋತ್ಸವ ಅಂಗವಾಗಿ “ವಿಂಗ್ಸ್ ಓವರ್ ಗಂಗಾ” ಎಂಬ ವಿಷಯದಡಿ ಕಾರ್ಯಕ್ರಮ ಆಯೋಜನೆ

ಭುವನೇಶ್ವರದಲ್ಲಿ ಆರ್‌ಬಿಐನ ನೂತನ ದತ್ತಾಂಶ ಕೇಂದ್ರ ಮತ್ತು ಸೈಬರ್ ಭದ್ರತಾ ತರಬೇತಿ ಸಂಸ್ಥೆ ಉದ್ಘಾಟಿಸಲಿರುವ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 24 OCT 2026 12:32PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 202ರ ಅಕ್ಟೋಬರ್ 25ರಂದು ಉತ್ತರ ಪ್ರದೇಶ ಮತ್ತು ಒಡಿಶಾಗೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ ಸುಮಾರು 11 ಗಂಟೆಗೆ ಪ್ರಧಾನ ಮಂತ್ರಿ ಅವರು ವಾರಾಣಸಿಯಲ್ಲಿ ಹೊಸ ಉಡುಪು ತಯಾರಿಕಾ ಘಟಕ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ ಸುಮಾರು 1 ಗಂಟೆಗೆ ಅವರು ವಾರಾಣಸಿಯ ನಮೋ ಘಾಟ್‌ನಲ್ಲಿ ನಡೆಯಲಿರುವ 'ವಾಯುಪಡೆ ದಿನದ ವೈಮಾನಿಕ ಪ್ರದರ್ಶನ-2026' ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ನಂತರ, ಪ್ರಧಾನಮಂತ್ರಿ ಅವರು ಒಡಿಶಾಗೆ ಪ್ರಯಾಣಿಸಲಿದ್ದು, ಅಲ್ಲಿ ಸಂಜೆ ಸುಮಾರು 4:45 ಗಂಟೆಗೆ ಭುವನೇಶ್ವರದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ನ ದತ್ತಾಂಶ ಕೇಂದ್ರ ಮತ್ತು ಸೈಬರ್ ಭದ್ರತಾ ತರಬೇತಿ ಸಂಸ್ಥೆ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ವಾರಾಣಸಿಯಲ್ಲಿ ಪ್ರಧಾನಮಂತ್ರಿ

ಉತ್ತರ ಪ್ರದೇಶದ ವಾರಾಣಸಿಯಲ್ಲಿ ಅರವಿಂದ್ ಲಿಮಿಟೆಡ್‌ನ ಹೊಸ ಉಡುಪು ಉತ್ಪಾದನಾ ಘಟಕವನ್ನು ಪ್ರಧಾನ ಮಂತ್ರಿ ಉದ್ಘಾಟಿಸಲಿದ್ದಾರೆ. ಭಾರತದ ಜವಳಿ ಮತ್ತು ಉಡುಪು ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಮತ್ತು ಈ ಪ್ರದೇಶದಲ್ಲಿ ಕೈಗಾರಿಕಾ ಬೆಳವಣಿಗೆ ಉತ್ತೇಜಿಸುವ ನಿಟ್ಟಿನಲ್ಲಿ ಈ ಘಟಕವು ಒಂದು ಪ್ರಮುಖ ಹೆಜ್ಜೆಯಾಗಿದೆ.

ಆಧುನಿಕ ಉತ್ಪಾದನಾ ಪದ್ಧತಿ ಮತ್ತು ವಿನ್ಯಾಸಗಳ ಮೇಲೆ ಗಮನ ಕೇಂದ್ರೀಕರಿಸುವ ಈ ಘಟಕವು, ವಿಶೇಷವಾಗಿ ಮಹಿಳೆಯರಿಗೆ ಅರ್ಥಪೂರ್ಣ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ, ಈ  ಪ್ರದೇಶದ ಆರ್ಥಿಕ ಪ್ರಗತಿಗೆ ಕೊಡುಗೆ ನೀಡುತ್ತದೆ. ಕೈಗಾರಿಕಾ ಹೂಡಿಕೆ ಮತ್ತು ಉತ್ಪಾದನೆ-ನೇತೃತ್ವದ ಬೆಳವಣಿಗೆಗೆ ಉತ್ತರ ಪ್ರದೇಶದ ಬೆಳೆಯುತ್ತಿರುವ ಪಾತ್ರವನ್ನು ಈ ಉದ್ಘಾಟನೆಯು ಎತ್ತಿ ತೋರಿಸುತ್ತದೆ. ಜಾಗತಿಕ ಗ್ರಾಹಕರ ನೆಲೆಯೊಂದಿಗೆ, ವಾರಾಣಸಿಯಲ್ಲಿ ತಯಾರಾಗುವ ಉತ್ಪನ್ನಗಳು ವಿಶ್ವಾದ್ಯಂತ ಹೇಗೆ ತಲುಪುತ್ತವೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಪ್ರಧಾನವಾಗಿ ಮಹಿಳೆಯರ ನೇತೃತ್ವದ ಉಪಕ್ರಮವಾಗಿರುವುದರಿಂದ, ಇದು ಮಹಿಳೆಯರ ನೇತೃತ್ವದ ಅಭಿವೃದ್ಧಿಯ ಪ್ರಬಲ ಸಂಕೇತವಾಗಿದೆ.

ಪ್ರಧಾನಮಂತ್ರಿ ವಾರಾಣಸಿಯ ನಮೋ ಘಾಟ್‌ನಲ್ಲಿ ವಾಯುಪಡೆ ದಿನದ ವೈಮಾನಿಕ ಪ್ರದರ್ಶನ-2026 ವೀಕ್ಷಿಸಲಿದ್ದಾರೆ. ಈ ಕಾರ್ಯಕ್ರಮವು ಭಾರತೀಯ ವಾಯುಪಡೆಯ 94ನೇ ವಾರ್ಷಿಕೋತ್ಸವವಾಗಿದ್ದು. "ಗಂಗಾ ನದಿಯ ಮೇಲೆ ವೈಮಾನಿಕ ಹಾರಾಟ" ಎಂಬ ವಿಷಯದ ಅಡಿ ಈ ವಾರ್ಷಿಕೋತ್ಸವ ನಡೆಯಲಿದೆ.

ವೈಮಾನಿಕ ಪ್ರದರ್ಶನವು ತೇಜಸ್, ಲಘು ಯುದ್ಧ ಹೆಲಿಕಾಪ್ಟರ್(ಎಲ್‌ಸಿಎಚ್) ಪ್ರಚಂಡ್, ಎಸ್‌ಯು -30ಎಂಕೆಐ ಮತ್ತು ರಫೇಲ್ ಸೇರಿದಂತೆ ಸಮರ ವಿಮಾನಗಳು ಮತ್ತು ಸಾರಿಗೆ ವಿಮಾನಗಳ ಪ್ರದರ್ಶನ ನಡೆಯಲಿದೆ. ಭಾರತೀಯ ನೌಕಾಪಡೆ ಮತ್ತು ಭಾರತೀಯ ಸೇನೆಯ ವಿಮಾನಗಳು ಸಹ ಭಾಗವಹಿಸಲಿದ್ದು, ಕಾರ್ಯಾಚರಣೆಗಳಲ್ಲಿ ಜಂಟಿತನವನ್ನು ಪ್ರದರ್ಶಿಸಲಿವೆ. ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡ ಮತ್ತು ಸಾರಂಗ್ ಹೆಲಿಕಾಪ್ಟರ್ ಪ್ರದರ್ಶನ ತಂಡ ಸೇರಿದಂತೆ ಭಾರತೀಯ ವಾಯುಪಡೆಯ ಪ್ರಮುಖ ಪ್ರದರ್ಶನ ತಂಡಗಳು ಸಹ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ. ಪ್ರದರ್ಶನವು ನಿಖರವಾದ ಹಾರಾಟ, ಸಮನ್ವಯ ಮತ್ತು ಕಾರ್ಯಾಚರಣೆಯ ಶ್ರೇಷ್ಠತೆಯನ್ನು ಪ್ರದರ್ಶಿಸುತ್ತದೆ.

ಭುವನೇಶ್ವರದಲ್ಲಿ ಪ್ರಧಾನಮಂತ್ರಿ

ಭಾರತದ ಹಣಕಾಸು ವ್ಯವಸ್ಥೆಯ ತಾಂತ್ರಿಕ ಅಡಿಪಾಯ ಬಲಪಡಿಸುವಲ್ಲಿ ಮಹತ್ವದ ಮೈಲಿಗಲ್ಲು ಎಂದು ಗುರುತಿಸಲಾದ, ಭುವನೇಶ್ವರದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಹೊಸದಾಗಿ ಸ್ಥಾಪಿಸಿರುವ ದತ್ತಾಂಶ ಕೇಂದ್ರ ಮತ್ತು ಸೈಬರ್ ಭದ್ರತಾ ತರಬೇತಿ ಸಂಸ್ಥೆಯನ್ನು ಪ್ರಧಾನ ಮಂತ್ರಿ  ಉದ್ಘಾಟಿಸಲಿದ್ದಾರೆ. ಬ್ಯಾಂಕಿನ ಕಂಪ್ಯೂಟಿಂಗ್ ಅವಶ್ಯಕತೆಗಳನ್ನು ಪೂರೈಸಲು, ಬ್ಯಾಂಕ್ ಮತ್ತು ವಿಶಾಲ ಹಣಕಾಸು ವಲಯಕ್ಕೆ ಸುರಕ್ಷಿತ, ಚೇತರಿಕೆಯ, ಮಾಪನ ಮಾಡಬಹುದಾದ ಮತ್ತು ಭವಿಷ್ಯಕ್ಕೆ ಸಿದ್ಧವಾದ ಕಂಪ್ಯೂಟಿಂಗ್ ಪರಿಸರ ವ್ಯವಸ್ಥೆ ಒದಗಿಸುವಂತೆ ಅವುಗಳನ್ನು ವಿನ್ಯಾಸಗೊಳಿಸಲಾಗಿದೆ.

ಅತ್ಯಾಧುನಿಕ 4 ದತ್ತಾಂಶ ಕೇಂದ್ರಗಳು ಇತರೆ ಪ್ರಮುಖ ಉಪಕ್ರಮಗಳೊಂದಿಗೆ ಮಿಷನ್-ನಿರ್ಣಾಯಕ ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳನ್ನು ಆಯೋಜಿಸುತ್ತವೆ. ಈ ಸೌಲಭ್ಯವನ್ನು ಅಪ್‌ಟೈಮ್ ಇನ್‌ಸ್ಟಿಟ್ಯೂಟ್ 4ನೇ ಶ್ರೇಣಿಯ ಮಾನದಂಡಕ್ಕೆ ತಕ್ಕಂತೆ ಪ್ರಮಾಣೀಕರಿಸಲಾಗಿದೆ - ಡೇಟಾ ಸೆಂಟರ್ ಮೂಲಸೌಕರ್ಯಕ್ಕಾಗಿ ಜಾಗತಿಕ ಮಾನದಂಡ - ಇದು ಕಾರ್ಯಾಚರಣೆಯ ಚೇತರಿಕೆ ಮತ್ತು ಹೊಂದಾಣಿಕೆಯನ್ನು ಅತ್ಯುನ್ನತ ಮಟ್ಟದಲ್ಲಿ ಇರಿಸುತ್ತದೆ. ಇದು ವಿಶ್ವಾದ್ಯಂತ ಬಿಎಫ್‌ಎಸ್‌ಐ(ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮೆ) ವಲಯದಲ್ಲಿ ಅತಿದೊಡ್ಡ 4ನೇ ಶ್ರೇಣಿಯ ಪ್ರಮಾಣೀಕೃತ ಸೌಲಭ್ಯಗಳಲ್ಲಿ ಒಂದಾಗಿದೆ. ಇದು ಡಿಜಿಟಲ್ ಹಣಕಾಸು ಸೇವೆಗಳ ವ್ಯಾಪ್ತಿ, ದಕ್ಷತೆ ಮತ್ತು ವಿಶ್ವಾಸಾರ್ಹತೆ ವಿಸ್ತರಿಸಲು ಕೊಡುಗೆ ನೀಡುತ್ತದೆ. ಭಾರತದ ಹೆಚ್ಚುತ್ತಿರುವ ತಂತ್ರಜ್ಞಾನ-ಚಾಲಿತ ಹಣಕಾಸು ಆರ್ಥಿಕತೆಗೆ ಸುರಕ್ಷಿತ ಡಿಜಿಟಲ್ ಅಡಿಪಾಯವನ್ನು ರೂಪಿಸುತ್ತದೆ. ಇದು ಕೇಂದ್ರ ಬ್ಯಾಂಕಿಂಗ್ ಸಮುದಾಯದಲ್ಲಿ ಡಿಜಿಟಲ್ ಮೂಲಸೌಕರ್ಯದಲ್ಲಿ ಸರದಾರನಾಗಿ ರಿಸರ್ವ್ ಬ್ಯಾಂಕಿನ ವಿಶಿಷ್ಟ ಸ್ಥಾನ ಬಲಪಡಿಸಲು ಸಹಾಯ ಮಾಡುತ್ತದೆ.

ಸೈಬರ್ ಭದ್ರತಾ ತರಬೇತಿ ಸಂಸ್ಥೆಯು ಸಾಮರ್ಥ್ಯ ನಿರ್ಮಾಣವನ್ನು ಉತ್ತೇಜಿಸುತ್ತದೆ, ಸೈಬರ್ ಭದ್ರತೆ ಮತ್ತು ಉದ್ಯಮ-ತಂತ್ರಜ್ಞಾನ ತರಬೇತಿ, ಸಂಶೋಧನೆ ಮತ್ತು ವಲಯ-ವ್ಯಾಪಿ ಸಾಮರ್ಥ್ಯ ಅಭಿವೃದ್ಧಿಗಾಗಿ ಮೀಸಲಾದ ಸಾಂಸ್ಥಿಕ ವೇದಿಕೆಯನ್ನು ಒದಗಿಸುತ್ತದೆ. ಈ ಸಂಸ್ಥೆಯು ಕ್ವಾಂಟಮ್ ಕಂಪ್ಯೂಟಿಂಗ್, ಕೃತಕ ಬುದ್ಧಿಮತ್ತೆ ಮತ್ತು ಇತರೆ ತ್ವರಿತವಾಗಿ ಅಭಿವೃದ್ಧಿ ಹೊಂದಿದ ತಂತ್ರಜ್ಞಾನಗಳು ಸೇರಿದಂತೆ ಬಿಎಫ್‌ಎಸ್‌ಐ ವಲಯಕ್ಕೆ ಸಂಬಂಧಿಸಿದ ಅತ್ಯಾಧುನಿಕ ತಂತ್ರಜ್ಞಾನಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ.

 

*****

 


(ಪ್ರಕಟಣೆ ಐ.ಡಿ.: 2328032) ವಿಸಿಟರ್ ಕೌಂಟರ್ : 5
ಪ್ರಕಟಣೆಯನ್ನು ಇದರಲ್ಲಿ ಓದಿ: Odia , Bengali , Assamese , English , Urdu , Marathi , हिन्दी , Punjabi , Gujarati , Tamil , Malayalam