ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಚಿನ್ಮಯ ಅಮೃತ್ ಮಹೋತ್ಸವ ಜಾಗತಿಕ ಶೃಂಗಸಭೆಯನ್ನು ಉದ್ಘಾಟಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ


ಚಿನ್ಮಯ ಮಿಷನ್ ದಶಕಗಳಿಂದಲೂ ಸಮುದಾಯಗಳಿಗೆ ಸೇವೆ ಸಲ್ಲಿಸುತ್ತಾ, ಭಾರತದ ಆಧ್ಯಾತ್ಮಿಕ ಜ್ಞಾನವನ್ನು ಜಗತ್ತಿನೊಂದಿಗೆ ಹಂಚಿಕೊಳ್ಳುತ್ತಿದೆ: ಪ್ರಧಾನಮಂತ್ರಿ

ಚಿನ್ಮಯ ಮಿಷನ್ ಕೇವಲ ಒಂದು ಸಂಸ್ಥೆಯಲ್ಲ; ಇದೊಂದು ಗಹನವಾದ 'ಚಿನ್ಮಯ' ಚಿಂತನೆ, ಇದನ್ನು ಓರ್ವ 'ಚಿನ್ಮಯ' ಋಷಿ ಸ್ಥಾಪಿಸಿದ್ದಾರೆ. ಇದರ ದಶಕಗಳ ಸುದೀರ್ಘ ಪಯಣವು 'ಚಿನ್ಮಯ' ಸಂಕಲ್ಪಗಳಿಂದ ತುಂಬಿದೆ. ಯಾವುದು 'ಚಿನ್ಮಯ'ವೋ, ಅದು ಸಹಜವಾಗಿಯೇ ಅಮರ ಮತ್ತು ಚಿರಂತನ ಅಮೃತದಿಂದ ತುಂಬಿರುತ್ತದೆ: ಪ್ರಧಾನಮಂತ್ರಿ

ನಮ್ಮ ರಾಷ್ಟ್ರವು ನಮ್ಮ ಸಂಸ್ಕೃತಿಯ ತೊಟ್ಟಿಲು; ಈ ರಾಷ್ಟ್ರವೇ ನಮ್ಮ ಅಸ್ತಿತ್ವದ ಅಡಿಪಾಯವಾಗಿದೆ: ಪ್ರಧಾನಮಂತ್ರಿ

ಚಿನ್ಮಯ ಮಿಷನ್‌ನ ಪ್ರಯತ್ನಗಳಿಂದಾಗಿ, ಇಂದು ಲಕ್ಷಾಂತರ ಯುವಜನರು ಭಾರತದ ಸಾಂಸ್ಕೃತಿಕ ರಾಯಭಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಯುವಜನರು ಭಾರತೀಯ ಮೌಲ್ಯಗಳನ್ನು ಹೊಸ ಪೀಳಿಗೆಗೆ ತಲುಪಿಸುತ್ತಿದ್ದಾರೆ: ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 23 OCT 2026 1:32PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹೊಸದಿಲ್ಲಿಯ ಭಾರತ್ ಮಂಟಪದಲ್ಲಿ 'ಚಿನ್ಮಯ ಅಮೃತ ಮಹೋತ್ಸವ ಜಾಗತಿಕ ಸಮ್ಮೇಳನ'ವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನ ಮಂತ್ರಿಯವರು, ಸಂತರು ತೋರಿದ ವಾತ್ಸಲ್ಯ ಮತ್ತು ಆಶೀರ್ವಾದಗಳಿಂದ ತಾವು ಇದರಲ್ಲಿ ಭಾಗವಹಿಸುತ್ತಿರುವುದಾಗಿ ಹೇಳಿದರು.ಇದು ಅತ್ಯಂತ ಗಾಢವಾದ ಆಧ್ಯಾತ್ಮಿಕ ಅನುಭವ ಎಂದು ಬಣ್ಣಿಸಿದರು. 'ಚಿನ್ಮಯ ಮಿಷನ್' ಕೇವಲ ಒಂದು ಸಂಸ್ಥೆಯಲ್ಲ, ಬದಲಾಗಿ ಒಬ್ಬ ಋಷಿಯಿಂದ ಸ್ಥಾಪಿಸಲ್ಪಟ್ಟು, ದಶಕಗಳ ಪವಿತ್ರ ಸಂಕಲ್ಪಗಳಿಂದ ಮುನ್ನಡೆಯುತ್ತಿರುವ ಒಂದು ಅಮರ ಚೈತನ್ಯವಾಗಿದೆ ಎಂದು ಪ್ರತಿಪಾದಿಸಿದ ಅವರು, ಈ ಕಾರ್ಯಕ್ರಮಕ್ಕೆ ಇಟ್ಟಿರುವ ಹೆಸರು ಅತ್ಯಂತ ಅರ್ಥಪೂರ್ಣವಾಗಿದೆ ಎಂದೂ ಹೇಳಿದರು.

ಆಧುನಿಕ ತಂತ್ರಜ್ಞಾನದ ನೆರವಿನಿಂದ, 'ಹೋಲೋಬಾಟ್' ಮೂಲಕ ಪೂಜ್ಯ ಗುರುದೇವ ಸ್ವಾಮಿ ಚಿನ್ಮಯಾನಂದರೊಂದಿಗೆ ಸಂವಾದ ನಡೆಸುವ ಅವಕಾಶ ಕಲ್ಪಿಸಲಾಗಿದ್ದನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಇದು ಈ ಕಾರ್ಯಕ್ರಮದ ಭಾವನಾತ್ಮಕ ಆಯಾಮವನ್ನು ಇನ್ನಷ್ಟು ಹೆಚ್ಚಿಸಿತು ಎಂದರು. ಈ ಅನುಭವವು ತಮ್ಮನ್ನು 33 ವರ್ಷಗಳ ಹಿಂದಕ್ಕೆ, ಅಂದರೆ 1993ರಲ್ಲಿ ವಡೋದರಾದಲ್ಲಿ ತಾವು ಈ ಆಧ್ಯಾತ್ಮಿಕ ನಾಯಕರನ್ನು ಭೇಟಿಯಾಗಿದ್ದ ಕ್ಷಣಕ್ಕೆ ಕರೆದೊಯ್ದಿತು ಎಂದು ಪ್ರಧಾನ ಮಂತ್ರಿಗಳು ಹಂಚಿಕೊಂಡರು. ಗುರುದೇವ ಅವರ ವಾತ್ಸಲ್ಯ, ಅವರೊಂದಿಗಿನ ಸಂಭಾಷಣೆ ಮತ್ತು ಆಶೀರ್ವಾದಗಳನ್ನು ನೆನಪಿಸಿಕೊಂಡ ಪ್ರಧಾನ ಮಂತ್ರಿಯವರು, ತಾವೀಗ ನೇರವಾಗಿ ಅವರ ಸಮ್ಮುಖದಲ್ಲೇ ಇದ್ದಂತೆ ಭಾಸವಾಯಿತು ಎಂದು ಹೇಳಿದರು. ಇಂತಹ ಹೃದಯಸ್ಪರ್ಶಿ ಗೌರವ ನಮನವನ್ನು ರೂಪಿಸಿದ್ದಕ್ಕಾಗಿ ಅವರು ಮಿಷನ್‌ನ ಸದಸ್ಯರಿಗೆ ಮನಪೂರ್ವಕ ಕೃತಜ್ಞತೆ ಸಲ್ಲಿಸಿದರು. "ನನ್ನ ಪಾಲಿಗೆ ಇದೊಂದು ಅತ್ಯಂತ ಭಾವನಾತ್ಮಕ ಅನುಭವ," ಎಂದು ಪ್ರಧಾನ ಮಂತ್ರಿ ಮೋದಿ ನುಡಿದರು.

ಸ್ವಾಮಿ ವಿವೇಕಾನಂದರ ಐತಿಹಾಸಿಕ ಭಾಷಣಕ್ಕೆ 100 ವರ್ಷ ತುಂಬಿದ ಸಂದರ್ಭದಲ್ಲಿ, 'ಪಾರ್ಲಿಮೆಂಟ್ ಆಫ್ ದಿ ವರ್ಲ್ಡ್ಸ್ ರಿಲಿಜಿಯನ್ಸ್' (ವಿಶ್ವ ಧರ್ಮಗಳ ಸಂಸತ್ತು) ಶತಮಾನೋತ್ಸವಕ್ಕಾಗಿ ಸ್ವಾಮಿ ಚಿನ್ಮಯಾನಂದರನ್ನು ಚಿಕಾಗೋಗೆ ಆಹ್ವಾನಿಸಲು ತಾವು 1993ರ ಫೆಬ್ರವರಿ-ಮಾರ್ಚ್‌ನಲ್ಲಿ ಭೇಟಿ ನೀಡಿದ್ದನ್ನು ಪ್ರಧಾನ ಮಂತ್ರಿಗಳು ನೆನಪಿಸಿಕೊಂಡರು. ಆಗಸ್ಟ್ 3ರಂದು ಸ್ಯಾನ್ ಡಿಯಾಗೋದಲ್ಲಿ ನಿಧನರಾಗುವ ಮೊದಲು, ಗುರುದೇವ್ ಅವರು ಈ ಕಾರ್ಯಕ್ರಮಕ್ಕಾಗಿ ಅಮೆರಿಕದಾದ್ಯಂತ ಜನರನ್ನು ಒಗ್ಗೂಡಿಸಲು ಹೇಗೆ ಅವಿರತವಾಗಿ ಶ್ರಮಿಸಿದರು ಎಂಬುದನ್ನು ಅವರು ವಿವರಿಸಿದರು. ಸೆಪ್ಟೆಂಬರ್ 11ರಂದು ಚಿಕಾಗೋದಲ್ಲಿ ನಡೆದ ಸಮಾವೇಶದಲ್ಲಿ ಗುರುದೇವ್ ಅವರ ಅನುಪಸ್ಥಿತಿಯನ್ನು ಎಷ್ಟು ತೀವ್ರವಾಗಿ ಕಾಡಿತು ಎಂಬುದನ್ನು ಸ್ಮರಿಸಿದ ಪ್ರಧಾನ ಮಂತ್ರಿಗಳು, ಯುವ ಶಕ್ತಿಯನ್ನು ಬೆಳೆಸುವ ಕುರಿತು ಅವರೊಂದಿಗೆ ನಡೆದ ತಮ್ಮ ಅಂತಿಮ ಸಂಭಾಷಣೆಯನ್ನು ನೆನಪಿಸಿಕೊಂಡರು. "ಇದರ ಮುಖ್ಯ ಸಾರಾಂಶವೆಂದರೆ ಯುವ ಶಕ್ತಿಯನ್ನು ನಿರ್ಮಿಸುವುದು ಮತ್ತು ಆ ಯುವ ಶಕ್ತಿಯ ಮೂಲಕ ಬಲವಾದ ಹಾಗೂ ಸಮರ್ಥ ಭಾರತವನ್ನು ರೂಪಿಸುವುದು!" ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

ಆ ಭೇಟಿಯ ನಂತರದ ವರ್ಷಗಳಲ್ಲಿ ಗುಜರಾತ್‌ನ ಮುಖ್ಯಮಂತ್ರಿಯಾಗಿ, ತದನಂತರ ಸರ್ಕಾರಿ ಮುಖ್ಯಸ್ಥರಾಗಿ ಕಳೆದ 25 ವರ್ಷಗಳ ತಮ್ಮ ನಿರಂತರ ಸೇವೆಯ ಪಯಣವನ್ನು ವಿವರಿಸಿದ ಪ್ರಧಾನ ಮಂತ್ರಿಗಳು, ದೇಶದ ಯುವಜನರು ತಮ್ಮ ನೀತಿಗಳ ಕೇಂದ್ರಬಿಂದುವಾಗಿದ್ದಾರೆ ಎಂದು ಹೇಳಿದರು. 'ಚಿನ್ಮಯ ಅಮೃತ ಮಹೋತ್ಸವ'ದ ಯುವ ಸ್ವಯಂಸೇವಕರು ಪ್ರಮುಖ ಜವಾಬ್ದಾರಿಗಳನ್ನು ಹೊತ್ತುಕೊಂಡು, 300 ದಿನಗಳಲ್ಲಿ 40,000 ಕಿಲೋಮೀಟರ್‌ಗಳಷ್ಟು ಸಂಚರಿಸಿ, ಒಂದು ಲಕ್ಷಕ್ಕೂ ಹೆಚ್ಚು ಯುವ ನಾಗರಿಕರೊಂದಿಗೆ ಸಂಪರ್ಕ ಸಾಧಿಸಿದ್ದಕ್ಕಾಗಿ ಪ್ರಧಾನ ಮಂತ್ರಿಗಳು ಅವರನ್ನು ಶ್ಲಾಘಿಸಿದರು. "ಈ ಅದ್ಭುತ ಪ್ರಯತ್ನಕ್ಕಾಗಿ ನಾನು ಇಡೀ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ," ಎಂದು ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.

"ವಯಮ್ ಅಮೃತಸ್ಯ ಪುತ್ರಾಃ" (ನಾವು ಅಮರತ್ವದ ಮಕ್ಕಳು) ಎಂಬ ಉಪನಿಷತ್ತಿನ ವಚನವನ್ನು ಉಲ್ಲೇಖಿಸಿದ ಪ್ರಧಾನ ಮಂತ್ರಿಯವರು, ಭಾರತವು ಸಹಸ್ರಮಾನಗಳಿಂದಲೂ ಜ್ಞಾನ ಮತ್ತು ಬೆಳಕಿನ ಅನ್ವೇಷಕನಾಗಿ ಉಳಿದುಬಂದಿದೆ ಎಂದು ವಿವರಿಸಿದರು. ಇದಕ್ಕೆ ಕಾರಣ ಭಾರತದ ಪ್ರಜ್ಞೆ ಮತ್ತು ವಿವೇಕಗಳು ಅಮರವಾಗಿರುವುದೇ ಆಗಿದೆ. ಇದೇ ಸ್ಫೂರ್ತಿಯೊಂದಿಗೆ, ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ಸಂದರ್ಭದಲ್ಲಿ ಅವರು 'ಅಮೃತ ಮಹೋತ್ಸವ'ಕ್ಕೆ ಕರೆ ನೀಡಿದರು. ಈ ಮಹೋತ್ಸವವು 'ವಿಕಸಿತ ಭಾರತ'ದ ನಿರ್ಮಾಣಕ್ಕೆ ಭದ್ರ ಬುನಾದಿಯಾಗುವುದರ ಜೊತೆಗೆ, ಮಾನವಕುಲದ ಕಲ್ಯಾಣಕ್ಕಾಗಿ ಭಾರತವು ಸಹಸ್ರಮಾನಗಳಿಂದಲೂ ಹೊಂದಿರುವ ಕಾಳಜಿಯನ್ನು ಪುನರುಜ್ಜೀವನಗೊಳಿಸುವ ಕೆಲಸವನ್ನೂ ಮಾಡಲಿದೆ. ಈ ಅವಧಿಯಲ್ಲಿ ಅನೇಕ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಸ್ಥೆಗಳು ಪ್ರಮುಖ ಘಟ್ಟಗಳಲ್ಲಿ ಪವಿತ್ರ ಸಂಕಲ್ಪಗಳನ್ನು ಕೈಗೊಂಡಿರುವುದನ್ನು ಗಮನಿಸಿದ ಅವರು, 'ಚಿನ್ಮಯ ಮಿಷನ್' ರಾಷ್ಟ್ರದ 'ಅಮೃತ ಕಾಲ' ಅಭಿಯಾನದೊಂದಿಗೆ ಕೈಜೋಡಿಸಿರುವುದನ್ನು ಶ್ಲಾಘಿಸಿದರು. "ನಾವು ನಿಜವಾಗಿಯೂ 'ಅಮೃತಸ್ಯ ಪುತ್ರಾಃ' (ಅಮರತ್ವದ ಮಕ್ಕಳು) ಎಂಬುದಕ್ಕೆ ಇದೇ ಸಾಕ್ಷಿಯಾಗಿದೆ," ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

"ವಯಂ ರಾಷ್ಟ್ರೇ ಜಾಗೃಯಾಮ ಪುರೋಹಿತಃ" ಎಂಬ ವೇದದ ಕರೆಯನ್ನು ಉಲ್ಲೇಖಿಸಿದ ಪ್ರಧಾನಿ, ಸ್ವಾಮಿ ಚಿನ್ಮಯಾನಂದರು ಆಧ್ಯಾತ್ಮಿಕತೆಯಂತೆಯೇ ರಾಷ್ಟ್ರೀಯ ಆದ್ಯತೆಗಳ ಬಗ್ಗೆಯೂ ಹೇಗೆ ಮಾತನಾಡಿದರು ಎಂಬುದನ್ನು ಎತ್ತಿ ತೋರಿಸಿದರು, ರಾಷ್ಟ್ರವು ನಮ್ಮ ಸಂಸ್ಕೃತಿ ಮತ್ತು ಅಸ್ತಿತ್ವದ ತೊಟ್ಟಿಲು ಆಗಿರುವುದರಿಂದ, ಆಧ್ಯಾತ್ಮಿಕ ಬೆಳವಣಿಗೆಯು ವೈಯಕ್ತಿಕ ಬೆಳವಣಿಗೆ ಮತ್ತು ರಾಷ್ಟ್ರೀಯ ಪ್ರಗತಿಗೆ ಉತ್ತೇಜನ ನೀಡಬೇಕು ಎಂದು ಅವರು ಬೋಧಿಸಿದರು. ರಾಷ್ಟ್ರೀಯ ಸ್ವಾಭಿಮಾನವನ್ನು ತುಂಬಲು, ಸ್ವಾಮೀಜಿ ಉಪನಿಷತ್ತುಗಳು, ವೇದಾಂತ ಮತ್ತು ಧರ್ಮಗ್ರಂಥಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಗೀತಾ ಜ್ಞಾನ ಯಜ್ಞವನ್ನು ಪ್ರಾರಂಭಿಸಿದರು, ಇದರ ಪರಿಣಾಮವಾಗಿ ಇಂದು ಲಕ್ಷಾಂತರ ಚಿನ್ಮಯ ಮಿಷನ್ ಯುವಜನರು ಸಾಂಸ್ಕೃತಿಕ ಬ್ರಾಂಡ್ ರಾಯಭಾರಿಗಳಾಗಿ ಭಾರತೀಯ ಮೌಲ್ಯಗಳನ್ನು ರವಾನಿಸುತ್ತಿದ್ದಾರೆ. "ಪೂಜ್ಯ ಗುರುದೇವ್ ಅವರ ಈ ಕೊಡುಗೆ ಭಾರತದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪುನರುಜ್ಜೀವನದಲ್ಲಿ ಒಂದು ಪ್ರಮುಖ ಅಧ್ಯಾಯವಾಗಿದೆ" ಎಂದು ಪ್ರಧಾನಿ ಮೋದಿ ದೃಢಪಡಿಸಿದರು.

2015ರಲ್ಲಿ ಗುರುದೇವ್ ಅವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡಿದ್ದನ್ನು ನೆನಪಿಸಿಕೊಂಡ ಪ್ರಧಾನ ಮಂತ್ರಿಯವರು, ಸ್ವಾಮೀಜಿಯವರ ಜೀವನವನ್ನು ಜ್ಞಾನ, ಕರ್ಮ ಮತ್ತು ಭಕ್ತಿಯ ಒಂದು ಅದ್ಭುತ ಸಂಗಮ ಎಂದು ಬಣ್ಣಿಸಿದರು. ಇದು ಅವರ ಗುರುಗಳಾದ ಸ್ವಾಮಿ ಶಿವಾನಂದರು ನೀಡಿದ್ದ, "ಹೋಗು, ಸಿಂಹದಂತೆ ಘರ್ಜಿಸು" ಎಂಬ ಆಶೀರ್ವಾದವನ್ನು ಸಾಕಾರಗೊಳಿಸಿತ್ತು. ಸ್ವಾಮೀಜಿಯವರ ದೃಢವಾದ ಆಂತರಿಕ ನಂಬಿಕೆಯು ಕೇಳುಗರ ಮನಸ್ಸಿನ ಮೇಲೆ ಅಳಿಸಲಾಗದ ಛಾಪು ಮೂಡಿಸಿತು ಮತ್ತು ಅವರ 'ಆರ್ಟ್ ಆಫ್ ಮ್ಯಾನ್ ಮೇಕಿಂಗ್' ಎಂಬ ರೇಡಿಯೋ ಕಾರ್ಯಕ್ರಮವು ಅಸಂಖ್ಯಾತ ಜೀವನಗಳಿಗೆ ದಾರಿದೀಪವಾಯಿತು ಎಂದು ಅವರು ಉಲ್ಲೇಖಿಸಿದರು. "ಅವರ ಧ್ವನಿಯಲ್ಲಿದ್ದ ಆತ್ಮವಿಶ್ವಾಸ ಮತ್ತು ಆಂತರಿಕ ಶಕ್ತಿಯು, ಅವರ ವಿಚಾರಗಳನ್ನು ಪ್ರತಿಯೊಬ್ಬರ ಹೃದಯದಲ್ಲಿಯೂ ಅಚ್ಚೊತ್ತುವಂತೆ ಮಾಡುತ್ತಿತ್ತು," ಎಂದು ಶ್ರೀ ಮೋದಿ ಅಭಿಪ್ರಾಯಪಟ್ಟರು.

ಮಹಾನ್ ವ್ಯಕ್ತಿಗಳ ಧ್ಯೇಯೋದ್ದೇಶಗಳು ಅವರ ಜೀವಿತಾವಧಿಯ ನಂತರವೂ ದೀರ್ಘಕಾಲ ಮುಂದುವರಿಯುತ್ತವೆ ಎಂಬುದರತ್ತ ಗಮನ ಸೆಳೆದ ಪ್ರಧಾನ ಮಂತ್ರಿಯವರು, 'ಚಿನ್ಮಯ ಮಿಷನ್' ಸ್ಥಾಪಿಸಿರುವ ವಿಸ್ತೃತ ಶಿಕ್ಷಣ ಜಾಲವನ್ನು ಶ್ಲಾಘಿಸಿದರು. ದೇಶಾದ್ಯಂತ 100ಕ್ಕೂ ಹೆಚ್ಚು ಚಿನ್ಮಯ ಶಿಕ್ಷಣ ಸಂಸ್ಥೆಗಳು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುತ್ತಿವೆ ಎಂದು ಅವರು ತಿಳಿಸಿದರು. "ಈ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಆಧುನಿಕ ಶಿಕ್ಷಣವನ್ನು ಪಡೆಯುವುದರ ಜೊತೆಗೆ, ಭಾರತೀಯ ಮೌಲ್ಯಗಳನ್ನು ಸಹ ಅಳವಡಿಸಿಕೊಳ್ಳುತ್ತಿದ್ದಾರೆ" ಎಂಬುದನ್ನೂ ಪ್ರಧಾನಿ ಮೋದಿ ಉಲ್ಲೇಖಿಸಿದರು.

ಸ್ವಾಮಿ ಚಿನ್ಮಯಾನಂದರಂತಹ ಚಿಂತಕರ ಸ್ವಾತಂತ್ರ್ಯೋತ್ತರ ದೂರದೃಷ್ಟಿಯನ್ನು ಇಂದಿನ ಆಡಳಿತ ವ್ಯವಸ್ಥೆಯೊಂದಿಗೆ ಅನ್ವಯಿಸುತ್ತ 'ನವ ಭಾರತ'ಕ್ಕಾಗಿ ಶಿಕ್ಷಣ ವ್ಯವಸ್ಥೆಯನ್ನು ಆಧುನೀಕರಿಸುವ  ಜವಾಬ್ದಾರಿಯನ್ನು ದೇಶವು ಸಕ್ರಿಯವಾಗಿ ನಿರ್ವಹಿಸುತ್ತಿದೆ ಎಂದು ಪ್ರಧಾನಿ ಪ್ರತಿಪಾದಿಸಿದರು. ಭಾರತೀಯ ಜ್ಞಾನ ಪರಂಪರೆ, ಮಾತೃಭಾಷೆಯಲ್ಲಿ ಶಿಕ್ಷಣ, ಹಾಗೂ ಆಧುನಿಕ ವಿಜ್ಞಾನ ಮತ್ತು ತಂತ್ರಜ್ಞಾನಗಳನ್ನು ಒಳಗೊಂಡಿರುವ 'ರಾಷ್ಟ್ರೀಯ ಶಿಕ್ಷಣ ನೀತಿ'ಯನ್ನು ಜಾರಿಗೆ ತಂದಿರುವುದನ್ನು ಅವರು ಎತ್ತಿ ತೋರಿಸಿದರು. "ಈ ಹೊಸ ಶಿಕ್ಷಣ ನೀತಿಯಲ್ಲಿ ಇವೆಲ್ಲಕ್ಕೂ ಸೂಕ್ತ ಪ್ರಾಮುಖ್ಯತೆಯನ್ನು ನೀಡಲಾಗಿದೆ" ಎಂದು ಶ್ರೀ ಮೋದಿ ಒತ್ತಿ ಹೇಳಿದರು.

ಭಾರತೀಯ ಪರಂಪರೆಯನ್ನು ಸಂರಕ್ಷಿಸಲು ಸ್ವಾಮೀಜಿಯವರು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದನ್ನು ಸ್ಮರಿಸಿದ ಪ್ರಧಾನ ಮಂತ್ರಿಯವರು, ಕನ್ಯಾಕುಮಾರಿಯ ಸಮುದ್ರದಲ್ಲಿ 'ವಿವೇಕಾನಂದ ರಾಕ್ ಮೆಮೋರಿಯಲ್' (ಸ್ಮಾರಕ) ನಿರ್ಮಿಸುವ ಏಕನಾಥ ರಾನಡೆ ಅವರ ಸಂಕಲ್ಪಕ್ಕೆ ಗುರುದೇವ್ (ಸ್ವಾಮೀಜಿ) ದೃಢ ಬೆಂಬಲ ನೀಡಿದ್ದಲ್ಲದೆ, ಆ ಯೋಜನೆಗಾಗಿ ಮೊದಲ ಆರ್ಥಿಕ ಕೊಡುಗೆಯನ್ನೂ ನೀಡಿದ್ದರು ಎಂದು ನೆನಪಿಸಿಕೊಂಡರು. ಈ ಸ್ಮಾರಕವು ಇಂದು ಜಗತ್ತಿನಾದ್ಯಂತ ಲಕ್ಷಾಂತರ ಜನರಿಗೆ ಸ್ಫೂರ್ತಿಯ ಸೆಲೆಯಾಗಿದೆ ಎಂದು ಅವರು ಹೇಳಿದರು. "ಭಾರತೀಯ ಪರಂಪರೆಯ ಬಗ್ಗೆ ಹೆಮ್ಮೆ ಪಡುವುದು ಮತ್ತು ಅದನ್ನು ಸಂರಕ್ಷಿಸುವುದು ಸ್ವಾಮೀಜಿಯವರ ಜೀವನದ ಮತ್ತೊಂದು ಧ್ಯೇಯವಾಗಿತ್ತು!" ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು.

ಉತ್ತರದಿಂದ ದಕ್ಷಿಣಕ್ಕೆ ಹಾಗೂ ಪೂರ್ವದಿಂದ ಪಶ್ಚಿಮಕ್ಕೆ ದೇಶಾದ್ಯಂತ ವ್ಯಾಪಿಸಿರುವ ಸಾಂಸ್ಕೃತಿಕ ನವಜಾಗೃತಿಯ ಬಗ್ಗೆ ವಿವರಿಸಿದ ಪ್ರಧಾನ ಮಂತ್ರಿಯವರು, ಕಾಶಿ ವಿಶ್ವನಾಥ ಧಾಮ, ಅಯೋಧ್ಯೆಯ ಶ್ರೀ ರಾಮ ಮಂದಿರ, ಉಜ್ಜಯಿನಿಯ ಮಹಾಕಾಲ್ ಮಹಾಲೋಕ, ಕೇದಾರನಾಥ ಮತ್ತು ಬದರಿನಾಥಗಳ ಭವ್ಯ ಪುನರುಜ್ಜೀವನವನ್ನು ಹಾಗೂ ಯುನೆಸ್ಕೋ (UNESCO) ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸಾಂಸ್ಕೃತಿಕ ತಾಣಗಳು ಸೇರ್ಪಡೆಗೊಂಡಿರುವುದನ್ನು ಉಲ್ಲೇಖಿಸಿದರು. ಹಿಂದೆ ಭಾರತದ ಪ್ರಾಚೀನ ಕಲಾಕೃತಿಗಳು ಕಳ್ಳತನವಾಗಿ ವಿದೇಶಗಳಲ್ಲಿ ಮಾರಾಟವಾಗುತ್ತಿದ್ದಾಗ ಅದನ್ನು ತಡೆಯಲು ಯಾವುದೇ ಪ್ರತಿರೋಧವಿರುತ್ತಿರಲಿಲ್ಲ; ಆದರೆ ಕಳೆದ ಹನ್ನೆರಡು ವರ್ಷಗಳಲ್ಲಿ ಅಂತಹ ಪರಂಪರೆಯ ವಸ್ತುಗಳನ್ನು ಮರಳಿ ತರಲಾಗಿದೆ ಎಂದು ಅವರು ಒತ್ತಿ ಹೇಳುವ ಮೂಲಕ ಅಂದಿನ ಕಾಲಘಟ್ಟ ಮತ್ತು ಇಂದಿನ ಕಾಲಘಟ್ಟವನ್ನು ತುಲನೆ ಮಾಡಿದರು. "ಕಳೆದ 12 ವರ್ಷಗಳಲ್ಲಿ, ನಾವು ಅಂತಹ ಆರು ನೂರ ಐವತ್ತಕ್ಕೂ ಹೆಚ್ಚು ಪ್ರಾಚೀನ ವಿಗ್ರಹಗಳನ್ನು ಮರಳಿ ತಂದಿದ್ದೇವೆ" ಎಂದು ಶ್ರೀ ಮೋದಿ ತಿಳಿಸಿದರು.

ಸ್ವಾಮೀಜಿಯವರು ಭಾರತೀಯ ತತ್ತ್ವಜ್ಞಾನವನ್ನು ಜಗತ್ತಿಗೆ ಪರಿಚಯಿಸಿದ್ದು ಮತ್ತು ಇಂದು ಅಂತರರಾಷ್ಟ್ರೀಯ ಯೋಗ ದಿನದ ಮೂಲಕ ಭಾರತವು ಇಡೀ ಜಗತ್ತನ್ನೇ ಒಗ್ಗೂಡಿಸುತ್ತಿರುವುದನ್ನು ಹೋಲಿಸಿದ ಪ್ರಧಾನಮಂತ್ರಿಯವರು, ತಮ್ಮ ಪರಂಪರೆಯ ಬಗ್ಗೆ ದೇಶದಲ್ಲಿ ಮೂಡಿರುವ ನವೀನ ಹೆಮ್ಮೆ ಮತ್ತು ವಸಾಹತುಶಾಹಿ ಮನಸ್ಥಿತಿಯಿಂದ ಸಿಕ್ಕಿರುವ ಮುಕ್ತಿಯು, ಪ್ರಾಚೀನ ಋಷಿಗಳು ಹಾಗೂ ದೇಶಭಕ್ತರು ಕಂಡ ಕನಸಿನ ಹಾದಿಯಲ್ಲಿಯೇ ರಾಷ್ಟ್ರವು ಮುನ್ನಡೆಯುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಪ್ರತಿಪಾದಿಸಿದರು. ಈ ಪಯಣದಲ್ಲಿ ಅವರ ಬೌದ್ಧಿಕ ಪರಂಪರೆಯೇ ದೇಶದ ಅತಿ ದೊಡ್ಡ ಶಕ್ತಿಯಾಗಿದೆ ಎಂದು ಅವರು ಒತ್ತಿ ಹೇಳಿದರು. "ನಮ್ಮ ಪರಂಪರೆಯ ಬಗ್ಗೆ ಇರುವ ಈ ಹೆಮ್ಮೆ ಮತ್ತು ಗುಲಾಮಗಿರಿಯ ಮನಸ್ಥಿತಿಯಿಂದ ಮುಕ್ತರಾಗಿರುವ ಈ ಆತ್ಮವಿಶ್ವಾಸವು, ದೇಶವು ಈಗ ಸರಿಯಾದ ಹಾದಿಯಲ್ಲಿ ಮುನ್ನಡೆಯುತ್ತಿದೆ ಎಂಬುದಕ್ಕೆ ಪುರಾವೆಯಾಗಿದೆ" ಎಂದು ಪ್ರಧಾನಮಂತ್ರಿ ಹೇಳಿದರು.

ವಿವಿಧ ಸಂಘಟನೆಗಳು ಬೇರೆ ಬೇರೆ ಗುರಿಗಳನ್ನು ಹೊಂದಿದ್ದರೂ, ಅಂತಿಮವಾಗಿ ಅವೆಲ್ಲವೂ ರಾಷ್ಟ್ರದ ಅಭಿವೃದ್ಧಿ ಮತ್ತು ವೈಭವವೆಂಬ ಒಂದೇ ಗುರಿಯತ್ತ ಸಾಗುತ್ತವೆ ಎಂದು ಹೇಳಿದ ಪ್ರಧಾನ ಮಂತ್ರಿಯವರು, ಸ್ವಾಮಿ ಚಿನ್ಮಯಾನಂದರು ತಮ್ಮ ಕಾಲದ ಸವಾಲುಗಳಿಗೆ ಅನುಗುಣವಾಗಿ ಸಂಕಲ್ಪಗಳನ್ನು ರೂಪಿಸಿಕೊಂಡಿದ್ದಂತೆಯೇ, ಇಂದಿನ ಪೀಳಿಗೆಯು ಕೂಡ ಆಧುನಿಕ ಸಮಾಜದಲ್ಲಿನ ನ್ಯೂನತೆಗಳು ಮತ್ತು ಸವಾಲುಗಳನ್ನು ಎದುರಿಸಬೇಕಿದೆ ಎಂದು ತಿಳಿಸಿದರು. ಸಮಾಜವನ್ನು ವಿಭಜಿಸುವ ಶಕ್ತಿಗಳ ವಿರುದ್ಧ ಜನರನ್ನು ಒಗ್ಗೂಡಿಸಲು, ಸ್ವಾವಲಂಬನೆಯನ್ನು ಉತ್ತೇಜಿಸಲು ಮತ್ತು ಪ್ರತಿಯೊಬ್ಬ ನಾಗರಿಕನನ್ನು '2047ರ ವಿಕಸಿತ ಭಾರತ'ದ ಗುರಿಯೊಂದಿಗೆ ಜೋಡಿಸಲು ಸಕ್ರಿಯ ಪ್ರಯತ್ನಗಳನ್ನು ನಡೆಸುವಂತೆ ಅವರು ಕರೆ ನೀಡಿದರು. "ಇಂದು ನಾವು ಸಮಾಜವನ್ನು ವಿಭಜಿಸುವ ಶಕ್ತಿಗಳ ವಿರುದ್ಧ ಒಗ್ಗೂಡಬೇಕಿದೆ" ಎಂದು ಶ್ರೀ ಮೋದಿ ದೃಢವಾಗಿ ಹೇಳಿದರು.

2047ರಲ್ಲಿ ಭಾರತದ ಸ್ವಾತಂತ್ರ್ಯದ ಶತಮಾನೋತ್ಸವ ಮತ್ತು ಚಿನ್ಮಯ ಮಿಷನ್‌ನ ಶತಮಾನೋತ್ಸವ ಅವಧಿಗಳು ಒಂದೇ ಕಾಲಘಟ್ಟದಲ್ಲಿ ಸಂಧಿಸಲಿರುವ ಐತಿಹಾಸಿಕ ಸನ್ನಿವೇಶವನ್ನು ಪ್ರಸ್ತಾಪಿಸಿದ ಪ್ರಧಾನ ಮಂತ್ರಿಯವರು, ಈ ಎರಡೂ ಪಯಣಗಳು ಒಂದೇ ಗುರಿಯನ್ನು ಹೊಂದಿವೆ ಮತ್ತು ಇವು ಒಟ್ಟಿಗೆ ಮುನ್ನಡೆಯಬೇಕು ಎಂದು ಹೇಳಿದರು. ಆಚಾರ್ಯರು, ಜಿಜ್ಞಾಸುಗಳು ಮತ್ತು ಸ್ವಯಂಸೇವಕರನ್ನು ಒಳಗೊಂಡ ಚಿನ್ಮಯ ಮಿಷನ್‌ನ ಜಾಗತಿಕ ಕುಟುಂಬವು, ಗುರುದೇವ್ ಅವರ ಪರಂಪರೆ ಹಾಗೂ ದಶಕಗಳ ಅನುಭವವನ್ನು ಬಳಸಿಕೊಂಡು 'ವಿಕಸಿತ ಭಾರತ' ನಿರ್ಮಾಣಕ್ಕೆ ಕೊಡುಗೆ ನೀಡಲಿದೆ ಎಂಬ ಸಂಪೂರ್ಣ ವಿಶ್ವಾಸವನ್ನು ವ್ಯಕ್ತಪಡಿಸಿದ ಅವರು, ಹಬ್ಬದ ಶುಭಾಶಯಗಳನ್ನು ಕೋರಿದರು. "ಅಂದರೆ, ಚಿನ್ಮಯ ಮಿಷನ್‌ನ ಶತಮಾನೋತ್ಸವದ ಪಯಣ ಮತ್ತು 'ವಿಕಸಿತ ಭಾರತ'ದ ಪಯಣಗಳು ಒಟ್ಟಿಗೆ ಮುನ್ನಡೆಯಲಿವೆ," ಎಂದು ಪ್ರಧಾನಿ ಮೋದಿ ದೃಢವಾಗಿ ನುಡಿದರು.

 

*****

 

 


(ಪ್ರಕಟಣೆ ಐ.ಡಿ.: 2327361) ವಿಸಿಟರ್ ಕೌಂಟರ್ : 28