ಕೃಷಿ ಸಚಿವಾಲಯ
azadi ka amrit mahotsav

ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದಿಂದ ನಾಳೆ ಹೊಲ ಉಳಿಸಿ ಅಭಿಯಾನ (‘ಖೇತ್ ಬಚಾವೋ ಅಭಿಯಾನ) – ರಬಿ 2026’ಕ್ಕೆ ಚಾಲನೆ; ಅಭಿಯಾನವು ನವೆಂಬರ್ 30 ರವರೆಗೆ ನಡೆಯಲಿದೆ


ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರಿಂದ ಹರಿಯಾಣದ ಕರ್ನಾಲ್ ನಿಂದ ಅಭಿಯಾನಕ್ಕೆ ಚಾಲನೆ

ಸಮತೋಲಿತ ರಸಗೊಬ್ಬರ ಬಳಕೆ, ಬೆಳೆ ವೈವಿಧ್ಯೀಕರಣ ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸಲು ‘ಖೇತ್ ಬಚಾವೋ ಅಭಿಯಾನ – ರಬಿ 2026’

ಎಲ್ಲಾ ಆಡಳಿತಾತ್ಮಕ ಹಂತಗಳಲ್ಲಿ ರೈತರ ಸಮಾವೇಶಗಳು, ಕಿಸಾನ್ ಚೌಪಾಲ್ ಗಳು, ತರಬೇತಿ ಶಿಬಿರಗಳು ಮತ್ತು ಕ್ಷೇತ್ರ ಪ್ರಾತ್ಯಕ್ಷಿಕೆಗಳ ಆಯೋಜನೆ

ಪ್ರಕಟಣಾ ದಿನಾಂಕ: 21 OCT 2026 6:56PM by PIB Bengaluru

ಸುಸ್ಥಿರ ಕೃಷಿಯನ್ನು ಉತ್ತೇಜಿಸಲು, ಮಣ್ಣಿನ ಆರೋಗ್ಯವನ್ನು ಸುಧಾರಿಸಲು ಮತ್ತು ಕೃಷಿ ಸಂಪನ್ಮೂಲಗಳ ವಿವೇಚನಾಯುಕ್ತ ಬಳಕೆಯನ್ನು ಉತ್ತೇಜಿಸಲು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಅಕ್ಟೋಬರ್ 22 ರಿಂದ ನವೆಂಬರ್ 30, 2026 ರವರೆಗೆ ದೇಶಾದ್ಯಂತ ʻಹೊಲ ಉಳಿಸಿ ಅಭಿಯಾನ (ಖೇತ್ ಬಚಾವೋ ಅಭಿಯಾನ) - ರಬಿ 2026’ ಅನ್ನು ಪ್ರಾರಂಭಿಸಲಿದೆ. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಹರಿಯಾಣದ ಕರ್ನಾಲ್ನಿಂದ ಈ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.

ಮಣ್ಣಿನ ಪರೀಕ್ಷೆಯ ಆಧಾರದ ಮೇಲೆ ರಸಗೊಬ್ಬರಗಳು ಮತ್ತು ಇತರ ಕೃಷಿಗೆ ಪೂರೈಕೆಗಳ ಸಮತೋಲಿತ ಹಾಗೂ ವಿವೇಚನಾಯುಕ್ತ ಬಳಕೆಯ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಇದು ಎಣ್ಣೆಕಾಳು, ಬೇಳೆಕಾಳು ಮತ್ತು ತೋಟಗಾರಿಕೆ ಮಿಷನ್ಗಳ ಮೂಲಕ ಬೆಳೆ ವೈವಿಧ್ಯೀಕರಣವನ್ನು ಉತ್ತೇಜಿಸುತ್ತದೆ. ಭತ್ತದ ಕೊಯ್ಲಿನ ನಂತರ ಖಾಲಿ ಬಿಡುವ ಜಮೀನುಗಳ ಪರಿಣಾಮಕಾರಿ ಬಳಕೆ ಮತ್ತು ಸರಿಯಾದ ಬೆಳೆ ತ್ಯಾಜ್ಯ ನಿರ್ವಹಣೆಯನ್ನು ಪ್ರೋತ್ಸಾಹಿಸುತ್ತದೆ. ಜಾಗೃತಿ ಕಾರ್ಯಕ್ರಮಗಳು, ತರಬೇತಿ ಶಿಬಿರಗಳು ಮತ್ತು ಕ್ಷೇತ್ರ ಪ್ರಾತ್ಯಕ್ಷಿಕೆಗಳ ಮೂಲಕ ರೈತರಿಗೆ ಸಾವಯವ ಹಾಗೂ ಜೈವಿಕ ಆಧಾರಿತ ಕೃಷಿ ಉತ್ಪನ್ನಗಳ ಸರಿಯಾದ ಬಳಕೆಯ ಬಗ್ಗೆ ತರಬೇತಿ ನೀಡುವುದು ಮತ್ತು ನೈಸರ್ಗಿಕ ಕೃಷಿಯನ್ನು ಉತ್ತೇಜಿಸುವುದರ ಮೇಲೆಯೂ ಈ ಅಭಿಯಾನವು ಗಮನಹರಿಸಲಿದೆ. ಜೊತೆಗೆ, ಇದು ನೀರು ಸಂರಕ್ಷಣೆ, ಮಳೆನೀರು ಕೊಯ್ಲು ಮತ್ತು ಅಂತರ್ಜಲ ಮರುಪೂರಣಕ್ಕೆ ಒತ್ತು ನೀಡಲಿದ್ದು, ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸಲು ಮತ್ತು ಕೃಷಿಯ ದೀರ್ಘಕಾಲೀನ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಸುಸ್ಥಿರ ಕೃಷಿ ಪದ್ಧತಿಗಳನ್ನು ಪ್ರೋತ್ಸಾಹಿಸುತ್ತದೆ.

ಈ ಅಭಿಯಾನವು ಮಣ್ಣಿನ ಆರೋಗ್ಯವನ್ನು ಸುಧಾರಿಸುವುದು, ರಸಗೊಬ್ಬರಗಳು ಮತ್ತು ಇತರ ಕೃಷಿಗೆ ಪೂರೈಸುವ ವಸ್ತುಗಳ   ಸಮತೋಲಿತ ಬಳಕೆಯನ್ನು ಉತ್ತೇಜಿಸುವುದು, ನೀರಿನ ಬಳಕೆಯ ದಕ್ಷತೆಯನ್ನು ಹೆಚ್ಚಿಸುವುದು ಮತ್ತು ಸಂಪನ್ಮೂಲವನ್ನು ದಕ್ಷತೆಯಿಂದ ಬಳಸುವ ಹಾಗೂ ಹವಾಮಾನ ಹೊಂದಾಣಿಕೆಯ ಕೃಷಿ ಪದ್ಧತಿಗಳ ಅಳವಡಿಕೆಯನ್ನು ಪ್ರೋತ್ಸಾಹಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಹಸಿರು ಅಮೋನಿಯಾಮತ್ತು ಜೈವಿಕ ಉತ್ಪನ್ನಗಳು ಸೇರಿದಂತೆ ರಸಗೊಬ್ಬರಗಳ ಸೂಕ್ತ ಬಳಕೆ; ನೀರ ಸಂರಕ್ಷಣೆ; ಸೂಕ್ತ ಬೆಳೆಗಳು ಮತ್ತು ತಳಿಗಳೊಂದಿಗೆ ಬೆಳೆ ವೈವಿಧ್ಯೀಕರಣ ಮತ್ತು ಅಂತರಬೆಳೆ ಪದ್ಧತಿ; ಭತ್ತದ ಬೀಳು ಜಮೀನುಗಳ ಪರಿಣಾಮಕಾರಿ ಬಳಕೆ; ನೈಸರ್ಗಿಕ ಕೃಷಿ; ಮತ್ತು ಸಮಗ್ರ ಕೃಷಿ ಪದ್ಧತಿಗಳ ಬಗ್ಗೆ ಜಾಗೃತಿ ಮೂಡಿಸಲು ವಿಶೇಷ ಒತ್ತು ನೀಡಲಾಗುವುದು. ಸಾಮರ್ಥ್ಯ ವೃದ್ಧಿ, ಕೃಷಿ ಯಾಂತ್ರೀಕರಣ ಮತ್ತು ಪುನರುತ್ಪಾದಕ ಕೃಷಿ ಪದ್ಧತಿಗಳು ಸೇರಿದಂತೆ ಸುಧಾರಿತ ತಂತ್ರಜ್ಞಾನಗಳ ಕ್ಷೇತ್ರ ಪ್ರಾತ್ಯಕ್ಷಿಕೆಗಳು ಕೂಡ ಈ ಅಭಿಯಾನದ ಪ್ರಮುಖ ಅಂಶಗಳಾಗಿರುತ್ತವೆ.

ಬೆಳೆ ತ್ಯಾಜ್ಯ ನಿರ್ವಹಣೆ, ಸಮಗ್ರ ಕೀಟ ನಿರ್ವಹಣೆ, ಮಣ್ಣಿನ ಆರೋಗ್ಯ ನಿರ್ವಹಣೆ, ಹವಾಮಾನ-ಸ್ಥಿತಿಸ್ಥಾಪಕ ಕೃಷಿ, ಎಣ್ಣೆಕಾಳುಗಳು ಮತ್ತು ಬೇಳೆಕಾಳುಗಳ ಪ್ರಚಾರ ಹಾಗೂ ಬಿತ್ತನೆ ಬೀಜ ವಿತರಣೆ ಈ ಅಭಿಯಾನದ ಪ್ರಮುಖ ವಿಷಯಗಳಾಗಿವೆ. ಈ ಅಭಿಯಾನವು ರೈತರ ಗುರುತಿನ ಚೀಟಿಗಳ  ರಚನೆಗೆ ಅನುಕೂಲ ಮಾಡಿಕೊಡಲಿದೆ, ಪ್ರಧಾನ್ ಮಂತ್ರಿ ಫಸಲ್ ಭೀಮಾ ಯೋಜನೆ (ಪಿಎಂಎಫ್ ಬಿ ವೈ) ಅಡಿಯಲ್ಲಿ ಬೆಳೆ ವಿಮೆಯ ಬಗ್ಗೆ ಜಾಗೃತಿ ಮೂಡಿಸಲಿದೆ, ಗರಿಷ್ಠ ಮಟ್ಟಕ್ಕೆ ವಿಸ್ತರಿಸುವ ಪ್ರಯತ್ನಗಳ ಮೂಲಕ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಯೋಜನೆಯಡಿ ಹೆಚ್ಚಿನವರನ್ನು ತರಲಿದೆ ಮತ್ತು ವ್ಯಾಪಾರ ಒಪ್ಪಂದಗಳಿಂದ ದೊರೆಯುವ ಪ್ರಯೋಜನಗಳು ಹಾಗೂ ಅವಕಾಶಗಳ ಕುರಿತು ಮಾಹಿತಿಯನ್ನು ಪ್ರಸಾರ ಮಾಡಲಿದೆ.

ಅಭಿಯಾನದ ಭಾಗವಾಗಿ ರಾಜ್ಯ, ಜಿಲ್ಲೆ, ಬ್ಲಾಕ್ ಮತ್ತು ಗ್ರಾಮ ಪಂಚಾಯತಿ ಹಂತಗಳಲ್ಲಿ ಜಾಗೃತಿ ಕಾರ್ಯಕ್ರಮಗಳು, ರೈತರ ಸಮಾವೇಶಗಳು, ಕಿಸಾನ್ ಚೌಪಾಲ್ ಗಳು, ತರಬೇತಿ ಶಿಬಿರಗಳು ಮತ್ತು ಕ್ಷೇತ್ರ ಪ್ರಾತ್ಯಕ್ಷಿಕೆಗಳನ್ನು ಆಯೋಜಿಸಲಾಗುವುದು. ಕೃಷಿ ವಿಜ್ಞಾನಿಗಳು, ಎಟಿಎಂಎ ಸಿಬ್ಬಂದಿ, ರೈತ ಉತ್ಪಾದಕ ಸಂಸ್ಥೆಗಳು (ಎಫ್ ಪಿ ಒಗಳು), ಸಹಕಾರ ಸಂಘಗಳು, ಸ್ವಸಹಾಯ ಸಂಘಗಳು (ಎಸ್ ಎಚ್ ಜಿ) ಮತ್ತು ಪ್ರಗತಿಪರ ರೈತರ ಸಕ್ರಿಯ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಕೃಷಿ ಇಲಾಖೆಗಳು, ಕೃಷಿ ವಿಜ್ಞಾನ ಕೇಂದ್ರಗಳು (ಕೆವಿಕೆ), ಐಸಿಎಆರ್ ಸಂಸ್ಥೆಗಳು, ರಾಜ್ಯ ಕೃಷಿ ವಿಶ್ವವಿದ್ಯಾಲಯಗಳು ಮತ್ತು ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆಗಳು (ಎಟಿಎಂಎ) ಜಂಟಿಯಾಗಿ ಸಹಕರಿಸಲಿವೆ. ಸ್ಥಳೀಯ ಭಾಷೆಯ ಸಾಮಗ್ರಿಗಳು, ರೇಡಿಯೋ, ದೂರದರ್ಶನ, ಸಾಮಾಜಿಕ ಜಾಲತಾಣಗಳು ಮತ್ತು ಇತರ ಐಇಸಿ ಚಟುವಟಿಕೆಗಳ ಮೂಲಕ ಪ್ರಚಾರ ನೀಡಿ ರೈತರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲಾಗುವುದು.

ಈ ಅಭಿಯಾನವು ಎಟಿಎಂಎ ಮತ್ತು ಐಸಿಎಆರ್ ಮೂಲಕ ಸುಮಾರು ಒಂದು ಕೋಟಿ ಜನರನ್ನು ತಲುಪುವ ಗುರಿಯನ್ನು ಹೊಂದಿದೆ. ಕೆವಿಕೆಗಳು ಮತ್ತು ಎಟಿಎಂಎ ಒಳಗೊಂಡ ಒಟ್ಟು 4,150 ತಂಡಗಳನ್ನು ರೂಪಿಸಲು ಉದ್ದೇಶಿಸಲಾಗಿದ್ದು, 12,000 ಕ್ಕೂ ಹೆಚ್ಚು ವಿಜ್ಞಾನಿಗಳು ಮತ್ತು ಎಟಿಎಂಎ  ಸಿಬ್ಬಂದಿ ಈ ಅಭಿಯಾನಕ್ಕೆ ಕೊಡುಗೆ ನೀಡಲಿದ್ದಾರೆ.

ಅಭಿಯಾನದ ಪರಿಣಾಮಕಾರಿ ಅನುಷ್ಠಾನ ಮತ್ತು ನಿಯಮಿತ ಮೇಲ್ವಿಚಾರಣೆಯನ್ನು ಖಚಿತಪಡಿಸಿಕೊಳ್ಳಲು ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯು ರಾಜ್ಯ ಸರ್ಕಾರಗಳು, ಐಸಿಎಆರ್ ಸಂಸ್ಥೆಗಳು ಮತ್ತು ಇತರ ಪಾಲುದಾರರೊಂದಿಗೆ ಸಮನ್ವಯ ಸಾಧಿಸಲಿದೆ. ರೈತರ ಭಾಗವಹಿಸುವಿಕೆ ಮತ್ತು ಸುಸ್ಥಿರ ಕೃಷಿ ಪದ್ಧತಿಗಳ ಅಳವಡಿಕೆಗೆ ವಿಶೇಷ ಒತ್ತು ನೀಡಲಾಗುವುದು.

ʻಹೊಲ ಉಳಿಸಿ ಅಭಿಯಾನ (ಖೇತ್ ಬಚಾವೋ ಅಭಿಯಾನ) - ರಬಿ 2026’ರ ಮೂಲಕ ಸರ್ಕಾರವು ಮಣ್ಣು ಮತ್ತು ನೀರು ಸಂರಕ್ಷಣೆಯನ್ನು ಬಲಪಡಿಸಲು, ದಕ್ಷ ಹಾಗೂ ವೆಚ್ಚ-ಪರಿಣಾಮಕಾರಿ ಕೃಷಿ ಪದ್ಧತಿಗಳನ್ನು ಉತ್ತೇಜಿಸಲು, ಕೃಷಿ ಸುಸ್ಥಿರತೆಯನ್ನು ಸುಧಾರಿಸಲು ಮತ್ತು ರೈತರ ದೀರ್ಘಕಾಲೀನ ಸಮೃದ್ಧಿ ಹಾಗೂ ವಿಕಸಿತ ಭಾರತದ ದೂರದೃಷ್ಟಿಗೆ ಕೊಡುಗೆ ನೀಡಲು ಶ್ರಮಿಸುತ್ತಿದೆ.

 

*****


(ಪ್ರಕಟಣೆ ಐ.ಡಿ.: 2326468) ವಿಸಿಟರ್ ಕೌಂಟರ್ : 10
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Assamese , Punjabi , Gujarati