ಅಂಕಿಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ
ವಿಕಸಿತ ಭಾರತ @ 2047 ಸಾಧಿಸಲು ಬಲಿಷ್ಠ ಸಾಂಖ್ಯಿಕ ವ್ಯವಸ್ಥೆಗಳು ಮುಖ್ಯ: ಡಾ. ಪಿ.ಕೆ. ಮಿಶ್ರಾ
"ನಮ್ಮ ಸಾಂಖ್ಯಿಕ ವಿನ್ಯಾಸವು ನಮ್ಮ ರಾಷ್ಟ್ರೀಯ ಆಕಾಂಕ್ಷೆಗಳಷ್ಟೇ ಆಧುನಿಕ ಮತ್ತು ಮಹತ್ವಾಕಾಂಕ್ಷೆಯದ್ದಾಗಿರಬೇಕು”: ಡಾ. ಪಿ.ಕೆ. ಮಿಶ್ರಾ
"ನಮ್ಮ ದತ್ತಾಂಶದ ಗುಣಮಟ್ಟವು ನಮ್ಮ ನಿರ್ಧಾರಗಳು ಮತ್ತು ಅಭಿವೃದ್ಧಿ ಫಲಿತಾಂಶಗಳ ಗುಣಮಟ್ಟದ ಮೇಲೆ ಪ್ರಭಾವ ಬೀರುತ್ತದೆ”: ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿ
"ಅಂಕಿಅಂಶಗಳು ಕೇವಲ ಆಡಳಿತಾತ್ಮಕ ಅವಶ್ಯಕತೆಯಲ್ಲ, ಬದಲಾಗಿ ಅದೊಂದು ಆಯಕಟ್ಟಿನ ರಾಷ್ಟ್ರೀಯ ಆಸ್ತಿ”: ಡಾ. ಪಿ.ಕೆ. ಮಿಶ್ರಾ
ಕೃತಕ ಬುದ್ಧಿಮತ್ತೆ (ಎಐ) ಮತ್ತು ಸುಧಾರಿತ ವಿಶ್ಲೇಷಣೆಗಳು ಅಧಿಕೃತ ಅಂಕಿಅಂಶಗಳನ್ನು ಬಲಪಡಿಸಬಲ್ಲವು, ಆದರೆ ಅವು ಅಂಕಿಅಂಶಗಳ ಗುಣಮಟ್ಟಕ್ಕೆ ಪರ್ಯಾಯವಾಗಲು ಸಾಧ್ಯವಿಲ್ಲ: ಡಾ. ಪಿ.ಕೆ. ಮಿಶ್ರಾ
ʻಎಂಒಎಸ್‌ಪಿಐʼ ಆಯೋಜಿಸಿದ್ದ ರಾಜ್ಯಗಳ ಯೋಜನಾ, ಹಣಕಾಸು ಮತ್ತು ಐಟಿ ಕಾರ್ಯದರ್ಶಿಗಳ ಸಮ್ಮೇಳನದಲ್ಲಿ ಡಾ. ಪಿ.ಕೆ. ಮಿಶ್ರಾ ಅವರ ಪ್ರಧಾನ ಭಾಷಣ
ಪ್ರಕಟಣಾ ದಿನಾಂಕ:
13 OCT 2026 12:40PM by PIB Bengaluru
ಪ್ರಧಾನಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ ಡಾ.ಪಿ.ಕೆ.ಮಿಶ್ರಾ ಅವರು ಇಂದು ನವದೆಹಲಿಯಲ್ಲಿ ಅಂಕಿ-ಅಂಶ ಮತ್ತು ಯೋಜನಾ ಅನುಷ್ಠಾನ ಸಚಿವಾಲಯ (ಎಂಒಎಸ್‌ಪಿಐ) ಆಯೋಜಿಸಿದ್ದ ರಾಜ್ಯ ಯೋಜನೆ, ಹಣಕಾಸು ಮತ್ತು ಐಟಿ ಕಾರ್ಯದರ್ಶಿಗಳ ಸಮ್ಮೇಳನದ ಉದ್ಘಾಟನಾ ಅಧಿವೇಶನದಲ್ಲಿ ಪ್ರಧಾನ ಭಾಷಣ ಮಾಡಿದರು. ವಿಶ್ವಾಸಾರ್ಹ ಅಂಕಿ-ಅಂಶಗಳು, ದತ್ತಾಂಶ ಸಾಮರಸ್ಯ ಮತ್ತು ತಂತ್ರಜ್ಞಾನ-ಸಶಕ್ತ ಆಡಳಿತದ ಮಹತ್ವವನ್ನು ಒತ್ತಿ ಹೇಳಿದ ಅವರು, ಸಾಕ್ಷ್ಯಾಧಾರಿತ ನೀತಿ ನಿರೂಪಣೆ ಮತ್ತು ವಿಕಸಿತ ಭಾರತ @ 2047 ದೃಷ್ಟಿಕೋನವನ್ನು ಸಾಧಿಸಲು ದೃಢವಾದ ಸಾಂಖ್ಯಿಕ ವ್ಯವಸ್ಥೆಯು ಅತ್ಯಗತ್ಯ ಎಂದು ಹೇಳಿದರು.
ಅಂಕಿ-ಅಂಶಗಳು, ದತ್ತಾಂಶ, ತಂತ್ರಜ್ಞಾನ, ಯೋಜನೆ ಮತ್ತು ಆಡಳಿತವು ಭಾರತದ ಅಭಿವೃದ್ಧಿ ಪಯಣದ ಪರಸ್ಪರ ಸಂಪರ್ಕಿತ ಅಂಶಗಳಾಗಿವೆ ಎಂದು ಡಾ. ಮಿಶ್ರಾ ಹೇಳಿದರು. ದೃಢವಾದ ಸಾಂಖ್ಯಿಕ ವ್ಯವಸ್ಥೆಯು ರಾಜ್ಯಗಳು ಮತ್ತು ಜಿಲ್ಲೆಗಳಾದ್ಯಂತ ಅಭಿವೃದ್ಧಿಯ ಪ್ರಗತಿಯನ್ನು ಅಳೆಯಲು, ನೀತಿ ಫಲಿತಾಂಶಗಳನ್ನು ನಿರ್ಣಯಿಸಲು, ಅಂತರಗಳನ್ನು ಗುರುತಿಸಲು ಮತ್ತು ಸಾರ್ವಜನಿಕ ಸಂಪನ್ಮೂಲಗಳು ಉದ್ದೇಶಿತ ಫಲಿತಾಂಶಗಳನ್ನು ನೀಡುತ್ತದೆ ಎಂದು ಖಚಿತಪಡಿಸಿಕೊಳ್ಳಲು ಸರ್ಕಾರಗಳಿಗೆ ಅನುವು ಮಾಡಿಕೊಡಬೇಕು ಎಂದು ಅವರು ಹೇಳಿದರು. "ಯಾವುದನ್ನು ಅಳೆಯಲು ಸಾಧ್ಯವಿಲ್ಲವೋ ಅದನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಿಲ್ಲ. ಮತ್ತು ಯಾವುದನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಿಲ್ಲವೋ ಅದನ್ನು ಸುಸ್ಥಿರವಾಗಿ ಪರಿವರ್ತಿಸಲು ಸಾಧ್ಯವಿಲ್ಲ" ಎಂದು ಅವರು ಗಮನಸೆಳೆದರು.
ಆರ್ಥಿಕ ಮಾಪನವನ್ನು ಆಧುನೀಕರಿಸುವ ಅಗತ್ಯವನ್ನು ಒತ್ತಿ ಹೇಳಿದ ಡಾ.ಮಿಶ್ರಾ, ಭಾರತದ ಸಾಂಖ್ಯಿಕ ವ್ಯವಸ್ಥೆಗಳು ಹೆಚ್ಚು ಡಿಜಿಟಲ್, ಔಪಚಾರಿಕ ಮತ್ತು ಪರಸ್ಪರ ಸಂಪರ್ಕ ಹೊಂದಿದ ಆರ್ಥಿಕತೆಯೊಂದಿಗೆ ವಿಕಸನಗೊಳ್ಳಬೇಕು ಎಂದು ಹೇಳಿದರು. ಬದಲಾಗುತ್ತಿರುವ ಆರ್ಥಿಕ ವಾಸ್ತವಗಳಿಗೆ ಅನುಗುಣವಾಗಿ ಸಾಂಖ್ಯಿಕ ವಿಧಾನಗಳನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ, 2022-23 ಅನ್ನು ಮೂಲ ವರ್ಷವನ್ನಾಗಿ ಹೊಂದಿರುವ ಹೊಸ ರಾಷ್ಟ್ರೀಯ ಲೆಕ್ಕಪತ್ರ ಸರಣಿಯ ಪರಿಚಯದ ಜೊತೆಗೆ ನವೀಕರಿಸಿದ ಗ್ರಾಹಕ ಬೆಲೆ ಸೂಚ್ಯಂಕ (CPI) ಮತ್ತು ಕೈಗಾರಿಕಾ ಉತ್ಪಾದನಾ ಸೂಚ್ಯಂಕ (ಐಐಪಿ) ಸರಣಿಗಳನ್ನು ಅಳವಡಿಸಿರುವುದು ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಅವರು ತಿಳಿಸಿದರು..
ರಾಜ್ಯಗಳ ಸಾಂಖ್ಯಿಕ ವ್ಯವಸ್ಥೆಗಳ ಮಹತ್ವವನ್ನು ಒತ್ತಿಹೇಳಿದ ಡಾ. ಮಿಶ್ರಾ, ಭಾರತದ ಅಭಿವೃದ್ಧಿಯ ಕಥೆಯು ಮೂಲಭೂತವಾಗಿ ಅದರ ರಾಜ್ಯಗಳ ಕಥೆಯಾಗಿದೆ; ಎಲ್ಲಿ ನೀತಿಗಳನ್ನು ಜಾರಿಗೆ ತರಲಾಗುತ್ತದೆಯೋ, ಆರ್ಥಿಕ ಚಟುವಟಿಕೆಗಳು ನಡೆಯುತ್ತವೆಯೋ ಮತ್ತು ನಾಗರಿಕರು ಅಭಿವೃದ್ಧಿಯ ಫಲಿತಾಂಶಗಳನ್ನು ಅನುಭವಿಸುತ್ತಾರೆಯೋ ಅಲ್ಲಿ ರಾಜ್ಯಗಳ ಪಾತ್ರ ಪ್ರಮುಖವಾಗಿದೆ ಎಂದು ಹೇಳಿದರು. ಅಧಿಕೃತ ಅಂಕಿ-ಅಂಶಗಳ ಗುಣಮಟ್ಟವನ್ನು ಸುಧಾರಿಸಲು ಬಲವಾದ ಸಾಂಸ್ಥಿಕ ಸಾಮರ್ಥ್ಯ ಮತ್ತು ಕೇಂದ್ರ-ರಾಜ್ಯಗಳ ನಡುವೆ ನಿಕಟ ಸಮನ್ವಯತೆಯ ಅಗತ್ಯವಿದೆ ಎಂದು ಅವರು ಕರೆ ನೀಡಿದರು.
ಕೃತಕ ಬುದ್ಧಿಮತ್ತೆ (ಎಐ), ಯಂತ್ರ ಕಲಿಕೆ (ಮಷಿನ್ ಲರ್ನಿಂಗ್) ಜಿಯೋಸ್ಪೇಷಿಯಲ್ ವ್ಯವಸ್ಥೆಗಳು, ಉಪಗ್ರಹ ಚಿತ್ರಣ ಮತ್ತು ಸುಧಾರಿತ ವಿಶ್ಲೇಷಣೆಗಳು ಅಧಿಕೃತ ಅಂಕಿ-ಅಂಶಗಳ ಸಕಾಲಿಕತೆ, ನಿಖರತೆ ಮತ್ತು ಉಪಯುಕ್ತತೆಯನ್ನು ಸುಧಾರಿಸಲು ಗಮನಾರ್ಹ ಅವಕಾಶಗಳನ್ನು ನೀಡುತ್ತವೆ ಎಂದು ಡಾ. ಮಿಶ್ರಾ ಹೇಳಿದರು. ಆದಾಗ್ಯೂ, ಸಾಂಖ್ಯಿಕ ಗುಣಮಟ್ಟ, ಪಾರದರ್ಶಕತೆ, ಗೌಪ್ಯತೆ, ಭದ್ರತೆ ಮತ್ತು ಹೊಣೆಗಾರಿಕೆಗಳು ತಾಂತ್ರಿಕ ಪ್ರಗತಿಯ ಮಾರ್ಗದರ್ಶಕಗಳಾಗಿರಬೇಕು ಎಂದು ಎಚ್ಚರಿಸಿದರು. "ನಿಖರತೆಯನ್ನು ಬಲಿಕೊಟ್ಟು ವೇಗವನ್ನು ಪಡೆಯಲಾಗದು. ಹಾಗೆಯೇ ದತ್ತಾಂಶದ ಹೆಚ್ಚಿನ ಬಳಕೆಯು ಗೌಪ್ಯತೆಗೆ ಧಕ್ಕೆಯಾಗುವಂತಿರಬಾರದು," ಎಂದು ಅವರು ಪ್ರತಿಪಾದಿಸಿದರು.
ಡಾ. ಮಿಶ್ರಾ ಅವರು ಅಂಕಿಅಂಶಗಳನ್ನು ಸಹಕಾರಿ ಒಕ್ಕೂಟ ವ್ಯವಸ್ಥೆಯ ಪ್ರಮುಖ ಸಾಧನವೆಂದು ಬಣ್ಣಿಸಿದರು. ಇದು ರಾಜ್ಯಗಳು ಮತ್ತು ಕೇಂದ್ರಕ್ಕೆ ಫಲಿತಾಂಶಗಳನ್ನು ಹೋಲಿಸಲು, ಉತ್ತಮ ಅಭ್ಯಾಸಗಳನ್ನು ಗುರುತಿಸಲು ಮತ್ತು ಪ್ರಾದೇಶಿಕ ವ್ಯತ್ಯಾಸಗಳಿಂದ ಕಲಿಯಲು ಅನುವು ಮಾಡಿಕೊಡುತ್ತದೆ ಎಂದರು. ಭಾರತವು 2047 ರತ್ತ ಸಾಗುತ್ತಿರುವಾಗ, ಕೇವಲ ರಾಷ್ಟ್ರೀಯ ಸರಾಸರಿಗಳು ಮಾತ್ರ ಸಾಕಾಗುವುದಿಲ್ಲ; ಅಭಿವೃದ್ಧಿಯ ಅಂತರವನ್ನು ಗುರುತಿಸಲು ಮತ್ತು ಸೂಕ್ತ ಮಧ್ಯಸ್ಥಿಕೆಗಳಿಗೆ ಮಾರ್ಗದರ್ಶನ ನೀಡಲು ರಾಜ್ಯ, ಜಿಲ್ಲೆ ಮತ್ತು ಸ್ಥಳೀಯ ಮಟ್ಟದಲ್ಲಿ ಸೂಕ್ಷ್ಮ ದತ್ತಾಂಶಗಳು ಹೆಚ್ಚಾಗಿ ಅಗತ್ಯವಿರುತ್ತದೆ ಎಂದು ಅವರು ಹೇಳಿದರು.
ತಮ್ಮ ಭಾಷಣದ ಮುಕ್ತಾಯದಲ್ಲಿ ಡಾ. ಮಿಶ್ರಾ ಅವರು, ʻಎಂಒಎಸ್‌ಪಿಐʼ, ರಾಜ್ಯಗಳ ಸಾಂಖ್ಯಿಕ ಕಚೇರಿಗಳು, ಹಣಕಾಸು, ಯೋಜನೆ ಮತ್ತು ಐಟಿ ಇಲಾಖೆಗಳು, ನೀತಿ ಆಯೋಗ, ಶೈಕ್ಷಣಿಕ ಸಂಸ್ಥೆಗಳು ಮತ್ತು ಇತರ ಪಾಲುದಾರರನ್ನೊಳಗೊಂಡ ಸಾಮೂಹಿಕ ರಾಷ್ಟ್ರೀಯ ಪ್ರಯತ್ನಕ್ಕೆ ಕರೆ ನೀಡಿದರು. ಭಾರತಕ್ಕೆ ವಿಶ್ವಾಸಾರ್ಹ, ಪಾರದರ್ಶಕ, ತಂತ್ರಜ್ಞಾನ-ಚಾಲಿತ, ಪರಸ್ಪರ ಕಾರ್ಯನಿರ್ವಹಿಸಬಲ್ಲ ಮತ್ತು ನೀತಿ-ಸಂಬಂಧಿತವಾದ ಸಾಂಖ್ಯಿಕ ವಿನ್ಯಾಸದ ಅಗತ್ಯವಿದೆ ಎಂದು ಅವರು ಹೇಳಿದರು. ಅಂತಹ ವ್ಯವಸ್ಥೆಯು ಭಾರತದ ರೂಪಾಂತರವನ್ನು ಕೇವಲ ಅಳೆಯುವುದಷ್ಟೇ ಅಲ್ಲದೆ, ವಿಕಸಿತ ಭಾರತ @ 2047ರ ಕಡೆಗೆ ಮಾರ್ಗದರ್ಶನ ನೀಡಲು ಮತ್ತು ಅದನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
*****
(ಪ್ರಕಟಣೆ ಐ.ಡಿ.: 2322689)
ವಿಸಿಟರ್ ಕೌಂಟರ್ : 28