ರಕ್ಷಣಾ ಸಚಿವಾಲಯ
azadi ka amrit mahotsav

ರಕ್ಷಣಾ ಸಚಿವರು ಹಾಗೂ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರ ಉಪಸ್ಥಿತಿಯಲ್ಲಿ ಸಶಸ್ತ್ರ ಪಡೆಗಳಿಗಾಗಿ ‘ಭಾರತ್ ಅಕ್ಕಿ’ಯನ್ನು ಬಿಡುಗಡೆ ಮಾಡಿದ ಭಾರತೀಯ ಸೇನೆ


ಲಡಾಖ್ ಮತ್ತು ಈಶಾನ್ಯ ಭಾರತ ಸೇರಿದಂತೆ ಸೇನೆಯ ಪೂರೈಕೆ ಡಿಪೋಗಳಿಗೆ ಉತ್ತಮ ಗುಣಮಟ್ಟದ ಈ ಅಕ್ಕಿಯನ್ನು ನೇರವಾಗಿ ತಲುಪಿಸಲಾಗುವುದು

ಕಾರ್ಯಾಚರಣೆಯ ತುರ್ತು ಸಂದರ್ಭಗಳಲ್ಲಿ ಭಾರತೀಯ ಆಹಾರ ನಿಗಮದ ಗೋದಾಮುಗಳು, ಮಾನವ ಸಂಪನ್ಮೂಲ ಮತ್ತು ಸರಕು ನಿರ್ವಹಣಾ ಸೌಲಭ್ಯಗಳನ್ನು ಬಳಸಿಕೊಳ್ಳಲು ಭಾರತೀಯ ಸೇನೆ ಹಾಗೂ ಭಾರತೀಯ ಆಹಾರ ನಿಗಮದ ನಡುವೆ ತಿಳುವಳಿಕೆ ಒಪ್ಪಂದಕ್ಕೆ ಸಹಿ

ರೈತರ ಪರಿಶ್ರಮವು ಸೈನಿಕರ ಶಕ್ತಿಯಾಗಿ ರೂಪುಗೊಳ್ಳುವ ಸಾಮೂಹಿಕ ಸಂಕಲ್ಪವನ್ನು ಈ ಉಪಕ್ರಮವು ಪ್ರತಿಬಿಂಬಿಸುತ್ತದೆ: ಶ್ರೀ ರಾಜನಾಥ್ ಸಿಂಗ್

“ಸ್ಥಿತಿಸ್ಥಾಪಕ ಪೂರೈಕೆ ಸರಪಳಿಗಳು ಮತ್ತು ಸೈನಿಕರ ಕಲ್ಯಾಣವು ರಾಷ್ಟ್ರೀಯ ಭದ್ರತೆಯ ಅವಿಭಾಜ್ಯ ಅಂಗಗಳಾಗಿವೆ”

“ಆಪರೇಷನ್ ಸಿಂದೂರ್ ಮಿಲಿಟರಿ ಕಾರ್ಯಾಚರಣೆಗಳನ್ನು ಮುಂದುವರಿಸಲು ಬಲವಾದ ಲಾಜಿಸ್ಟಿಕ್ಸ್ ಸರಪಳಿಗಳ ಅಗತ್ಯವನ್ನು ಉಲ್ಲೇಖಿಸಿದೆ”‌

ಪ್ರಕಟಣಾ ದಿನಾಂಕ: 12 OCT 2026 1:01PM by PIB Bengaluru

2026ರ ಅಕ್ಟೋಬರ್ 12ರಂದು ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಮತ್ತು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರ ಉಪಸ್ಥಿತಿಯಲ್ಲಿ ಭಾರತೀಯ ಸೇನೆಯು ಸಶಸ್ತ್ರ ಪಡೆಗಳಿಗಾಗಿ ‘ಭಾರತ್ ಅಕ್ಕಿ’ಯನ್ನು ಬಿಡುಗಡೆ ಮಾಡಿತು. ಈ ಸಂದರ್ಭದಲ್ಲಿ, ಕಾರ್ಯಾಚರಣೆಯ ತುರ್ತು ಸಂದರ್ಭಗಳಲ್ಲಿ ಭಾರತೀಯ ಆಹಾರ ನಿಗಮದ (ಎಫ್‌ಸಿಐ) ಮೂಲಸೌಕರ್ಯವನ್ನು ಬಳಸಿಕೊಳ್ಳಲು ಭಾರತೀಯ ಸೇನೆ ಮತ್ತು ಭಾರತೀಯ ಆಹಾರ ನಿಗಮದ ನಡುವೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಉತ್ತಮ ಗುಣಮಟ್ಟದ ಈ ಅಕ್ಕಿಯನ್ನು ಲಡಾಖ್ ಮತ್ತು ಈಶಾನ್ಯ ಭಾರತದ ದೂರದ ಪ್ರದೇಶಗಳಲ್ಲಿರುವ ಸೇನಾ ಪೂರೈಕೆ ಡಿಪೋಗಳಿಗೆ ನೇರವಾಗಿ ತಲುಪಿಸಲಾಗುವುದು. ಇದರಿಂದಾಗಿ, ಸೇನಾ ಪೂರೈಕೆ ಡಿಪೋಗಳು ಸ್ಥಳೀಯವಾಗಿ ಇರುವ ಭಾರತೀಯ ಆಹಾರ ನಿಗಮದ ಕೇಂದ್ರಗಳಿಂದ ಅಕ್ಕಿಯನ್ನು ಸಂಗ್ರಹಿಸುವ ಅಗತ್ಯ ಇರುವುದಿಲ್ಲ.

ತಮ್ಮ ಭಾಷಣದಲ್ಲಿ ರಕ್ಷಣಾ ಸಚಿವರು, ‘ಭಾರತ್ ಅಕ್ಕಿ’ಯು ರೈತರ ಹೊಲದಿಂದ ಆರಂಭವಾಗಿ ಸೈನಿಕರ ತಟ್ಟೆಯವರೆಗೆ ತಲುಪುವ ವಿಶ್ವಾಸದ ಬಂಧವಾಗಿದೆ ಎಂದು ಬಣ್ಣಿಸಿದರು. ರೈತರ ಪರಿಶ್ರಮವು ಸೈನಿಕರ ಶಕ್ತಿಯಾಗಿ ರೂಪುಗೊಳ್ಳುವ ಸಾಮೂಹಿಕ ಸಂಕಲ್ಪವನ್ನು ಈ ಉಪಕ್ರಮವು ಸಾಕಾರಗೊಳಿಸುವ ಮೂಲಕ ‘ಜೈ ಜವಾನ್, ಜೈ ಕಿಸಾನ್’ ಎಂಬ ಆಶಯಕ್ಕೆ ಸ್ಪಷ್ಟ ರೂಪ ನೀಡುತ್ತದೆ ಎಂದು ಅವರು ಹೇಳಿದರು. “ನಿಗದಿತ ಮಾನದಂಡಗಳಿಗೆ ಅನುಗುಣವಾಗಿ ಈ ಉತ್ತಮ ಗುಣಮಟ್ಟದ ಅಕ್ಕಿಯನ್ನು ಪೂರೈಸಲಾಗುವುದು. ಇದರ ಜೊತೆಗೆ, ಸಾಗಿಸಲು ಮತ್ತು ನಿರ್ವಹಿಸಲು ಅನುಕೂಲವಾಗುವಂತಹ ಪ್ಯಾಕಿಂಗ್ ವ್ಯವಸ್ಥೆಯನ್ನೂ ಖಚಿತಪಡಿಸುತ್ತಿದ್ದೇವೆ. ಈ ಉಪಕ್ರಮವು ಸಣ್ಣದಾಗಿ ಕಾಣಿಸಬಹುದು. ಆದರೆ ದೂರದ ಮತ್ತು ಕಷ್ಟಕರವಾದ ಪ್ರದೇಶಗಳಿಗೆ ಪಡಿತರವನ್ನು ಸಾಗಿಸುವ ಜವಾಬ್ದಾರಿಯನ್ನು ಹೊಂದಿರುವ ಸೈನಿಕರಿಗೆ ಇದು ಅಪಾರ ಕಾರ್ಯಾಚರಣೆಯ ಪರಿಹಾರವನ್ನು ನೀಡುತ್ತದೆ” ಎಂದು ಅವರು ಹೇಳಿದರು.

ಸೈನಿಕರ ಕಾರ್ಯಾಚರಣಾ ಸನ್ನದ್ಧತೆಯು ಕೇವಲ ಶಸ್ತ್ರಾಸ್ತ್ರಗಳನ್ನು ಅವಲಂಬಿಸಿರುವುದಿಲ್ಲ. ವಿಶೇಷವಾಗಿ ಅತ್ಯಂತ ಕಠಿಣ ಪರಿಸ್ಥಿತಿಗಳಲ್ಲಿ ಸೇವೆ ಸಲ್ಲಿಸುವಾಗ ಅವರ ದೈಹಿಕ ಆರೋಗ್ಯ, ಮಾನಸಿಕ ಸ್ಥಿರತೆ, ಮನೋಬಲ ಮತ್ತು ದೈಹಿಕ ಸಾಮರ್ಥ್ಯವೂ ಅಷ್ಟೇ ಮುಖ್ಯವಾಗಿವೆ ಎಂದು ಶ್ರೀ ರಾಜನಾಥ್ ಸಿಂಗ್ ಒತ್ತಿಹೇಳಿದರು. ಸೈನಿಕರ ಕಲ್ಯಾಣವು ಬಾಹ್ಯ ವಿಷಯವಲ್ಲ; ಅದು ರಾಷ್ಟ್ರೀಯ ಭದ್ರತೆಯ ಅವಿಭಾಜ್ಯ ಅಂಗವಾಗಿದೆ ಎಂದು ಅವರು ಹೇಳಿದರು. ಆರೋಗ್ಯಕರ ಆಹಾರ, ಸದೃಢ  ಉಪಕರಣಗಳು ಮತ್ತು ಸಮಗ್ರ ತರಬೇತಿಯು ಸೈನಿಕರ ಮನೋಬಲವನ್ನು ಹೆಚ್ಚಿಸಿ, ಯಾವುದೇ ಸವಾಲನ್ನು ಎದುರಿಸಲು ಹಾಗೂ ದೇಶವನ್ನು ರಕ್ಷಿಸಲು ಅವರನ್ನು ಸನ್ನದ್ಧರನ್ನಾಗಿಸುತ್ತವೆ ಎಂದು ಅವರು ತಿಳಿಸಿದರು.

ಆಧುನಿಕ ಯುದ್ಧಗಳಲ್ಲಿ ಶಸ್ತ್ರಾಸ್ತ್ರಗಳು, ಯುದ್ಧ ವೇದಿಕೆಗಳು ಮತ್ತು ತಂತ್ರಜ್ಞಾನ ಮಾತ್ರ ನಿರ್ಣಾಯಕ ಅಂಶಗಳಲ್ಲ; ಸರಕು ಸಾಗಣೆ ಮತ್ತು ಪೂರೈಕೆ ವ್ಯವಸ್ಥೆಯೂ ಯುದ್ಧ ಸಾಮರ್ಥ್ಯದ ಒಂದು ಭಾಗವಾಗಿದೆ ಎಂದು ರಕ್ಷಣಾ ಸಚಿವರು ಪ್ರತಿಪಾದಿಸಿದರು. ಇಂದಿನ ಯುದ್ಧಗಳಲ್ಲಿ ಮುಂಚೂಣಿ ನೆಲೆಗಳಲ್ಲಿ ಹೋರಾಡುವುದರಿಂದ ಮಾತ್ರ ವಿಜಯ ಸಾಧಿಸಲು ಸಾಧ್ಯವಿಲ್ಲ. ಪೂರೈಕೆ ಸರಪಳಿಗಳ ಬಲ, ಸಂಗ್ರಹಣಾ ಸಾಮರ್ಥ್ಯ, ಸಾರಿಗೆ ಜಾಲಗಳು, ಗೋದಾಮುಗಳ ಮೂಲಸೌಕರ್ಯ ಮತ್ತು ಅಗತ್ಯ ವಸ್ತುಗಳನ್ನು ಸಕಾಲದಲ್ಲಿ ಮರುಪೂರೈಸುವ ಸಾಮರ್ಥ್ಯವೂ ಅಷ್ಟೇ ನಿರ್ಣಾಯಕ ಪಾತ್ರ ವಹಿಸುತ್ತವೆ ಎಂದು ಅವರು ಹೇಳಿದರು.

“ಭವಿಷ್ಯದ ಸಂಘರ್ಷಗಳಲ್ಲಿ ಮುನ್ನೆಚ್ಚರಿಕೆ ನೀಡಲು ದೊರೆಯುವ ಸಮಯ ಅತ್ಯಂತ ಕಡಿಮೆಯಾಗಿರಬಹುದು ಎಂಬುದನ್ನು ‘ಆಪರೇಷನ್ ಸಿಂಧೂರ್‌’ನ ಕಾರ್ಯತಂತ್ರದ ವಿಶ್ಲೇಷಣೆ ಸೂಚಿಸಿದೆ. ಯಾವುದೇ ಮುನ್ನೆಚ್ಚರಿಕೆ ಇಲ್ಲದ ಪರಿಸ್ಥಿತಿಗಳು ಮತ್ತು ಯುದ್ಧದಲ್ಲಿ ತಂತ್ರಜ್ಞಾನದ ಸಂಯೋಜನೆ ನಮ್ಮ ಸನ್ನದ್ಧತೆಯನ್ನು ತೀವ್ರವಾಗಿ ಪರೀಕ್ಷಿಸಬಹುದು. ಇಂತಹ ಸಂಘರ್ಷಗಳು ನಮ್ಮ ಸರಕು ಸಾಗಣೆ ವ್ಯವಸ್ಥೆಗಳು ಮತ್ತು ಪೂರೈಕೆ ಜಾಲಗಳ ಸಾಮರ್ಥ್ಯಕ್ಕೂ ಸವಾಲೊಡ್ಡಬಹುದು. ಆದ್ದರಿಂದ, ನಮ್ಮ ಕಾರ್ಯಾಚರಣೆಗಳನ್ನು ನಿರಂತರವಾಗಿ ಮುಂದುವರಿಸಲು ಸಾಧ್ಯವಾಗುವಂತಹ ಸದೃಢ ಮತ್ತು ಸ್ಥಿತಿಸ್ಥಾಪಕ ಸರಕು ಸಾಗಣೆ ವ್ಯವಸ್ಥೆಯನ್ನು ನಾವು ನಿರ್ಮಿಸಬೇಕು. ಭಾರತೀಯ ಆಹಾರ ನಿಗಮದೊಂದಿಗೆ ಮಾಡಿಕೊಂಡಿರುವ ಈ ತಿಳುವಳಿಕೆ ಒಪ್ಪಂದವು ಆ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ” ಎಂದು ಶ್ರೀ ರಾಜನಾಥ್ ಸಿಂಗ್ ಹೇಳಿದರು.

ಭಾರತೀಯ ಆಹಾರ ನಿಗಮವು ದೇಶಾದ್ಯಂತ, ಕಾರ್ಯಾಚರಣೆಯ ದೃಷ್ಟಿಯಿಂದ ಮಹತ್ವದ ಪ್ರದೇಶಗಳನ್ನೂ ಒಳಗೊಂಡಂತೆ, ಗೋದಾಮುಗಳು, ಸಂಗ್ರಹಣಾ ಮೂಲಸೌಕರ್ಯ, ಆಧುನಿಕ ಧಾನ್ಯ ಸಂಗ್ರಹಣಾ ಘಟಕಗಳು, ಸರಕು ನಿರ್ವಹಣಾ ಉಪಕರಣಗಳು ಮತ್ತು ತರಬೇತಿ ಪಡೆದ ಮಾನವ ಸಂಪನ್ಮೂಲವನ್ನು ಹೊಂದಿದೆ ಎಂದು ರಕ್ಷಣಾ ಸಚಿವರು ತಿಳಿಸಿದರು. ಅಗತ್ಯ ಎದುರಾದಾಗ ದೇಶದ ಅಸ್ತಿತ್ವದಲ್ಲಿರುವ ರಾಷ್ಟ್ರೀಯ ಸಾಮರ್ಥ್ಯವನ್ನು ರಾಷ್ಟ್ರೀಯ ಭದ್ರತೆಯ ಅಗತ್ಯಗಳಿಗೆ ಹೊಂದಿಸಬಹುದು ಎಂಬುದಕ್ಕೆ ಈ ಉಪಕ್ರಮವೇ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು. ದೇಶದ ಮೂಲಸೌಕರ್ಯ ಮತ್ತು ಸಾಮರ್ಥ್ಯಗಳನ್ನು ಒಂದೇ ಉದ್ದೇಶಕ್ಕೆ ಸೀಮಿತಗೊಳಿಸದೆ, ನಾಗರಿಕ ಮತ್ತು ಸೇನಾ ಅಗತ್ಯಗಳೆರಡಕ್ಕೂ ಬಳಸಿಕೊಳ್ಳುವ ದ್ವಿ-ಬಳಕೆಯ ವಿಧಾನವನ್ನು ಇದು ಪ್ರತಿಬಿಂಬಿಸುತ್ತದೆ ಎಂದು ಅವರು ವಿವರಿಸಿದರು.

ಯುದ್ಧವಿಮಾನಗಳು ಈಗ ಎಕ್ಸ್‌ಪ್ರೆಸ್‌ವೇಗಳಲ್ಲಿ ಇಳಿಯುತ್ತಿರುವಂತೆಯೇ, ಗಡಿ ರಸ್ತೆ ಸಂಸ್ಥೆ ನಿರ್ಮಿಸಿರುವ ರಸ್ತೆಗಳು ಮತ್ತು ಸೇತುವೆಗಳನ್ನು ಸ್ಥಳೀಯ ನಿವಾಸಿಗಳೂ ಬಳಸಿಕೊಳ್ಳುತ್ತಿರುವಂತೆಯೇ, ಭಾರತೀಯ ಆಹಾರ ನಿಗಮದ ಗೋದಾಮುಗಳೂ ಇನ್ನು ಮುಂದೆ ಆಹಾರ ಧಾನ್ಯಗಳ ಸಂಗ್ರಹಣೆಗೆ ಮಾತ್ರ ಸೀಮಿತವಾಗಿರುವುದಿಲ್ಲ; ಅವು ಭಾರತೀಯ ಸೇನೆಯ ಪೂರೈಕೆ ಸರಪಳಿಯ ಅವಿಭಾಜ್ಯ ಅಂಗಗಳಾಗಲಿವೆ ಎಂದು ಶ್ರೀ ರಾಜನಾಥ್ ಸಿಂಗ್ ಹೇಳಿದರು.

“ಈ ವಿಧಾನವು ಸಂಪನ್ಮೂಲಗಳ ಸಮರ್ಪಕ ಬಳಕೆಗೆ ನೆರವಾಗುವುದರ ಜೊತೆಗೆ ರಾಷ್ಟ್ರೀಯ ಸ್ಥಿತಿಸ್ಥಾಪಕತೆಯನ್ನು ಬಲಪಡಿಸುತ್ತದೆ. ಈಗಾಗಲೇ ಇರುವ ಮೂಲಸೌಕರ್ಯವನ್ನು ಕಾರ್ಯಾಚರಣೆಯ ಯೋಜನೆಯೊಂದಿಗೆ ಸಂಯೋಜಿಸುವುದರಿಂದ ಸಮಯವನ್ನು ಉಳಿಸಬಹುದು ಮತ್ತು ಸಂಪನ್ಮೂಲಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು. ಈ ತಿಳುವಳಿಕೆ ಒಪ್ಪಂದವು ಕೇವಲ ಆಡಳಿತಾತ್ಮಕ ವ್ಯವಸ್ಥೆಗಿಂತ ಮಿಗಿಲಾದುದಾಗಿದೆ. ಇದು ಕಾರ್ಯಾಚರಣಾ ಸನ್ನದ್ಧತೆಯನ್ನು ಹೆಚ್ಚಿಸುವ ಶಕ್ತಿವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ, ‘ಇಡೀ ಸರ್ಕಾರ’ ಮತ್ತು ‘ಇಡೀ ರಾಷ್ಟ್ರ’ ಎಂಬ ನಮ್ಮ ವಿಧಾನವನ್ನೂ ಪ್ರತಿಬಿಂಬಿಸುತ್ತದೆ” ಎಂದು ಅವರು ಹೇಳಿದರು.

ಸೈನಿಕರ ಕಲ್ಯಾಣದ ಪ್ರತಿಯೊಂದು ಅಂಶಕ್ಕೂ ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ರಕ್ಷಣಾ ಸಚಿವರು ಹೇಳಿದರು. ಶಸ್ತ್ರಾಸ್ತ್ರಗಳು ಮತ್ತು ತಂತ್ರಜ್ಞಾನದಿಂದ ಹಿಡಿದು ಉಡುಪು, ಉಪಕರಣಗಳು ಮತ್ತು ತರಬೇತಿಯವರೆಗೆ ಎಲ್ಲ ಕ್ಷೇತ್ರಗಳಲ್ಲೂ ಸ್ವಾವಲಂಬನೆ ಹಾಗೂ ಆಧುನೀಕರಣಕ್ಕೆ ಒತ್ತು ನೀಡಲಾಗಿದೆ ಎಂದು ಅವರು ತಿಳಿಸಿದರು. “ಇಂದು ಭಾರತವು ತನ್ನ ರಕ್ಷಣಾ ಅಗತ್ಯಗಳ ಗಮನಾರ್ಹ ಭಾಗವನ್ನು ದೇಶದಲ್ಲಿಯೇ ಉತ್ಪಾದಿಸುತ್ತಿದೆ” ಎಂದು ಅವರು ಹೇಳಿದರು. ಸೈನಿಕರಿಗೆ ನಿರಂತರವಾಗಿ ಅತ್ಯುತ್ತಮ ಗುಣಮಟ್ಟದ ಉತ್ಪನ್ನಗಳನ್ನು ಒದಗಿಸುವುದು, ಪೂರೈಕೆ ಸರಪಳಿಗಳನ್ನು ಹೆಚ್ಚು ಸದೃಢಗೊಳಿಸುವುದು, ಮುಂಚೂಣಿ ಪ್ರದೇಶಗಳಿಗೆ ಸಕಾಲದಲ್ಲಿ ಸರಕುಗಳನ್ನು ತಲುಪಿಸುವುದು ಮತ್ತು ರಾಷ್ಟ್ರೀಯ ಭದ್ರತೆಗಾಗಿ ನಾಗರಿಕ ಮೂಲಸೌಕರ್ಯವನ್ನು ಉತ್ತಮವಾಗಿ ಬಳಸಿಕೊಳ್ಳುವುದು ಸರ್ಕಾರದ ಸಂಕಲ್ಪವಾಗಿದೆ. ಈ ಸಂಕಲ್ಪಕ್ಕೆ ನಾವೀನ್ಯತೆ ಮತ್ತು ಸಮನ್ವಯವೇ ಆಧಾರಗಳಾಗಿವೆ ಎಂದು ಅವರು ಒತ್ತಿಹೇಳಿದರು. ಗಡಿಗಳಲ್ಲಿ ಸೈನಿಕರು ಕಾವಲು ಕಾಯುತ್ತಿರುವಾಗ, ಇಡೀ ದೇಶವೇ ತಮ್ಮ ಬೆನ್ನಿಗೆ ನಿಂತಿದೆ ಎಂಬ ವಿಶ್ವಾಸ ಅವರಿಗಿರಬೇಕು ಎಂದು ಅವರು ಹೇಳಿದರು. ಸೈನಿಕರ ಮನೋಬಲವನ್ನು ಹೆಚ್ಚಿಸುವುದು ಸರ್ಕಾರದ ಆದ್ಯತೆಯಾಗಿದೆ ಎಂದು ತಿಳಿಸಿದ ಅವರು, ಈ ಸಂಕಲ್ಪ ಕೇವಲ ಸರ್ಕಾರದ್ದಲ್ಲ; ರೈತರು, ಸಹಕಾರ ಕ್ಷೇತ್ರ, ನಾಗರಿಕ ಆಡಳಿತ ಮತ್ತು ಇಡೀ ರಾಷ್ಟ್ರವು ಇದರಲ್ಲಿ ಪಾಲುದಾರರಾಗಿವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ‘ಭಾರತ್ ಅಕ್ಕಿ’ ಉಪಕ್ರಮವನ್ನು ಶ್ಲಾಘಿಸಿದರು. ಅಪ್ರತಿಮ ಧೈರ್ಯ ಮತ್ತು ಸಮರ್ಪಣಾ ಮನೋಭಾವದಿಂದ ದೇಶವನ್ನು ರಕ್ಷಿಸುವ ಸೈನಿಕರಿಗೆ ಉತ್ತಮ ಗುಣಮಟ್ಟದ ಅಕ್ಕಿಯನ್ನು ಒದಗಿಸುವುದು ತಮ್ಮ ಇಲಾಖೆಗೆ ಹೆಮ್ಮೆಯ ವಿಷಯವಾಗಿದೆ ಎಂದು ಅವರು ಹೇಳಿದರು. “ದೇಶದ ರಕ್ಷಕರಿಗೆ ಗುಣಮಟ್ಟದ ಆಹಾರವನ್ನು ಒದಗಿಸುವುದು ಮತ್ತು ಅವರ ಅಗತ್ಯಗಳನ್ನು ಪೂರೈಸುವುದು ನಮ್ಮ ಕರ್ತವ್ಯವಾಗಿದೆ” ಎಂದು ಅವರು ತಿಳಿಸಿದರು.

ಸಮಾರಂಭದಲ್ಲಿ ಸೇನಾ ಮುಖ್ಯಸ್ಥ ಜನರಲ್ ಧೀರಜ್ ಸೇಥ್, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಕಾರ್ಯದರ್ಶಿ ಶ್ರೀ ಸಂಜೀವ್ ಚೋಪ್ರಾ ಹಾಗೂ ರಕ್ಷಣಾ ಸಚಿವಾಲಯ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ, ಭಾರತೀಯ ಆಹಾರ ನಿಗಮ, ಭಾರತೀಯ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ ನಿಯಮಿತ (ನಾಫೆಡ್) ಮತ್ತು ಸಹಕಾರ ಕ್ಷೇತ್ರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಭಾರತ್ ಅಕ್ಕಿಯ ಕುರಿತು

ಸರಬರಾಜು ಮತ್ತು ಸಾರಿಗೆ ಮಹಾನಿರ್ದೇಶನಾಲಯದ ನೇತೃತ್ವದಲ್ಲಿ ಜಾರಿಗೊಳ್ಳುತ್ತಿರುವ ‘ಭಾರತ್ ಅಕ್ಕಿ’ ಉಪಕ್ರಮವು ಸೈನಿಕರಿಂದ ನಿರಂತರವಾಗಿ ಪಡೆಯಲಾಗುತ್ತಿರುವ ಅಭಿಪ್ರಾಯ ಮತ್ತು ಸಲಹೆಗಳನ್ನು ಆಧರಿಸಿದೆ. ಪಡಿತರದ ಗುಣಮಟ್ಟವನ್ನು ಸುಧಾರಿಸುವುದು ಇದರ ಉದ್ದೇಶವಾಗಿದೆ. 2026–27ನೇ ಹಣಕಾಸು ವರ್ಷದಲ್ಲಿ ಈ ಅಕ್ಕಿಯನ್ನು ನಿಗದಿಪಡಿಸಿರುವ ರಕ್ಷಣಾ ಇಲಾಖೆಯ ಮಾನದಂಡಗಳಿಗೆ ಅನುಗುಣವಾಗಿ ಗಿರಣಿಗಳಲ್ಲಿ ಸಂಸ್ಕರಿಸಿ, ನಾಫೆಡ್ ಮೂಲಕ ಪೂರೈಸಲಾಗುವುದು. ಅಗತ್ಯ ಗುಣಮಟ್ಟ ಪರಿಶೀಲನೆಗಳಿಗೆ ಒಳಪಡಿಸುವ ಈ ಅಕ್ಕಿಯಲ್ಲಿ ಅನ್ಯ ವಸ್ತುಗಳು ಅಥವಾ ಕಲಬೆರಕೆ ಇರುವುದಿಲ್ಲ. ಮುರಿದ, ಹಾನಿಗೊಳಗಾದ ಮತ್ತು ಬಣ್ಣ ಬದಲಾದ ಅಕ್ಕಿಯ ಕಾಳುಗಳ ಪ್ರಮಾಣ ಕನಿಷ್ಠ ಮಟ್ಟದಲ್ಲಿರುತ್ತದೆ.

10 ಕೆ.ಜಿ. ಮತ್ತು 30 ಕೆ.ಜಿ. ಚೀಲಗಳಲ್ಲಿ ಅಕ್ಕಿಯನ್ನು ಖರೀದಿಸುವ ವ್ಯವಸ್ಥೆಯು, ವಿಶೇಷವಾಗಿ ಮುಂಚೂಣಿ ಸೇನಾ ನೆಲೆಗಳಲ್ಲಿ, ಸಾಗಣೆ ಮತ್ತು ನಿರ್ವಹಣೆಯನ್ನು ಇನ್ನಷ್ಟು ಸುಲಭಗೊಳಿಸಲಿದೆ. ಭಾರತೀಯ ಸೇನೆ, ಭಾರತೀಯ ಆಹಾರ ನಿಗಮ, ನಾಫೆಡ್ ಮತ್ತು ಆಹಾರ ಹಾಗೂ ಸಾರ್ವಜನಿಕ ವಿತರಣಾ ಇಲಾಖೆಯ ನಡುವೆ ಸುಮಾರು 18 ತಿಂಗಳುಗಳ ಕಾಲ ನಡೆದ ಸಮನ್ವಯದ ಫಲವಾಗಿ ಈ ಉಪಕ್ರಮ ಜಾರಿಗೆ ಬರುತ್ತಿದೆ.

ಆಪರೇಷನ್‌ ಸಿಂಧೂರ್ ಸೇರಿದಂತೆ ವಿವಿಧ ಕಾರ್ಯಾಚರಣೆಗಳಿಂದ ಪಡೆದ ಅನುಭವಗಳನ್ನು ಆಧರಿಸಿ ಭಾರತೀಯ ಆಹಾರ ನಿಗಮದೊಂದಿಗಿನ ತಿಳುವಳಿಕೆ ಒಪ್ಪಂದವನ್ನು ರೂಪಿಸಲಾಗಿದೆ. ಅಲ್ಪಾವಧಿಯ ಮುನ್ನೆಚ್ಚರಿಕೆಯೊಂದಿಗೆ ಎದುರಾಗಬಹುದಾದ ಮತ್ತು ದೀರ್ಘಕಾಲ ಮುಂದುವರಿಯಬಹುದಾದ ತುರ್ತು ಪರಿಸ್ಥಿತಿಗಳಲ್ಲಿ ಸದೃಢ ಸರಕು ಸಾಗಣೆ ವ್ಯವಸ್ಥೆಗಳ ಅಗತ್ಯವನ್ನು ಈ ಅನುಭವಗಳು ಎತ್ತಿ ತೋರಿಸಿವೆ. ಕಾರ್ಯಾಚರಣೆಯ ತುರ್ತು ಸಂದರ್ಭಗಳಲ್ಲಿ ಗುರುತಿಸಲಾದ ಭಾರತೀಯ ಆಹಾರ ನಿಗಮದ ಗೋದಾಮುಗಳ ಮೂಲಸೌಕರ್ಯ, ಕಾರ್ಮಿಕ ಸಂಪನ್ಮೂಲಗಳು ಮತ್ತು ಸರಕು ನಿರ್ವಹಣಾ ಉಪಕರಣಗಳನ್ನು ಬಳಸಿಕೊಳ್ಳಲು ಈ ಒಪ್ಪಂದವು ಭಾರತೀಯ ಸೇನೆಗೆ ಔಪಚಾರಿಕ ಚೌಕಟ್ಟನ್ನು ಒದಗಿಸುತ್ತದೆ.

ಸೇನೆಯ ಸರಬರಾಜು ಮತ್ತು ಸಾರಿಗೆ ವಿಭಾಗಗಳು ಹಾಗೂ ಭಾರತೀಯ ಆಹಾರ ನಿಗಮದ ಪ್ರಾದೇಶಿಕ ಮತ್ತು ವಿಭಾಗೀಯ ಕಚೇರಿಗಳ ನಡುವೆ ಸಮನ್ವಯ ಸಾಧಿಸಲಾಗುವುದು. ಈ ವ್ಯವಸ್ಥೆಯನ್ನು ಕಾರ್ಯಾಚರಣೆಯ ಸರಕು ಸಾಗಣೆ ಯೋಜನೆಗಳಲ್ಲಿಯೂ ಸಂಯೋಜಿಸಲಾಗುವುದು. ಈ ತಿಳುವಳಿಕೆ ಒಪ್ಪಂದವು ಐದು ವರ್ಷಗಳವರೆಗೆ ಜಾರಿಯಲ್ಲಿರಲಿದ್ದು, ಎರಡೂ ಕಡೆಯವರ ಪರಸ್ಪರ ಒಪ್ಪಿಗೆಯ ಮೇರೆಗೆ ಅವಧಿಯನ್ನು ವಿಸ್ತರಿಸಬಹುದು.

ಈ ವ್ಯವಸ್ಥೆಯು ಹೆಚ್ಚುವರಿ ಸಂಗ್ರಹಣಾ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ, ಪಡಿತರ, ದಾಸ್ತಾನು ಸಾಮಗ್ರಿಗಳು ಮತ್ತು ಉಪಕರಣಗಳನ್ನು ತ್ವರಿತವಾಗಿ ಸಜ್ಜುಗೊಳಿಸಲು, ವಿವಿಧ ಸ್ಥಳಗಳಲ್ಲಿ ಸಂಗ್ರಹಿಸಲು ಹಾಗೂ ಕಾರ್ಯಾಚರಣಾ ಪ್ರದೇಶಗಳಿಗೆ ಸಮೀಪದ ಮುಂಚೂಣಿ ನೆಲೆಗಳಲ್ಲಿ ಮುಂಚಿತವಾಗಿ ಇರಿಸಲು ನೆರವಾಗಲಿದೆ. ಇದರಿಂದ ಈಗಾಗಲೇ ಇರುವ ರಾಷ್ಟ್ರೀಯ ಮೂಲಸೌಕರ್ಯವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಸೇನೆಯ ಸರಕು ಸಾಗಣೆ ವ್ಯವಸ್ಥೆಯ ತ್ವರಿತ ಪ್ರತಿಕ್ರಿಯೆ ಸಾಮರ್ಥ್ಯ ಮತ್ತು ಸ್ಥಿತಿಸ್ಥಾಪಕತೆ ಬಲಗೊಳ್ಳಲಿದೆ. ಪ್ರಧಾನಮಂತ್ರಿ ಗತಿಶಕ್ತಿ ಯೋಜನೆಯ ದೂರದೃಷ್ಟಿಗೆ ಅನುಗುಣವಾಗಿರುವ ಈ ಉಪಕ್ರಮವು ʼಇಡೀ ಸರ್ಕಾರʼದ ವಿಧಾನವನ್ನು ಪ್ರತಿಬಿಂಬಿಸುತ್ತದೆ.

ಸೈನಿಕರಿಗೆ ನೀಡುವ ಪಡಿತರದ ಗುಣಮಟ್ಟ ಮತ್ತು ಪ್ರಮಾಣವನ್ನು ಸುಧಾರಿಸಲು ಭಾರತೀಯ ಸೇನೆಯು ಇತ್ತೀಚಿನ ವರ್ಷಗಳಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದೆ. ಅಗ್ನಿವೀರ್ ತರಬೇತಿ ಪಡೆಯುವವರಿಗೆ ಹೆಚ್ಚುವರಿ ಪಡಿತರ ಒದಗಿಸುವುದು ಮತ್ತು ಮೂರು ಸಶಸ್ತ್ರ ಸೇವೆಗಳಲ್ಲೂ ಪಡಿತರದ ಪ್ರಮಾಣದಲ್ಲಿ ಹೆಚ್ಚಿನ ಏಕರೂಪತೆ ತರುವುದು ಇವುಗಳಲ್ಲಿ ಸೇರಿವೆ. ಸಾವಯವ ಪಡಿತರವನ್ನೂ ಪರಿಚಯಿಸಲು ಪ್ರಸ್ತಾಪಿಸಲಾಗಿದೆ.

 

*****


(ಪ್ರಕಟಣೆ ಐ.ಡಿ.: 2322245) ವಿಸಿಟರ್ ಕೌಂಟರ್ : 9
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Bengali , Gujarati