ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಕೇಂದ್ರ ಸಚಿವರಾದ​​​​​​​ ಶ್ರೀ ಅಶ್ವಿನಿ ವೈಷ್ಣವ್ ಅವರು ವಿಶ್ವ ಬ್ಯಾಂಕ್ ಸಮೂಹದ ‘ವಿಶ್ವ ಅಭಿವೃದ್ಧಿ ವರದಿ 2026: ಕೃತಕ ಬುದ್ಧಿಮತ್ತೆಯ ಭರವಸೆ’ಯನ್ನು ನವದೆಹಲಿಯಲ್ಲಿ ಬಿಡುಗಡೆ ಮಾಡಿದರು


ಅಭಿವೃದ್ಧಿಶೀಲ ಆರ್ಥಿಕತೆಗಳು ಕೃತಕ ಬುದ್ಧಿಮತ್ತೆಯನ್ನು ಅಭಿವೃದ್ಧಿಗಾಗಿ ಬಳಸಿಕೊಳ್ಳಲು ಅಳವಡಿಕೆ, ಸ್ಥಳೀಯ ಅಗತ್ಯಗಳಿಗೆ ಹೊಂದಾಣಿಕೆ ಮತ್ತು ಪ್ರಗತಿಯ ಮೂಲಕ ಅನುಸರಿಸಬೇಕಾದ ಚೌಕಟ್ಟನ್ನು ವರದಿ ರೂಪಿಸಿದೆ

ಇಂಡಿಯಾಎಐ ಮಿಷನ್, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹಾಗೂ ವಿಶ್ವ ಬ್ಯಾಂಕ್ ಸಮೂಹದ ಸಹಯೋಗದಲ್ಲಿ ಭಾರತದಲ್ಲಿ ವರದಿ ಬಿಡುಗಡೆ; ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿಗಾಗಿ ಎಐ ಬಳಕೆಯನ್ನು ವಿಸ್ತರಿಸುವ ಕುರಿತು ನೀತಿ ನಿರೂಪಕರು, ಅಭಿವೃದ್ಧಿ ತಜ್ಞರು ಮತ್ತು ತಂತ್ರಜ್ಞಾನ ನಾಯಕರಿಂದ ಚರ್ಚೆ

ಉನ್ನತ ಮಟ್ಟದ ಸಮಿತಿ ಹಾಗೂ ರಾಜ್ಯಗಳ ಎಐ ಪ್ರದರ್ಶನದ ಮೂಲಕ ಪ್ರತ್ಯೇಕ ಎಐ ಪ್ರಾಯೋಗಿಕ ಯೋಜನೆಗಳಿಂದ ಸಾಕ್ಷ್ಯಾಧಾರಿತವಾಗಿ ವಿವಿಧ ಕ್ಷೇತ್ರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಅಳವಡಿಸಿಕೊಳ್ಳುವತ್ತ ಭಾರತ ಸಾಗುವ ಮಾರ್ಗಗಳನ್ನು ಪರಿಶೀಲಿಸಲಾಯಿತು

ಪ್ರಕಟಣಾ ದಿನಾಂಕ: 08 OCT 2026 6:04PM by PIB Bengaluru

ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ, ರೈಲ್ವೆ ಹಾಗೂ ವಾರ್ತಾ ಮತ್ತು ಪ್ರಸಾರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು ನವದೆಹಲಿಯ ದಿ ಒಬೆರಾಯ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶ್ವ ಬ್ಯಾಂಕ್ ಸಮೂಹದ ‘ವಿಶ್ವ ಅಭಿವೃದ್ಧಿ ವರದಿ 2026: ಕೃತಕ ಬುದ್ಧಿಮತ್ತೆಯ ಭರವಸೆ’ಯನ್ನು ಬಿಡುಗಡೆ ಮಾಡಿದರು. ಅಭಿವೃದ್ಧಿಶೀಲ ಆರ್ಥಿಕತೆಗಳಿಗೆ ಕೃತಕ ಬುದ್ಧಿಮತ್ತೆ (ಎಐ) ಒದಗಿಸುವ ಅವಕಾಶಗಳು ಮತ್ತು ಸವಾಲುಗಳನ್ನು ವರದಿ ಪರಿಶೀಲಿಸುತ್ತದೆ. ಅಲ್ಲದೆ, ಅಳವಡಿಕೆ, ಹೊಂದಾಣಿಕೆ ಹಾಗೂ ಪ್ರಗತಿಯ ಮೂಲಕ ಅಭಿವೃದ್ಧಿಗಾಗಿ ಎಐ ಅನ್ನು ಬಳಸಿಕೊಳ್ಳಲು ದೇಶಗಳಿಗೆ ಒಂದು ಚೌಕಟ್ಟನ್ನು ಒದಗಿಸುತ್ತದೆ.

ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಇಂಡಿಯಾಎಐ ಮಿಷನ್ ಮತ್ತು ವಿಶ್ವ ಬ್ಯಾಂಕ್ ಸಮೂಹದ ಸಹಯೋಗದಲ್ಲಿ ಈ ವರದಿ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಎಐಯಿಂದ ದೊರೆಯಬಹುದಾದ ಅಭಿವೃದ್ಧಿಯ ಪ್ರಯೋಜನಗಳನ್ನು ಭಾರತವು ಗರಿಷ್ಠ ಪ್ರಮಾಣದಲ್ಲಿ ಪಡೆಯುವುದು ಹಾಗೂ ಅವುಗಳನ್ನು ಸುರಕ್ಷಿತವಾಗಿ ಮತ್ತು ಸುಸ್ಥಿರವಾಗಿ ಉಳಿಸಿಕೊಳ್ಳುವುದು ಹೇಗೆ ಎಂಬ ಕುರಿತು ಹಿರಿಯ ನೀತಿ ನಿರೂಪಕರು, ಜಾಗತಿಕ ಅಭಿವೃದ್ಧಿ ತಜ್ಞರು, ತಂತ್ರಜ್ಞಾನ ನಾಯಕರು ಮತ್ತು ಕ್ಷೇತ್ರದ ತಜ್ಞರು ಚರ್ಚಿಸಲು ಈ ಕಾರ್ಯಕ್ರಮ ವೇದಿಕೆ ಒದಗಿಸಿತು. ದೇಶದ ವಿವಿಧ ಭಾಗಗಳಲ್ಲಿ ಎಐ ಆಧಾರಿತ ಪರಿಹಾರಗಳನ್ನು ಪ್ರಸ್ತುತಪಡಿಸಿದ ರಾಜ್ಯಗಳು ಮತ್ತು ನಾವೀನ್ಯಕಾರರನ್ನು ಒಳಗೊಂಡ ರಾಜ್ಯಗಳ ಎಐ ಪ್ರದರ್ಶನವೂ ಕಾರ್ಯಕ್ರಮದ ಭಾಗವಾಗಿತ್ತು.

ಕೃತಕ ಬುದ್ಧಿಮತ್ತೆಯು ಅಭಿವೃದ್ಧಿಶೀಲ ಆರ್ಥಿಕತೆಗಳಲ್ಲಿ ತಜ್ಞರ ಜ್ಞಾನ ಮತ್ತು ಪರಿಣತಿಯ ಲಭ್ಯತೆಯನ್ನು ವಿಸ್ತರಿಸಬಲ್ಲದು, ಉತ್ಪಾದಕತೆಯನ್ನು ಹೆಚ್ಚಿಸಬಲ್ಲದು ಮತ್ತು ಸೇವೆಗಳ ವಿತರಣೆಯನ್ನು ಸುಧಾರಿಸಬಲ್ಲದು ಎಂದು ವರದಿ ತಿಳಿಸಿದೆ. ವೈದ್ಯಕೀಯ ತಪಾಸಣೆ, ಕೃಷಿ ನಿರ್ಧಾರ ಕೈಗೊಳ್ಳುವಿಕೆ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಈಗಾಗಲೇ ಎಐ ಆಧಾರಿತ ಸಾಧನಗಳನ್ನು ಬಳಸಲಾಗುತ್ತಿದ್ದು, ಸೀಮಿತ ಪ್ರಮಾಣದಲ್ಲಿರುವ ಪರಿಣತಿಯನ್ನು ಹೆಚ್ಚಿನ ಜನಸಂಖ್ಯೆಗೆ ತಲುಪಿಸಲು ಅವು ನೆರವಾಗುತ್ತಿವೆ. ಆದರೆ, ಈ ಪ್ರಯೋಜನಗಳನ್ನು ಪಡೆಯಲು ವಿಶ್ವಾಸಾರ್ಹ ವಿದ್ಯುತ್ ಪೂರೈಕೆ ಮತ್ತು ಸಂಪರ್ಕ ವ್ಯವಸ್ಥೆ, ಕಂಪ್ಯೂಟಿಂಗ್ ಮೂಲಸೌಕರ್ಯ, ಗುಣಮಟ್ಟದ ದತ್ತಾಂಶ, ಕೌಶಲ್ಯಗಳು, ಶಿಕ್ಷಣ ವ್ಯವಸ್ಥೆಗಳು ಮತ್ತು ಸಮರ್ಥ ಸಂಸ್ಥೆಗಳು ಸೇರಿದಂತೆ ಬಲವಾದ ಮೂಲಭೂತ ವ್ಯವಸ್ಥೆಗಳು ಅಗತ್ಯವೆಂದು ವರದಿ ಒತ್ತಿಹೇಳಿದೆ.

ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಪ್ರಧಾನ ಭಾಷಣ ಮಾಡಿ, ವರದಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದರು. ದೇಶದಾದ್ಯಂತ ನಾಗರಿಕರು, ಉದ್ಯಮಗಳು ಮತ್ತು ಸಂಸ್ಥೆಗಳಿಗೆ ಕೃತಕ ಬುದ್ಧಿಮತ್ತೆಯ ಪ್ರಯೋಜನಗಳು ತಲುಪುವಂತೆ ತಂತ್ರಜ್ಞಾನವನ್ನು ಜನಸಾಮಾನ್ಯರಿಗೆ ಸುಲಭವಾಗಿ ಲಭ್ಯವಾಗಿಸುವುದು ಭಾರತದ ವಿಧಾನವಾಗಿದೆ ಎಂದು ಕೇಂದ್ರ ಸಚಿವರು ಒತ್ತಿಹೇಳಿದರು.

“ಎಐ ಸಾಮಾನ್ಯ ಜನರ ಬದುಕನ್ನು ಬದಲಾಯಿಸುತ್ತಿದೆ. ಬಾರಾಮತಿಯಲ್ಲಿ, ಎಂದಿಗೂ ಕಂಪ್ಯೂಟರ್ ಬಳಸಿರದ ರೈತರು ಕೇವಲ ಮೊಬೈಲ್ ಫೋನ್‌ನಲ್ಲಿ ಧ್ವನಿಯ ಮೂಲಕ ಸಲಹೆ ಪಡೆದು, ಶೇ.30ರಷ್ಟು ಕಡಿಮೆ ನೀರು ಮತ್ತು ರಸಗೊಬ್ಬರ ಬಳಕೆಯೊಂದಿಗೆ ಕಬ್ಬಿನ ಇಳುವರಿಯನ್ನು ಶೇ.40ರಷ್ಟು ಹೆಚ್ಚಿಸಿಕೊಂಡಿದ್ದಾರೆ. ಆರೋಗ್ಯ ಕ್ಷೇತ್ರದಲ್ಲಿ ಕ್ಷಯರೋಗ ಪತ್ತೆ ಪ್ರಮಾಣ ಶೇ.35ರಷ್ಟು ಹೆಚ್ಚಾಗಿದೆ. ಇಂತಹ ಉದಾಹರಣೆಗಳು ಜಾಗತಿಕ ದಕ್ಷಿಣದ ದೇಶಗಳಲ್ಲಷ್ಟೇ ಅಲ್ಲದೆ, ಇಡೀ ವಿಶ್ವದ ಜನರ ಬದುಕನ್ನೂ ಬದಲಾಯಿಸಬಲ್ಲವು” ಎಂದು ಶ್ರೀ ಅಶ್ವಿನಿ ವೈಷ್ಣವ್ ಹೇಳಿದರು.

ಬಾರಾಮತಿ ಉಪಕ್ರಮದಲ್ಲಿ ಉಪಗ್ರಹ, ಇಂಟರ್‌ನೆಟ್ ಆಫ್ ಥಿಂಗ್ಸ್ (IoT) ಮತ್ತು ಹವಾಮಾನ ದತ್ತಾಂಶವನ್ನು ಬಳಸಿಕೊಳ್ಳಲಾಗುತ್ತಿದ್ದು, ಇದರಿಂದ ಕಾರ್ಮಿಕ ವೆಚ್ಚವೂ ಕಡಿಮೆಯಾಗಿದೆ ಎಂದು ಕೇಂದ್ರ ಸಚಿವರು ತಿಳಿಸಿದರು. ಗುಜರಾತ್‌ನಲ್ಲಿ ಅಗ್ರಿಸ್ಟ್ಯಾಕ್ ಅನ್ನು 5 ಲಕ್ಷ ರೈತರು ಬಳಸುತ್ತಿದ್ದು, ಸರ್ಲಾಬೆನ್ ಮೂಲಕ ಪ್ರಾಣಿಗಳ ಆರೋಗ್ಯಕ್ಕಾಗಿ ಬಳಸಲಾಗುತ್ತಿರುವ ಎಐ ವ್ಯವಸ್ಥೆಯು 3 ಕೋಟಿ ಜಾನುವಾರುಗಳು ಮತ್ತು ಅವುಗಳ ಪಾಲನೆ ಮಾಡುತ್ತಿರುವ ರೈತರಿಗೆ ಪ್ರಯೋಜನ ಒದಗಿಸುತ್ತಿದೆ ಎಂದು ಅವರು ಹೇಳಿದರು.

ಆರೋಗ್ಯ, ಕೃಷಿ, ಶಿಕ್ಷಣ, ಆಡಳಿತ, ಹಣಕಾಸು ಸೇವೆಗಳು ಹಾಗೂ ಸಾರ್ವಜನಿಕ ಮತ್ತು ಆರ್ಥಿಕ ಮಹತ್ವ ಹೊಂದಿರುವ ಇತರ ಕ್ಷೇತ್ರಗಳಲ್ಲಿ ಎಐ ಆಧಾರಿತ ಬಳಕೆಗಳೊಂದಿಗೆ ಭಾರತವು ಎಐ ಅಭಿವೃದ್ಧಿ ಮತ್ತು ಅಳವಡಿಕೆಯ ಪ್ರಮುಖ ಪರಿಸರ ವ್ಯವಸ್ಥೆಯಾಗಿ ಹೊರಹೊಮ್ಮಿದೆ. ಭಾರತ ಸರ್ಕಾರವು ಇಂಡಿಯಾಎಐ ಮಿಷನ್ ಮೂಲಕ ಏಳು ಪ್ರಮುಖ ಸ್ತಂಭಗಳನ್ನು ಒಳಗೊಂಡ ಸಮಗ್ರ ಎಐ ಪರಿಸರ ವ್ಯವಸ್ಥೆಯನ್ನು ನಿರ್ಮಿಸುತ್ತಿದೆ. ಅವುಗಳೆಂದರೆ: ಇಂಡಿಯಾ ಎಐ ಕಂಪ್ಯೂಟ್ ಕೆಪಾಸಿಟಿ, ಸ್ವದೇಶಿ ಫೌಂಡೇಶನ್ ಮಾಡೆಲ್‌ಗಳಿಗಾಗಿ ಇಂಡಿಯಾ ಎಐ ಇನ್ನೋವೇಶನ್ ಸೆಂಟರ್, ಇಂಡಿಯಾ ಎಐ ಡೇಟಾಸೆಟ್ಸ್ ಪ್ಲಾಟ್‌ಫಾರ್ಮ್ (ಎಐKosh), ಇಂಡಿಯಾ ಎಐ ಅಪ್ಲಿಕೇಶನ್ ಡೆವಲಪ್‌ಮೆಂಟ್ ಇನಿಶಿಯೇಟಿವ್, ಇಂಡಿಯಾ ಎಐ ಫ್ಯೂಚರ್‌ಸ್ಕಿಲ್ಸ್, ಇಂಡಿಯಾ ಎಐ ಸ್ಟಾರ್ಟ್‌ಅಪ್ ಫೈನಾನ್ಸಿಂಗ್, ಮತ್ತು ಸೇಫ್ & ಟ್ರಸ್ಟೆಡ್ ಎಐ. ‌

ಎಐ ಮೌಲ್ಯ ಸರಪಳಿಯುದ್ದಕ್ಕೂ ಭಾರತದ ಸಾಮರ್ಥ್ಯಗಳನ್ನು ಬಲಪಡಿಸುವುದು ಹಾಗೂ ಎಐ ಅಭಿವೃದ್ಧಿಯು ಎಲ್ಲರನ್ನೂ ಒಳಗೊಂಡ, ಜವಾಬ್ದಾರಿಯುತ ಮತ್ತು ಭಾರತದ ಪ್ರಮಾಣ, ವೈವಿಧ್ಯತೆ ಹಾಗೂ ಬಹುಭಾಷಾ ಪರಿಸರಕ್ಕೆ ಸೂಕ್ತವಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ಈ ಮಿಷನ್‌ನ ಉದ್ದೇಶವಾಗಿದೆ. ಕಂಪ್ಯೂಟ್, ಡೇಟಾ ಮತ್ತು ಮಾಡೆಲ್‌ಗಳಿಗೆ ಸಮಾನ ಹಾಗೂ ಸುಲಭ ಪ್ರವೇಶ ಕಲ್ಪಿಸುವುದು, ಭಾರತಕ್ಕೆ ನಿರ್ದಿಷ್ಟವಾದ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವುದು ಮತ್ತು ಆರ್ಥಿಕ ಹಾಗೂ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದರ ಮೇಲೆ ಸರ್ಕಾರದ ವಿಧಾನ ಕೇಂದ್ರೀಕೃತವಾಗಿದೆ. ಸೇಫ್ & ಟ್ರಸ್ಟೆಡ್ ಎಐ ಸ್ತಂಭದಡಿ, ಜವಾಬ್ದಾರಿಯುತ ಎಐಗಾಗಿ ದೇಶೀಯ ಸಾಧನಗಳು ಮತ್ತು ಚೌಕಟ್ಟುಗಳ ಅಭಿವೃದ್ಧಿಗೆ ಸರ್ಕಾರ ಬೆಂಬಲ ನೀಡುತ್ತಿದೆ. ಇದರಲ್ಲಿ ಎಐ ತಾರತಮ್ಯವನ್ನು ಕಡಿಮೆ ಮಾಡುವುದು, ಅಲ್ಗಾರಿದಮ್‌ಗಳ ಲೆಕ್ಕಪರಿಶೋಧನೆ, ವಿವರಣಾತ್ಮಕ ಎಐ, ಗೌಪ್ಯತೆಯನ್ನು ಸಂರಕ್ಷಿಸುವ ಎಐ ಮತ್ತು ಡೀಪ್‌ಫೇಕ್ ಪತ್ತೆ ಸೇರಿದಂತೆ ಹಲವು ಅಂಶಗಳು ಸೇರಿವೆ. ಎಐ ಆಡಳಿತ ಮತ್ತು ಸುರಕ್ಷತೆಗಾಗಿ ಸಾಂಸ್ಥಿಕ ವ್ಯವಸ್ಥೆಗಳನ್ನೂ ಸರ್ಕಾರ ರೂಪಿಸಿದೆ.

ಭಾರತದಲ್ಲಿ ವರದಿ ಬಿಡುಗಡೆ ಕಾರ್ಯಕ್ರಮವು ಯಶಸ್ವಿ ಎಐ ಪ್ರಾಯೋಗಿಕ ಯೋಜನೆಗಳನ್ನು ಗುರುತಿಸುವುದು, ಅವುಗಳ ಮೌಲ್ಯಮಾಪನ ಮಾಡುವುದು ಮತ್ತು ಅಳೆಯಬಹುದಾದ ಅಭಿವೃದ್ಧಿ ಫಲಿತಾಂಶಗಳನ್ನು ಒದಗಿಸುವಂತೆ ಅವುಗಳನ್ನು ದೊಡ್ಡ ಪ್ರಮಾಣದಲ್ಲಿ ಅಳವಡಿಸಿಕೊಳ್ಳುವುದು ಹೇಗೆ ಎಂಬುದನ್ನು ನೀತಿ ನಿರೂಪಕರು ಮತ್ತು ಕ್ಷೇತ್ರದ ತಜ್ಞರು ಪರಿಶೀಲಿಸಲು ವೇದಿಕೆ ಒದಗಿಸಿತು. ಇದರೊಂದಿಗೆ ಎಐಯಿಂದ ಉಂಟಾಗಬಹುದಾದ ಅಪಾಯಗಳಿಂದ ರಕ್ಷಣೆ ಪಡೆಯುವ ಮಾರ್ಗಗಳ ಬಗ್ಗೆಯೂ ಚರ್ಚೆ ನಡೆಯಿತು.

ಇಂಡಿಯಾಎಐ ಮಿಷನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀ ಸುದೀಪ್ ಶ್ರೀವಾಸ್ತವ ಮತ್ತು ವಿಶ್ವ ಬ್ಯಾಂಕ್ ಸಮೂಹದ ಅಭಿವೃದ್ಧಿ ಅರ್ಥಶಾಸ್ತ್ರ ವಿಭಾಗದ ಕಾರ್ಯತಂತ್ರ ನಿರ್ದೇಶಕ ಡಾ. ಸೋಮಿಕ್ ಲಾಲ್ ಅವರ ಸ್ವಾಗತ ಭಾಷಣದೊಂದಿಗೆ ಕಾರ್ಯಕ್ರಮ ಆರಂಭವಾಯಿತು.

“ವಿಶ್ವ ಅಭಿವೃದ್ಧಿ ವರದಿಯ ಪ್ರಮುಖ ಸಂದೇಶಗಳಲ್ಲಿ ಒಂದಾಗಿರುವುದು ಕೃತಕ ಬುದ್ಧಿಮತ್ತೆಯನ್ನು ಸೃಷ್ಟಿಸುವುದರ ಬಗ್ಗೆ ಅಲ್ಲ, ಅದನ್ನು ಬಳಸಿಕೊಳ್ಳುವುದರ ಬಗ್ಗೆ. ಸಂಸ್ಥೆಗಳು, ಮಾರುಕಟ್ಟೆಗಳು ಮತ್ತು ಎಐಯನ್ನು ಒಗ್ಗೂಡಿಸಿ ಲಕ್ಷಾಂತರ ಜನರ ಬದುಕನ್ನು ಪರಿವರ್ತಿಸಲು ಭಾರತಕ್ಕೆ ವಿಶಿಷ್ಟ ಅವಕಾಶವಿದೆ” ಎಂದು ಡಾ. ಸೋಮಿಕ್ ಲಾಲ್ ಹೇಳಿದರು.

"ಎಐ ಪ್ರಾಯೋಗಿಕ ಯೋಜನೆಗಳಿಂದ ವಿಸ್ತರಣೆಯವರೆಗೆ: ಭಾರತದಲ್ಲಿ ಎಐನ ಭರವಸೆ" ಎಂಬ ವಿಷಯದ ಕುರಿತು ಪ್ರಧಾನ ಉಪನ್ಯಾಸ ನೀಡಿದ ವಿಶ್ವ ಬ್ಯಾಂಕ್ ಸಮೂಹದ ಮುಖ್ಯ ಅರ್ಥಶಾಸ್ತ್ರಜ್ಞ ಹಾಗೂ ಹಿರಿಯ ಉಪಾಧ್ಯಕ್ಷ ಡಾ. ಮೈಕೆಲ್ ಕ್ರೆಮರ್, ಎಐ ಕ್ಷೇತ್ರದಲ್ಲಿ ಭಾರತದ ಪ್ರಗತಿಯು ಅಭಿವೃದ್ಧಿಶೀಲ ಜಗತ್ತಿಗೆ ಹಲವು ಪಾಠಗಳನ್ನು ಒದಗಿಸುತ್ತದೆ ಎಂದು ಹೇಳಿದರು. “ಎಐ ಕ್ಷೇತ್ರದಲ್ಲಿ ಭಾರತದ ಭಾರಿ ಪ್ರಗತಿಯು ತನ್ನದೇ ಸಮಸ್ಯೆಗಳನ್ನು ಪರಿಹರಿಸುವುದಷ್ಟೇ ಅಲ್ಲದೆ, ಜಗತ್ತು ಎದುರಿಸುತ್ತಿರುವ ವ್ಯಾಪಕ ಅಭಿವೃದ್ಧಿ ಸವಾಲುಗಳಿಗೂ ಪರಿಹಾರ ಕಂಡುಕೊಳ್ಳಲು ನೆರವಾಗುತ್ತಿದೆ” ಎಂದು ಅವರು ಹೇಳಿದರು.

ಆಂಧ್ರಪ್ರದೇಶದಲ್ಲಿ ರೈತರಿಗೆ ಹವಾಮಾನ ಸಲಹೆ ನೀಡುವ ವ್ಯವಸ್ಥೆ ಮತ್ತು EdTech ಪರಿಹಾರಗಳ ಉದಾಹರಣೆಗಳನ್ನು ನೀಡಿದ ಅವರು, “ಎಐ ಪರಿಹಾರಗಳನ್ನು ದೊಡ್ಡ ಪ್ರಮಾಣದಲ್ಲಿ ಅಳವಡಿಸಿಕೊಳ್ಳಲು ನಾವು ಸಂಪೂರ್ಣ ವ್ಯವಸ್ಥೆಯನ್ನು ಒಳಗೊಂಡ ವಿಧಾನವನ್ನು ಅನುಸರಿಸಬೇಕು. ಕೇವಲ ಸಾಫ್ಟ್‌ವೇರ್‌ನ ಕೆಲವು ಅಂಶಗಳಷ್ಟೇ ಅಲ್ಲದೆ, ಅದರೊಂದಿಗೆ ಅಗತ್ಯವಿರುವ ಮಾನವ ಸಂಪನ್ಮೂಲ ಮತ್ತು ಸಾಂಸ್ಥಿಕ ಅಂಶಗಳನ್ನೂ ಒಳಗೊಂಡಿರಬೇಕು” ಎಂದು ಅವರು ಹೇಳಿದರು.

ಭಾರತದ ಎಐ ಆಧಾರಿತ ಮುಂಗಾರು ಮುನ್ಸೂಚನೆಯನ್ನು ಜಗತ್ತಿಗೆ ಮಾದರಿಯಾಗಿರುವ ಉದಾಹರಣೆಯಾಗಿ ಡಾ. ಕ್ರೆಮರ್ ಉಲ್ಲೇಖಿಸಿದರು. ಭಾರತ ಸರ್ಕಾರವು ತನ್ನ ಹವಾಮಾನ ಸಂಸ್ಥೆಗಳು ಮತ್ತು ಕೃಷಿ ಸಚಿವಾಲಯದ ಮೂಲಕ ಮುಕ್ತ ಪ್ರವೇಶದ ಮಾದರಿಗಳನ್ನೂ ಒಳಗೊಂಡಂತೆ ಹಲವು ಎಐ ಮಾದರಿಗಳನ್ನು ಪರೀಕ್ಷಿಸಿ, ಸಂಯೋಜಿಸಿತು. ಬಳಿಕ ಲಕ್ಷಾಂತರ ರೈತರಿಗೆ ಪಠ್ಯ ಸಂದೇಶ, ಧ್ವನಿ ಮತ್ತು ಎಐ ಆಧಾರಿತ ಸಲಹೆಗಳ ಮೂಲಕ ಮುನ್ಸೂಚನೆಗಳನ್ನು ತಲುಪಿಸಲಾಯಿತು. ಈ ಮಾದರಿಯು 2025ರ ಅಸಾಮಾನ್ಯ ಮುಂಗಾರನ್ನು ಮುನ್ಸೂಚಿಸಿತ್ತು. ಇದೀಗ ಇಥಿಯೋಪಿಯಾ ಕೂಡ ಭಾರತದ ಮಾರ್ಗವನ್ನು ಅನುಸರಿಸುತ್ತಿದೆ. ವಾಣಿಜ್ಯ ಲಾಭಗಳು ಕಡಿಮೆಯಿದ್ದರೂ ಸಾಮಾಜಿಕ ಪ್ರಯೋಜನದ ಸಾಧ್ಯತೆ ಹೆಚ್ಚಿರುವ ಸಂದರ್ಭಗಳಲ್ಲಿ ಸರ್ಕಾರ ಪ್ರಮುಖ ಪಾತ್ರ ವಹಿಸಬೇಕಾಗುತ್ತದೆ ಎಂಬುದನ್ನು ಈ ಉದಾಹರಣೆ ತೋರಿಸುತ್ತದೆ ಎಂದು ಅವರು ಹೇಳಿದರು.

ಇದಾದ ಬಳಿಕ ವಿಶ್ವ ಅಭಿವೃದ್ಧಿ ವರದಿ 2026ರ ಪ್ರಮುಖ ಅಂಶಗಳನ್ನು ವರದಿಯ ನಿರ್ದೇಶಕ ಡಾ. ಗೌರವ್ ನಯ್ಯರ್ ಪ್ರಸ್ತುತಪಡಿಸಿದರು.

“ಸ್ಥಳೀಯ ಪರಿಸರಕ್ಕೆ ಅನುಗುಣವಾಗಿ ಎಐ ಸಾಧನಗಳನ್ನು ಅಳವಡಿಸಿಕೊಳ್ಳುವ ಮೂಲಕ, ಸರ್ಕಾರವು ಈ ಹೊಸ ತಂತ್ರಜ್ಞಾನದ ಸಕ್ರಿಯಗೊಳಿಸುವಿಕೆ, ಬಳಕೆದಾರ ಮತ್ತು ನಿಯಂತ್ರಕನ ಪಾತ್ರ ವಹಿಸುತ್ತಿರುವುದರಿಂದ ಭಾರತ ಈಗಾಗಲೇ ಅಭಿವೃದ್ಧಿಗಾಗಿ ಎಐ ಬಳಸುವ ಮಾರ್ಗದಲ್ಲಿ ಮುನ್ನಡೆಯುತ್ತಿದೆ. ಒಂದು ಶತಮಾನದಲ್ಲಿ ಸಾಧಿಸಲು ಸಾಧ್ಯವಾಗದಿದ್ದುದನ್ನು ಭಾರತ ಸೇರಿದಂತೆ ಅಭಿವೃದ್ಧಿಶೀಲ ದೇಶಗಳು ಎಐ ಮೂಲಕ ಕೆಲವೇ ದಶಕಗಳಲ್ಲಿ ಸಾಧಿಸಲು ಸಾಧ್ಯವಾಗಬಹುದು” ಎಂದು ಡಾ. ನಯ್ಯರ್ ಹೇಳಿದರು.

ಅಭಿವೃದ್ಧಿಶೀಲ ದೇಶಗಳಿಗಾಗಿ ವರದಿಯ ಪ್ರಮುಖ ಸಂದೇಶಗಳನ್ನು ಪ್ರಸ್ತುತಪಡಿಸಿದ ಅವರು, ಆಶಾವಾದಿಯಾಗಿರಿ, ಕಾರ್ಯತಂತ್ರ ರೂಪಿಸಿ ಮತ್ತು ವಾಸ್ತವಿಕವಾಗಿರಿ ಎಂದು ತಿಳಿಸಿದರು. ದೇಶಗಳು ಮೊದಲು ಎಐಯನ್ನು ಅಳವಡಿಸಿಕೊಂಡು, ಅದನ್ನು ತಮ್ಮ ಸ್ಥಳೀಯ ಅಗತ್ಯಗಳಿಗೆ ಹೊಂದಿಸಿಕೊಳ್ಳಬೇಕು ಮತ್ತು ಬಳಿಕ ಅದರ ಅಭಿವೃದ್ಧಿಯಲ್ಲಿ ಮುಂದುವರಿಯಬೇಕು. ಶತಕೋಟಿ ಡಾಲರ್‌ಗಳನ್ನು ವೆಚ್ಚ ಮಾಡಿ ಸುಧಾರಿತ ಎಐ ವ್ಯವಸ್ಥೆಗಳನ್ನು ಆರಂಭದಿಂದಲೇ ನಿರ್ಮಿಸುವ ಬದಲು, ಎಐ ಸಾಧನಗಳನ್ನು ಸ್ಥಳೀಯ ಪರಿಸರಕ್ಕೆ ಹೊಂದಿಸುವತ್ತ ಗಮನಹರಿಸಬೇಕು. ಎಐನ ಸಕ್ರಿಯಗೊಳಿಸುವವರು, ಬಳಕೆದಾರರು ಮತ್ತು ನಿಯಂತ್ರಕರಾಗಿ ವೆಚ್ಚದ ಬಗ್ಗೆ ಎಚ್ಚರಿಕೆಯಿಂದ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ವರದಿ ತಿಳಿಸಿದೆ. ಅಭಿವೃದ್ಧಿಶೀಲ ದೇಶಗಳಲ್ಲಿ ಉದ್ಯೋಗಗಳ ಮೇಲೆ ಉಂಟಾಗಬಹುದಾದ ಅಡಚಣೆಯ ಅಪಾಯವು ಸದ್ಯಕ್ಕೆ ಕಡಿಮೆ ತುರ್ತಿನದ್ದಾಗಿದೆ ಎಂದೂ ವರದಿ ಹೇಳಿದೆ. ಎಐಯಿಂದ ಹೆಚ್ಚಿನ ಪ್ರಯೋಜನ ಪಡೆಯಬಹುದಾದ ದೇಶಗಳೇ ಇದಕ್ಕಾಗಿ ಅತ್ಯಂತ ಕಡಿಮೆ ಸಿದ್ಧತೆ ಹೊಂದಿರುವ ಸಾಧ್ಯತೆಯಿದೆ. ವಿಶ್ವದ 25 ಕಡಿಮೆ ಆದಾಯದ ದೇಶಗಳಲ್ಲಿ ಕೇವಲ ಒಂದು ದೇಶ ಮಾತ್ರ ರಾಷ್ಟ್ರೀಯ ಎಐ ಕಾರ್ಯತಂತ್ರವನ್ನು ಪ್ರಕಟಿಸಿದೆ ಎಂಬುದನ್ನೂ ವರದಿ ಗಮನಿಸಿದೆ.

ವಿಶ್ವ ಬ್ಯಾಂಕ್ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ನೀಲಕಂಠ್ ಮಿಶ್ರಾ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಶ್ರೀ ಎಸ್. ಕೃಷ್ಣನ್ ಅವರು ವಿಶೇಷ ಭಾಷಣಗಳನ್ನು ಮಾಡಿದರು.

“ವಿಶ್ವ ಅಭಿವೃದ್ಧಿ ವರದಿಯು ಭಾರತದ ಎಐ ಮಾರ್ಗಸೂಚಿಯಾದ ಕಂಪ್ಯೂಟ್, ಡೇಟಾ ಮತ್ತು ಮಾಡೆಲ್‌ಗಳೊಂದಿಗೆ ನಿಕಟವಾಗಿ ಹೊಂದಿಕೆಯಾಗುತ್ತದೆ ಮತ್ತು ನಿಯಂತ್ರಣಕ್ಕೆ ಸಮಂಜಸವಾದ ವಿಧಾನವನ್ನು ಒದಗಿಸುತ್ತದೆ: ಪ್ರಸ್ತುತ ಇರುವ ಕಾನೂನುಗಳು ಮತ್ತು ಸ್ವಯಂಪ್ರೇರಿತ ಅನುಸರಣೆಯನ್ನು ನಂಬುವುದು ಮತ್ತು ತಂತ್ರಜ್ಞಾನ ವಿಕಸನಗೊಂಡಂತೆ ನಿಯಂತ್ರಣವನ್ನು ಮರುಪರಿಶೀಲಿಸುವುದು” ಎಂದು ಶ್ರೀ ಎಸ್. ಕೃಷ್ಣನ್ ಹೇಳಿದರು.

ಮಾನವ ಸಾಮರ್ಥ್ಯಗಳೇ ಅತ್ಯಂತ ಮಹತ್ವದ್ದಾಗಿವೆ ಎಂದು ಶ್ರೀ ಕೃಷ್ಣನ್ ಹೇಳಿದರು. ಪ್ರಧಾನಮಂತ್ರಿಯವರ ದೃಷ್ಟಿಕೋನಕ್ಕೆ ಅನುಗುಣವಾಗಿ ಎಐ ಟ್ಯಾಲೆಂಟ್ ಮಿಷನ್‌ ಕುರಿತ ಕಾರ್ಯ ಈಗಾಗಲೇ ನಡೆಯುತ್ತಿದೆ ಎಂದು ಅವರು ತಿಳಿಸಿದರು. ವಿಶ್ವದಲ್ಲೇ ಅತ್ಯಧಿಕ ಎಐ ಕೌಶಲ್ಯ ಹೊಂದಿರುವ ದೇಶಗಳಲ್ಲಿ ಭಾರತವೂ ಒಂದಾಗಿರುವುದರಿಂದ, ಜಾಗತಿಕ ದಕ್ಷಿಣದ ದೇಶಗಳಿಗೆ ಭಾರತ ನೆರವು ನೀಡಬಲ್ಲದು. ದೇಶದೊಳಗೆ ಉದ್ಯಮಗಳಲ್ಲಿ ಎಐ ಅಳವಡಿಕೆ ಮತ್ತಷ್ಟು ವಿಸ್ತರಿಸಬೇಕಿದ್ದು, ಸರ್ಕಾರವೂ ವೇಗವಾಗಿ ಬದಲಾಗುವ ಪರಿಸ್ಥಿತಿಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.

ಇದಾದ ಬಳಿಕ‌ “ಭಾರತದಲ್ಲಿ ಅಭಿವೃದ್ಧಿಗಾಗಿ ಎಐ ಅನ್ನು ಕಾರ್ಯರೂಪಕ್ಕೆ ತರುವುದು” ವಿಷಯದ ಕುರಿತು ಉನ್ನತ ಮಟ್ಟದ ಸಮಿತಿ ಚರ್ಚೆ ನಡೆಯಿತು. ಭಾರತದಲ್ಲಿ ಎಐ ಅಳವಡಿಸಿಕೊಳ್ಳುವಲ್ಲಿನ ಸವಾಲುಗಳು, ಎಐಯನ್ನು ಭಾರತವು ಹೇಗೆ ಬಳಸಿಕೊಳ್ಳಬಹುದು ಮತ್ತು ಸ್ಥಳೀಯ ಪರಿಸರ ಹಾಗೂ ಅಗತ್ಯಗಳಿಗೆ ಅನುಗುಣವಾಗಿ ಹೇಗೆ ರೂಪಿಸಬಹುದು, ಹಾಗೆಯೇ ಎಐಯಿಂದ ಉಂಟಾಗಬಹುದಾದ ಅಪಾಯಗಳನ್ನು ನಿಯಂತ್ರಿಸಲು ಅಗತ್ಯವಿರುವ ನೀತಿಗಳು ಎಂಬ ಮೂರು ಪ್ರಮುಖ ಪ್ರಶ್ನೆಗಳ ಕುರಿತು ಚರ್ಚೆ ನಡೆಯಿತು. ಎಐನ ಪ್ರಯೋಜನಗಳು ವ್ಯಾಪಕವಾಗಿ ಎಲ್ಲರಿಗೂ ತಲುಪುವುದನ್ನು ಖಚಿತಪಡಿಸುವ ಹಾಗೂ ಅದರ ಅಪಾಯಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವ ನೀತಿಗಳ ಅಗತ್ಯವಿದೆ ಎಂದು ಚರ್ಚೆಯಲ್ಲಿ ಒತ್ತಿಹೇಳಲಾಯಿತು.

ಚರ್ಚೆಯಲ್ಲಿ ವಿಶ್ವ ಬ್ಯಾಂಕ್ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ನೀಲಕಂಠ್ ಮಿಶ್ರಾ, ವಿಶ್ವ ಬ್ಯಾಂಕ್ ಸಮೂಹದ ಅಭಿವೃದ್ಧಿ ಅರ್ಥಶಾಸ್ತ್ರ ವಿಭಾಗದ ಕಾರ್ಯತಂತ್ರ ನಿರ್ದೇಶಕ ಡಾ. ಸೋಮಿಕ್ ಲಾಲ್, ಸರ್ವಂ ಎಐನ ಸಹ-ಸಂಸ್ಥಾಪಕ ಡಾ. ವಿವೇಕ್ ರಾಘವನ್, ವಾಧ್ವಾನಿ ಎಐನ ಮುಖ್ಯ ಕಾರ್ಯಕ್ರಮ ಅಧಿಕಾರಿ ಡಾ. ನೀರಜ್ ಅಗರ್ವಾಲ್, ಭಾರತ್‌ಜೆನ್ ಉಪಾಧ್ಯಕ್ಷ ಶ್ರೀ ಮನೀಶ್ ಸಿಂಗ್ ಮತ್ತು ಏಕ್‌ಸ್ಟೆಪ್ ಫೌಂಡೇಶನ್ ಸಹ-ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಶಂಕರ್ ಮರುವಾಡ ಭಾಗವಹಿಸಿದ್ದರು. ಸಿಎನ್‌ಬಿಸಿ-ಟಿವಿ18ನ ವ್ಯವಸ್ಥಾಪಕ ಸಂಪಾದಕಿ ಶ್ರೀಮತಿ ಶೆರೀನ್ ಭಾನ್ ಅವರು ಚರ್ಚೆಯನ್ನು ನಿರ್ವಹಿಸಿದರು. ಪ್ರತ್ಯೇಕ ಪ್ರಾಯೋಗಿಕ ಯೋಜನೆಗಳ ಹಂತವನ್ನು ಮೀರಿ, ಸಾಕ್ಷ್ಯಾಧಾರಿತವಾಗಿ ಅವುಗಳನ್ನು ದೊಡ್ಡ ಪ್ರಮಾಣದಲ್ಲಿ ಅಳವಡಿಸಿಕೊಳ್ಳುವತ್ತ ಸಾಗುವುದು, ಸ್ಥಳೀಯ ಸಾಮರ್ಥ್ಯಗಳನ್ನು ಬಲಪಡಿಸುವುದು, ದತ್ತಾಂಶ ಮತ್ತು ಕಂಪ್ಯೂಟಿಂಗ್‌ ಸಾಮರ್ಥ್ಯಕ್ಕೆ ಉತ್ತಮ ಪ್ರವೇಶ ಕಲ್ಪಿಸುವುದು, ಸೂಕ್ತ ಸಾಂಸ್ಥಿಕ ಚೌಕಟ್ಟುಗಳನ್ನು ರೂಪಿಸುವುದು ಮತ್ತು ಭಾರತದ ವೈವಿಧ್ಯಮಯ ಸಾಮಾಜಿಕ ಹಾಗೂ ಆರ್ಥಿಕ ಪರಿಸರಕ್ಕೆ ಎಐ ಪರಿಹಾರಗಳು ಪ್ರಸ್ತುತವಾಗಿರುವಂತೆ ನೋಡಿಕೊಳ್ಳುವ ಅಗತ್ಯವನ್ನು ಸಮಿತಿ ಸದಸ್ಯರು ಒತ್ತಿಹೇಳಿದರು.

ಸಮಿತಿ ಚರ್ಚೆಯ ಬಳಿಕ "ಭಾರತದಾದ್ಯಂತ ಎಐ ನಾವೀನ್ಯತೆಗಳು" ಎಂಬ ರಾಜ್ಯಗಳ ಎಐ ಪ್ರದರ್ಶನ ನಡೆಯಿತು. ಸ್ಥಳೀಯ ಹಾಗೂ ಅಭಿವೃದ್ಧಿ ಸಂಬಂಧಿತ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ವಿವಿಧ ಕ್ಷೇತ್ರಗಳಲ್ಲಿ ರಾಜ್ಯಗಳು ದೊಡ್ಡ ಪ್ರಮಾಣದಲ್ಲಿ ಅಳವಡಿಸಿಕೊಳ್ಳಬಹುದಾದ ಎಐ ಬಳಕೆಗಳನ್ನು ಹೇಗೆ ಅನುಷ್ಠಾನಗೊಳಿಸುತ್ತಿವೆ ಎಂಬುದರ ಕುರಿತು ಈ ಪ್ರದರ್ಶನವು ಚಿತ್ರಣ ನೀಡಿತು. ಪ್ರಸ್ತುತಪಡಿಸಿದ ಪ್ರತಿಯೊಬ್ಬರೂ ಒಂದು ಪ್ರಮುಖ ಎಐ ಆಧಾರಿತ ಪರಿಹಾರ, ಅದರ ಅನುಷ್ಠಾನದ ಪಯಣ ಮತ್ತು ಅದರ ಮೂಲಕ ದೊರೆತ ಅಳೆಯಬಹುದಾದ ಪರಿಣಾಮವನ್ನು ವಿವರಿಸಿದರು. ಅವುಗಳೆಂದರೆ:

  • ನವಚೇತನ (Navachetana), 0ರಿಂದ 6 ವರ್ಷದೊಳಗಿನ ಮಕ್ಕಳಲ್ಲಿ ಬೆಳವಣಿಗೆಯ ವಿಳಂಬವನ್ನು ಗುರುತಿಸಲು ಆರಂಭಿಕ ಹಂತದಲ್ಲೇ ತಪಾಸಣೆ ನಡೆಸುವ ಎಐ ಆಧಾರಿತ ಉಪಕ್ರಮ. ಇದನ್ನು ಆಂಧ್ರಪ್ರದೇಶದ ಮಹಿಳಾ ಅಭಿವೃದ್ಧಿ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರ್ದೇಶಕ ಶ್ರೀ ಎಂ. ವೇಣುಗೋಪಾಲ್ ರೆಡ್ಡಿ ಪ್ರಸ್ತುತಪಡಿಸಿದರು;
  • ಮಹಾವಿಸ್ತಾರ್ ಎಐ (MahaVISTAAR AI), ವೈಯಕ್ತಿಕ ಅಗತ್ಯಗಳಿಗೆ ಅನುಗುಣವಾದ ಸಲಹೆಗಳು, ಡಿಜಿಟಲ್ ಸೇವೆಗಳು ಮತ್ತು ರೈತರೊಂದಿಗೆ ಸಂಪರ್ಕಕ್ಕಾಗಿ ರೂಪಿಸಲಾದ ಸಮಗ್ರ ವೇದಿಕೆ. ಇದನ್ನು ಮಹಾರಾಷ್ಟ್ರದ PoCRA ಯೋಜನೆಯ ಶ್ರೀ ಫಹೀಮ್ ಶೇಖ್ ಪ್ರಸ್ತುತಪಡಿಸಿದರು;
  • ಎಡ್ಸ್‌ಕ್‌ಗ್ರಿಡ್ (EdskGrid), ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಜಿಯೋ-ಕೃತಕ ಬುದ್ಧಿಮತ್ತೆ (GeoAI) ಆಧಾರಿತ ಆಡಳಿತ ಮಾಹಿತಿ ಮತ್ತು ವಿಶ್ಲೇಷಣಾ ಪರಿಹಾರ. ಇದನ್ನು ಮೇಘಾಲಯದ ಸಮಗ್ರ ಶಿಕ್ಷಣ ಅಭಿಯಾನದ ರಾಜ್ಯ ಯೋಜನಾ ನಿರ್ದೇಶಕಿ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ನಿರ್ದೇಶಕಿ ಶ್ರೀಮತಿ ರಿಚಾ ಕುಲಕರ್ಣಿ ಪ್ರಸ್ತುತಪಡಿಸಿದರು;
  • ವ್ಯೂಹಾ-ಸರ್ವಿಕೇರ್ (Vyuhaa-Cerviai), ಆರೋಗ್ಯ ಸೇವೆ ಒದಗಿಸುವ ಸ್ಥಳದಲ್ಲಿಯೇ ಗರ್ಭಕಂಠದ ಕ್ಯಾನ್ಸರ್ ತಪಾಸಣೆ ನಡೆಸಲು ಅಭಿವೃದ್ಧಿಪಡಿಸಿದ ಪರಿಹಾರ. ಇದನ್ನು NCG Catch Grantನ ವಿಜೇತರಾದ ವ್ಯೂಹಾ ಮೆಡ್ ಡೇಟಾ ಸಂಸ್ಥೆಯ ಸಹ-ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಧೃತಿಮಾನ್ ಮಲ್ಲಿಕ್ ಪ್ರಸ್ತುತಪಡಿಸಿದರು.

ಈ ಪ್ರದರ್ಶನವು ವಿವಿಧ ವಿಧಾನಗಳು, ರೂಪುಗೊಳ್ಳುತ್ತಿರುವ ಮಾದರಿಗಳು ಮತ್ತು ವಿವಿಧ ಭೌಗೋಳಿಕ ಪ್ರದೇಶಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯ ಹೊಂದಿರುವ ಪರಿಹಾರಗಳನ್ನು ಎತ್ತಿ ತೋರಿಸಿತು.

ಎಐ ಕುರಿತು ಸಾರ್ವಜನಿಕರಲ್ಲಿ ವಿಶ್ವಾಸ ಬೆಳೆಸುವುದು ಹಾಗೂ ಈ ತಂತ್ರಜ್ಞಾನವು ಸುರಕ್ಷಿತ, ಜವಾಬ್ದಾರಿಯುತ ಮತ್ತು ಎಲ್ಲರನ್ನೂ ಒಳಗೊಂಡ ರೀತಿಯಲ್ಲಿ ಅಭಿವೃದ್ಧಿಯಾಗುವುದನ್ನು ಖಚಿತಪಡಿಸಿಕೊಳ್ಳುವುದು ಅತ್ಯಂತ ಮುಖ್ಯ ಎಂದು ಚರ್ಚೆಗಳು ಒತ್ತಿಹೇಳಿದವು. ‘ವಿಶ್ವ ಅಭಿವೃದ್ಧಿ ವರದಿ 2026: ಕೃತಕ ಬುದ್ಧಿಮತ್ತೆಯ ಭರವಸೆ’ಯ ಭಾರತ ಬಿಡುಗಡೆ ಕಾರ್ಯಕ್ರಮವು ಅಭಿವೃದ್ಧಿಗೆ ನೆರವಾಗುವ ಸಾಧನವಾಗಿ ಎಐನ ಸಾಮರ್ಥ್ಯವನ್ನು ಬಳಸಿಕೊಳ್ಳುವ ಕುರಿತು ನಡೆಯುತ್ತಿರುವ ಜಾಗತಿಕ ಚರ್ಚೆಗೆ ಮಹತ್ವದ ಧ್ವನಿಯನ್ನು ಸೇರಿಸಿದೆ. ಎಐ ಕ್ಷೇತ್ರದಲ್ಲಿ ಆಗುತ್ತಿರುವ ಪ್ರಗತಿಯನ್ನು ವ್ಯಾಪಕ ಮತ್ತು ಸುಸ್ಥಿರ ಅಭಿವೃದ್ಧಿಯ ಫಲಿತಾಂಶಗಳಾಗಿ ಪರಿವರ್ತಿಸಲು ಅಗತ್ಯವಿರುವ ಮೂಲಭೂತ ಸಾಮರ್ಥ್ಯಗಳು, ಸಂಸ್ಥೆಗಳು ಮತ್ತು ನೀತಿ ಚೌಕಟ್ಟುಗಳನ್ನು ದೇಶಗಳು ನಿರ್ಮಿಸಬೇಕಾದ ಅಗತ್ಯವನ್ನೂ ಈ ಕಾರ್ಯಕ್ರಮ ಮತ್ತೊಮ್ಮೆ ಒತ್ತಿಹೇಳಿತು.

ಇಂಡಿಯಾಎಐ ಮಿಷನ್‌ನ ನಿರ್ದೇಶಕ ಶ್ರೀ Md. ವೈ. ಸಫೀರುಲ್ಲಾ ಕೆ. ಅವರ ಸಮಾರೋಪ ನುಡಿಗಳೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

 

*****

 

 

 


(ಪ್ರಕಟಣೆ ಐ.ಡಿ.: 2320958) ವಿಸಿಟರ್ ಕೌಂಟರ್ : 9
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Odia