ಪ್ರಧಾನ ಮಂತ್ರಿಯವರ ಕಛೇರಿ
ಗ್ಲೋಬಲ್ ಸಿಸ್ಟಂ ಫಾರ್ ಮೊಬೈಲ್ ಕಮ್ಯುನಿಕೇಷನ್ ಅಸೋಸಿಯೇಷನ್ (ಜಿಎಸ್‌ಎಂಎ) ಮಂಡಳಿ ಸದಸ್ಯರೊಂದಿಗೆ ಸಂವಾದ ನಡೆಸಿದ ಪ್ರಧಾನಮಂತ್ರಿ
ತಂತ್ರಜ್ಞಾನವು ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿಯ ಸಾಧನವಾಗಬೇಕು: ಪ್ರಧಾನಮಂತ್ರಿ
ಸೈಬರ್ ವಂಚನೆ ತಡೆಗೆ ತಂತ್ರಜ್ಞಾನ ಆಧಾರಿತ ಪರಿಹಾರಗಳು ಅತ್ಯಗತ್ಯ: ಪ್ರಧಾನಮಂತ್ರಿ
ಭಾರತದ ಡಿಜಿಟಲ್ ಪರಿವರ್ತನೆ ಮತ್ತು ಜಾಗತಿಕ ತಂತ್ರಜ್ಞಾನ ಪಾಲುದಾರಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದ ದೂರಸಂಪರ್ಕ ಕಂಪನಿಗಳ ಪ್ರತಿನಿಧಿಗಳು
6ಜಿ ಮತ್ತು ಕೃತಕ ಬುದ್ಧಿಮತ್ತೆ ಕ್ಷೇತ್ರಗಳಲ್ಲಿ ಭಾರತದೊಂದಿಗೆ ಜಾಗತಿಕ ಸಹಕಾರಕ್ಕೆ ಇರುವ ಅವಕಾಶಗಳನ್ನು ಶ್ಲಾಘಿಸಿದ ಜಿಎಸ್‌ಎಂಎ ಮಂಡಳಿ ಸದಸ್ಯರು
ಪ್ರಕಟಣಾ ದಿನಾಂಕ:
06 OCT 2026 8:16PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮುಂಬರುವ ಇಂಡಿಯಾ ಮೊಬೈಲ್ ಕಾಂಗ್ರೆಸ್ ಸಮಾವೇಶದ ಹಿನ್ನೆಲೆಯಲ್ಲಿ ಮಂಗಳವಾರ ಸೇವಾ ತೀರ್ಥದಲ್ಲಿ ಗ್ಲೋಬಲ್ ಸಿಸ್ಟಮ್ ಫಾರ್ ಮೊಬೈಲ್ ಕಮ್ಯುನಿಕೇಷನ್ಸ್ ಅಸೋಸಿಯೇಷನ್ (ಜಿಎಸ್‌ಎಂಎ) ಮಂಡಳಿ ಸದಸ್ಯರೊಂದಿಗೆ ಸಂವಾದ ನಡೆಸಿದರು. ಜಿಎಸ್‌ಎಂಎ ಜಾಗತಿಕ ಮೊಬೈಲ್ ಪೂರಕ ವ್ಯವಸ್ಥೆಯನ್ನು ಒಗ್ಗೂಡಿಸುವ ಸಂಸ್ಥೆಯಾಗಿದ್ದು, ಮೊಬೈಲ್ ಸೇವಾ ಪೂರೈಕೆದಾರರು ಹಾಗೂ ಮೊಬೈಲ್ ಪೂರಕ ವ್ಯವಸ್ಥೆ ಮತ್ತು ಅದಕ್ಕೆ ಸಂಬಂಧಿಸಿದ ಉದ್ಯಮಗಳ ಸಂಸ್ಥೆಗಳನ್ನು ಪ್ರತಿನಿಧಿಸುತ್ತದೆ.
ತಂತ್ರಜ್ಞಾನವು ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿಗೆ ನೆರವಾಗುವ ಸಾಧನವಾಗಬೇಕು ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು. ಸಮಾಜದ ಯಾವುದೇ ವರ್ಗವು ತಂತ್ರಜ್ಞಾನದಿಂದ ಹೊರಗುಳಿಯದಂತೆ ನೋಡಿಕೊಳ್ಳಲು ತಂತ್ರಜ್ಞಾನ ಎಲ್ಲರಿಗೂ ಲಭ್ಯವಾಗುವಂತೆ ಸಮಗ್ರ ಬಳಕೆ ಮಾಡುವ ಅಗತ್ಯವಾಗಿದೆ ಎಂದು ಅವರು ಹೇಳಿದರು. ವಿಶೇಷವಾಗಿ ಜಾಗತಿಕ ದಕ್ಷಿಣದ ದೇಶಗಳಿಗೆ ತಂತ್ರಜ್ಞಾನ ಮತ್ತು ಡಿಜಿಟಲ್ ಸೇವೆಗಳು ಕೈಗೆಟಕುವ ದರದಲ್ಲಿ ಹಾಗೂ ಸುಲಭವಾಗಿ ಲಭ್ಯವಾಗುವಂತೆ ಮಾಡಬೇಕಿದೆ ಎಂದ ಅವರು, ಡಿಜಿಟಲ್ ಅಂತರ ಮತ್ತಷ್ಟು ವಿಸ್ತರಣೆಯಾಗದಂತೆ ತಡೆಯಲು ತಂತ್ರಜ್ಞಾನವನ್ನು ಕಟ್ಟಕಡೆಯ ವ್ಯಕ್ತಿಯವರೆಗೂ ತಲುಪಿಸುವುದು ಅತಿ ಮುಖ್ಯವಾಗಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು.
ವಿಶೇಷವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಪರಿವರ್ತನೆ ತರಬಲ್ಲ ಶಕ್ತಿಯಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವು (ಡಿಪಿಐ) ಹೊಂದಿರುವ ಸಾಮರ್ಥ್ಯವನ್ನು ಪ್ರಧಾನಮಂತ್ರಿ ವಿವರಿಸಿದರು. ಡಿಪಿಐ ಕುರಿತು ಹಲವು ಜಾಗತಿಕ ನಾಯಕರೊಂದಿಗೆ ನಡೆಸಿರುವ ಚರ್ಚೆಗಳು ಅದರ ಜಾಗತಿಕ ಪ್ರಸ್ತುತತೆ ಹೆಚ್ಚುತ್ತಿರುವುದನ್ನು ತೋರಿಸಿವೆ. ಇಂತಹ ವೇದಿಕೆಗಳು ಜಾಗತಿಕ ದಕ್ಷಿಣದ ದೇಶಗಳ ಅಭಿವೃದ್ಧಿಗೆ ಭದ್ರ ಬುನಾದಿಯಾಗಬಲ್ಲವು ಎಂದು ಅವರು ಹೇಳಿದರು.
ಹೆಚ್ಚುತ್ತಿರುವ ಡಿಜಿಟಲ್ ಮತ್ತು ಸೈಬರ್ ವಂಚನೆಗಳ ಸವಾಲಿನ ಕುರಿತು ಪ್ರಸ್ತಾಪಿಸಿದ ಪ್ರಧಾನಮಂತ್ರಿ, ಈ ಸಮಸ್ಯೆಗೆ ತಂತ್ರಜ್ಞಾನ ಆಧಾರಿತ ಪರಿಹಾರಗಳು ಅತ್ಯಗತ್ಯವಾಗಿವೆ ಎಂದು ಅಭಿಪ್ರಾಯಪಟ್ಟರು. ಸಂಭವನೀಯ ವಂಚಕ ಕರೆಗಳ ಕುರಿತು ಜನರನ್ನು ಎಚ್ಚರಿಸಲು ಬಳಕೆದಾರರಿಗೆ ನಿರಂತರವಾಗಿ ಜಾಗೃತಿ ಸಂದೇಶಗಳನ್ನು ಕಳುಹಿಸಬೇಕು ಎಂದು ಸಲಹೆ ನೀಡಿದರು.
ಹೊಸ ತಂತ್ರಜ್ಞಾನಗಳಿಗೆ ಜಾಗತಿಕ ಮಾನದಂಡಗಳು ಮತ್ತು ಸಾಮಾನ್ಯ ನಿಯಮಗಳನ್ನು ರೂಪಿಸುವ ಅಗತ್ಯವನ್ನೂ ಪ್ರಧಾನಮಂತ್ರಿ ಬಲವಾಗಿ ಪ್ರತಿಪಾದಿಸಿದರು. ಡೀಪ್‌ಫೇಕ್ ಮತ್ತು ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಸಲಾದ ವಿಷಯ(ಕಂಟೆಂಟ್)ಗಳಿಂದ ಎದುರಾಗುತ್ತಿರುವ ಅಪಾಯಗಳ ಹಿನ್ನೆಲೆಯಲ್ಲಿ, ಅಂತಹ ವಿಷಯಗಳ ಮೂಲವನ್ನು ಬಳಕೆದಾರರು ತಕ್ಷಣ ಗುರುತಿಸಲು ಅನುಕೂಲವಾಗುವ ವ್ಯವಸ್ಥೆಗಳನ್ನು ರೂಪಿಸುವ ಸಾಧ್ಯತೆಯನ್ನು ಪರಿಶೀಲಿಸಬೇಕು ಎಂದು ಅವರು ಸಲಹೆ ನೀಡಿದರು
ಡಿಜಿಟಲ್ ಮತ್ತು ಮೊಬೈಲ್ ಸಂಪರ್ಕ ಕ್ಷೇತ್ರದಲ್ಲಿ ಭಾರತ ಜಾಗತಿಕ ನಾಯಕನಾಗಿ ಹೊರಹೊಮುತ್ತಿದೆ ಎಂದು ಜಿಎಸ್‌ಎಂಎ ಮಂಡಳಿ ಸದಸ್ಯರು ಪ್ರತಿಪಾದಿಸಿದರು. ದೇಶದಲ್ಲಿ 4ಜಿ ಮತ್ತು 5ಜಿ ಸೇವೆಗಳ ತ್ವರಿತ ವಿಸ್ತರಣೆ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ವ್ಯಾಪ್ತಿ ಹಾಗೂ ದೂರಸಂಪರ್ಕ ಮತ್ತು ಮೊಬೈಲ್ ಉತ್ಪಾದನಾ ಪೂರಕ ವ್ಯವಸ್ಥೆಯ ಬೆಳವಣಿಗೆಯನ್ನು ಅವರು ಉಲ್ಲೇಖಿಸಿದರು. ಭಾರತದ ಹೂಡಿಕೆ ಸ್ನೇಹಿ ನೀತಿ ಚೌಕಟ್ಟನ್ನು ಶ್ಲಾಘಿಸಿದ ಮಂಡಳಿ ಸದಸ್ಯರು, ನಿರಂತರ ಡಿಜಿಟಲ್ ಬೆಳವಣಿಗೆಗೆ ಸುರಕ್ಷಿತ, ಸದೃಢ ಮತ್ತು ವಿಶ್ವಾಸಾರ್ಹ ಡಿಜಿಟಲ್ ಮೂಲಸೌಕರ್ಯ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.
5ಜಿ, 6ಜಿ, ಕೃತಕ ಬುದ್ಧಿಮತ್ತೆ, ಸೈಬರ್ ಭದ್ರತೆ, ಡಿಜಿಟಲ್ ಒಳಗೊಳ್ಳುವಿಕೆ ಮತ್ತು ಉಪಗ್ರಹ ಸಂಪರ್ಕ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾರತದೊಂದಿಗೆ ಅಂತಾರಾಷ್ಟ್ರೀಯ ಸಹಕಾರ ವಿಸ್ತರಣೆಗೆ ಹೆಚ್ಚುತ್ತಿರುವ ಅವಕಾಶಗಳನ್ನೂ ಸಹ ಮಂಡಳಿ ಸದಸ್ಯರು ವಿವರಿಸಿದರು.
ಸಭೆಯಲ್ಲಿ ಕೇಂದ್ರ ಸಂವಹನ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ, ಸಂವಹನ ರಾಜ್ಯ ಖಾತೆ ಸಚಿವರಾದ ಡಾ. ಪೆಮ್ಮಸಾನಿ ಚಂದ್ರಶೇಖರ್, ಜಿಎಸ್‌ಎಂಎ ಮಂಡಳಿ ಸದಸ್ಯರು ಹಾಗೂ ಭಾರತ ಸರ್ಕಾರದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
*****
(ಪ್ರಕಟಣೆ ಐ.ಡಿ.: 2319936)
ವಿಸಿಟರ್ ಕೌಂಟರ್ : 24
ಪ್ರಕಟಣೆಯನ್ನು ಇದರಲ್ಲಿ ಓದಿ:
Assamese
,
English
,
Urdu
,
Marathi
,
हिन्दी
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam