ಗೃಹ ವ್ಯವಹಾರಗಳ ಸಚಿವಾಲಯ
ಟರ್ಕಿಯಿಂದ ಮಾದಕವಸ್ತು ಕಳ್ಳಸಾಗಣೆ ಪ್ರಮುಖ ರೂವಾರಿ, ಪಾತಕಿ ನವಪ್ರೀತ್ ಸಿಂಗ್ ಅವರನ್ನು ಗಡೀಪಾರು ಮಾಡುವ ಮೂಲಕ ಐತಿಹಾಸಿಕ ಮೈಲಿಗಲ್ಲು ಸಾಧಿಸಿದ್ದಕ್ಕಾಗಿ ಎಲ್ಲಾ ಸಂಸ್ಥೆಗಳನ್ನು ಅಭಿನಂದಿಸಿದ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ
ನವಾಬ್ ವಿರ್ಕ್ ಎಂಬ ನಕಲಿ ಗುರುತಿನಡಿಯಲ್ಲಿ ಟರ್ಕಿಯ ಪೌರತ್ವ ಪಡೆದ ಆತ ಅಫ್ಘಾನಿಸ್ತಾನದಿಂದ ಭಾರತಕ್ಕೆ ಹೆರಾಯಿನ್ ಮತ್ತು ಮೆಥಾಂಫೆಟಮೈನ್ ಕಳ್ಳಸಾಗಣೆ ಮಾಡುವುದನ್ನು ಮುಂದುವರೆಸಿದ್ದ
ಇಂದು ಆತನನ್ನು ಭಾರತಕ್ಕೆ ಮರಳಿ ಕರೆತರಲಾಗಿದೆ ಮತ್ತು ಮಾದಕವಸ್ತು ಕಳ್ಳಸಾಗಣೆ ಮತ್ತು ಅವರ ಮೇಲೆ ಆರೋಪ ಹೊರಿಸಲಾದ ಇತರ ಅಪರಾಧಗಳಿಗೆ ಸಂಬಂಧ ಕಾರಾಗೃಹದಲ್ಲಿಡಲಾಗಿದೆ
ಡಿಸೆಂಬರ್ 2029 ಕ್ಕೂ ಮುನ್ನ ಪ್ರತಿಯೊಂದು ಮಾದಕವಸ್ತು ಕಳ್ಳಸಾಗಣೆ ಜಾಲವನ್ನು ನಾಶಮಾಡಲು ನರೇಂದ್ರ ಮೋದಿ ಸರ್ಕಾರ ಬದ್ಧ
2019 ರಿಂದ ಆಗಸ್ಟ್ 2026 ರವರೆಗೆ 36 ದೇಶಗಳಿಂದ ಒಟ್ಟು 288 ಪರಾರಿಯಾದವರನ್ನು ಮರಳಿ ಕರೆತರುವಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಯಶಸ್ವಿ
ಪ್ರಕಟಣಾ ದಿನಾಂಕ:
03 OCT 2026 12:18PM by PIB Bengaluru
ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು ಟರ್ಕಿಯಿಂದ ಮಾದಕವಸ್ತು ಕಳ್ಳಸಾಗಣೆ ಜಾಲದ ಮೂಲಕ ರೂವಾರಿ, ಪಾತಕಿ ನವಪ್ರೀತ್ ಸಿಂಗ್ ಅವರನ್ನು ಗಡೀಪಾರು ಮಾಡುವ ಮೂಲಕ ಐತಿಹಾಸಿಕ ಮೈಲಿಗಲ್ಲು ಸಾಧಿಸಿದ್ದಕ್ಕಾಗಿ ಎಲ್ಲಾ ಸಂಸ್ಥೆಗಳನ್ನು ಅಭಿನಂದಿಸಿದ್ದಾರೆ.
ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ತಮ್ಮ ಸಾಮಾಜಿಕ ಮಾಧ್ಯಮ X ಪೋಸ್ಟ್ ನಲ್ಲಿ ಮಾದಕ ವಸ್ತು ಕಳ್ಳಸಾಗಣೆ ಜಾಲದ ಪ್ರಮುಖ ಆರೋಪಿ ನವಪ್ರೀತ್ ಸಿಂಗ್‌ನನ್ನು ಟರ್ಕಿಯಿಂದ ಗಡಿಪಾರು ಮಾಡಿಸುವಲ್ಲಿ ಮೋದಿ ಸರ್ಕಾರ ಯಶಸ್ವಿಯಾಗಿದ್ದು, ಐತಿಹಾಸಿಕ ಮೈಲುಗಲ್ಲು ಸಾಧಿಸಿದೆ. ‘ನವಾಬ್ ವಿರ್ಕ್’ ಎಂಬ ನಕಲಿ ಗುರುತಿನಲ್ಲಿ ಟರ್ಕಿಯ ಪೌರತ್ವ ಪಡೆದುಕೊಂಡಿದ್ದ ಆತ, ಅಫ್ಗಾನಿಸ್ತಾನದಿಂದ ಭಾರತಕ್ಕೆ ಹೆರಾಯಿನ್ ಮತ್ತು ಮೆಥಾಂಫೆಟಮೈನ್ ಕಳ್ಳಸಾಗಣೆಯನ್ನು ಮುಂದುವರಿಸಿದ್ದ. ನಮ್ಮ ತನಿಖಾ ಸಂಸ್ಥೆಗಳು ಆತನನ್ನು ಪತ್ತೆಹಚ್ಚಿ, ಒಂದೊಂದೇ ಮುಖವಾಡವನ್ನು ಕಳಚುವ ಮೂಲಕ ನಿಜವಾದ ಗುರುತನ್ನು ಬಹಿರಂಗಪಡಿಸಿ, ಗಡಿಪಾರು ಮಾಡಿಸುವಲ್ಲಿ ಯಶಸ್ವಿಯಾಗಿವೆ. ಇಂದು ಆತನನ್ನು ಭಾರತಕ್ಕೆ ಕರೆತರಲಾಗಿದ್ದು, ಮಾದಕ ವಸ್ತು ಕಳ್ಳಸಾಗಣೆ ಹಾಗೂ ಆತನ ವಿರುದ್ಧ ಆರೋಪಿಸಲಾಗಿರುವ ಇತರ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಜೈಲಿಗೆ ಕಳುಹಿಸಲಾಗಿದೆ. ಈ ಯಶಸ್ಸಿಗೆ ಕಾರಣರಾದ ಎಲ್ಲ ತನಿಖಾ ಮತ್ತು ಭದ್ರತಾ ಸಂಸ್ಥೆಗಳಿಗೆ ಅಭಿನಂದನೆಗಳು. 2029ರ ಡಿಸೆಂಬರ್‌ನೊಳಗೆ ಪ್ರತಿಯೊಂದು ಮಾದಕ ವಸ್ತು ಜಾಲವನ್ನೂ ನಾಶಪಡಿಸಲು ನರೇಂದ್ರ ಮೋದಿ ಸರ್ಕಾರ ಬದ್ಧವಾಗಿದೆ.”
ತಲೆಮರೆಸಿಕೊಂಡಿರುವ ಆರೋಪಿಗಳನ್ನು ಭಾರತಕ್ಕೆ ಮರಳಿ ಕರೆತರಲು ನರೇಂದ್ರ ಮೋದಿ ಸರ್ಕಾರ ಸಂಘಟಿತ ಮತ್ತು ಸಮನ್ವಯದ ಅಭಿಯಾನವನ್ನು ಆರಂಭಿಸಿದೆ. 2019ರಿಂದ 2026ರ ಆಗಸ್ಟ್‌ವರೆಗೆ 36 ದೇಶಗಳಿಂದ ಒಟ್ಟು 288 ಮಂದಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಭಾರತಕ್ಕೆ ಕರೆತರಲಾಗಿದೆ.
ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಭಾರತಕ್ಕೆ ಕರೆತರುವ ಹಿಂದಿನ ಸರ್ಕಾರಗಳಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿತ್ತು. ಆದರೆ, ನರೇಂದ್ರ ಮೋದಿ ಸರ್ಕಾರವು ಅಂತಹ ಆರೋಪಿಗಳ ಹಸ್ತಾಂತರವನ್ನು ‘ರಾಷ್ಟ್ರೀಯ ಆದ್ಯತೆ’ಯನ್ನಾಗಿ ಮಾಡಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಗೆ ಅನುಗುಣವಾಗಿ, ತಲೆಮರೆಸಿಕೊಂಡಿರುವ ಆರೋಪಿಗಳ ವಿರುದ್ಧ ಮೂರು ಹಂತಗಳ ಕಾರ್ಯತಂತ್ರಕ್ಕೆ ಅಂದರೆ—ಜಾಗತಿಕ ಸಂಪರ್ಕ, ಬಲವಾದ ಸಮನ್ವಯ ಮತ್ತು ಚಾಣಾಕ್ಷ ರಾಜತಾಂತ್ರಿಕತೆಗೆ ಒತ್ತು ನೀಡಲಾಗಿದೆ ಎಂದು ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು ಬಲವಾಗಿ ಪ್ರತಿಪಾದಿಸಿದರು. ತಲೆಮರೆಸಿಕೊಂಡಿರುವ ಅಪರಾಧಿಗಳ ವಿಷಯವು ದೇಶದ ಸಾರ್ವಭೌಮತ್ವ, ಆರ್ಥಿಕ ಸ್ಥಿರತೆ, ಕಾನೂನು ಮತ್ತು ಸುವ್ಯವಸ್ಥೆ ಹಾಗೂ ರಾಷ್ಟ್ರೀಯ ಭದ್ರತೆಯೊಂದಿಗೆ ಆಂತರಿಕವಾಗಿ ಸಂಬಂಧ ಹೊಂದಿದೆ ಎಂದು ಶ್ರೀ ಅಮಿತ್ ಶಾ ವಿವರಿಸಿದ್ದಾರೆ.
ನರೇಂದ್ರ ಮೋದಿ ಸರ್ಕಾರವು 2019ರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಿದ್ದುಪಡಿ ಕಾಯ್ದೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ತಿದ್ದುಪಡಿ ಜಾರಿಗೊಳಿಸಿತು. 2020ರಿಂದ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಭಾರತಕ್ಕೆ ಕರೆತರುವ ಪ್ರಕ್ರಿಯೆಯನ್ನು ಅಭಿಯಾನದ ಮಾದರಿಯಲ್ಲಿ ಕೈಗೆತ್ತಿಕೊಳ್ಳಲಾಯಿತು. ಇದರ ಪರಿಣಾಮವಾಗಿ, ಜಾರಿ ಸಂಸ್ಥೆಗಳ ಕ್ರಮವು ಕೇವಲ ನಿಷೇಧಿತ ಸಂಘಟನೆಗಳಿಗೆ ಸೀಮಿತವಾಗದೆ, ವಿದೇಶಗಳಲ್ಲಿ ನೆಲೆಸಿರುವ ವೈಯಕ್ತಿಕ ಭಯೋತ್ಪಾದಕರು, ಅವರ ನಿರ್ವಾಹಕರು, ಹಣಕಾಸು ಜಾಲಗಳು ಮತ್ತು ಬೆಂಬಲ ವ್ಯವಸ್ಥೆಗಳವರೆಗೂ ವಿಸ್ತರಿಸಲಾಗಿದೆ. ಇದರಿಂದ ತಲೆಮರೆಸಿಕೊಂಡಿರುವ ಆರೋಪಿಗಳನ್ನು ಬೆನ್ನಟ್ಟಿ ಬಂಧಿಸುವ ಹಾಗೂ ಅವರ ಜಾಲಗಳನ್ನು ನಾಶಪಡಿಸುವ ಭಾರತದ ಸಾಮರ್ಥ್ಯ ಗಮನಾರ್ಹವಾಗಿ ಬಲವರ್ಧನೆಗೊಂಡಿದೆ.
ಭಾರತ ಮತ್ತು ಜಾಗತಿಕ ಕಾನೂನು ಜಾರಿ ಸಂಸ್ಥೆಗಳ ನಡುವಿನ ಸಮನ್ವಯ, ಸಂಪರ್ಕ ಹಾಗೂ ಮಾಹಿತಿ ವಿನಿಮಯವನ್ನು ಬಲಪಡಿಸುವ ಉದ್ದೇಶದಿಂದ ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರು 2025ರ ಜನವರಿಯಲ್ಲಿ ಭಾರತ್‌ಪೋಲ್ (BHARATPOL) ವ್ಯವಸ್ಥೆಯನ್ನು ಆರಂಭಿಸಿದರು. ಭಾರತ್‌ಪೋಲ್ ಮೂಲಕ ಕೇಂದ್ರೀಯ ತನಿಖಾ ದಳ (ಸಿಬಿಐ), ಇಂಟರ್‌ಪೋಲ್ ಸಂಪರ್ಕಾಧಿಕಾರಿಗಳ (ಐಎಲ್ ಒಗಳು-ILOs) ಮುಖಾಂತರ ರಾಜ್ಯ ಪೊಲೀಸ್ ಪ್ರಧಾನ ಕಚೇರಿಗಳು ಹಾಗೂ ಜಿಲ್ಲಾ ಪೊಲೀಸ್ ಪ್ರಧಾನ ಕಚೇರಿಗಳನ್ನು ಒಂದೇ ವೇದಿಕೆಯಲ್ಲಿ ಸಂಯೋಜಿಸಿ, ಸಮಗ್ರ ಮಾಹಿತಿ ಮೂಲ ಸೌಕರ್ಯವನ್ನು ನಿರ್ಮಿಸಲಾಗಿದೆ. ಈ ಉಪಕ್ರಮದಡಿ ರಾಜ್ಯ ಮತ್ತು ಕೇಂದ್ರದ ವಿವಿಧ ಸಂಸ್ಥೆಗಳ 1,400ಕ್ಕೂ ಅಧಿಕ ಘಟಕಗಳನ್ನು ಪೋರ್ಟಲ್ ಮೂಲಕ ಸಂಪರ್ಕಿಸಲಾಗಿದೆ. ಇದರಿಂದ ತನಿಖಾ ಸಂಸ್ಥೆಗಳ ನಡುವೆ ಯಾವುದೇ ಅಡೆತಡೆಯಿಲ್ಲದೆ ಮಾಹಿತಿ ವಿನಿಮಯ ನಡೆಯುವ ವ್ಯವಸ್ಥೆ ರೂಪುಗೊಂಡಿದೆ. ಪರಿಣಾಮವಾಗಿ, ಸಿಬಿಐ ಮತ್ತು ಇತರ ಕಾನೂನು ಜಾರಿ ಸಂಸ್ಥೆಗಳ ನಡುವಿನ ಮಾಹಿತಿ ವಿನಿಮಯಕ್ಕೆ ಬೇಕಾಗುತ್ತಿದ್ದ ಸಮಯ ಗಮನಾರ್ಹವಾಗಿ ಕಡಿಮೆಯಾಗಿದೆ. ಸದ್ಯ ಸಿಬಿಐ ಕೇಳುವ ಮಾಹಿತಿಯನ್ನು ಇತರ ಕಾನೂನು ಜಾರಿ ಸಂಸ್ಥೆಗಳು ಸಾಮಾನ್ಯವಾಗಿ 10ರಿಂದ 20 ದಿನಗಳೊಳಗೆ ಹಂಚಿಕೊಳ್ಳುತ್ತಿವೆ. ಕೆಲವು ಪ್ರಕರಣಗಳಲ್ಲಿ ಮಾಹಿತಿಯನ್ನು 3ರಿಂದ 10 ದಿನಗಳೊಳಗೇ ಒದಗಿಸಲಾಗುತ್ತಿದೆ. ಇದರಿಂದ ಅಪರಾಧ ಪ್ರಕರಣಗಳ ತನಿಖೆ ಹಾಗೂ ತಲೆಮರೆಸಿಕೊಂಡಿರುವ ಆರೋಪಿಗಳ ಹಸ್ತಾಂತರ ಪ್ರಕ್ರಿಯೆಗಳ ಕಾರ್ಯಕ್ಷಮತೆ ಗಣನೀಯವಾಗಿ ಸುಧಾರಿಸಿದೆ.
ನರೇಂದ್ರ ಮೋದಿ ಸರ್ಕಾರವು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯನ್ನು (ಪಿಎಂಎಲ್) ಹೆಚ್ಚು ಕಟ್ಟುನಿಟ್ಟಾಗಿ ಜಾರಿಗೊಳಿಸಿದೆ. ಈ ಕಾಯ್ದೆಯ ಕಠಿಣ ಅನುಷ್ಠಾನದ ಮೂಲಕ 2019ರಿಂದ 2026ರವರೆಗೆ ತಲೆಮರೆಸಿಕೊಂಡಿರುವ ಅಪರಾಧಿಗಳಿಗೆ ಸೇರಿದ 17,874 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಕಳೆದ ಮೂರು ವರ್ಷಗಳಲ್ಲಿ ತಲೆಮರೆಸಿಕೊಂಡಿರುವ 401 ಆರೋಪಿಗಳ ವಿರುದ್ಧ ರೆಡ್ ಕಾರ್ನರ್ ನೋಟಿಸ್‌ಗಳನ್ನು ಹೊರಡಿಸಲಾಗಿದೆ. ಇದರಲ್ಲಿ 2026ರ ಜುಲೈವರೆಗೆ 182 ರೆಡ್ ಕಾರ್ನರ್ ನೋಟಿಸ್‌ಗಳನ್ನು ಜಾರಿಗೊಳಿಸಲಾಗಿದೆ.
*****
(ಪ್ರಕಟಣೆ ಐ.ಡಿ.: 2318650)
ವಿಸಿಟರ್ ಕೌಂಟರ್ : 5