ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಕಥೆಗಳು, ಸಿನಿಮಾ ಮತ್ತು ಜಾಗತಿಕ ಧ್ವನಿಗಳ ಸಂಭ್ರಮಾಚರಣೆ: ‘ಐಎಫ್ಎಫ್ಐ-2026 ಗೋವಾ’ ವತಿಯಿಂದ ಮಾಧ್ಯಮ ಪ್ರತಿನಿಧಿಗಳಿಗೆ ಆಹ್ವಾನ; ಮಾಧ್ಯಮ ಮಾನ್ಯತೆ ನೋಂದಣಿ ಆರಂಭ!
ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (ಐಎಫ್ಎಫ್ಐ) 57ನೇ ಆವೃತ್ತಿಯು 2026ರ ನವೆಂಬರ್ 20 ರಿಂದ 28ರವರೆಗೆ ಗೋವಾದ ಪಣಜಿಯಲ್ಲಿ ನಡೆಯಲಿದ್ದು, ಸಿನೆಮಾ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಭಾರತ ಮತ್ತು ಪ್ರಪಂಚದಾದ್ಯಂತದ ಚಲನಚಿತ್ರ ನಿರ್ಮಾಪಕರು, ಸಿನಿಮಾ ವೃತ್ತಿಪರರು, ಪತ್ರಕರ್ತರು ಮತ್ತು ಚಲನಚಿತ್ರ ಉತ್ಸಾಹಿಗಳನ್ನು ಒಟ್ಟುಗೂಡಿಸುವ ʻಐಎಫ್ಎಫ್ಐʼ ಕಥೆ ಹೇಳುವ ಮಾಂತ್ರಿಕತೆ, ಸಿನಿಮೀಯ ಅಭಿವ್ಯಕ್ತಿಯ ವೈವಿಧ್ಯತೆ ಮತ್ತು ಸಂಸ್ಕೃತಿಗಳಾದ್ಯಂತ ಪ್ರೇಕ್ಷಕರನ್ನು ಸಂಪರ್ಕಿಸುವ ಸೃಜನಶೀಲ ಮನೋಭಾವವನ್ನು ಆಚರಿಸುತ್ತದೆ.
ಚಲನಚಿತ್ರ ಪ್ರದರ್ಶನಗಳು, ಚರ್ಚೆಗಳು, ಚಲನಚಿತ್ರ ನಿರ್ಮಾಪಕರ ಸಂವಹನಗಳು ಮತ್ತು ನೆಟ್‌ವರ್ಕಿಂಗ್ ಅವಕಾಶಗಳ ಮೂಲಕ ಈ ಉತ್ಸವವು ವೈವಿಧ್ಯಮಯ ಕಥೆಗಳು ಮತ್ತು ದೃಷ್ಟಿಕೋನಗಳನ್ನು ಪ್ರದರ್ಶಿಸುತ್ತದೆ. ಜೊತೆಗೆ ಆಲೋಚನೆಗಳು, ಸಂಭಾಷಣೆಗಳು ಮತ್ತು ಸಹಯೋಗಗಳಿಗೆ ಕ್ರಿಯಾತ್ಮಕ ವೇದಿಕೆಯನ್ನು ಸೃಷ್ಟಿಸುತ್ತದೆ. ಸಿನೆಮಾದ ಈ ಭವ್ಯ ಆಚರಣೆಯನ್ನು ಆಯೋಜಿಸಲು ಗೋವಾ ಸಿದ್ಧವಾಗುತ್ತಿರುವಂತೆಯೇ, ಜಾಗತಿಕ ಚಲನಚಿತ್ರ ಸಮುದಾಯದ ನಡುವೆ ಸೃಜನಶೀಲ ವಿನಿಮಯ ಮತ್ತು ಅರ್ಥಪೂರ್ಣ ತೊಡಗಿಸಿಕೊಳ್ಳುವಿಕೆಗೆ ʻಐಎಫ್ಎಫ್ಐʼ ವಿಶಿಷ್ಟ ವೇದಿಕೆಯನ್ನು ಒದಗಿಸುತ್ತದೆ.
ಪ್ರತಿ ವರ್ಷ ʻಐಎಫ್ಎಫ್ಐʼನ ವ್ಯಾಪ್ತಿ ಮತ್ತು ಗೋಚರತೆಯನ್ನು ಹೆಚ್ಚಿಸುವಲ್ಲಿ ಮಾಧ್ಯಮ ವೃತ್ತಿಪರರು ಪ್ರಮುಖ ಪಾತ್ರ ವಹಿಸುತ್ತಾರೆ. ಸುದ್ದಿ ವರದಿಗಳು, ಸಂದರ್ಶನಗಳು, ವಿಮರ್ಶೆಗಳು, ವೈಶಿಷ್ಟ್ಯಗಳು ಮತ್ತು ಡಿಜಿಟಲ್ ಪ್ರಸಾರದ ಮೂಲಕ, ಉತ್ಸವದ ಚಲನಚಿತ್ರಗಳು, ಘಟನೆಗಳು ಮತ್ತು ಸಂಭಾಷಣೆಗಳನ್ನು ಭಾರತ ಮತ್ತು ಪ್ರಪಂಚದಾದ್ಯಂತದ ಪ್ರೇಕ್ಷಕರಿಗೆ ತಲುಪಿಸಲು ಮಾಧ್ಯಮವು ಸಹಾಯ ಮಾಡುತ್ತದೆ. ಇದು ವೈವಿಧ್ಯಮಯ ಕಲಾವಿದರು ಮತ್ತು ಅವರ ಕಲೆಯನ್ನು ಆಚರಿಸಲು ಸಹಾಯ ಮಾಡುತ್ತದೆ. ಉತ್ಸವದಲ್ಲಿ ಮಾಧ್ಯಮಗಳ ನಿರಂತರ ಭಾಗವಹಿಸುವಿಕೆಯನ್ನು ʻಐಎಫ್ಎಫ್ಐʼ ಗೌರವಿಸುತ್ತದೆ. ಏಕೆಂದರೆ, ವ್ಯಾಪಕ ಜಾಗೃತಿ ಮೂಡಿಸುವಲ್ಲಿ ಮತ್ತು ʻಐಎಫ್ಎಫ್ಐʼನೊಂದಿಗೆ ಮತ್ತು ಸೃಜನಶೀಲ ಅಭಿವ್ಯಕ್ತಿಯೊಂದಿಗೆ ಸಾರ್ವಜನಿಕ ತೊಡಗಿಸಿಕೊಳ್ಳುವಿಕೆಯನ್ನು ನಿರ್ಮಿಸುವಲ್ಲಿ ಮಾಧ್ಯಮವು ಪ್ರಮುಖ ಪಾತ್ರ ವಹಿಸುತ್ತದೆ.
ಮಾಧ್ಯಮ ಮಾನ್ಯತೆ ಅಕ್ಟೋಬರ್ 1 ರಂದು ಪ್ರಾರಂಭವಾಗುತ್ತದೆ
57ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ-2026 (ಐಎಫ್ಎಫ್ಐ) ಅನ್ನು ವರದಿ ಮಾಡಲು ಯೋಜಿಸುತ್ತಿರುವ ಮಾಧ್ಯಮ ವೃತ್ತಿಪರರು ಅಧಿಕೃತ ʻಪ್ರೆಸ್ ಇನ್‌ಫಾರ್ಮೇಷನ್ ಬ್ಯೂರೋʼ(ಪಿಐಬಿ) ಮಾನ್ಯತೆ ಪೋರ್ಟಲ್ ಮೂಲಕ ಮಾಧ್ಯಮ ಪ್ರತಿನಿಧಿಯಾಗಿ ನೋಂದಾಯಿಸಿಕೊಳ್ಳಬಹುದು: https://accreditation.pib.gov.in/eventregistration/login.aspx
ಮಾಧ್ಯಮ ಮಾನ್ಯತೆ ನೋಂದಣಿಯು ಇಂದು, 1 ಅಕ್ಟೋಬರ್ 2026 ರಂದು ಆರಂಭಗೊಂಡಿದ್ದು, 15 ಅಕ್ಟೋಬರ್ 2026 ನೋಂದಣಿಗೆ ಕೊನೆಯ ದಿನಾಂಕವಾಗಿದೆ.
ಮಾನ್ಯತೆ ಪಡೆದ ಮಾಧ್ಯಮ ವೃತ್ತಿಪರರು ವಿವಿಧ ಉತ್ಸವ ಚಟುವಟಿಕೆಗಳಿಗೆ ಪ್ರವೇಶವನ್ನು ಹೊಂದಿರುತ್ತಾರೆ, ಅವುಗಳೆಂದರೆ:
- ಚಲನಚಿತ್ರ ಪ್ರದರ್ಶನಗಳು
- ಪ್ಯಾನಲ್ ಚರ್ಚೆಗಳು
- ಚಲನಚಿತ್ರ ನಿರ್ಮಾಪಕರು ಮತ್ತು ಸಿನಿಮಾ ವೃತ್ತಿಪರರೊಂದಿಗೆ ಸಂವಾದ
- ನೆಟ್‌ವರ್ಕಿಂಗ್ ಅವಕಾಶಗಳು
- ಚಲನಚಿತ್ರೋತ್ಸವದ ವ್ಯಾಪ್ತಿಗೆ ಸಂಬಂಧಿಸಿದ ಇತರ ಚಟುವಟಿಕೆಗಳು
ಮಾಧ್ಯಮ ಪ್ರತಿನಿಧಿಗಳು ತಮ್ಮ ಅರ್ಜಿಗಳನ್ನು ಸಲ್ಲಿಸುವ ಮೊದಲು ಮಾನ್ಯತೆ ಮಾರ್ಗಸೂಚಿಗಳನ್ನು ಎಚ್ಚರಿಕೆಯಿಂದ ಓದಲು ಕೋರಲಾಗಿದೆ. ಅರ್ಜಿದಾರರು ಮಾನ್ಯತೆಯ ಪೋರ್ಟಲ್‌ನಲ್ಲಿ ಅಗತ್ಯವಿರುವ ಯಾವುದೇ ಪೂರಕ ದಾಖಲೆಗಳೊಂದಿಗೆ ಮಾನ್ಯ ಗುರುತಿನ ಪುರಾವೆ, ವೃತ್ತಿಪರ ದಾಖಲೆಗಳು, ಸಕ್ರಿಯ ಸಂಪರ್ಕ ಸಂಖ್ಯೆಗಳು ಮತ್ತು ಇ-ಮೇಲ್ ವಿಳಾಸಗಳನ್ನು ಒದಗಿಸಬೇಕು.
ವಿವರವಾದ ಅರ್ಹತಾ ಮಾನದಂಡ ಮತ್ತು ಮಾಧ್ಯಮ ಮಾನ್ಯತೆ ನೀತಿಯನ್ನು ಇಲ್ಲಿ ಓದಬಹುದು.
ಅವಶ್ಯಕ ದಾಖಲೆಗಳು:
- ಭಾವಚಿತ್ರ
- ಸರ್ಕಾರಿ ಗುರುತಿನ ಪುರಾವೆ
- ಪಿಐಬಿ ಅಥವಾ ರಾಜ್ಯ ಸರ್ಕಾರದ ಮಾನ್ಯತೆ ಕಾರ್ಡ್/ ಸಂಸ್ಥೆಯ ಗುರುತಿನ ಚೀಟಿ + ಸಂಪಾದಕರ ಪತ್ರ
- ಸಂಬಂಧಿತ ಕ್ಷೇತ್ರದಲ್ಲಿ ಕೆಲಸದ ಪುರಾವೆ
ಪ್ರಮುಖ ಮಾಹಿತಿ
ʻಐಎಫ್ಎಫ್ಐʼನ ಹಿಂದಿನ ಆವೃತ್ತಿಗಾಗಿ (56ನೇ) ಪೋರ್ಟಲ್‌ನಲ್ಲಿ ಈಗಾಗಲೇ ನೋಂದಾಯಿಸಿರುವ ಮಾಧ್ಯಮ ವೃತ್ತಿಪರರು, ಲಾಗ್ ಇನ್ ಮಾಡಲು ಮತ್ತು ಅಗತ್ಯವಿರುವಂತೆ ತಮ್ಮ ದಾಖಲೆಗಳನ್ನು ನವೀಕರಿಸಲು ಅದೇ ರುಜುವಾತುಗಳನ್ನು ಬಳಸಬಹುದು.
ಏಷ್ಯಾದ ಅತ್ಯಂತ ಪ್ರಸಿದ್ಧ ಚಲನಚಿತ್ರೋತ್ಸವಗಳಲ್ಲಿ ಒಂದಾದ ಈ ಕಾರ್ಯಕ್ರಮದಲ್ಲಿ ನಿಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು, ಸಿನಿಮಾ ಜಗತ್ತನ್ನು ರೂಪಿಸುವ ಧ್ವನಿಗಳೊಂದಿಗೆ ಸಂಪರ್ಕ ಸಾಧಿಸಲು, ಪರದೆಯಾಚೆಗಿನ ಕಥೆಗಳನ್ನು ಅನ್ವೇಷಿಸಲು ಮತ್ತು ಚಲನಚಿತ್ರ ನಿರ್ಮಾಣ, ಸೃಜನಶೀಲತೆ ಮತ್ತು ಸಂಸ್ಕೃತಿಯ ಐಎಫ್ಎಫ್ಐನ ರೋಮಾಂಚಕ ಆಚರಣೆಯ ಭಾಗವಾಗಲು ಮುಂಚಿತವಾಗಿ ಅರ್ಜಿ ಸಲ್ಲಿಸಿ. ಮೊದಲ 50 ಯಶಸ್ವಿ ನೋಂದಣಿಗಳು 19ನೇ ನವೆಂಬರ್ 2026 ರಂದು ಪಣಜಿಯಲ್ಲಿ ನಡೆಯಲಿರುವ ಚಲನಚಿತ್ರ ಮೆಚ್ಚುಗೆಯ ಪೂರಕ ಕಾರ್ಯಾಗಾರಕ್ಕೆ ಅರ್ಹವಾಗಿರುತ್ತವೆ!
ಇದಲ್ಲದೆ, ಮಾಧ್ಯಮ ವ್ಯಕ್ತಿಗಳಲ್ಲದ ಚಲನಚಿತ್ರ ಉತ್ಸಾಹಿಗಳು https://www.iffigoa.org/delegate-registration ಮೂಲಕ ʻಐಎಫ್ಎಫ್ಐʼಗೆ ಪ್ರತಿನಿಧಿಗಳಾಗಿ ನೋಂದಾಯಿಸಿಕೊಳ್ಳಬಹುದು ಮತ್ತು 57ನೇ ʻಐಎಫ್ಎಫ್ಐ-2026ʼ ಉತ್ಸವದಲ್ಲಿ ಚಲನಚಿತ್ರಗಳು ಮತ್ತು ಇತರ ಚಟುವಟಿಕೆಗಳನ್ನು ಆಸ್ವಾದಿಸಬಹುದು.
ಐಎಫ್ಎಫ್ಐ ಬಗ್ಗೆ
1952ರಲ್ಲಿ ಆರಂಭಗೊಂಡ ʻಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವʼ (ಐಎಫ್ಎಫ್ಐ) ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಸಿನೆಮಾ ಆಚರಣೆಯಾಗಿದೆ. ʻರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮʼ(ಎನ್ಎಫ್‌ಡಿಸಿ), ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹಾಗೂ ಗೋವಾ ಎಂಟರ್‌ಟೈನ್ಮೆಂಟ್ ಸೊಸೈಟಿ (ಇಎಸ್‌ಜಿ) ಮತ್ತು ಗೋವಾ ರಾಜ್ಯ ಸರ್ಕಾರ ಜಂಟಿಯಾಗಿ ಆಯೋಜಿಸಿರುವ ʻಐಎಫ್ಎಫ್ಐʼ ಪ್ರಪಂಚದಾದ್ಯಂತದ ಚಲನಚಿತ್ರ ನಿರ್ಮಾಪಕರು, ದಂತಕಥೆಗಳು ಮತ್ತು ಉದಯೋನ್ಮುಖ ಧ್ವನಿಗಳನ್ನು ಒಟ್ಟುಗೂಡಿಸುತ್ತದೆ. ಅಂತಾರಾಷ್ಟ್ರೀಯ ಸ್ಪರ್ಧೆಗಳು, ಸಾಂಸ್ಕೃತಿಕ ಪ್ರದರ್ಶನಗಳು, ಮಾಸ್ಟರ್ ಕ್ಲಾಸ್‌ಗಳು ಮತ್ತು ಗೌರವಗಳೊಂದಿಗೆ ಈ ಉತ್ಸವವು ಗೋವಾದ ರೋಮಾಂಚಕ ಹಿನ್ನೆಲೆಯಲ್ಲಿ ವೈವಿಧ್ಯಮಯ ಕಥೆಗಳು, ಭಾಷೆಗಳು ಮತ್ತು ಸಿನಿಮೀಯ ಸಂಪ್ರದಾಯಗಳನ್ನು ಆಚರಿಸುತ್ತದೆ. ʻಐಎಫ್ಎಫ್ಐ-2026ʼರ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಇತ್ತೀಚಿನ ವಿವರಗಳಿಗಾಗಿ ದಯವಿಟ್ಟು https://www.iffigoa.org/ ಗೆ
ಭೇಟಿ ನೀಡಿ.

*****
(ಪ್ರಕಟಣೆ ಐ.ಡಿ.: 2317649)
ವಿಸಿಟರ್ ಕೌಂಟರ್ : 14