ಪಂಚಾಯತ್ ರಾಜ್ ಸಚಿವಾಲಯ
azadi ka amrit mahotsav

ಪರಿವರ್ತನಾತ್ಮಕ ಆಡಳಿತ ಸುಧಾರಣೆಗಳ ಬಗ್ಗೆ ಚರ್ಚೆಯೊಂದಿಗೆ ಅಕ್ಟೋಬರ್ 2 ರಂದು ಭಾರತದಾದ್ಯಂತ ವಿಶೇಷ ಗ್ರಾಮ ಸಭೆಗಳು ನಡೆಯಲಿದ್ದು, 2026-27ನೇ ಸಾಲಿನ ʻಜನರ ಯೋಜನೆ ಅಭಿಯಾನʼ -ʻಸಬ್‌ ಕಿ ಯೋಜನಾ, ಸಬ್‌ ಕಾ ವಿಕಾಸ್'ಗೆ ಚಾಲನೆ ದೊರೆಯಲಿದೆ


ಹಲವಾರು ಸಚಿವಾಲಯಗಳು/ಇಲಾಖೆಗಳು ಗ್ರಾಮ ಸಭೆಯ ಚರ್ಚೆಗಳ ಹೃದಯಭಾಗದಲ್ಲಿ ನಾಗರಿಕ-ಕೇಂದ್ರಿತ ಯೋಜನೆಗಳು ಮತ್ತು ಉಪಕ್ರಮಗಳನ್ನು ಇರಿಸಲಿವೆ

ಪ್ರಕಟಣಾ ದಿನಾಂಕ: 01 OCT 2026 12:52PM by PIB Bengaluru

ಪಂಚಾಯತ್‌ಗಳನ್ನು ಬಲಪಡಿಸುವ, ಸಾರ್ವಜನಿಕ ಸೇವೆಗಳನ್ನು ಸುಧಾರಿಸುವ ಮತ್ತು ಗ್ರಾಮೀಣ ಭಾರತದಲ್ಲಿ ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಪರಿವರ್ತನಾತ್ಮಕ ಆಡಳಿತ ಸುಧಾರಣೆಗಳು ಹಾಗೂ ಉಪಕ್ರಮಗಳ ಬಗ್ಗೆ ಚರ್ಚಿಸಲು ದೇಶಾದ್ಯಂತ ವಿಶೇಷ ಗ್ರಾಮಸಭೆಗಳು 2026ರ ಅಕ್ಟೋಬರ್ 2 ರಂದು ಸಮಾವೇಶಗೊಳ್ಳಲಿವೆ. ಈ ವಿಶೇಷ ಗ್ರಾಮಸಭೆಗಳು 2026-27ರ ʻಜತಾ ಯೋಜನಾ ಅಭಿಯಾನʼವಾದ(ಪಿಪಿಸಿ) "ಸಬ್‌ ಕಿ ಯೋಜನಾ, ಸಬ್‌ ಕಾ ವಿಕಾಸ್"ಗೆ ಚಾಲನೆ ನೀಡಲಿವೆ. ಇದರ ಅಡಿಯಲ್ಲಿ ಗ್ರಾಮ ಪಂಚಾಯಿತಿಗಳು ಭಾಗವಹಿಸುವಿಕೆ ಮತ್ತು ಸಾಕ್ಷ್ಯಾಧಾರಿತ ಯೋಜನೆಯ ಮೂಲಕ 2027-28ರ ಆರ್ಥಿಕ ವರ್ಷಕ್ಕೆ ತಮ್ಮ ಗ್ರಾಮ ಪಂಚಾಯತ್ ಅಭಿವೃದ್ಧಿ ಯೋಜನೆಗಳನ್ನು (ಜಿಪಿಡಿಪಿ) ಸಿದ್ಧಪಡಿಸುತ್ತವೆ. ಪ್ರಮುಖ ಸರ್ಕಾರಿ ಯೋಜನೆಗಳು ಮತ್ತು ಉಪಕ್ರಮಗಳ ಪ್ರಯೋಜನಗಳು ಹಾಗೂ ಅನುಷ್ಠಾನವನ್ನು ಪರಿಶೀಲಿಸಲು, ಸ್ಥಳೀಯ ಅಗತ್ಯಗಳು ಮತ್ತು ಅಂತರಗಳನ್ನು ಗುರುತಿಸಲು ಹಾಗೂ ತಮ್ಮ ಗ್ರಾಮಗಳ ಅಭಿವೃದ್ಧಿಗೆ ಆದ್ಯತೆಗಳ ಬಗ್ಗೆ ಚರ್ಚಿಸಲು ಗ್ರಾಮಸಭೆಯ ಚರ್ಚೆಗಳು ನಾಗರಿಕರು ಮತ್ತು ಸ್ಥಳೀಯ ಪ್ರತಿನಿಧಿಗಳನ್ನು ಒಟ್ಟುಗೂಡಿಸುತ್ತದೆ.

ಭಾರತ ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳ ಸಹಯೋಗದೊಂದಿಗೆ ಪಂಚಾಯತ್ ರಾಜ್ ಸಚಿವಾಲಯವು ತಳಮಟ್ಟದ ಅಭಿವೃದ್ಧಿಗಾಗಿ ಸಮಗ್ರ-ಸರ್ಕಾರದ ವಿಧಾನದ ಭಾಗವಾಗಿ ಈ ಚರ್ಚೆಗಳನ್ನು ಸುಗಮಗೊಳಿಸುತ್ತಿದೆ. ವಿಶೇಷ ಗ್ರಾಮ ಸಭೆಗಳಲ್ಲಿ ಈ ಕೆಳಗಿನ ಯೋಜನೆಗಳು ಮತ್ತು ಉಪಕ್ರಮಗಳನ್ನು ಎತ್ತಿ ತೋರಿಸಲಾಗುವುದು:

  • ಪಂಚಾಯತ್ ರಾಜ್ ಸಚಿವಾಲಯ: ಹಣಕಾಸು ಆಯೋಗದ ಅನುದಾನ, ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನದ ಅಡಿಯಲ್ಲಿ ಸಾಮರ್ಥ್ಯ ವೃದ್ಧಿ, ʻಇ-ಗ್ರಾಮಸ್ವರಾಜ್ʼ ಮತ್ತು ಆಡಿಟ್ ಆನ್‌ಲೈನ್ ಮೂಲಕ ಡಿಜಿಟಲ್ ಆಡಳಿತ, ಸ್ವಂತ ಮೂಲದ ಆದಾಯ (ಒಎಸ್‌ಆರ್) ಉಪಕ್ರಮಗಳು, ‌ʻಸ್ವಾಮಿತ್ವʼ ಹಾಗೂ ಪಂಚಾಯತ್ ಪ್ರಗತಿ ಸೂಚ್ಯಂಕದ ಮೂಲಕ ಪಂಚಾಯಿತಿಗಳನ್ನು ಬಲಪಡಿಸುವುದು.
  • ಗ್ರಾಮೀಣಾಭಿವೃದ್ಧಿ ಇಲಾಖೆ: ʻವಿಕಸಿತ ಭಾರತ್ - ಗ್ರಾಮೀಣ ಉದ್ಯೋಗ ಮತ್ತು ಜೀವನೋಪಾಯ ಖಾತರಿ ಯೋಜನೆʼಗೆ(ವಿಬಿ-ಜಿ ರಾಮ್‌ಜಿ) ಮೂಲಕ 125 ದಿನಗಳ ಶಾಸನಬದ್ಧ ವೇತನದ ಉದ್ಯೋಗ ಖಾತರಿ, ಮತ್ತು ಸ್ಥಳೀಯವಾಗಿ ನಿರ್ಧರಿಸಲಾದ ಕಾಮಗಾರಿಗಳು ಮತ್ತು ಜೀವನೋಪಾಯಗಳಿಗಾಗಿ 'ವಿಕಸಿತ ಗ್ರಾಮ ಪಂಚಾಯತ್ ಯೋಜನೆ'
  • ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ: ಗ್ರಾಮೀಣ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕಕ್ಕಾಗಿ ʻಜಲ ಜೀವನ್ ಮಿಷನ್ʼ; ʻನೈರ್ಮಲ್ಯ ಒಡಿಎಫ್ ಪ್ಲಸ್ʼ ಹಾಗೂ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಗಾಗಿ ʻಸ್ವಚ್ಛ ಭಾರತ್ ಯೋಜನೆ ಗ್ರಾಮೀಣʼ.
  • ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಇಲಾಖೆ: ಜಲ ಸಂಚಯ ಜನ ಭಾಗೀದಾರಿ: ಮಳೆನೀರನ್ನು ಹಿಡಿದಿಟ್ಟುಕೊಳ್ಳಿ (ಕ್ಯಾಚ್‌ ದಿ ರೈನ್‌) ಮತ್ತು ಅಂತರ್ಜಲ ಮರುಪೂರಣ, ಜಲ ಸಂರಕ್ಷಣೆ ಮತ್ತು ಜಲ ಭದ್ರತೆಯನ್ನು ಬಲಪಡಿಸಲು ಪರಿಷ್ಕೃತ ಜಲಾನಯನ ಅಭಿವೃದ್ಧಿ ಮಾನದಂಡಗಳು.
  • ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ: ಆಹಾರ ಧಾನ್ಯದ ಅರ್ಹತೆಗಳ ಪೋರ್ಟಬಿಲಿಟಿಗಾಗಿ 'ಒಂದು ದೇಶ ಒಂದು ರೇಷನ್ ಕಾರ್ಡ್' ಮತ್ತು ನಿರಂತರ ಆಹಾರ ಭದ್ರತೆಗಾಗಿ 'ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ'.
  • ಗ್ರಾಹಕ ವ್ಯವಹಾರಗಳ ಇಲಾಖೆ: ಗ್ರಾಹಕರ ಜಾಗೃತಿ, ಕುಂದುಕೊರತೆ ನಿವಾರಣೆ ಮತ್ತು ಗ್ರಾಹಕ ನ್ಯಾಯದ ಲಭ್ಯತೆಯನ್ನು ಬಲಪಡಿಸಲು 'ರಾಷ್ಟ್ರೀಯ ಗ್ರಾಹಕ ಸಹಾಯವಾಣಿ' ಮತ್ತು 'ಇ-ಜಾಗೃತಿ'.
  • ಭೂ ಸಂಪನ್ಮೂಲ ಇಲಾಖೆ: ಡಿಜಿಟಲೀಕರಣಗೊಂಡ ಮತ್ತು ಸುಲಭವಾಗಿ ಲಭ್ಯವಾಗುವ ಭೂ ದಾಖಲೆಗಳಿಗಾಗಿ 'ಡಿಜಿಟಲ್ ಇಂಡಿಯಾ ಭೂ ದಾಖಲೆಗಳ ಆಧುನೀಕರಣ ಕಾರ್ಯಕ್ರಮ ', ಸುರಕ್ಷಿತ ಆಸ್ತಿ ಹಕ್ಕುಗಳನ್ನು ಬೆಂಬಲಿಸುವುದು, ಸಾಲದ ಸುಲಭ ಲಭ್ಯತೆ ಹಾಗೂ 'ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ'ಯಡಿ ಜಲಾನಯನ ಅಭಿವೃದ್ಧಿ.

2018 ರಿಂದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ 'ಜನರ ಯೋಜನೆ ಅಭಿಯಾನ'ವನ್ನು ಜಾರಿಗೊಳಿಸಲಾಗುತ್ತಿದ್ದು, ಸಮಗ್ರ, ಎಲ್ಲರನ್ನೂ ಒಳಗೊಂಡ ಮತ್ತು ಭಾಗವಹಿಸುವಿಕೆಯ ಅಭಿವೃದ್ಧಿ ಯೋಜನೆಗಳನ್ನು ಸಿದ್ಧಪಡಿಸಲು ಪಂಚಾಯಿತಿಗಳಿಗೆ ಅನುವು ಮಾಡಿಕೊಡುತ್ತಿದೆ. 2.55 ಲಕ್ಷಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳು ಇ-ಗ್ರಾಮಸ್ವರಾಜ್‌ನಲ್ಲಿ ತಮ್ಮ ಯೋಜನೆಗಳನ್ನು ಸಿದ್ಧಪಡಿಸಿ ಅಪ್‌ಲೋಡ್ ಮಾಡುತ್ತವೆ. ಪಂಚಾಯತ್ ಪ್ರಗತಿ ಸೂಚ್ಯಂಕವು ಸ್ಥಳೀಯ ಅಭಿವೃದ್ಧಿಯ ಪ್ರಮುಖ ಕ್ಷೇತ್ರಗಳಾದ್ಯಂತ ಸಾಧನೆಗಳು ಮತ್ತು ಅಂತರವನ್ನು ಗುರುತಿಸಲು ಪಂಚಾಯಿತಿಗಳಿಗೆ ಅನುವು ಮಾಡಿಕೊಡುತ್ತದೆ, ಮುಂಬರುವ ವರ್ಷದ ಆದ್ಯತೆಗಳನ್ನು ಗುರುತಿಸಲು ಮತ್ತು ಸಂಕಲ್ಪವನ್ನು ಕೈಗೊಳ್ಳಲು ಗ್ರಾಮ ಸಭೆಗೆ ಆಧಾರವನ್ನು ಒದಗಿಸುತ್ತದೆ. ಈ ಯೋಜನೆಗಳು ಮತ್ತು ಉಪಕ್ರಮಗಳ ಕುರಿತು ತಮ್ಮ ಅನುಭವಗಳು, ಪ್ರತಿಕ್ರಿಯೆಗಳು ಮತ್ತು ಸಲಹೆಗಳನ್ನು ಹಂಚಿಕೊಳ್ಳಲು ಮತ್ತು ಸ್ಥಳೀಯ ಆದ್ಯತೆಗಳನ್ನು ನಿರ್ಧರಿಸಲು ಸಹಾಯ ಮಾಡಲು ಗ್ರಾಮ ಸಭೆಯು ನಾಗರಿಕರಿಗೆ ನೇರ ವೇದಿಕೆಯನ್ನು ಒದಗಿಸುತ್ತದೆ. ಈ ಚರ್ಚೆಗಳು ಹೊಸ ಕ್ರಿಮಿನಲ್ ಕಾನೂನುಗಳಾದ ʻಭಾರತೀಯ ನ್ಯಾಯ ಸಂಹಿತೆʼ, ʻಭಾರತೀಯ ನಾಗರಿಕ ಸುರಕ್ಷಾ ಸಂಹಿತೆʼ ಮತ್ತು ʻಭಾರತೀಯ ಸಾಕ್ಷ್ಯ ಅಧಿನಿಯಮʼ, ಡಿಜಿಟಲ್ ರೂಪಾಂತರ ಮತ್ತು ಸಹಕಾರ ಸಂಘಗಳ ಬಲವರ್ಧನೆ ಹಾಗೂ ಬಾಲ್ಯ ವಿವಾಹ ಮುಕ್ತ ಭಾರತ, ʻನಶಾ ಮುಕ್ತ ಭಾರತʼ ಅಭಿಯಾನ ಸೇರಿದಂತೆ ಮಹಿಳೆಯರು ಮತ್ತು ಮಕ್ಕಳ ರಕ್ಷಣೆ ಜೊತೆಗೆ ಅವರ ಘನತೆ ಹೆಚ್ಚಿಸುವ ಉಪಕ್ರಮಗಳ ಬಗ್ಗೆ ಜಾಗೃತಿಯನ್ನು ಮೂಡಿಸುತ್ತವೆ. 2026 ರ ಸ್ವಚ್ಛತಾ ಹಿ ಸೇವಾ ಮುಕ್ತಾಯಗೊಳ್ಳುತ್ತಿರುವಾಗ, 2026 ರ ಘನ ತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಅಕ್ಟೋಬರ್ 2 ರಂದು ನಡೆಯುವ ಗ್ರಾಮ ಸಭೆಗಳಲ್ಲಿ ಚರ್ಚಿಸಲಾಗುವುದು.

2026ರ ಅಕ್ಟೋಬರ್ 2 ರಂದು ನಡೆಯಲಿರುವ ವಿಶೇಷ ಗ್ರಾಮ ಸಭೆಗಳಲ್ಲಿ ಭಾಗವಹಿಸಲು ಹಾಗೂ ಸ್ಥಳೀಯ ಅಗತ್ಯಗಳು ಮತ್ತು ಆಕಾಂಕ್ಷೆಗಳನ್ನು ಪ್ರತಿಬಿಂಬಿಸುವ ಪಂಚಾಯತ್ ಅಭಿವೃದ್ಧಿ ಯೋಜನೆಗಳ ತಯಾರಿಕೆಗೆ ಕೊಡುಗೆ ನೀಡಲು ನಾಗರಿಕರನ್ನು ಹೃತ್ಪೂರ್ವಕವಾಗಿ ಆಹ್ವಾನಿಸಲಾಗಿದೆ. "ಸಬ್‌ ಕಿ ಯೋಜನಾ, ಸಬ್ಕಾ ವಿಕಾಸ್" ಮೂಲಕ, ಗ್ರಾಮ ಸಭೆಗಳು ಭಾಗವಹಿಸುವಿಕೆಯ ಆಡಳಿತವನ್ನು ಬಲಪಡಿಸುತ್ತವೆ ಮತ್ತು ವಿಕಸಿತ ಭಾರತದ ದೊಡ್ಡ ಪ್ರಯತ್ನದಲ್ಲಿ ಸಶಕ್ತ ಪಂಚಾಯಿತಿಗಳು, ʻಆತ್ಮನಿರ್ಭರ್ ಪಂಚಾಯಿತಿಗಳುʼ ಮತ್ತು ʻವಿಕಸಿತ ಪಂಚಾಯಿತಿʼಗಳನ್ನು ನಿರ್ಮಿಸಲು ಕೊಡುಗೆ ನೀಡುತ್ತವೆ.

 

*****


(ಪ್ರಕಟಣೆ ಐ.ಡಿ.: 2317547) ವಿಸಿಟರ್ ಕೌಂಟರ್ : 18
ಪ್ರಕಟಣೆಯನ್ನು ಇದರಲ್ಲಿ ಓದಿ: Bengali , Bengali-TR , English , Urdu , हिन्दी , Gujarati