ಕಾನೂನು ಮತ್ತು ನ್ಯಾಯ ಸಚಿವಾಲಯ
azadi ka amrit mahotsav

ಅಬುಧಾಬಿಯಲ್ಲಿ ನಡೆದ 15ನೇ ವಿಶ್ವಸಂಸ್ಥೆಯ ಕಾಂಗ್ರೆಸ್‌ನಲ್ಲಿ ನ್ಯಾಯಾಂಗ ಸುಧಾರಣೆಗಳು ಮತ್ತು ಜಾಗತಿಕ ಕಾನೂನು ಸಹಭಾಗಿತ್ವವನ್ನು ಭಾರತ ಪ್ರದರ್ಶಿಸಿತು

ಪ್ರಕಟಣಾ ದಿನಾಂಕ: 30 SEP 2026 6:38PM by PIB Bengaluru

ಕೇಂದ್ರ ಕಾನೂನು ಮತ್ತು ನ್ಯಾಯ ರಾಜ್ಯ ಖಾತೆ ಸಚಿವರಾದ (ಸ್ವತಂತ್ರ ನಿರ್ವಹಣೆ) ಶ್ರೀ ಅರ್ಜುನ್ ರಾಮ್ ಮೇಘವಾಲ್ ಅವರು 15ನೇ ವಿಶ್ವಸಂಸ್ಥೆಯ ಕಾಂಗ್ರೆಸ್‌ನ ಸಂದರ್ಭದಲ್ಲಿ ಯುಎಇಯ ಕಾನೂನು ಸಚಿವರಾದ ಶ್ರೀ ಅಬ್ದುಲ್ಲಾ ಸುಲ್ತಾನ್ ಬಿನ್ ಅವಾದ್ ಅಲ್ ನುಐಮಿ ಅವರೊಂದಿಗೆ ಸಭೆ ನಡೆಸಿದರು. ತಂತ್ರಜ್ಞಾನ ಆಧಾರಿತ ನ್ಯಾಯ ವ್ಯವಸ್ಥೆ, ಹೊಸ ಅಪರಾಧ ಕಾನೂನುಗಳು ಮತ್ತು ಜಾಗತಿಕ ಕಾನೂನು ಸಹಕಾರಕ್ಕೆ ಭಾರತ ನೀಡುತ್ತಿರುವ ಆದ್ಯತೆಯನ್ನು ಉಲ್ಲೇಖಿಸಲಾಯಿತು.

“ಡಿಜಿಟಲ್ ಯುಗದಲ್ಲಿ ಜನರು ಮತ್ತು ಗ್ರಹದ ರಕ್ಷಣೆ ಹಾಗೂ ಸುಸ್ಥಿರ ಅಭಿವೃದ್ಧಿಗಾಗಿ 2030ರ ಕಾರ್ಯಸೂಚಿಯನ್ನು ಸಾಧಿಸುವುದಕ್ಕಾಗಿ ಅಪರಾಧ ತಡೆಗಟ್ಟುವಿಕೆ, ಅಪರಾಧ ನ್ಯಾಯ ಮತ್ತು ಕಾನೂನಿನ ಆಳ್ವಿಕೆಯನ್ನು ವೇಗಗೊಳಿಸುವುದು” ಎಂಬ ವಿಷಯದಡಿ ಅಬುಧಾಬಿಯಲ್ಲಿ ನಡೆಯುತ್ತಿರುವ ಅಪರಾಧ ತಡೆಗಟ್ಟುವಿಕೆ ಮತ್ತು ಅಪರಾಧ ನ್ಯಾಯ ಕುರಿತ 15ನೇ ವಿಶ್ವಸಂಸ್ಥೆಯ ಕಾಂಗ್ರೆಸ್‌ನಲ್ಲಿ, ಆಧುನಿಕ, ನಾಗರಿಕ ಕೇಂದ್ರಿತ, ತಂತ್ರಜ್ಞಾನ ಆಧಾರಿತ ಮತ್ತು ಜಾಗತಿಕವಾಗಿ ಸಂಪರ್ಕ ಹೊಂದಿದ ನ್ಯಾಯ ವ್ಯವಸ್ಥೆಯನ್ನು ನಿರ್ಮಿಸುವ ತನ್ನ ಪ್ರಯತ್ನಗಳನ್ನು ಭಾರತ ಪ್ರದರ್ಶಿಸಿತು.

ವಿಶ್ವಸಂಸ್ಥೆಯ ಕಾಂಗ್ರೆಸ್‌ ಅನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಅರ್ಜುನ್ ರಾಮ್ ಮೇಘವಾಲ್ ಅವರು, ಭಾರತದ ಹೊಸ ಅಪರಾಧ ಕಾನೂನುಗಳಾದ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮಗಳನ್ನು ಪ್ರಸ್ತಾಪಿಸಿದರು. ಈ ಕಾನೂನುಗಳಲ್ಲಿ ತಂತ್ರಜ್ಞಾನ, ತ್ವರಿತ ನ್ಯಾಯ, ವಿಧಿವಿಜ್ಞಾನ ತನಿಖೆ ಮತ್ತು ಡಿಜಿಟಲ್‌-ಆದ್ಯತೆಯ ಕಾರ್ಯವಿಧಾನಗಳಿಗೆ ಒತ್ತು ನೀಡಲಾಗಿದೆ ಎಂದು ಅವರು ವಿವರಿಸಿದರು. ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (ಐ4ಸಿ) ಮತ್ತು ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ ಮೂಲಕ ಸೈಬರ್ ಅಪರಾಧಗಳಿಗೆ ಭಾರತ ನೀಡುತ್ತಿರುವ ಡಿಜಿಟಲ್ ಪ್ರತಿಕ್ರಿಯೆಯನ್ನೂ ಅವರು ವಿವರಿಸಿದರು. ಇವುಗಳ ಮೂಲಕ ಸೈಬರ್ ಅಪರಾಧಗಳ ತ್ವರಿತ ವರದಿ, ವಂಚನೆ ತಡೆಗಟ್ಟುವಿಕೆ ಮತ್ತು ಅಕ್ರಮ ಹಣ ವರ್ಗಾವಣೆಗಾಗಿ ಬಳಸಲಾಗುವ ‘ಮ್ಯೂಲ್’ ಖಾತೆಗಳನ್ನು ಸ್ಥಗಿತಗೊಳಿಸುವ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿದೆ ಎಂದು ಅವರು ಹೇಳಿದರು.

ಭಯೋತ್ಪಾದನೆಯ ವಿರುದ್ಧ ಭಾರತದ ಶೂನ್ಯ ಸಹಿಷ್ಣು ನೀತಿಯನ್ನು ಶ್ರೀ ಮೇಘವಾಲ್ ಅವರು ಪುನರುಚ್ಚರಿಸಿದರು. ಭಯೋತ್ಪಾದನೆ, ಮಾದಕವಸ್ತುಗಳ ಕಳ್ಳಸಾಗಣೆ, ಗಡಿದಾಟುವ ವನ್ಯಜೀವಿ ಅಪರಾಧ, ಅಕ್ರಮ ಮರ ಕಡಿಯುವಿಕೆ, ವಿಷಕಾರಿ ತ್ಯಾಜ್ಯ ಸುರಿಯುವಿಕೆ ಹಾಗೂ ಇತರ ಸಂಘಟಿತ ಮತ್ತು ಪರಿಸರ ಸಂಬಂಧಿತ ಅಪರಾಧಗಳ ವಿರುದ್ಧ ಜಾಗತಿಕ ಸಹಕಾರದ ಅಗತ್ಯವನ್ನು ಅವರು ಹೇಳಿದರು.

ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಮತ್ತು ಪರ್ಯಾಯ ವಿವಾದ ಪರಿಹಾರ ಕ್ಷೇತ್ರಗಳಲ್ಲಿ ವಿಶೇಷವಾಗಿ ಬೆಳೆಯುತ್ತಿರುವ ಭಾರತ-ಯುಎಇ ಕಾನೂನು ಸಹಭಾಗಿತ್ವದ ಬಗ್ಗೆಯೂ ಗಮನ ಸೆಳೆಯಲಾಯಿತು. ಭಾರತ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ (ಐಐಎಸಿ) ಮತ್ತು ದುಬೈ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ (ಡಿಐಎಸಿ) ನಡುವಿನ ಸಹಭಾಗಿತ್ವವು ಜ್ಞಾನ ವಿನಿಮಯ, ವೃತ್ತಿಪರ ತರಬೇತಿ, ಜಂಟಿ ಕಾರ್ಯಕ್ರಮಗಳು, ಸಂಶೋಧನೆ ಮತ್ತು ಡಿಜಿಟಲ್ ವಿವಾದ ಪರಿಹಾರ ವ್ಯವಸ್ಥೆಗಳನ್ನು ಬಲಪಡಿಸುತ್ತಿದೆ. ಡಿಐಎಸಿ ಸುಮಾರು 5,000 ಪ್ರಕರಣಗಳನ್ನು ನಿರ್ವಹಿಸುತ್ತಿದ್ದು, ಅವುಗಳ ಒಟ್ಟು ಮೌಲ್ಯ ಎಇಡಿ 80 ಬಿಲಿಯನ್‌ಗೂ (ಸುಮಾರು 21.8 ಬಿಲಿಯನ್‌ ಡಾಲರ್) ಹೆಚ್ಚಾಗಿದೆ.

ತಮ್ಮ ಭೇಟಿಯ ಸಂದರ್ಭದಲ್ಲಿ ಶ್ರೀ ಮೇಘವಾಲ್ ಅವರು ಯುಎನ್‌ಒಡಿಸಿ ಕಾರ್ಯನಿರ್ವಾಹಕ ನಿರ್ದೇಶಕಿ ಶ್ರೀಮತಿ ಮೋನಿಕಾ ಜುಮಾ ಅವರನ್ನೂ ಭೇಟಿಯಾಗಿ, ಮಾದಕವಸ್ತುಗಳು ಮತ್ತು ಸಂಘಟಿತ ಅಪರಾಧಗಳ ವಿರುದ್ಧದ ಸಹಕಾರ ಹಾಗೂ ಕಾನೂನು ಮತ್ತು ನ್ಯಾಯಾಂಗ ಕ್ಷೇತ್ರಗಳಲ್ಲಿನ ಬಲವಾದ ಸಹಭಾಗಿತ್ವದ ಕುರಿತು ಚರ್ಚಿಸಿದರು.

ಈ ಬೆಳವಣಿಗೆಗಳು ವ್ಯಾಪಾರ, ಹೂಡಿಕೆ, ಇಂಧನ, ತಂತ್ರಜ್ಞಾನ, ರಕ್ಷಣೆ, ಶಿಕ್ಷಣ ಮತ್ತು ಜನರು - ಜನರ ನಡುವಿನ ಸಂಬಂಧಗಳ ಜೊತೆಗೆ ಕಾನೂನು, ನ್ಯಾಯ ಮತ್ತು ಉತ್ತಮ ಆಡಳಿತ ಕ್ಷೇತ್ರಗಳಲ್ಲಿಯೂ ವಿಸ್ತರಿಸುತ್ತಿರುವ ಭಾರತ-ಯುಎಇ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವವನ್ನು ಪ್ರತಿಬಿಂಬಿಸುತ್ತವೆ.

15ನೇ ವಿಶ್ವಸಂಸ್ಥೆಯ ಕಾಂಗ್ರೆಸ್‌ನಲ್ಲಿ ಭಾರತದ ಭಾಗವಹಿಸುವಿಕೆಯು ಆಧುನಿಕ ಕಾನೂನುಗಳು, ಡಿಜಿಟಲ್ ನಾವೀನ್ಯತೆ, ಬಲಿಷ್ಠ ಸಂಸ್ಥೆಗಳು, ಪರಿಣಾಮಕಾರಿ ಜಾರಿ ಮತ್ತು ಅರ್ಥಪೂರ್ಣ ಅಂತಾರಾಷ್ಟ್ರೀಯ ಸಹಕಾರದ ಬದ್ಧತೆಯನ್ನು ಮತ್ತಷ್ಟು ಸ್ಪಷ್ಟಪಡಿಸುತ್ತದೆ. ವೇಗವಾಗಿ ಬದಲಾಗುತ್ತಿರುವ ಡಿಜಿಟಲ್ ಜಗತ್ತಿಗೆ ಸನ್ನದ್ಧವಾಗಿರುವ ನ್ಯಾಯ ವ್ಯವಸ್ಥೆಯನ್ನು ನಿರ್ಮಿಸುವ ನಿಟ್ಟಿನಲ್ಲಿ ಭಾರತ ಈ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಇಂದಿನ ಪರಿಣಾಮಕಾರಿ ನ್ಯಾಯ ವ್ಯವಸ್ಥೆಗೆ ಕೇವಲ ಕಾನೂನುಗಳು ಸಾಕಾಗುವುದಿಲ್ಲ. ಅದಕ್ಕೆ ತಂತ್ರಜ್ಞಾನ, ಕೌಶಲ್ಯಯುತ ಸಂಸ್ಥೆಗಳು, ಜಾಗತಿಕ ಸಹಕಾರ ಮತ್ತು ನಿಷ್ಪಕ್ಷಪಾತ ಕಡೆಗೆ ಅಚಲ ಬದ್ಧತೆಯ ಅಗತ್ಯವಿದೆ.

 

 

*******


(ಪ್ರಕಟಣೆ ಐ.ಡಿ.: 2317313) ವಿಸಿಟರ್ ಕೌಂಟರ್ : 28
ಪ್ರಕಟಣೆಯನ್ನು ಇದರಲ್ಲಿ ಓದಿ: हिन्दी , English , Urdu , Marathi , Malayalam