ಶಿಕ್ಷಣ ಸಚಿವಾಲಯ
ಕೇಂದ್ರ ಶಿಕ್ಷಣ ಸಚಿವರು ನವದೆಹಲಿಯಲ್ಲಿ ಫ್ರೆಂಚ್ ಉನ್ನತ ಶಿಕ್ಷಣ ಸಚಿವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು
ಭಾರತ-ಫ್ರಾನ್ಸ್ ನಾವೀನ್ಯತೆ ವರ್ಷ 2026 ಶಿಕ್ಷಣ, ಸಂಶೋಧನೆ ಮತ್ತು ನಾವೀನ್ಯತೆಯಲ್ಲಿ ಸಹಯೋಗವನ್ನು ಮತ್ತಷ್ಟು ಗಾಢಗೊಳಿಸಲು ಸೂಕ್ತ ಅವಕಾಶವನ್ನು ಒದಗಿಸುತ್ತದೆ: ಶ್ರೀ ಪ್ರಲ್ಹಾದ್ ಜೋಶಿ
ಸಚಿವರಿಂದ ಶೈಕ್ಷಣಿಕ ಸಂಚಾರ , ಸಾಂಸ್ಥಿಕ ಸಂಪರ್ಕಗಳು, ಸಂಶೋಧನಾ ಸಹಯೋಗ ಮತ್ತು ಉದಯೋನ್ಮುಖ ಸಹಕಾರ ಕ್ಷೇತ್ರಗಳ ಕುರಿತು ಚರ್ಚೆ
ಫ್ರೆಂಚ್ ಸಚಿವರಾದ ಗೌರವಾನ್ವಿತ ಶ್ರೀ ಫಿಲಿಪ್ ಬ್ಯಾಪ್ಟಿಸ್ಟ್ ಅವರು ಸೆಪ್ಟೆಂಬರ್ 28 ರಿಂದ 30, 2026 ರವರೆಗೆ ಮೂರು ದಿನಗಳ ಭಾರತದ ಪ್ರವಾಸದಲ್ಲಿದ್ದಾರೆ
ಪ್ರಕಟಣಾ ದಿನಾಂಕ:
28 SEP 2026 7:54PM by PIB Bengaluru
ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಫ್ರಾನ್ಸ್ ದೇಶದ ಉನ್ನತ ಶಿಕ್ಷಣ, ಸಂಶೋಧನೆ ಮತ್ತು ಬಾಹ್ಯಾಕಾಶ ಸಚಿವರಾದ ಗೌರವಾನ್ವಿತ ಫಿಲಿಪ್ ಬ್ಯಾಪ್ಟಿಸ್ಟ್ ಅವರೊಂದಿಗೆ ಇಂದು ನವದೆಹಲಿಯಲ್ಲಿ ದ್ವಿಪಕ್ಷೀಯ ಸಭೆ ನಡೆಸಿದರು. ಶಿಕ್ಷಣ, ಸಂಶೋಧನೆ, ನಾವೀನ್ಯತೆ, ಶೈಕ್ಷಣಿಕ ಸಂಚಾರ ಮತ್ತು ಸಾಂಸ್ಥಿಕ ಪಾಲುದಾರಿಕೆಗಳಲ್ಲಿ ಭಾರತ ಮತ್ತು ಫ್ರಾನ್ಸ್ ನಡುವಿನ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳ ಬಗ್ಗೆ ಉಭಯ ಸಚಿವರು ಚರ್ಚಿಸಿದರು.

ಫ್ರೆಂಚ್ ಸಚಿವರು ಮತ್ತು ಅವರ ನಿಯೋಗವನ್ನು ಸ್ವಾಗತಿಸಿದ ಶ್ರೀ ಪ್ರಲ್ಹಾದ್ ಜೋಶಿ ಅವರು, ಭಾರತ-ಫ್ರಾನ್ಸ್ ನಡುವಿನ ಸುದೀರ್ಘ ಪಾಲುದಾರಿಕೆಯನ್ನು ಎತ್ತಿಹಿಡಿದರು ಮತ್ತು ಶಿಕ್ಷಣ ಕ್ಷೇತ್ರದಲ್ಲಾಗುವ ಸಹಕಾರವು ದ್ವಿಪಕ್ಷೀಯ ಸಂಬಂಧದ ಪ್ರಮುಖ ಸ್ಥಂಭವಾಗಿದೆ ಎಂದು ಪ್ರತಿಪಾದಿಸಿದರು. ಭಾರತ-ಫ್ರಾನ್ಸ್ ನಾವೀನ್ಯತೆ ವರ್ಷ 2026, ಶಿಕ್ಷಣ, ಸಂಶೋಧನೆ ಮತ್ತು ನಾವೀನ್ಯತೆಗಳಲ್ಲಿನ ಸಹಯೋಗವನ್ನು ಮತ್ತಷ್ಟು ಗೊಳಿಸಲು ಸೂಕ್ತ ಅವಕಾಶವನ್ನು ಒದಗಿಸಿದೆ ಎಂದು ಹೇಳಿದರು.

ಸಭೆಯಲ್ಲಿ, ಸಾಂಸ್ಥಿಕ ಸಂಪರ್ಕಗಳನ್ನು ಬಲಪಡಿಸುವುದು; ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಂಶೋಧಕರ ಪ್ರವಾಸ; ಹಾಗೂ ಜಂಟಿ ಶೈಕ್ಷಣಿಕ ಕಾರ್ಯಕ್ರಮಗಳು ಮತ್ತು ವಿನಿಮಯಗಳಿಗೆ ಅವಕಾಶಗಳನ್ನು ವಿಸ್ತರಿಸುವುದು ಸೇರಿದಂತೆ ಉನ್ನತ ಶಿಕ್ಷಣ ಕ್ಷೇತ್ರದಲ್ಲಿನ ಸಂಭಾವ್ಯ ತೊಡಗಿಸಿಕೊಳ್ಳಿಕೆಗಳ ಕುರಿತು ಎರಡೂ ಕಡೆಯವರು ಚರ್ಚಿಸಿದರು. ಸಾಂಸ್ಥಿಕ ಸಂವಾದ, ಜಂಟಿ ಶೈಕ್ಷಣಿಕ ಚಟುವಟಿಕೆಗಳು ಮತ್ತು ಸಂಶೋಧನೆಗೆ ಒತ್ತು ನೀಡುವ ಮೂಲಕ ಜೀವ ವಿಜ್ಞಾನ, ಸಮಾಜ ವಿಜ್ಞಾನ ಮತ್ತು ಮಾನವಿಕ (ಮಾನವ ಶಾಸ್ತ್ರ) ಕ್ಷೇತ್ರಗಳಲ್ಲಿ ಹೆಚ್ಚಿನ ಸಹಕಾರವನ್ನು ಅವರು ಅನ್ವೇಷಿಸಿದರು.

ಉಭಯ ದೇಶಗಳ ನಡುವೆ ಜ್ಞಾನದ ಪಾಲುದಾರಿಕೆಯನ್ನು ಮತ್ತಷ್ಟು ಉತ್ತೇಜಿಸುವ ಕುರಿತು ಸಚಿವರು ಆಲೋಚನೆಗಳನ್ನು ವಿನಿಮಯ ಮಾಡಿಕೊಂಡರು ಮತ್ತು ಅಸ್ತಿತ್ವದಲ್ಲಿರುವ ಸಾಂಸ್ಥಿಕ ಸಹಯೋಗಗಳನ್ನು ಮತ್ತಷ್ಟು ಬೆಳೆಸಲು ಹಾಗೂ ಜಂಟಿ ಶೈಕ್ಷಣಿಕ ಮತ್ತು ಸಂಶೋಧನಾ ಉಪಕ್ರಮಗಳಿಗೆ ಹೊಸ ಹಾದಿಗಳನ್ನು ಸೃಷ್ಟಿಸುವ ಅವಕಾಶಗಳ ಕುರಿತು ಚರ್ಚಿಸಿದರು. ಗುಜರಾತ್ ರಾಜ್ಯದ ಗಿಫ್ಟ್ ಸಿಟಿ ಸೇರಿದಂತೆ ಫ್ರೆಂಚ್ ಕಂಪನಿಗಳು ನೆಲೆಗೊಂಡಿರುವ ಮತ್ತು ತಾಂತ್ರಿಕ ಮಾನವ ಸಂಪನ್ಮೂಲಗಳ ಅಗತ್ಯವಿರುವ ಸ್ಥಳಗಳಲ್ಲಿ ಭಾರತದಲ್ಲಿ ತಮ್ಮ ಶಾಖಾ ಕ್ಯಾಂಪಸ್ ಗಳನ್ನು ಪ್ರಾರಂಭಿಸಲು ಫ್ರೆಂಚ್ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಆಹ್ವಾನ ನೀಡಲಾಯಿತು.

ಜನರ ನಡುವಿನ ಸೌಹಾರ್ದ ಸಂಬಂಧಗಳ ಮಹತ್ವವನ್ನು ಗುರುತಿಸಿದ ಉಭಯ ಪಕ್ಷಗಳು, ಭಾಷಾ ಕಲಿಕೆ ಮತ್ತು ಶಿಕ್ಷಕರ ಶಿಕ್ಷಣವನ್ನು ಬಲಪಡಿಸಲು, ಶೈಕ್ಷಣಿಕ ಪರಿಣತಿಯನ್ನು ಹಂಚಿಕೊಳ್ಳಲು ಮತ್ತು ತಂತ್ರಜ್ಞಾನ ಆಧಾರಿತ ಕಲಿಕೆಯನ್ನು ಉತ್ತೇಜಿಸಲು ಅವಕಾಶಗಳನ್ನು ಪರಿಶೀಲಿಸಿದವು. ಭಾರತ ಮತ್ತು ಫ್ರಾನ್ಸ್ ನಡುವಿನ ಶೈಕ್ಷಣಿಕ ಅರ್ಹತೆಗಳ ಪರಸ್ಪರ ಮಾನ್ಯತೆ (ಎಂ ಆರ್ ಕ್ಯೂ) ಒಪ್ಪಂದದ ಪ್ರಸ್ತುತ ಪರಿಷ್ಕರಣೆ, ಡಿಜಿಟಲ್ ಶಿಕ್ಷಣದಲ್ಲಿ ಅನುಭವಗಳು ಮತ್ತು ಅತ್ಯುತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುವುದು ಹಾಗೂ ಗುಣಮಟ್ಟದ ಕಲಿಕೆಗೆ ಪ್ರವೇಶವನ್ನು ವಿಸ್ತರಿಸಲು ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಉನ್ನತ ಶಿಕ್ಷಣ, ನಾವೀನ್ಯತೆ, ಭಾಷಾ ಶಿಕ್ಷಣ ಮತ್ತು ಡಿಜಿಟಲ್ ಕಲಿಕೆಯಲ್ಲಿ ಭಾರತ-ಫ್ರಾನ್ಸ್ ಸಹಕಾರವನ್ನು ಮತ್ತಷ್ಟು ಗೊಳಿಸಲು ಎರಡೂ ಕಡೆಯವರು ತಮ್ಮ ಬದ್ಧತೆಯನ್ನು ಪುನರುಚ್ಚರಿಸುವುದರೊಂದಿಗೆ ಸಭೆಯು ಮುಕ್ತಾಯಗೊಂಡಿತು.
*****
(ಪ್ರಕಟಣೆ ಐ.ಡಿ.: 2316296)
ವಿಸಿಟರ್ ಕೌಂಟರ್ : 7