ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ನಶಾ ಮುಕ್ತ ಯುವ ಅಭಿಯಾನದ ಯುವ-ನಾಯಕತ್ವದ ಚಟುವಟಿಕೆಯನ್ನು ಶ್ಲಾಘಿಸಿದ ಪ್ರಧಾನಮಂತ್ರಿ ಮೋದಿ
‘ನಶಾ-ಮುಕ್ತಿ ಕಾ ಸಂದೇಶ್’ ಮತ್ತು ಯುವಕರ ನೇತೃತ್ವದ ಸೃಜನಶೀಲ ಸಂವಹನಕ್ಕೆ ಪ್ರಧಾನಮಂತ್ರಿ ಪ್ರಶಂಸೆ
ಪ್ರಕಟಣಾ ದಿನಾಂಕ:
27 SEP 2026 4:54PM by PIB Bengaluru
ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ನ 138ನೇ ಸಂಚಿಕೆಯಲ್ಲಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೇಶಾದ್ಯಂತ ನಶೆ ಮುಕ್ತ ಯುವ ಅಭಿಯಾನದಲ್ಲಿ ಯುವಜನರ ಹೆಚ್ಚುತ್ತಿರುವ ಭಾಗವಹಿಸುವಿಕೆಯನ್ನು ಶ್ಲಾಘಿ;ಸಿದರು. ಲಕ್ಷಾಂತರ ಯುವಕರು ಮಾದಕದ್ರವ್ಯ ಮತ್ತು ವ್ಯಸನಗಳಿಂದ ದೂರವಿರಲು ಸಂಕಲ್ಪ ಮಾಡಿದ್ದಾರೆ ಮತ್ತು ಇತರರಲ್ಲಿ ಜಾಗೃತಿ ಮೂಡಿಸುವ ಜವಾಬ್ದಾರಿಯನ್ನೂ ವಹಿಸಿಕೊಳ್ಳುತ್ತಿದ್ದಾರೆ ಎನ್ನುವ ಅಂಶಕ್ಕೆ ಗಮನ ಸೆಳೆದರು.

‘ವಿಕಸಿತ ಭಾರತಕ್ಕಾಗಿ ನಶೆ ಮುಕ್ತ ಯುವ’ ಎಂಬ 100 ವಾರಗಳ ಈ ಅಭಿಯಾನವು 'ಮೇರಾ ಯುವ ಭಾರತ' (MY Bharat) ಮತ್ತು ರಾಷ್ಟ್ರೀಯ ಸೇವಾ ಯೋಜನೆ (ಎನ್ ಎಸ್ ಎಸ್) ಯೊಂದಿಗೆ ಸಂಬಂಧಪಟ್ಟ ಸ್ವಯಂಸೇವಕರು, ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾಲಯಗಳು ಹಾಗೂ ವಿವಿಧ ಸಾಮಾಜಿಕ ಮತ್ತು ಆಧ್ಯಾತ್ಮಿಕ ಸಂಸ್ಥೆಗಳನ್ನು ಒಂದೆಡೆ ತರುತ್ತದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಈ ಅಭಿಯಾನದ ಭಾಗವಾಗಿ ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ಸಾವಿರಾರು ಪ್ರತಿಜ್ಞಾವಿಧಿ ಸಮಾರಂಭಗಳು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಅವರು ಉಲ್ಲೇಖಿಸಿದರು.
ಯುವಜನರ ನೇತೃತ್ವದ ಸಂವಹನದ ಪ್ರಾಮುಖ್ಯತೆಯನ್ನು ಎತ್ತಿಹಿಡಿದ ಪ್ರಧಾನಮಂತ್ರಿಯವರು, 'ನಶಾ-ಮುಕ್ತಿ ಕಾ ಸಂದೇಶ್' (ನಶೆ ಮುಕ್ತಿಯ ಸಂದೇಶ) ಉಪಕ್ರಮವನ್ನು ವಿಶೇಷವಾಗಿ ಪ್ರಶಂಸಿಸಿದರು. ಯುವಕರು ಮಾದಕದ್ರವ್ಯ ವಿರೋಧಿ ಸಂದೇಶವನ್ನು ತಮ್ಮದೇ ಆದ ಭಾಷೆಗಳಲ್ಲಿ ಮತ್ತು ಸೃಜನಶೀಲ ಅಭಿವ್ಯಕ್ತಿಗಳ ಮೂಲಕ ಸಮುದಾಯಗಳಿಗೆ ತಲುಪಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಈ ಅಭಿಯಾನಕ್ಕೆ ತಮ್ಮ ಸೃಜನಶೀಲತೆಯ ಕೊಡುಗೆ ನೀಡುವಂತೆ 'ಮನ್ ಕಿ ಬಾತ್' ಮೂಲಕ ಯುವಕರಲ್ಲಿ ತಾವು ಮಾಡಿದ್ದ ಹಿಂದಿನ ಮನವಿಯನ್ನು ಸ್ಮರಿಸಿದ ಪ್ರಧಾನಿಯವರು, ದೇಶಾದ್ಯಂತ ಯುವಜನರಿಂದ ಬಂದ ಪ್ರತಿಕ್ರಿಯೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜಾಗೃತಿ ಮೂಡಿಸಲು ಯುವಕರು ತಮ್ಮ ಸೃಜನಶೀಲತೆಯನ್ನು ಬಳಸಿಕೊಳ್ಳಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ, ಮೈಭಾರತ್ (MY Bharat) ವೇದಿಕೆಯ ಮೂಲಕ ಗೀತ ರಚನೆ, ಘೋಷಣೆ ಬರವಣಿಗೆ ಮತ್ತು ಬೀದಿ ನಾಟಕ ಸ್ಪರ್ಧೆಗಳು ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
#NashaMuktYuva ಹ್ಯಾಶ್ಟ್ಯಾಗ್ ಬಳಸಿ ಸೃಜನಶೀಲ ವಿಷಯಗಳ ಮೂಲಕ ಅಭಿಯಾನದ ಸಂದೇಶವನ್ನು ಪ್ರಸಾರ ಮಾಡಲು ಯುವಕರು ಸಾಮಾಜಿಕ ಮಾಧ್ಯಮವನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿರುವುದನ್ನು ಪ್ರಧಾನಮಂತ್ರಿಯವರಿ ಉಲ್ಲೇಖಿಸಿದರು. ಈ ಅಭಿಯಾನದಲ್ಲಿ ಸಂದೇಶ, ಮಾಧ್ಯಮ ಮತ್ತು ಚಾಲನಾ ಶಕ್ತಿ ಎಲ್ಲವನ್ನೂ ಯುವಕರೇ ಮುನ್ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.
ಅಭಿಯಾನದ ನಿರಂತರ ತಲುಪುವಿಕೆಯ ಭಾಗವಾಗಿ, ಯುವಜನರಲ್ಲಿ ಆರೋಗ್ಯಕರ ಜೀವನಶೈಲಿ ಮತ್ತು ಸಮಗ್ರ ಯೋಗಕ್ಷೇಮವನ್ನು ಉತ್ತೇಜಿಸಲು ಮುಂಬರುವ ದಿನಗಳಲ್ಲಿ ಆರೋಗ್ಯ ತಪಾಸಣೆ ಮತ್ತು ಧ್ಯಾನ ಶಿಬಿರಗಳಂತಹ ಚಟುವಟಿಕೆಗಳನ್ನು ಸಹ ಆಯೋಜಿಸಲಾಗುವುದು.
'ವಿಕಸಿತ ಭಾರತಕ್ಕಾಗಿ ನಶಾ ಮುಕ್ತ ಯುವ' ಅಭಿಯಾನವನ್ನು ('ನಶಾ ಮುಕ್ತ ಯುವ ಫಾರ್ ವಿಕಸಿತ್ ಭಾರತ್) ಯುವಜನರಲ್ಲಿ ಜಾಗೃತಿಯನ್ನು ಬಲಪಡಿಸಲು, ಸಮುದಾಯದ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸಲು ಮತ್ತು ಮಾದಕದ್ರವ್ಯ ಸೇವನೆಯ ವಿರುದ್ಧ ಸಮೂಹಿಕ ಸಂಕಲ್ಪವನ್ನು ಉತ್ತೇಜಿಸಲು 100 ವಾರಗಳ ನಿರಂತರ ಅಭಿಯಾನವಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಮೈ ಭಾರತ್, ಎನ್ ಎಸ್ ಎಸ್, ಶಿಕ್ಷಣ ಸಂಸ್ಥೆಗಳು ಮತ್ತು ಪಾಲುದಾರ ಸಂಸ್ಥೆಗಳ ಮೂಲಕ, ಈ ಅಭಿಯಾನವು ಆರೋಗ್ಯಕರ ಮತ್ತು ಮಾದಕದ್ರವ್ಯ ಮುಕ್ತ ಪೀಳಿಗೆಯನ್ನು ನಿರ್ಮಿಸುವ ಕಡೆಗೆ ಭಾರತದ ಯುವಕರ ಶಕ್ತಿ ಮತ್ತು ಸೃಜನಶೀಲತೆಯನ್ನು ಬಳಸಿಕೊಳ್ಳಲು ಶ್ರಮಿಸುತ್ತದೆ.
*****
(ಪ್ರಕಟಣೆ ಐ.ಡಿ.: 2315616)
ವಿಸಿಟರ್ ಕೌಂಟರ್ : 9