ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

ಕೇಂದ್ರ ಆರೋಗ್ಯ ಸಚಿವರಾದ ಶ್ರೀ ಜೆ.ಪಿ. ನಡ್ಡಾ ಅವರಿಂದ ಆರೋಗ್ಯ ಮಂಥನ್ 2026 ಉದ್ಘಾಟನೆ: ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ 8 ವರ್ಷ ಹಾಗೂ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಯೋಜನೆಯ 5 ವರ್ಷಗಳ ಸಾಧನೆ

ಎಬಿ ಪಿಎಂ-ಜೆಎವೈ ಮತ್ತು ಎಬಿಡಿಎಂ ಮೈಲಿಗಲ್ಲುಗಳು ಭಾರತದ ವಿಸ್ತರಿಸುತ್ತಿರುವ ಡಿಜಿಟಲ್ ಮತ್ತು ಆರೋಗ್ಯ ಭರವಸೆಯ ಪರಿಸರ ವ್ಯವಸ್ಥೆಯನ್ನು ಪ್ರತಿಬಿಂಬಿಸುತ್ತವೆ: ಶ್ರೀ ಜೆ.ಪಿ. ನಡ್ಡಾ

ಎಬಿ ಪಿಎಂ-ಜೆಎವೈ 60 ಕೋಟಿಗೂ ಹೆಚ್ಚು ಫಲಾನುಭವಿಗಳನ್ನು ಒಳಗೊಂಡಂತೆ ವಿಶ್ವದ ಅತಿ ದೊಡ್ಡ ಆರೋಗ್ಯ ಭರವಸೆ ಯೋಜನೆಯಾಗಿ ಹೊರಹೊಮ್ಮಿದೆ: ಕೇಂದ್ರ ಆರೋಗ್ಯ ಸಚಿವರು

ಆರೋಗ್ಯ ಮಂಥನ್ 2026 ರಲ್ಲಿ ರಾಷ್ಟ್ರೀಯ ಆರೋಗ್ಯ ಸೇವೆ ಪೂರೈಕೆದಾರರ ನೋಂದಣಿ   ಮೊಬೈಲ್ ಆ್ಯಪ್, ಸುರಕ್ಷಿತ ದತ್ತಾಂಶ  ಪರಿಸರ ಮತ್ತು ಎಬಿ ಪಿಎಂ-ಜೆಎವೈ ಗಾಗಿ ಸ್ವಯಂ-ನಿರ್ಣಯ  ಚೌಕಟ್ಟು ಸೇರಿದಂತೆ ಸರಣಿ ಡಿಜಿಟಲ್ ಆರೋಗ್ಯ ಹಾಗೂ ಆರೋಗ್ಯ ಭರವಸೆ ಉಪಕ್ರಮಗಳಿಗೆ ಚಾಲನೆ

ಆರೋಗ್ಯ ಮಂಥನ್ 2026 ರ ವಿವಿಧ ವಿಭಾಗಗಳಲ್ಲಿ ಎಬಿ ಪಿಎಂ-ಜೆಎವೈ ಮತ್ತು ಎಬಿಡಿಎಂ ಅತ್ಯುತ್ತಮ ಅನುಷ್ಠಾನಕ್ಕಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಗುರುತಿಸಿ ಗೌರವ

ಪ್ರಕಟಣಾ ದಿನಾಂಕ: 25 SEP 2026 3:18PM by PIB Bengaluru

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವರಾದ ಶ್ರೀ ಜೆ.ಪಿ. ನಡ್ಡಾ ಅವರು ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ 'ಆರೋಗ್ಯ ಮಂಥನ್ 2026' ಅನ್ನು ಉದ್ಘಾಟಿಸಿದರು. ಇದು 'ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನೆ'  (ಎಬಿ ಪಿಎಂ-ಜೆಎವೈ) ಯ ಎಂಟು ವರ್ಷಗಳು ಮತ್ತು 'ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್' (ಎಬಿಡಿಎಂ) ನ ಐದು ವರ್ಷಗಳ ಯಶಸ್ವಿ ಪಯಣವನ್ನು ಆಚರಿಸುತ್ತದೆ. ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್ ಎಚ್ ಎ) ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಹಿರಿಯ ಸರ್ಕಾರಿ ಅಧಿಕಾರಿಗಳು, ಆರೋಗ್ಯ ಸೇವೆ ಪೂರೈಕೆದಾರರು, ವಿಮಾ ಸಂಸ್ಥೆಗಳು, ತಂತ್ರಜ್ಞಾನ ಮತ್ತು ಡಿಜಿಟಲ್ ಆರೋಗ್ಯ ತಜ್ಞರು, ಶೈಕ್ಷಣಿಕ ಕ್ಷೇತ್ರ, ಅಭಿವೃದ್ಧಿ ಹಾಗೂ ಇತರ ಸಂಬಂಧಪಟ್ಟ ಪಾಲುದಾರರು ಭಾಗವಹಿಸಿ ಭಾರತದ ಆರೋಗ್ಯ ಭರವಸೆ ಮತ್ತು ಡಿಜಿಟಲ್ ಆರೋಗ್ಯ ಪರಿಸರ ವ್ಯವಸ್ಥೆಯ ಪ್ರಗತಿ ಹಾಗೂ ಮುಂದಿನ ಹಂತದ ಆದ್ಯತೆಗಳ ಬಗ್ಗೆ ಚರ್ಚಿಸಿದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರಾದ ಶ್ರೀ ಜೆ.ಪಿ. ನಡ್ಡಾ ಅವರು, ಎಬಿ ಪಿಎಂ-ಜೆಎವೈ 8 ವರ್ಷ ಮತ್ತು ಎಬಿಡಿಎಂ 5 ವರ್ಷ ಪೂರೈಸಿದ ಸಂದರ್ಭದಲ್ಲಿ ಎಲ್ಲಾ ಸಂಬಂಧಪಟ್ಟವರನ್ನು ಅಭಿನಂದಿಸಿದರು. ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ʻಎಲ್ಲರ ಜೊತೆ, ಎಲ್ಲರ ವಿಕಾಸ, ಎಲ್ಲರ ವಿಶ್ವಾಸ, ಎಲ್ಲರ ಪ್ರಯತ್ನʼ (ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್, ಸಬ್ಕಾ ಪ್ರಯಾಸ್") ದೃಷ್ಟಿಕೋನಕ್ಕೆ ಅನುಗುಣವಾಗಿ, ಈ ಮೈಲಿಗಲ್ಲುಗಳು ಸಾಧಿಸಿದ ಪ್ರಗತಿಯನ್ನು ಪರಿಶೀಲಿಸಲು ಮತ್ತು ಬಡ ಹಾಗೂ ವಂಚಿತ ವರ್ಗಗಳ ಕಲ್ಯಾಣಕ್ಕಾಗಿ ನಮ್ಮ ಬದ್ಧತೆಯನ್ನು ಪುನರುಜ್ಜೀವನಗೊಳಿಸಲು ಅವಕಾಶವನ್ನು ಒದಗಿಸಿವೆ ಎಂದು ಅವರು ಹೇಳಿದರು.

ಎಬಿ ಪಿಎಂ-ಜೆಎವೈ ಯೋಜನೆಯು ಪ್ರಾರಂಭವಾದಾಗಿನಿಂದ ಸಾಧಿಸಿದ ಗಮನಾರ್ಹ ವಿಸ್ತರಣೆಯನ್ನು ಎತ್ತಿಹಿಡಿದ ಶ್ರೀ ನಡ್ಡಾ, ಈ ಯೋಜನೆಯು 60 ಕೋಟಿಗೂ ಹೆಚ್ಚು ಫಲಾನುಭವಿಗಳನ್ನು ಒಳಗೊಂಡಿದೆ, 13 ಕೋಟಿಗೂ ಹೆಚ್ಚು ಆಸ್ಪತ್ರೆ ದಾಖಲಾತಿಗಳನ್ನು ಸುಗಮಗೊಳಿಸಿದೆ ಮತ್ತು 2 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಚಿಕಿತ್ಸೆಯನ್ನು ಒದಗಿಸುವ ಮೂಲಕ ವಿಶ್ವದ ಅತಿ ದೊಡ್ಡ ಆರೋಗ್ಯ ಭರವಸೆ ಯೋಜನೆಯಾಗಿ ಹೊರಹೊಮ್ಮಿದೆ ಎಂದು ಹೇಳಿದರು.

ಎಲ್ಲಾ ಸಾಮಾಜಿಕ-ಆರ್ಥಿಕ ಸ್ಥಿತಿಯ 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಹಿರಿಯ ನಾಗರಿಕರನ್ನು  ಈ ವ್ಯಾಪ್ತಿಗೆ ತರಲು ಸರ್ಕಾರವು ಯೋಜನೆಯನ್ನು ಮತ್ತಷ್ಟು ವಿಸ್ತರಿಸಿದೆ ಎಂದು ಅವರು ತಿಳಿಸಿದರು. ವಿಶೇಷವಾಗಿ ವಲಸೆ ಕಾರ್ಮಿಕರಿಗೆ ಈ ಯೋಜನೆಯಡಿ ಲಭ್ಯವಿರುವ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸೇವೆಯನ್ನು ಪಡೆಯುವ ಸೌಲಭ್ಯದ ಪ್ರಾಮುಖ್ಯತೆಯನ್ನು ಅವರು ಒತ್ತಿಹೇಳಿದರು ಮತ್ತು ಕಾರ್ಯಕ್ರಮವನ್ನು ಮುನ್ನಡೆಸುವಲ್ಲಿ ರಾಜ್ಯ ಸರ್ಕಾರಗಳು, ಆರೋಗ್ಯ ಸಂಸ್ಥೆಗಳು ಹಾಗೂ ಇತರ ಪಾಲುದಾರರ ಕೊಡುಗೆಯನ್ನು ಶ್ಲಾಘಿಸಿದರು.

ಎಬಿ ಪಿಎಂ-ಜೆಎವೈ ಮತ್ತು ಎಬಿಡಿಎಂ ಪಯಣವು ಆರೋಗ್ಯ ರಕ್ಷಣೆಯಲ್ಲಿ ತಂತ್ರಜ್ಞಾನವನ್ನು ಪರಿವರ್ತಿಸುವ  ಪಾತ್ರವನ್ನು ಪ್ರದರ್ಶಿಸಿದೆ. ಡಿಜಿಟಲ್ ವ್ಯವಸ್ಥೆಗಳು ಪ್ರಮಾಣೀಕರಣ, ಅಧಿಕಾರ ನೀಡಿಕೆ ಮತ್ತು ವಿವಿಧ ಸ್ಥಳಗಳಲ್ಲಿ ಚಿಕಿತ್ಸೆಯ ಸುಲಭಲಭ್ಯತೆಗೆ ಬೆಂಬಲ ನೀಡುತ್ತಿವೆ ಎಂದು ಕೇಂದ್ರ ಸಚಿವರು ಹೇಳಿದರು. ಎಬಿಡಿಎಂ ಅಡಿಯಲ್ಲಿ ಸಾಧಿಸಿದ ಪ್ರಗತಿಯನ್ನು ಉಲ್ಲೇಖಿಸಿದ ಅವರು, 97.8 ಕೋಟಿಗೂ ಹೆಚ್ಚು ಎಬಿಎಚ್ ಎ  ಖಾತೆಗಳನ್ನು ಸೃಷ್ಟಿಸಲಾಗಿದೆ, 121 ಕೋಟಿಗೂ ಹೆಚ್ಚು ಆರೋಗ್ಯ ದಾಖಲೆಗಳನ್ನು ಜೋಡಿಸಲಾಗಿದೆ, ಮತ್ತು 5.6 ಲಕ್ಷಕ್ಕೂ ಹೆಚ್ಚು ಆರೋಗ್ಯ ಸೌಲಭ್ಯಗಳು ಹಾಗೂ ಸುಮಾರು 11 ಲಕ್ಷ ಆರೋಗ್ಯ ಸೇವೆ ವೃತ್ತಿಪರರು ಎಬಿಡಿಎಂ ಪರಿಸರ ವ್ಯವಸ್ಥೆಯಲ್ಲಿ ನೋಂದಾಯಿಸಿಕೊಂಡಿದ್ದಾರೆ ಎಂದು ಹೇಳಿದರು. ಆಸ್ಪತ್ರೆಗಳು ಮತ್ತು ವಿಮಾ ಸಂಸ್ಥೆಗಳನ್ನು ಒಂದೇ ಡಿಜಿಟಲ್ ವೇದಿಕೆಗೆ ತರಲು ಉದ್ದೇಶಿಸಿರುವ 'ರಾಷ್ಟ್ರೀಯ ಆರೋಗ್ಯ ಕ್ಲೇಮ್ಗಳ ವಿನಿಮಯ' (ಎನ್ ಎಚ್ ಸಿ ಎಕ್ಸ್)  ವ್ಯವಸ್ಥೆಯ ಅಭಿವೃದ್ಧಿಯ ಬಗ್ಗೆ ಸಹ ಅವರು ಉಲ್ಲೇಖಿಸಿದರು.

ಆರೋಗ್ಯ ಮಂಥನ್ 2026 ರಲ್ಲಿ ಪ್ರಾರಂಭಿಸಲಾದ ಉಪಕ್ರಮಗಳನ್ನು ಪ್ರಸ್ತಾಪಿಸಿದ ಶ್ರೀ ನಡ್ಡಾ, ಇವು ಡಿಜಿಟಲ್ ಆರೋಗ್ಯ ಸೇವೆಯನ್ನು ಮತ್ತಷ್ಟು ಬಲಪಡಿಸುತ್ತವೆ, ಆರೋಗ್ಯ ದತ್ತಾಂಶದ ಸುರಕ್ಷಿತ ಬಳಕೆಯನ್ನು ಸುಗಮಗೊಳಿಸುತ್ತವೆ ಮತ್ತು ಆರೋಗ್ಯ ಸಂಶೋಧನೆ, ನಾವೀನ್ಯತೆ ಹಾಗೂ ದತ್ತಾಂಶ ಆಧಾರಿತ ನಿರ್ಧಾರ ಕೈಗೊಳ್ಳಲು ಹೊಸ ಅವಕಾಶಗಳನ್ನು ಸೃಷ್ಟಿಸುತ್ತವೆ ಎಂದು ಹೇಳಿದರು. ಅವರು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವನ್ನು ಶ್ಲಾಘಿಸಿದರು ಮತ್ತು ರಾಜ್ಯ ಸರ್ಕಾರಗಳು, ಆರೋಗ್ಯ ವೃತ್ತಿಪರರು, ಸಂಯೋಜಿತ ಆಸ್ಪತ್ರೆಗಳು, ಆಯುಷ್ಮಾನ್ ಮಿತ್ರರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ತಂತ್ರಜ್ಞಾನ ಹಾಗೂ ಇತರ ಸಂಬಂಧಪಟ್ಟ ಪಾಲುದಾರರ ಪಾತ್ರವನ್ನೂ ಶ್ಲಾಘಿಸಿದರು.

ಈ ಪಯಣ ಮುಂದುವರಿಯಬೇಕು ಎಂದು ಒತ್ತಿಹೇಳಿದ ಶ್ರೀ ನಡ್ಡಾ, ಆರೋಗ್ಯ ರಕ್ಷಣೆಯನ್ನು ಹೆಚ್ಚು ಸುಲಭವಾಗಿ, ದಕ್ಷ ಮತ್ತು ರೋಗಿ ಕೇಂದ್ರಿತವಾಗಿಸಲು ಡಿಜಿಟಲ್ ತಂತ್ರಜ್ಞಾನವನ್ನು ಬಳಸಿಕೊಳ್ಳಲು ನಿರಂತರ ಪ್ರಯತ್ನಗಳಿಗೆ ಕರೆ ನೀಡಿದರು. ಆರೋಗ್ಯ ಮಂಥನ್ 2026 ರ ಚರ್ಚೆಗಳು ಕಾರ್ಯಸಾಧ್ಯವಾದ ಫಲಿತಾಂಶಗಳನ್ನು ನೀಡುತ್ತವೆ ಮತ್ತು ಭಾರತದ ಆರೋಗ್ಯ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಹಾಗೂ ಮಾನವಕುಲದ ಸೇವೆಗೆ ಮತ್ತಷ್ಟು ಕೊಡುಗೆ ನೀಡುತ್ತವೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದರು.

ನಿಟಿ ಆಯೋಗದ ಸದಸ್ಯ (ಆರೋಗ್ಯ) ಡಾ. ಎಂ. ಶ್ರೀನಿವಾಸ್ ಅವರು ಈ ಸಂದರ್ಭದಲ್ಲಿ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರವನ್ನು (ಎನ್ ಎಚ್ ಎ) ಅಭಿನಂದಿಸಿದರು. ಎಬಿ ಪಿಎಂ-ಜೆಎವೈ ತಂದ ಪರಿವರ್ತನೆಯನ್ನು ಎತ್ತಿಹಿಡಿದ ಅವರು, ಈ ಯೋಜನೆಯು ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಜನರಿಗೆ ಹೆಚ್ಚಿನ ಆತ್ಮವಿಶ್ವಾಸದಿಂದ ಆರೋಗ್ಯ ರಕ್ಷಣೆಯನ್ನು ಪಡೆಯಲು ಮತ್ತು ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ಅನುಕೂಲ ಮಾಡಿಕೊಟ್ಟಿದೆ ಎಂದು ಹೇಳಿದರು. ಮುಂದಿನ ಹಂತವು ಆರೈಕೆಯ ನಿರಂತರತೆ, ಗುಣಮಟ್ಟ ಮತ್ತು ರೋಗಿ-ಕೇಂದ್ರಿತ ಆರೋಗ್ಯ ಸೇವೆಯನ್ನು ಬಲಪಡಿಸುವುದರ ಮೇಲೆ ಗಮನ ಹರಿಸಬೇಕು, ಇದರಲ್ಲಿ ವಿಶೇಷ ಚಿಕಿತ್ಸೆಯ ಅಗತ್ಯವಿರುವ ರೋಗಿಗಳಿಗೆ ತಡೆರಹಿತ ಉಲ್ಲೇಖ ವ್ಯವಸ್ಥೆಗಳು ಸೇರಿವೆ ಎಂದು ಅವರು ಒತ್ತಿಹೇಳಿದರು.

ಡಾ. ಶ್ರೀನಿವಾಸ್ ಅವರು ಎಬಿಎಚ್ ಎ  ನ ವ್ಯಾಪಕ ಅಳವಡಿಕೆ ಮತ್ತು ಸಂಪೂರ್ಣವಾಗಿ ಎಲ್ಲರನ್ನೂ ಒಳಗೊಳ್ಳಿಸುವುದು ಹಾಗೂ ನಾಗರಿಕರ ಸಮ್ಮತಿ ಮತ್ತು ಸೂಕ್ತ ರಕ್ಷಣೆಗಳೊಂದಿಗೆ ಡಿಜಿಟಲ್ ಆರೋಗ್ಯ ದಾಖಲೆಗಳ ಪರಸ್ಪರ ಕಾರ್ಯಸಾಧ್ಯತೆಯನ್ನು ಬಲಪಡಿಸುವ ಪ್ರಾಮುಖ್ಯತೆಯನ್ನು ಎತ್ತಿಹೇಳಿದರು. ಉತ್ತಮ ಗುಣಮಟ್ಟದ, ಪ್ರಮಾಣೀಕೃತ ಮತ್ತು ಪರಸ್ಪರ ಕಾರ್ಯಸಾಧ್ಯವಾದ ಆರೋಗ್ಯ ದತ್ತಾಂಶವು ಆರೋಗ್ಯ ಸಂಶೋಧನೆಯನ್ನು ಮುನ್ನಡೆಸಲು ಮತ್ತು ಆರೋಗ್ಯ ರಕ್ಷಣೆಯಲ್ಲಿ ಕೃತಕ ಬುದ್ಧಿಮತ್ತೆಯನ್ನು  ಜವಾಬ್ದಾರಿಯುತವಾಗಿ ಬಳಸಿಕೊಳ್ಳಲು ನಿರ್ಣಾಯಕವಾಗಿದೆ ಎಂದು ಅವರು ಹೇಳಿದರು. ರಾಷ್ಟ್ರೀಯ ಆರೋಗ್ಯ ಕ್ಲೇಮ್ಗಳ ವಿನಿಮಯವನ್ನು ಬಲಪಡಿಸಲು, ಕ್ಲೇಮ್ ಗಳು ಮತ್ತು ಪೂರ್ವ-ಅನುಮೋದನೆ ಪ್ರಕ್ರಿಯೆಗಳನ್ನು ಸರಳಗೊಳಿಸಲು  ಮತ್ತು ಆರೋಗ್ಯ ಸೇವೆ ಭರವಸೆ ಹಾಗೂ ಡಿಜಿಟಲ್ ಆರೋಗ್ಯ ಉಪಕ್ರಮಗಳ ಬಗ್ಗೆ ಜಾಗೃತಿಯನ್ನು ವಿಸ್ತರಿಸುವ ಅಗತ್ಯವಿದೆ ಎಂದು  ಅವರು ಕರೆ ನೀಡಿದರು.

ಐಆರ್ಡಿಎಐ  ಅಧ್ಯಕ್ಷರಾದ ಶ್ರೀ ಅಜಯ್ ಸೇಥ್ ಅವರು ಆಯುಷ್ಮಾನ್ ಭಾರತ್ ಪಿಎಂ-ಜೆಎವೈ ಯಶಸ್ಸನ್ನು ಎತ್ತಿಹಿಡಿದರು ಮತ್ತು ಈ ಯೋಜನೆಯ ಮೂಲಕ ಪಡೆದ ಅನುಭವವು ದೇಶದಲ್ಲಿ ಆರೋಗ್ಯ ವಿಮೆ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಅವಕಾಶವನ್ನು ನೀಡುತ್ತದೆ ಎಂದು ಹೇಳಿದರು. ನಾಗರಿಕರು, ಆಸ್ಪತ್ರೆಗಳು, ವಿಮಾ ಸಂಸ್ಥೆಗಳು ಮತ್ತು ತಂತ್ರಜ್ಞಾನ ಪೂರೈಕೆದಾರರು ಸೇರಿದಂತೆ ಎಲ್ಲಾ ಪಾಲುದಾರರಿಗೆ ಮೌಲ್ಯವನ್ನು ಸೃಷ್ಟಿಸುವ ಜೊತೆಗೆ ಆರೋಗ್ಯ ರಕ್ಷಣೆಯಲ್ಲಿ ಗುಣಮಟ್ಟ, ಕೈಗೆಟುಕುವಿಕೆ ಮತ್ತು ಸೇವಾ ಲಭ್ಯತೆಯನ್ನು  ಖಚಿತಪಡಿಸಿಕೊಳ್ಳುವ ಅಗತ್ಯವನ್ನು ಅವರು ಒತ್ತಿಹೇಳಿದರು.

ಆರೋಗ್ಯ ವಿಮೆಯಲ್ಲಿ ಪ್ರಮಾಣೀಕರಣ ಮತ್ತು ಪಾರದರ್ಶಕತೆಯ ಪ್ರಾಮುಖ್ಯತೆಯನ್ನು ಎತ್ತಿಹಿಡಿದ ಶ್ರೀ ಸೇಥ್, ಆರೋಗ್ಯ ವಿಮೆಯ ಗುರುತಾಗಿ 'ಅಬಾ' (ಎ ಬಿ ಎಚ್ ಎ), ಚಿಕಿತ್ಸೆಗಳ ಸಂಕೇತವನ್ನು ಮಾಡುವುದು, ಪ್ರಮಾಣಿತ ಬಿಲ್ಲಿಂಗ್ ಸ್ವರೂಪಗಳು ಮತ್ತು ಪ್ರಮಾಣಿತ ಚಿಕಿತ್ಸಾ ವಿಧಾನಗಳು ಹಾಗೂ ಮಾರ್ಗಸೂಚಿಗಳನ್ನು ಒಳಗೊಂಡಂತೆ ಪ್ರಮುಖ ಡಿಜಿಟಲ್ ಮತ್ತು ಕಾರ್ಯಾಚರಣೆಯ ಘಟಕಗಳ ವ್ಯಾಪಕ ಅಳವಡಿಕೆಯ ಅಗತ್ಯವನ್ನು ಪ್ರತಿಪಾದಿಸಿದರು. ಹೆಚ್ಚಿನ ಪರಸ್ಪರ ಕಾರ್ಯಸಾಧ್ಯತೆಯನ್ನು ಸಕ್ರಿಯಗೊಳಿಸುವಲ್ಲಿ ಮತ್ತು ಹೆಚ್ಚು ಸಂಪರ್ಕಿತ ಆರೋಗ್ಯ ವಿಮಾ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುವಲ್ಲಿ ಭಾರತದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಮತ್ತು ರಾಷ್ಟ್ರೀಯ ಆರೋಗ್ಯ ಕ್ಲೇಮ್ ಗಳ ವಿನಿಮಯದ (ಎನ್ ಎಚ್ ಸಿ ಎಕ್ಸ್ ) ಪಾತ್ರವನ್ನು ಅವರು ಪ್ರಸ್ತಾಪಿಸಿದರು. "ಸಾಧ್ಯವಾದಷ್ಟು ಹೆಚ್ಚಿನ ಜನರಿಗೆ ಪರಿಣಾಮಕಾರಿ, ಕೈಗೆಟುಕುವ ಮತ್ತು ಉತ್ತಮ ಗುಣಮಟ್ಟದ ಆರೋಗ್ಯ ರಕ್ಷಣೆಯನ್ನು ಒದಗಿಸಲು ನಮಗೆ ಸಾಧ್ಯವಿದೆ” ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಐಸಿಎಂಆರ್ ಡಿಜಿ ಮತ್ತು ಡಿಎಚ್ಆರ್ ಕಾರ್ಯದರ್ಶಿ ಡಾ. ರಾಜೀವ್ ಬಹಲ್ ಅವರು, ಆಯುಷ್ಮಾನ್ ಭಾರತ್ ಪಿಎಂ-ಜೆಎವೈ ನ ಎಂಟು ವರ್ಷಗಳ ಮೈಲಿಗಲ್ಲು ಮತ್ತು ಎಬಿಡಿಎಂನ ಐದು ವರ್ಷಗಳ ಪ್ರಾಮುಖ್ಯತೆಯನ್ನು ಎತ್ತಿಹಿಡಿದರು. ಆಯುಷ್ಮಾನ್ ಭಾರತ್ ಪಿಎಂ-ಜೆಎವೈ 60 ಕೋಟಿಗೂ ಹೆಚ್ಚು ನಾಗರಿಕರಿಗೆ ರಕ್ಷಣೆ ಮತ್ತು ಪ್ರಯೋಜನ ನೀಡುವ ಮೂಲಕ ವಿಶ್ವದ ಅತಿ ದೊಡ್ಡ ಆರೋಗ್ಯ ಭರವಸೆ ಯೋಜನೆಯಾಗಿ ಹೊರಹೊಮ್ಮಿದೆ ಎಂದು ತಿಳಿಸಿದರು. ನಾಗರಿಕರಿಗೆ ಹೆಚ್ಚಿನ ಪ್ರಯೋಜನಗಳನ್ನು ಖಚಿತಪಡಿಸಿಕೊಳ್ಳಲು ಆರೋಗ್ಯ ರಕ್ಷಣೆಯ ಗುಣಮಟ್ಟವನ್ನು ಮತ್ತಷ್ಟು ಸುಧಾರಿಸುವುದು ಮತ್ತು ವ್ಯಾಪ್ತಿಯನ್ನು ವಿಸ್ತರಿಸುವುದರ ಮೇಲೆ ಮುಂದಿನ ದಿನಗಳಲ್ಲಿ ಗಮನಹರಿಸಲಾಗುವುದು ಎಂದು ಅವರು ಹೇಳಿದರು.

ಡಿಹೆಚ್ಆರ್, ಐಸಿಎಂಆರ್ ಮತ್ತು ಎನ್ಎಚ್ಎ ನಡುವಿನ ಸಹಯೋಗವನ್ನು ಎತ್ತಿಹಿಡಿದ ಡಾ. ಬಹಲ್ ಅವರು ಎರಡು ಪ್ರಮುಖ ಕೆಲಸದ ಕ್ಷೇತ್ರಗಳನ್ನು ವಿವರಿಸಿದರು. ಚಿಕಿತ್ಸೆಯ ಪ್ರಮಾಣೀಕರಣದ ಕುರಿತು ಮಾತನಾಡುತ್ತಾ, ಪ್ರಮಾಣೀಕೃತ ಕ್ರಮಾವಳಿಗಳ ಆಧಾರದ ಮೇಲೆ ಚಿಕಿತ್ಸೆಯು ಹೆಚ್ಚಿನ ಸ್ಥಿರತೆ ಮತ್ತು ಆರೈಕೆಯ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ, ಐಸಿಎಂಆರ್ 150 ಕ್ಕೂ ಹೆಚ್ಚು ಪ್ರಮಾಣಿತ ಚಿಕಿತ್ಸಾ ವಿಧಾನಗಳು ಮತ್ತು ಮಾರ್ಗಸೂಚಿಗಳನ್ನು ಅಭಿವೃದ್ಧಿಪಡಿಸಿದೆ ಎಂದು ಹೇಳಿದರು. ಆರೋಗ್ಯ ರಕ್ಷಣೆಯಲ್ಲಿ ವೆಚ್ಚ-ಪರಿಣಾಮಕಾರಿತ್ವದ ಪ್ರಾಮುಖ್ಯತೆಯನ್ನು ಅವರು ಎತ್ತಿಹೇಳಿದರು, ಡಿ ಎಚ್ ಆರ್ ಅಡಿಯಲ್ಲಿ ಭಾರತದಲ್ಲಿ ಆರೋಗ್ಯ ತಂತ್ರಜ್ಞಾನ ಮೌಲ್ಯಮಾಪನ (ಎಚ್ ಟಿ ಎಐಎನ್) ಆರೋಗ್ಯ ರಕ್ಷಣಾ ತಂತ್ರಜ್ಞಾನಗಳು ಮತ್ತು ಮಧ್ಯಸ್ಥಿಕೆಗಳ ವೆಚ್ಚ-ಪರಿಣಾಮಕಾರಿತ್ವವನ್ನು ಮೌಲ್ಯಮಾಪನ ಮಾಡುತ್ತದೆ ಎಂದು ಹೇಳಿದರು.

ಎನ್ಎಚ್ಎ ಪ್ರಾಧಿಕಾರದ ಸಿಇಒ ಶ್ರೀ ಸುನಿಲ್ ಕುಮಾರ್ ಬರ್ನ್ವಾಲ್ ಅವರು ಎರಡು ಪ್ರಮುಖ ಮೈಲಿಗಲ್ಲುಗಳನ್ನು ಸಾಧಿಸಿದ ಎಲ್ಲಾ ಪಾಲುದಾರರನ್ನು ಅಭಿನಂದಿಸಿದರು — ಆಯುಷ್ಮಾನ್ ಭಾರತ್ ಪಿಎಂ-ಜೆಎವೈ ಎಂಟು ವರ್ಷಗಳು ಮತ್ತು ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ (ಎಬಿಡಿಎಂ) ಐದು ವರ್ಷಗಳು. ದೇಶಾದ್ಯಂತ 49 ಕೋಟಿಗೂ ಹೆಚ್ಚು ಆಯುಷ್ಮಾನ್ ಕಾರ್ಡ್ಗಳು ಮತ್ತು ಸುಮಾರು 98 ಕೋಟಿ ʻಅಬಾʼ ಖಾತೆಗಳನ್ನು ರಚಿಸಲಾಗಿದ್ದು, ಎರಡೂ ಕಾರ್ಯಕ್ರಮಗಳ ಪ್ರಮಾಣ ಮತ್ತು ತಲುಪುವಿಕೆಯನ್ನು ಅವರು ಎತ್ತಿಹೇಳಿದರು.

ಮುಂದಿನ ದಿನಗಳ ಬಗ್ಗೆ ಮಾತನಾಡುತ್ತಾ, ಆಯುಷ್ಮಾನ್ ಭಾರತ್ ಪಿಎಂ-ಜೆಎವೈ 13 ಕೋಟಿಗೂ ಹೆಚ್ಚು ರೋಗಿಗಳ ದಾಖಲೆಗಳನ್ನು ರಚಿಸಿದೆ, ಸಂಶೋಧನೆ, ಅಭಿವೃದ್ಧಿ ಮತ್ತು ಆರೋಗ್ಯ ವಿಶ್ಲೇಷಣೆಗಾಗಿ ಮೌಲ್ಯಯುತವಾದ ಭಂಡಾರವನ್ನು ಸೃಷ್ಟಿಸಿದೆ ಎಂದು ಹೇಳಿದರು. ಸುರಕ್ಷಿತ ದತ್ತಾಂಶ ಪರಿಸರವು (ಎಸ್ ಡಿ ಇ) ರೋಗಿಗಳ ಗುರುತನ್ನು ರಕ್ಷಿಸುವ ಜೊತೆಗೆ ದತ್ತಾಂಶದ ಜವಾಬ್ದಾರಿಯುತ ಬಳಕೆಯನ್ನು ಸಕ್ರಿಯಗೊಳಿಸುತ್ತದೆ. ತಂತ್ರಜ್ಞಾನ ಮತ್ತು ದತ್ತಾಂಶ ಚಾಲಿತ ಪ್ರಕ್ರಿಯೆಗಳ ಮೂಲಕ ಎಬಿ ಪಿಎಂ-ಜೆಎವೈ ಅಡಿಯಲ್ಲಿ ಕ್ಲೇಮ್ ಗಳನ್ನು ನಿರ್ಣಯಿಸುವ ಪ್ರಕ್ರಿಯೆಯನ್ನು ಸುಗಮಗೊಳಿಸುವ ಮತ್ತು ಬಲಪಡಿಸುವ ಉದ್ದೇಶದಿಂದ ಸ್ವಯಂ-ತೀರ್ಪು ಚೌಕಟ್ಟಿಗೆ ('ಆಟೋ-ಅಡ್ಜುಡಿಕೇಶನ್ ಫ್ರೇಮ್ವರ್ಕ್') ಚಾಲನೆ ನೀಡಿದ್ದನ್ನು ಅವರು ಉಲ್ಲೇಖಿಸಿದರು.

ಆರೋಗ್ಯ ಮಂಥನ್ 2026 ರ ಪ್ರಮುಖ ಆಕರ್ಷಣೆಯೆಂದರೆ ಭಾರತದ ಆರೋಗ್ಯ ಭರವಸೆ ಪರಿಸರ ವ್ಯವಸ್ಥೆಯ ಡಿಜಿಟಲ್ ಅಡಿಪಾಯವನ್ನು ಬಲಪಡಿಸುವ ಉದ್ದೇಶದಿಂದ ಸರಣಿ ಉಪಕ್ರಮಗಳ ಚಾಲನೆ. ಇವುಗಳಲ್ಲಿ ರಾಷ್ಟ್ರೀಯ ಆರೋಗ್ಯ ಸೇವೆ ಪೂರೈಕೆದಾರರ ನೋಂದಣಿ (ಎನ್ ಎಚ್ ಪಿ ಆರ್) ಮೊಬೈಲ್ ಆ್ಯಪ್,  ಪಾವತಿದಾರರಿಗಾಗಿ ಎನ್ ಎಚ್ ಸಿ ಎಕ್ಸ್ ಅನುಷ್ಠಾನ ಮಾರ್ಗದರ್ಶಿ, ಮಾದರಿ ಡಿಜಿಟಲ್ ಆರೋಗ್ಯ ಸೌಲಭ್ಯಕ್ಕಾಗಿ ಮಾರ್ಗದರ್ಶಿ ಪುಸ್ತಕ, ಸುರಕ್ಷಿತ ದತ್ತಾಂಶ ಪರಿಸರ (ಎಸ್ ಡಿ ಇ) ಅಪ್ಲಿಕೇಶನ್ ಮತ್ತು ಎಬಿ ಪಿಎಂ-ಜೆಎವೈ ಅಡಿಯಲ್ಲಿ ಕ್ಲೇಮ್ ಗಳ ಸ್ವಯಂ-ನಿರ್ಣಯದ ಪರಿಶೀಲನೆಯ  ಚೌಕಟ್ಟು ಸೇರಿವೆ

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ ಸಿ), ಬೆಂಬಲದೊಂದಿಗೆ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್ ಎಚ್ ಎ) ಅಭಿವೃದ್ಧಿಪಡಿಸಿದ ಸುರಕ್ಷಿತ ದತ್ತಾಂಶ  ಪರಿಸರವನ್ನು (ಎಸ್ ಡಿ ಇ) ಎಬಿ ಪಿಎಂ-ಜೆಎವೈ ಮತ್ತು ಎಬಿಡಿಎಂ ಆರೋಗ್ಯ ದತ್ತಾಂಶದ ಪ್ರವೇಶ ಮತ್ತು ವಿಶ್ಲೇಷಣೆಗಾಗಿ ನಿಯಂತ್ರಿತ ವಾತಾವರಣವಾಗಿ ಪರಿಕಲ್ಪಿಸಲಾಗಿದೆ. ಅನುಮೋದಿತ ಸಂಸ್ಥೆಗಳು ವೈಯಕ್ತಿಕ ಗುರುತನ್ನು ಬಹಿರಂಗಪಡಿಸದ ದತ್ತಾಂಶದೊಂದಿಗೆ ಕಾರ್ಯನಿರ್ವಹಿಸಲು ಅಥವಾ ಪ್ರತ್ಯೇಕವಾದ ಎನ್ ಎಚ್ ಎ ವಾತಾವರಣದಲ್ಲಿ ಕೋಡ್ ಅನ್ನು ಕಾರ್ಯಗತಗೊಳಿಸಲು ಸಾಧ್ಯವಾಗುತ್ತದೆ, ಮತ್ತು ಫಲಿತಾಂಶಗಳನ್ನು ಬಿಡುಗಡೆ ಮಾಡುವ ಮೊದಲು ಪರಿಶೀಲಿಸಲಾಗುತ್ತದೆ. ಈ ಉಪಕ್ರಮವು ವೈಯಕ್ತಿಕ ದತ್ತಾಂಶದ ರಕ್ಷಣೆಗೆ ಸುರಕ್ಷತಾ ಕ್ರಮಗಳನ್ನು ಸಂಯೋಜಿಸುವ ಜೊತೆಗೆ ಆರೋಗ್ಯ ಸಂಶೋಧನೆ, ಕಾರ್ಯಕ್ರಮ ಯೋಜನೆ, ಫಲಿತಾಂಶ ವಿಶ್ಲೇಷಣೆ ಮತ್ತು ಜವಾಬ್ದಾರಿಯುತ ಎಐ ನಾವೀನ್ಯತೆಯನ್ನು ಸುಗಮಗೊಳಿಸುವ ಉದ್ದೇಶವನ್ನು ಹೊಂದಿದೆ.

ಆರೋಗ್ಯ ಮಂಥನ್ 2026ರ ಚರ್ಚೆಗಳು ಆರೋಗ್ಯ ಸೇವೆಗಳ ದಕ್ಷತೆ, ಗುಣಮಟ್ಟ ಮತ್ತು ಪರಸ್ಪರ ಕಾರ್ಯಸಾಧ್ಯತೆಯನ್ನು ಬಲಪಡಿಸುವುದರ ಮೇಲೆ ಕೇಂದ್ರೀಕೃತವಾಗಿದ್ದವು. "ಆರೋಗ್ಯ ವಿಮೆಯನ್ನು ಸುಗಮಗೊಳಿಸಲು ಎನ್ ಎಚ್ ಸಿ ಎಕ್ಸ್ " ಕುರಿತಾದ ಗೋಷ್ಠಿಯು ಸುಗಮ, ಪ್ರಮಾಣೀಕೃತ ಮತ್ತು ತಂತ್ರಜ್ಞಾನ ಚಾಲಿತ ಆರೋಗ್ಯ ವಿಮಾ ಪ್ರಕ್ರಿಯೆಗಳನ್ನು ಸಕ್ರಿಯಗೊಳಿಸುವಲ್ಲಿ ರಾಷ್ಟ್ರೀಯ ಆರೋಗ್ಯ ಕ್ಲೇಮ್ ಗಳ ವಿನಿಮಯದ (ಎನ್ ಎಚ್ ಸಿ ಎಕ್ಸ್ ) ಪಾತ್ರವನ್ನು ಪರಿಶೀಲಿಸಿತು, ಪರಸ್ಪರ ಕಾರ್ಯಸಾಧ್ಯವಾದ ಡಿಜಿಟಲ್ ಕ್ಲೇಮ್ ಗಳ ಮೂಲಸೌಕರ್ಯವು ದಕ್ಷತೆಯನ್ನು ಹೇಗೆ ಸುಧಾರಿಸುತ್ತದೆ, ಆರೋಗ್ಯ ವಿಮೆ ಪರಿಸರ ವ್ಯವಸ್ಥೆಯಲ್ಲಿ ಸಮನ್ವಯವನ್ನು ಬಲಪಡಿಸುತ್ತದೆ ಮತ್ತು ಆರೋಗ್ಯ ಹಣಕಾಸಿನ ವ್ಯವಸ್ಥೆಗೆ ಹೊಸ ಮಾರ್ಗಗಳನ್ನು ತೆರೆಯುತ್ತದೆ ಎಂಬುದನ್ನು ಪರಿಶೀಲಿಸಲಾಯಿತು.

ಇದರ ನಂತರ ಎಬಿ ಪಿಎಂ-ಜೆಎವೈ ಮತ್ತು ಎಬಿಡಿಎಂ ವಿಭಾಗಗಳ ಅಡಿಯಲ್ಲಿ   ಸಮಾನಾಂತರ  ಗೋಷ್ಠಿಗಳು ನಡೆದವು, ಇವು ಕಾರ್ಯಕ್ರಮ ಅನುಷ್ಠಾನ, ಆರೋಗ್ಯ ಸೇವೆಗಳನ್ನು ತಲುಪಿಸುವಿಕೆ ಮತ್ತು ಡಿಜಿಟಲ್ ರೂಪಾಂತರದ ಪ್ರಮುಖ ಅಂಶಗಳನ್ನು ಪರಿಶೀಲಿಸಿದವು.

ಎಬಿ ಪಿಎಂ-ಜೆಎವೈ ವಿಭಾಗದ ಅಡಿಯಲ್ಲಿ, “ಕ್ಲೇಮ್ ಪ್ರಕ್ರಿಯೆಯಿಂದ  ಬುದ್ದಿಮತ್ತೆಯ ಭರವಸೆವರೆಗೆ: ಎಬಿ ಪಿಎಂ-ಜೆಎವೈ ಪರಿವರ್ತನೆ”   ಗೋಷ್ಠಿಯು ಕ್ಲೇಮ್ಗಳ ಪ್ರಕ್ರಿಯೆ ಮತ್ತು ಕಾರ್ಯಕ್ರಮದ ಸಮಗ್ರತೆಯನ್ನು ಬಲಪಡಿಸಲು ತಂತ್ರಜ್ಞಾನ, ದತ್ತಾಂಶ ಮತ್ತು ವಿಶ್ಲೇಷಣೆಯ ಬಳಕೆಯನ್ನು ಪರಿಶೀಲಿಸಿತು. “ಗುಣಮಟ್ಟ ಮತ್ತು ವೆಚ್ಚ-ಪರಿಣಾಮಕಾರಿತ್ವದ ದೃಷ್ಟಿಕೋನದಿಂದ ತಂತ್ರಾತ್ಮಕ ಖರೀದಿ”  ಗೋಷ್ಠಿಯು ಸಂಪನ್ಮೂಲಗಳ ಪರಿಣಾಮಕಾರಿ ಬಳಕೆಯನ್ನು ಉತ್ತೇಜಿಸುವ ಜೊತೆಗೆ ಆರೈಕೆಯ ಗುಣಮಟ್ಟವನ್ನು ಸುಧಾರಿಸುವ ವಿಧಾನಗಳ ಬಗ್ಗೆ ಚರ್ಚಿಸಿತು.

ಎಬಿಡಿಎಂ ವಿಭಾಗವು “ಆರೋಗ್ಯ ಸೇವೆಗಳ ಲಭ್ಯತೆಯನ್ನು ಸುಧಾರಿಸಲು ಯುಎಚ್ ಐ”  ಕುರಿತ ಚರ್ಚೆಗಳನ್ನು ಒಳಗೊಂಡಿತ್ತು, ಆರೋಗ್ಯ ರಕ್ಷಣೆಯ ಪರಿಸರ ವ್ಯವಸ್ಥೆಯಾದ್ಯಂತ ಲಭ್ಯತೆ  ಮತ್ತು ಭಾಗವಹಿಸುವಿಕೆಯನ್ನು ವಿಸ್ತರಿಸುವಲ್ಲಿ ಡಿಜಿಟಲ್ ವೇದಿಕೆಗಳ ಪಾತ್ರದ ಮೇಲೆ ಕೇಂದ್ರೀಕರಿಸಿತು, ಮತ್ತು “ಉತ್ತಮ ಆರೋಗ್ಯ ತಲುಪಿಸುವಿಕೆಗೆ ಮಾನದಂಡಗಳ ಬಳಕೆ” ಎನ್ನುವ ವಿಷಯದ ಚರ್ಚೆಯು  ತಡೆರಹಿತ ಮಾಹಿತಿ ವಿನಿಮಯ ಮತ್ತು ಆರೋಗ್ಯ ಸೇವೆಗಳ ಸುಧಾರಿತ ನಿರಂತರತೆ ಹಾಗೂ ಆರೋಗ್ಯ ಸೇವೆ ತಲುಪಿಸುವಿಕೆಯ ಗುಣಮಟ್ಟಕ್ಕಾಗಿ ಸಾಮಾನ್ಯ ಆರೋಗ್ಯ- ದತ್ತಾಂಶ ಮಾನದಂಡಗಳ ಪ್ರಾಮುಖ್ಯತೆಯನ್ನು ಪರಿಶೀಲಿಸಿತು.

ವಿವಿಧ ವಿಭಾಗಗಳಲ್ಲಿ ಎಬಿ ಪಿಎಂ-ಜೆಎವೈ ಮತ್ತು ಎಬಿಡಿಎಂ ಅಡಿಯಲ್ಲಿ ಉತ್ತಮ ಸಾಧನೆ ಮಾಡಿದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಈ ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಎಬಿ ಪಿಎಂ-ಜೆಎವೈ ಅಡಿಯಲ್ಲಿ, ಆಂಧ್ರಪ್ರದೇಶ, ಸಿಕ್ಕಿಂ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯಗಳು ಕ್ರಮವಾಗಿ ದೊಡ್ಡ ರಾಜ್ಯ, ಸಣ್ಣ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ವಿಭಾಗಗಳಲ್ಲಿ ಆಶಾ, ಅಂಗನವಾಡಿ ಕಾರ್ಯಕರ್ತೆ (ಎಡಬ್ಲ್ಯೂ ಡಬ್ಲ್ಯೂ) ಮತ್ತು ಅಂಗನವಾಡಿ ಸಹಾಯಕಿಯರ (ಎ ಡಬ್ಲ್ಯೂ ಎಚ್ ) ಫಲಾನುಭವಿಗಳಲ್ಲಿ ಅತಿ ಹೆಚ್ಚಿನ ಪೂರ್ಣ ವ್ಯಾಪ್ತಿಯ ಕಾರ್ಡ್ ವಿತರಣೆಗಾಗಿ  ಗುರುತಿಸಲ್ಪಟ್ಟವು. ಛತ್ತೀಸ್ ಗಢ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳನ್ನು ಅಂತರ-ರಾಜ್ಯ ಪ್ರದೇಶಗಳಲ್ಲಿ ಇತರರ (ಪೋರ್ಟಬಿಲಿಟಿ) ಕ್ಲೇಮ್ ಇತ್ಯರ್ಥದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ರಾಜ್ಯಗಳಾಗಿ ಗುರುತಿಸಿ ಗೌರವಿಸಲ್ಪಟ್ಟವು.

ಎಬಿಡಿಎಂ ಅಡಿಯಲ್ಲಿ, ಬಿಹಾರ, ಲಡಾಖ್ ಮತ್ತು ದಾದ್ರಾ ಮತ್ತು ನಗರ ಹವೇಲಿ ಜಿಲ್ಲಾ ಜನಸಂಖ್ಯೆಯ ವಿಭಾಗಗಳ ಆಧಾರದ ಮೇಲೆ ಮಾದರಿ ಜಿಲ್ಲೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾಗಿ ಗುರುತಿಸಲ್ಪಟ್ಟವು. ಚಂಡೀಗಢ, ಅಸ್ಸಾಂ ಮತ್ತು ಉತ್ತರ ಪ್ರದೇಶ ರಾಜ್ಯಗಳು ಕ್ರಮವಾಗಿ ಸಣ್ಣ ರಾಜ್ಯ ಮತ್ತು ಕೇಂದ್ರಾಡಳಿ ಪ್ರದೇಶ, ಮಧ್ಯಮ ರಾಜ್ಯ ಮತ್ತು ಕೇಂದ್ರಾಡಳಿ ಪ್ರದೇಶ ಮತ್ತು ದೊಡ್ಡ ರಾಜ್ಯ ವಿಭಾಗಗಳಲ್ಲಿ ಎಬಿಡಿಎಂ ಸಕ್ರಿಯಗೊಳಿಸಿದ ಆರೋಗ್ಯ ನಿರ್ವಹಣಾ ಮಾಹಿತಿ ವ್ಯವಸ್ಥೆಗಳನ್ನು (ಎಚ್ ಎಂ ಐ ಎಸ್) ಬಳಸುವ ಅತ್ಯಂತ ಹೆಚ್ಚಿನ ಸಂಖ್ಯೆಯ ಉಪ-ಕೇಂದ್ರಗಳನ್ನಾಗಿ  ಗುರುತಿಸಿ ಗೌರವಿಸಲ್ಪಟ್ಟವು.

 

*****


(ಪ್ರಕಟಣೆ ಐ.ಡಿ.: 2315123) ವಿಸಿಟರ್ ಕೌಂಟರ್ : 16
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Telugu