ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

ಕೇಂದ್ರ ಆರೋಗ್ಯ ಸಚಿವರಾದ ಶ್ರೀ ಜೆ.ಪಿ. ನಡ್ಡಾ ಅವರಿಂದ ನಾಳೆ ವಿಜ್ಞಾನ ಭವನದಲ್ಲಿ 'ಆರೋಗ್ಯ ಮಂಥನ 2026' ಉದ್ಘಾಟನೆ


ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ಎಂಟು ವರ್ಷಗಳು ಮತ್ತು ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಯೋಜನೆಯ ಐದು ವರ್ಷಗಳ ಸಾಧನೆಗಾಗಿ 'ಆರೋಗ್ಯ ಮಂಥನ 2026' ಆಯೋಜನೆ

ಸುರಕ್ಷಿತ ದತ್ತಾಂಶ ಪರಿಸರ (ಎಸ್ ಡಿ ಇ) ಸೇರಿದಂತೆ ಜವಾಬ್ದಾರಿಯುತ ಆರೋಗ್ಯ ದತ್ತಾಂಶ ಬಳಕೆಗೆ ಹೊಸ ಡಿಜಿಟಲ್ ಆರೋಗ್ಯ ಮತ್ತು ಆರೋಗ್ಯ ಭರವಸೆ ಕಾರ್ಯಕ್ರಮಗಳಿಗೆ 'ಆರೋಗ್ಯ ಮಂಥನ 2026'ದಲ್ಲಿ ಚಾಲನೆ

ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ 60 ಕೋಟಿಗೂ ಹೆಚ್ಚು ಫಲಾನುಭವಿಗಳನ್ನು ಒಳಗೊಂಡಿದ್ದು, ₹2 ಲಕ್ಷ ಕೋಟಿಗೂ ಹೆಚ್ಚು ಮೌಲ್ಯದ 13 ಕೋಟಿಗೂ ಹೆಚ್ಚು ಆಸ್ಪತ್ರೆ ದಾಖಲಾತಿಗಳಿಗೆ ನೆರವಾಗಿದೆ; 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ನಾಗರಿಕರನ್ನು ಯೋಜನೆಯಲ್ಲಿ ಒಳಗೊಳ್ಳಿಸುವ ಮೂಲಕ ಹೆಚ್ಚುವರಿಯಾಗಿ ಸುಮಾರು 6 ಕೋಟಿ ಹಿರಿಯ ನಾಗರಿಕರಿಗೆ ಆರೋಗ್ಯ ಭರವಸೆಯನ್ನು ಒದಗಿಸಿದೆ

97.8 ಕೋಟಿ ಎ ಬಿ ಹೆಚ್ ಎಗಳು, 121 ಕೋಟಿ ಸಂಪರ್ಕಿತ ಆರೋಗ್ಯ ದಾಖಲೆಗಳು ಹಾಗೂ 11 ಲಕ್ಷ ಆರೋಗ್ಯ ವೃತ್ತಿಪರರೊಂದಿಗೆ  ಎಬಿಡಿಎಂ  ತ್ವರಿತ ವಿಸ್ತರಣೆಯ ಸಾಧನೆ

ಪ್ರಕಟಣಾ ದಿನಾಂಕ: 24 SEP 2026 4:29PM by PIB Bengaluru

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವರಾದ ಶ್ರೀ ಜಗತ್ ಪ್ರಕಾಶ್ ನಡ್ಡಾ ಅವರು, ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್ ಎಚ್ ಎ) ನಾಳೆ ನವದೆಹಲಿಯ ವಿಜ್ಞಾನ ಭವನದಲ್ಲಿ ಆಯೋಜಿಸಿರುವ 'ಆರೋಗ್ಯ ಮಂಥನ 2026' ಕಾರ್ಯಕ್ರಮದಲ್ಲಿ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಎಬಿ ಪಿಎಂ-ಜೆಎವೈ) ಯ ಎಂಟು ವರ್ಷಗಳು ಮತ್ತು ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ (ಎಬಿಡಿಎಂ) ನ ಐದು ವರ್ಷಗಳ ಸಾಧನೆಯನ್ನು  ಆಚರಿಸಲಿದ್ದಾರೆ.

ಈ ಕಾರ್ಯಕ್ರಮವು ಆರೋಗ್ಯ ಭರವಸೆ  ಮತ್ತು ಡಿಜಿಟಲ್ ಆರೋಗ್ಯದ ಪ್ರಮುಖ ಅಂಶಗಳ ಕುರಿತು ಹಲವಾರು ಅಂಶಗಳ ಚರ್ಚೆಗಳನ್ನು ಒಳಗೊಂಡಿರಲಿದೆ. "ಆರೋಗ್ಯ ವಿಮೆಯನ್ನು ಸುಗಮಗೊಳಿಸಲು ಎನ್‌ ಎಚ್ ಸಿ ಎಕ್ಸ್  ಕುರಿತಾದ ಜಂಟಿ ಗೋಷ್ಠಿಯಲ್ಲಿ, ಪ್ರಮಾಣೀಕೃತ, ಸುಗಮ ಮತ್ತು ತಂತ್ರಜ್ಞಾನ ಆಧಾರಿತ ಆರೋಗ್ಯ ವಿಮಾ ಪ್ರಕ್ರಿಯೆಗಳನ್ನು ಸಕ್ರಿಯಗೊಳಿಸುವಲ್ಲಿ 'ರಾಷ್ಟ್ರೀಯ ಆರೋಗ್ಯ ಕ್ಲೇಮ್ಗಳ ವಿನಿಮಯ' (ಎನ್ ಎಚ್ ಸಿ ಎಕ್ಸ್) ನ ಪಾತ್ರದ ಕುರಿತು ಚರ್ಚಿಸಲಾಗುವುದು.

ನಂತರ, ಎಬಿ ಪಿಎಂ-ಜೆಎವೈ ಮತ್ತು ಎಬಿಡಿಎಂ ವಿಷಯಗಳ ಅಡಿಯಲ್ಲಿ ಸಮಾನಾಂತರ ಗೋಷ್ಠಿಗಳು ನಡೆಯಲಿವೆ. ಇದರಲ್ಲಿ ಕ್ಲೈಮ್ ಗಳ ಪ್ರಕ್ರಿಯೆ ಮತ್ತು ಕಾರ್ಯಕ್ರಮದ ಸಮಗ್ರತೆಯನ್ನು ಬಲಪಡಿಸಲು ತಂತ್ರಜ್ಞಾನ, ದತ್ತಾಂಶ ಮತ್ತು ವಿಶ್ಲೇಷಣೆಗಳನ್ನು ಬಳಸಿಕೊಳ್ಳುವ ಕುರಿತು “ಕ್ಲೇಮ್ ಪ್ರಕ್ರಿಯೆಯಿಂದ  ಬುದ್ದಿಮತ್ತೆಯ ಭರವಸೆವರೆಗೆ: ಎಬಿ ಪಿಎಂ-ಜೆಎವೈ ಪರಿವರ್ತನೆ” (“Claim Processing to Intelligent Assurance: Transforming AB PM-JAY”); ಆರೈಕೆಯ ಗುಣಮಟ್ಟವನ್ನು ಸುಧಾರಿಸಲು ಮತ್ತು ಸಂಪನ್ಮೂಲಗಳ ಪರಿಣಾಮಕಾರಿ ಬಳಕೆಯನ್ನು ಉತ್ತೇಜಿಸುವ ವಿಧಾನಗಳನ್ನು ಪರಿಶೀಲಿಸುವ “ಗುಣಮಟ್ಟ ಮತ್ತು ವೆಚ್ಚ-ಪರಿಣಾಮಕಾರಿತ್ವದ ದೃಷ್ಟಿಕೋನದಿಂದ ತಂತ್ರಾತ್ಮಕ ಖರೀದಿ”( “Strategic Purchasing from the Perspective of Quality and Cost-Effectiveness”); ಆರೋಗ್ಯ ರಕ್ಷಣಾ ವ್ಯವಸ್ಥೆಯಾದ್ಯಂತ ಸುಲಭಲಭ್ಯತೆ  ಮತ್ತು ಭಾಗವಹಿಸುವಿಕೆಯನ್ನು ವಿಸ್ತರಿಸಲು ಡಿಜಿಟಲ್ ವೇದಿಕೆಗಳನ್ನು ಬಳಸಿಕೊಳ್ಳುವ ಕುರಿತು “ಆರೋಗ್ಯ ಸೇವೆಗಳ ಲಭ್ಯತೆಯನ್ನು ಸುಧಾರಿಸಲು ಯುಎಚ್ ಐ” (“UHI for Improving Access of Healthcare Services”; ಹಾಗೂ ಮಾಹಿತಿ ವಿನಿಮಯ, ಸರಾಗತೆ ಮತ್ತು ಆರೋಗ್ಯ ಸೇವೆಗಳ ಗುಣಮಟ್ಟವನ್ನು ಹೆಚ್ಚಿಸಲು ಸಾಮಾನ್ಯ ಆರೋಗ್ಯ-ದತ್ತಾಂಶ ಮಾನದಂಡಗಳ ಪಾತ್ರದ ಕುರಿತು “ಉತ್ತಮ ಆರೋಗ್ಯ ತಲುಪಿಸುವಿಕೆಗೆ ಮಾನದಂಡಗಳ ಬಳಕೆ” (“Leveraging Standards for Better Health Delivery” ) ಎನ್ನುವ ವಿಷಯಗಳ ಮೇಲೆ ಚರ್ಚೆಗಳು ನಡೆಯಲಿವೆ.

ಭಾರತದ ಡಿಜಿಟಲ್ ಆರೋಗ್ಯ ಮತ್ತು ಆರೋಗ್ಯ ಖಾತರಿ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ 'ಆರೋಗ್ಯ ಮಂಥನ 2026' ರಲ್ಲಿ ಹಲವಾರು ನೂತನ ಯೋಜನೆಗಳಿಗೆ ಚಾಲನೆ ನೀಡಲಾಗುವುದು. ಇವುಗಳಲ್ಲಿ *ರಾಷ್ಟ್ರೀಯ ಆರೋಗ್ಯ ಪೂರೈಕೆದಾರರ ನೋಂದಣಿ (ಎನ್ ಎಚ್ ಪಿ ಆರ್) ಮೊಬೈಲ್  ಆ್ಯಪ್, ಪಾವತಿದಾರರಿಗಾಗಿ ಎನ್ ಎಚ್ ಸಿ ಎಕ್ಸ್  ಅನುಷ್ಠಾನ ಮಾರ್ಗದರ್ಶಿ, ಮಾದರಿ ಡಿಜಿಟಲ್ ಆರೋಗ್ಯ ಸೌಲಭ್ಯಕ್ಕಾಗಿ ಮಾರ್ಗದರ್ಶಿ ಪುಸ್ತಕ, ಸುರಕ್ಷಿತ ದತ್ತಾಂಶ ಪರಿಸರ (ೆಸ್ ಡಿ ಇ) ಅಪ್ಲಿಕೇಶನ್ ಮತ್ತು ಎಬಿ ಪಿಎಂ-ಜೆಎವೈ ಅಡಿಯಲ್ಲಿ ಕ್ಲೇಮ್ ಗಳ ಸ್ವಯಂಚಾಲಿತ ಪರಿಶೀಲನೆಯ  ಚೌಕಟ್ಟು* ಸೇರಿವೆ.

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ  (ಐಐಎಸ್ ಸಿ) ಯ ಬೆಂಬಲದೊಂದಿಗೆ ಎನ್ ಎಚ್ಎ   ಅಭಿವೃದ್ಧಿಪಡಿಸಿದ 'ಸುರಕ್ಷಿತ ದತ್ತಾಂಶ ಪರಿಸರ' (ಎಸ್ ಡಿ ಇ), ಎಬಿ ಪಿಎಂ-ಜೆಎವೈ ಮತ್ತು ಎಬಿಡಿಎಂ ಆರೋಗ್ಯ ದತ್ತಾಂಶದ ವಿಶ್ಲೇಷಣೆ ಮತ್ತು ಪ್ರವೇಶಕ್ಕಾಗಿ ನಿಯಂತ್ರಿತ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸಲಿದೆ. ಅನುಮೋದಿತ ಸಂಸ್ಥೆಗಳು ವೈಯಕ್ತಿಕ ಗುರುತನ್ನು ಬಹಿರಂಗಪಡಿಸದ ದತ್ತಾಂಶದೊಂದಿಗೆ ಕಾರ್ಯನಿರ್ವಹಿಸಲು ಅಥವಾ ಪ್ರತ್ಯೇಕ ಎನ್ ಹೆಚ್ ಎ ಪರಿಸರದಲ್ಲಿ ಕೋಡ್ ಚಲಾಯಿಸಲು ಸಾಧ್ಯವಾಗುತ್ತದೆ ಹಾಗೂ ಫಲಿತಾಂಶಗಳನ್ನು ಬಿಡುಗಡೆ ಮಾಡುವ ಮೊದಲು ಪರಿಶೀಲಿಸಲಾಗುತ್ತದೆ. ಈ ಉಪಕ್ರಮವು ವೈಯಕ್ತಿಕ ದತ್ತಾಂಶದ ರಕ್ಷಣೆಗೆ ಸುರಕ್ಷತೆಗಳನ್ನು ಒದಗಿಸುವುದರ ಜೊತೆಗೆ ಆರೋಗ್ಯ ಸಂಶೋಧನೆ, ಕಾರ್ಯಕ್ರಮ ಯೋಜನೆ, ಫಲಿತಾಂಶ ವಿಶ್ಲೇಷಣೆ ಮತ್ತು ಜವಾಬ್ದಾರಿಯುತ ಎಐ ನಾವೀನ್ಯತೆಗಾಗಿ  ಸುಗಮಗೊಳಿಸುವ ಉದ್ದೇಶವನ್ನು ಹೊಂದಿದೆ.

ಆರೋಗ್ಯ ಭರವಸೆ ಮತ್ತು ಡಿಜಿಟಲ್ ಆರೋಗ್ಯ ಅನುಷ್ಠಾನವನ್ನು ಬಲಪಡಿಸುವ ನಿಟ್ಟಿನಲ್ಲಿ ಶ್ರಮಿಸಿದ ಎಬಿ ಪಿಎಂ-ಜೆಎವೈ ಮತ್ತು ಎಬಿಡಿಎಂ ಅಡಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ವಿವಿಧ ವಿಭಾಗಗಳಲ್ಲಿ ಈ ಸಂದರ್ಭದಲ್ಲಿ ಗುರುತಿಸಿ ಗೌರವಿಸಲಾಗುವುದು.

ಎಬಿ ಪಿಎಂ-ಜೆಎವೈ ಮತ್ತು ಎಬಿಡಿಎಂ ಕುರಿತು

2018ರಲ್ಲಿ ಪ್ರಾರಂಭಿಸಲಾದ ಎಬಿ ಪಿಎಂ-ಜೆಎವೈ, ದುರ್ಬಲ ಕುಟುಂಬಗಳಿಗೆ ಆಸ್ಪತ್ರೆಗೆ ದಾಖಲಾಗುವ ವೆಚ್ಚದಿಂದ ಆರ್ಥಿಕ ರಕ್ಷಣೆ ನೀಡುವ ಸರ್ಕಾರದ ಪ್ರಯತ್ನಗಳ ಪ್ರಮುಖ ಆಧಾರಸ್ತಂಭವಾಗಿ ಹೊರಹೊಮ್ಮಿದೆ. ಈ ಯೋಜನೆಯು ದ್ವಿತೀಯ ಮತ್ತು ತೃತೀಯ ಹಂತದ ಆಸ್ಪತ್ರೆ ದಾಖಲಾತಿಗಾಗಿ ಪ್ರತಿ ಕುಟುಂಬಕ್ಕೆ ಪ್ರತಿ ವರ್ಷಕ್ಕೆ ₹5 ಲಕ್ಷದವರೆಗೆ ಆರೋಗ್ಯ ರಕ್ಷಣೆಯನ್ನು ಒದಗಿಸುತ್ತದೆ. ಕಳೆದ ಕೆಲವು ವರ್ಷಗಳಲ್ಲಿ, ಈ ಯೋಜನೆಯು ದೇಶದಾದ್ಯಂತ ವಿಸ್ತರಿಸಿದ್ದು, 60 ಕೋಟಿಗೂ ಹೆಚ್ಚು ಫಲಾನುಭವಿಗಳನ್ನು ಒಳಗೊಂಡಿದೆ. ಇದು ₹2 ಲಕ್ಷ ಕೋಟಿಗೂ ಹೆಚ್ಚು ಮೌಲ್ಯದ ಚಿಕಿತ್ಸೆಯನ್ನು ಒಳಗೊಂಡಂತೆ 13 ಕೋಟಿಗೂ ಹೆಚ್ಚು ಆಸ್ಪತ್ರೆ ದಾಖಲಾತಿಗಳಿಗೆ ಅನುಕೂಲ ಮಾಡಿಕೊಟ್ಟಿದೆ .

ಅಕ್ಟೋಬರ್ 2024 ರಲ್ಲಿ ಎಬಿ ಪಿಎಂ-ಜೆಎವೈ  ಯೋಜನೆಯಲ್ಲಿ ಪ್ರಮುಖ ವಿಸ್ತರಣೆಯನ್ನು ಕೈಗೊಳ್ಳಲಾಯಿತು. ಇದರ ಅಡಿಯಲ್ಲಿ   ಎಲ್ಲಾ ಸಾಮಾಜಿಕ-ಆರ್ಥಿಕ ಸ್ಥಿತಿಯ 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಹಿರಿಯ ನಾಗರಿಕರನ್ನು  ಈ ಯೋಜನೆಯಲ್ಲಿ ಒಳಗೊಳ್ಳಿಸಿ ವಿಸ್ತರಿಸಲಾಯಿತು. ಈ ವಿಸ್ತರಣೆಯು ಸುಮಾರು 6 ಕೋಟಿ ಹೆಚ್ಚುವರಿ ಹಿರಿಯ ನಾಗರಿಕರಿಗೆ ಆರೋಗ್ಯ ಭರವಸೆ  ಯೋಜನೆಯ ಪ್ರಯೋಜನವನ್ನು ತಂದಿದೆ.

ಎಬಿ ಪಿಎಂ-ಜೆಎವೈ ಮೂಲಕ ಒದಗಿಸಲಾದ ಆರ್ಥಿಕ ರಕ್ಷಣೆಗೆ ಪೂರಕವಾಗಿ, ಸೆಪ್ಟೆಂಬರ್ 2021 ರಲ್ಲಿ ಪ್ರಾರಂಭಿಸಲಾದ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ (ಎಬಿಡಿಎಂ), ಪರಸ್ಪರ ಸಂಪರ್ಕ ಹೊಂದಿರುವ, ಪರಸ್ಪರ ಕಾರ್ಯನಿರ್ವಹಿಸಬಹುದಾದ ಮತ್ತು ನಾಗರಿಕ ಕೇಂದ್ರಿತ ಆರೋಗ್ಯ ವ್ಯವಸ್ಥೆಗಾಗಿ ಡಿಜಿಟಲ್ ಚೌಕಟ್ಟನ್ನು ನಿರ್ಮಿಸುತ್ತಿದೆ. ಮಿಷನ್ ತನ್ನ ಪ್ರಮುಖ ಡಿಜಿಟಲ್ ಆರೋಗ್ಯ ಅಂಶಗಳಾದ ಆಯುಷ್ಮಾನ್ ಭಾರತ್ ಹೆಲ್ತ್ ಅಕೌಂಟ್ (ಎಬಿಎಚ್ ಎ), ಆರೋಗ್ಯ ವೃತ್ತಿಪರರ ನೋಂದಣಿ   ರಿಜಿಸ್ಟ್ರಿ (ಎಚ್ ಪಿ ಆರ್) ಮತ್ತು ಆರೋಗ್ಯ ಸೌಲಭ್ಯಗಳ ನೋಂದಣಿ (ಎಚ್ ಎಫ್ ಆರ್) ಗಳನ್ನು ಸ್ಥಾಪಿಸಿದೆ ಮತ್ತು ಆರೋಗ್ಯ ಸೇವೆಗಳ ಸುಲಭಲಭ್ಯತೆ  ಹಾಗೂ ಆರೋಗ್ಯ ಮಾಹಿತಿಯ ವಿನಿಮಯವನ್ನು ಸುಗಮಗೊಳಿಸಲು ಡಿಜಿಟಲ್ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಿದೆ.

ಸೆಪ್ಟೆಂಬರ್ 1, 2026ರಂದು, 97.8 ಕೋಟಿಗೂ ಹೆಚ್ಚು ಎ ಬಿ ಎಚ್ ಎ ಖಾತೆಗಳನ್ನು ಸೃಷ್ಟಿಸಲಾಗಿದೆ  ಮತ್ತು 121 ಕೋಟಿಗೂ ಹೆಚ್ಚು ಆರೋಗ್ಯ ದಾಖಲೆಗಳನ್ನು ಜೋಡಿಸಲಾಗಿದೆ. ಎಬಿಡಿಎಂ ವ್ಯವಸ್ಥೆಯಲ್ಲಿ 5.6 ಲಕ್ಷಕ್ಕೂ ಹೆಚ್ಚು ಆರೋಗ್ಯ ಸೌಲಭ್ಯಗಳು ಮತ್ತು 11 ಲಕ್ಷ ಆರೋಗ್ಯ ವೃತ್ತಿಪರರು ನೋಂದಾಯಿಸಿಕೊಂಡಿದ್ದಾರೆ.

ಡಿಜಿಟಲ್ ಆರೋಗ್ಯ ಮಾನದಂಡಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಆರೋಗ್ಯ ರಕ್ಷಣೆಯಲ್ಲಿ ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆಯ  ಜವಾಬ್ದಾರಿಯುತ ಬಳಕೆಯನ್ನು ಸಕ್ರಿಯಗೊಳಿಸುವುದರ ಮೇಲೆಯೂ ಈ ಅಭಿಯಾನವು  ಗಮನಹರಿಸಿದೆ. ಭಾರತಕ್ಕಾಗಿ ಆರೋಗ್ಯ ರಕ್ಷಣೆಯಲ್ಲಿ ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನ (ಎಸ್ ಎ ಎಚ್ ಐ), ಹೆಲ್ತ್ ಎಐ ನಲ್ಲಿ ಮುಕ್ತ ದತ್ತಾಂಶ ವೇದಿಕೆಯ ಮಾನದಂಡ ನಿರ್ಣಯ' (ಬಿಒಡಿಎಚ್), ಭಾರತಕ್ಕಾಗಿ ಕಾಮನ್ ಲ್ಯಾಬ್ ಕೋಡ್ಗಳು ಮತ್ತು 'ಭಾರತ ಆರೋಗ್ಯ ಪರಿಭಾಷಾ ಸೇವೆ' (ಬಿ ಎಚ್ ಟಿ ಎಸ್) ಯಂತಹ ಉಪಕ್ರಮಗಳು ಪ್ರಮಾಣೀಕೃತ ಮತ್ತು ಪರಸ್ಪರ ಕಾರ್ಯನಿರ್ವಹಿಸಬಹುದಾದ ಡಿಜಿಟಲ್ ಆರೋಗ್ಯ ವ್ಯವಸ್ಥೆಯ ಅಭಿವೃದ್ಧಿಗೆ ಕೊಡುಗೆ ನೀಡುತ್ತಿವೆ. ಸ್ಕ್ಯಾನ್ ಮತ್ತು ರಿಜಿಸ್ಟರ್, ಸ್ಕ್ಯಾನ್ ಮತ್ತು ಪೇ ಹಾಗೂ ಇ-ಸುಶ್ರುತ್ ಕ್ಲಿನಿಕ್ ನಂತಹ ನಾಗರಿಕ ಕೇಂದ್ರಿತ ಉಪಕ್ರಮಗಳು ಡಿಜಿಟಲ್ ಆರೋಗ್ಯ ಸೇವೆಗಳ ಅಳವಡಿಕೆಗೆ ಇನ್ನಷ್ಟು ಬೆಂಬಲ ನೀಡುತ್ತಿವೆ.

ʻಆರೋಗ್ಯ ಮಂಥನ 2026ʼ, ಭಾರತದ ಆರೋಗ್ಯ ಭರವಸೆ  ಮತ್ತು ಡಿಜಿಟಲ್ ಆರೋಗ್ಯ ಕಾರ್ಯಕ್ರಮಗಳ ಅಡಿಯಲ್ಲಿ ಸಾಧಿಸಿದ ಪ್ರಗತಿಯನ್ನು ಪರಿಶೀಲಿಸಲು ಮತ್ತು ಮುಂದಿನ ಹಂತದ  ಆದ್ಯತೆಗಳನ್ನು ಚರ್ಚಿಸಲು ಹಿರಿಯ ಸರ್ಕಾರಿ ಅಧಿಕಾರಿಗಳು, ಆರೋಗ್ಯ ಪೂರೈಕೆದಾರರು, ವಿಮಾ ಸಂಸ್ಥೆಗಳು, ತಂತ್ರಜ್ಞಾನ ಮತ್ತು ಡಿಜಿಟಲ್ ಆರೋಗ್ಯ ತಜ್ಞರು, ಶೈಕ್ಷಣಿಕ ಕ್ಷೇತ್ರ, ಅಭಿವೃದ್ಧಿ ಪಾಲುದಾರರು  ಮತ್ತು ಇತರ ಮಧ್ಯಸ್ಥಗಾರರನ್ನು ಒಂದೇ ವೇದಿಕೆಗೆ ತರಲಿದೆ. ಎಬಿ ಪಿಎಂ-ಜೆಎವೈ ನ ಎಂಟು ವರ್ಷಗಳು ಮತ್ತು ಎಬಿಡಿಎಂ ನ ಐದು ವರ್ಷಗಳ ಪೂರೈಕೆಯೊಂದಿಗೆ, ಆರೋಗ್ಯ ಮಂಥನ 2026 ಭಾರತದ ಆರೋಗ್ಯ ಕ್ಷೇತ್ರದಲ್ಲಿ ನಡೆಯುತ್ತಿರುವ ಬದಲಾವಣೆಗಳನ್ನು ಅವಲೋಕಿಸಲು ಮತ್ತು ಭವಿಷ್ಯದ ಆದ್ಯತೆಗಳ ಬಗ್ಗೆ ಚರ್ಚಿಸಲು ಉತ್ತಮ ಅವಕಾಶವನ್ನು ಒದಗಿಸುತ್ತದೆ.

 

*****
 


(ಪ್ರಕಟಣೆ ಐ.ಡಿ.: 2314747) ವಿಸಿಟರ್ ಕೌಂಟರ್ : 18
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Tamil , Malayalam