ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ಮೈ ಭಾರತ್ 3 ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ 3 ಕೋಟಿಗೂ ಹೆಚ್ಚು ನೋಂದಾಯಿತ ಯುವಕರ ಐತಿಹಾಸಿಕ ಮೈಲಿಗಲ್ಲಿನ ಸಾಧನೆ


ಈ ಮೈಲಿಗಲ್ಲು ನಾಯಕತ್ವ, ಅನುಭವದ ಕಲಿಕೆ, ಸ್ವಯಂಸೇವೆ ಮತ್ತು ರಾಷ್ಟ್ರ ನಿರ್ಮಾಣದ ಅವಕಾಶಗಳಲ್ಲಿ ಭಾರತೀಯ ಯುವಕರ ಹೆಚ್ಚುತ್ತಿರುವ ಭಾಗವಹಿಸುವಿಕೆಯನ್ನು ಪ್ರತಿಬಿಂಬಿಸುತ್ತದೆ

ಪ್ರಕಟಣಾ ದಿನಾಂಕ: 23 SEP 2026 3:00PM by PIB Bengaluru

ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಯುವಜನ ವ್ಯವಹಾರ ಇಲಾಖೆಯ ರಾಷ್ಟ್ರೀಯ ಯುವಜನ ತೊಡಗಿಸಿಕೊಳ್ಳುವ ವೇದಿಕೆಯಾದ 'ಮೇರಾ ಯುವ ಭಾರತ್' (ಮೈ ಭಾರತ್) (mybharat.gov.in/), 3 ಕೋಟಿಗೂ ಹೆಚ್ಚು ಯುವಜನರ ನೋಂದಣಿಯಿಂದ ಐತಿಹಾಸಿಕ ಮೈಲಿಗಲ್ಲನ್ನು ದಾಟಿದೆ. ಈ ಸಾಧನೆಯು ಭಾರತದ ಅತಿ ದೊಡ್ಡ ಯುವಕರ ತೊಡಗಿಸಿಕೊಳ್ಳುವಿಕೆಯ ಪರಿಸರ ವ್ಯವಸ್ಥೆಯ ಗಮನಾರ್ಹ  ವಿಸ್ತರಣೆಯನ್ನು ಸೂಚಿಸುತ್ತದೆ. ಇದು ಯುವಜನರಿಗೆ ಅನುಭವದ ಜನ್ಯ ಕಲಿಕೆ, ಸ್ವಯಂಸೇವಕ ಸೇವೆ, ನಾಯಕತ್ವ, ನಾಗರಿಕ ತೊಡಗಿಸಿಕೊಳ್ಳುವಿಕೆ ಮತ್ತು ಯುವ-ನೇತೃತ್ವದ ಉಪಕ್ರಮಗಳಲ್ಲಿ ಭಾಗವಹಿಸಲು ಅವಕಾಶಗಳನ್ನು ಒದಗಿಸುತ್ತದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 31 ಅಕ್ಟೋಬರ್ 2023 ರಂದು ಚಾಲನೆ ನೀಡಿದ ಮೈ ಭಾರತ್ ಅನ್ನು, ಭಾರತದ ಯುವಕರು ದೇಶದ ಅಭಿವೃದ್ಧಿಯ ಪಯಣದಲ್ಲಿ ಭಾಗವಹಿಸಲು ತಂತ್ರಜ್ಞಾನ ಆಧಾರಿತ ವೇದಿಕೆಯನ್ನು ಸೃಷ್ಟಿಸುವ ದೂರದೃಷ್ಟಿಯೊಂದಿಗೆ ಸ್ಥಾಪಿಸಲಾಯಿತು. ಉದ್ಘಾಟನಾ ಸಮಾರಂಭದಲ್ಲಿ,  ದೇಶದ ಯುವಕರನ್ನು ಒಂದೇ ವೇದಿಕೆಯಡಿ ತರುವ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಅವರ ಹೆಚ್ಚಿನ ಭಾಗವಹಿಸುವಿಕೆಯನ್ನು ಸಕ್ರಿಯಗೊಳಿಸುವ ಪ್ರಾಮುಖ್ಯತೆಯನ್ನು ಪ್ರಧಾನಮಂತ್ರಿಯವರು ಒತ್ತಿಹೇಳಿದ್ದರು. ವಿಕಸಿತ ಭಾರತ @2047 ರ ಕಡೆಗೆ ಭಾರತದ ಯುವಜನತೆಯ ಶಕ್ತಿ, ಆಕಾಂಕ್ಷೆಗಳು ಮತ್ತು ಸಾಮರ್ಥ್ಯವನ್ನು ಅರ್ಥಪೂರ್ಣ ಭಾಗವಹಿಸುವಿಕೆಯಾಗಿ ಪರಿವರ್ತಿಸಲು ಈ ವೇದಿಕೆಯನ್ನು ಒಂದು ಪ್ರಮುಖ ಸಾಂಸ್ಥಿಕ ವ್ಯವಸ್ಥೆಯಾಗಿ ಕಲ್ಪಿಸಲಾಗಿತ್ತು.

ಮೈ ಭಾರತ್ ನ ಪಯಣವು ಆರಂಭದಿಂದಲೂ ವೇಗದ ವಿಸ್ತರಣೆಗೆ ಸಾಕ್ಷಿಯಾಗಿದೆ. ಈ ವೇದಿಕೆಯು ಅಕ್ಟೋಬರ್ 2025ರಲ್ಲಿ 2 ಕೋಟಿಗೂ ಹೆಚ್ಚು ನೋಂದಣಿಗಳನ್ನು ದಾಟಿತು ಮತ್ತು ನಂತರ ಆಗಸ್ಟ್ 2026ರ ವೇಳೆಗೆ 2.46 ಕೋಟಿಗೂ ಹೆಚ್ಚು ನೋಂದಾಯಿತ ಯುವಕರಿಗೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿತು. ವಿಸ್ತರಣೆಯ ಮುಂದಿನ ಹಂತದಲ್ಲಿಯೇ 3 ಕೋಟಿಯ ಗಡಿಯನ್ನು ದಾಟಿರುವುದು ವೇದಿಕೆಯಲ್ಲಿ ಯುವಕರ ಭಾಗವಹಿಸುವಿಕೆಯ ನಿರಂತರ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ.

ʻಮೈ ಭಾರತ್ʼ ಇಂದು ಯುವಜನರು ಅನುಭವದ ಕಲಿಕಾ ಕಾರ್ಯಕ್ರಮಗಳು, ಸ್ವಯಂಸೇವಕ ಸೇವೆಯ ಅವಕಾಶಗಳು, ರಸಪ್ರಶ್ನೆಗಳು, ನಾಯಕತ್ವದ ಉಪಕ್ರಮಗಳು, ಯುವ ಸಂವಾದಗಳು ಮತ್ತು ಸಮುದಾಯ ತೊಡಗಿಸಿಕೊಳ್ಳುವಿಕೆಯ ಚಟುವಟಿಕೆಗಳನ್ನು ಅನ್ವೇಷಿಸಲು ಮತ್ತು ಭಾಗವಹಿಸಲು ಒಂದು ಸಾಮಾನ್ಯ ಡಿಜಿಟಲ್ ಹೆಬ್ಬಾಗಿಲಾಗಿ ಕಾರ್ಯನಿರ್ವಹಿಸುತ್ತಿದೆ. ಆಗಸ್ಟ್ 2026ರ ವೇಳೆಗೆ, 1.22 ಲಕ್ಷಕ್ಕೂ ಹೆಚ್ಚು ಯುವಕರು ಸುಮಾರು 25,000 ಅನುಭವದ ಕಲಿಕಾ ಕಾರ್ಯಕ್ರಮಗಳಲ್ಲಿ ನೋಂದಾಯಿಸಿಕೊಂಡಿದ್ದು, ಸಾಂಪ್ರದಾಯಿಕ ತರಗತಿಯ ವಾತಾವರಣವನ್ನು ಮೀರಿ  ಯುವಕರಿಗೆ ಪ್ರಾಯೋಗಿಕ ಅನುಭವವನ್ನು ಪಡೆಯಲು ಅವಕಾಶಗಳನ್ನು ಒದಗಿಸಲಾಗಿದೆ.

ವೇದಿಕೆಯು ತಾಂತ್ರಿಕವಾಗಿಯೂ ವಿಕಸನಗೊಳ್ಳುತ್ತಲೇ ಇದೆ. ಯುವಕರು ವೃತ್ತಿಪರ ಪ್ರೊಫೈಲ್ ಗಳನ್ನು ರಚಿಸಲು ಸಹಾಯ ಮಾಡಲು 'ಎ.ಐ-ಚಾಲಿತ ಸಿ.ವಿ ಬಿಲ್ಡರ್' ಅನ್ನು ಪರಿಚಯಿಸಲಾಗಿದೆ, ಜೊತೆಗೆ ಡಿಜಿಟಲ್ ಸೇವೆಗಳು ಮತ್ತು ತಳಮಟ್ಟದ ವಿಶಾಲ ಪ್ರವೇಶದ ಮೂಲಕ ವೇದಿಕೆಯನ್ನು ಬಲಪಡಿಸಲಾಗುತ್ತಿದೆ.

ಮೈ ಭಾರತ್ ಮೂಲಕ ನಡೆಸಲಾಗುತ್ತಿರುವ ಒಂದು ಪ್ರಮುಖ ಉಪಕ್ರಮವೆಂದರೆ ವಿಕಸಿತ್ ಭಾರತ ಯುವ ನಾಯಕರ ಸಂವಾದ ('ವಿಕಸಿತ ಭಾರತ್ ಯಂಗ್ ಲೀಡರ್ಸ್ ಡೈಲಾಗ್' - ವಿ.ಬಿ.ವೈ.ಎಲ್.ಡಿ) 2027. ಇದು ಭಾರತದ ಯುವಕರಿಗೆ ವಿಕಸಿತ ಭಾರತ @2047 ರ ದೂರದೃಷ್ಟಿಯತ್ತ ತಮ್ಮ ಆಲೋಚನೆಗಳು, ಸೃಜನಶೀಲತೆ, ನಾಯಕತ್ವ ಮತ್ತು ನಾವೀನ್ಯತೆಯನ್ನು ಪ್ರದರ್ಶಿಸಲು ಹಲವು ಮಾರ್ಗಗಳನ್ನು ಒದಗಿಸುತ್ತಿದೆ. ಈ ಉಪಕ್ರಮವು 17 ಆಗಸ್ಟ್ 2026 ರಂದು ಆರಂಭವಾದ 'ವಿಕಸಿತ ಭಾರತ ರಸಪ್ರಶ್ನೆ'ಯೊಂದಿಗೆ ಪ್ರಾರಂಭವಾಯಿತು, ಇದು ಎಂ.ವೈ. ಭಾರತ್ ವೇದಿಕೆಯಲ್ಲಿ 30 ಸೆಪ್ಟೆಂಬರ್ 2026 ರವರೆಗೆ ಮುಕ್ತವಾಗಿರುತ್ತದೆ. ಪ್ರಮುಖ 'ವಿಕಸಿತ ಭಾರತ ಚಾಲೆಂಜ್' ಅಡಿಯಲ್ಲಿ, ಭಾಗವಹಿಸುವವರು ಪ್ರಬಂಧ ಸ್ಪರ್ಧೆ, ಜಿಲ್ಲಾ ಮಟ್ಟದ ಚಾಂಪಿಯನ್ ಷಿಪ್ಗಳು ಮತ್ತು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಮಟ್ಟದ ಹಂತಗಳ ಮೂಲಕ ಮುನ್ನಡೆದು, 10–12 ಜನವರಿ 2027 ರಂದು ನವದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ 'ವಿಕಸಿತ ಭಾರತ ಯಂಗ್ ಲೀಡರ್ಸ್ ಡೈಲಾಗ್'ನಲ್ಲಿ ಮುಗಿಸಲಿದ್ದಾರೆ. ಇದರ ಜೊತೆಗೆ, ವಿ.ಬಿ.ವೈ.ಎಲ್.ಡಿ 2027 ಐದು ಹೆಚ್ಚುವರಿ ವಿಭಾಗಗಳನ್ನು ಹೊಂದಿದೆ—ಸಾಂಸ್ಕೃತಿಕ ವಿಭಾಗ, ಭಾರತಕ್ಕಾಗಿ ವಿನ್ಯಾಸ, ಸಾಮಾಜಿಕ ಉದ್ದೇಶಕ್ಕಾಗಿ ಹ್ಯಾಕ್ ಯುವ ಉದ್ಯಮಿಗಳ ಸವಾಲು ಮತ್ತು ಯುವ ಸಂಸತ್ತು. ಇವು ಯುವಕರಿಗೆ ತಮ್ಮ ಸಾಂಸ್ಕೃತಿಕ ಪ್ರತಿಭೆ, ಸೃಜನಶೀಲ ಮತ್ತು ವಿನ್ಯಾಸದ ಆಲೋಚನೆ, ತಂತ್ರಜ್ಞಾನ ಆಧಾರಿತ ಪರಿಹಾರಗಳು, ಉದ್ಯಮಶೀಲತೆಯ ಆಲೋಚನೆಗಳು ಮತ್ತು ಸಂಸದೀಯ ಪ್ರಕ್ರಿಯೆಗಳಲ್ಲಿ ನಾಯಕತ್ವವನ್ನು ಪ್ರದರ್ಶಿಸಲು ವೇದಿಕೆಗಳನ್ನು ಒದಗಿಸುತ್ತವೆ. ಈ ವಿಭಾಗಗಳಲ್ಲಿ ಆಯ್ಕೆಯಾದ ಯುವ ಸ್ಪರ್ಧಿಗಳಿಗೆ ನೀತಿ ನಿರೂಪಕರೊಂದಿಗೆ ಸಂವಾದ ನಡೆಸಲು ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಪ್ರಧಾನಮಂತ್ರಿಯವರ ಮುಂದೆ  ತಮ್ಮ ಆಲೋಚನೆಗಳನ್ನು ಪ್ರಸ್ತುತಪಡಿಸಲು ಅವಕಾಶ ಸಿಗುತ್ತದೆ.

ಪ್ರಸ್ತುತ ಮೈ ಭಾರತ್ ಪರಿಸರ ವ್ಯವಸ್ಥೆಯು 'ವಿಕಸಿತ ಭಾರತಕ್ಕಾಗಿ ನಶಾ ಮುಕ್ತ ಯುವ', 'ವಿಕಸಿತ ವೈಬ್ರೆಂಟ್ ವಿಲೇಜ್ ಪ್ರೋಗ್ರಾಂ', 'ವಿಕಸಿತ ಭಾರತ ಯುವ ಸಂಸತ್ತು', 'ವಿಕಸಿತ ಭಾರತ ಪಾದಯಾತ್ರೆ', 'ವಿಕಸಿತ ಭಾರತ ಯುವ ಕನೆಕ್ಟ್' ಮತ್ತು 'ಖೇಲೋ ಇಂಡಿಯಾ ಡೈಲಾಗ್' ಸೇರಿದಂತೆ ಅನುಭವದ  ಕಲಿಕೆ ಮತ್ತು ಸ್ವಯಂಸೇವಕ ಸೇವೆ ಅವಕಾಶಗಳ ಜೊತೆಗೆ ಯುವ ಕೇಂದ್ರಿತ ಕಾರ್ಯಕ್ರಮಗಳ ಸರಣಿಯನ್ನೇ ಆಯೋಜಿಸುತ್ತಿದೆ.

'ವಿಕಸಿತ ಭಾರತಕ್ಕಾಗಿ ನಶೆ ಮುಕ್ತ ಯುವ' ಅಭಿಯಾನದ ಮೂಲಕ, ಆರೋಗ್ಯಕರ ಮತ್ತು ಮಾದಕದ್ರವ್ಯ ಮುಕ್ತ ಭಾರತಕ್ಕಾಗಿ ಯುವಕರನ್ನು ಸಂಘಟಿಸುವ ರಾಷ್ಟ್ರವ್ಯಾಪಿ ಪ್ರಯತ್ನಕ್ಕೆ ಮೈ ಭಾರತ್ ಕೊಡುಗೆ ನೀಡುತ್ತಿದೆ. 100 ವಾರಗಳ 'ನಶೆ ಮುಕ್ತ ಯುವ ಅಭಿಯಾನ'ವು ಸೆಪ್ಟೆಂಬರ್ 2026ರಲ್ಲಿ 'ರಾಷ್ಟ್ರೀಯ ಸಂಕಲ್ಪ ಸಮಾರೋಹ'ದೊಂದಿಗೆ ('ರಾಷ್ಟ್ರೀಯ ಸಂಕಲ್ಪ ಸಮಾರಂಭ) ಪ್ರಾರಂಭವಾಯಿತು. ಇದರಲ್ಲಿ ದೇಶಾದ್ಯಂತ ಪ್ರತಿಜ್ಞಾ ವಿಧಿ ಸ್ವೀಕಾರ, ಸಹಿ ಅಭಿಯಾನಗಳು, ಸೃಜನಶೀಲ ಚಟುವಟಿಕೆಗಳು ಮತ್ತು ಚರ್ಚೆಗಳ ಮೂಲಕ ಯುವಕರು ಭಾಗವಹಿಸುತ್ತಿದ್ದಾರೆ.

ಆದ್ದರಿಂದ, ಈ 3 ಕೋಟಿ+ ಮೈಲಿಗಲ್ಲು ಕೇವಲ ನೋಂದಣಿಯ ಹೆಚ್ಚಳವನ್ನು ಮಾತ್ರ ಪ್ರತಿನಿಧಿಸುವುದಿಲ್ಲ. ಇದು ಯುವ ಭಾರತೀಯರು ಅನುಭವದ ಮೂಲಕ ಕಲಿಯಲು, ಸಮುದಾಯ ಉಪಕ್ರಮಗಳಲ್ಲಿ ಭಾಗವಹಿಸಲು, ನಾಯಕತ್ವದ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಲು ಮತ್ತು ದೇಶದ ಅಭಿವೃದ್ಧಿಯ ಪಯಣಕ್ಕೆ ತಮ್ಮ ಆಲೋಚನೆಗಳನ್ನು ಕೊಡುಗೆಯಾಗಿ ನೀಡಲು ಸಹಕಾರಿಯಾದ ರಾಷ್ಟ್ರೀಯ ವೇದಿಕೆಯ ವಿಸ್ತರಿಸುತ್ತಿರುವ ಪ್ರಮಾಣವನ್ನು ಪ್ರತಿಬಿಂಬಿಸುತ್ತದೆ.

ಮೈ ಭಾರತ್ ತನ್ನ ಡಿಜಿಟಲ್ ಮತ್ತು ತಳಮಟ್ಟದ ಪರಿಸರ ವ್ಯವಸ್ಥೆಯನ್ನು ವಿಸ್ತರಿಸುವುದನ್ನು ಮುಂದುವರಿಸುತ್ತಿದ್ದಂತೆ, ವಿಕಸಿತ ಭಾರತ @2047 ರತ್ತ ಅರ್ಥಪೂರ್ಣವಾಗಿ ಕೊಡುಗೆ ನೀಡಲು ಭಾರತದ ಯುವ ಜನಸಂಖ್ಯೆಯನ್ನು ಸಶಕ್ತಗೊಳಿಸುವ ದೂರದೃಷ್ಟಿಗೆ ಅನುಗುಣವಾಗಿ, 'ಯುವ ಶಕ್ತಿ', ಜನರ ಭಾಗವಹಿಸುವಿಕೆ 'ಜನ ಭಾಗಿದಾರಿ') ಮತ್ತು ಯುವ-ನೇತೃತ್ವದ ರಾಷ್ಟ್ರ ನಿರ್ಮಾಣವನ್ನು ಬಲಪಡಿಸುವುದರ ಮೇಲೆ ಈ ವೇದಿಕೆಯು ಗಮನ ಕೇಂದ್ರೀಕರಿಸಿದೆ.

 

*****


(ಪ್ರಕಟಣೆ ಐ.ಡಿ.: 2313914) ವಿಸಿಟರ್ ಕೌಂಟರ್ : 10
ಪ್ರಕಟಣೆಯನ್ನು ಇದರಲ್ಲಿ ಓದಿ: Marathi , English , Gujarati , Urdu , हिन्दी