ಜಲ ಶಕ್ತಿ ಸಚಿವಾಲಯ
azadi ka amrit mahotsav

9ನೇ ಭಾರತ ಅಂತಾರಾಷ್ಟ್ರೀಯ ಜಲ ಸಪ್ತಾಹ 2026ಕ್ಕೆ ಉಪರಾಷ್ಟ್ರಪತಿ ಚಾಲನೆ


ಜಲ ಸುರಕ್ಷತೆ ಮತ್ತು ಹವಾಮಾನ-ಪ್ರತಿರೋಧಕ ಭಾರತ ನಿರ್ಮಿಸಲು ಸಾಮೂಹಿಕ ಕ್ರಮ ಮತ್ತು ನಾವೀನ್ಯತೆ ಕೈಗೊಳ್ಳುವಂತೆ ಉಪರಾಷ್ಟ್ರಪತಿ ಶ್ರೀ ಸಿ.ಪಿ. ರಾಧಾಕೃಷ್ಣನ್ ಕರೆ

ಜಲ ಸುರಕ್ಷತೆಗಾಗಿ ಜನರು ಸಹಕಾರ ಮತ್ತು ಸಕ್ರಿಯ ಭಾಗವಹಿಸುವಿಕೆ ಅಗತ್ಯ: ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಸಿ.ಆರ್. ಪಾಟೀಲ್ ಕರೆ

ಪ್ರಕಟಣಾ ದಿನಾಂಕ: 22 SEP 2026 6:27PM by PIB Bengaluru

ಭಾರತದ ಗೌರವಾನ್ವಿತ ಉಪರಾಷ್ಟ್ರಪತಿ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರು ನವದೆಹಲಿಯ ಭಾರತ್ ಮಂಟಪದಲ್ಲಿ 9ನೇ ಭಾರತ ಅಂತಾರಾಷ್ಟ್ರೀಯ ಜಲ ಸಪ್ತಾಹ(ಐಐಡಬ್ಲ್ಯುಡಬ್ಲ್ಯು)-2026 ಉದ್ಘಾಟಿಸಿದರು. ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಸಿ.ಆರ್. ಪಾಟೀಲ್, ಜಲಶಕ್ತಿ ರಾಜ್ಯ ಖಾತೆ ಸಚಿವರಾದ ಶ್ರೀ ವಿ. ಸೋಮಣ್ಣ ಮತ್ತು ಶ್ರೀ ರಾಜ್ ಭೂಷಣ್ ಚೌಧರಿ ಅವರ ಸಮ್ಮುಖದಲ್ಲಿ. ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯದರ್ಶಿ ಶ್ರೀ ಅಶೋಕ್ ಕೆ.ಕೆ. ಮೀನಾ, ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ಅರ್ಚನಾ ವರ್ಮಾ ಮತ್ತು ಕೇಂದ್ರ ಜಲ ಆಯೋಗದ ಅಧ್ಯಕ್ಷರಾದ ಶ್ರೀ ಅನುಪಮ್ ಪ್ರಸಾದ್, ಭಾರತ ಮತ್ತು ವಿದೇಶಗಳ ಪ್ರತಿನಿಧಿಗಳು, ರಾಯಭಾರಿಗಳು, ಜಾಗತಿಕ ನಾಯಕರು, ಹಿರಿಯ ಅಧಿಕಾರಿಗಳು, ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು, ತಜ್ಞರು, ಸಂಶೋಧಕರು, ಉದ್ಯಮ, ನಾವೀನ್ಯಕಾರರು ಮತ್ತು ಇತರೆ ಪಾಲುದಾರರು ಉಪಸ್ಥಿತರಿದ್ದರು.

ಭಾರತ ಸರ್ಕಾರದ ಜಲಶಕ್ತಿ ಸಚಿವಾಲಯವು 2026 ಸೆಪ್ಟೆಂಬರ್ 22ರಿಂದ 26ರ ವರೆಗೆ ಆಯೋಜಿಸಿರುವ ಈ 5 ದಿನಗಳ ಕಾರ್ಯಕ್ರಮವು "ಹವಾಮಾನ ಹೊಂದಾಣಿಕೆಯ ನೀರಿನ ನಿರ್ವಹಣೆ" ಎಂಬ ವಿಷಯದ ಮೇಲೆ ನಡೆಯುತ್ತಿದೆ. 9ನೇ ಆವೃತ್ತಿಯ ಈ ಕಾರ್ಯಕ್ರಮವು ಒಂದು ಪ್ರಮುಖ ಮೈಲಿಗಲ್ಲನ್ನು ಗುರುತಿಸುತ್ತದೆ. ಏಕೆಂದರೆ ಈ ಕಾರ್ಯಕ್ರಮವು ಹಿಂದಿನ ಆವೃತ್ತಿಗಳಲ್ಲಿ ಇಂಡಿಯಾ ಜಲ ಸಪ್ತಾಹವಾಗಿ ಆಯೋಜಿಸಲ್ಪಟ್ಟಿತ್ತು, ಇದು ಇದೀಗ ಭಾರತ ಅಂತಾರಾಷ್ಟ್ರೀಯ ಜಲ ಸಪ್ತಾಹವಾಗಿ ವಿಕಸನಗೊಂಡಿದೆ, ಇದು ಬೆಳೆಯುತ್ತಿರುವ ಜಾಗತಿಕ ತೊಡಗಿಸಿಕೊಳ್ಳುವಿಕೆ ಮತ್ತು ಹಂಚಿಕೆಯ ನೀರಿನ ಸವಾಲುಗಳನ್ನು ಪರಿಹರಿಸುವಲ್ಲಿ ಅಂತಾರಾಷ್ಟ್ರೀಯ ಸಹಕಾರದ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ಪ್ರತಿಬಿಂಬಿಸುತ್ತದೆ.

ನೆದರ್ ಲ್ಯಾಂಡ್ಸ್ ಮತ್ತು ಜರ್ಮನಿ ಪಾಲುದಾರ ರಾಷ್ಟ್ರಗಳಾಗಿ ಭಾಗವಹಿಸಿದ್ದು, 14 ರಾಜ್ಯಗಳು ಪಾಲುದಾರರಾಗಿ ಮತ್ತು 2 ಕೇಂದ್ರ ಸಚಿವಾಲಯಗಳು ಪಾಲುದಾರ ಸಚಿವಾಲಯಗಳಾಗಿ ಭಾಗವಹಿಸುತ್ತಿವೆ. ಈ ಕಾರ್ಯಕ್ರಮವು ಸರ್ಕಾರಗಳು, ಅಂತಾರಾಷ್ಟ್ರೀಯ ಮತ್ತು ಬಹುಪಕ್ಷೀಯ ಸಂಸ್ಥೆಗಳು, ಸಂಶೋಧನೆ ಮತ್ತು ಶೈಕ್ಷಣಿಕ ಸಂಸ್ಥೆಗಳು, ಕೈಗಾರಿಕೆ, ನಾಗರಿಕ ಸಮಾಜ, ನವೋದ್ಯಮಗಳು, ನಾವೀನ್ಯಕಾರರು ಮತ್ತು ಯುವ ವೃತ್ತಿಪರರನ್ನು ಒಟ್ಟುಗೂಡಿಸುತ್ತದೆ. ಇದು ನೀತಿ ಸಂವಾದ, ತಂತ್ರಜ್ಞಾನ ಪ್ರದರ್ಶನ, ಜ್ಞಾನ ವಿನಿಮಯ, ನೆಟ್‌ವರ್ಕಿಂಗ್, ವ್ಯಾಪಾರ ಸಂಬಂಧಗಳು ಮತ್ತು ಹೊಸ ಸಹಭಾಗಿತ್ವಗಳಿಗೆ ಸಮಗ್ರ ವೇದಿಕೆ ಒದಗಿಸುತ್ತದೆ.

ಉದ್ಘಾಟನಾ ಅಧಿವೇಶನ(ಕಲಾಪ) ಉದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿ, ಹವಾಮಾನ ಬದಲಾವಣೆ, ನಗರೀಕರಣ ಮತ್ತು ನೈಸರ್ಗಿಕ ಸಂಪನ್ಮೂಲಗಳ ಮೇಲಿನ ಹೆಚ್ಚುತ್ತಿರುವ ಒತ್ತಡದಿಂದ ನೀರಿನ ಭದ್ರತೆಗೆ ಸವಾಲುಗಳು ಹೆಚ್ಚುತ್ತಿವೆ. ನಾವೀನ್ಯತೆ, ದಕ್ಷತೆ ಮತ್ತು ಸಾಮೂಹಿಕ ಕ್ರಿಯೆಯ ಮೂಲಕ ನೀರಿನ ಸಮಗ್ರ ಮತ್ತು ಸುಸ್ಥಿರ ನಿರ್ವಹಣೆ ಮಾಡಬೇಕಾದ ಅಗತ್ಯವಿದೆ ಎಂದು ಕರೆ ನೀಡಿದರು. ನೀರಿನ ಲಭ್ಯತೆಯಲ್ಲಿನ ಪ್ರಾದೇಶಿಕ ಮತ್ತು ತಾತ್ಕಾಲಿಕ ವ್ಯತ್ಯಾಸಗಳನ್ನು ಪರಿಹರಿಸುವಲ್ಲಿ ನದಿಗಳ ಜೋಡಣೆಯ ನಿರ್ಣಾಯಕ ಪಾತ್ರವಿದೆ. ಜಲಶಕ್ತಿ ಸಚಿವಾಲಯ ಕೈಗೊಂಡ ವಿವಿಧ ಮಧ್ಯಸ್ಥಿಕೆಗಳು ಮತ್ತು ಮಾಡಿದ ಸಾಧನೆಗಳನ್ನು ಶ್ಲಾಘಿಸಿದರು. ಜಾರ್ಖಂಡ್ ರಾಜ್ಯಪಾಲರಾಗಿ ತಮ್ಮ ಅಧಿಕಾರಾವಧಿಯನ್ನು ನೆನಪಿಸಿಕೊಂಡ ಉಪರಾಷ್ಟ್ರಪತಿ, ಜಲಜೀವನ್ ಮಿಷನ್ ಅಡಿ, ರಾಜ್ಯದಲ್ಲಿ ಗ್ರಾಮೀಣ ನಲ್ಲಿ ನೀರಿನ ವ್ಯಾಪ್ತಿಯು ಸುಮಾರು 7% ರಿಂದ 37%ಗೆ ಏರಿಕೆ ಆಗಿದೆ. ಗ್ರಾಮೀಣ ಮನೆಗಳಲ್ಲಿ ಕುಡಿಯುವ ನೀರಿನ ಪ್ರವೇಶವನ್ನು ಗಮನಾರ್ಹವಾಗಿ ವಿಸ್ತರಿಸಿದ ಪರಿವರ್ತನೀಯ ಕಾರ್ಯಕ್ರಮ ಎಂದು ಅವರು ಮಿಷನ್ ಅನ್ನು ಬಣ್ಣಿಸಿದರು.

ಅಂತಾರಾಜ್ಯ ನದಿ ನೀರಿನ ಹಂಚಿಕೆ ಮತ್ತು ನಿರ್ವಹಣೆಗಾಗಿ ರಾಜ್ಯಗಳ ನಡುವಿನ ಸಹಕಾರಿ ವ್ಯವಸ್ಥೆಗಳ ಮಹತ್ವವನ್ನು ಅವರು ಎತ್ತಿ ಹಿಡಿದರು. ಜ್ಞಾನ ವಿನಿಮಯ, ಪಾಲುದಾರಿಕೆಗಳನ್ನು ಬಲಪಡಿಸಲು ಮತ್ತು ಚರ್ಚೆಗಳನ್ನು ಸಕೀರ್ಣ ಕಾರ್ಯವಾಗಿ ಪರಿವರ್ತಿಸಲು ಐಐಡಬ್ಲ್ಯುಡಬ್ಲ್ಯು-2026 ಅನ್ನು ಬಳಸಿಕೊಳ್ಳುವಂತೆ ಅವರು ನೆರೆದಿದ್ದ ಎಲ್ಲಾ ಪ್ರತಿನಿಧಿಗಳಿಗೆ ಕರೆ ನೀಡಿದರು. "ಸುಸ್ಥಿರ ನಗರ ನದಿ ನಿರ್ವಹಣಾ ಮಾರ್ಗಸೂಚಿ", "ಎಐ ಮತ್ತು ಎಂಎಲ್ ಚಂಚ್ರಜ್ಞಾನ ಚಾಲಿತ ಸಂಯೋಜಿತ ಜಲಾಶಯದ ಕೆಸರು ನಿರ್ವಹಣೆ" ಎಂಬ 2 ಪ್ರಮುಖ ಪ್ರಕಟಣೆಗಳನ್ನು ಸಹ ಅವರು ಬಿಡುಗಡೆ ಮಾಡಿದರು.

ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಸಿ ಆರ್ ಪಾಟೀಲ್ ಮಾತನಾಡಿ, ಹವಾಮಾನ ಬದಲಾವಣೆಯ ಹಲವು ಪರಿಣಾಮಗಳು ನೀರಿನ ಮೂಲಕ ಹೆಚ್ಚಾಗಿ ಅನುಭವಕ್ಕೆ ಬರುತ್ತಿರುವುದರಿಂದ, ನೀರಿನ ಸುರಕ್ಷತೆ ಮತ್ತು ಹವಾಮಾನ ಚೇತರಿಕೆಯು ಜೊತೆಜೊತೆಯಲ್ಲಿ ಸಾಗಬೇಕು. ಭಾರತದ ಜಲ ದೃಷ್ಟಿ @2047 ಮತ್ತು ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ, ಜಲಜೀವನ್ ಮಿಷನ್, ಜಲ ಸಂಚಯ್ ಜನ್ ಭಾಗಿದಾರಿ, ನಮಾಮಿ ಗಂಗೆ, ಅಟಲ್ ಭುಜಲ್ ಯೋಜನೆ, ನಕ್ವಿಮ್, ಕೆನ್-ಬೆಟ್ವಾ ಲಿಂಕ್ ಯೋಜನೆ, ಅಣೆಕಟ್ಟು ಪುನರ್ವಸತಿ ಮತ್ತು ಸುಧಾರಣಾ ಯೋಜನೆ ಮತ್ತು ರಾಷ್ಟ್ರೀಯ ಜಲವಿಜ್ಞಾನ ಯೋಜನೆ ಸೇರಿದಂತೆ ಪ್ರಮುಖ ಮಧ್ಯಸ್ಥಿಕೆಗಳನ್ನು ಅವರು ಪ್ರಸ್ತಾಪಿಸಿದರು. ಜನರ ಭಾಗವಹಿಸುವಿಕೆಯು ನಮ್ಮ ದೊಡ್ಡ ಶಕ್ತಿಯಾಗಿದ್ದು, ಅಲ್ಲಿ ನಾವು ಪರಸ್ಪರ ಕಲಿಯುತ್ತೇವೆ ಮತ್ತು ನೀರಿನ ನಿರ್ವಹಣೆಯನ್ನು ಮುನ್ನಡೆಸಲು ಅನುಭವಗಳನ್ನು ಹಂಚಿಕೊಳ್ಳುತ್ತೇವೆ ಎಂದು ಸಚಿವರು ಹೇಳಿದರು. ಸಂಶೋಧನೆ ಮತ್ತು ಅಭಿವೃದ್ಧಿ, ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ, ದೂರಸ್ಥ ಸಂವೇದನೆ, ಜಿಐಎಸ್, ನೈಜ-ಸಮಯದ ಸಂವೇದಕಗಳು ಮತ್ತು ಮುಂದುವರಿದ ಮಾಡೆಲಿಂಗ್‌ನ ಪರಿವರ್ತಕ ಸಾಮರ್ಥ್ಯವನ್ನು ಅವರು ಪ್ರಸ್ತಾಪಿಸಿದರು, ಆದರೆ ತಂತ್ರಜ್ಞಾನವು ಬಲಿಷ್ಠವಾದ ಸಂಸ್ಥೆಗಳು, ಸ್ಥಳೀಯ ಜ್ಞಾನ ಮತ್ತು ಸಮುದಾಯದ ಭಾಗವಹಿಸುವಿಕೆಯೊಂದಿಗೆ ಒಟ್ಟಾಗಿ ಕೆಲಸ ಮಾಡಬೇಕು ಎಂದು ಅವರು ಒತ್ತಿ ಹೇಳಿದರು.

ಸಭೆಯ ಪ್ರತಿನಿಧಿಗಳನ್ನು ಸ್ವಾಗತಿಸಿದ ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ಅರ್ಚನಾ ವರ್ಮಾ, ಐಐಡಬ್ಲ್ಯುಡಬ್ಲ್ಯು ಸಂವಾದವು ಜ್ಞಾನ ಹಂಚಿಕೆ, ತಂತ್ರಜ್ಞಾನ ಪ್ರದರ್ಶನ ಮತ್ತು ಪಾಲುದಾರಿಕೆಗಳಿಗೆ ಪ್ರಮುಖ ಬಹುಶಿಸ್ತೀಯ ಜಾಗತಿಕ ವೇದಿಕೆಯಾಗಿ ವಿಕಸನಗೊಂಡಿದೆ ಎಂದು ಹೇಳಿದರು. ಹವಾಮಾನ ಚೇತರಿಕೆಯನ್ನು ಜಲ ಸಂಪನ್ಮೂಲಗಳು ಮತ್ತು ಮೂಲಸೌಕರ್ಯಗಳ ಯೋಜನೆ, ಹಣಕಾಸು, ಅಭಿವೃದ್ಧಿ, ಕಾರ್ಯಾಚರಣೆ ಮತ್ತು ನಿರ್ವಹಣೆಯಲ್ಲಿ ಸಂಯೋಜಿಸುವ ಅಗತ್ಯವಿದೆ. ಚರ್ಚೆಗಳು ಕಾರ್ಯಸಾಧು ಶಿಫಾರಸುಗಳು, ಅಳೆಯಬಹುದಾದ ಪರಿಹಾರಗಳು, ಅತ್ಯುತ್ತಮ ಅಭ್ಯಾಸಗಳ ವಿನಿಮಯ ಮತ್ತು ಬಲಿಷ್ಠ ಪಾಲುದಾರಿಕೆಗಳಿಗೆ ಕಾರಣವಾಗುತ್ತವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಉದ್ಘಾಟನಾ ಕಲಾಪವು ತಳಮಟ್ಟದ ಜಲ ಯೋಧರ ಕೊಡುಗೆಯನ್ನು ಗುರುತಿಸಿತು. ಮಧ್ಯಪ್ರದೇಶದ ಛಿಂದ್ವಾರಾದ ಶ್ರೀಮತಿ ರಾಮ್ ಕುಮಾರಿ ಅವರನ್ನು ಕುಡಿಯುವ ನೀರಿನ ಲಭ್ಯತೆ ಮತ್ತು ನೀರಿನ ಸಂರಕ್ಷಣೆಗಾಗಿ ಮಹಿಳೆಯರು ಮತ್ತು ಸಮುದಾಯಗಳನ್ನು ಸಜ್ಜುಗೊಳಿಸಿದ್ದಕ್ಕಾಗಿ ಗುರುತಿಸಲಾಯಿತು, ಇದರಲ್ಲಿ ಸುಮಾರು 225 ಕುಟುಂಬಗಳಿಗೆ ಕುಡಿಯುವ ನೀರಿನ ಪ್ರವೇಶ ಸುಧಾರಿಸಲು ಸಹಾಯ ಮಾಡಿದ ಪ್ರಯತ್ನಗಳು ಸೇರಿವೆ. ನೀರಿನ ಸಂರಕ್ಷಣೆ, ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ ಸುಸ್ಥಿರತೆಯ ಕುರಿತು ಎರಡು ದಶಕಗಳಿಗೂ ಹೆಚ್ಚು ಕಾಲ ಕೆಲಸ ಮಾಡಿರುವ ಮಹಾರಾಷ್ಟ್ರದ ಗಡ್ಚಿರೋಲಿಯ ಶ್ರೀ ಸೀತಾರಾಮ್ ಮಾದವಿ, ಸುಧಾರಿತ ಅಂತರ್ಜಲ ಲಭ್ಯತೆ ಮತ್ತು ನೀರಾವರಿ ಪ್ರವೇಶಕ್ಕೆ ಕಾರಣವಾದ ಬಾವಿಗಳು, ಕೃಷಿ ಕೊಳಗಳು ಮತ್ತು ಇತರೆ ನೀರಿನ ಸಂರಕ್ಷಣಾ ಮಧ್ಯಸ್ಥಿಕೆಗಳನ್ನು ಅಭಿವೃದ್ಧಿಪಡಿಸಿದ್ದಕ್ಕಾಗಿ ಗುರುತಿಸಲಾಯಿತು.

ಉದ್ಘಾಟನಾ ಅಧಿವೇಶನದ ನಂತರ, "ಹವಾಮಾನ ಹೊಂದಾಣಿಕೆಯ ನೀರು ನಿರ್ವಹಣೆ ಕುರಿತ ದೇಶದ ದೃಷ್ಟಿಕೋನಗಳು" ಎಂಬ ವಿಷಯ ಕುರಿತು ಉನ್ನತ ಮಟ್ಟದ ಸಚಿವರ ಸಮಗ್ರ ಸಭೆಯು ಭಾರತ ಮತ್ತು ಅಂತಾರಾಷ್ಟ್ರೀಯ ಪಾಲುದಾರರ ದೃಷ್ಟಿಕೋನಗಳನ್ನು ಒಟ್ಟುಗೂಡಿಸಿತು. ಅಧಿವೇಶನವು ಪ್ರತಿಕ್ರಿಯಾತ್ಮಕ ನೀರಿನ ನಿರ್ವಹಣೆಯನ್ನು ಮೀರಿ ಅಪಾಯಗಳನ್ನು ನಿರೀಕ್ಷಿಸುವ, ಬದಲಾವಣೆಗೆ ಹೊಂದಿಕೊಳ್ಳುವ ಮತ್ತು ಹವಾಮಾನ ವೈಪರೀತ್ಯಗಳಿಂದ ಚೇತರಿಸಿಕೊಳ್ಳುವ ಸಾಮರ್ಥ್ಯವಿರುವ ವ್ಯವಸ್ಥೆಗಳ ಕಡೆಗೆ ಸಾಗುವ ಅಗತ್ಯತೆಯ ಮೇಲೆ ಗಮನ ಕೇಂದ್ರೀಕರಿಸಿತು. ಚರ್ಚೆಗಳು ಹವಾಮಾನ-ಮಾಹಿತಿ ಮೂಲಸೌಕರ್ಯ, ಪ್ರವಾಹ ಮತ್ತು ಬರ ನಿರ್ವಹಣೆ, ಡಿಜಿಟಲ್ ಜಲವಿಜ್ಞಾನ ಮತ್ತು ಮುಂಚಿನ ಎಚ್ಚರಿಕೆ, ಪ್ರಕೃತಿ ಆಧಾರಿತ ಪರಿಹಾರಗಳು, ನೀರಿನ ಬಳಕೆಯ ದಕ್ಷತೆ, ಸಾಂಸ್ಥಿಕ ಸಾಮರ್ಥ್ಯ ಮತ್ತು ಅಂತಾರಾಷ್ಟ್ರೀಯ ಸಹಕಾರವನ್ನು ಒಳಗೊಂಡಿವೆ.

ಸಚಿವರ ಸಭೆ ಉದ್ಘಾಟಿಸಿದ ಶ್ರೀ ಸಿ ಆರ್ ಪಾಟೀಲ್ ಮಾತನಾಡಿ, ವೆನೆಜುವೆಲಾ, ನೆದರ್ ಲ್ಯಾಂಡ್ಸ್ ಮತ್ತು ಡೆನ್ಮಾರ್ಕ್ ಸೇರಿದಂತೆ ವಿವಿಧ ದೇಶಗಳೊಂದಿಗೆ ಭಾರತ ಹೊಂದಿರುವ ಸಹಕಾರವನ್ನು ಪ್ರಸ್ತಾಪಿಸಿದರು. ವಿಶ್ವ ಬ್ಯಾಂಕ್ ಮತ್ತು ಐಯುಸಿಎನ್ ನಂತಹ ಬಹುಪಕ್ಷೀಯ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಕೃತಕ ಬುದ್ಧಿಮತ್ತೆ, ಯಂತ್ರ ಕಲಿಕೆ, ಮಾಹಿತಿ ತಂತ್ರಜ್ಞಾನ, ದೂರಸ್ಥ ಸಂವೇದನೆ, ಜಂಟಿ ಸಂಶೋಧನೆ, ಸಾಮರ್ಥ್ಯ ವೃದ್ಧಿ ಮತ್ತು ಪ್ರದರ್ಶನ ಯೋಜನೆಗಳಲ್ಲಿ ಆಳವಾದ ಸಹಯೋಗ ಹೊಂದುವ ಅಗತ್ಯವಿದೆ  ಎಂದು ಅವರು ಕರೆ ನೀಡಿದರು, ಜ್ಞಾನ ವಿನಿಮಯದಿಂದ ಜ್ಞಾನವನ್ನು ಒಟ್ಟಿಗೆ ಸೃಷ್ಟಿಸುವವರೆಗೆ ಮತ್ತು ನೀರಿನ ಬಿಕ್ಕಟ್ಟುಗಳಿಗೆ ಪ್ರತಿಕ್ರಿಯಿಸುವುದರಿಂದ ಬಿಕ್ಕಟ್ಟುಗಳು ಸಂಭವಿಸುವ ಮೊದಲು ಚೇತರಿಕೆ  ನಿರ್ಮಿಸುವ ತನಕ ನಿರಂತರ ಸಾಗುವ ಅಗತ್ಯ ಎಂದು ಅವರು ಒತ್ತಿ ಹೇಳಿದರು.

ಸಚಿವರ ಸಭೆ ಉದ್ದೇಶಿಸಿ ಮಾತನಾಡಿದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯದರ್ಶಿ ಶ್ರೀ ಅಶೋಕ್ ಕೆ.ಕೆ. ಮೀನಾ, ಜಲಜೀವನ್ ಮಿಷನ್ ಅಡಿ, ನೀರಿನ ಚೇತರಿಕೆಯು ಕೇವಲ ಮೂಲಸೌಕರ್ಯ ಸೃಷ್ಟಿಸುವುದಲ್ಲ; ಇದು ಕಾಲಾನಂತರದಲ್ಲಿ ವಿಶ್ವಾಸಾರ್ಹ ಮತ್ತು ಸುಸ್ಥಿರ ನೀರಿನ ಸೇವೆಗಳನ್ನು ಖಚಿತಪಡಿಸಿಕೊಳ್ಳುವುದರ ಬಗ್ಗೆ ಆಗಿದೆ. ಯೋಜನೆ, ಕಾರ್ಯಾಚರಣೆ ಮತ್ತು ದೀರ್ಘಕಾಲೀನ ಸುಸ್ಥಿರತೆಯಲ್ಲಿ ಸಮುದಾಯಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂಬುದನ್ನು ನಾವು ಕಲಿತಿದ್ದೇವೆ. ಪರಿಣಾಮಕಾರಿ ಬೂದು ನೀರಿನ ನಿರ್ವಹಣೆ, ಅಂತರ್ಜಲ ಮರುಪೂರಣ ಮತ್ತು ನೀರಿನ ಮೂಲಗಳ ರಕ್ಷಣೆಯಿಂದ ಇದನ್ನು ಬೆಂಬಲಿಸಬೇಕು ಎಂದು ಅವರು ಹೇಳಿದರು. ನಿರ್ಧಾರ ಬೆಂಬಲ ವ್ಯವಸ್ಥೆಯ ಮೂಲಕ, ಇಲಾಖೆಯು ಜಿಲ್ಲೆಗಳು ಮತ್ತು ಪಂಚಾಯತ್‌ಗಳು ದುರ್ಬಲ ಮೂಲಗಳನ್ನು ಗುರುತಿಸಲು ಮತ್ತು ಅಂತಹ ಮಧ್ಯಸ್ಥಿಕೆಗಳಿಗೆ ಆದ್ಯತೆ ನೀಡಲು ಅನುವು ಮಾಡಿಕೊಡುತ್ತಿದೆ. ಪ್ರತಿ ಹನಿ ನೀರಿಗೂ ಒಂದು ಪ್ರಯಾಣವಿದೆ, ಪ್ರತಿ ಹನಿಗೂ ಮೌಲ್ಯವಿದೆ; ಈ ಪ್ರಯಾಣ ಸುಸ್ಥಿರವಾಗಿರುವುದನ್ನು ಮತ್ತು ಭವಿಷ್ಯದ ಪೀಳಿಗೆಗೆ ಜಲವಿಜ್ಞಾನದ ಆವರ್ತನ ಮುರಿಯದೆ ಉಳಿಯುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ವೆನೆಜುವೆಲಾದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಉಪ ಸಚಿವೆ ಶ್ರೀಮತಿ ಯೆಸೇನಿಯಾ ಕೆರೊಲಿನಾ ಮೊರೆನೊ ಗೆರ್ಡೆಲ್, ವಿಶೇಷವಾಗಿ ಭೂಕಂಪಗಳಂತಹ ನೈಸರ್ಗಿಕ ವಿಕೋಪಗಳ ಸಮಯದಲ್ಲಿ ನೀರಿನ ಮೂಲಗಳನ್ನು ರಕ್ಷಿಸುವ ನಿರ್ಣಾಯಕ ಮಹತ್ವವಿದೆ. ನೀರು ಪಡೆಯುವುದು ಮೂಲಭೂತ ಮಾನವ ಹಕ್ಕು. ನೀರು ಜೀವನ, ಶಾಂತಿ ಮತ್ತು ಸಮೃದ್ಧಿಯ ಅಗತ್ಯ ಮೂಲವಾಗಿದೆ ಎಂದರು. ಭಾರತದಲ್ಲಿನ ಡ್ಯಾನಿಶ್ ರಾಯಭಾರಿ ಎಚ್.ಇ. ರಾಸ್ಮಸ್ ಅಬಿಲ್ಡ್‌ಗಾರ್ಡ್ ಕ್ರಿಸ್ಟೆನ್ಸೆನ್, ಭಾರತದಲ್ಲಿನ ನೆದರ್‌ಲ್ಯಾಂಡ್ಸ್ ಸಾಮ್ರಾಜ್ಯದ ರಾಯಭಾರಿ ಶ್ರೀಮತಿ ಮಾರಿಸಾ ಗೆರಾರ್ಡ್ಸ್, ವಿಶ್ವಬ್ಯಾಂಕಿನ ದಕ್ಷಿಣ ಏಷ್ಯಾ ಪ್ರಾದೇಶಿಕ ನಿರ್ದೇಶಕಿ ಶ್ರೀಮತಿ ಮಾರಾ ಕೆ. ವಾರ್ವಿಕ್, ವಾಟರ್ ಗ್ಲೋಬಲ್ ನಿರ್ದೇಶಕ ಐಯುಸಿಎನ್ ಶ್ರೀ ಜೇಮ್ಸ್ ಡಾಲ್ಟನ್ ಅವರು ಸಚಿವರ ಸಭೆಯಲ್ಲಿ ಭಾಗವಹಿಸಿದ್ದರು.

ಮೊದಲ ದಿನದ ಕಾರ್ಯಕ್ರಮದಲ್ಲಿ ಸೆಪ್ಟೆಂಬರ್ 22ರಿಂದ 25ರ ವರೆಗೆ ಆಯೋಜಿಸಲಾಗಿರುವ ಅಂತಾರಾಷ್ಟ್ರೀಯ ಪ್ರದರ್ಶನದ ಉದ್ಘಾಟನೆ ನೆರವೇರಿತು. ಈ ಪ್ರದರ್ಶನವು ಸರ್ಕಾರಗಳು, ತಂತ್ರಜ್ಞಾನ ಪೂರೈಕೆದಾರರು, ಸಂಶೋಧನಾ ಸಂಸ್ಥೆಗಳು, ಕೈಗಾರಿಕೆಗಳು, ಸ್ಟಾರ್ಟಪ್‌ಗಳು ಮತ್ತು ಇತರೆ ಪಾಲುದಾರರಿಗೆ ಸುಸ್ಥಿರ ಮತ್ತು ಹವಾಮಾನ-ಹೊಂದಾಣಿಕೆಯ ನೀರಿನ ನಿರ್ವಹಣೆಗೆ ತಂತ್ರಜ್ಞಾನಗಳು, ಉತ್ಪನ್ನಗಳು ಮತ್ತು ಪ್ರಾಯೋಗಿಕ ಪರಿಹಾರಗಳನ್ನು ಪ್ರದರ್ಶಿಸಲು ಸಮರ್ಪಿತವಾದ ಇಂಟರ್ಫೇಸ್ ಒದಗಿಸುತ್ತದೆ.

ಮಧ್ಯಾಹ್ನದ ನಂತರ, 'ನೀರು, ಆಹಾರ ಮತ್ತು ಶಕ್ತಿಯ ಸಮಗ್ರ ನಿರ್ವಹಣೆ' ಕುರಿತಾದ ಜಾಗತಿಕ ಜಲ ನಾಯಕರ ಮೊದಲ ಸಭೆಯು ನೀರು, ಆಹಾರ ಮತ್ತು ಇಂಧನ ವ್ಯವಸ್ಥೆಗಳ ಪರಸ್ಪರ ಅವಲಂಬನೆ ಮತ್ತು ಹವಾಮಾನ-ಹೊಂದಾಣಿಕೆ ಅಭಿವೃದ್ಧಿಗಾಗಿ ಸಮಗ್ರ ಜಲ ಆಹಾರ ಇಂಧನ ಸಂಬಂಧದ ಮಹತ್ವಕ್ಕೆ ಒತ್ತು ನೀಡಿತು. ಚರ್ಚೆಗಳು ನೀರು ಮತ್ತು ಸಂಪನ್ಮೂಲ ಸುರಕ್ಷತೆ, ನೀರಾವರಿ ದಕ್ಷತೆ ಮತ್ತು ನೀರಿನ ಉತ್ಪಾದಕತೆ, ಸೂಕ್ಷ್ಮ ನೀರಾವರಿ, ಸೌರಶಕ್ತಿ ಚಾಲಿತ ನೀರಾವರಿ, ಡಿಜಿಟಲ್ ಮೇಲ್ವಿಚಾರಣೆ, ನಿಖರ ಕೃಷಿ, ದತ್ತಾಂಶ-ಚಾಲಿತ ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಸಂಸ್ಥೆಗಳ ನಡುವೆ ಬಲವಾದ ಸಮನ್ವಯದ ಮೇಲೆ ಗಮನ ಕೇಂದ್ರೀಕರಿಸಿದವು.

ಜಾಗತಿಕ ನದಿ ನಗರಗಳ ಒಕ್ಕೂಟ ಕುರಿತಾದ ಜಾಗತಿಕ ಜಲ ನಾಯಕರ 2ನೇ ಸಭೆಯು ನಗರ ನದಿಗಳ ಸುಸ್ಥಿರ ನಿರ್ವಹಣೆ ಮತ್ತು ಹವಾಮಾನ-ಹೊಂದಾಣಿಕೆಯ ನದಿ ನಗರಗಳನ್ನು ನಿರ್ಮಿಸುವ  ಮೇಲೆ ಗಮನ ಕೇಂದ್ರೀಕರಿಸಿತು. ಸಮಗ್ರ ನೀತಿ ಮಾರ್ಗಸೂಚಿಗಳು, ಜಾಗತಿಕ ಜ್ಞಾನ ವಿನಿಮಯ, ನಗರ ನದಿ ನಿರ್ವಹಣಾ ಯೋಜನೆಗಳು, ತಾಂತ್ರಿಕ ಮತ್ತು ಸಾಂಸ್ಥಿಕ ನಾವೀನ್ಯತೆಗಳು, ಅಭಿವೃದ್ಧಿ ಸಂಸ್ಥೆಗಳು, ಸಾರ್ವಜನಿಕ ಮತ್ತು ಖಾಸಗಿ ವಲಯದ ಪರಿಹಾರ ಪೂರೈಕೆದಾರರು ನದಿ ಕೇಂದ್ರಿತ ನಗರ ಅಭಿವೃದ್ಧಿಯಲ್ಲಿ ಸಹಕರಿಸಲು ಇರುವ ಅವಕಾಶಗಳನ್ನು ಚರ್ಚೆಗಳು ಎತ್ತಿ ತೋರಿಸಿದವು. ಕಲಾಪವು 5 ನಗರ ನದಿ ನಿರ್ವಹಣಾ ಯೋಜನೆಗಳನ್ನು ಸಹ ಪ್ರಾರಂಭಿಸಿತು.

ಐಐಡಬ್ಲ್ಯುಡಬ್ಲ್ಯು-2026ರ ಜತೆಗೆ ಏಕಕಾಲದಲ್ಲಿ ಆಯೋಜಿಸಲಾಗುತ್ತಿರುವ 2ನೇ ಅಂತಾರಾಷ್ಟ್ರೀಯ ನೀರು, ನೈರ್ಮಲ್ಯ ಮತ್ತು ಸ್ವಚ್ಛತೆ(WASH) ಸಮ್ಮೇಳನ 2026, ಹವಾಮಾನ ಬದಲಾವಣೆಯ ಸಂದರ್ಭದಲ್ಲಿ ಕುಡಿಯುವ ನೀರು, ನೈರ್ಮಲ್ಯದ ಮೇಲಿನ ಗಮನವನ್ನು ಮತ್ತಷ್ಟು ಬಲಪಡಿಸಿತು. ಹವಾಮಾನ-ಹೊಂದಾಣಿಕೆಯ WASH ಸೇವೆಗಳು, ಕುಡಿಯುವ ನೀರಿನ ಮೂಲಗಳ ಸುಸ್ಥಿರತೆ, ನೀರಿನ ಗುಣಮಟ್ಟ, ನೈರ್ಮಲ್ಯ, ತ್ಯಾಜ್ಯ ನೀರಿನ ನಿರ್ವಹಣೆ, ತಂತ್ರಜ್ಞಾನ ಮತ್ತು ಸಮುದಾಯ ಭಾಗವಹಿಸುವಿಕೆಯ ಕುರಿತು ಚರ್ಚಿಸಲು ಈ ಸಮ್ಮೇಳನವು ನೀತಿ ನಿರೂಪಕರು, ವೈದ್ಯರು, ತಜ್ಞರು, ಅಭಿವೃದ್ಧಿ ಪಾಲುದಾರರು ಮತ್ತು ಇತರೆ ಪಾಲುದಾರರನ್ನು ಒಟ್ಟುಗೂಡಿಸಿತು. ಸುಸ್ಥಿರ ಮತ್ತು ಹೊಂದಾಣಿಕೆಯ WASH ಸೇವೆಗಳನ್ನು ಸಾಧಿಸಲು ಮತ್ತು ಸುಸ್ಥಿರ ಅಭಿವೃದ್ಧಿ ಗುರಿ 6ರ ಉದ್ದೇಶಗಳನ್ನು ಮುನ್ನಡೆಸಲು ಅನುಭವಗಳು, ನಾವೀನ್ಯತೆಗಳು ಮತ್ತು ಅಳೆಯಬಹುದಾದ ಪರಿಹಾರಗಳನ್ನು ಹಂಚಿಕೊಳ್ಳಲು ಇದು ಪ್ರಮುಖ ವೇದಿಕೆ ಒದಗಿಸಿತು.

ಸಮ್ಮೇಳನದ ಭಾಗವಾಗಿ, ಹವಾಮಾನ-ಪ್ರತಿರೋಧಕ WASH ಸೇವಾ ವಿತರಣೆಯ ಪ್ರಮುಖ ಆಯಾಮಗಳನ್ನು ಒಳಗೊಂಡ 3 ವಿಷಯಾಧಾರಿತ ಕಲಾಪಗಳನ್ನು ಆಯೋಜಿಸಲಾಗಿತ್ತು. ಕಲಾಪಗಳು (i) ನೀರು ಸರಬರಾಜು ವ್ಯವಸ್ಥೆಗಳು: ಕಾರ್ಯಾಚರಣೆಗಳು ಮತ್ತು ನಿರ್ವಹಣೆ, ಮೂಲಸೌಕರ್ಯ ಮತ್ತು ಮೂಲ ಸುಸ್ಥಿರತೆ; (ii) ನೀರಿನ ಗುಣಮಟ್ಟ, ಸುರಕ್ಷತೆ ಮತ್ತು ಉದಯೋನ್ಮುಖ ಮಾಲಿನ್ಯಕಾರಕಗಳು; ಮತ್ತು (iii) ಹವಾಮಾನ ಚೇತರಿಕೆ, ಪ್ರಕೃತಿ ಆಧಾರಿತ ಪರಿಹಾರಗಳು ಮತ್ತು ನೈರ್ಮಲ್ಯದ ಮೇಲೆ ಗಮನ ಕೇಂದ್ರೀಕರಿಸಿದವು. ಈ ಚರ್ಚೆಗಳು ನೀತಿ ನಿರೂಪಕರು, ವೃತ್ತಿಪರರು, ಸಂಶೋಧಕರು, ಅಭಿವೃದ್ಧಿ ಪಾಲುದಾರರು ಮತ್ತು ವಲಯ ತಜ್ಞರನ್ನು ಒಟ್ಟುಗೂಡಿಸಿ ಸುಸ್ಥಿರ ಮತ್ತು ಚೇತರಿಕೆಯ ವಾಶ್ ವ್ಯವಸ್ಥೆಗಳನ್ನು ಬಲಪಡಿಸುವ ಕುರಿತು ತಮ್ಮ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದರು.

ಔಪಚಾರಿಕ ಚರ್ಚೆಗಳ ಹೊರತಾಗಿ, ಭಾರತ ಅಂತಾರಾಷ್ಟ್ರೀಯ ಜಲ ಸಪ್ತಾಹ 2026 ಅನ್ನು ಸರ್ಕಾರಗಳು, ಅಂತಾರಾಷ್ಟ್ರೀಯ ಸಂಸ್ಥೆಗಳು, ಶೈಕ್ಷಣಿಕ, ಕೈಗಾರಿಕೆ, ನವೋದ್ಯಮಗಳು ಮತ್ತು ಸಮುದಾಯಗಳ ನಡುವಿನ ನೆಟ್‌ವರ್ಕಿಂಗ್, ಸಾಂಸ್ಥಿಕ ಮತ್ತು ವ್ಯವಹಾರ ಸಂಬಂಧಗಳು, ತಂತ್ರಜ್ಞಾನ ಪಾಲುದಾರಿಕೆಗಳು, ಜಂಟಿ ಸಂಶೋಧನೆ, ಜ್ಞಾನ ವಿನಿಮಯ, ಸಾಮರ್ಥ್ಯ ವೃದ್ಧಿ ಮತ್ತು ಸಹಯೋಗದ ವೇದಿಕೆಯಾಗಿ ವಿನ್ಯಾಸಗೊಳಿಸಲಾಗಿದೆ. ಸಚಿವರು ಮತ್ತು ಜಾಗತಿಕ ಜಲ ನಾಯಕರ ಸಮಗ್ರ ಸಭೆಗಳು, ದೇಶ ವೇದಿಕೆಗಳು, ಜಲ ನಾಯಕರ ವೇದಿಕೆಗಳು, ಅಭ್ಯಾಸಕಾರರ ವೇದಿಕೆಗಳು, ವಿಷಯಾಧಾರಿತ ವೇದಿಕೆಗಳು, ನವೋದ್ಯಮ ಮತ್ತು ಯುವ ವೇದಿಕೆಗಳು, ಅಂತಾರಾಷ್ಟ್ರೀಯ ಪ್ರದರ್ಶನ ಮತ್ತು ಏಕಕಾಲದಲ್ಲಿ ಆಯೋಜಿಸಲಾದ 2ನೇ ಅಂತಾರಾಷ್ಟ್ರೀಯ ವಾಶ್ ಸಮ್ಮೇಳನ-2026ರ ಮೂಲಕ, ಈ ಕಾರ್ಯಕ್ರಮವು ಸಂವಾದವನ್ನು ಕಾರ್ಯಸಾಧ್ಯ ಶಿಫಾರಸುಗಳು, ಶಾಶ್ವತ ಪಾಲುದಾರಿಕೆಗಳು ಮತ್ತು ಜಲ-ಸುರಕ್ಷತೆ ಮತ್ತು ಹವಾಮಾನ-ಹೊಂದಾಣಿಕೆಯ ಭವಿಷ್ಯಕ್ಕಾಗಿ ಅಳೆಯಬಹುದಾದ ಪರಿಹಾರಗಳಾಗಿ ಪರಿವರ್ತಿಸುವ ಗುರಿ ಹೊಂದಿದೆ.

"ಸುಸ್ಥಿರ ಜಲ ನಿರ್ವಹಣೆಗಾಗಿ ಜಂಟಿ ಇಂಡೋ-ಡ್ಯಾನಿಶ್ ಪರಿಹಾರಗಳು" ಎಂಬ ವಿಷಯ ಕುರಿತು ದೇಶ ವೇದಿಕೆ 1(ಕಂಟ್ರಿ ಫೋರಮ್ I) ಮೊದಲ ದಿನ ಮುಕ್ತಾಯವಾಯಿತು. ತಂತ್ರಜ್ಞಾನ-ಸಕ್ರಿಯಗೊಳಿಸಿದ, ದಕ್ಷತೆ-ಕೇಂದ್ರಿತ ಮತ್ತು ದತ್ತಾಂಶ-ಚಾಲಿತ ನೀರಿನ ಪರಿಹಾರಗಳನ್ನು ಅಭಿವೃದ್ಧಿಪಡಿಸುವಲ್ಲಿ ಅಂತಾರಾಷ್ಟ್ರೀಯ ಸಹಕಾರದ ಹೆಚ್ಚುತ್ತಿರುವ ಪಾತ್ರವನ್ನು ವೇದಿಕೆ ಪ್ರತಿಬಿಂಬಿಸಿತು. ನಗರ ಪ್ರವಾಹ ಮತ್ತು ಮಳೆ ನೀರು ನಿರ್ವಹಣೆ, ಹವಾಮಾನ-ಪ್ರೇರಿತ ವೈಪರೀತ್ಯಗಳು, ಡಿಜಿಟಲ್ ನಿರ್ಧಾರ-ಬೆಂಬಲ ವ್ಯವಸ್ಥೆಗಳು, ಬಾಹ್ಯಾಕಾಶ ತಂತ್ರಜ್ಞಾನ, ಡ್ರೋನ್‌ಗಳು, ರೊಬೊಟಿಕ್ಸ್ ಮತ್ತು ಸುಧಾರಿತ ಸಮೀಕ್ಷೆ ಪರಿಹಾರಗಳಲ್ಲಿನ ಅವಕಾಶಗಳನ್ನು ಇದು ಅನ್ವೇಷಿಸಿತು. ಗಡಿಯಾಚೆಗಿನ ಪಾಲುದಾರಿಕೆಗಳು, ಜಂಟಿ ಉದ್ಯಮಗಳು, ಸಹ-ನಾವೀನ್ಯತೆ, ಹೂಡಿಕೆ ಅವಕಾಶಗಳು ಮತ್ತು ಬಲವಾದ ಉದ್ಯಮ-ಶೈಕ್ಷಣಿಕ-ಸರ್ಕಾರದ ಸಂಪರ್ಕಗಳನ್ನು ಸುಗಮಗೊಳಿಸುವುದು ಕಾರ್ಯಕ್ರಮದ ಉದ್ದೇಶವಾಗಿತ್ತು.

ಉದ್ಘಾಟನಾ ದಿನದಂದು ನಡೆದ ಚರ್ಚೆಗಳು ಸಾಮಾನ್ಯ ಸಂದೇಶ ನೀಡಿದವು: ಹವಾಮಾನ-ಚೇತರಿಕೆಯ ನೀರಿನ ನಿರ್ವಹಣೆಯ ವಲಯಗಳು, ಸಂಸ್ಥೆಗಳು ಮತ್ತು ಭೌಗೋಳಿಕ ಗಡಿಗಳಲ್ಲಿ ಏಕೀಕರಣದ ಅಗತ್ಯವಿದೆ; ವಿಜ್ಞಾನ, ದತ್ತಾಂಶ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಹೆಚ್ಚಿನ ಬಳಕೆ; ಬಲವಾದ ಸಂಸ್ಥೆಗಳು ಮತ್ತು ಸಮುದಾಯ ಭಾಗವಹಿಸುವಿಕೆ ಮತ್ತು ನಿರಂತರ ಅಂತಾರಾಷ್ಟ್ರೀಯ ಸಹಕಾರಕ್ಕೆ ಒತ್ತು ನೀಡಿದವು. ಐಐಡಬ್ಲ್ಯುಡಬ್ಲ್ಯು-2026 ನೀತಿಯು ಅಭ್ಯಾಸದೊಂದಿಗೆ, ಸಂಶೋಧನೆಯನ್ನು ಅನುಷ್ಠಾನದೊಂದಿಗೆ ಮತ್ತು ನಾವೀನ್ಯತೆಯನ್ನು ಹೂಡಿಕೆಯೊಂದಿಗೆ ಸಂಪರ್ಕಿಸುವ ಮೂಲಕ ಈ ಕಾರ್ಯಸೂಚಿಯನ್ನು ಮುಂದಕ್ಕೆ ಕೊಂಡೊಯ್ಯಲು ಪ್ರಯತ್ನಿಸುತ್ತದೆ.

 

*****

 


(ಪ್ರಕಟಣೆ ಐ.ಡಿ.: 2313774) ವಿಸಿಟರ್ ಕೌಂಟರ್ : 9
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Tamil , Malayalam