ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
azadi ka amrit mahotsav

ಒಪೆಕ್-ಭಾರತ ಇಂಧನ ಸಂವಾದದ 7ನೇ ಉನ್ನತ ಮಟ್ಟದ ಸಭೆ


ಒಪೆಕ್-ಭಾರತ ಇಂಧನ ಸಂವಾದದ ಏಳನೇ ಉನ್ನತ ಮಟ್ಟದ ಸಭೆಯು 2026ರ ಸೆಪ್ಟೆಂಬರ್ 22 ರಂದು ಭಾರತದ ನವದೆಹಲಿಯಲ್ಲಿ ನಡೆಯಿತು

ಪ್ರಕಟಣಾ ದಿನಾಂಕ: 22 SEP 2026 2:38PM by PIB Bengaluru

ಭಾರತದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಘನತೆವೆತ್ತ ಹರ್ ದೀಪ್ ಸಿಂಗ್ ಪುರಿ ಮತ್ತು ಒಪೆಕ್ ಪ್ರಧಾನ ಕಾರ್ಯದರ್ಶಿ ಹೈಥಮ್ ಅಲ್ ಘೈಸ್ ಈ ಸಭೆಯ ಸಹ ಅಧ್ಯಕ್ಷತೆ ವಹಿಸಿದ್ದರು.

ತೈಲ ಮಾರುಕಟ್ಟೆ ಸ್ಥಿರತೆ, ಇಂಧನ ಭದ್ರತೆ ಮತ್ತು ತೈಲ ಉದ್ಯಮದಾದ್ಯಂತ ಸಾಕಷ್ಟು ಮತ್ತು ಸಕಾಲಿಕ ಹೂಡಿಕೆಯ ಮಹತ್ವದ ಕುರಿತು ಸಭೆಯಲ್ಲಿ ಚರ್ಚೆಗಳು ಕೇಂದ್ರೀಕೃತವಾಗಿದ್ದವು. ಉಭಯ ನಾಯಕರು ಅಲ್ಪ, ಮಧ್ಯಮ ಮತ್ತು ದೀರ್ಘಾವಧಿಯ ದೃಷ್ಟಿಕೋನಗಳನ್ನು ಪರಿಶೀಲಿಸಿದರು, ಜಾಗತಿಕ ಆರ್ಥಿಕ ವಿಸ್ತರಣೆ ಮತ್ತು ಇಂಧನ ಬೇಡಿಕೆ ಹೆಚ್ಚಳದಲ್ಲಿ ಭಾರತದ ನಿರ್ಣಾಯಕ ಪಾತ್ರವನ್ನು ಒತ್ತಿಹೇಳಿದರು.

ಭಾರತ ಮತ್ತು ಒಪೆಕ್ ಸ್ವಾಭಾವಿಕವಾಗಿ ಪೂರಕ ಮತ್ತು ಪರಸ್ಪರ ಪ್ರಯೋಜನಕಾರಿ ಸಂಬಂಧವನ್ನು ಹೊಂದಿವೆ ಎಂದು ಒತ್ತಿಹೇಳಿದ ಗೌರವಾನ್ವಿತ ಹರ್ ದೀಪ್ ಸಿಂಗ್ ಪುರಿ ಅವರು, ಈ ಪಾಲುದಾರಿಕೆಯನ್ನು ಬಲಪಡಿಸುವಲ್ಲಿ ನೀಡಿದ ಕೊಡುಗೆಗಾಗಿ ಪ್ರಧಾನ ಕಾರ್ಯದರ್ಶಿಗೆ ಧನ್ಯವಾದ ಅರ್ಪಿಸಿದರು. ಒಪೆಕ್ ಮತ್ತು ಅದರ ಸದಸ್ಯ ರಾಷ್ಟ್ರಗಳೊಂದಿಗಿನ ದೀರ್ಘಕಾಲದ ಸಂಬಂಧವನ್ನು ಭಾರತ ಗೌರವಿಸುತ್ತದೆ, ಇದು ಪ್ರಮುಖ ಇಂಧನ ವಿಷಯಗಳಲ್ಲಿ ಪರಸ್ಪರ ತಿಳುವಳಿಕೆ ಮತ್ತು ಸಹಕಾರಕ್ಕೆ ಗಮನಾರ್ಹ ಕೊಡುಗೆ ನೀಡಿದೆ ಎಂದು ಅವರು ಒತ್ತಿ ಹೇಳಿದರು.

"ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲಿ ಒಂದಾಗಿ, ಭಾರತವು ಮುಂದಿನ ದಶಕಗಳಲ್ಲಿ ಜಾಗತಿಕ ಇಂಧನ ಬೇಡಿಕೆಯ ಪ್ರಮುಖ ಚಾಲಕ ಶಕ್ತಿಯಾಗಿ ಉಳಿಯುತ್ತದೆ. ಹೂಡಿಕೆಯನ್ನು ಬೆಂಬಲಿಸಲು, ಇಂಧನ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸಲು ಮತ್ತು ಜಾಗತಿಕ ಬೆಳವಣಿಗೆ ಮತ್ತು ಅಭಿವೃದ್ಧಿಗೆ ವಿಶ್ವಾಸಾರ್ಹ ಇಂಧನ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಉತ್ಪಾದಕರು ಮತ್ತು ಗ್ರಾಹಕರ ನಡುವೆ ನಿರಂತರ ಸಂವಾದ ಅತ್ಯಗತ್ಯ" ಎಂದು ಅವರು ಹೇಳಿದರು.

ಭೌಗೋಳಿಕ ರಾಜಕೀಯ ಅನಿಶ್ಚಿತತೆಗಳು ಮತ್ತು ಮಾರುಕಟ್ಟೆಯ ಚಂಚಲತೆಯಿಂದ ಕೂಡಿರುವ ಈ ಸಮಯದಲ್ಲಿ ಜಾಗತಿಕ ಇಂಧನ ಮಾರುಕಟ್ಟೆಗಳಲ್ಲಿ ಸ್ಥಿರತೆ ಮತ್ತು ಪಾರದರ್ಶಕತೆಯನ್ನು ಉತ್ತೇಜಿಸುವ ‘ಒಪೆಕ್’ನ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು. ಸಮತೋಲಿತ, ಸ್ಥಿರ ಮತ್ತು ಊಹಿಸಬಹುದಾದ ಜಾಗತಿಕ ಇಂಧನ ಮಾರುಕಟ್ಟೆಯನ್ನು ಮುನ್ನಡೆಸಲು ‘ಒಪೆಕ್’ ಮತ್ತು ಭಾರತವು ನಿಕಟವಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ತಮ್ಮ ಭಾಷಣದಲ್ಲಿ, ಘನತೆವೆತ್ತ ಶ್ರೀ ಅಲ್ ಘೈಸ್ ಅವರು, "ಭಾರತದೊಂದಿಗಿನ ಸಂವಾದವು ಒಪೆಕ್‌ಗೆ ಆದ್ಯತೆಯಾಗಿದೆ. ಏಕೆಂದರೆ ಪ್ರಸ್ತುತ ಜಾಗತಿಕ ಇಂಧನ ವಲಯದಲ್ಲಿ ಭಾರತದ ಮಹತ್ವವನ್ನು ನಾವು ಗುರುತಿಸುತ್ತೇವೆ ಮತ್ತು ಮುಂದಿನ ದಶಕಗಳಲ್ಲಿ ಈ ಮಹತ್ವವು ಮತ್ತಷ್ಟು ಹೆಚ್ಚಾಗಲಿದೆ," ಎಂದು ಹೇಳಿದರು. "ಒಪೆಕ್-ಭಾರತ ಇಂಧನ ಸಂವಾದವು ಹನ್ನೊಂದು ವರ್ಷಗಳಷ್ಟು ಹಳೆಯದಾಗಿದ್ದು, ಇದನ್ನು 2015 ರಲ್ಲಿ ನವದೆಹಲಿಯಲ್ಲಿ ಪ್ರಾರಂಭಿಸಲಾಯಿತು" ಎಂದು ಅವರು ಉಲ್ಲೇಖಿಸಿದರು.

ಇಂಧನ ಸವಾಲುಗಳನ್ನು ಎದುರಿಸಲು ಭಾರತದ ಸಮತೋಲಿತ, ವಾಸ್ತವಿಕ ಮತ್ತು ಪ್ರಾಯೋಗಿಕ ವಿಧಾನವನ್ನು ಪ್ರಧಾನ ಕಾರ್ಯದರ್ಶಿಯವರು ಶ್ಲಾಘಿಸಿದರು. "ಭಾರತದ ಅನೇಕ ಇಂಧನ ಆದ್ಯತೆಗಳು ‘ಒಪೆಕ್’ನ ಆದ್ಯತೆಗಳಾಗಿವೆ," ಎಂದು ಒತ್ತಿ ಹೇಳಿದರು.

ಅಂತರರಾಷ್ಟ್ರೀಯ ಸಹಯೋಗ ಮತ್ತು ಸಂವಾದದ ಬಗ್ಗೆ ಭಾರತ ಸರ್ಕಾರದ ದೃಢವಾದ ಬದ್ಧತೆಯನ್ನೂ ಘನತೆವೆತ್ತ ಶ್ರೀ ಅಲ್ ಘೈಸ್ ಅವರು ಶ್ಲಾಘಿಸಿದರು. "ನಮ್ಮ ಯುಗದ ದೊಡ್ಡ ಸವಾಲುಗಳನ್ನು ಪರಿಹರಿಸುವ ಸಾಧನವಾಗಿ ಭಾರತ ಸರ್ಕಾರವು ರಾಜತಾಂತ್ರಿಕತೆ ಮತ್ತು ಸಂವಾದವನ್ನು ನಿರಂತರವಾಗಿ ಪ್ರತಿಪಾದಿಸುತ್ತಿದೆ ಎಂಬುದು ನಮ್ಮ ಸಂವಾದದ ಬಗ್ಗೆ ವಿಶೇಷವಾಗಿ ಉತ್ತೇಜನಕಾರಿಯಾದ ವಿಷಯವಾಗಿದೆ" ಎಂದು ಅವರು ಒತ್ತಿಹೇಳಿದರು.

ಘನತೆವೆತ್ತ ಶ್ರೀ ಅಲ್ ಘೈಸ್ ಅವರು ಸಭೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಅವರ ಅಮೂಲ್ಯ ಕೊಡುಗೆಗಳಿಗಾಗಿ ಧನ್ಯವಾದ ಅರ್ಪಿಸಿದರು. ‘ಒಪೆಕ್’ ನಿಯೋಗಕ್ಕೆ ನೀಡಲಾದ ಆತ್ಮೀಯ ಆತಿಥ್ಯಕ್ಕಾಗಿ ಅವರು ಘನತೆವೆತ್ತ ಶ್ರೀ ಹರ್ದೀಪ್ ಸಿಂಗ್ ಪುರಿ ಅವರಿಗೆ ‘ಒಪೆಕ್’ ಸಚಿವಾಲಯದ ಪ್ರಾಮಾಣಿಕ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.

ಈ ಸಂವಾದದ ಚೌಕಟ್ಟಿನೊಳಗೆ, ತಾಂತ್ರಿಕ ಮಟ್ಟವೂ ಸೇರಿದಂತೆ ಇಲ್ಲಿಯವರೆಗೆ ಸಾಧಿಸಿದ ಪ್ರಗತಿಯನ್ನು ಸಭೆಯಲ್ಲಿ ಶ್ಲಾಘಿಸಲಾಯಿತು. ‘ಒಪೆಕ್’ ಮತ್ತು ಭಾರತದ ನಡುವೆ ಇನ್ನಷ್ಟು ಆಳವಾದ ಇಂಧನ ಸಹಕಾರವನ್ನು ಬೆಳೆಸುವ ಪ್ರಮುಖ ಮಹತ್ವವನ್ನು ಉಭಯ ದೇಶಗಳು ಒತ್ತಿ ಹೇಳುವುದರೊಂದಿಗೆ ಸಭೆಯು ಮುಕ್ತಾಯವಾಯಿತು.

ಒಪೆಕ್-ಭಾರತ ಇಂಧನ ಮಾತುಕತೆಯ 8ನೇ ಉನ್ನತ ಮಟ್ಟದ ಸಭೆಯನ್ನು ಪರಸ್ಪರ ಅನುಕೂಲಕರ ದಿನಾಂಕದಂದು ಆಸ್ಟ್ರಿಯಾದ ವಿಯೆನ್ನಾದಲ್ಲಿ ನಡೆಸಲು ಅಂಗೀಕರಿಸಲಾಗಿದೆ.

 

*****


(ಪ್ರಕಟಣೆ ಐ.ಡಿ.: 2313442) ವಿಸಿಟರ್ ಕೌಂಟರ್ : 18
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Bengali , Assamese , Gujarati , Telugu