ಉಪರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav

ಭಾರತದ ಚಹಾ ಉದ್ಯಮ ಕ್ಷೇತ್ರವನ್ನು ಆಧುನೀಕರಿಸಲು, ಸಂಶೋಧನೆಯನ್ನು ಬಲಪಡಿಸಲು ಮತ್ತು ಜಾಗತಿಕ ಮಾರುಕಟ್ಟೆಗಳಿಗಾಗಿ ಭಾರತೀಯ ಚಹಾ ಬ್ರಾಂಡ್ ಗಳನ್ನು ನಿರ್ಮಿಸಲು ಭಾರತದ ಉಪರಾಷ್ಟ್ರಪತಿಯವರು ಕರೆ ನೀಡಿದರು


ನೀಲಗಿರಿಯ ಕೂನೂರಿನಲ್ಲಿ ನಡೆದ ಯುನೈಟೆಡ್ ಪ್ಲಾಂಟರ್ಸ್ ಅಸೋಸಿಯೇಷನ್ ಆಫ್ ಸದರ್ನ್ ಇಂಡಿಯಾ (ಯು.ಎ.ಎಸ್.ಐ.) ಚಹಾ ಸಂಶೋಧನಾ ಪ್ರತಿಷ್ಠಾನದ ಶತಮಾನೋತ್ಸವ ಸಮ್ಮೇಳನದಲ್ಲಿ ಉಪರಾಷ್ಟ್ರಪತಿ ಅವರು ಭಾಷಣ ಮಾಡಿದರು

“ಉದ್ಯಮ ಕಲ್ಯಾಣ ಮತ್ತು ಕಾರ್ಮಿಕರ ಕಲ್ಯಾಣವು ಜೊತೆಜೊತೆಯಾಗಿ ಸಾಗಬೇಕು”: ಉಪರಾಷ್ಟ್ರಪತಿ

ಪ್ರಕಟಣಾ ದಿನಾಂಕ: 21 SEP 2026 5:19PM by PIB Bengaluru

ನೀಲಗಿರಿಯ ಕೂನೂರಿನಲ್ಲಿ ಇಂದು ನಡೆದ ಯುನೈಟೆಡ್ ಪ್ಲಾಂಟರ್ಸ್ ಅಸೋಸಿಯೇಷನ್ ಆಫ್ ಸದರ್ನ್ ಇಂಡಿಯಾ (ಯು.ಎ.ಎಸ್.ಐ.) ಇದರ ಚಹಾ ಸಂಶೋಧನಾ ಪ್ರತಿಷ್ಠಾನದ ಶತಮಾನೋತ್ಸವ ಸಮ್ಮೇಳನವನ್ನು ಭಾರತದ ಉಪರಾಷ್ಟ್ರಪತಿ ಶ್ರೀ ಸಿ. ಪಿ. ರಾಧಾಕೃಷ್ಣನ್ ಅವರು ಉದ್ಘಾಟಿಸಿದರು ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಭಾರತೀಯ ಚಹಾವನ್ನು ಹೆಚ್ಚು ಸ್ಪರ್ಧಾತ್ಮಕವಾಗಿಸಲು ಹೆಚ್ಚಿನ ಸಂಶೋಧನೆ, ಆಧುನೀಕರಣ, ಬ್ರ್ಯಾಂಡಿಂಗ್ ಮತ್ತು ಮೌಲ್ಯವರ್ಧನೆಗೆ ಅವರು ಕರೆ ನೀಡಿದರು.

ಉಪರಾಷ್ಟ್ರಪತಿ ಅವರು ಚಹಾ ಉದ್ಯಮ, ತೋಟಗಾರರು ಮತ್ತು ಕಾರ್ಮಿಕರಿಗೆ 100 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ್ದಕ್ಕಾಗಿ ಯುನೈಟೆಡ್ ಪ್ಲಾಂಟರ್ಸ್ ಅಸೋಸಿಯೇಷನ್ ಆಫ್ ಸದರ್ನ್ ಇಂಡಿಯಾ (ಯು.ಎ.ಎಸ್.ಐ.) ಸಂಸ್ಥೆಗೆ ಅಭಿನಂದನೆ ಸಲ್ಲಿಸಿದ ಭಾರತದ ಉಪರಾಷ್ಟ್ರಪತಿ ಶ್ರೀ ಸಿ. ಪಿ. ರಾಧಾಕೃಷ್ಣನ್ ಅವರು, ಫೌಂಡೇಶನ್ ಸಂಶೋಧನೆ ಮತ್ತು ಚಹಾ ಕ್ಷೇತ್ರದ ಅಭಿವೃದ್ಧಿ ನಿಟ್ಟಿನಲ್ಲಿ ನೀಡಿದ ಶತಮಾನೋತ್ಸವದ ಕೊಡುಗೆಯನ್ನು ಈ ಸಂದರ್ಭದಲ್ಲಿ ಶ್ಲಾಘಿಸಿದರು.

ಭಾರತವು ವಿಶ್ವದ ಅತಿದೊಡ್ಡ ಚಹಾ ಉತ್ಪಾದಿಸುವ ಮತ್ತು ಚಹಾ ಸೇವಿಸುವ ದೇಶಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು ಮತ್ತು ಚಹಾ ಕೃಷಿ ಮತ್ತು ಪರಿಣಾಮಕಾರಿ ಸಂಸ್ಕರಣೆ ಮತ್ತು ಉತ್ಪಾದನೆ ಎರಡರ ಮೇಲೂ ಗಮನಹರಿಸುವ ಅಗತ್ಯವನ್ನುಅವರು ಒತ್ತಿ ಹೇಳಿದರು.

ಉಪರಾಷ್ಟ್ರಪತಿಯವರು ಚಹಾ ವಲಯದಲ್ಲಿ, ವಿಶೇಷವಾಗಿ ವೆಚ್ಚ-ಪರಿಣಾಮಕಾರಿತ್ವ, ಗುಣಮಟ್ಟ ಮತ್ತು ಉತ್ಪಾದಕತೆಯನ್ನು ಸುಧಾರಿಸುವ ಕ್ಷೇತ್ರಗಳಲ್ಲಿ ಸಂಶೋಧನೆಯನ್ನು ವಿಸ್ತರಿಸಲು ಕರೆ ನೀಡಿದರು. ಜಾಗತಿಕ ಚಹಾ ಮಾರುಕಟ್ಟೆ ಹೆಚ್ಚು ಸ್ಪರ್ಧಾತ್ಮಕವಾಗುತ್ತಿದೆ ಎಂದು ಗಮನಿಸಿ, ಗುಣಮಟ್ಟವನ್ನು ಕಾಪಾಡಿಕೊಳ್ಳುವುದು ಮತ್ತು ಬದಲಾಗುತ್ತಿರುವ ಮಾರುಕಟ್ಟೆ ಅವಶ್ಯಕತೆಗಳಿಗೆ ಸ್ಪಂದಿಸುವ ಬಗ್ಗೆ ತೋಟಗಾರರಿಗೆ ಶಿಕ್ಷಣ ನೀಡುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಜಾಗತಿಕವಾಗಿ, ಇತರ ಚಹಾ ಉತ್ಪಾದಿಸುವ ದೇಶಗಳ ಸ್ಪರ್ಧೆಯನ್ನು ಉಲ್ಲೇಖಿಸಿದ  ಭಾರತದ ಉಪರಾಷ್ಟ್ರಪತಿ ಶ್ರೀ ಸಿ. ಪಿ. ರಾಧಾಕೃಷ್ಣನ್  ಅವರು , ಭಾರತವು ತನ್ನ ಚಹಾವನ್ನು ಹೇಗೆ ಹೆಚ್ಚು ಪರಿಣಾಮಕಾರಿಯಾಗಿ ಮಾರಾಟ ಮಾಡಬಹುದು, ಆದಾಯವನ್ನು ಸುಧಾರಿಸಬಹುದು ಮತ್ತು ನಿರಂತರ ಸಂಶೋಧನೆ ಮತ್ತು ನಾವೀನ್ಯತೆಯ ಮೂಲಕ ತೋಟಗಾರಿಕೆ ವಲಯ ಎದುರಿಸುತ್ತಿರುವ ಸವಾಲುಗಳನ್ನು ಹೇಗೆ ಪರಿಹರಿಸಬಹುದು ಎಂಬುದನ್ನು ಪರಿಶೀಲಿಸಬೇಕಾಗಿದೆ ಎಂದು ಹೇಳಿದರು.

ಚಹಾ ಉದ್ಯಮದ ಅವಶ್ಯಕತೆಗಳ ವ್ಯವಸ್ಥಿತ ಮೌಲ್ಯಮಾಪನವನ್ನು ಕೈಗೊಳ್ಳಲು ಮತ್ತು ಕಾಂಕ್ರೀಟ್ ಯೋಜನಾ ಪ್ರಸ್ತಾವನೆಗಳನ್ನು ಅಭಿವೃದ್ಧಿಪಡಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೊಂದಿಗೆ ಕೆಲಸ ಮಾಡಲು ಅವರು ಪಾಲುದಾರರನ್ನು ಒತ್ತಾಯಿಸಿದರು. ಸಂಶೋಧನೆಗಾಗಿ ವೃತ್ತಿಪರರನ್ನು ಗುರುತಿಸುವುದು, ಚಹಾ ಕಾರ್ಖಾನೆಗಳನ್ನು ಆಧುನೀಕರಿಸುವುದು ಮತ್ತು ಭಾರತೀಯ ಚಹಾ ಉತ್ಪಾದನೆಯು ಜಾಗತಿಕ ಮಾನದಂಡಗಳನ್ನು ಪೂರೈಸುತ್ತದೆ ಎಂದು ಖಚಿತಪಡಿಸಿಕೊಳ್ಳಲು ಅಗತ್ಯ ನವೀಕರಣವನ್ನು ಕೈಗೊಳ್ಳುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಬೃಹತ್ ಗಾತ್ರದ ಚಹಾ ಉತ್ಪಾದಕರು ಮತ್ತು ಚಹಾ ರಫ್ತುದಾರರು, ಈಗಿನ ವ್ಯವಸ್ಥೆಯನ್ನು ಮೀರಿ ಬಲವಾದ ಜಾಗತಿಕವಾಗಿ ಉತ್ಕೃಷ್ಟ ಭಾರತೀಯ ಬ್ರ್ಯಾಂಡ್ ಗಳನ್ನು ಅಭಿವೃದ್ಧಿಪಡಿಸುವಂತೆ ಭಾರತದ ಉಪರಾಷ್ಟ್ರಪತಿಯವರು ಕರೆ ನೀಡಿದರು. ಹಲವಾರು ದೇಶಗಳಿಗೆ ಪ್ರಯಾಣಿಸಿದ ಅನುಭವದಿಂದ, ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹಲವಾರು ದೇಶಗಳ ವ್ಯಾಪಕ ಶ್ರೇಣಿಯ ಚಹಾ ಬ್ರಾಂಡ್ ಗಳನ್ನು ನೋಡಿದ್ದನ್ನು ಅವರು ನೆನಪಿಸಿಕೊಂಡರು ಮತ್ತು ಭಾರತೀಯ ಚಹಾ ಬ್ರಾಂಡ್ ಗಳ ಹೆಚ್ಚಿನ ಗೋಚರತೆಯ ಅಗತ್ಯವನ್ನು ಗಮನಿಸಿರುವುದನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಿಕೊಂಡರು.  

ಬಲವಾದ ಬ್ರ್ಯಾಂಡ್ ಗಳ ಅಡಿಯಲ್ಲಿ ಭಾರತೀಯ ಚಹಾವನ್ನು ಮಾರಾಟ ಮಾಡಲು ಪಾಲುದಾರರು ಒಟ್ಟಾಗಿ ಏಕೀಕೃತವಾಗಿ ಒಗ್ಗೂಡಿ ಜೊತೆಯಲ್ಲಿ ಬರಬೇಕೆಂದು ಅವರು ಸೂಚಿಸಿದರು, ಇದು ಮಾರುಕಟ್ಟೆ ಸ್ಥಾನೀಕರಣ ಮತ್ತು ಆದಾಯ ಮತ್ತು ಬೆಲೆಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಯುನೈಟೆಡ್ ಪ್ಲಾಂಟರ್ಸ್ ಅಸೋಸಿಯೇಷನ್ ಆಫ್ ಸದರ್ನ್ ಇಂಡಿಯಾ (ಯು.ಎ.ಎಸ್.ಐ.) ಸಂಸ್ಥೆಯು ತನ್ನ ಶತಮಾನೋತ್ಸವ ವರ್ಷವನ್ನು ಬಳಸಿಕೊಂಡು ಚಹಾ ಸಂಶೋಧನಾ ಜಾಲವನ್ನು ಹೆಚ್ಚಿನ ಸ್ಥಳಗಳಿಗೆ ವಿಸ್ತರಿಸುವ ಮೂಲಕ ಮತ್ತು ಆಧುನಿಕ ಸೌಲಭ್ಯಗಳೊಂದಿಗೆ ಸಂಶೋಧನಾ ಕೇಂದ್ರಗಳನ್ನು ಸಜ್ಜುಗೊಳಿಸುವ ಮೂಲಕ ಶಾಶ್ವತವಾದ ಸಾಂಸ್ಥಿಕ ಮೈಲಿಗಲ್ಲನ್ನು ಸೃಷ್ಟಿಸಲು ಭಾರತದ ಉಪರಾಷ್ಟ್ರಪತಿ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರು ಕರೆ ನೀಡಿದರು. ಉದಯೋನ್ಮುಖ ಸವಾಲುಗಳು ಮತ್ತು ಅವಕಾಶಗಳನ್ನು ಎದುರಿಸಲು ಸಂಶೋಧನೆ ನಿರಂತರವಾಗಿ ವಿಕಸನಗೊಳ್ಳಬೇಕು ಎಂದು ಅವರು ಹೇಳಿದರು.

ತೋಟ ಕಾರ್ಮಿಕರ ಪ್ರಮುಖ ಪಾತ್ರವನ್ನು ಉಲ್ಲೇಖಿಸಿದ ಉಪರಾಷ್ಟ್ರಪತಿಯವರು, ಅವರ ಕಲ್ಯಾಣಕ್ಕೆ ಹೆಚ್ಚಿನ ಗಮನ ಹರಿಸಬೇಕೆಂದು ಕರೆ ನೀಡಿದರು. ತೋಟ ಕಾರ್ಮಿಕರ ಕಲ್ಯಾಣವು ಉದ್ಯಮದ ಬೆಳವಣಿಗೆ ಮತ್ತು ಸುಸ್ಥಿರತೆಯ ಅವಿಭಾಜ್ಯ ಅಂಗವಾಗಿರಬೇಕು ಎಂದು ಅವರು ಒತ್ತಿ ಹೇಳಿದರು. "ಉದ್ಯಮ ಕಲ್ಯಾಣ ಮತ್ತು ಕಾರ್ಮಿಕರ ಕಲ್ಯಾಣವು ಜೊತೆಜೊತೆಯಾಗಿ ಹೋಗಬೇಕು" ಎಂದು ಅವರು ಹೇಳಿದರು.

ಚಹಾದಲ್ಲಿ ಮೌಲ್ಯವರ್ಧನೆಯ ಮಹತ್ವವನ್ನು ಉಪರಾಷ್ಟ್ರಪತಿಯವರು ಒತ್ತಿ ಹೇಳಿದರು ಮತ್ತು ಹೊಸ ಉತ್ಪನ್ನಗಳು, ಪ್ರಕ್ರಿಯೆಗಳು ಮತ್ತು ಮಾರುಕಟ್ಟೆ ಅವಕಾಶಗಳನ್ನು ಗುರುತಿಸಲು ಪ್ರಮುಖ ಪಾಲುದಾರರು ಒಟ್ಟಾಗಿ ಕೆಲಸ ಮಾಡುವಂತೆ  ಅವರು ಕರೆ ನೀಡಿದರು.

ಭಾರತವು ಪ್ರಮುಖ ಚಹಾ ಉತ್ಪಾದಿಸುವ ಮತ್ತು ಚಹಾ ಸೇವಿಸುವ ದೇಶವಾಗಿರುವ ಪ್ರಯೋಜನವನ್ನು ಹೊಂದಿದೆ ಎಂದು ಅವರು ಸಭಿಕರ ಗಮನಸೆಳೆದರು ಮತ್ತು ಉದ್ಯಮವು ತನ್ನ ದೊಡ್ಡ ದೇಶೀಯ ಮಾರುಕಟ್ಟೆಯನ್ನು ಹೆಚ್ಚು ಬಳಸಿಕೊಳ್ಳುವಂತೆ ಸಂಸ್ಥೆಯನ್ನು ಹಾಗೂ ಉದ್ಯಮ ಕ್ಷೇತ್ರವನ್ನು ಒತ್ತಾಯಿಸಿದರು. ಪ್ರಸ್ತುತ ವಾತಾವರಣವು ಪಾಲುದಾರರಿಗೆ ಚಹಾ ವಲಯವನ್ನು ಬಲಪಡಿಸಲು ಸರ್ಕಾರದೊಂದಿಗೆ ನಿಕಟವಾಗಿ ಕೆಲಸ ಮಾಡಲು ಅವಕಾಶವನ್ನು ಒದಗಿಸುತ್ತದೆ ಎಂದು ಉಪರಾಷ್ಟ್ರಪತಿಯವರು ಹೇಳಿದರು.

ಶತಮಾನೋತ್ಸವ ಸಮ್ಮೇಳನವು ಚಹಾ ಸಂಶೋಧನೆ ಮತ್ತು ತೋಟಗಾರಿಕೆ ಉದ್ಯಮದ ಭವಿಷ್ಯದ ಕುರಿತು ಚರ್ಚಿಸಲು ಪ್ಲಾಂಟರ್ಗಳು, ಸಂಶೋಧಕರು, ಉದ್ಯಮ ಪ್ರತಿನಿಧಿಗಳು ಮತ್ತು ಇತರ ಗಣ್ಯರು ಸೇರಿದಂತೆ ಚಹಾ ಮತ್ತು ತೋಟಗಾರಿಕೆ ವಲಯದ ಪಾಲುದಾರರನ್ನು ಒಟ್ಟುಗೂಡಿಸಿತು.

ಈ ಸಂದರ್ಭದಲ್ಲಿ, ದಕ್ಷಿಣ ಭಾರತದಲ್ಲಿ ಚಹಾ ಸಂಶೋಧನೆಯ ಶ್ರೀಮಂತ ಪರಂಪರೆ ಮತ್ತು ಕೊಡುಗೆಗಳನ್ನು ದಾಖಲಿಸುವ "ದಕ್ಷಿಣ ಭಾರತದಲ್ಲಿ ಚಹಾ ಸಂಶೋಧನೆ - ಒಂದು ಸಂಕಲನ" ಎಂಬ ಪುಸ್ತಕವನ್ನು ಉಪರಾಷ್ಟ್ರಪತಿಯವರು ಬಿಡುಗಡೆ ಮಾಡಿದರು.

ತಮಿಳುನಾಡು ರಾಜ್ಯಪಾಲ ಶ್ರೀ ರಾಜೇಂದ್ರ ವಿಶ್ವನಾಥ್ ಅರ್ಲೇಕರ್; ಉದಕಮಂಡಲಂ ಶಾಸಕ ಶ್ರೀ ಭೋಜರಾಜನ್; ಭಾರತದ ಚಹಾ ಮಂಡಳಿಯ ಉಪಾಧ್ಯಕ್ಷರಾದ ಶ್ರೀ ಸಿ. ಮುರುಗನ್; ಯುನೈಟೆಡ್ ಪ್ಲಾಂಟರ್ಸ್ ಅಸೋಸಿಯೇಷನ್ ಆಫ್ ಸದರ್ನ್ ಇಂಡಿಯಾ (ಯು.ಎ.ಎಸ್.ಐ.) ಸಂಸ್ಥೆಯ ಅಧ್ಯಕ್ಷರಾದ ಶ್ರೀ ಅಜೋಯ್ ತಿಪಯ್ಯ; ಮತ್ತು ತೋಟಗಾರರು, ಕೃಷಿಕರು, ಕೃಷಿ ವಿಜ್ಞಾನಿಗಳು ಮತ್ತು ಕೈಗಾರಿಕಾ ಪ್ರತಿನಿಧಿಗಳು ಹಾಗೂ ಇತರ ಗಣ್ಯರು, ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

*****


(ಪ್ರಕಟಣೆ ಐ.ಡಿ.: 2313215) ವಿಸಿಟರ್ ಕೌಂಟರ್ : 9
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Gujarati , Tamil , Malayalam