ಗೃಹ ವ್ಯವಹಾರಗಳ ಸಚಿವಾಲಯ
ಕರ್ನಾಟಕದ ಹುಬ್ಬಳ್ಳಿಯ ʻಜೆಜಿಎಂಎಂʼ ವೈದ್ಯಕೀಯ ಕಾಲೇಜು ಹಾಗೂ ಕೆಎಲ್ಇ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದ ಆವರಣಕ್ಕೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಅಮಿತ್ ಶಾ ಭೇಟಿ
ಕೆಎಲ್ಇ ಸಂಸ್ಥೆಯು ಶಿಕ್ಷಣ ಮತ್ತು ಆರೋಗ್ಯ ಸೇವೆಯ ಮೂಲಕ 110 ವರ್ಷಗಳಿಗೂ ಹೆಚ್ಚು ಕಾಲ ದೇಶಕ್ಕೆ ಸೇವೆ ಸಲ್ಲಿಸುತ್ತಿದೆ
250 ಎಂಬಿಬಿಎಸ್ ಸೀಟುಗಳು ಮತ್ತು ಬಡವರಿಗಾಗಿ ಮೀಸಲಿಡಲಾದ 300 ಹಾಸಿಗೆಗಳೊಂದಿಗೆ ಒಟ್ಟು 1,200 ಬೆಡ್‌ಗಳನ್ನು ಹೊಂದಿರುವ ಈ ಹೊಸ ಸೌಲಭ್ಯವು, ಕರ್ನಾಟಕದಾದ್ಯಂತ ವಿಶ್ವ ದರ್ಜೆಯ ಆರೋಗ್ಯ ಸೇವೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಒಂದು ಹೊಸ ಮೈಲಿಗಲ್ಲಾಗಿದೆ
ಪ್ರಕಟಣಾ ದಿನಾಂಕ:
19 SEP 2026 8:58PM by PIB Bengaluru
ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಶ್ರೀ ಅಮಿತ್ ಶಾ ಅವರು ಇಂದು ಕರ್ನಾಟಕದ ಹುಬ್ಬಳ್ಳಿಯಲ್ಲಿರುವ ಜೆಜಿಎಂಎಂ ವೈದ್ಯಕೀಯ ಕಾಲೇಜು ಹಾಗೂ ಕೆಎಲ್ಇ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದ ಆವರಣಕ್ಕೆ ಭೇಟಿ ನೀಡಿದರು.
ಈ ಕುರಿತು ‘ಎಕ್ಸ್’ ವೇದಿಕೆಯಲ್ಲಿ ಪೋಸ್ಟ್ ಮಾಡಿರುವ ಅಮಿತ್ ಶಾ ಅವರು, “ಕರ್ನಾಟಕದ ಹುಬ್ಬಳ್ಳಿಯಲ್ಲಿರುವ ಜೆಜಿಎಂಎಂ ವೈದ್ಯಕೀಯ ಕಾಲೇಜು ಹಾಗೂ ಕೆಎಲ್ಇ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದ ಆವರಣಕ್ಕೆ ಇಂದು ಭೇಟಿ ನೀಡಿದೆ. ಕೆಎಲ್‌ಇ ಸಂಸ್ಥೆಯು ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ಮೂಲಕ 110 ವರ್ಷಗಳಿಗೂ ಹೆಚ್ಚು ಕಾಲ ರಾಷ್ಟ್ರ ಸೇವೆಯಲ್ಲಿ ತೊಡಗಿದೆ. 250 ಎಂಬಿಬಿಎಸ್ ಸೀಟುಗಳು ಮತ್ತು 1,200 ಹಾಸಿಗೆಗಳನ್ನು ಹೊಂದಿರುವ ಈ ನೂತನ ಸೌಲಭ್ಯದಲ್ಲಿ ಬಡವರಿಗಾಗಿ 300 ಹಾಸಿಗೆಗಳನ್ನು ಮೀಸಲಿಡಲಾಗಿದೆ. ಕರ್ನಾಟಕದಾದ್ಯಂತ ವಿಶ್ವದರ್ಜೆಯ ಆರೋಗ್ಯ ಸೇವೆಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಈ ಸೌಲಭ್ಯವು ಹೊಸ ಮೈಲುಗಲ್ಲಾಗಿದೆ,” ಎಂದು ತಿಳಿಸಿದ್ದಾರೆ.
ಸುಮಾರು 50 ಎಕರೆ ಪ್ರದೇಶದಲ್ಲಿ ಅಂದಾಜು ₹700 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಈ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸಂಕೀರ್ಣವು ಒಟ್ಟು 20 ಲಕ್ಷ ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಈ ಆಸ್ಪತ್ರೆಯು ಒಂದೇ ಸೂರಿನಡಿ ವ್ಯಾಪಕ ಶ್ರೇಣಿಯ ಸೇವೆಗಳನ್ನು ಒದಗಿಸಲಿದೆ. ಸಾಮಾನ್ಯ ವೈದ್ಯಕೀಯ (ಜನರಲ್ ಮೆಡಿಸಿನ್), ಶಸ್ತ್ರಚಿಕಿತ್ಸೆ (ಸರ್ಜರಿ), ಮೂಳೆ ಚಿಕಿತ್ಸೆ (ಆರ್ಥೋಪೆಡಿಕ್ಸ್), ಶ್ವಾಸಕೋಶದ ಚಿಕಿತ್ಸೆ (ಪಲ್ಮನಾಲಜಿ), ಪ್ರಸೂತಿ ಮತ್ತು ಸ್ತ್ರೀರೋಗ, ನೇತ್ರವಿಜ್ಞಾನ, ಇಎನ್‌ಟಿ (ಕಿವಿ, ಮೂಗು, ಗಂಟಲು), ಮನೋವೈದ್ಯಶಾಸ್ತ್ರ, ದಂತವೈದ್ಯಶಾಸ್ತ್ರ ಮತ್ತು ಫಿಸಿಯೋಥೆರಪಿಯಂತಹ ಮೂಲಭೂತ ವಿಶೇಷ ಸೌಲಭ್ಯಗಳು ಇಲ್ಲಿ ಲಭ್ಯವಿರಲಿವೆ. ಇದರ ಜೊತೆಗೆ, ಈ ಸೌಲಭ್ಯವು ಹೃದ್ರೋಗ (ಕಾರ್ಡಿಯಾಲಜಿ), ನರವಿಜ್ಞಾನ (ನ್ಯೂರಾಲಜಿ), ನರಶಸ್ತ್ರಚಿಕಿತ್ಸೆ (ನ್ಯೂರೋಸರ್ಜರಿ), ಗ್ಯಾಸ್ಟ್ರೋಎಂಟರಾಲಜಿ, ನೆಫ್ರಾಲಜಿ, ಅಂಗಾಂಗ ಕಸಿ, ಮೂತ್ರಶಾಸ್ತ್ರ (ಯೂರಾಲಜಿ), ಆಂಕೊಲಾಜಿ ಮತ್ತು ಎಂಡೋಕ್ರೈನಾಲಜಿ ಸೇರಿದಂತೆ ಸೂಪರ್-ಸ್ಪೆಷಾಲಿಟಿ ಸೇವೆಗಳನ್ನು ಅತ್ಯಾಧುನಿಕ ಪ್ರಯೋಗಾಲಯದೊಂದಿಗೆ ಒದಗಿಸುತ್ತದೆ.
ಆಸ್ಪತ್ರೆಯಲ್ಲಿ ದಿನದ 24 ಗಂಟೆಯೂ ತ್ವರಿತ ತುರ್ತು ಚಿಕಿತ್ಸಾ ಮತ್ತು ಅಪಘಾತ ಚಿಕಿತ್ಸಾ ಸೇವೆ, ಆಧುನಿಕ ಡಯಾಲಿಸಿಸ್ ಘಟಕ, ಡಿಜಿಟಲ್ ಎಕ್ಸ್‌ರೇ, ಅತ್ಯಧಿಕ ರೆಸಲ್ಯೂಷನ್‌ನ ಸಿಟಿ ಸ್ಕ್ಯಾನಿಂಗ್ ಹಾಗೂ ಅಲ್ಟ್ರಾಸೊನೋಗ್ರಫಿ ಸೇರಿದಂತೆ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳು ಲಭ್ಯವಿರಲಿವೆ.
*****
(ಪ್ರಕಟಣೆ ಐ.ಡಿ.: 2312603)
ವಿಸಿಟರ್ ಕೌಂಟರ್ : 36