ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ಸರ್ಕಾರದ ಪ್ರಮುಖ ಯೋಜನೆಗಳಿಂದಾಗಿ ನಿರುದ್ಯೋಗ ದರವು ಶೇ. 6 ರಿಂದ ಶೇ. 3.2ಕ್ಕೆ ಇಳಿಕೆ: ಕೇಂದ್ರ ಸಚಿವರಾದ ಡಾ. ಎಲ್. ಮುರುಗನ್


ಚೆನ್ನೈನಲ್ಲಿ ನಡೆದ 20ನೇ `ರೋಜಗಾರ್ ಮೇಳ’ದಲ್ಲಿ 285 ನೂತನವಾಗಿ ನೇಮಕವಾದ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಿದ ಕೇಂದ್ರ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್

ಪ್ರಕಟಣಾ ದಿನಾಂಕ: 19 SEP 2026 8:02PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದಾದ್ಯಂತ 45 ಸ್ಥಳಗಳಲ್ಲಿ ಆಯೋಜಿಸಲಾಗಿದ್ದ 20ನೇ ʻರೋಜ್‌ಗಾರ್ ಮೇಳʼದಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ (ವಾಸ್ತವೋಪಮ) ಮೂಲಕ ಪಾಲ್ಗೊಂಡು, 51,000ಕ್ಕೂ ಹೆಚ್ಚು ನೂತನವಾಗಿ ನೇಮಕಗೊಂಡ ಯುವಕರಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದರು.

  

ಚೆನ್ನೈನ ಡಿ. ಜಿ. ವೈಷ್ಣವ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ರೋಜ್‌ಗಾರ್ ಮೇಳದಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಹಾಗೂ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್ ಅವರು ಭಾಗವಹಿಸಿದರು. ವಿವಿಧ ಕೇಂದ್ರ ಸರ್ಕಾರದ ಸಚಿವಾಲಯಗಳು, ಇಲಾಖೆಗಳು ಮತ್ತು ಸಂಸ್ಥೆಗಳಿಗೆ ಆಯ್ಕೆಯಾದ 285 ನೂತನ ಅಭ್ಯರ್ಥಿಗಳಿಗೆ ಅವರು ನೇಮಕಾತಿ ಪತ್ರಗಳನ್ನು ವಿತರಿಸಿದರು. ಆದಾಯ ತೆರಿಗೆ ಇಲಾಖೆ, ನೌಕರರ ರಾಜ್ಯ ವಿಮಾ ನಿಗಮ (ಇ ಎಸ್ ಐ ಸಿ), ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ, ರಕ್ಷಣಾ ಸಚಿವಾಲಯ, ಅಂಚೆ ಇಲಾಖೆ, ಜವಾಹರಲಾಲ್ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (ಜೆಐಐಪಿಎಂಇ ಆರ್) ಮತ್ತು ದಕ್ಷಿಣ ರೈಲ್ವೆ ಸೇರಿದಂತೆ ಪ್ರಮುಖ ಸಂಸ್ಥೆಗಳಿಗೆ  ಸೇರ್ಪಡೆಗೊಳ್ಳುತ್ತಿರುವ ಯುವಕರಿಗೆ ಅವರು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವರಾದ ಡಾ. ಎಲ್. ಮುರುಗನ್, ಸರ್ಕಾರಿ ಸೇವೆಗೆ ಸೇರ್ಪಡೆಯಾಗುತ್ತಿರುವ ನೂತನ ಯುವಕರು 2047ರ ವೇಳೆಗೆ 'ವಿಕಸಿತ ಭಾರತ'ದ ದೂರದೃಷ್ಟಿಯನ್ನು ಸಾಕಾರಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಹೇಳಿದರು. ತಮ್ಮ ಜವಾಬ್ದಾರಿಗಳನ್ನು ಕೇವಲ ಕೆಲಸ ಗಳಿಸುವುದು ಎಂದು ಭಾವಿಸದೆ, ದೇಶ ಸೇವೆ ಮಾಡಲು ಮತ್ತು ಅದರ ಸಮಗ್ರ ಅಭಿವೃದ್ಧಿಗೆ ಕೊಡುಗೆ ನೀಡಲು ಸಿಕ್ಕ ಅವಕಾಶವೆಂದು ಪರಿಗಣಿಸುವಂತೆ ಅವರು ನೇಮಕಾತಿ ಹೊಂದಿದ ಅಭ್ಯರ್ಥಿಗಳಿಗೆ ಕರೆ ನೀಡಿದರು.

ನೇಮಕಾತಿ ಪತ್ರವು ಕೇವಲ ನೇಮಕಾತಿ ಆದೇಶವಲ್ಲ, ಬದಲಿಗೆ ದೇಶಕ್ಕೆ ಸೇವೆ ಸಲ್ಲಿಸುವ ಅವಕಾಶವಾಗಿದೆ ಎಂದು ಅವರು ಒತ್ತಿ ಹೇಳಿದರು. ನಾಗರಿಕರೊಂದಿಗೆ ಸಂವಹನ ನಡೆಸುವಾಗ ಸರ್ಕಾರಿ ನೌಕರರು ಸರ್ಕಾರದ ಪ್ರತಿನಿಧಿಗಳಾಗಿ ಮತ್ತು ಮುಖವಾಗಿ ಕಾರ್ಯನಿರ್ವಹಿಸುತ್ತಾರೆ ಎನ್ನುವುದರ ಬಗ್ಗೆ ಗಮನ ಸೆಳೆದರು. ಸಾರ್ವಜನಿಕ ಸೇವೆಯಲ್ಲಿ ಪ್ರಾಮಾಣಿಕತೆ, ಹೊಣೆಗಾರಿಕೆ, ಸಹಾನುಭೂತಿ ಮತ್ತು ಮಾನವೀಯ ದೃಷ್ಟಿಕೋನವು ಅವಿಭಾಜ್ಯ ಅಂಗವಾಗಿರಬೇಕು ಎಂದು ಅವರು ಒತ್ತಿ ಹೇಳಿದರು.

'ಮೇಕ್ ಇನ್ ಇಂಡಿಯಾ', 'ಸ್ಟಾರ್ಟ್-ಅಪ್ ಇಂಡಿಯಾ', 'ಸ್ಟ್ಯಾಂಡ್-ಅಪ್ ಇಂಡಿಯಾ' ಮತ್ತು 'ಮುದ್ರಾ' ಸಾಲ ಯೋಜನೆ ಸೇರಿದಂತೆ ಸರ್ಕಾರದ ವಿವಿಧ ಪ್ರಮುಖ ಉಪಕ್ರಮಗಳು ಯುವಕರು ಕೇವಲ ಉದ್ಯೋಗಾಕಾಂಕ್ಷಿಗಳಾಗಿರದೆ  ಜೊತೆಗೆ ಉದ್ಯೋಗ ಸೃಷ್ಟಿಕರ್ತರಾಗಿಯೂ ಹೊರಹೊಮ್ಮಲು ನೆರವಾಗಿವೆ ಎಂದು ಕೇಂದ್ರ ಸಚಿವರು ಉಲ್ಲೇಖಿಸಿದರು. ಸರ್ಕಾರದ ಹಲವು ಉಪಕ್ರಮಗಳ ಫಲವಾಗಿ ನಿರುದ್ಯೋಗ ದರವು ಶೇ. 6 ರಿಂದ ಶೇ. 3.2 ಕ್ಕೆ ಇಳಿಕೆಯಾಗಿದೆ ಎಂದು ಅವರು ಹೇಳಿದರು.

2014ರಲ್ಲಿ ದೇಶದಲ್ಲಿದ್ದ ನವೋದ್ಯಮಗಳ ಸಂಖ್ಯೆ ಸುಮಾರು 400 ರಷ್ಟಿತ್ತು, ಅದು ಈಗ 2.5 ಲಕ್ಷಕ್ಕೂ ಅಧಿಕವಾಗಿದೆ ಎಂದು ಉಲ್ಲೇಖಿಸಿದ ಕೇಂದ್ರ ಸಚಿವರಾದ ಡಾ. ಎಲ್. ಮುರುಗನ್, ನವೋದ್ಯಮ ಸಂಸ್ಥಾಪಕರಲ್ಲಿ ಹೆಚ್ಚಿನವರು 30 ವರ್ಷದೊಳಗಿನ ಯುವಕರಾಗಿದ್ದಾರೆ ಎಂದು ಹೇಳಿದರು.

ನಿರಂತರ ಕಲಿಕೆ, ಹೊಸ ತಂತ್ರಜ್ಞಾನಗಳ ಅಳವಡಿಕೆ ಮತ್ತು ವೃತ್ತಿಪರ ಕೌಶಲ್ಯಗಳ ನಿಯಮಿತ ಸುಧಾರಣೆಯ ಮಹತ್ವವನ್ನು ಅವರು ಪ್ರತಿಪಾದಿಸಿದರು. ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಪರಮಾಣು ಶಕ್ತಿಯಂತಹ ಹೊಸ ಕ್ಷೇತ್ರಗಳಲ್ಲಿ ಯುವಕರಿಗೆ ಹೆಚ್ಚುತ್ತಿರುವ ಅವಕಾಶಗಳ ಬಗ್ಗೆ, ಜೊತೆಗೆ ಬಾಹ್ಯಾಕಾಶ, ರಕ್ಷಣೆ, ಶಿಕ್ಷಣ, ಆಡಳಿತ ಮತ್ತು ಸಾರ್ವಜನಿಕ ಆಡಳಿತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚುತ್ತಿರುವುದರ ಬಗ್ಗೆ ಪ್ರಮುಖವಾಗಿ ಗಮನ ಸೆಳೆದರು.

ರೋಜ್‌ಗಾರ್ ಮೇಳಗಳ ಮೂಲಕ ಇದುವರೆಗೆ 12.75 ಲಕ್ಷಕ್ಕೂ ಹೆಚ್ಚು ನೇಮಕಾತಿ ಪತ್ರಗಳನ್ನು ವಿತರಿಸಲಾಗಿದ್ದು, ಇದು ಯುವಕರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸರ್ಕಾರ ನೀಡುತ್ತಿರುವ ವಿಶೇಷ ಆದ್ಯತೆಯನ್ನು ಬಿಂಬಿಸುತ್ತದೆ ಎಂದು ಕೇಂದ್ರ ಸಚಿವರು ಹೇಳಿದರು.

ನಂತರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರಾದ ಡಾ. ಎಲ್. ಮುರುಗನ್, ತಮಿಳುನಾಡಿನ ನವೋದಯ ಶಾಲೆಗಳು ಹಿಂದುಳಿದ ಮತ್ತು ಆರ್ಥಿಕವಾಗಿ ದುರ್ಬಲ ವರ್ಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುತ್ತವೆ, ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಸುಗಮಗೊಳಿಸುತ್ತವೆ ಮತ್ತು ವಿದ್ಯಾರ್ಥಿಗಳಿಗೆ ವಿವಿಧ ಭಾರತೀಯ ಭಾಷೆಗಳನ್ನು ಕಲಿಯಲು ಅವಕಾಶಗಳನ್ನು ಕಲ್ಪಿಸುತ್ತವೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ತಮಿಳುನಾಡು ಮತ್ತು ಪುದುಚೇರಿಯ ಆದಾಯ ತೆರಿಗೆ ಇಲಾಖೆಯ ಪ್ರಧಾನ ಮುಖ್ಯ ಆಯುಕ್ತರಾದ ಶ್ರೀ ಸುನಿಲ್ ಬಾಜ್ ಪೈ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು, ನೂತನವಾಗಿ ನೇಮಕಗೊಂಡ ಅಭ್ಯರ್ಥಿಗಳು ಮತ್ತು ಅವರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

  

 

*****


(ಪ್ರಕಟಣೆ ಐ.ಡಿ.: 2312589) ವಿಸಿಟರ್ ಕೌಂಟರ್ : 42
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Bengali