ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ
azadi ka amrit mahotsav

ಮಿಷನ್ ಕರ್ಮಯೋಗಿಯ ಅಡಿಯಲ್ಲಿ ತರಬೇತಿ ಸಂಸ್ಥೆಗಳನ್ನು ಪರಿವರ್ತಿಸಲು ಸಾಮರ್ಥ್ಯ ವರ್ಧನಾ ಆಯೋಗದಿಂದ (CBC) ಪ್ರಾದೇಶಿಕ ಕಾರ್ಯಾಗಾರಗಳ (ಸಾಧನಾ ಶೃಂಖಲಾ) ಆರಂಭ


ಸೆಪ್ಟೆಂಬರ್ 29 ಮತ್ತು 30 ರಂದು ವಿಜಯವಾಡದಲ್ಲಿ ನಡೆಯಲಿರುವ ಮೊದಲ ಕಾರ್ಯಾಗಾರದಲ್ಲಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಮತ್ತು ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಉಪಸ್ಥಿತರಿರುವರು

⁠ತೆಲಂಗಾಣ, ಕರ್ನಾಟಕ, ಒಡಿಶಾ, ತಮಿಳುನಾಡು, ಕೇರಳ ಮತ್ತು ಪುದುಚೇರಿಯ ಅಧಿಕಾರಿಗಳು ಮತ್ತು ತರಬೇತಿ ಸಂಸ್ಥೆಗಳು ಕಾರ್ಯಾಗಾರದಲ್ಲಿ ನಲ್ಲಿ ಭಾಗವಹಿಸಲಿವೆ

ಪ್ರಕಟಣಾ ದಿನಾಂಕ: 18 SEP 2026 4:21PM by PIB Bengaluru

ʻಸಾಮರ್ಥ್ಯ ವರ್ಧನಾ ಆಯೋಗವುʼ(ಸಿಬಿಸಿ) ʻರಾಷ್ಟ್ರೀಯ ಪ್ರಗತಿಗಾಗಿ ಹೊಂದಾಣಿಕೆಯ ಅಭಿವೃದ್ಧಿ ಮತ್ತು ಮಾನವೀಯ ಸಾಮರ್ಥ್ಯವನ್ನು ಬಲಪಡಿಸುವ (ಸಾಧನಾ - Sādhana) ಶೃಂಖಲಾ-2026ʼ ಕಾರ್ಯಕ್ರಮವನ್ನು ದೇಶಾದ್ಯಂತ ಪ್ರಾದೇಶಿಕ ಸಮಾಲೋಚನಾ ಕಾರ್ಯಾಗಾರಗಳ ಸರಣಿಯಾಗಿ ಆಯೋಜಿಸುತ್ತಿದೆ. ʻಮಿಷನ್ ಕರ್ಮಯೋಗಿʼ ಅಡಿಯಲ್ಲಿ ತರಬೇತಿ ಸಂಸ್ಥೆಗಳನ್ನು ಸಾಮರ್ಥ್ಯ ವರ್ಧನಾ ಸಂಸ್ಥೆಗಳಾಗಿ ಪರಿವರ್ತಿಸಲು ಈ ಸರಣಿಯನ್ನು ಮೀಸಲಿಡಲಾಗಿದೆ. 2026ರ ಏಪ್ರಿಲ್ 2 ರಿಂದ 8 ರವರೆಗೆ ಆಚರಿಸಲಾದ 'ಸಾಧನಾ ಸಪ್ತಾಹ 2026', ದೇಶದ ಅತಿದೊಡ್ಡ ಸಹಯೋಗದ ಸಾಮರ್ಥ್ಯ ವರ್ಧನಾ ಉಪಕ್ರಮಗಳಲ್ಲಿ ಒಂದಾಗಿದೆ. ಸಮಾಲೋಚನಾ ಮನೋಭಾವವನ್ನು ಮುಂದಕ್ಕೆ ಕೊಂಡೊಯ್ಯುವ ಉದ್ದೇಶದಿಂದ, ಸಾಂಸ್ಥಿಕ ಸುಧಾರಣೆಯ ಕುರಿತಾದ ರಾಷ್ಟ್ರೀಯ ಸಂವಾದವನ್ನು ರಾಜ್ಯಗಳು ಮತ್ತು ಅವುಗಳ ತರಬೇತಿ ಸಂಸ್ಥೆಗಳಿಗೆ ವಿಸ್ತರಿಸಲು ಈ ʻಶೃಂಖಲಾʼ ಪ್ರಯತ್ನಿಸುತ್ತಿದೆ. ಈ ಸರಣಿಯ ಮೊದಲ ಕಾರ್ಯಾಗಾರವು ಆಂಧ್ರಪ್ರದೇಶದ ವಿಜಯವಾಡದಲ್ಲಿ 2026ರ ಸೆಪ್ಟೆಂಬರ್ 29 ಮತ್ತು 30 ರಂದು ನಡೆಯಲಿದೆ.

ಸಾಧನಾ ಸಪ್ತಾಹದಿಂದ ಸಾಧನಾ ʻಶೃಂಖಲಾʼ ಕಡೆಗೆ

ಭವಿಷ್ಯ ಸನ್ನದ್ಧವಾದ, ಸ್ಪಂದಿಸುವ ಮತ್ತು ನಾಗರಿಕ-ಕೇಂದ್ರಿತ ನಾಗರಿಕ ಸೇವೆಗೆ ತರಬೇತಿ ಸಂಸ್ಥೆಗಳು ತಳಹದಿಯಾಗಿದ್ದು, 'ವಿಕಸಿತ ಭಾರತ 2047'ರ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕಳೆದ ಒಂದು ವರ್ಷದಲ್ಲಿ, ಆಯೋಗವು ಪ್ರಾದೇಶಿಕ ಕಾರ್ಯಪಡೆ ಸಭೆಗಳು, ಸಾಧನಾ ಸಪ್ತಾಹ ಮತ್ತು ಮೇ 2026ರಲ್ಲಿ ನಡೆದ ರಾಷ್ಟ್ರೀಯ ಶೃಂಗಸಭೆ ಸೇರಿದಂತೆ ವ್ಯಾಪಕವಾದ ಸಮಾಲೋಚನಾ ಪಯಣವನ್ನು ಕೈಗೊಂಡಿದೆ. ಈ ಸಮಾಲೋಚನೆಗಳು ತರಬೇತಿ ಸಂಸ್ಥೆಗಳು, ರಾಜ್ಯ ಸರ್ಕಾರಗಳು ಮತ್ತು ಉದ್ಯಮ ಪಾಲುದಾರರನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸಿದವು. ಸ್ವತಂತ್ರ ತರಬೇತಿ ನೀಡುವ ಸಂಸ್ಥೆಗಳಿಂದ ಆಯಕಟ್ಟಿನ, ಸಾಮರ್ಥ್ಯ-ಚಾಲಿತ ಸಾಮರ್ಥ್ಯ ವರ್ಧನಾ ಸಂಸ್ಥೆಗಳಾಗಿ ಬೆಳೆಯಲು ತರಬೇತಿ ಸಂಸ್ಥೆಗಳಿಗೆ ಮಾರ್ಗದರ್ಶನ ನೀಡುವ ಏಕೀಕೃತ ಚೌಕಟ್ಟಿನ ಅಗತ್ಯವನ್ನು ಈ ಚರ್ಚೆಗಳು ಒತ್ತಿಹೇಳಿದವು. ಇದರ ಆಧಾರದ ಮೇಲೆ, ಸಾಧನಾ ಶೃಂಖಲಾವು ಈ ಸಂವಾದವನ್ನು ರಾಷ್ಟ್ರೀಯ ಸಮಾಲೋಚನೆಯಿಂದ ಪ್ರಾದೇಶಿಕ ಸಂವಾದ, ಸಂದರ್ಭೀಕರಣ ಮತ್ತು ಕ್ರಿಯೆಯತ್ತ ಕೊಂಡೊಯ್ಯುತ್ತದೆ.

ತರಬೇತಿ ಸಂಸ್ಥೆಗಳ ಪರಿವರ್ತನಾ ಚೌಕಟ್ಟಿನತ್ತ

ಈ ಪ್ರಾದೇಶಿಕ ಕಾರ್ಯಾಗಾರಗಳ ಭಾಗವಾಗಿ, ಆಯೋಗವು ರಾಜ್ಯಗಳು, ತರಬೇತಿ ಸಂಸ್ಥೆಗಳು ಮತ್ತು ಇತರ ಮಧ್ಯಸ್ಥಗಾರರೊಂದಿಗೆ ದೇಶಾದ್ಯಂತ ಸಂಸ್ಥೆಗಳ ವೈವಿಧ್ಯಮಯ ಅಗತ್ಯಗಳು ಮತ್ತು ವಾಸ್ತವಗಳಿಗೆ ಸ್ಪಂದಿಸುವ ತರಬೇತಿ ಸಂಸ್ಥೆ ರೂಪಾಂತರ ಚೌಕಟ್ಟನ್ನು ಅಭಿವೃದ್ಧಿಪಡಿಸಲು ತೊಡಗಿಸಿಕೊಂಡಿದೆ. ಸಾಂಸ್ಥಿಕ ಆಡಳಿತ ಮತ್ತು ನಾಯಕತ್ವ, ಕಾರ್ಯಾಚರಣೆಯ ಪರಿಣಾಮಕಾರಿತ್ವ ಮತ್ತು ಸಹಯೋಗ, ಬೋಧಕವರ್ಗ ಮತ್ತು ಸಾಮರ್ಥ್ಯ ಅಭಿವೃದ್ಧಿ, ಡಿಜಿಟಲ್ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ರಚನಾತ್ಮಕ ಅಳವಡಿಕೆ ಸೇರಿದಂತೆ ಪ್ರಮುಖ ಕ್ಷೇತ್ರಗಳ ಮೇಲೆ ಚರ್ಚೆಗಳು ಗಮನಹರಿಸಲಿವೆ. ರಾಜ್ಯಗಳು ಮತ್ತು ಸಂಸ್ಥೆಗಳ ವೈಯಕ್ತಿಕ ಅನುಭವಗಳು, ಆದ್ಯತೆಗಳು ಮತ್ತು ಸಂದರ್ಭಗಳಿಂದ ರೂಪುಗೊಳ್ಳುತ್ತಲೇ, ತರಬೇತಿ ಸಂಸ್ಥೆಗಳ ಪರಿವರ್ತನೆಗೆ ಹಂಚಿಕೆಯ ನಿರ್ದೇಶನವನ್ನು ನೀಡುವ ಸಾಮಾನ್ಯ ಚೌಕಟ್ಟನ್ನು ರೂಪಿಸುವುದು ಇದರ ಉದ್ದೇಶವಾಗಿದೆ.

ಆದುದರಿಂದ ಈ ಚೌಕಟ್ಟನ್ನು ಪರಿವರ್ತನೆಗಾಗಿ ಸಹ-ಮಾಲೀಕತ್ವದ ಮಾರ್ಗಸೂಚಿಯಾಗಿ ಅಭಿವೃದ್ಧಿಪಡಿಸಲಾಗುವುದು. ಈ ಸಂವಾದಗಳನ್ನು ಪ್ರದೇಶಗಳಿಗೆ ಕೊಂಡೊಯ್ಯಲು, ಹೊರಹೊಮ್ಮುವ ಶಿಫಾರಸುಗಳನ್ನು ಮೌಲ್ಯೀಕರಿಸಲು ಮತ್ತು ಅವುಗಳನ್ನು ಕಾರ್ಯಸಾಧ್ಯವಾದ ಆದ್ಯತೆಗಳಾಗಿ ಪರಿವರ್ತಿಸಲು ಸಾಧನಾ ಶೃಂಖಲಾ ವೇದಿಕೆಯನ್ನು ಒದಗಿಸುತ್ತದೆ. ಸಾಧನಾ ಸಪ್ತಾಹದ ಸಮಯದಲ್ಲಿ ಪ್ರಾರಂಭಿಸಲಾದ ಏಕೀಕೃತ ‘ನವ-ಯುಗದ ರಾಷ್ಟ್ರೀಯ ತರಬೇತಿ ಉಪಕ್ರಮ’ಗಳ (ಉನ್ನತಿ) ಪೋರ್ಟಲ್‌ನಲ್ಲಿ ಈ ಪರಿವರ್ತನೆಯ ಅನುಷ್ಠಾನವನ್ನು ನೆಲೆಗೊಳಿಸಲಾಗುವುದು ಮತ್ತು ಇದನ್ನು ಪ್ರಮುಖ ಡಿಜಿಟಲ್ ಸಕ್ರಿಯಗೊಳಿಸುವಿಕೆಯಾಗಿ ಚೌಕಟ್ಟಿನೊಳಗೆ ಸಂಯೋಜಿಸಲಾಗುವುದು. ಒಂದೇ ವೇದಿಕೆಯಲ್ಲಿ 700ಕ್ಕೂ ಹೆಚ್ಚು ತರಬೇತಿ ಸಂಸ್ಥೆಗಳನ್ನು ಸಂಪರ್ಕಿಸುವ ಮೂಲಕ, 'ಉನ್ನತಿ'ಯು ಈ ಚೌಕಟ್ಟಿನ ಉದ್ದೇಶಗಳನ್ನು ಆಚರಣೆಗೆ ತರುತ್ತದೆ. ಜೊತೆಗೆ ಹೆಚ್ಚಿನ ಸಾಂಸ್ಥಿಕ ಗೋಚರತೆ ಹಾಗೂ ತಡೆರಹಿತ ಸಹಕಾರವನ್ನು ಬೆಳೆಸುತ್ತದೆ. ಅಲ್ಲದೆ, ಸಹಯೋಗ, ಸಹ-ಹಂಚಿಕೆ ಮತ್ತು ಸಹ-ಸೃಷ್ಟಿಯ ಮೂಲಕ ನಿರಂತರ, ಡೇಟಾ-ಆಧಾರಿತ ಸಾಂಸ್ಥಿಕ ಸುಧಾರಣೆಯನ್ನು ಬೆಂಬಲಿಸುತ್ತದೆ.

ವಿಜಯವಾಡದಲ್ಲಿ ಮೊದಲ ಪ್ರಾದೇಶಿಕ ಕಾರ್ಯಾಗಾರ

ವಿಜಯವಾಡದಲ್ಲಿ ನಡೆಯುವ ಉದ್ಘಾಟನಾ ಪ್ರಾದೇಶಿಕ ಕಾರ್ಯಾಗಾರದಲ್ಲಿ ಆಂಧ್ರಪ್ರದೇಶದ ಮಾನ್ಯ ಮುಖ್ಯಮಂತ್ರಿ ಶ್ರೀ ಎನ್. ಚಂದ್ರಬಾಬು ನಾಯ್ಡು ಅವರು ಉಪಸ್ಥಿತರಿರಲಿದ್ದು, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಖಾತೆ ಸಹಾಯಕ ಸಚಿವ ಡಾ. ಜಿತೇಂದ್ರ ಸಿಂಗ್ ಅವರ ಗೌರವಾನ್ವಿತ ಉಪಸ್ಥಿತಿ ಇರಲಿದೆ. ಕಾರ್ಯಾಗಾರವು ಒಡಿಶಾ, ತೆಲಂಗಾಣ, ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಮತ್ತು ಪುದುಚೇರಿಯ ಹಿರಿಯ ಅಧಿಕಾರಿಗಳು, ಜೊತೆಗೆ ಈ ರಾಜ್ಯಗಳ ತರಬೇತಿ ಸಂಸ್ಥೆಗಳ ಮುಖ್ಯಸ್ಥರು ಮತ್ತು ಬೋಧಕವರ್ಗ, ಉದ್ಯಮ ಪಾಲುದಾರರು, ವಿಷಯ ತಜ್ಞರು ಮತ್ತು ಸ್ಟಾರ್ಟ್‌ಅಪ್‌ಗಳ ಪ್ರತಿನಿಧಿಗಳನ್ನು ಒಟ್ಟುಗೂಡಿಸುತ್ತದೆ.

ವಿಜಯವಾಡದಲ್ಲಿನ ಕಾರ್ಯಾಗಾರದ ನಂತರ, ರಾಜ್ಯಗಳು ಮತ್ತು ತರಬೇತಿ ಸಂಸ್ಥೆಗಳೊಂದಿಗಿನ ಈ ಸಹಯೋಗದ ಒಡನಾಟವನ್ನು ಮುಂದಕ್ಕೆ ಕೊಂಡೊಯ್ಯುತ್ತಾ ʻಸಾಧನಾ ಶೃಂಖಲಾʼ ದೇಶದ ಇತರ ಪ್ರದೇಶಗಳಿಗೆ ವಿಸ್ತರಿಸಲಿದೆ. ಈ ಸಮಾಲೋಚನೆಗಳಿಂದ ಹೊರಹೊಮ್ಮುವ ಒಳನೋಟಗಳು ʻತರಬೇತಿ ಸಂಸ್ಥೆಗಳ ಪರಿವರ್ತನಾ ಚೌಕಟ್ಟಿʼನ ಅಂತಿಮಗೊಳಿಸುವಿಕೆಗೆ ಸಹಾಯಕವಾಗಲಿವೆ. ಹಾಗೆ ಮಾಡುವ ಮೂಲಕ, ಈ ಉಪಕ್ರಮವು ಸಂಪರ್ಕಿತ, ಸಕ್ರಿಯ ಮತ್ತು ಭವಿಷ್ಯ ಸನ್ನದ್ಧವಾದ ಸಾಮರ್ಥ್ಯ ವರ್ಧನಾ ಪರಿಸರ ವ್ಯವಸ್ಥೆಗೆ ಕೊಡುಗೆ ನೀಡುತ್ತದೆ. 'ವಿಕಸಿತ ಭಾರತ 2047'ರ ಹಾದಿಯಲ್ಲಿ ನಾಗರಿಕರಿಗೆ ಉತ್ತಮ ಫಲಿತಾಂಶಗಳನ್ನು ತಲುಪಿಸಲು ಅಗತ್ಯವಿರುವ ಸಾಮರ್ಥ್ಯಗಳೊಂದಿಗೆ ನಾಗರಿಕ ಸೇವಕರನ್ನು ಸಜ್ಜುಗೊಳಿಸುವಲ್ಲಿ ʼಮಿಷನ್ ಕರ್ಮಯೋಗಿʼಯ ಬದ್ಧತೆಯನ್ನು ಇದು ಮರುದೃಢೀಕರಿಸುತ್ತದೆ.

 

*****


(ಪ್ರಕಟಣೆ ಐ.ಡಿ.: 2312338) ವಿಸಿಟರ್ ಕೌಂಟರ್ : 74
ಪ್ರಕಟಣೆಯನ್ನು ಇದರಲ್ಲಿ ಓದಿ: English , Odia , Tamil , Telugu_Vw , Malayalam