ಸಂಸ್ಕೃತಿ ಸಚಿವಾಲಯ
ಪ್ರಧಾನ ಮಂತ್ರಿಗಳ ಸ್ಮರಣಿಕೆಗಳ 8ನೇ ಆವೃತ್ತಿಯ ವಿದ್ಯುನ್ಮಾನ-ಹರಾಜಿಗೆ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಚಾಲನೆ
2026 ಸೆಪ್ಟೆಂಬರ್ 17ರಿಂದ ಅಧಿಕೃತ ಪೋರ್ಟಲ್ ಮೂಲಕ ಇ-ಹರಾಜು ಆರಂಭ
ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಕಲೆ ಮತ್ತು ಕರಕುಶಲತೆ ಪ್ರತಿನಿಧಿಸುವ 1,498 ಸ್ಮರಣಿಕೆಗಳನ್ನು ಇ-ಹರಾಜಿನ ಮೂಲಕ ಮಾರಾಟ
ಹರಾಜಿನಿಂದ ಬರುವ ಆದಾಯದಿಂದ ನಮಾಮಿ ಗಂಗೆ ಕಾರ್ಯಕ್ರಮಕ್ಕೆ ಬೆಂಬಲ
ಪ್ರಕಟಣಾ ದಿನಾಂಕ:
16 SEP 2026 6:26PM by PIB Bengaluru
ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರು ನವದೆಹಲಿಯಲ್ಲಿಂದು ಸಂಸ್ಕೃತಿ ಸಚಿವಾಲಯದ ಕಾರ್ಯದರ್ಶಿ ಶ್ರೀ ವಿವೇಕ್ ಅಗರ್ವಾಲ್ ಸಮ್ಮುಖದಲ್ಲಿ ಪ್ರಧಾನಮಂತ್ರಿಗಳ ಸ್ಮರಣಿಕೆಗಳ 8ನೇ ಆವೃತ್ತಿಯ ಹರಾಜು ಕಾರ್ಯಕ್ರಮ ಉದ್ಘಾಟಿಸಿದರು. ಪ್ರಧಾನಮಂತ್ರಿ ಅವರಿಗೆ ವಿವಿಧ ಕಾರ್ಯಕ್ರಮಗಳು, ಸಭೆ, ಸಮಾರಂಭಗಳಲ್ಲಿ ಪ್ರದಾನ ಮಾಡಲಾದ ವಿಶಿಷ್ಟ ಸ್ಮರಣಿಕೆಗಳನ್ನು ಈ ಹರಾಜಿನಲ್ಲಿ ನಾಗರಿಕರು, ಸಂಗ್ರಾಹಕರು, ಸಂಘ ಸಂಸ್ಥೆಗಳು, ಕಲೆ ಮತ್ತು ಸಂಸ್ಕೃತಿ ಉತ್ಸಾಹಿಗಳಿಗೆ ಖರೀದಿಸುವ ಅವಕಾಶ ಸಿಗಲಿದೆ. ಪ್ರಧಾನಮಂತ್ರಿಗಳ ಸ್ಮರಣಿಕೆಗಳ 8ನೇ ಆವೃತ್ತಿಯ ಹರಾಜು 2026 ಸೆಪ್ಟೆಂಬರ್ 17ರಿಂದ ಅಧಿಕೃತ ಪೋರ್ಟಲ್ www.pmmementos.gov.in ಮೂಲಕ ಆರಂಭವಾಗುತ್ತದೆ.

ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರು, ಈ ಆವೃತ್ತಿಯಲ್ಲಿ ಒಟ್ಟು 1,498 ಸ್ಮರಣಿಕೆಗಳನ್ನು ನೀಡಲಾಗುತ್ತಿದೆ. ಈ ಸಂಗ್ರಹವು ಭಾರತದ ಶ್ರೀಮಂತ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ. ದೇಶದ ಕಲಾತ್ಮಕ ಸಂಪ್ರದಾಯಗಳು, ಸಾಂಪ್ರದಾಯಿಕ ಕರಕುಶಲತೆ, ಸಾಂಸ್ಕೃತಿಕ ಆಚರಣೆಗಳು, ಆಧ್ಯಾತ್ಮಿಕ ಸಂಪ್ರದಾಯಗಳು ಮತ್ತು ಕ್ರೀಡಾ ಸಾಧನೆಗಳನ್ನು ಪ್ರತಿನಿಧಿಸುವ ಕಲಾಕೃತಿಗಳು ಇದರಲ್ಲಿವೆ. ಈ ಸ್ಮರಣಿಕೆಗಳನ್ನು ದೇಶದ ವಿವಿಧ ಭಾಗಗಳಿಂದ ತರಲಾಗಿದ್ದು, ಸಂಗ್ರಹಕ್ಕೆ ಭಾರತದ ವೈಶಿಷ್ಟ್ಯ ಪರಂಪರೆ ಹೊಂದಿವೆ ಎಂದರು.
ಕಲಾಕೃತಿಗಳ ಸಂಗ್ರಹವು ರಾಜ್ಯವಾರು ಪ್ರಾತಿನಿಧ್ಯವು ಭಾರತದ ಭೌಗೋಳಿಕ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರದರ್ಶಿಸುತ್ತದೆ. ಬಹುದೊಡ್ಡ ಪ್ರಾತಿನಿಧ್ಯಗಳಲ್ಲಿ ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಗುಜರಾತ್, ಮಹಾರಾಷ್ಟ್ರ, ಅಸ್ಸಾಂ, ಬಿಹಾರ ಮತ್ತು ಒಡಿಶಾದ ಸ್ಮಾರಕಗಳು ಸೇರಿವೆ. 8ನೇ ಆವೃತ್ತಿಯ ಹರಾಜಿನಲ್ಲಿ ಕೆಲವು ವಿಶಿಷ್ಟ ಕಲಾಕೃತಿಗಳನ್ನು ಪ್ರತಿನಿಧಿಸುವ 50 ಗುರುತಿಸಲಾದ ಪ್ರಧಾನ ಕಲಾಕೃತಿಗಳು ಸೇರಿವೆ. ಇವುಗಳಲ್ಲಿ ಕರ್ನಾಟಕದ ಶ್ರೀರಾಮನ ಬೆಳ್ಳಿ ಸ್ಮಾರಕ, 13.50 ಲಕ್ಷ ರೂ. ಮೂಲ ಬೆಲೆ; ಕಾಕತೀಯ ಕಲಾ ತೋರಣಂನ ಬೆಳ್ಳಿ ಕಲಾಕೃತಿ, ಇದರ ಮೂಲ ಬೆಲೆ 9 ಲಕ್ಷ ರೂ.; ಮರದ ಫ್ರೇಮ್ ನಲ್ಲಿರುವ ಲೈಫ್ ಗೊಂಡ್ ವರ್ಣ ಚಿತ್ರಕಲೆ, ಇದರ ಮೂಲ ಬೆಲೆ 7.50 ಲಕ್ಷ ರೂ.; ರಥದ ಮೇಲೆ ಜಗನ್ನಾಥ ಪರಿವಾರ, ಇದರ ಮೂಲ ಬೆಲೆ 6 ಲಕ್ಷ ರೂ.ಮತ್ತು 99.99 ಶುದ್ಧ ಚಿನ್ನದ ಫ್ರೇಮ್ ಇರುವ ರಾಧಾ ಕೃಷ್ಣ ಕಲಾಕೃತಿ, ಇದರ ಮೂಲ ಬೆಲೆ 5.40 ಲಕ್ಷ ರೂ. ಸೇರಿವೆ ಎಂದು ಸಚಿವರು ವಿವರ ನೀಡಿದರು.

ಪ್ರಧಾನಮಂತ್ರಿಗಳ ಸ್ಮರಣಿಕೆಗಳ ಇ-ಹರಾಜನ್ನು ನಿರಂತರವಾಗಿ ಆವೃತ್ತಿಗಳ ಮೂಲಕ ಆಯೋಜಿಸಲಾಗಿದ್ದು, ನಾಗರಿಕರು, ಸಂಗ್ರಾಹಕರು ಮತ್ತು ಸಂಘ ಸಂಸ್ಥೆಗಳ ಭಾಗವಹಿಸುವಿಕೆಗೆ ಸಾಕ್ಷಿಯಾಗಿದೆ. ಈ ಉಪಕ್ರಮವು ಸಾರ್ವಜನಿಕರಿಗೆ ಈ ಸ್ಮರಣಿಕೆಗಳನ್ನು ಪಡೆಯಲು ಪಾರದರ್ಶಕ ಕಾರ್ಯ ವಿಧಾನವನ್ನು ಒದಗಿಸುತ್ತದೆ. ಭಾರತದ ವೈವಿಧ್ಯಮಯ ಕಲಾತ್ಮಕ ಮತ್ತು ಸಾಂಸ್ಕೃತಿಕ ಸಂಪ್ರದಾಯಗಳನ್ನು ಮೆಚ್ಚುವ ಅವಕಾಶ ಸೃಷ್ಟಿಸುತ್ತದೆ. ಈ ಉಪಕ್ರಮದ ಮಹತ್ವಕ್ಕೆ ಒತ್ತು ನೀಡಿದ ಸಚಿವರು, ಪ್ರಧಾನಮಂತ್ರಿಗಳ ಸ್ಮರಣಿಕೆಗಳ ಇ-ಹರಾಜಿನ ಪ್ರಮುಖ ಲಕ್ಷಣವೆಂದರೆ, ಹರಾಜಿನಿಂದ ಬರುವ ಹಣವನ್ನು ನಮಾಮಿ ಗಂಗೆ ಕಾರ್ಯಕ್ರಮಕ್ಕೆ ಬಳಸಲಾಗುತ್ತದೆ. ಈ ಉಪಕ್ರಮವು ಭಾರತದ ಸಾಂಸ್ಕೃತಿಕ ಪರಂಪರೆ ಮತ್ತು ಗಂಗಾ ನದಿಯ ಪುನರುಜ್ಜೀವನ ಮತ್ತು ಸಂರಕ್ಷಣೆಯ ರಾಷ್ಟ್ರೀಯ ಧ್ಯೇಯದ ನಡುವೆ ಅರ್ಥಪೂರ್ಣ ಸಂಪರ್ಕ ಸೃಷ್ಟಿಸುತ್ತದೆ ಎಂದು ಹೇಳಿದರು.
ಸಂಸ್ಕೃತಿ ಸಚಿವಾಲಯದ ಅಧೀನದಲ್ಲಿರುವ ನವದೆಹಲಿಯ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್(ಎನ್ಜಿಎಂಎ) ಸಂಸ್ಥೆಯು, ಈ ಉಪಕ್ರಮದ ದಾಖಲೀಕರಣ, ಪ್ರದರ್ಶನ ಮತ್ತು ಕಾರ್ಯಾಚರಣೆಯ ಅಂಶಗಳನ್ನು ಸಂಯೋಜಿಸಿದೆ. ತಾಂತ್ರಿಕ ಮತ್ತು ಪೋರ್ಟಲ್-ಸಂಬಂಧಿತ ಬೆಂಬಲಕ್ಕಾಗಿ ಎನ್ಐಸಿ, ಮೌಲ್ಯಮಾಪನಕ್ಕೆ ಸಂಬಂಧಪಟ್ಟ ಅಧಿಕಾರಿಗಳು, ಪಾವತಿ ಗೇಟ್ವೇ ಬೆಂಬಲಕ್ಕಾಗಿ ಎಸ್ಬಿಐ ಮತ್ತು ಯಶಸ್ವಿಯಾಗಿ ಖರೀದಿಸಿದ ವಸ್ತುಗಳ ಪ್ಯಾಕಿಂಗ್ ಮತ್ತು ವಿತರಣೆಗಾಗಿ ಗೊತ್ತುಪಡಿಸಿದ ಫೈನ್ ಆರ್ಟ್ ಹ್ಯಾಂಡ್ಲಿಂಗ್ ಏಜೆನ್ಸಿ ಸೇರಿದಂತೆ ವಿವಿಧ ಪಾಲುದಾರರೊಂದಿಗೆ ಸಮನ್ವಯ ಸಾಧಿಸುವ ಪ್ರಕ್ರಿಯೆ ಒಳಗೊಂಡಿರುತ್ತದೆ.
ಇ-ಹರಾಜಿಗಿಂತ ಮೊದಲು ಪ್ರದರ್ಶನವು ಸಂದರ್ಶಕರಿಗೆ ಸ್ಮಾರಕಗಳನ್ನು ವೀಕ್ಷಿಸಲು ಮತ್ತು ಅವುಗಳ ಕಲಾತ್ಮಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಪ್ರಶಂಸಿಸಲು ಅವಕಾಶ ಒದಗಿಸುತ್ತದೆ. ಪ್ರದರ್ಶನವು ಸಾರ್ವಜನಿಕರಿಗೆ ಭಾರತದ ಸಾಂಪ್ರದಾಯಿಕ ಕರಕುಶಲ ವಸ್ತುಗಳು, ಕಲಾತ್ಮಕ ಅಭ್ಯಾಸಗಳು ಮತ್ತು ಸಂಗ್ರಹಣೆಯಲ್ಲಿ ಪ್ರತಿನಿಧಿಸಲಾದ ಸಾಂಸ್ಕೃತಿಕ ಅಭಿವ್ಯಕ್ತಿಗಳ ವೈವಿಧ್ಯತೆಯನ್ನು ಅನ್ವೇಷಿಸಲು ಅನುವು ಮಾಡಿಕೊಡುತ್ತದೆ.

ಸಂಸ್ಕೃತಿ ಸಚಿವಾಲಯವು ಭಾರತದ ನಾಗರಿಕರು, ಸಂಗ್ರಾಹಕರು, ಸಂಸ್ಥೆಗಳು, ಕಾರ್ಪೊರೇಟ್ ಸಂಸ್ಥೆಗಳು, ಕಲಾ ಉತ್ಸಾಹಿಗಳು ಮತ್ತು ಸಾರ್ವಜನಿಕರನ್ನು ಸಂಗ್ರಹ ಅನ್ವೇಷಿಸಲು, ಪ್ರದರ್ಶನಕ್ಕೆ ಭೇಟಿ ನೀಡಲು ಮತ್ತು ಪಿಎಂ ಮೆಮೆಂಟೋಸ್ ಇ-ಹರಾಜಿನ 8ನೇ ಆವೃತ್ತಿಯಲ್ಲಿ ಭಾಗವಹಿಸುವಂತೆ ಆಹ್ವಾನಿಸುತ್ತದೆ.
ಪಿಎಂಮೆಮೆಂಟೋಸ್ ಇ-ಹರಾಜು ಭಾರತದ ಪರಂಪರೆ, ಕಲೆ, ಕರಕುಶಲತೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಆಚರಿಸುವ ಒಂದು ಉಪಕ್ರಮವಾಗಿದ್ದು, ಸಾರ್ವಜನಿಕ ಭಾಗವಹಿಸುವಿಕೆಯನ್ನು ಸಕ್ರಿಯಗೊಳಿಸುತ್ತದೆ ಮತ್ತು ನಮಾಮಿ ಗಂಗೆ ಕಾರ್ಯಕ್ರಮದ ಮೂಲಕ ಮಹತ್ವದ ರಾಷ್ಟ್ರೀಯ ಉದ್ದೇಶಕ್ಕೆ ಮಹತ್ತರ ಕೊಡುಗೆ ನೀಡುತ್ತದೆ.
******
(ಪ್ರಕಟಣೆ ಐ.ಡಿ.: 2311108)
ವಿಸಿಟರ್ ಕೌಂಟರ್ : 32