ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಬ್ರಿಕ್ಸ್ ಶೃಂಗಸಭೆಯ ನೇಪಥ್ಯದಲ್ಲಿ ಇರಾನ್ ಅಧ್ಯಕ್ಷರನ್ನು ಭೇಟಿಯಾದ ಪ್ರಧಾನಮಂತ್ರಿ ಮೋದಿ

ಪ್ರಕಟಣಾ ದಿನಾಂಕ: 11 SEP 2026 8:33PM by PIB Bengaluru

ನವದೆಹಲಿಯಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯ ನೇಪಥ್ಯದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇರಾನ್ ಅಧ್ಯಕ್ಷರಾದ ಗೌರವಾನ್ವಿತ ಡಾ. ಮಸೌದ್ ಪೆಜೆಶ್ಕಿಯಾನ್ ಅವರನ್ನು ಭೇಟಿಯಾದರು. 2 ವಾರಗಳ ಅವಧಿಯಲ್ಲಿ ಇಬ್ಬರು ನಾಯಕರ ನಡುವಿನ 2ನೇ ಸಭೆ ಇದಾಗಿದೆ. ಆಗಸ್ಟ್ 31 ರಂದು ಬಿಷ್ಕೆಕ್‌ನಲ್ಲಿ ನಡೆದ ಎಸ್‌ಸಿಒ ಶೃಂಗಸಭೆಯ ಸಂದರ್ಭದಲ್ಲಿ ಅವರು ಈ ಹಿಂದೆ ಭೇಟಿಯಾಗಿದ್ದರು.

ಭಾರತ-ಇರಾನ್ ನಡುವಿನ ದ್ವಿಪಕ್ಷೀಯ ಸಂಬಂಧದ ವಿವಿಧ ಅಂಶಗಳನ್ನು ಇಬ್ಬರೂ ನಾಯಕರು ಚರ್ಚಿಸಿದರು. ಸವಾಲಿನ ಸಂದರ್ಭಗಳ ಹೊರತಾಗಿಯೂ ಬ್ರಿಕ್ಸ್ ಸಂಬಂಧಿತ ಸಭೆಗಳಲ್ಲಿ ನಿಯಮಿತವಾಗಿ, ಉನ್ನತ ಮಟ್ಟದ ನಿಯೋಗ ಭಾಗವಹಿಸಿರುವುದಕ್ಕೆ ಪ್ರಧಾನಮಂತ್ರಿ ಅವರು ಇರಾನ್ ಗೆ ಧನ್ಯವಾದ ಅರ್ಪಿಸಿದರು. ಜಾಗತಿಕ ದಕ್ಷಿಣದ ದೇಶಗಳಲ್ಲಿ ಚೇತರಿಕೆ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆಯ ಮನೋಭಾವ ನಿರ್ಮಿಸುವಲ್ಲಿ ಬ್ರಿಕ್ಸ್‌ ಹೊಂದಿರುವ ನೈಜ ಸಾಮರ್ಥ್ಯವನ್ನು ಅವರು ಗಮನಿಸಿದರು. ಬ್ರಿಕ್ಸ್ ಉದ್ಯಮ ವ್ಯವಹಾರ ವೇದಿಕೆಯ ನಾಯಕರ ಅಧಿವೇಶನದ ಕಲಾಪದಲ್ಲಿ ಭಾಗವಹಿಸಿದ್ದಕ್ಕಾಗಿ ಅಧ್ಯಕ್ಷರಾದ ಪೆಜೆಶ್ಕಿಯಾನ್ ಅವರಿಗೆ ಮೋದಿ ಧನ್ಯವಾದ ಅರ್ಪಿಸಿದರು.

ಪಶ್ಚಿಮ ಏಷ್ಯಾದಲ್ಲಿನ ಇತ್ತೀಚಿನ ಸಂಘರ್ಷಗಳ ಕುರಿತು ಇಬ್ಬರೂ ನಾಯಕರು ತಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಎಲ್ಲಾ ಸಮಸ್ಯೆಗಳನ್ನು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಪರಿಹರಿಸಬೇಕು ಎಂಬ ಭಾರತದ ಸ್ಥಿರವಾದ ನಿಲುವನ್ನು ಪ್ರಧಾನಮಂತ್ರಿ ಪುನರುಚ್ಚರಿಸಿದರು. ಈ ಪ್ರದೇಶದಲ್ಲಿ ಶಾಶ್ವತ ಶಾಂತಿ ಮತ್ತು ಸ್ಥಿರತೆ ಖಚಿತಪಡಿಸಿಕೊಳ್ಳಲು, ಸಾಗರ ನೌಕೆಗಳ ಸಂಚಾರ ಮತ್ತು ವಾಣಿಜ್ಯ ಸ್ವಾತಂತ್ರ್ಯ ರಕ್ಷಿಸಲು ಮತ್ತು ನಾವಿಕರ ಸುರಕ್ಷತೆ ಮತ್ತು ಯೋಗಕ್ಷೇಮ ರಕ್ಷಿಸಲು ನಿರಂತರ ಪ್ರಯತ್ನಗಳನ್ನು ಮಾಡುವ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು.

ಬ್ರಿಕ್ಸ್ ಸೇರಿದಂತೆ ಬಹುಪಕ್ಷೀಯ ಸಂಸ್ಥೆಗಳಲ್ಲಿ ಪರಸ್ಪರ ಹಿತಾಸಕ್ತಿಯ ವಿಷಯಗಳ ಕುರಿತು ಎರಡೂ ಕಡೆಯವರ ನಡುವಿನ ನಿರಂತರ ಸಹಕಾರವನ್ನು ಪ್ರಧಾನಮಂತ್ರಿ ಶ್ಲಾಘಿಸಿದರು.

 

*****


(ಪ್ರಕಟಣೆ ಐ.ಡಿ.: 2310091) ವಿಸಿಟರ್ ಕೌಂಟರ್ : 2
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Manipuri , Bengali , Assamese , Punjabi , Gujarati , Tamil , Telugu , Malayalam